ಬುಧವಾರ, ಮಾರ್ಚ್ 9, 2011

ಗುರಿಯ ದಾರಿ

ಎಂದೋ ಹಿಂದೊಮ್ಮೆ ಮೀಸೆ ಚಿಗುರುವ ಮುನ್ನ ಗೀಚಿದ್ದ ಕವನ, ಮೊನ್ನೆ ಮನೆ ಬದಲಾಯಿಸುವ ಮುನ್ನ ದೊರಕಿತು.

ಅದನ್ನೇ ಯಥಾವತ್ತಾಗಿ ಇಲ್ಲಿಡುತ್ತಿದ್ದೇನೆ

ನನ್ನ ಗುರಿಯ ದಾರಿಗೆ ನೀನೆ ಮೆಟ್ಟಿಲು

ನಿನ್ನ ದುಃಖ ಸುಖಗಳಿಗೆ ನನ್ನೆದೆಯೆ ನಿನಗೆ ತೊಟ್ಟಿಲು

ನಡೆವ ಮುಂದೆ ಮುಂದೆ ಸಾಗುತ

ಹೊಸ ಬಾಳೊಂದ ಜೊತೆಯಾಗಿ ಕಟ್ಟಲು

ಕನಸುಗಳ ಉಡುಗೆಯುಟ್ಟ ಮನಗಳಿರಲು

ನನಸುಗಳ ಏಣಿ ಅಣಿಯಾಗಿರಲು

ಎಷ್ಟು ಹೊತ್ತು ಆಕಾಶ ಮುಟ್ಟಲು?

ಆಯಾಸವಾದೊಡೆ ನಿನ ನಗುವಿನ ಪನ್ನೀರು

ಸಂತಸಕೆ ನೆನಹುಗಳ ಮೃಷ್ಠಾನ್ನದ ಬುತ್ತಿ

ಸಂಕಟಕೆ ಸಾಂತ್ವಾನ.

ನಡೆ ಮುಂದೆ ಸಾಗೋಣ ಎಲ್ಲವ ಮರೆತು

ಎಲ್ಲ ನೋವ ಮರೆತು, ಎಲ್ಲರೊಳು ಬೆರೆತು

ಸಾಗೋಣ ನಿರಂತರ

ಗುರಿಯ ತೀರ ಇನ್ನೇನು ಬರಿ ಮಾರು ದೂರ

ನಮ್ಮನ್ನು ಸೇರಲು ಆ ಗುರಿಗೂ ಕಾತರ

ಸೇರಲು ಗುರಿಯ ದಾರಿ ಎಲ್ಲ ಕಟ್ಟಳೆಗಳ ಮೀರಿ

ಭಾನುವಾರ, ಮಾರ್ಚ್ 6, 2011

ಅದ್ದೂರಿ ಸಾಹಿತ್ಯ ಸಮ್ಮೇಳನದಲ್ಲೊಂದು ಕಪ್ಪುಚುಕ್ಕೆ

ಅದ್ದೂರಿ ಸಾಹಿತ್ಯ ಸಮ್ಮೇಳನದಲ್ಲೊಂದು ಕಪ್ಪುಚುಕ್ಕೆ
ಮೊದಲಿಗೆ ಮರೆತುಹೋಗುತ್ತಿರುವ ವಿಚಾರವನ್ನು ಈಗ ಪ್ರಸ್ತಾಪಿಸುತ್ತಿರುವುದಕ್ಕೆ ಕ್ಷಮೆಯಿರಲಿ.
ಈ ಬಾರಿಯ ಸಾಹಿತ್ಯ ಸಮ್ಮೇಳನಕ್ಕೆ ಹೋಗಬೇಕೆಂದು ನಡೆಸಿದ ತಯಾರಿ ಕೊನೆ ಕ್ಷಣದಲ್ಲಿ ವೈಯಕ್ತಿಕ ಮತ್ತು ನೌಕರಿಯ ಕಾರಣಗಳಿಂದಾಗಿ ರದ್ದುಮಾಡಬೇಕಾಗಿ ಬಂದರೂ ಪತ್ರಿಕೆಗಳಲ್ಲಿ ’ನ್ಯೂಸೆನ್ಸ್’ ಛಾನಲ್ ಗಳಲ್ಲಿ ಬರುತ್ತಿದ್ದ ವರದಿಗಳನ್ನು ಓದಿ ನೋಡಿ ಕಣ್ತುಂಬಿಕೊಳ್ಳುತ್ತಿದ್ದೆ. ಒಂದು ಕಾಲದಲ್ಲಿ ಸಾಹಿತ್ಯವೆಂಬುವುದು ಕೆಲ ಶ್ರೀಮಂತರಿಗೆ, ರಾಜ ಮಹಾರಾಜರ ಆಸ್ಥಾನಕಷ್ಟೇ ಸೀಮಿತವಾಗಿತ್ತು. ಆಗ ರಚನೆಯಾಗುತ್ತಿದ್ದ ಸಾಹಿತ್ಯ ಪ್ರಕಾರಗಳೂ ಅಷ್ಟೆ ಜನಸಾಮಾನ್ಯರನ್ನು ತಲುಪುತ್ತಲೇ ಇರಲಿಲ್ಲ. ವಚನಕ್ರಾಂತಿಯ ಕಾಲದಲ್ಲಿ ಜನಸಾಮಾನ್ಯರಿಗೆ ಅರ್ಥವಾಗುವಂತಹ, ಸಾಮಾನ್ಯನೂ ಸಾಹಿತ್ಯರಚನೆಯಲ್ಲಿ ತೊಡಗಿಕೊಳ್ಳುವ ಅವಕಾಶ ಒದಗಿಬಂದರೂ ಅದು ಸಂಪೂರ್ಣವಾಗಿ ಶ್ರೀಸಾಮಾನ್ಯನ ಸ್ವತ್ತಾಗತೊಡಗಿದ್ದು ಆಧುನಿಕ ಕಾಲದ ಸಾಹಿತ್ಯ ಸಮ್ಮೇಳನಗಳು ಪ್ರಾರಂಭವಾದಮೇಲೆಯೇ. ಪ್ರಾರಂಭದಲ್ಲಿ ಸಾಹಿತ್ಯ ಕೃಷಿಗೆ ಒದಗಿ ಬಂದದ್ದೂ ಸಹ ಹಣವಂತರಿಗಷ್ಟೇ ಆದರೂ ಕ್ರಮೇಣ ಎಲ್ಲರಲ್ಲೂ ಆಸಕ್ತಿ ಮೂಡುತ್ತಾ ಬಂದ ’ಕನ್ನಡ ಸಾಹಿತ್ಯ ಸಮ್ಮೇಳನ’ ಇಂದು ಕರ್ನಾಟಕದ ನಿಜವಾದ ನಾಡಹಬ್ಬವೇ ಸರಿ. ಏಕೆಂದರೆ ಅಲ್ಲಿ ನಮ್ಮ ಘೋಷಿತ ನಾಡಹಬ್ಬವಾದ ಜಂಬೂಸವಾರಿಯಂತೆ ಏಕತಾನತೆ ಇರುವುದಿಲ್ಲ. ಸಮ್ಮೇಳನಾಧ್ಯಕ್ಷರ ಮೆರವಣಿಗೆ, ರಾಜಕಾರಣಿಗಳ ಭಾಷಣ ಮತ್ತಿತರ ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ಬಿಟ್ಟರೆ ಮಿಕ್ಕೆಲ್ಲವೂ ವೈವಿಧ್ಯಮಯವೇ.
    ಇಂತಹ ಕನ್ನಡಿಗರ ಆಶೋತ್ತರಗಳನ್ನು ಜಗತ್ತಿಗೆ ಸಾರುವಂತಹ ಕಸ್ತೂರಿಯ ಪರಿಮಳದಂತೆ ಕನ್ನಡದ ಕಂಪನ್ನು ಪಸರಿಸುವಂತಹ ಸಮ್ಮೇಳನದ ಕೊನೆಯಲ್ಲಿ ಕನ್ನಡದ ಬೆಳವಣಿಗೆಗೆ ಪೂರಕವಾಗುವಂತಹ ನಿರ್ಣಯಗಳನ್ನು ತೆಗೆದುಕೊಂಡು ನಮ್ಮನ್ನಾಳುವ ಸರ್ಕಾರದ ಮೂಲಕ ಅವುಗಳನ್ನು ಜಾರಿಗೆ ತರುವಂತೆ ಮಾಡುವುದು ಸಮ್ಮೇಳನದ ಕೊನೆಯ ಮತ್ತು ಅತಿ ಪ್ರಮುಖ ಘಟ್ಟ. ರಾಜಕೀಯ ಇಚ್ಚಾಶಕ್ತಿಯ ಕೊರತೆ ಮತ್ತು ರಾಜಕಾರಣಿಗಳ ಕಿವಿಹಿಂಡಿ ಕೆಲಸ ಮಾಡಿಸುವ ಸಾಹಿತಿಗಳ ಕೊರತೆಯಿಂದಾಗಿ ಪ್ರತೀಬಾರಿಯ ನಿರ್ಣಯಗಳು ಮುಂದಿನ ಸಮ್ಮೇಳನದಲ್ಲಷ್ಟೇ "ಓಹ್! ನಿರ್ಣ್ಯಗಳ್ಯಾವುವೂ ಜಾರಿಯಾಗಿಲ್ಲವಲ್ಲ" ಎಂದು ನಿಮಗೆ, ನಮಗೆ, ಸಾಹಿತಿಗಳಿಗೆ, ಕನ್ನಡ ’ಓರಾಟ’ಗಾರರಿಗೆ ಮಾಧ್ಯಮಗಳಿಗೆ ಎಲ್ಲರಿಗೂ ಜ್ಞಾಪಕಬರುವುದು.
    ಪ್ರತಿಸಾರಿಯಂತೆ ಈ ಬಾರಿ ಹೊಸ ನಿರ್ಣಯಗಳನ್ನು ಮಂಡಿಸುವುದರ ಬದಲು ಹಳೆಯ ನಿರ್ಣಯಗಳ ಜಾರಿಗೆ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಚಿಂತಕರ ಚಾವಡಿಯ ಅಭಿಪ್ರಾಯವಾಗಿತ್ತು. ಅದೇ ರೀತಿಯ ನಿರ್ಣಯಗಳನ್ನು ಮಂಡಿಸುವುದರ ಜೊತೆಗೆ ಧುತ್ತನೆ ೨ ಹೊಸ ನಿರ್ಣಯಗಳನ್ನು ಸೇರಿಸಲಾಯಿತು. ಅವುಗಳಲ್ಲಿ ಮೊದಲೆನೆಯದು ಸಾಹಿತಿ, ಸಂಶೋಧಕ ಡಾಃ ಚಿ. ಮೂ. ರವರಿಗೆ ಬೆಂಗಳೂರು ವಿ.ವಿ ಕೊಡಮಾಡಲು ನಿರ್ಧರಿಸಿದ್ದ ಗೌರವ ಡಾಕ್ಟರೇಟ್ ಅನ್ನು ನಮ್ಮ ’ಘನತೆವೆತ್ತ’ ರಾಜ್ಯಪಾಲರಾದ ಹಂಸರಾಜ್ ಭಾರಧ್ವಾಜ್ (ಇವರಿಗೆ ರಾಜಕೀಯ ಪಾಲಕರು ಎನ್ನಬಹುದೇನೋ) ನಿರಾಕರಿಸಿದ್ದನ್ನು ಖಂಡಿಸಿ ತೆಗೆದುಕೊಂಡ ನಿರ್ಣಯ
    ನಿಜಕ್ಕೂ ಆ ರೀತಿಯ ನಿರ್ಣಯ ಸಮ್ಮೇಳನದ ಗೌರವವನ್ನು ಇಮ್ಮಡಿಗೊಳಿಸಿದ್ದಲ್ಲದೆ ಸಾರಸ್ವತಲೋಕದ ಒಗ್ಗಟ್ಟನ್ನು ಪ್ರದರ್ಶಿಸಿತು. ಆ ದಿನಕ್ಕೆ ಅದರ ಅವಶ್ಯಕತೆ ನಿಜಕ್ಕೂ ಇತ್ತು. ಏಕೆಂದರೆ ಚಿ.ಮೂ ಅವರ ಚಿಂತನೆಗಳು ಏನಾದರೂ ಇರಬಹುದು ಅದು ಬೇರೆಯ ಜಿಜ್ಞಾಸೆ, ಅವರು ನಮ್ಮ ನಾಡು ಕಂಡ ಅಪರೂಪದ ಸಂಶೋಧಕ ಇದ್ಯಾವುದೂ ತಿಳಿಯದ ರಾಜ್ಯಪಾಲರು ಚಿಕ್ಕಮಗುವೊಂದು ತನ್ನ ಕೈಲಿ ಹಿಡಿದಿದ್ದ ಪೆಪ್ಪರ್ಮೆಂಟನ್ನು ’ನಾನು ಯಾರಿಗೂ ಕೊಡುವುದಿಲ್ಲ’ ಎಂದು ಹಠಹಿಡಿಯುವಂತೆ ಚಿ.ಮೂ. ರವರ ಸಾಧನೆಗಳ ಅರಿವಿಲ್ಲದೆ  ’ನಾ ಕೊಡೊಲ್ಲಾ’ ಅಂದಿದ್ದು ಖಂಡನೀಯ.
    ಆದರೆ ಮತ್ತೊಂದು ನಿರ್ಣಯವನ್ನೂ ಮಂಡಿಸಲಾಯಿತು ಅದೇ ’ಡಬ್ಬಿಂಗ್ ಕನ್ನಡ ಚಿತ್ರರಂಗಕ್ಕೆ ಬೇಡವೇ ಬೇಡ’ ಎಂಬ ಆತುರದ ತಿಳುವಳಿಕೆಯಿಲ್ಲದ ದೂರದೃಷ್ಠಿಯಿಲ್ಲದ ನಿರ್ಣಯ ಇಡೀ ಸಮ್ಮೇಳನದ ಕಪ್ಪುಚುಕ್ಕೆಯೇ ಸರಿ.
    ಎಲ್ಲರಿಗೂ ತಿಳಿದಿರುವಂತೆ ಕನ್ನಡ ಸಾರಸ್ವತಲೋಕವು ಈಗ್ಗೆ ನಾಲ್ಕೈದು ಸಮ್ಮೇಳನಗಳ ಹಿಂದಿನವರೆಗೂ ಚಿತ್ರರಂಗವನ್ನೂ, ಚಿತ್ರಸಾಹಿತಿಗಳನ್ನೂ ಅಸ್ಪೃಶ್ಯರಂತೆ ದೂರವೇ ಇಟ್ಟಿತ್ತು. ಎಪ್ಪತ್ತರ ದಶಕದಲ್ಲಿ ಶ್ರೀಯುತರುಗಳಾದ ಅನಕೃ, ಪಿ. ಲಂಕೇಶ್, ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಚದುರಂಗ ಮುಂತಾದವರು ಚಿತ್ರರಂಗಲ್ಲಿ ಸಕ್ರಿಯವಾಗಿ ತೊಡಗಿಕೊಂಡರೂ ಎರಡೂ ರಂಗಗಳ ಅಂತರವೇನೂ ಕಡಿಮೆಯಾಗಿರಲಿಲ್ಲ. ಹೆಸರಾಂತ ಸಾಹಿತಿಗಳ ಕಾವ್ಯಗಳನ್ನು ಕಾದಂಬರಿಗಳನ್ನು ಚಿತ್ರಗಳಲ್ಲಿ ಅಳವಡಿಸಿಕೊಳ್ಳಲು ಅವಕಾಶ ನೀಡಿದ್ದರೂ ಅದೇ ಸಾಹಿತಿಗಳು ಚಿತ್ರಸಾಹಿತಿಗಳೊಡನೆ ಬೆರೆಯಲು ಸಿದ್ದರಿರಲಿಲ್ಲ. ಅದೇ ರೀತಿ ಹೆಸರಾಂತ ಚಿತ್ರಸಾಹಿತಿಗಳಾದ ಶ್ರೀಯುತರಾದ ಕು. ರಾ. ಸೀ, ಜಿ.ವಿ.ಅಯ್ಯರ್, ಶಿವಶಂಕರ್, ಸಾಹಿತ್ಯಬ್ರಹ್ಮ ಚಿ. ಉದಯಶಂಕರ್ ಮುಂತಾದವರನ್ನು ಸಾಹಿತಿಗಳೆಂದು ಒಪ್ಪಲು ಸಾರಸ್ವತಲೋಕ ಸಿದ್ದವಿರಲಿಲ್ಲ ಅದಕ್ಕೆ ಚಿತ್ರಲೋಕವೂ ತಲೆಕೆಡಿಸಿಕೊಂಡಿರಲಿಲ್ಲ. ಇಂತಹ ವೈರುಧ್ಯದ ಎರಡು ರಂಗಗಳು ಕಾಲಾನುಕ್ರಮವಾಗಿ ಬೆರತದ್ದು ಸಂತೋಷದವಿಚಾರವೇ ಸರಿ. ಅದು ಕನ್ನಡದ ಬೆಳವಣಿಗೆಗೆ ಬೇಕಾಗಿತ್ತೂ ಕೂಡ. ಆದರೆ ’ಡಬ್ಬಿಂಗ್ ಚಿತ್ರಗಳಿಂದಾಗಿ ಕನ್ನಡ ನಾಡಿನ ಸಂಸ್ಕೃತಿಗೆ ಧಕ್ಕೆಯುಂಟಾಗುತ್ತದೆಂಬ’ ತಲೆಬುಡವಿಲ್ಲದ ಯೋಚನೆ ನಮ್ಮ ಘನಸಾಹಿತಿಗಳ ತಲೆಯೊಳಗೆ ಹೊಕ್ಕಿದ್ದಾದರೂ ಹೇಗೆ? ಎಂಬುದು ಶತಕೋಟಿ ಡಾಲರ್ ನ ಪ್ರಶ್ನೆಯೇಸರಿ
    ಪ್ರಸ್ತುತ ಡಬ್ಬಿಂಗ್ ವಿವಾದವು ಕನ್ನಡಕ್ಕೆ ಮಾರಕವೋ ಪೂರಕವೋ ಎಂದು ಚರ್ಚಿಸುವ ಮೊದಲು ಕನ್ನಡ ಚಿತ್ರರಂಗದಿಂದ ಸಂಸ್ಕೃತಿಗೆ ಕೊಡುಗೆ ಇದೆಯೋ ಇಲ್ಲವೋ ಎಂದು ನೋಡಬೇಕಾಗುತ್ತದೆ. ಯಾವ ಕೋನದಿಂದ ಅಳೆದೂ ಸುರಿದು ನೋಡಿದರೂ ಸಂಸ್ಕೃತಿಯನ್ನು ಪ್ರತಿನಿಧಿಸುವ ಮಾತಿರಲಿ ಅವುಗಳ ಗಂಧಗಾಳಿಯೂ ತಿಳಿಯದಂತಹ ಚಿತ್ರಗಳು ಬರುವುದು ಹೆಚ್ಚು. ಚಿತ್ರರಂಗದ ಪ್ರಕಾರ ’ಮಚ್ಚು-ಲಾಂಗು’, ’ಹೆಣ್ಣಿನ ಹೊಕ್ಕಳು ಮೇಲೆ ಹಣ್ಣಿನಿಂದ ಹೊಡೆಯುವುದು’, ನಾಯಕಿ ನೀರೊಳಗೆ ಬಿದ್ದನಂತರ ಮೇಲೆದ್ದು ಎಲ್ಲೆಲ್ಲಿಂದಲೋ ಮೀನು ತೆಗೆಯುವುದು, ಡಬ್ಬಲ್ ತ್ರಿಬ್ಬಲ್ ಮೀನಿಂಗ್ ಉಳ್ಳ ಸಂಭಾಷಣೆಗಳು ಇತ್ಯಾದಿ. ಇತ್ಯಾದಿ....ಗಳೆಲ್ಲಾ ನಮ್ಮ ಸಂಸ್ಕೃತಿಯ ಪ್ರತೀಕವೇ!!!!! ಹಾಗೆಂದು ಒಳ್ಳೆಯ ಚಿತ್ರಗಳು ಇಲ್ಲವೆಂದಲ್ಲ, ವರ್ಷದಲ್ಲಿ ಬಿಡುಗಡೆಯಾಗುವ ೧೦೦ - ೧೫೦ ಚಿತ್ರಗಳಲ್ಲಿ ೩ ಅಥವಾ ನಾಲ್ಕು ಅಷ್ಟೆ!!!! ಅವುಗಳಲ್ಲಿ ಸಣ್ಣ ಸಣ್ಣ ಬ್ಯಾನರ್ರಿನ ಚಿತ್ರಗಳು ಜನರನ್ನು ತಲುಪುವುದೇ ಇಲ್ಲ (ಉದಾಃ ಒಲವೇ ಮಂದಾರ).
    ನಿಜಕ್ಕೂ ಒಂದು ಕಾಲವಿತ್ತು ನಮ್ಮ ಚಿತ್ರರಂಗ ಸಣ್ಣದಾಗಿತ್ತು, ವರ್ಷಕ್ಕೆ ಎರಡೋ ನಾಲ್ಕೋ ಚಿತ್ರಗಳು ಅದೂ ಮದ್ರಾಸಿನಲ್ಲಿ ತಯಾರಾಗುತ್ತಿದ್ದವು. ಅವುಗಳ ಗುಣಮಟ್ಟದ ಬಗ್ಗೆ ಎರಡು ಮಾತಿರಲಿಲ್ಲ. ಅಂದಿನ ಚಿತ್ರಗಳ ಬಹುತೇಕ ಸನ್ನಿವೇಶಗಳು, ಹಾಡುಗಳು, ಸಂಭಾಷಣೆಗಳು ಸಂಗೀತ ಎಲ್ಲವೂ ಆ ಚಿತ್ರದ ಕಥೆಗೆ ಪೂರಕವಾಗಿ ಮನೆ ಮಂದಿ ಆನಂದಿಸುವಂತಹ ಚಿತ್ರಗಳಾಗುತ್ತಿದ್ದವು. ಅಂದು ಡಬ್ ಮಾಡುತ್ತಿದ್ದಲ್ಲಿ ನಮ್ಮಲ್ಲಿನ ತಂತ್ರಜ್ಞರಿಗೆ ಕೆಲಸವಿಲ್ಲದಎ ಅತಂತ್ರರಾಗುತ್ತಿದ್ದರು, ಅದು ಅಂದು ಎಲ್ಲರೂ ಒಪ್ಪುವಮಾತಾಗಿತ್ತು. ಇಂದಿನ ಚಿತ್ರಗಳ ಗುಣಮಟ್ಟದ ಬಗ್ಗೆ ಮಾತನಾಡದಿರುವುದೇ ಲೇಸು!! ಇಂತಹ ಸಂಧರ್ಭದಲ್ಲಿ ಬೇರೇ ಭಾಷೆಯಲ್ಲಿ ತಯಾರಾಗುವ ಚಿತ್ರಗಳನ್ನು ಕನ್ನಡದಲ್ಲಿ ಡಬ್ ಮಾಡಿದರೆ ಆಗುವ ಅನಾಹುತವೇನು? ಇಂದು ಇಲ್ಲಿ ಕೆಲಸಮಾಡುವ ನಮ್ಮ ಕನ್ನಡ ತಂತ್ರಜ್ಞರನ್ನು ಕಡೆಗಣಿಸಿ ಪ್ರತೀ ಚಿತ್ರಕ್ಕೂ ಲೈಟ್ ಬಾಯ್ ಗಳಿಂದ ಹಿಡಿದು ’ಆಕ್ಷನ್ -ಕಟ್’ ಹೇಳುವ ನಿರ್ದೇಶಕನವರೆಗೆ ಪರಭಾಷೆಯವರಿಗೇ ಮಣೆ ಹಾಕುವುದಿಲ್ಲವೇ? ಕನ್ನಡವೇ ಗೊತ್ತಿಲ್ಲದ ಸಂಭಾಷಣೆಕಾರರಿಂದ ಸಂಭಾಷಣೆ ಬರೆಸಿ ಚಿತ್ರ ನಿರ್ಮಿಸುವ ಕನ್ನಡಿಗ ನಿರ್ಮಾಪಕರಿಲ್ಲವೇ? ಕನ್ನಡದಲ್ಲಿ ನಾಯಕಿ ನಟಿಯರಿಲ್ಲವೆಂದು (ನಿಜ ಅರ್ಥದಲ್ಲಿ ಸರಿಯಾದ ಬಿಚ್ಚಮ್ಮ ನಟಿಯರಿಲ್ಲವೆಂದು) ಮೂಗು ಮೂತಿ ನೆಟ್ಟಗಿರದ ಅದೆಷ್ಟು ಪರಭಾಷಾ ನಟೀಮಣಿಯರಿಗೆ ಕೇಳಿದಷ್ಟು ಕಾಸು ಕೊಟ್ಟು ಮನೆ ಮಠ ಕಳೆದುಕೊಂಡು ’ಕೃತಾರ್ಥರಾದ’ ಅದೆಷ್ಟು ನಿರ್ಮಾಪಕ ನಿರ್ದೇಶಕರಿಲ್ಲ? ಪ್ರತಿಭೆಗಳನ್ನು ಸರಿಯಾಗಿ ಬಳಸಿಕೊಳ್ಳದೆ, ಅವಕಾಶ ನೀಡದೆ ಸತಾಯಿಸಿ, ಅವರು ಪಕ್ಕದ ಚಿತ್ರರಂಗದಲ್ಲಿ ಮಿಂಚತೊಡಗಿದಾಗ ’ಇವರು ನಮ್ಮವರು, ನಾನೇ ಅವರಿಗೆ ಅವಕಾಶ ಕೊಟ್ಟು ಮೇಲೆ ತಂದೆ’ ಎಂಬಿತ್ಯಾದಿ ಹೇಳಿಕೆಗಳನ್ನು ತೋರಿಕೆಗೆ ಕೊಟ್ಟು, ನಂತರ ಮನದಲ್ಲೇ ಮಂಡಿಗೆ ತಿನ್ನುವ ಭೂಪರೂ ನಮ್ಮ ಚಿತ್ರರಂಗದಲ್ಲಿದ್ದಾರೆ.
    ಅದು ಹೋಗಲಿ ಬಿಡಿ. ದುಡ್ಡು ಮಾಡಬೇಕೆಂಬ ಏಕಮಾತ್ರ ಹಂಬಲದಿಂದ ಪರಭಾಷೆಯ ಚಿತ್ರಗಳನ್ನು ’ರೀಮೇಕ್’ ಮಾಡುವುವುದರಿಂದ ನಮ್ಮ ಸಂಸ್ಕೃತಿ ಅದು ಹೇಗೆ ಉದ್ಧಾರವಾಗುತ್ತದೋ? ಆ ದೇವರೇ ಬಲ್ಲ. ಮೂಲ ಚಿತ್ರದಲ್ಲಿದ್ದ ಅದೆಷ್ಟೋ ಅಸಂಬದ್ಧ ದೃಷ್ಯಗಳು, ಅಭಾಸಭರಿತ ಸಂಭಾಷಣೆಗಳು ಅದೇ ರೀತಿ ತರ್ಜುಮೆಗೊಂಡಿರುತ್ತವೆ. ಜೊತೆಗೆ ರೀಮೇಕ್ ಮಾಡುವವರು ಆ ಚಿತ್ರ ಯಾವಕಾರಣಗಳಿಂದಾಗಿ ಗೆದ್ದಿದೆ ಎಂಬ ವಿಶ್ಲೇಷಣೆ ಮಾಡುವುದೇ ಇಲ್ಲ. ಅದಕ್ಕಿಂತಲೂ ಮುಂಚೆಯೇ ಆ ಚಿತ್ರವನ್ನು ಅದೇ ಭಾಷೆಯಲ್ಲಿಯೇ ನಮ್ಮ ಕನ್ನಡ ಪ್ರೇಕ್ಷಕ ನೋಡಿರುತ್ತಾನೆ. ಅದರದೇ ರೀಮೇಕ್ ಬಂದಾಗ ಸಹಜವಾಗಿ ಥಿಯೇಟರೆಡೆಗೆ ಯಾಕಾದರೂ ಹೋಗುತ್ತಾನೆ? ಕನ್ನಡಚಿತ್ರಗಳನ್ನು ನೋಡಲು ಥಿಯೇಟರಿಗೆ ಜನ ಬರುತ್ತಿಲ್ಲ, ಪ್ರದರ್ಶನಶುಲ್ಕ ಹೆಚ್ಚಾಯ್ತು, ಪೈರಸಿ ಸಿ.ಡಿ. ಹಾವಳಿ ಎಂಬಿತ್ಯಾದಿ ಅಸಂಬದ್ಧ ಹೇಳಿಕೆಗಳು ಬೇರೆ. ಅಸಲಿಗೆ ಇಂದು ಮಾರುಕಟ್ಟೆಯಲ್ಲಿ ಸಿಗುವ ಪೈರಸಿ ಸಿ.ಡಿ ಗಳಲ್ಲಿ ಮೂರೋ ನಾಲ್ಕೋ ಹೊಸ ಕನ್ನಡ ಚಿತ್ರಗಳ ಸಿ.ಡಿ ದೊರಕಿಯಾವು, ಅದೂ ವರ್ಷ- ಎರಡು ವರ್ಷದ ಹಿಂದೆ ಬಿಡುಗಡೆಯಾದ ಸಿನಿಮಾಗಳವು. ಅದೇ ನಿನ್ನೆಯೋ ಮೊನ್ನೆಯೋ ಬಿಡುಗಡೆಯಾದ ಹಿಂದಿ ತಮಿಳು ತೆಲುಗು ಚಿತ್ರಗಳ ಸಿ.ಡಿ ಯಾವುದು ಬೇಕು ಎಷ್ಟು ಬೇಕು ಸಿಗುತ್ತವೆ. ನಮ್ಮ ಸಿನಿಮಾ ಮಂದಿ ಅಗ್ಗದ ಪ್ರಚಾರಕ್ಕೊಸ್ಕರ ಮಧ್ಯೆ ಮಧ್ಯೆ ಬೀದಿ ಬದಿಯ ಸಿ.ಡಿ ಗಾಡಿಗಳ ಮೇಲೆ ದಾಳಿ ಮಾಡಿದಾಗಲೂ ಸಹ ಪರಭಾಷೆಯ ಸಿ.ಡಿಗಳಷ್ಟೇ ದೊರಕಿದ್ದು!!! ಏಕೆಂದರೆ ಜನಗಳಿಗೂ ಗೊತ್ತು ನಮ್ಮ ಸಿನಿಮಾಗಳ ಗುಣಮಟ್ಟ ಏನೂಂತ!! ಅಂದ ಮಾತ್ರಕ್ಕೆ ಪರಭಾಷೆಯ ಚಿತ್ರಗಳು ಸಕ್ಕತ್ತಾಗಿವೆ ಎಂದಲ್ಲ. ಅವರ ಚಿತ್ರಗಳಿಗೆ ಕೊಡುವ ಪ್ರಚಾರದ ವೈಖರಿ, ಅದಕ್ಕೆ ಬಳಸುವ ಪ್ರೋಮೋ ಗಳು ಆ ಚಿತ್ರದ ಬಗ್ಗೆ ಕುತೂಹಲ ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಅಲ್ಲದೆ ಅವರ ಚಿತ್ರಗಳಲ್ಲಿ ಅವರು ಬಳಸುವ ತಂತ್ರಜ್ಞಾನ ಆ ಸಿನಿಮಾಗಳನ್ನು ನೋಡಲು ಭಾಷೆ ತಿಳಿಯದವರಿಗೂ ಪ್ರೇರೇಪಿಸುತ್ತದೆ. ಹೊಸ ಹೊಸ ತಂತ್ರಜ್ಞಾನಗಳಾದ ಡಿ.ಟಿ.ಎಸ್, ಡಿಜಿಟಲ್ ಎಫೆಕ್ಟ್, ಗ್ರಾಫಿಕ್ಸ್ ಮುಂತಾದವುಗಳನ್ನು ಪರಿಣಾಮಕಾರಿಯಾಗಿ ಮತ್ತು ಚಿತ್ರಕ್ಕೆ ಪೂರಕವಾಗಿ ಬಳಸಿರುತ್ತಾರೆ. ವಿಚಿತ್ರವೆಂದರೆ ’ಐ.ಟಿ ಸಿಟಿ’ ಬಿರುದಾಂಕಿತ ಬೆಂಗಳೂರಿನ ತಂತ್ರಜ್ಞರೇ ಅವೆಲ್ಲವನ್ನೂ ಚನ್ನೈ ಅಥವಾ ಹೈದರಾಬಾದ್ ನಲ್ಲಿ ಮಾಡಿರುತ್ತಾರೆ. ಇಂತಹ ಮುಂದುವರಿದ ಯುಗದಲ್ಲಿ ನಮ್ಮ ಕನ್ನಡ ಚಿತ್ರಗಳ ಗ್ರಾಫಿಕ್ಸ್ ಇನ್ನೂ ಹಾವು ಹಾಡಿಸುವುದಕ್ಕೋ, ಕಲ್ಲು ಬಸವನ ಕತ್ತು ಕುಣಿಸಲಿಕ್ಕೋ ಆನೆಗೆ ಕನ್ನಡಕ ಹಾಕಿಸುವದಕ್ಕಷ್ಟೇ ಸಿಮಿತವಾಗಿರುವುದು ದುರಂತವಲ್ಲದೆ ಮತ್ತೇನೂ ಅಲ್ಲ. ( ಈ ಮಾತು ಉಪೇಂದ್ರರ ’ ಸೂಪರ್’ಚಿತ್ರಕ್ಕೆ ಅನ್ವಯಿಸುದಿಲ್ಲ) ಜೊತೆಗೆ ಕನ್ನಡಿಗ ಪ್ರೇಕ್ಷಕನ ಕೆಟ್ಟ ಗ್ರಹಚಾರವಲ್ಲದೆ ಮತ್ತೇನು ಅಲ್ಲ. ಇವರ ಕೈ ಯಲ್ಲಿ ಅಂತಹ ಚಿತ್ರಗಳನ್ನು ತೆಗೆಯಲು ಆಗದಿದ್ದಲ್ಲಿ "ಡಬ್ಬಿಂಗ್" ಮಾಡುವುದರಲ್ಲಿ ತಪ್ಪೇನು? ಅದರಿಂದಾಗಿ ಸ್ಪರ್ಧಾತ್ಮಕತೆ ಹೆಚ್ಚುವುದಲ್ಲದೆ ಕನ್ನಡಿಗರೆ ಒಳ್ಳೆಯ ಚಿತ್ರಗಳು ಹೆಚ್ಚಾಗುತ್ತವೆ.
     ಇನ್ನು ಕಥೆಗಳ ವಿಚಾರಕ್ಕೆ ಬಂದರೆ ’ಕನ್ನಡ್ದಲ್ಲಿ ಒಳ್ಳೆ ಕಥೆ ಕಾದಂಬ್ರಿ ಎಲ್ಲವ್ರೀ?’ ಎನ್ನುತ್ತಾ ಇಡೀ ಕನ್ನಡ ಸಾಹಿತ್ಯಕುಲಕ್ಕೇ ಅವಮಾನ ಮಾಡುತ್ತಾರೆ. ಇಂತಹ ಚಿತ್ರರಂಗದ ಪರವಾಗಿ ತೆಗೆದುಕೊಂಡ ಆ ನಿರ್ಣಯ ಕನ್ನಡದ ಬೆಳವಣಿಗೆಗೆ ಹೇಗೆ ಪೂರಕ? ಎಂದು ಬಲ್ಲವರೇ ಹೇಳಬೇಕು. ಸದ್ಯದಲ್ಲೇ ’ವಿಶ್ವ ಕನ್ನಡ ಸಮ್ಮೇಳನ’ ಆರಂಭವಾಗಲಿದೆ ಅಲ್ಲಿಯಾದರೂ ಇಂತಹ ಅಭಾಸಭರಿತ ನಿರ್ಣಯಗಳಾಗದಿರಲಿ.
    ಹಾಗು ’ವಿಶ್ವ ಕನ್ನಡ ಸಮ್ಮೇಳನ’  ಅಭೂತಪೂರ್ವ ಯಶಸ್ಸು ಕಾಣಲಿ ಎಂದು ಹಾರೈಸುತ್ತೇನೆ.
                    "ಸಿರಿಗನ್ನಡಂ ಗೆಲ್ಗೆ"