ಶನಿವಾರ, ನವೆಂಬರ್ 21, 2009

ಕನ್ನಡ ಬೆಳೆಯಲು....ಉಳಿಯಲು........

ನಮ್ಮ ಕನ್ನಡಕ್ಕೆ ಚುನಾಯಿತ ಸರಕಾರಗಳು, ಸೊಕ್ಕಿದ ಅಧಿಕಾರಿವರ್ಗ, ಅಷೇ ಏಕೆ ಕನ್ನಡಿಗರಾದ ನಾವೆ ಎಷ್ಟೋ ಸಾರಿ ಮಾಡಿದ ಅನ್ಯಾಯಗಳು ಎಲಾವೂ ಬಹುಷಃ ನಮಗೆ ಜ್ಗ್ನಾಪಕ ಬರುವುದು "ನವೆಂಬರ್ ತಿಂಗಳಲ್ಲಿ" ಮಾತ್ರ.
ಈಗಾಗಲೇ "ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡವೇನು ಕಡ್ಡಾಯವಲ್ಲ" ಎಂದು ಪ್ರಹಾರ ಮಾಡುವುದಕ್ಕೆ ಮುನ್ನವೇ ನಮ್ಮ ಮಕ್ಕಳಿಗೆ ಕನ್ನಡಬಿಟ್ಟು ಇಂಗ್ಲೀಷ್ ಕಲಿಸುವುದನ್ನು ಪ್ರಾರಂಭಿಸಿ ಅದೆಷ್ಟೋ ಯುಗಗಳಾಗಿದ್ದವು. ಕನ್ನಡದಲ್ಲಿ ಏನಿದೆ? ಎನಿಸಿ 'ನಾಯಿಮರಿ, ನಾಯಿಮರಿ ತಿಂಡಿಬೇಕೆ' ಕಲಿಸುವುದ ಮರೆತು ನಾಲಿಗೆಯೇ ಹೊರಳದ 'ಟ್ವಿಂಕಲ್ ಟ್ವಿಂಕಲ್ ' ನಮ್ಮ ಮಕ್ಕಳಿಗೆ ಅಪ್ಯಾಯಮಾನವಾಗಿದೆ. "ಅ" ಅಂದ್ರೆ 'ಅಮ್ಮ' ಅಂತ ನಮ್ಮ ಗುರುಗಳಿಂದ ಕಲಿತ ನಾವು "A" for apple "ಕಲಿಸಿ ಮೇಷ್ಟ್ರೇ" ಎಂದು ನಮ್ಮ ಮಕ್ಕಳ ಗುರುಗಳಿಗೆ ತಾಕಿತು ಮಾಡುತ್ತೇವೆ. ಇಲ್ಲಿ ನಾವು ಮಾಡುತ್ತಿರುವುದು ಸರಿಯೋ ತಪ್ಪೋ ಎಂದು ವಿವೇಚಿಸುವ ಗೋಜಿಗೆ ನಾವ್ಯಾರು ಹೋಗಲ್ಲ, ಏಕೆಂದರೆ ಇಲ್ಲಿ ಇದು "ನಮ್ಮ ಮಕ್ಕಳ ಭವಿಷ್ಯ" ಎಂಬ ಗುಮ್ಮನನ್ನು ನಾವೇ ಮುಂದಿಡುತ್ತೇವೆ. ಕನ್ನಡ ಶಾಲೆಯಲ್ಲಿ ಕಲಿತು ದೊಡ್ಡವರಾದವರ ಬಗ್ಗೆ ಯಾರಾದರು ತಿಳಿಹೇಳಿದರೆ 'ಅದು ಆ ಕಾಲ ಇದು ಈ ಕಾಲ' ಎಂದು ಸಿನಿಕತನ ತೋರುತ್ತೇವೆ.
ಇನ್ನು ನಮ್ಮ 'ಬುದ್ದಿಜೀವಿ' ಅನ್ನಿಸಿಕೊಂಡ ವರ್ಗವು ನಮಗೆ ಸರಿಯಾದ ಮಾರ್ಗ ತೋರುವುದನ್ನು ಮರೆತು ಬೇಕಿಲ್ಲದ ಒಣಜಂಭ, ಬಡಾಯಿ ಪ್ರಚಾರದಲ್ಲಿ ಕಾಲ ಕಳೆಯುವುದಕ್ಕೆ ಸಮಯವಿಲ್ಲ.
ಹಾಗಾದರೆ ಕನ್ನಡವನ್ನು ಮುಂದಿನ ಪೀಳಿಗೆಗೆ ಕನ್ನಡವನ್ನಾಗಿಯೇ ಉಳಿಸಲು, ಆಧುನಿಕತೆಯ ಸವಾಲಿಗೆ ಮೈಯೊಡ್ಡಿ, ಪರಭಾಷೆಗಳ ಮಧ್ಯೆ ಎದ್ದುನಿಲ್ಲುವ ಹಾಗೆ ಮಾಡುವ ಕರ್ತವ್ಯ ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯವಾಗಿದೆ.
ಬಹುಶಃ ಈ ಮಾತನ್ನು ಅಲ್ಲಲ್ಲಿ ಯಾವಗಲೂ ಕೇಳಿ, ಕೇಳಿ ಎಲ್ಲರಿಗೂ ಬೇಸರವಾಗಿರುತ್ತದೆ ಎಂದು ನನಗೆ ತಿಳಿದಿದೆ.
ಮತ್ತೆ ಮತ್ತೆ ಅದೇಮಾತನ್ನು ಆಡುವುದಕ್ಕಿಂತ ನನಗೆ ತೋಚಿದ ಕೆಲ ಸಲಹೆಗಳನ್ನು ಕೆಳಗೆ ನಮೂದಿಸಿದ್ದೇನೆ.
1) ಮನೆಯಲ್ಲಿ ಕನ್ನಡವೇ ಇರಲಿ, ಮಕ್ಕಳು ಶಾಲೆಯಲ್ಲಿ ಕಲಿಯುವುದನ್ನು ಕಲಿಯಲಿ. ಮನೆಯಲ್ಲಿ ಕನ್ನಡ ಹೇಳಿಕೊಟ್ಟರೆ ಒಳ್ಳೆಯದು.
2) http://kn.wikipedia.org ಇದು ಕನ್ನಡದ ಅಂರ್ತಜಾಲದ ವಿಶ್ವಕೋಶ, ಇದನ್ನು ಯಾರು ಬೇಕಾದರು, ಸಂಪಾದಿಸಬಹುದು, ಅಂದರೆ ತಮಗೆ ತಿಳಿದ ಒಳ್ಳೆಯ ವಿಚಾರಗಳನ್ನು ಸೇರಿಸಲು ಅವಕಾಶವಿದೆ. ಆದರೆ ಅದು ವಯಕ್ತಿಕ ವಿಚಾರಧಾರೆ ಮಂಡಿಸುವ ವೇದಿಕೆಯಲ್ಲ. ಕನ್ನಡದ ಬಗ್ಗೆ, ತಾವು ತಿಳಿದ ವಸ್ತುಗಳ ಬಗ್ಗೆ, ಕರ್ನಾಟಕದ ಸ್ಥಳಗಳ ಬಗ್ಗೆ, ನಿಮಗೆ ತಿಳಿದ ವಿಶ್ವದ ಯಾವುದೇ ಜಾಗದ ಬಗ್ಗೆ, ದೇಶದಬಗ್ಗೆ ವ್ಯಕ್ತಿಗಳ ಬಗ್ಗೆ ಕನ್ನಡದಲ್ಲೇ ಬರೆಯಬಹುದು. ನಿಮಗೆ ತಿಳಿದಿರಲಿ ಭಾರತದ ಇತರ ಭಾಷೆಗಳ ಲೇಖನಗಳು ಈಗಾಗಲೇ 20,000 ಕ್ಕೂ ಹೆಚ್ಚಿವೆ, ತೆಲುಗಿನಲ್ಲಿ ಸುಮಾರು 50,000 ಲೇಖನಗಳಿವೆ, ತಮಿಳಿನಲ್ಲಿ 22,000 ಹಿಂದಿಯಲ್ಲಿ ಸುಮಾರು 45,000 ಲೇಖನಗಳಿವೆ, ಅದೇ ರೀತಿ ಇಂಗ್ಲೀಷಿನಲ್ಲಿ 4 ಲಕ್ಷಕ್ಕೂ ಹೆಚ್ಚು ಲೇಖನಗಳಿವೆ. ದುರಂತವೆಂದರೆ ಕನ್ನಡದಲ್ಲಿ ಇವತ್ತಿನವರೆಗು ಇರುವ ಲೇಖನಗಳ ಸಂಖ್ಯೆ ಕೇವಲ 7,513 ಲೇಖನಗಳು ಮಾತ್ರ.
ಪ್ರತಿಯೊಬ್ಬ ಕನ್ನಡಿಗನೂ, ಪ್ರತಿಯೊಬ್ಬ ಅಂರ್ತಜಾಲ ಉಪಯೋಗಿಸುವ ಕನ್ನಡಿಗನು ದಿನಕ್ಕೊಂದು ಅಲ್ಲದಿದ್ದರೂ wikipidea ದಲ್ಲಿ ವಾರಕ್ಕೊಂದು ವಿಷಯ ಲೇಖನ ಬರೆದರೆ ಕನ್ನಡ ಬಗ್ಗೆ ವಿಶ್ವಕ್ಕೇ ಹೆಚ್ಚು ತಿಳಿಸಿದಂತಾಗುತ್ತದೆಯಲ್ಲವೆ.
ಇದು ನನ್ನ ಅಭಿಪ್ರಾಯ. ನಿಮಗೂ ಸರಿ ಅನ್ನಿಸಿದರೆ ಆಧುನಿಕಥೆಗೆ ಮೈಯೊಡ್ಡಿ ಕೊಡವಿ ನಿಲ್ಲಲು ಸಹಾಯಕವೆನಿಸಿದರೆ ಈ ವಿಚಾರವನ್ನು ನಿಮ್ಮ ಇತರ ಮಿತ್ರರಿಗೂ ತಿಳಿಸಿ, ಹಾಗು ನೀವು ಕನ್ನಡ ಬೆಳೆಸಿ.

"ಸಿರಿಗನ್ನಡಂ ಗೆಲ್ಗೆ"

ಕಾಮೆಂಟ್‌ಗಳಿಲ್ಲ: