ಬುಧವಾರ, ಅಕ್ಟೋಬರ್ 8, 2014

ನಿರಂತರ ಯಾತನೆ

ನಿನ ಕುಡಿ ನೋಟದ ಕಣ್ಬೆಳಕ ಕಂಡು ಕವಿಯಾದೆ
ಅದೇ ಬೆಳಕ ಬಾಳ ದೀಪವಾಗಿಸಲು ಸೋತು ಹೋದೆ

ನಿನ ನಸು ನಗೆಯ ನೆನಪಲೆ ಕನಸುಗಳ ಹೆಣದೆ
ಅದೇ ಕನಸುಗಳ ನನಸಾಗಿಸದೆ ನರಳಿ ನೆಲವನ್ನು ಕಂಡೆ

ನೀ ನಡೆದಾಡಿದೆಡೆ ನಿನ ಹೆಜ್ಜೆಗಳ ಗುರುತಿಸಿ ಗೆಜ್ಜೆ ಕಟ್ಟಿ ಕುಣಿದೆ
ಅದೇ ಹೆಜ್ಜೆಗಳ ಜೊತೆ ಹೆಜ್ಜೆಯನಿರಿಸಿ 

ಬಾಳ ಜೇನಾಗಿಸದೆ ಹೆಳವನಾದೆ

ಎದೆಯ ಮಂದಿರದ ದೇವಿಯ ಮಾಡಿ ಪೂಜಿಸಿದೆ
ಅದೇ ಎದೆಗೆ ನಿನ ಕಿವಿಯ ತಾಗಿಸಿ 

ಪ್ರೀತಿಯ ಮಂತ್ರಘೋಷವ ಕೇಳಿಸದಾದೆ


ನಾನುಸುರುವ ಪ್ರತಿ ಉಸಿರು ನೀನಾದೆ
ಆ ಉಸಿರಿನೆಸರ ಜಗಕೆ ಸಾರದಾದೆ

ಕಂಡ ಕನಸುಗಳಿಗೆ ಲೆಕ್ಕವಿಲ್ಲ
ಕಾಡಿ ಕೊಲ್ಲುವ ನೆನಪುಗಳಿಗೆ ಕೊನೆಯೇ ಇಲ್ಲ
ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ನಿನ ಭಜಿಸಿದರೂ
ನೀನೀಗ ಒಲಿಯುವುದಿಲ್ಲ
ಎದೆಯುಸಿರ ಹೆಸರು
ನೆನಪುಗಳ ಹಿಮದಲ್ಲಿ ಹೆಪ್ಪುಗಟ್ಟಿ ನಿಂತಿದೆ
ಕವಿತೆಗೂ ಕರಗಿಸುವ ಶಕ್ತಿಯಿಲ್ಲ

ಶೀತಲದ ನೋವು ನಿರಂತರ ಯಾತನೆ