ಭಾನುವಾರ, ನವೆಂಬರ್ 29, 2009

ಭಾಷೆ ಬರದ ಊರಲ್ಲೊಂದು ದಿನ !!!.....

ಸುಮಾರು 2005 ರ ಸೆಪ್ಟಂಬರ್ ತಿಂಗಳು ನನ್ನವಳು ಒಂದು ಭಾನುವಾರ ಬೆಳಿಗ್ಗೆ ಎದ್ದು
"ರೀ ದಿನಾ ನನ್ನನ್ನ ಅಣ್ಕುಸ್ತೀರಾ?! ನೋಡಿ ಇವತ್ತು ನಾನೇ ತರಕಾರಿ ವ್ಯಾಪಾರನ ತೆಲುಗಿನಲ್ಲೇ ಮಾತಾಡಿ ಹೆಂಗ್ ಮಾಡ್ತೀನಿ!! ಅಂತ!"
ನಾನು ಹೊದ್ದುಕೊಂಡು ಮಲಗಿದ್ದ ರಗ್ಗನ್ನು ಎಡಗೈಲ್ಲಿ ಎಳೆಯುತ್ತಾ, ಬಲಗೈಯಲ್ಲಿ ಕಾಫಿಯನ್ನು ಮುಖಕ್ಕೆ ಹಿಡಿಯುತ್ತಾ ಚಾಲೆಂಜ್ ಮಾಡುತ್ತಾ ಹೇಳಿದಳು. ಇವಳ 'ತೆಲುಗು ಭಾಷೆ ಕೇಳಬೇಕಲ್ಲಪ್ಪಾ!' ಎನ್ನುವ ಪೀಕಲಾಟ ವನ್ನು ನೆನೆದು ಇದ್ದಬದ್ದ ನಿದ್ದೆಯೆಲ್ಲಾ ಹಾರಿ ಹೋಗಿ ದಡಕ್ಕನೆದ್ದು ಕುಳಿತು ನಿತ್ಯವೂ ಹೇಳುತ್ತಿದ್ದ "ಕರಾಗ್ರ ವಸತೇ........" ಕೂಡ ಹೇಳದೆ ಕಾಫಿ ತೆಗೆದುಕೊಳ್ಳೂತ್ತಾ
"ಇವತ್ತು ಬೇಡಮ್ಮ ಇವತ್ತು ಕನ್ನಡಸಂಘದಲ್ಲಿ ಫಂಕ್ಷನ್ ಇದೆ ನಾಳೆ ಮಾಡು, ಇವತ್ತು ನಿನ್ ತರ್ಕಾರಿ ಅವಶ್ಯಕತೆ ಇಲ್ಲ ಅನ್ಸುತ್ತೆ'' ಅಂದೆ.
"ಇಲ್ಲಾ! ಇವತ್ತು ಭಾನ್ವಾರ ಏನೂ ಕೆಲ್ಸಾ ಇಲ್ಲಾ! ನಂಜೊತೆ ನೀವು ಬರ್ತಾ ಇದೀರಾ!! Ok!!" ಅಂತಾ ಫರ್ಮಾನು ಹೊರಡಿಸಿ ಅಡುಗೆ ಮನೆ ಸೇರಿದಳು.
ನನಗೇನೋ ನನ್ನ ಮಡದಿಯ ಕಂಡರೆ ಬೆಟ್ಟದಷ್ಟು ಪ್ರೇಮವೇ. ಆದರೆ ಅವಳ ತೆಲುಗು ಕಂಡರೆ ಮಾತ್ರ ಭಯ..
ಇದೆಲ್ಲಾ ನಡೆದದ್ದು ವಿಶಾಖಪಟ್ಟಣದಲ್ಲಿ.
ನಾನು ಮಂಡ್ಯದಲ್ಲಿ ಮಾಡುತ್ತಿದ್ದ ಕೆಲಸ ಮೆಚ್ಚಿ ನನ್ನ ಕಂಪನಿ ನನಗೆ ಪ್ರಮೋಷನ್ ನೀಡಿ ವಿಶಾಖಪಟ್ಟಣಕ್ಕೆ ವರ್ಗಾಯಿಸಿತ್ತು.
ಹೊಸ ಜಾಗ, ಹೊಸ ಜನ, ಹೊಸ ಜವಾಬ್ದಾರಿ ಹೇಗೋ? ಏನೋ? ಎಂಬ ಅಳುಕಿನಲ್ಲೇ ವಿಶಾಖಪಟ್ಟಣಕ್ಕೆ ಕಾಲಿಟ್ಟೆನಾದರೂ ಅಲ್ಲಿನ ವಾತಾವರಣಕ್ಕೆ ಬೇಗ ಹೊಂದಿಕೊಂಡು ನನಗೆ ಬರುತ್ತಿದ್ದ ಹರಕಲು ಮುರುಕಲು ತೆಲುಗಿನಲ್ಲೇ ವ್ಯವಹರಿಸಲು ಆರಂಭಿಸಿದವ, ತೆಲುಗರ ಸಮಾನಕ್ಕೆ ತೆಲುಗು ಮಾತನಾಡುವುದ ಕಲಿತೆ. ಮೊದಲ 3 ತಿಂಗಳು ಕನ್ನಡ ಮಾತನಾಡಬೇಕೆಂದರೆ ನನ್ನವಳ ಮತ್ತು ಅಪ್ಪ ಅಮ್ಮನ ಬಳಿ ಫೋನ್-ಇನ್-ನೇರ ಕಾರ್ಯಕ್ರಮವೊಂದೇ ದಾರಿಯಾಗಿತ್ತು. ಏಕೆಂದರೆ ಅಲ್ಲಿನ ವಾತಾವರಣಕ್ಕೆ ಹೊಂದಿಕೊಂಡು, ಒಳ್ಳೆಯ ಕಡೆ ಮನೆ ಮಾಡಿದನಂತರ ನನ್ನವಳನ್ನು ಕರೆದುಕೊಂಡು ಹೋಗುವುದೆಂದು ತೀರ್ಮಾನಿಸಿದ್ದರಿಂದ ಹೊಟ್ಟೆಗೆ ತಾತ್ಕಾಲಿಕ ಸಂಚಕಾರ ಬಂದೊದಗಿತ್ತು. ಇದಲ್ಲದೆ ವಿಶಾಖಪಟ್ಟಣದಲ್ಲೇ ಇದ್ದ "ಕಾವೇರಿ ಕನ್ನಡ ಸಂಘ" ದ ಸದಸ್ಯರೂ ನನ್ನ ಸಹಾಯಕ್ಕೆ ಬಂದರು. ನಿಜವಾಗಿಯು ನನಗೆ ನನ್ನ ಕನ್ನಡದ ಮಹತ್ವ ಅರಿವಾಗಿದ್ದು ನಾನು ಕರ್ನಾಟಕ ಬಿಟ್ಟು ಆಂಧ್ರಕ್ಕೆ ಹೋದನಂತರವೇ. ಹೊಸದರಲ್ಲಂತೂ ನೀರಿನಿಂದ ಹೊರಬಂದ ಮೀನಿನಂತಾಗಿದ್ದೆ. ಏಕೆಂದರೆ ಅಲ್ಲಿನವರಿಗೆ ತೆಲುಗು ಬಿಟ್ಟರೆ ಬೇರೆ ಭಾಷೆ ಅಷ್ಟಾಗಿ ಬರುತಿರಲಿಲ್ಲ. ಆದ್ದರಿಂದಲೇ ನನಗೆ ತೆಲುಗು ಕಲಿಯುವ ಅನಿವಾರ್ಯತೆ. ಅಂತಹ ಸಂದರ್ಭದಲ್ಲಿ ಯಾರಾದರೂ ಕನ್ನಡ ಮಾತನಾಡುವವರು ಸಿಕ್ಕರೆ ಮರುಭೂಮಿಯಲ್ಲಿ 'ಓಯಸಿಸ್ ' ಸಿಕ್ಕಂತಾಗುತಿತ್ತು. ಆದ್ದರಿಂದಲೇ ನಾನು ಸಹ ಸಂಘದ ಸಕ್ರೀಯ ಸದಸ್ಯನಾಗಿದ್ದೆ.
3 ತಿಂಗಳ ನಂತರ ನನ್ನವಳ ಆಗಮನ. ಅವಳೂ ಸಹ ಎಂ.ಎಸ್ಸಿ.(Biochemistry) ಮುಗಿಸಿದ್ದರಿಂದ A.Q.J Pg college ನಲ್ಲಿ ಉಪನ್ಯಾಸಕಳಾಗಿ ಸೇರಿಕೊಂಡಿದ್ದಳು. ಅವಳಿಗೆ ತೆಲುಗು ಕಲಿಯುವ ಅವಶ್ಯಕತೆ ಇಲ್ಲವಾದರೂ ಅವಳ ವಿಧ್ಯಾರ್ಥಿಗಳಿಗಾಗಿ ಅವಳಿಗೆ ತೆಲುಗಿನ ಅನಿವಾರ್ಯತೆ ಇತ್ತು, ಆದರೂ ಅವಳು ಅದನ್ನು ಕಲಿಯುವ ಗೋಜಿಗೆ ಹೋಗಲಿಲ್ಲ. ಅಪ್ಪಿ ತಪ್ಪಿ ಅಕ್ಕಪಕ್ಕದ ಅಪಾರ್ಟ್'ಮೆಂಟ್ ನವರೇನಾದರೂ
"ಮೀ ಇಂಟ್ಲೋ ಈವಾಳ್ಳ ಏ ಸಾಂಬಾರ್ ಚೇಸ್ಯಾರಂಡೀ?" (ಇವತ್ತು ನಿಮ್ಮ ಮನೇಲಿ ಸಾಂಬಾರೇನು ಮಾಡಿದ್ದೀರಾ?) ಅಂತ ಕೇಳಿದ್ರೆ ಆ ದಿನ ಸಾಂಬಾರಿಗೆ ಹಾಕಿದ್ದ ತರಕಾರಿ ತಂದು ಅವರ ಮುಂದೆ ಹಿಡಿಯುತ್ತಿದ್ದಳು. ಈ ತಮಾಷೆ ನೋಡುವ ಸಲುವಾಗೆ ಅವರೆಲ್ಲಾ ನನ್ನವಳನ್ನು ಹಲವಾರು ಪ್ರಶ್ನೆ ಕೇಳಿ ಮಜಾ ತೆಗೆದು ಕೊಳ್ಳುತ್ತಿದ್ದರು.ಅಷ್ಟೆ ಅಲ್ಲ ನಾನು ಅವಳ ತೆಲುಗನ್ನು ಅಣಕಿಸಿ ಮಜಾನೋಡುತ್ತಿದ್ದೆ.
ಒಮ್ಮೆ ಕಾಲೇಜಿನಿಂದ ಬರುವಾಗ ಬಸ್ಸು ಸಿಗದಿದ್ದರಿಂದ, ಆ ದಿನ ನಾನು ಸಹ ಹೊರ ಊರಿಗೆ ಹೋಗಿದ್ದರಿಂದ ಫೋನ್ ಮಾಡಿದ ಅವಳಿಗೆ ಆಟೋದಲ್ಲಿ ಹೋಗುವಂತೆಯೂ, ಅವರು ಇಪ್ಪತ್ತು (ಇರುವೈ) ರೂಪಾಯಿ ಕೇಳುತ್ತಾರೆ ನೀನು 15 ರೂಪಾಯಿ ಕೊಟ್ಟು ಮನೆಗೆ ಹೋಗು ಎಂದು ಸಹ ಸಲಹೆಯಿತ್ತೆ. ಅರ್ಧ ಗಂಟೆಯ ನಂತರ ನನ್ನವಳಿಂದ ಮತ್ತೆ ನನಗೆ ಫೋನ್ ಬಂತು..
"ನೋಡ್ರೀ ಇವತ್ತು ನಾನು ತೆಲುಗಿನಲ್ಲೇ ಮಾತಾಡಿ ಆಟೋದವನ ಬಳಿ ದುಡ್ಡು ಉಳಿಸಿದ್ದೀನಿ. ಗೊತ್ತಾ?" ಅಂದಳು.ನಾನಂತೂ ಹಿಗ್ಗಿಹೋದೆ. 'ಕಡೆಗೂ ನನ್ನವಳು ಸ್ವಲ್ಪವಾದರೂ ತೆಲುಗು ಕಲಿತಳಲ್ಲ' ಅನ್ನಿಸಿ
"ಪರ್ವಾಗಿಲ್ವೇ!! ಏನಾಯ್ತು ಹೇಳಮ್ಮ?".
"ಆಟೋದವನು 25 ರೂ ಆಗುತ್ತೆ ಅಂದ ನಾನು seventeen rupees only ಅಂತ ಹೇಳ್ದೆ. ಅವನು ಅಷ್ಟಕ್ಕೆ ಮನೆ ತಲುಪಿಸಿದ"
ನಮ್ಮ ಮನೆಯಿಂದ ಇವಳ ಕಾಲೇಜಿಗೆ 3 ಕಿ.ಮೀ ಮಿನಿಮಮ್ ಇರೋದು 8 ರೂ. ಅಂದ್ರೆ ಮೀಟರ ಹಾಕಿದ್ರೆ 12 ರೂ ಆಗುತ್ತೆ, ಸುಮ್ಮನೆ ಯಾಕೆ ಅವರತ್ರ ಜಗಳ ಅಂತ 15 ರೂ ಕೊಟ್ಟು ಮನೆ ಸೇರುತಿದ್ದೆವು. ಇವಳು 17 ರೂ ಅಂತಿದ್ದಾಳೆ, ಅಂದ್ರೆ ಇವಳ ತೆಲುಗಿನಿಂದ ಏನೋ ಅವಾಂತರ ಆಗಿರ್ಬೋದು ಅನ್ನಿಸಿ,
"ಆಟೋ ದವ ತೆಲುಗಿನಲ್ಲಿ ತಾನೆ ದುಡ್ಡು ಕೇಳಿದ್ದು?" ಅಂದೆ.
"ಹೌದು!"
"ಹಾಗಿದ್ದರೆ ಹೇಳು ಆತ ತೆಲುಗಿನಲ್ಲಿ ಎಷ್ಟು ಕೇಳಿದ?"
"ಹೂಂ!!..... 'ಪದಿಹೆನ್ನು' ಅಂದ, ಇಲ್ಲಾ ಕೊಡೋದು seventeen rupees only ಅಂತ ಅಂದೆ, ಅವನು ಮಾತನಾಡದೆ ಒಪ್ಪಿಕೊಂಡ" ಅಂದಳು.
ಹೊಟ್ಟೆ ಹಿಡಿದು ನಗುವ ಸರದಿ ನನ್ನದಾಗಿತ್ತು!
ನಾನು ನಗುವುದನ್ನು ನೋಡಿ ಅವಳಿಗೆ ತುಂಬಾ ಸಂಕೋಚ ಸಿಟ್ಟು ಒಟ್ಟೊಟ್ಟಿ ಬಂತೆಂದು ಕಾಣುತ್ತದೆ.
" ಈ ಗಂಡಸರೆಲ್ಲಾ ಹೀಗೇನೇ! ಹೊಟ್ಟೆಕಿಚ್ಚಿನೋರು!ತಾವೇ...."
"ಅಮ್ಮ ತಾಯಿ 'ಪದಿಹೆನ್ನು' ಅಂದ್ರೆ 15 ಅಂತ, ಅಂದ್ರೆ ಅವನು 15ರೂಪಾಯಿ ಕೇಳಿದಾನೆ. ನೀನು 17 ರೂ ಕೊಟ್ಟಿದ್ದೀ....ಹ್ಹಿ..ಹ್ಹಾ..ಹ್ಹಾ....."
ಅವಳ ಮುಖ ಇಂಗು ತಿಂದ ಮಂಗನಾಗಿತ್ತು...

ಅದಕ್ಕೇ ಅವಳ ತೆಲುಗು ಅಂದ್ರೆ ನನ್ಗೆ ನಡುಕ!!!......

ಕಾಮೆಂಟ್‌ಗಳಿಲ್ಲ: