ಮಂಗಳವಾರ, ಜೂನ್ 7, 2011

ಯೋಗಾಸನಕ್ಕೆ ರಾಜಕೀಯಾಸನ ಗೊತ್ತಿಲ್ಲ....!!!

ಎಂತಹ ವಿಪರ್ಯಾಸವಲ್ಲವೇ?
ಮರುಗಟ್ಟಿದ ಮನಸ್ಸಿಗೆ ದಿವ್ಯಚೇತನ ನೀಡುವ ಯೋಗಾಸನ ರಾಜಕೀಯಾಸನದ ಮುಂದೆ ಕೈಕಾಲು ನುಣುಚಿಕೊಂಡು ಬಿಡಿಸಿಕೊಳ್ಳಲಾಗದೆ ಹೇಗೆ ಒದ್ದಾಡುತ್ತಿದೆ ನೋಡಿ. ತಾನು ಕಲಿತ ಯೋಗವಿದ್ಯೆಯನ್ನು ಇತರರಿಗೆ ಹಂಚುತ್ತಾ ಕೋಟ್ಯಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದ ಬಾಬಾ ರಾಮದೇವ್ ಅದೇ ಉಮ್ಮಸ್ಸಿನಲ್ಲಿ ಭ್ರಷ್ಟಾಚಾರದ ವಿರುದ್ಧವೇನೋ ಉಪವಾಸ ಕುಳಿತದ್ದೂ ಆಯಿತು. ಅದು ಯಾರ ವಿರುದ್ಧ?!! ಕಾಂಗ್ರೆಸ್ ಮುಂದಾಳತ್ವದ ಯು.ಪಿ.ಎ ವಿರುದ್ಧ. ಜನಸಾಗರದ ಬೆಂಬಲದ ಪೊರೆಯ ಮುಂದೆ ಅದರ ಹೊರಗಿನ ಸತ್ಯ ಮಸುಕಾಗಿ ಗಿತ್ತೋ ಏನೋ? ಬಾಬಾರವರು ರಾಜಕೀಯ ಚದುರಂಗದಾಟದ ನಡೆಗಳನ್ನು ಊಹಿಸುವುದರಲ್ಲಿ ಎಡವಿರುವುದಕ್ಕೆ ಇತ್ತೀಚಿನ ವಿದ್ಯಮಾನಗಳೇ ಸಾಕ್ಷಿ!!
    ಮೊದಲೇ ಸಿ.ಡಬ್ಲ್ಯು.ಜಿ., ೨ಜಿ., ೩ಜಿ ಇತ್ಯಾದಿ ಹಗರಣಗಳನಡುವೆ ಗಿಜಿಗುಡುತ್ತಾ ಗಬ್ಬೆದ್ದು ಹೋಗಿದ್ದ ಕೇಂದ್ರ ಸರ್ಕಾರದ ಹೆಕ್ಕತ್ತಿನ ಮೇಲೆ ಸತ್ಯಾಗ್ರಹದ ಸುತ್ತಿಗೆಯಿಂದ ಇಕ್ಕಿದ್ದು ಅಣ್ಣ ಹಜಾರೆಯವರು!! ಆರಂಭದಲ್ಲಿ ಇದೂ ಒಂದು ಮಾಮೂಲಿ ಪ್ರತಿಭಟನೆ ಎಂದು ಮೀಸೆ ಮರೆಯಲ್ಲಿ ನಗುತ್ತಾ ಉಡಾಫೆ ತೋರಿದ ದಿಲ್ಲಿ ದಿವಾನರಿಗೆ ಸಾಮಾಜಿಕ ತಾಣಗಳು ಇಟ್ಟ ಬರೆಯಿಂದ ಎಚ್ಚರವಾಯ್ತು!! ಮಿತಿ ಮೀರುತ್ತಿದ್ದ ಭ್ರಷ್ಟಾಚಾರದ ವಿರುದ್ಧ ಲೋಕಪಾಲ ಕಾಯ್ದೆಯ ಬೇಡಿಕೆಗೆ ಅಸ್ತು ಎಂದೇನೋ ಹೇಳಿತು. ಆದರೆ ಅದಕ್ಕೆ ಗೊತ್ತಿತ್ತು! ಜನಗಳು ಕೇಳುತ್ತಿರುವ ಕಾಯ್ದೆ ಜಾರಿಗೆ ತಂದರೆ ’ತಮ್ಮ ಅಂಡಿಗೆ ತಾವೇ ಬರೆಯಿಟ್ಟುಕೊಂಡಂತೆ’ಎನ್ನುವುದು!!
    ನಮ್ಮದೇಶವನ್ನು ಬಹುಕಾಲ ಆಳಿದ ಆಳುತ್ತಿರುವ ಕಾಂಗ್ರೆಸ್ ಬಹುತೇಕ ಬ್ರಿಟೀಷರ ನೀತಿಗಳನ್ನೇ ನೆಹರೂರವರ ಕಾಲದಿಂದಲೂ ಚಾಚೂ ತಪ್ಪದೆ ಅಳವಡಿಸಿಕೊಂಡು ನಮ್ಮನ್ನಾಳುತ್ತಿದೆ ಮತ್ತು ಹಾಳುಮಾಡುತ್ತಲೂ ಇದೆ. ಅಂದು ಪ್ರಧಾನ ಮಂತ್ರಿಯ ಕುರ್ಚಿಗಾಗಿ ದೇಶವನ್ನೇ ಒಡೆದದ್ದಾಯ್ತು! ನಂತರ ನೋಬೆಲ್ ಪ್ರಶಸ್ತಿಯ ದುರಾಸೆಗೊಳಗಾಗಿ ಕಾಶ್ಮೀರ ಬಲಿಕೊಟ್ಟಿದ್ದಾಯ್ತು!! ಅಕ್ಕಪಕ್ಕದ ನೆರೆಗಳನ್ನು ಅದ್ಧುಬಸ್ತಿನಲ್ಲಿಡುವಾಗ ಶ್ರೀಮಾನ್ ಲಾಲ ಬಹದ್ದೂರ್ ಶಾಸ್ತ್ರಿಯವರ ಪ್ರಾಣ ತೆಗಿದಿದ್ದೂ ಆಯ್ತು!!!. ತನ್ನ ಹೆಣ್ತನವನ್ನು ಬದಿಗೊತ್ತಿ ಅಧಿಕಾರಲಾಲಸೆಗಾಗೆ ಏನೆಲ್ಲಾ ಮಾಡಬಹುದು!! ಎಂದು ತನ್ನ ಮಕ್ಕಳಿಗೆ ಕಲಿಸಿದ್ದೂ ಆಯ್ತು!! ಹಗರಣಗಳನ್ನು ಹೆಗೆಲ್ಲಾ ಮುಚ್ಚಿಹಾಕಬಹುದು! ಅವುಗಳಿಗೆ ಕಾರಣರಾದವರನ್ನು ಹೇಗೆಲ್ಲಾ ಪಾರುಮಾಡಿ ಅವರವರ ದೇಶಕ್ಕೆ ಬೀಳ್ಕೊಡಬಹುದು!! ಎಂದು ಸಾಯುವ ಮುನ್ನವೇ ಹೇಳಿಕೊಟ್ಟಿದ್ದು ಇದೇ ಕಾಂಗ್ರೆಸ್ಸಿನ ಮಹಾನ್ ಪ್ರಭೃತಿಗಳು!!!!! ಜಾತಿಯ ಹೆಸರೇಳಿ ಹೇಗೆ ಒಂದು ಜ್ಯಾತ್ಯಾತೀತ ರಾಷ್ಟ್ರದಲ್ಲಿ ಪ್ರತಿ ಮನೆ ಮನಗಳನ್ನು ಮೀಸಲಾತಿಯ ಮೂಲಕ ಒಡೆದು ಹಾಳುಮಾಡಬಹುದೆಂದು ಅಂಧಕಾಲತ್ತಿಲ್ ನಿಂದಲೂ ಎಲ್ಲರಿಗೂ ತೋರಿಸಿಕೊಟ್ಟಿದ್ದು ಇದೇ ಕಾಂಗ್ರೆಸ್ ಪಕ್ಷ!!!!! ಇಂತಹ ಹಿನ್ನೆಲೆಯುಳ್ಳ ಪಕ್ಷದ ವಿರುದ್ಧ ಪ್ರತಿಭಟಿಸಿದರೆ ಯಾರಾದರೂ ಉಳಿಯುವುದುಂಟೇ?? ಇಲ್ಲ ಎನ್ನುವುದು ಬಾಬಾ ರಾಮದೇವ ಪ್ರಕರಣದಿಂದ ಸಾಭೀತಾಗಿದೆ!!
    ತನ್ನುಳಿವಿಗಾಗಿ ಯಾವ ವಾಮಮಾರ್ಗಕ್ಕಾದರೂ ಸಿದ್ಧವಾಗಿರುವ, ಯಾರ ಚಾರಿತ್ರ್ಯವಧೆಗಾದರೂ ಸರಿ, ಎಂತಹ ಅಸಹ್ಯಕರ ರೀತಿಯಲ್ಲಾದರೂ ಸರಿ ಹತ್ತಿಕ್ಕಿ ತೀರಲು ಭಾರತೀಯರನ್ನು ಹೇಗೆಲ್ಲಾ ಸುಲಭವಾಗಿ ದಾರಿ ತಪ್ಪಿಸಿ ಮೂರ್ಖರನ್ನಾಗಿಸಬಹುದೆಂದು ಇಡೀ ಜಗತ್ತಿಗೆ ಮತ್ತೊಮ್ಮೆ ತೋರಿಸಿಕೊಟ್ಟಿದ್ದು ಇದೇ ಕಾಂಗ್ರೆಸ್!! ಇದ್ಯಾವುದನ್ನೂ ಅವಲೋಕಿಸದೆ, ಅವಲೋಕಿಸಿದ್ದರೂ ನಿರ್ಲಕ್ಷಿಸಿದ್ದು ಬಾಬಾರವರು ಮಾಡಿದ ಮೊದಲ ತಪ್ಪು. ಅದಕ್ಕೆ ಹೇಳೋದು ’ಯೋಗಾಸನಕ್ಕೆ ರಾಜಕೀಯಾಸನ ಗೊತ್ತಿಲ್ಲ....!!!’ ಅಂತ
    ಅಣ್ಣಾರವರ ಉಪವಾಸದಿಂದ ಎಚ್ಚೆತ್ತುಕೊಂಡ ಸರ್ಕಾರ ಅವರಿಗೆ ಮಾತುನೀಡಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿತ್ತು!! ನಂತರ ಶುರುವಾಯ್ತು ನೋಡಿ ಕಪಿ(ಲ್)ಚೇಷ್ಠೆ!!! ಸಿ(ಮ)೦ಗನಾಟ!!!ಕಾಯ್ದೆಯಿಂದ ಏನೇನೂ ಪ್ರಯೋಜನವಿಲ್ಲ! ಭ್ರಷ್ಟಾಚಾರ ನಿಯಂತ್ರಣ ಸಾಧ್ಯವೇ ಇಲ್ಲ!! ಎಂದು ಹೇಳುವ ಮೂಲಕ ಇದುವರೆಗೆ ಜಾರಿಗೆ ಬಂದ ಹಲ್ಲಿಲ್ಲದ ಹತ್ತು ಕಾಯ್ದೆಯೊಳಗೆ ಹನ್ನೊಂದನೆಯದನ್ನು ತಂದು ’ಕೈ’ತೊಳೆದುಕೊಳ್ಳುವ ತನ್ನುದ್ದೇಶವನ್ನು ಜಗಜ್ಜಾಹೀರುಗೊಳಿಸಿತು!! ಹಾಗೆ ಮಾಡುವ ಸಲುವಾಗಿಯೇ ಲೋಕಪಾಲ ಸಮಿತಿಯಲ್ಲಿ ಒಡಕು ಮೂಡಿಸಲು ಪ್ರಯತ್ನಿಸಿದ್ದು! ಸಮಿತಿಯಸದಸ್ಯರೇ ಭ್ರಷ್ಟರು!! ಎನ್ನುವ ಹಣೆಪಟ್ಟಿ ಅಂಟಿಸಿದ್ದು!! ಇದುವರೆಗೆ ನಡೆದ ಲೋಕಪಾಲ ಸಭೆಗಳ ನಿರ್ಣಯಗಳನ್ನು ಜನತೆಗೆ ತಿಳಿಸದೆ ಮುಚ್ಚಿಟ್ಟಿರುವುದು! ಆದರೆ ಬಾಬಾರವರ ಘಟನೆಯಿಂದ ಎಚ್ಚೆತ್ತ ಹಜಾರೆಯವರು ಪಟ್ಟು ಬಿಗಿಹಿಡಿದಿರುವುದು ಸಾಮಾನ್ಯರಲ್ಲಿ ಸ್ವಲ್ಪ ಆಶಾಭಾವನೆಯನ್ನು ಚಿಗುರಿಸಿರುವುದು ಸುಳ್ಳಲ್ಲ. ’ಜೂನ್ ೩೦ ರೊಳಗೆ ಕರಡು ಸಿದ್ಧವಾಗಲೇಬೇಕು, ಕರಡು ಸಮಿತಿಯ ಸಭೆಗಳನ್ನು ದೂರದರ್ಶನದ ಮೂಲಕ ನೇರಪ್ರಸಾರ ಮಾಡಬೇಕು’ಎಂದು ಗುಡುಗುವ ಮೂಲಕ ತಾವು ರಾಮದೇವ್ ಬಾಬಾ ರಂತೆ ಮುಗ್ಗರಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಸರ್ಕಾರಕ್ಕೆ ರವಾನಿಸಿದ್ದಾರಲ್ಲದೆ ನಾಳೆ ನಡೆಯಬೇಕಿದ್ದ ಕರಡು ಸಮಿತಿಯ ಸಭೆಯನ್ನು ಬಹಿಷ್ಕರಿಸುವ ಮೂಲಕ ಸರ್ಕಾರಕ್ಕೆ ಮುಜುಗರವುಂಟು ಮಾಡಿದ್ದಾರೆ.
    ಆದರೆ ಈ ನಾಚಿಗೆಗೆಟ್ಟ ಸರ್ಕಾರ "ಮುಂದೊಮ್ಮೆ ಕಪ್ಪು ಹಣ ವಾಪಸ್ಸು ತನ್ನಿ ಎನ್ನುವವರು ದೇಶದ್ರೋಹಿಗಳು" ಎಂಬ ಕೆಟ್ಟ ಕಾನೂನನ್ನು ತರಲು ಹೇಸುವುದಿಲ್ಲವೇನೋ!!! ಎನ್ನಿಸುತ್ತಿದೆ.  ಎಲ್ಲಾ ಕಾಂಗ್ರೆಸ್ ಮಹಾತ್ಮೆ!!! ಅದಕ್ಕೆ ಸಾಕ್ಷಿ ಎಂಬಂತೆ ಕಾಂಗ್ರೆಸ್ ಮುಖಂಡ ದ್ವಿವೇದಿ ಯವರ ಪತ್ರಿಕಾಗೋಷ್ಠಿಯಲ್ಲಿ ನಡೆದ ಚಪ್ಪಲಿ ’ಶೋ’ ಕೂಡಾ ಕಾಂಗ್ರೆಸ್ಸ್ ನಿರ್ದೇಶಿತ ನಾಟಕವೇ!! ಎನ್ನುವುದು ಆ ದೃಶ್ಯಾವಳಿ ನೋಡಿದ ಯಾವ ಮುಠ್ಠಾಳನಿಗೂ ತಿಳಿದುಬಿಡಿತ್ತದೆ. ದ್ವಿವೇದಿ ಬಳಿ ಆತ ಶೂ ಹಿಡಿದು ನಿಂತಾಗ ಆತನ ಅಕ್ಕಪಕ್ಕದಲ್ಲಿ ಯಾರೂ ಇರಲಿಲ್ಲ!!! ಬೇರೆಯವರು ಬಂದು ಹಿಡಿದು ತಳ್ಳುವವರೆಗೂ ಆತ ಶೂ ತೋರಿಸಿತ್ತಾ ಸುಮ್ಮನೆ ನಿಂತಿದ್ದನೇ ಹೊರತು ಹೊಡೆಯುವ ಯತ್ನವನ್ನೂ ಮಾಡಲಿಲ್ಲ!!! ಅವರು ಹೇಳುವಂತೆ ಆತ ನಿಜವಾಗಿಯೂ ಆರ್.ಎಸ್.ಎಸ್.ನ ಕಾರ್ಯಕರ್ತನಾಗಿದ್ದಲ್ಲಿ ಆತನಿಗೆ ಅವರನ್ನು ಒಡೆಯುವ ಉದ್ದೇಶವಾಗಲಿ ಇದ್ದಲ್ಲಿ ಒಡೆದು ತಪ್ಪಿಸಿಕೊಳ್ಳಲು ಪ್ರಯ್ತಿಸುತ್ತಿದ್ದನೇ ಹೊರತು ಸುಖಾಸುಮ್ಮನೆ ಸಿಕ್ಕಿಹಾಕಿಕೊಳ್ಳುತ್ತಿರಲಿಲ್ಲ. ಇದೆಲ್ಲವನ್ನು ನೋಡಿದರೆ ಭ್ರಷ್ಟರನ್ನು ಆದಷ್ಟು ರಕ್ಷಿಸಲು ಹೇಗೆಲ್ಲಾ ಸಾಧ್ಯವೋ ಹಾಗೆಲ್ಲಾವೂ ಸರ್ಕಾರ ಪ್ರಯತ್ನಿಸುತ್ತಿರುವುದು ಸ್ಪಷ್ಟ.
    ಇಂತಹ ಸ್ಥಿಯಲ್ಲಿ ಬಾಬಾ ರಾಮದೇವ ರವರು ಇನ್ನಾದರೂ ಎಚ್ಚರಿಕೆಯ ಹೆಜ್ಜೆಯನ್ನಿಡಬೇಕಾಗಿದೆ. ಏಕೆಂದರೆ ಅವರು ಕೈ ಹಾಕಿರುವ ಚಳುವಳಿ ಒಳ್ಳೆಯ ಉದ್ದೇಶದ್ದು. ಬಾಬರವನ್ನು ಕೆಣಕಿ ಅವರಿಂದ ಪ್ರತಿಕ್ರಿಯೆಗಳನ್ನು ಹೊರತೆಗೆದು ಆಟ ಆಡಿಸುತ್ತಾ ಸಮಯ ವ್ಯರ್ಥಮಾಡುತ್ತಾ ಕುಳಿತಿದೆ. ಆದ್ದರಿಂದ ಬಾಬಾ ರವರು ಉಪವಾಸ ಸತ್ಯಾಗ್ರಹದ ಜೊತೆಗೆ ಮೌನವ್ರತವನ್ನೂ ಆಚರಿಸಿದರೆ ಸರ್ಕಾರಕ್ಕೆ ಬಿಸಿಮುಟ್ಟೀತು!! ಏಕೆಂದರೆ ರಾಮದೇವ್ ಬಾಬಾರಿಗೆ ಯೋಗ ಸಿದ್ದಿಸಿದಷ್ಟು ರಾಜಕೀಯದ ಪರಿಚಯವಿಲ್ಲ!! ಅದಕ್ಕೆ ಕಪಿ(ಲ್) ಸಿಂಗ್(ಲೀಕ)ಗಳು ಮೆಲೆರೆಗಿ ಗಾಯಗೊಳಿಸುತ್ತಿರುವುದು. ಇದು ಹೀಗೆ ಮುಂದುವರಿದಲ್ಲಿ ಚಳುವಳಿ ದಾರಿತಪ್ಪುವ ಸಾಧ್ಯತೆಯೇ ಹೆಚ್ಚಲ್ಲವೇ?

ಸೋಮವಾರ, ಜೂನ್ 6, 2011

ಬಾ! ಬಾ! ಬ್ಲಾಕ್ ಮನಿ............

ನಗುವುದೋ ಅಳುವುದೋ
ನೀವೇ ಹೇಳಿ....
ಎನ್ನುವ ಅಣ್ಣಾವ್ರ ಸಂಪತ್ತಿಗೆ ಸವಾಲ್ ಗೀತೆ ನಿನ್ನೆಯಿಂದ ಬೇಡ ಬೇಡವೆಂದರೂ ನಾಲಿಗೆಯ ತುದಿಯಲ್ಲಿ ಗುನುಗುವಂತಾಗುತ್ತಿದೆ. ಭಾನುವಾರ ನಸುಕಿನಲ್ಲಿ ನಡೆದ ಯು ಪಿ ಎ ಸರ್ಕಾರ ಮತ್ತು ಬಾಬಾ ರಾಮದೇವ್ ರವರ ನಡುವಿನ ಜಟಾಪಟಿ. ಬಾಬಾರ ನಿರಶನವನ್ನು ಪ್ರಹಸನವನ್ನಾಗಿ ಪರಿವರ್ತಿಸಿ ಯು.ಪಿ.ಎ ಯ ಕಪಿಗಳು ಸಿಂಗಲೀಕಗಳು ಅಲ್ಲಲ್ಲ ಕಪಿಲ್(ಸಿಬಲ್) ಮತ್ತು ಸಿಂಗ್(ದಿಗ್ವಿಜಯ್) ಗಳು ರಾತ್ರೋರಾತ್ರಿ ’ಹೊಸ ಹೀರೋ’ ಒಬ್ಬನನ್ನು ಪ್ರಪಂಚಕ್ಕೆ ನೀಡಿದ (ಕು)ಖ್ಯಾತಿಗೆ ಒಳಗಾಗಿದ್ದಾರೆ. ಇಬರಿಬ್ಬರ ಜಟಾಪಟಿಗೆ ಕಾರಣ ಬ್ಲಾಕ್ ಮನಿ ಅರ್ಥಾತ್ ಕಪ್ಪು ಹಣ. ವಿದೇಶಗಳಲ್ಲಿನ ಕಪ್ಪು ಹಣ ವನ್ನು ವಾಪಸ್ ತರಬೇಕೆಂದು ಬಾಬಾ ನಿರಶನಗೊಂಡರೆ, ಹಜಾರೆಯವರಿಂದ ಹೈರಾಣಾಗಿದ್ದ ಕೇಂದ್ರ ಸರ್ಕಾರ ಬಾಬಾರವರೇ ಕಪ್ಪು ಹಣದ ಸರದಾರನೆನ್ನುವಂತೆ ಬಿಂಬಿಸುತ್ತಿದೆ.
    ಅಸಲಿಗೆ ಇದೆಲ್ಲಾ ಶುರುವಾಗಿದ್ದು ಬಾಬಾ ರಾಮದೇವ್ ಕಪ್ಪು ಹಣವಾಪಸ್ ತರಬೇಕೆಂದು ಜೂನ್ ನಾಲ್ಕರಂದು ಉಪವಾಸ್ ನಿರಶನ ಆರಂಭಿಸುತ್ತೇನೆ ಎಂಬ ಘೋಷಣೆಯೊಂದಿಗೆ. ಅಣ್ಣಾ ಹಜಾರೆಯವರ ಉಪವಾಸದಿಂದ ಸೊರಗಿ ಸುಸ್ತಾಗಿದ್ದ ಕೇಂದ್ರ ಸರ್ಕಾರಕ್ಕೆ ರಾಮದೇವರ ನಿರ್ಧಾರದಿಂದ ವಿಧಿಯಿಲ್ಲದೆ ’ರಾಮನಾಮ’ ಇದೇ ಪ್ರಥಮ ಬಾರಿಗೆ ಜಪಿಸುವಂತಾಯ್ತು. ವಿಚಲಿತಗೊಂಡ ಸೋನಿಯಾ ರಾಮದೇವರ ಹಿಂದೆ ಕಪಿ(ಲ್) ಸೈನ್ಯವನ್ನು ಛೂ!! ಬಿಟ್ಟಿತು. ಐದು ದಿನ ಬಾಬಾರ ಯೋಗಾಸನದ ಮುಂದೆ ಮಂತ್ರಿಗಳ ’ದೀರ್ಘದಂಡಾಸನ’ವೆಲ್ಲಾ ದಂಡವಾಗಿ ಫಲವೇನೂ ಸಿಗಲಿಲ್ಲ. ’ಕುಳಿತು ಹಾಳಾಗಿ ಹೋಗಲಿ’ ಎಂದು ಸುಮ್ಮನಾಯ್ತು. ನಿರಶನವೂ ಪ್ರಾರಂಭವಾಯ್ತು. ಅದಕ್ಕೆ ಹರಿದು ಬರುತ್ತಿದ್ದ ಜನಸಾಗರ ನೋಡಿ ಕೇಂದ್ರಕ್ಕೆ ಮತ್ತಷ್ಟು ದಿಗಿಲಾಯ್ತು. ಸಂಧಾನದ ಗೊಂದಲಗಳು ಪ್ರಾರಂಭವಾಗಿ ಎಲ್ಲವೂ ಸಂಜೆಯ ವೇಳೆಗೆ ’ಸುಖಾಂತ್ಯ’ ಎನ್ನುವಷ್ಟರಲ್ಲಿ ಎಂಟ್ರಿಕೊಟ್ಟರು ನೋಡಿ ’ಸಾಧ್ವಿ ರಿತುಂಬರಾದೇವಿ’!!!! ದಿಗ್ವಿಜಯ್ ದಿಕ್ಕೆಂಟ್ಟಂತೆ ಮಾತನಾಡಲು ಶುರುಮಾಡಿದ್ದೇ ಆವಾಗ!!!!
    ’ರಾಮದೇವ್ ಮೋಸಗಾರ!! ಜನರ ದಿಕ್ಕು ತಪ್ಪಿಸುತ್ತಿದ್ದಾರೆ! ಅವರೇ ಕಪ್ಪುಹಣದ ಸರದಾರರು!! ಅವರಿಗೆ ನಿರಶನ ಕೂರುವ ನೈತಿಕತೆ ಇಲ್ಲ!! ...ಇತ್ಯಾದಿ..ಇತ್ಯಾದಿ.... ಆದರೆ ಕೇಂದ್ರ ಮತ್ತಷ್ಟು ತಲೆಕೆಡಿಸಿಕೊಂಡಿದ್ದು ’ಆರ್. ಎಸ್ ಎಸ್’ನ ಮುಖಂಡರು ವೇದಿಕೆ ಹಂಚಿಕೊಂಡಾಗ!!! ತಡೆದುಕೊಳ್ಳದ ಸರ್ಕಾರ ಮಧ್ಯರಾತ್ರಿ ಮಹಿಳೆಯರು, ಮಕ್ಕಳು ಒಳಗೊಂಡು ಸತ್ಯಾಗ್ರಹಿಗಳು ಸವಿನಿದ್ದೆಯಲ್ಲಿದ್ದಾಗ ಪೊಲೀಸರು ಲಾಠಿ ಚಾರ್ಜ್ ಮಾಡಿ, ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದರು. ಕಪ್ಪು ಹಣ ವಾಪಸ್ ತರಬೇಕು, ಕಳ್ಳ ದಾರಿಯಲ್ಲಿ ಹಣ ಮಾಡಿರುವ ಜನರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು, ಈ ಕುರಿತ ಪ್ರಕರಣಗಳ ವಿಚಾರಣೆಗೆ `ಫಾಸ್ಟ್ ಟ್ರ್ಯಾಕ್~ ಕೋರ್ಟ್‌ಗಳನ್ನು ಸ್ಥಾಪಿಸಬೇಕು ಎಂದು ಶನಿವಾರ ಬೆಳಗಿನ ಜಾವದಿಂದ ಆಮರಣ ಉಪವಾಸ ಕೈಗೊಂಡಿದ್ದ ಬಾಬಾ ಮತ್ತು ಅವರ ಶಿಷ್ಯರನ್ನು ರಾಮಲೀಲಾ ಮೈದಾನದಿಂದ ಖಾಲಿ ಮಾಡಿಸಲು ಪೊಲೀಸರು ಸರ್ಕಾರದ ನಿರ್ದೇಶನದಂತೆ ಈ ಕ್ರಮ ಕೈಗೊಂಡರು. ಭಾನುವಾರ ಬೆಳಗಿನ ಜಾವ ಸತ್ಯಾಗ್ರಹಿಗಳ ಪಾಲಿಗೆ ಕರಾಳ ರಾತ್ರಿಯಾಯಿತು. ಇದೆಲ್ಲವನ್ನೂ ಪ್ರಪಂಚದಾದ್ಯಂತ ಜನರು ನೋಡಿದ್ದಾರೆ ಮತ್ತು ನೋಡುತ್ತಿದ್ದಾರೆ. ಇಡೀ ಪ್ರಕರಣವನ್ನು ಒಟ್ಟಾರೆಯಾಗೆ ನೋಡಿದಾಗ ಬಾಬಾರಿಗಿಂತ ಸರ್ಕಾರದ ನಡೆಯ ಮೇಲೆ ಹೆಚ್ಚು ಸಂಶಯವಾಗುವುದು ಹತ್ತು ಹಲವು ಉತ್ತರಸಿಗದ ಪ್ರಶ್ನೆಗಳು ಕಾಡುವುದೂ ಸ್ಪಷ್ಟ..
    ಮೊದಲಿಗೆ ’ಬಾಬಾರವರಿಗೆ ಒಂದು ದಿನಕ್ಕೆ ಯೋಗ ಶಿಬಿರಕ್ಕೆ ಮಾತ್ರ ಅನುಮತಿಸಲಾಗಿತ್ತು’ ಎಂದು ಸರ್ಕಾರ ಹೇಳುವುದು ನಿಜವಾಗಿದ್ದಲ್ಲಿ ಬಾಬಾರವರ ಹಿಂದೆ ಐದು ದಿನಗಳಿಂದ ಅಲೆದದ್ದೇಕೆ? ಅವರೊಡನೆ ಸತ್ಯಾಗ್ರಹ ಕೈಬಿಡಲು ದಂಬಾಲು ಬಿದ್ದದ್ದೇಕೆ? ಹಾಗೆ ಯೋಗ ಶಿಬಿರಕ್ಕೆ ಮಾತ್ರ ಅನುಮತಿಸಿದ್ದಲ್ಲಿ ಅದರ ಪ್ರತಿಯನ್ನೇಕೆ ಮಾಧ್ಯಮಗಳ ಮೂಲಕ ಜನರಮುಂದೆ ಇಡಲಿಲ್ಲ? ಅಕಸ್ಮಾತ್ ಹಾಗೆ ಅನುಮತಿ ನೀಡಿದ್ದಲ್ಲಿ ಹಗಲುಹೊತ್ತೇಕೆ ರಾಮಲೀಲಾ ಮೈದಾನವನ್ನು ತೆರವುಗೊಳಿಸಲಿಲ್ಲ? ನಟ್ಟನಡುರಾತ್ರಿ ನಿದ್ರಿಸುತ್ತಿರುವವರ ಮೇಲೆ ಕೈಮಾಡಿದ್ದು ತಪ್ಪಲ್ಲವೇ?
    ಎರಡನೆಯದು ’ಬಾಬಾರವರ ಸಮಾರಂಬಕ್ಕೆ ಹಣ ಹೇಗೆ ಬಂತು? ಅದು ಕಪ್ಪು ಹಣವಲ್ಲವೇ?’ ಎನ್ನುವುದು ಸರ್ಕಾರದ ವಾದ. ಇದು ಅತಿ ಮುಖ್ಯವಾದ ಪ್ರಶ್ನೆ ಇದು ನಿಜವೆನಿಸಿದಲ್ಲಿ ಅದರ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ಸಾರ್ವಜನಿಕರ ಮುಂದೆ ದಾಖಲೆ ಸಮೇತ ಇಡುವುದು ಬಿಟ್ಟು ಮಾಧ್ಯಮದ ಮುಂದೆ ಒಣ ಹೇಳಿಕೆಗಳನ್ನು ನೀಡುವುದೇಕೆ? ಕೇಂದ್ರ ಸರ್ಕಾರದ ಬಳಿ ಸಧ್ಯ ದಾಖಲೆಗಳಿಲ್ಲ ಎನ್ನುವುದಾದರೆ ಸುಮ್ಮನೆ ಅದರ ಬಗ್ಗೆ ಮಾತನಾಡುವುದೇಕೆ? ಅಥವಾ ಕೇಂದ್ರದ ಗುಪ್ತಚರ ಇಲಾಖೆಯೇನು ಕಡ್ಲೇಪುರಿ ತಿನ್ನುತ್ತಿದೆಯೇ?
    ಈ ರೀತಿಯ ಕೇಂದ್ರದ (ದುರ್)ವರ್ತೆನೆಗೆ ವಿದೇಶಗಳಲ್ಲಿ ಅತಿ ಹೆಚ್ಚು ಕಪ್ಪು ಹಣ ಇಟ್ಟಿರುವವರ ಪಟ್ಟಿಯಲ್ಲಿ ಯು.ಪಿ.ಎ ಸರ್ಕಾರದವರದ್ದು ಸಿಂಹಪಾಲು!! ಅವರನ್ನು ರಕ್ಷಿಸುವ ಗುರುತರ ಹೊಣೆ ಅವರದ್ದೇ ಆಗಿದೆ. ವಿಪರ್ಯಾಸವೆಂದರೆ ಹಗರಣಗಳಲ್ಲಿ ಮುಳುಗೇಳುತ್ತಿರುವ ಕೇಂದ್ರ ಸರ್ಕಾರವನ್ನು ಯೋಗ ಕಲಿಸುವ ಗುರು, ಔಷಧಿ ಮಾರುವ ವ್ಯಾಪಾರಿಯೊಬ್ಬರು ಹೆದರಿಸುವಂತಾಗಿದೆ.
    ಹಾಗೆಂದ ಮಾತ್ರಕ್ಕೆ ಬಾಬಾರವರನ್ನು ಸಾಚ ವ್ಯಕ್ತಿ ಎಂದೇನು ಸಮರ್ಥಿಸಿಕೊಳ್ಳುತ್ತಿಲ್ಲ. ಅವರ ಮೇಲೂ ಸಾಕಷ್ಟು ಗುರುತರ ಆಪಾದನೆಗಳಿವೆ. ಅದರಲ್ಲೂ ದೃಶ್ಯಮಾಧ್ಯಮಗಳಲ್ಲಿ ಕ್ಷಣ ಕ್ಷಣಕ್ಕೂ ಚಿತ್ರ ವಿಚಿತ್ರ ಬಣ್ಣದ ಸುದ್ದಿಯಾಗುತ್ತಿದ್ದಾರೆ. ಅವುಗಳಲ್ಲಿ ಕೆಲ ಪ್ರಶ್ನೆಗಳು ಸಹಜವೆನಿಸುತ್ತವೆ. ಭ್ರಷ್ಟಾಚಾರ ವಿರೋಧಿಸುವುದು ಈಗೀಗ ಒಂದು ಫ್ಯಾಷನ್. ಭ್ರಷ್ಟಾಚಾರ ವಿರೋಧಿ ಹೋರಾಟಗಳನ್ನು ಬೆಂಬಲಿಸುವವರ ಪೈಕಿ ಸಾಕಷ್ಟು ಮಂದಿಗೆ ತಮ್ಮ ಕಳಂಕಗಳನ್ನು ತೊಳೆದುಕೊಳ್ಳುವ ಆತುರ. ಅಣ್ಣಾ ಹಜಾರೆ ಹೋರಾಟಕ್ಕೆ ವ್ಯಕ್ತವಾದ ಸಾರ್ವತ್ರಿಕ ಬೆಂಬಲವನ್ನು ಗಮನಿಸಿದ ಮೇಲೆ ಇಂಥದ್ದೇ ಬೆಂಬಲದ ನಿರೀಕ್ಷೆಯಲ್ಲಿ ರಾಮದೇವ ಉಪವಾಸಕ್ಕೆ ಕೂರುತ್ತಿದ್ದಾರೆ. ಅಲ್ಲದೆ ಸರ್ಕಾರದ ಹೇಳಿಕೆಗಳು ಸಧ್ಯದ ಪರಿಸ್ಥಿತಿಯಿಂದ ಬಚಾವಾಗಲು ನೀಡುತ್ತಿರುವ ದಾರಿ ತಪ್ಪಿಸುವ ಹೇಳಿಕೆಗಳೆಂಬುದು ಸ್ಪಷ್ಟ. ಅದೇನೇ ಆಗಲಿ ಅವರು ತಪ್ಪು ಮಾಡಿದ್ದೇ ಆದಲ್ಲಿ ಅವರಿಗೂ ಶಿಕ್ಷೆಯಾಗಲೇ ಬೇಕು ಅವರೇನು ದೇವಲೋಕದಿಂದ ಇಳಿದು ಬಂದವರೇನಲ್ಲ. ಈ ನೆಲದ ಕಾನೂನುಗೆ ಯಾರೂ ಅತೀತರಲ್ಲ. ಸಂಸ್ಕೃತಿಯನ್ನೇ ಬಂಡವಾಳವಾಗಿಸಿಕೊಂಡು ಜನರನ್ನು ದಾರಿತಪ್ಪಿಸುವ ಇತರ ಸ್ವಾಮಿಜಿಗಳೂ ಸಹ ಈ ಸಮಾಜದಲ್ಲಿದ್ದಾರೆ ಅವರುಗಳ ವಿರುದ್ಧವೂ ಸಹ ತನಿಕೆಯಾಗಬೇಕು. ಏಕೆಂದರೆ ವಿದೇಶದಲ್ಲಿ ಕಪ್ಪು ಹಣವನ್ನಿಡಲು ಮಠಮಾನ್ಯಗಳ ’ಕೊಡುಗೆ’ ಅಪಾರ. ಆದ್ದರಿಂದ ಲೋಕಪಾಲ ಕಾಯ್ದೆಯಡಿಯಲ್ಲಿ ಅವರನ್ನೂ ತರುವ ಪ್ರಾಮಾಣಿಕ ಪ್ರಯತ್ನವಾದಾಗಲೇ ಭ್ರಷ್ಟಾಚಾರವೆನ್ನುವುದು ಭಾರತದಿಂದ ಬುಡಸಮೇತ ತೊಲಗಲು ಸಾಧ್ಯ.