ಗುರುವಾರ, ಆಗಸ್ಟ್ 25, 2011

ದೇಶಪ್ರೇಮವಿಲ್ಲದ ’ಜಾತ್ಯಾ’ತೀತ ರಾಷ್ಟ್ರದಲ್ಲಿ ಮಾತ್ರ ಇಂತಹ ಘಟನಾವಳಿಗಳು ಸಾಧ್ಯ!!

ಸ್ವಾತಂತ್ರ್ಯ ದಿನದಂದು ಟಿ. ವಿಯಲ್ಲಿ ಬರುತ್ತಿದ್ದ ಹಲವಾರು ಭಾಷಣಗಳಲ್ಲಿ ’ಭಾರತ ಒಂದು ಜಾತ್ಯಾತೀತ ರಾಷ್ಟ್ರ’ ಎಂದು ಅನೇಕಬಾರಿ ಇಣುಕಿದ್ದರಿಂದ ಪಕ್ಕದಲ್ಲೇ ಕುಳಿತಿದ್ದ ೧೧ ವರ್ಷದ ನನ್ನ ಅಣ್ಣನ ಮಗ ’ಚಿಕ್ಕಪ್ಪ ಜಾತ್ಯಾತೀತ ರಾಷ್ಟ್ರ ಎಂದರೇನು?’ ಎಂದ. ’ಯಾವುದೇ ಜಾತಿ ಭೇಧವಿಲ್ಲದೆ, ಎಲ್ಲಾ ಧರ್ಮದವರು ಸಮಾನವಾಗಿ ಬದುಕುವ ರಾಷ್ಟ್ರಕ್ಕೆ ಜಾತ್ಯಾತೀತ ರಾಷ್ಟ್ರ ಎನ್ನುತ್ತಾರೆ’ ಎನ್ನುವ ೨೦ - ೨೫ ವರ್ಷಗಳ ಕೆಳಗೆ ಸ್ಕೂಲಿನಲ್ಲಿ ಕಲಿತದ್ದನ್ನು ಅವನಿಗೆ ವಿವರಿಸಿದೆ.
’ಅಂದ್ರೆ, ನಾವು ಯಾರನ್ನೂ ನೀವು ಯಾವ ಜಾತಿ ಅಂತ ಕೇಳಬಾರದು ಅಲ್ವೇ?’ ಎಂಬ ಅವನ ಮರು ಪ್ರಶ್ನೆಗೆ ’ಹೌದಪ್ಪ’ ಎಂದು ತಲೆಯಾಡಿಸಿದೆ.
’ಹಾಗಾದ್ರೆ ನಮ್ಮ ಸ್ಕೂಲು ಅರ್ಜಿಯಲ್ಲಿ ’ನಿಮ್ಮ ಜಾತಿ ಯಾವುದು ನಮೂದಿಸಿ’ ಅಂತ ಯಾಕಿರುತ್ತೆ?’ ಎಂಬ ಅವನ ಮತ್ತೊಂದು ಮರುಪ್ರಶ್ನೆಗೆ ನಾನು ಅಕ್ಷರಶಃ ನಿರುತ್ತರನಾಗಿದ್ದೆ!
ಏಕೆ ಈ ಘಟನೆಯನ್ನು ಇಲ್ಲಿ ಪ್ರಸ್ತಾಪಿಸಿದ್ದೇನೆಂದರೆ ನಾವು ನಮ್ಮ ಮಕ್ಕಳಲ್ಲಿ ’ನಮ್ಮ ದೇಶ’ ’ನಮ್ಮ ಭಾಷೆ’ ಎಂದು ಕಲಿಸುವುದಕ್ಕಿಂತಾ ಮೊದಲೇ ’ನಮ್ಮ ಜಾತಿ’ ಎಂಬ ವಿಷಬೀಜವನ್ನು ನಮಗರಿವಿಲ್ಲದಂತೆಯೇ ನೆಟ್ಟು ಬೆಳೆಸಿ, ಅದು ಹೆಮ್ಮರವಾಗುವಂತೆ ನೋಡುಕೊಳ್ಳುವಲ್ಲಿ ಯಶಸ್ವಿಯೂ ಆಗಿರುತ್ತೇವೆ!! ಎಷ್ಟರ ಮಟ್ಟಿಗೆ ಎಂದರೆ ಇಮಾಮ್ ಬುಖಾರಿ ಯಂತಹ ಕರ್ಮಠರು ’ಅಣ್ಣಾ ಮುಸ್ಲೀಮರನ್ನು ಹೋರಾಟಕ್ಕೆ ಏಕೆ ಆಹ್ವಾನಿಸಿಲ್ಲ’ ಎಂದು ಕೇಳಿದಾಗ ಒಂದು ಸದುದ್ದೇಶಕ್ಕಾಗಿ ಹೋರಾಡುತ್ತಿರುವ ಅಣ್ಣಾ ಹಜಾರೆಯವರನ್ನು ಅನುಮಾನದಿಂದ ನೋಡುತ್ತೇವೆಯೇ ಹೊರತು ’ಯಾಕಪ್ಪ ಇಮಾಮ್ ಸಾಬ್ರೇ, ನೀವೇನು ಭಾರತೀಯರಲ್ಲವೇ?, ನಿಮಗೇನು ಭ್ರಷ್ಟಾಚಾರದ ಬಿಸಿ ತಟ್ಟಿಲ್ಲವೇ? ಅಣ್ಣಾ ಹಜಾರೆ ಕರೆ ಕೊಟ್ಟಿದ್ದು, ಹೋರಾಡುತ್ತಿರುವುದು ಬರೀ ಹಿಂದೂಗಳಿಗೋಸ್ಕರವಷ್ಟೇ ಅಲ್ಲ, ಮುಸ್ಲೀಮರು, ಕ್ರಿಸ್ತರು, ಬೌದ್ಧರು ಇತರರೂ ಸಹಬಾಳ್ವೆ ನಡೆಸುವ ’ಜಾತ್ಯಾ’ತೀತವಾದ ಭಾರತಕ್ಕೆ’ ಎಂದು ತಪರಾಕಿ ಕೊಡುವ ಕೊಡುವ ಧೈರ್ಯ ಯಾವೊಬ್ಬ ಭಾರತೀಯ ನಾಯಕನಿಗೂ ಇರಲಿಲ್ಲ! ಬದಲಾಗಿ ಹೋರಾಟವನ್ನು ಹತ್ತಿಕ್ಕಲು ಇದನ್ನೇ ಗುರಾಣಿಯಂತೆ ಬಳಸಲು ಆಡಳಿತ ಸರ್ಕಾರ ತಯಾರಿ ನಡೆಸುತ್ತಿದ್ದರೆ, ಸರ್ಕಾರ ತಪ್ಪು ಹೆಜ್ಜೆ ಇಟ್ಟಾಗ ಕಿವಿ ಹಿಂಡಿ ಸರಿದಾರಿಗೆ ತರಬೇಕಾದ ವಿಪಕ್ಷಗಳು ’ಜನಲೋಕಪಾಲ ಕಾಯ್ದೆ ಬಂದರೆ ನಮ್ಮ ಬುಡವೂ ನೀರಾದೀತು?’ ಎಂಬ ಭಯದಿಂದ ಜಾಣಕಿವುಡು - ಕುರುಡು ಪ್ರದರ್ಶಿಸುತ್ತವೆ.
    ಈಗ್ಗೆ ಎರಡು ಮೂರು ವರ್ಷಗಳ ಕೆಳಗೆ ಆಸ್ಟ್ರೀಲಿಯಾದಲ್ಲಿ ಭಯೋತ್ಪಾದಕರ ದಾಳಿಯಾದಾಗ ಅಲ್ಲಿನ ಭಯೋತ್ಪಾದನಾ ಸಂಘಟನೆಯೊಂದು ಇದೇ ರೀತಿ ಹೇಳಿಕೆ ನೀಡಿದಾಗ ಆಗಿನ ಪ್ರಧಾನಿ ’ಜಾನ್ ಹೋವಾರ್ಡ’ ಕೊಟ್ಟ ಉತ್ತರ ’ಮೊದಲು ನೀವು ಆಸ್ಟ್ರೇಲಿಯನ್ನರು, ನಂತರ ನಿಮ್ಮ ಧರ್ಮ, ಹಾಗಿದ್ದಲ್ಲಿ ನಿಮಗಿಲ್ಲಿ ಜಾಗ, ಇಲ್ಲವೇ ಪರಿಸ್ಥಿತಿ ಎದುರಿಸಿ!’ ಎಂಬ ದಿಟ್ಟ ಉತ್ತರ ಕೊಟ್ಟಿದ್ದರು. ಹಾಗೆ ಉತ್ತರಿಸಲು ನಮ್ಮ ನಾಯಕರಿಗೇಕೆ ಸಾಧ್ಯವಿಲ್ಲ?
    ಅದು ಒತ್ತಟ್ಟಿಗಿರಲಿ ಒಂದು ಉತ್ತಮ ಸಾಮಾಜಿಕ ಉದ್ದೇಶದಿಂದ ಕೂಡಿದ ಒಂದು ಚಳುವಳಿಯನ್ನು ಹೇಗೆಲ್ಲಾ ಹತ್ತಿಕ್ಕಬಹುದೆಂದು ಯು. ಪಿ. ಎ ಸರ್ಕಾರವನ್ನು ನೋಡಿ ಇಡೀ ಪ್ರಪಂಚವೇ ಕಲಿಯಬೇಕು!! ಮಾತುಕತೆಗೆ ಆಹ್ವಾನಿಸುವ ನೆಪದಲ್ಲಿ ಕಾಲಹರಣ ಮಾಡುತ್ತಾ ಸಂಸದೀಯ ಸಮಿತಿ ಮುಂದೆ ನಿಮ್ಮ ಕರಡನ್ನು ಇಡಬೇಕು, ಇದು ಸಂಸತ್ ವ್ಯವಸ್ಥೆ, ಅದನ್ನು ಮುರಿಯಲಾಗದು, ಹಾಗದಲ್ಲಿ ಅದು ಪ್ರಜಾಪ್ರಭುತ್ವಕ್ಕೆ ಮಾಡುವ ಅತೀ ದೊಡ್ಡ ಅವಮಾನ!! ಇತ್ಯಾದಿ, ಇತ್ಯಾದಿ ಬೊಗಳೆ ಬಿಡುವ ಕೇಂದ್ರ ಸರ್ಕಾರ, ತನಗೆ ಬೇಕಾದ ಅದೆಷ್ಟೋ ಮಸೂದೆಗಳನ್ನು ಸಂಸದೀಯ ಸಮಿತಿ ಮುಂದಿಡದೆ ಸಂಸತ್ತಿನಲ್ಲಿ ಅನುಮೋದನೆ ಪಡೆದಿರುವುದನ್ನು ಮರೆತೇ ಬಿಡುತ್ತದೆ. ಜೊತೆಗೆ ಅರುಣಾ ರಾಯ್, ಅರುಂಧತಿ ರಾಯ್ ಅಂತಹವರನ್ನು ಮಾಧ್ಯಮಗಳ ಮೂಲಕ ಛೂ ಬಿಟ್ಟು, ಬೆಣ್ಣೆಯಲ್ಲಿ ಕೂದಲು ತೆಗೆವಂತಹ ನಾಜೂಕಾದ ಹೇಳಿಕೆಗಳನ್ನು ಕೊಡಿಸಿ ಚಳುವಳಿಯನ್ನೇ ದಾರಿತಪ್ಪಿಸುವ ತನ್ನ ಚಾಳಿಯನ್ನು ಮುಂದುವರೆಸುತ್ತದೆ. ಇದಕ್ಕೆಲ್ಲಾ ಕಳಶಪ್ರಾಯವೆಂಬಂತೆ ಪ್ರಣವ್ ಮುಖರ್ಜಿ ಎನ್ನುವ ದೂರ್ವಾಸ ಮುನಿಯನ್ನು ಸರ್ಕಾರದ ಪರವಾಗಿ ಅಣ್ಣಾತಂಡದೊಡನೆ ಮಾತುಕತೆಗೆ ಕಳುಹಿಸಿ ’ಏನಾದರೂ ಮಾಡಿಕೊಳ್ಳಿ, ಅಣ್ಣಾ ಸತ್ತರೆ ನಮಗೇನೂ ನಷ್ಟವಿಲ್ಲ’ ಎಂಬಂತಹ ಬೇಜಾವಬ್ದಾರಿ ಸಂದೇಶವನ್ನು ಕಳುಹಿಸುತ್ತದೆ.
    ಅಸಲಿಗೆ ಜನಲೋಕಪಾಲ ಕಾಯ್ದೆಯಿಂದ ಜನರಿಗೆ ಕೆಟ್ಟದ್ದಾಗುತ್ತದೋ ಒಳ್ಳೆಯದಾಗುತ್ತದೋ ಅದರ ಜಿಜ್ನಾಸೆ ಬೇರೆ. ಆದರೆ ಸರ್ಕಾರವೂ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ಅದರ ಬಗ್ಗೆ ನಿರಾಸಕ್ತಿ ತೋರುವ ಮೂಲಕ ಪ್ರತೀ ಹಂತದ ಭ್ರಷ್ಟಾಚಾರದಿಂದ ಬೇಸತ್ತ ಜನಗಳಲ್ಲಿ ಜನಲೋಕಪಾಲ ಮಸೂದೆಯಿಂದ ಮಾತ್ರ ಭ್ರಷ್ಟಾಚಾರದ ಬುಡಮೇಲು ಸಾಧ್ಯ! ಎನ್ನುವ ಆಶಾಕಿರಣ ಮೂಡಿಸಲು ಕಾರಣವಾಗಿವೆ. ಅದಲ್ಲದೆ ಸರ್ಕಾರ ಮತ್ತು ಕೆಲ ’ಬುದ್ಧಿ ಜೀವಿಗಳು’ ಹೇಳುವಂತೆ ’ಅಣ್ಣಾ ತಂಡ ಬ್ಲಾಕ್-ಮೇಲ್ ತಂತ್ರ ಅನುಸರಿಸುತ್ತಿದೆ’ ಎನ್ನುವ ಮಾತು ಸ್ವಲ್ಪ ಸತ್ಯಕ್ಕೆ ಹತ್ತಿರವೆನಿಸಿದರೆ ರಾಜಕೀಯ ಪಕ್ಷಗಳ ಹಠಮಾರಿತನದ ಧೋರಣೆಯಿಂದ ’ಮಾಡಿದರೆ ತಪ್ಪೇನು?’ ಆಗಲಾದರೂ ಒಳಿತಾದೀತು ಎನ್ನುವ ಭಾವನೆ ಸಾಮಾನ್ಯನದ್ದು.
    ಬಹುಶಃ ವ್ಯತಿರಿಕ್ತಗಳಿಗೆ ನಮ್ಮ ದೇಶದ ಇತಿಹಾಸವೂ ಕಾರಣ! ಇದುವರೆಗೆ ನಮ್ಮದೇಶದಲ್ಲಿ ನಡೆದ ಹೋರಾಟಗಳೆಲ್ಲವೂ ಬಡವರಿಂದ, ಶೋಷಿತವರ್ಗದವರಿಂದ ಪ್ರಾರಂಭವಾದರೂ ಅವುಗಳ ಫಲ ಉಂಡವರು ಉಳ್ಳವರೇ! ಸ್ವಾತಂತ್ರ್ಯ ಸಂಗ್ರಾಮವನ್ನೇ ತೆಗೆದುಕೊಳ್ಳಿ ಅದು ಪ್ರಾರಂಭವಾಗಿದ್ದು ಮಾತ್ರ ಬ್ರಿಟೀಷರ ದಬ್ಬಾಳಿಕೆಯ ತಾಪ ತಾಳಲಾರದ ಬಡವರ್ಗದವರಿಂದಾದರೂ ಅದು ಬಲಿತು ಪಕ್ವವಾಗುವ ವೇಳೆಗೆ ಮುಂದಾಳತ್ವ ವಹಿಸಿದ್ದು ಸುಖದ ಸುಪ್ಪತ್ತಿಗೆಯ ಸಿರಿವಂತರಾದ ಗಾಂಧಿ, ನೆಹರು, ಸರ್ದಾರ್ ಪಟೇಲ್ ಮುಂತಾದವರು. ಅಂದಮಾತ್ರಕ್ಕೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅವರ ಪಾತ್ರವೇನೂ ಇಲ್ಲ ಎನ್ನುವುದು ಮುಠ್ಠಾಳತನವಾದೀತು! ಆದರೆ ಅವರಿಗೆಲ್ಲಾ ಸ್ವಾತಂತ್ರ್ಯದ ’ಫಲ’ದ ಬಗ್ಗೆ ಸ್ಪಷ್ಟ ಪರಿಕಲ್ಪನೆಯಿದ್ದೀತು! ಇದೆಲ್ಲವೂ ಅವರು ಅಧಿಕಾರಕ್ಕೆ ಬಂದಕೂಡಲೆ ಸ್ಪಷ್ಟವೂ ಆಗಿ ಹೋಗಿತ್ತು! ಕೇವಲ ಒಬ್ಬ ಲಾಲ ಬಹದ್ದೂರ್ ಶಾಸ್ತ್ರಿಯವರನ್ನು ಬಿಟ್ಟರೆ ಉಳಿದವರೆಲ್ಲಾ ಅಧಿಕಾರದಿಂದ ಏನೆಲ್ಲಾ ಗಳಿಸಬಹುದೆಂದು ತೋರಿಸಿಕೊಡುವುದರ ಮೂಲಕ ಸಾಮಾನ್ಯರೂ ಸಹ ದೇಶವನ್ನು ಮರೆತು ಅಧಿಕಾರಕ್ಕೆ ಆಸೆಪಡುವಂತಾಗಿದ್ದರಿಂದಲೇ ಇಂದು ಭ್ರಷ್ಟಾಚಾರವೆಂಬುದು ಒಂದು ಗುಣವಾಗದ ಅರ್ಬುದ ರೋಗಕ್ಕಿಂತ ಹೆಚ್ಚಾಗಿ ಬೆಳೆದು ನಿಂತಿದೆ.
    ಇದಕ್ಕೆ ವ್ಯತಿರಿಕ್ತ ಎಂಬಂತೆ ನಮ್ಮ ಪಕ್ಕದ ಚೀನಾ, ರಷ್ಯಾ, ಜರ್ಮನಿ ಮತ್ತಿತರ ದೇಶಗಳಲ್ಲಿ ಕ್ರಾಂತಿ ನಡೆದದ್ದು ಬಡವರಿಂದಲೇ. ಆದರೆ ಅಧಿಕಾರ ಅನುಭವಿಸಿ ದೇಶವನ್ನು ಒಳ್ಳೆಯ ದಾರಿಯಲ್ಲಿ ಮುನ್ನಡೆಸಿದವರು ಯಾರೂ ಸಹ ಸಿರಿವಂತರಾಗಿರಲಿಲ್ಲ, ಅದು ಹಿಟ್ಲರ್ ಆಗಿರಬಹುದು, ಲೆನಿನ್ ಆಗಿರಬಹುದು ಅಥವಾ ಮಾವೋತ್ಸೆ ತುಂಗ್ ಆಗಿರಬಹುದು ಎಲ್ಲರೂ ಹಸಿವನ್ನು ಕಂಡವರೇ. ಜನಸಾಮಾನ್ಯನ ಕಷ್ಟಗಳನ್ನು ಅನುಭವಿಸಿದವರೇ ಆದ್ದರಿಂದ ಅವರಿಗೆ ಚೆನ್ನಾಗಿ ಗೊತ್ತಿತ್ತು. ದೇಶ ಮುಂದುವರಿಯಬೇಕೆಂದರೆ ದೇಶಪ್ರೇಮ ಎಲ್ಲರಲ್ಲೂ ಮೂಡಬೇಕು ಆಗಷ್ಟೇ ಏಕತೆ ಮೂಡಲು ಸಾಧ್ಯ ಎನ್ನುವುದು. ಅವರ ವೈಚಾರಿಕತೆ ಅವರ ಕಾರ್ಯವೈಖರಿಯ ವಿಚಾರಗಳು ಬೇರೆಯೇ ಆದರೂ ಅವರ ಗುರಿ ದೇಶವನ್ನು ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿರಿಸುವುದೇ ಆಗಿತ್ತು ಅದರಲ್ಲಿ ಅವರು ಯಶಸ್ವಿಯೂ ಆದರು. ಆದರೆ ಅಂದೇ ನಮ್ಮ ನಾಯಕರುಗಳು ಅಧಿಕಾರದಾಸೆಗಾಗಿ ದೇಶವನ್ನು ಮೂರು ಭಾಗ ಮಾಡಿದ್ದಾಯಿತು, ’ಜಾತ್ಯಾತೀತ’ ರಾಷ್ಟ್ರವಾದರೂ ಪ್ರತಿಯೊಂದು ಧರ್ಮಕ್ಕೂ ಪ್ರತ್ಯೇಕ ಕಾನೂನುಗಳಾದವು. ಎಲ್ಲದರಲ್ಲೂ ಅಧಿಕಾರಗಳಿಸುವುದೇ ಮುಖ್ಯ ಚಿಂತನೆಗಳಾದವು. ’ವೋಟ್-ಬ್ಯಾಂಕ್’ ಎಂಬ ಹೊಸ ಪರಿಕಲ್ಪನೆ ನಮ್ಮ ಭಾರತದ ನಾಯಕರುಗಳಿಂದ ವಿಶ್ವಕ್ಕೇ ಪರಿಚಯವಾಯ್ತು!. ಅದು ಇಂದಿಗೂ ಮುಂದುವರೆದು ಸರ್ಕಾರದ ಎಲ್ಲಾ ಸವಲತ್ತುಗಳು ಕೇವಲ ಶ್ರೀಮಂತರಿಗೇ ಮಾತ್ರ ಮೀಸಲಾಗಿವೆ. ಅವರು ಕಟ್ಟುವ ತೆರಿಗೆಗೆ ಭಾರತದ ಬೆನ್ನೆಲುಬು ಮಧ್ಯಮವರ್ಗದವರಿಂದ ವ್ಯಾಪಾರದ ಹೆಸರಿನಲ್ಲಿ ಮತ್ತಷ್ಟು ಕಿತ್ತು ತಿಂದು ದುಂಡಗಾಗಿದ್ದಾರೆ. ಆದರೆ ನಿಜ ಅರ್ಥದಲ್ಲಿ ದೇಶ ಮುನ್ನಡೆಯುತ್ತಿರುವುದು ಅದೇ ಮಧ್ಯಮ ವರ್ಗದವರ ಬೆವರಿಳಿಸಿ ಸಂಪಾದಿಸಿದ ’ತೆರಿಗೆಯಿಂದ’.   ಸ್ವಲ್ಪವಾದರೂ ದೇಶ ಪ್ರೇಮವನ್ನು ಅವರ ಮುಂದಿನ ಪೀಳಿಗೆಗಳಲ್ಲಿ ಬೆಳೆಸಲು ಪ್ರಯತ್ನಿಸಿದ್ದರೆ ಭ್ರಷ್ಟಾಚಾರವಿಲ್ಲದ ಒಂದು ಆದರ್ಶ ’ಜಾತ್ಯಾತೀತ’ ರಾಷ್ಟ್ರವಾಗಿರುತ್ತಿತ್ತು ನಮ್ಮ ಭಾರತ!

ಭಾನುವಾರ, ಆಗಸ್ಟ್ 21, 2011

ನಮ್ಮ ಸಣ್ಣತಾಯಮ್ಮ

 

ಈ ಹಿಂದೆ ಇದೇ blog ಲ್ಲಿ ಸಣ್ಣತಾಯಮ್ಮ ಕಪ್ಪೆ ನುಂಗಿದ್ದು ಮತ್ತು ಸಣ್ಣತಾಯಮ್ಮನಿಗೆ ಸೂಟ್ಕೇಸ್ ಸಿಕ್ಕಿದ್ದು ಎಂಬ ಎರಡು ಹಾಸ್ಯಬರಹಗಳನ್ನು ಪ್ರಕಟಿಸಿದ್ದೆ. ವಾಸ್ತವದಲ್ಲಿ ಅವು ಹಾಸ್ಯಬರಹಗಳೇ ಆಗಿದ್ದರೂ ನಮ್ಮ ಸಣ್ಣತಾಯಮ್ಮನ ಮುಗ್ದತೆಯಿಂದ ಘಟಿಸಿದ ನಿಜ ಪ್ರಸಂಗಗಳೇ ಆಗಿದ್ದವು. ಇಂತಹ ಸಣ್ಣತಾಯಮ್ಮನ ಬಗ್ಗೆ ಈಗ ಬರೆಯಲು ಮುಖ್ಯಕಾರಣ ಆಕೆಯ ಮುಗ್ದತೆ ಮತ್ತು ಆಕೆಯ ಮತ್ತು ಆಕೆಯ ಕುಟುಂಬದೊಡನೆ ನನ್ನ ಬಾಲ್ಯದ ಒಡನಾಟ.
    ಹೌದು! ನಮ್ಮ ಸಣ್ಣತಾಯಮ್ಮ ಲೋಕಜ್ನಾನದ ತಿಳುವಳಿಕೆಯಲ್ಲಿ ಆಕೆ ಬಹಳ ಮುಗ್ದಳೇ, ಆದರೆ ಆಕೆಯೆ ವ್ಯಾವಹಾರಿಕತೆ, ತನ್ನ ಸೋಮಾರಿ ಗಂಡನನ್ನು ದೂರದೆ, ಲೋಕನಿಂದನೆಗೆ ಒಳಗಾಗದೆ, ಸಮಾಜದಲ್ಲಿ ಗೌರವವಾಗಿ ಹೇಗೆ ಬಾಳಿದಳು ಎಂಬುದನ್ನು ನೋಡಿದರೆ ಆಕೆ ಖಂಡಿತವಾಗಿಯೂ ಒಬ್ಬ ಮಾದರಿ ಹೆಣ್ಣಾಗಿ ನಿಲ್ಲುತ್ತಾಳೆ. ಇನ್ನು ಅವಳ ಮುಗ್ದತೆಯಿಂದಾಗಿ ಘಟಿಸಿದ ಸಂಗತಿಗಳ ವಿಚಾರಕ್ಕೆ ಬಂದರಂತೂ ಒಂದು ಉತ್ತಮ ಹಾಸ್ಯಗ್ರಂಥವಾಗುವದರಲ್ಲಿ ಸಂಶಯವಿಲ್ಲ.
    ಆಕೆಯೇನು ನಮ್ಮ ಸಂಬದಿಕಳೇನಲ್ಲ. ನಮ್ಮ ಅಪ್ಪನ ಮದುವೆಗೆ ಮೊದಲೇ ಅಲ್ಲೆಲ್ಲೋ ಚಾಮರಾಜನಗರದ ಹಳ್ಳಿಗಳಲ್ಲಿ ಭೀಕರ ಬರಗಾಲ ಬಂದದ್ದರಿಂದ ತನ್ನ ಗಂಡ ಮತ್ತು ಚಿಕ್ಕ ಮಗಳೊಂದಿಗೆ ನಮ್ಮೂರಿಗೆ ವಲಸೆ ಬಂದವಳು. ಆಕೆಯ ಗಂಡನಾದ ಬೋಜಣ್ಣ ಭತ್ತದ ವ್ಯಾಪಾರದ ದಳ್ಳಾಳಿಯಾಗಿ ಊರೂರು ತಿರುಗುವುದರಲ್ಲೇ ಹೆಚ್ಚು ಕಾಲಕಳೆಯುತ್ತಿದ್ದನು. ಈ ಮಧ್ಯೆ ಮತ್ತೆರಡು ಹೆಣ್ಣು ಮಕ್ಕಳು ಮತ್ತು ಒಬ್ಬ ಗಂಡು ಮಗು ಹುಟ್ಟಿದವು. ಅವುಗಳನ್ನು ಅವರವರ ದಡ ಸೇರಿಸಲು ಆಕೆ ನೆಚ್ಚಿಕೊಂಡಿದ್ದು ಕೂಲಿ ಮಾಡುವ ಕಾಯಕವನ್ನು. ಅದರಲ್ಲೂ ಭತ್ತ ನಾಟಿಮಾಡಲು ಮತ್ತು ಕಬ್ಬು ಕಟಾವು ಮಾಡಲು ಆಕೆ ಕೂಲಿ ಆಳುಗಳ ತಂಡವನ್ನು ಸಂಘಟಿಸುತ್ತಿದ್ದ ರೀತಿ, ಗಣಿತದ ಗಂಧಗಾಳಿಯೇ ಗೊತ್ತಿಲ್ಲದ ಅವಳು ಕೆಲಸ ಮುಗಿದನಂತರ ಬರುವ ದುಡ್ಡನ್ನು ತನ್ನ ತಂಡದ ಸದಸ್ಯರಿಗೆ ಸಮನಾಗಿ ಹಂಚುತ್ತಾ ವ್ಯವಹರಿಸುತ್ತಿದ್ದ ರೀತಿಗೆ ನಿಜಕ್ಕೂ ಒಂದು ’ಹ್ಯಾಟ್ಸಾಫ್’.
    ಎಲ್ಲಕ್ಕಿಂತಲೂ ಹೆಚ್ಚಾಗಿ ನಾನು ಆಕೆಯನ್ನು ಎಂದೂ ಮರೆಯಲು ಸಾಧ್ಯವಿಲ್ಲ ಏಕೆಂದರೆ ಆಕೆ ಒಮ್ಮೆ ನನ್ನ ಜೀವ ಉಳಿಸಿದವಳು.
    ಹೌದು!! ಇದು ೧೯೭೭ ರಲ್ಲಿ ನಡೆದ ಘಟನೆ. ನಾನಾಗ ೧ ವರ್ಷದ ಮಗುವಂತೆ. ನಮ್ಮ ತಾಯಿಯವರ ಮೊದಲನೇ ತಮ್ಮ ಒಮ್ಮೆ ನಮ್ಮ ಊರಿಗೆ ಬಂದಿದ್ದ. ಅಂದೇ ಗದ್ದೆಯ ಬಳಿ ಹೆಚ್ಚಿನ ಕೆಲಸವಿದ್ದದ್ದರಿಂದ ನನ್ನ ಅಮ್ಮ ಮತ್ತು ಅಪ್ಪ ನನ್ನನ್ನು ನೋಡಿಕೊಳ್ಳಲು ಅವನಿಗೆ ಹೇಳಿ ಗದ್ದೆ ಕೆಲಸಕ್ಕೆ ಹೊರಟುಹೋದರಂತೆ. ಆಗೆಲ್ಲಾ ಹಳ್ಳಿಗಳಲ್ಲಿ ಬೆಳಿಗ್ಗೆ ಎಂಟು ಗಂಟೆಗೆ ಮನೆ ಬಿಟ್ಟರೆ ಎಲ್ಲರೂ ಸಾಮಾನ್ಯವಾಗಿ ವಾಪಸಾಗುತ್ತಿದ್ದುದ್ದು ಮಧ್ಯಾನ್ಹ ಎರಡು ಗಂಟೆಯ ನಂತರವಷ್ಟೆ. ಈ ಸಮಯವನ್ನೇ ಉಪಯೋಗಿಸಿಕೊಂಡ ಭೂಪ! ನನ್ನ ಮಾವ, ಮನೆಯಲ್ಲಿದ್ದ ಒಡವೆಗಳನ್ನು ತೆಗೆದುಕೊಂಡು ನನ್ನನ್ನು ಮನೆಯ ಒಳಗೆ ಕೂಡಿಹಾಕಿ, ಹೊರಗಿನಿಂದ ಅಗುಳಿಯನ್ನು ಯಾರೂ ತೆಗೆಯಲಾಗದಂತೆ ಹಾಕಿ ಪರಾರಿಯಾಗಿದ್ದ. ಸಧ್ಯ ನನ್ನ ಜೀವಕ್ಕೇನೂ ತೊಂದರೆಮಾಡಿರಲಿಲ್ಲ. ಬೀದಿ ನಿರ್ಜನವಾದ್ದರಿಂದ ಮತ್ತು ನಮ್ಮ ಮನೆ ಆಗ ಮಾಳಿಗೆ ಮನೆಯಾದ್ದರಿಂದ ಬೀದಿಗೆ ಸದ್ದೂ ಸಹ ಅಷ್ಟಾಗಿ ಕೇಳಿಸುತ್ತಿರಲಿಲ್ಲ. ಅದೇ ಸಮಯಕ್ಕೆ ತನ್ನ ಮನೆಗೆ ಊಟಕ್ಕೆಂದು ಬಂದ ಸಣ್ಣತಾಯಮ್ಮ ನಮ್ಮ ಮನೆಯಿಂದ ಬರುತ್ತಿದ್ದ ನನ್ನ ಅಳುವಿನ ಶಬ್ಧ ಕೇಳಿ ಅನುಮಾನಗೊಂಡು ಪರಿಶೀಲಿಸಿದಾಗ ಅದು ನನ್ನ ಅಳುವಿನ ಶಬ್ಧವೆಂದು ಖಾತ್ರಿಯಾಯ್ತು. ಬಾಗಿಲನ್ನು ತೆಗೆಯಲು ಶತಪ್ರಯತ್ನ ನಡೆಸಿ ವಿಫಲಳಾದ ಆಕೆ, ತಕ್ಷಣವೇ ನಮ್ಮ ಗದ್ದೆಯ ಬಳಿ ಹೋಗಿ ನಮ್ಮ ತಂದೆ ತಾಯಿಗಳಿಗೆ ವಿಚಾರ ತಿಳಿಸಿ ಕರೆತಂದಳು. ತಂದೆಯವರು ಮನೆಯ ಮಾಡಿನ ಮೇಲಿದ್ದ ಬೆಳಕಿಂಡಿಯಿಂದ ಒಳಜಿಗಿದು ನನ್ನನ್ನು ರಕ್ಷಿಸಿದರು. ಹೀಗಾಗಿ ಒಂದರ್ಥದಲ್ಲಿ ಸಣ್ಣತಾಯಮ್ಮ ನನ್ನ ಜೀವದಾತೆ.
    ಇನ್ನು ಆಕೆಯ ಮುಗ್ದತೆಯನ್ನು ಬಹಳಷ್ಟು ಮಂದಿ ’ಆಕೆಯ ದಡ್ಡತನ’ ಎಂದೇ ಪರಿಗಣಿಸಿದ್ದರು. ಅದರಲ್ಲೂ ಆಕೆಯ ಮತ್ತು ಆಕೆಯ ಮನೆಯೆದುರುಗಿನ ’ಡೈರಿ ನಾಗರಾಜು’ ರವರ ಸಂಭಾಷಣೆಗಳನ್ನು ಕೇಳಿದವರಿಗೆ ತುಟಿಯಂಚಿನ ನಗುವನ್ನು ಮರೆಮಾಚಲು ಸಾಧ್ಯವಾಗುತ್ತಲೇ ಇರಲೇ ಇಲ್ಲ.
    ಒಂದು ನಮ್ಮ ಶಿಶುವಿಹಾರದ ಮೇಡಂ ನಮ್ಮ ಬೀದಿಯಲ್ಲಿ ಹಾದುಹೋಗುತ್ತಿದ್ದರು. ಅವರ ಜಡೆ ಮಂಡಿವರೆಗೆ ತಾಗುವಷ್ಟು ಉದ್ದವಿತ್ತು. ಅವರ ಜಡೆ ಮತ್ತು ನಡೆಯನ್ನೇ ತನ್ನ ಹೊಗೆಸೊಪ್ಪು ತುಂಬಿದ ಬಾಯನ್ನು ಬಿಟ್ಟುಕೊಂಡೇ ನೋಡುತ್ತಿದ್ದ ಸಣ್ಣತಾಯಮ್ಮನನ್ನು ನೋಡಿದ ನಾಗರಾಜಣ್ಣ
"ಅಮ್ಮೋ!! ಬಾಯ್ಮುಚ್ಚಮ್ಮೊ!! ಇರೋ ಬರೋ ಸೊಳ್ಳೆಯಲ್ಲ ನಿನ್ಬಾಯ್ಗೋದಾವು, ಮೊದ್ಲೇ ಜನ್ಗೊಳ್ಗೆ ಕಚ್ಚಸ್ಕಳಕೆ ಸೊಳ್ಳೆನೇ ಇಲ್ಲ," ಎಂದು ಕಿಚಾಯ್ಸಿದರು.
"ಅಲ್ಲಾ ಕಣ್ ನಾಗ್ರಾಜಣ! ಮೂರೊತ್ತು ಕೈಯೆಣ್ಣೆ ಜಡಿಯೋ ನನ್ ಜುಟ್ಟು ಕೋಳಿ ಪುಕ್ದಂಗೆ ಮೋಟುದ್ದ ಅದೆ, ಇವ್ಳಮನ್ಕಾಯ್ವಾಗ ಅದ್ಯಂಗ್ ಇವ್ಳ ಕೂದ್ಲು ಇಸ್ಟಿದ್ದ ಆಯ್ತು? ಅಂತ" ಎಂದು ತನ್ನ ಅನುಮಾನವನ್ನು ವ್ಯಕ್ತಪಡಿಸಿದಳು. ಅವಳ ಪ್ರಶ್ನೆ ನಗುತರಿಸಿದರೂ ನಾಗರಾಜಣ್ಣ ಅದನ್ನು ತೋರ್ಪಡಿಸದೇ
"ಈಗ ನೀನು ತಲೆಬಾಚ್ದಾಗ ಕೂದ್ಲು ಬಾಚಣ್ಗೆಗೆ ಅಂಟ್ಕತುದಲ್ಲ ಅದ್ನೇನ್ಮಾಡೀ?" ಎಂದು ಮರು ಪ್ರಶ್ನಿಸಿದರು.
"ಅದೇನ್ಮಾಡರು ತಗಣ! ಉಪ್ಪುಕಾರ ಹಾಕಿ ನೆಕ್ಕಿಯಾ ಅದ? ತಗ್ದು ತಿಪ್ಗೆಸಿತೀವಪ್ಪ. ಏಕೆ? ನೀ ಕಾಣ?" ತನಗೂ ಸಹ ತಿಳುವಳಿಕೆ ಇದೆ ಎಂಬರ್ಥದಲ್ಲಿ ಹೇಳಿದಳು.
"ಅಲ್ಲೇ ನೋಡು ನೀ ತಪ್ಮಾಡದು, ಅವ್ರೇನು ನಿನ್ನಂಗೆ ದಡ್ಡರೂ ಅನ್ಕಂಡಾ? ಅವ್ರು ಕೂದ್ಲಾ ತಿಪ್ಗೆಸಿಯಲ್ಲ, ಉದ್ರೋದ ಕೂದ್ಲಗಳ್ನ ಗೊಬ್ಳಿ ಗೋಂದು ತಗಂಡು ಒಂದ್ರು ತಿಕ್ಕೊಂದ ಅಂಟ್ರುಸಿ ಅಂಟ್ರುಸಿ ಅಷ್ಟುದ್ದ ಮಾಡ್ಕತರೆ" ಎಂದು ಕಣ್ಣು ಕೈ ಅಗಲಿಸಿ ಹೇಳುತ್ತಿದ್ದನ್ನು ಯಾವುದೋ ಮಹತ್ತರ ರಹಸ್ಯವನ್ನು ಕೇಳಿಸಿಕೊಳ್ಳುವವಳಂತೆ ಕಣ್ಣು ಬಾಯಿತೆರೆದು, ಸೊಂಟದಮೇಲೊಂದು ಕೈ, ಮೂಗಿನ ಮೇಲೆಮತ್ತೊಂದು ಕೈ ಇಟ್ಟು
"ಅಂಗೂ ಮಾಡಾರಾ!!??!!" ಎಂದು ಕೇಳಿದಾಗ ಅಕ್ಕಪಕ್ಕದಲ್ಲಿದ್ದವರಾರಿಗೂ ನಗು ತೆಡೆಯಲಾಗಲಿಲ್ಲ.
    ಮತ್ತೊಮ್ಮೆ ತನಗೆ ಗೊತ್ತಿರುವ ಎರಡೇ ಎರಡು ಬೈಗುಳಗಳಾದ "ನಿನ್ಬಾಯ್ಗೆ ಮಣ್ಣಾಕ" "ನಿನ್ಮನೆಕಾಯ್ವಾಗ" ಎಂದು ತನ್ನ ಸಹ ಕೆಲಸಗಾರರೊಬ್ಬಳನ್ನು ಬಯ್ಯುತ್ತಿರುವುದನ್ನು ಆಗತಾನೆ ಕೊಂಡುತಂದಿದ್ದ ತಮ್ಮ ಹೊಸ ಟೇಪ್-ರೆಕಾರ್ಡರ್ ನಲ್ಲಿ ಆಕೆಗೆ ತಿಳಿಯದಂತೆ ರೆಕಾರ್ಡ್ ಮಾಡಿ ಅವಳ ಬೈಗುಳಗಳನ್ನು ಅವಳಿಗೇ ಕೇಳಿಸಿದಾಗ, ಮೂಗಿನ ಬೆರಳಿಟ್ಟೂ
"ಇಂಗೂ ಆದಾದ?!!?!!" ಎಂದು ಆಶ್ಚರ್ಯ ವ್ಯಕ್ತಪಡಿಸುವ ಆಕೆಯ ಭಾವ ಭಂಗಿಯನ್ನು ನೆನೆದರೆ ಇಂದಿಗೂ ನಗು ತೆಡೆಯಲಾಗುವುದಿಲ್ಲ.
    ಇನ್ನು ವಿದ್ಯಾಭ್ಯಾಸದ ವಿಚಾರದಲ್ಲಿ ಸಣ್ಣತಾಯಮ್ಮನಿಗೆ "ಬಿ. ಎ" ಒದಿದರೆ ಮಾತ್ರ ದೊಡ್ಡ ವಿದ್ಯೆ. ನಾನಾವಾಗ ಎಂ.ಎಸ್ಸಿ ಕೊನೆಯ ವರ್ಷದಲ್ಲಿದ್ದೆ. ಒಮ್ಮೆ ಊರಿನಲ್ಲಿ ಎದುರಾದ ಆಕೆ
"ಉಮಣ್ಣ ಚೆನ್ನಾಗಿದ್ದೀಯಾ? ಈಗೇನೊದ್ತಾಯಿದ್ದೀ?" ಎಂದಳು
"ಎಂ. ಎಸ್ಸಿ. ಓದ್ತಿದೀನಿ.". ಎಂದೆ.
"ಅಯ್ಯೋ!! ಮುಕ್ಕ ಹೋಗು! ಈಗ ಎಂಯೆಸಿಯೇ? ಇನ್ನುವೇ ನೀನು ಬಿ.ಎ. ಮಾಡಿ ಕೆಲ್ಸುಕ್ಸೇರಿ, ನಿಮ್ಮಪ್ಪ ಅವ್ವುಂಗೆ ಇಟ್ಟಾಕದ್ಯಾವಗಾ?" ಅಂದು ಬಿಡೋದೆ!!.? ಅವಾಕ್ಕಾಗುವ ಸರದಿ ಈಗ ನನ್ನದಾಗಿತ್ತು!! ಎಂ. ಎಸ್ಸಿ ಅನ್ನುವುದು ಬಿ. ಎ ಗಿಂತ ಸ್ವಲ್ಪ ಜಾಸ್ತಿ ಡಿಗ್ರಿ ಅಂತ ಆಕೆಗೆ ತಿಳಿಹೇಳುವ ಕಷ್ಟವನ್ನು ನಾನು ತೆಗೆದುಕೊಳ್ಳಲಿಲ್ಲ.
    ಈ ರೀತಿ ಆಕೆಯ ನೈಜಘಟನೆಗಳನ್ನು ನೆನೆಯುತ್ತಾ ಹೋದರೆ ಸಮುದ್ರದ ಅಲೆಗಳಂತೆ ನಗು ಉಕ್ಕಿ ಉಕ್ಕಿ ಬರುತ್ತಲೇ ಇರುತ್ತದೆ. ಇಂತಹ ಸಣ್ಣತಾಯಮ್ಮನಿಗೆ ಒಂದು ಚಟವಿತ್ತು, ಅದೇ ಹೊಗೆಸೊಪ್ಪು ಕಡ್ಡಿಪುಡಿ ಜಗಿಯುವ ಕೆಟ್ಟ ಅಭ್ಯಾಸ.  ದುರಂತವೆಂದರೆ ಅದೇ ಚಟ ಅವಳನ್ನು ಬಲಿ ತೆಗೆದುಕೊಂಡಿತ್ತು.
    ಹೌದು!! ಈಗ್ಗೆ ವರ್ಷದ ಕೆಳಗೆ ಒಮ್ಮೆ ಕೆಲಸದ ನಿಮಿತ್ತ ಮಂಡ್ಯದ ಜಿಲ್ಲಾಸ್ಪತ್ರೆಗೆ ಹೋಗಿದ್ದಾಗ, ಆಕೆಯ ಮಕ್ಕಳು ಮತ್ತು ಮೊಮ್ಮಕ್ಕಳು ಆಕೆಯನ್ನು ಸ್ಟ್ರೆಕ್ಚರ್ ನಮೇಲೆ ಮಲಗಿಸಿಕೊಂಡು ತಳ್ಳುತ್ತಾಹೋಗುತ್ತಿದ್ದರು. ಆಕೆಯ ಹತ್ತಿರಹೋದೆ, ಮಾತುಗಳು ಆಕೆಯ ಗಂಟಲಿನಿಂದ ಹೊರಬರಲು ಕಷ್ಟಪಡುತ್ತಿದ್ದವು. ಕಣ್ಣಂಚಿನಲ್ಲಿ ನೀರಾಡಿತ್ತು.
"ಹೇಗಿದ್ದಿಯಮ್ಮ? " ಎಂದೆ, ಸಾವರಿಸಿಕೊಂಡು.
"ಚೆನ್ನಾಗಿದ್ದೀಯಾ ಉಮಣ್ಣ?" ಎಂದಾಗ ಆಕೆಯ ಕಂಗಳಲ್ಲಿ ಅದೇನೋ ವ್ಯಾಕುಲತೆ. ತಕ್ಷಣ ವೈದ್ಯರಲ್ಲಿ ವಿಚಾರಿಸಿದಾಗ ಗಂಟಲು ಮತ್ತು ಬಾಯಿಯ ಕ್ಯಾನ್ಸರೆಂದೂ, ಅದಾಗಲೆ ಕೊನೆಯ ಘಟ್ಟದಲ್ಲಿದೆಯೆಂದು ತಿಳಿಸಿದರು. ಆ ವಿಚಾರ ಈ ಮೊದಲೇ ಆಕೆಗೆ ತಿಳಿದಿದ್ದರಿಂದ ಆಕೆಯೇನು ದುಃಖಗೊಳ್ಳಲಿಲ್ಲ.
" ಇನ್ನೇನು ಇಲ್ಲಾಕನುಮಣ, ಮಗುಂಗೆ ಮದ್ವೆ ಗೊತ್ತಾಗದೆ, ಮದ್ವೆ ನೋಡಗಂಟ ಆ ಜವ್ರಾಯ ನನ್ಬುಟ್ರೆ ಸಾಕಾಗದೆ" ಎನ್ನುವಾಗ ಆಕೆಯ ಕಣ್ಣುಗಳ ಪಕ್ಕದಿಂದ ಕಿವಿಯೊಳಗೆ ನೀರು ಸೇರಿತ್ತು.
"ಏನಾಗಲ್ಲ! ಬಾರಮ್ಮ, ಎಲ್ಲಾ ಸರಿ ಹೋಗುತ್ತೆ"  ಪರಿಸ್ಥಿತಿಯ ಅರಿವಿದ್ದೂ ಆಕೆಯ ಸಮಾಧಾನಕ್ಕಾಗಿ ಬಾಯಿಮಾತಿಗೆಂದು ಹೊರ ಬಂದಿದ್ದೆ.
    ಇದಾದ ಎರಡು ತಿಂಗಳಲ್ಲಿ ಆಕೆಯ ಮಗನ ಮದುವೆ ಮುಗಿದಾಗ ಆಕೆಯ ಸಂತೋಷಕ್ಕೆ ಪಾರವೇ ಇರಲಿಲ್ಲ. ಇದಾದ ಸ್ವಲ್ಪದಿನಗಳಿಗೆ ಕಂಪನಿಯ ಮೀಟಿಂಗ್ ಗಾಗಿ ಹೈದರಾಬಾದ್ ಗೆ ಹೋಗಬೇಕಾಗಿ ಬಂತು. ದುರದೃಷ್ಟವಶಾತ್ ಅಂದೇ ಆಕೆ ಇಹಲೋಕದ ವ್ಯವಹಾರ ಮುಗಿಸಿ ಪರಲೋಕಾಧೀನಳಾಗಿದ್ದಳು. ಕಡೆಯಬಾರಿಗೆ ಆಕೆಯ ಮುಖ ದರ್ಶನದಿಂದ ವಂಚಿತನಾದೆಲ್ಲ ಎಂಬ ಕೊರಗು ಇಂದಿಗೂ ಕಾಡುತ್ತಿದೆ.
’ಎಲ್ಲಾರ ಇರು, ಚೆಂದಾಗಿರು’ ಎಂಬ ಆಕೆಯ ಆಶೀರ್ವಾದ ಇನ್ನೂ ಕಿವಿಯಲ್ಲಿ ಗುನುಗುತ್ತಿದೆ. ಅದನ್ನು ನೆನೆದಾಗಲೆಲ್ಲಾ ನನಗಾಗುವ ಅನುಭೂತಿಯನ್ನು ವರ್ಣಿಸಿಲು ಸಾಧ್ಯವಿಲ್ಲ.

ಮಂಗಳವಾರ, ಆಗಸ್ಟ್ 16, 2011

ಅಣ್ಣಾ ನಿಮ್ಮೊಂದಿಗೆ ನಾವೂ ಇದ್ದೀವಣ್ಣ!

ಬಹುಶಃ ಈ ಲೇಖನ ಪ್ರಕಟವಾಗುವ ವೇಳೆಗೆ ಅಣ್ಣಾ ಹಜಾರೆಯವರು ಭ್ರಷ್ಟಾಚಾರ ವಿರುದ್ಧದ ನಿರ್ಣಾಯಕ ಹಂತದ ಹೋರಾಟದ ಸಲುವಾಗಿ  ಉಪವಾಸಕ್ಕೆ ಕುಳಿತಿರುತ್ತಾರೆ. ಈ ಬಾರಿಯ ಅವರ ಸತ್ಯಾಗ್ರಹ ಕಳೆದಬಾರಿಗಿಂತ ವಿಭಿನ್ನ!! ಕಳೆದ ಸಾರಿ ಉಪವಾಸಕ್ಕೆ ಕುಳಿತಾಗ ಅದು ಹೊಸತಾಗಿದ್ದರಿಂದಲೋ ಏನೋ ದೇಶದ ಮೂಲೆ ಮೂಲೆಗಳಿಂದ ಅದರಲ್ಲೂ ಸಾಮಾಜಿಕ ತಾಣಗಳಿಂದ ಅತ್ಯಭೂತಪರ್ವ ಬೆಂಬಲ ವ್ಯಕ್ತವಾಗಿತ್ತು. ಅದಕ್ಕೆ ವ್ಯತಿರಿಕ್ತ ಎಂಬಂತೆ ಇದೊಂದು ’ಸಾಮಾನ್ಯ ಓರಾಟ’ ಎಂದು ಕೊಂಡಿದ್ದ ಕೇಂದ್ರ ಸರ್ಕಾರ ಬಹಳ ಪೇಚಿಗೆ ಸಿಲುಕಿತ್ತು. ವಿಧಿಯಿಲ್ಲದೆ ಅಣ್ಣನಿಗೆ ’ಶರಣು’ ಎಂದಿತ್ತು!

ಆದರೆ ಈ ಬಾರಿ ಹಾಗಿಲ್ಲ. ನೈಜವಾದ ಕಾಳಜಿಯುಳ್ಳ ಹೋರಾಟಗಳನ್ನೂ ’ಬರೀ ಓರಾಟ’ ಎಂದು ಜನಸಾಮಾನ್ಯರಲ್ಲಿ ಬಿಂಬಿಸಲು ಅಲ್ಪ ಯಶಸ್ಸು ಕಂಡಿರುವ ಕೇಂದ್ರದ ’ಕಪಿ’ ’ಸಿಂಗಲೀಕ’ಪಡೆಗಳು ತಕ್ಕ ಮಟ್ಟಿಗೆ ಹೋರಾಟದಲ್ಲಿ ಒಡಕು ಮೂಡಿಸಿರುವುದು ಒಪ್ಪತಕ್ಕ ಮಾತೆ ಸರಿ. ಈ ಬಾರಿಯೂ ಅದೇ ರೀತಿಯ ಪ್ರಯತ್ನ ಮುಂದುವರೆಸಿರುವ ಅದೇ ತಂಡ ಬೆಟ್ಟ ಅಗೆದು ಸೊಳ್ಳೆ ಹಿಡಿದಂತೆ ಅಣ್ಣಾರವರ ಮೇಲೆ ಗೂಬೆ ಕೂರಿಸಲು ಎತ್ತ ನೋಡಿದರೂ ಅವರಿಗೆ ಸಂಬಂಧವೇ ಇಲ್ಲದ ೨ ಲಕ್ಷ ರೂಗಳ ಭ್ರಷ್ಟಾಚಾರದ ಆರೋಪವನ್ನು ಹೊರಿಸಿ ತನ್ನ ೨೦ ಲಕ್ಷ ಕೋಟಿಗಳ ಹಗರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿರುವುದು ಹಾಸ್ಯಾಸ್ಪದದ ಜೊತೆಗೆ ಜನಸಾಮಾನ್ಯರಲ್ಲಿ ಅಸಹ್ಯ ಮೂಡಿಸಿರುವುದು ಎದ್ದು ಕಾಣುತ್ತದೆ. ಅಲ್ಲದೆ ಗರ್ಭಕೊರಳಿನ ಅರ್ಬುದ ರೋಗ ಚಿಕಿತ್ಸೆಗೆ ಅಮೇರಿಕಕ್ಕೆ ಹಾರಿರುವ ಇಟಲಿಯಮ್ಮನ ಸ್ಥಾನದಲ್ಲಿ ’Programmed ಫಾರಂ ಕೋಳಿ’ ರಾಹುಲ್ ಗಾಂಧಿಯ ಹೆಗಲಿಗೆ ಭ್ರಷ್ಟಾಚಾರವೆಂಬ ಔಷಧವೇ ಇಲ್ಲದ ಅರ್ಬುದ ರೋಗದ ವಿರುದ್ಧ ಸೆಣಸುತ್ತಿರುವ ಹೋರಾಟವನ್ನು ಹತ್ತಿಕ್ಕುವ ’ಗುರುತರ’ ಜವಾಬ್ದಾರಿಯನ್ನು ಹೊಣೆಗೇಡಿ ಸರ್ಕಾರ ಹೊರಿಸಿದೆ. ಮೊದಲೇ ಬೇಜಾವಾಬ್ದಾರಿಯಂತೆ ವರ್ತಿಸುವ ಈ ಗಾಂಧಿ ಕುಡಿಗೆ ದೇಶ ನಡೆಸುವ ಚುಕ್ಕಾಣಿ ಕೊಟ್ಟರೆ ನಮ್ಮನ್ನು, ನಮ್ಮ ದೇಶದ ಮರ್ಯಾದಯನ್ನು ಆ ಭಗವಂತನೇ ಕಾಪಾಡಬೇಕು.

ಇದಕ್ಕೆಲ್ಲಾ ಕಳಶವಿಟ್ಟಂತೆ, ಮೌನಿ ಮನಮೋಹನ್ ಸಿಂಗ್ ರವರು ಮೌನ ಮುರಿದು ’ಭ್ರಷ್ಟಾಚಾರವನ್ನು ಹತ್ತಿಕ್ಕಲು ಸತ್ಯಾಗ್ರಹಗಳು ಬೇಕಿಲ್ಲ’ ಎನ್ನುವ ನಾಚಿಕೆಗೇಡಿನ ಮೂಲಕ ತಮ್ಮ ಬುದ್ಧಿ ಶಕ್ತಿಯನ್ನು ಎಲ್ಲೋ ಅಡವಿಟ್ಟು ತಾವೊಂದು ’ಸೂತ್ರದ ಬೊಂಬೆ’ಎಂದು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಇದರಿಂದ ಉತ್ತೇಜನ ಗೊಂಡ ದೆಹಲಿ ಪೋಲೀಸರು ಅಣ್ಣಾರವರಿಗೆ ಹಾಕಿರುವ ೨೨ ಅಸಂಬದ್ಧ, ಅಸಂವಿಧಾನಿಕ ಶರತ್ತುಗಳಿಗೆ ಅಂಟಿಕೊಂಡು ಸತ್ಯಾಗ್ರಹದ ಸಮಾಧಿ ಮಾಡಲು ಸಜ್ಜಾಗಿದ್ದಾರೆ. ಈ ನಡೆಯಿಂದಾಗಿ ಭ್ರಷರನ್ನು, ಭ್ರಷ್ಟಾಚಾರವನ್ನು ರಕ್ಷಿಸಲು ತಾನು ಕಟಿಬದ್ದವಾಗಿರುವುದಾಗಿ ಕೇಂದ್ರ ಘೋಷಿಸಿಕೊಂಡಿದೆ. ಅಲ್ಲದೆ ಈ ಹೋರಾಟದ ಶುರುವಿನಿಂದಾಗಿ ಕೇಂದ ಸರ್ಕಾರ ವನ್ನು ಸಿಲುಕಿಸಿ ವಿಲವಿಲ ಒದ್ದಾಡುವ ಸ್ಥಿತಿಯನ್ನು ತಂದೊಡ್ಡಿರುವ ೨ ಜಿ, ಸಿ ಡಬ್ಲ್ಯ್ ಜಿ ಮತ್ತಿತರ ಹಗರಣಗಳಿಂದ ಜನರ ಮನಸನ್ನು ಬೇರೆಡೆಗೆ ತಿರುಗಿಸುವ ಚಾಣಾಕ್ಷತನವನ್ನೂ ಕೇಂದ್ರ ಮೆರೆದಿದೆ. ಅಲ್ಲದೇ ದೃಶ್ಯ ಮಾಧ್ಯಮಗಳಾಗಲಿ ಮುದ್ರಣ ಮಾಧ್ಯಮಗಳಾಗಲಿ ಈ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಏಕೆಂದರೆ ಅವುಗಳಿಗೆ ಬರೀ ’ಬ್ರೇಕಿಂಗ್ ನ್ಯೂಸ್’ ಮಾತ್ರವೇ ಮುಖ್ಯವಲ್ಲವೆ?

ಅಷ್ಟೇ ಅಲ್ಲದೆ ಕಳೆದಬಾರಿಯ ಹಜಾರೆಯವರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದ ಕಾಂಗ್ರೇಸ್ಸೇತರ ಸರ್ಕಾರಗಳು ಈ ಬಾರಿ ಮಗುಮ್ಮಾಗಿ ಉಳಿದಿವೆ. ಅದರಲ್ಲೂ ನಮ್ಮ ಕರ್ನಾಟಕದ ಬಿ ಜೆ ಪಿ ಸರ್ಕಾರ ನಿನ್ನೆಯ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಶಾಸ್ತ್ರಕ್ಕೆಂದು ಭ್ರಷ್ಟಾಚಾರದ ವಿರುದ್ದ ಒಂದೇ ಒಂದು ಸಾಲನ್ನೂ ಸಹ ಉಲ್ಲೇಖಿಸದಿರುವುದು ಶತಾಯಗತಾಯ ’ಮಾಜಿ ಭ್ರಷ್ಟಾಚಾರವನ್ನು’ ಕಾಪಾಡಲು ಟೊಂಕಕಟ್ಟಿದಂತಿದೆ!!

ಇಷ್ಟೆಲ್ಲಾ ಇಲ್ಲಗಳ ನೆಗೆಟೀವ್ ಅಂಶಗಳ ನಡುವೆಯೂ ನಾವು ಅಣ್ಣಾರವರನ್ನು ಬೆಂಬಲಿಸಲೇಬೇಕಾದ ಅಗತ್ಯವಿದೆ. ನಮ್ಮದೇಶದಲ್ಲಿ ಇರುವ ಎಲ್ಲಾ ಕಾನೂನುಗಳು ಬಲಿಷ್ಠವಾಗಿದ್ದರೂ ಅವುಗಳನ್ನು ಜಾರಿಗೆ ತರುವವರ ನಿರ್ಲಕ್ಷ್ಯದಿಂದಾಗಿ ಅವು ಕಳಪೆ ಕಾನೂನೆಸುವುದು ಸಹಜ. ಅಲ್ಲದೇ ನಮ್ಮ ಕಾನೂನುಗಳು ನಮ್ಮನ್ನಾಳುವವರ, ಸಿರಿವಂತರ ತಾಳಕ್ಕೆ ಆಗಿಂದಾಗ್ಗೆ ’ತಿದ್ದುಪಡಿ’ಆಗಿವೆ, ಆಗುತ್ತಿವೆ. ಇದೆಲ್ಲದರ ನಡುವೆ ಅಣ್ಣಾರವರು ಪ್ರಸ್ತಾಪಿಸಿರುವ ’ಜನ ಲೋಕಪಾಲ್ ಮಸೂದೆ’ಯು ಸಧ್ಯದ ಮಟ್ಟಿಗೆ ರಾಜಕಾರಣಿಗಳಲ್ಲಿ, ಅಧಿಕಾರಶಾಹಿಯಲ್ಲಿ ಮತ್ತು ಸಿರಿವಂತರಲ್ಲಿ ಚಳುಕು ಹುಟ್ಟಿಸಿರುವುದರಿಂದಲೇ ಅವರೆಲ್ಲಾ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಹೋರಾಟವನ್ನು ಹದಗೆಡಸಲು ಪ್ರಯತ್ನಿಸುತ್ತಿದ್ದಾರೆ. ಮುಂದೆ ಆ ಕಾನೂನು ಜಾರಿಯಾದಾಗ ಅದು ಸರಿಯೋ ತಪ್ಪೋ ನಂತರ ಗೊತ್ತಾಗುತ್ತದೆ. ಅಲ್ಲದೆ ಸಧ್ಯ ಮೇಲ್ನೋಟಕ್ಕೆ ಪ್ರಬಲ ಕಾಯ್ದೆಯಂತಿರುವ ’ಜನ ಲೋಕಪಾಲ್’ಮಸೂದೆ ಜಾರಿಗಾಗಿ, ಭ್ರಷ್ಟಾಚಾರವನ್ನು ಹತ್ತಿಕ್ಕುವಸಲುವಾಗಿ ಮುನ್ನುಗ್ಗುತ್ತಿರುವ ಅಣ್ಣನನ್ನು ಬೆಂಬಲಿಸದಿದ್ದಲ್ಲಿ ಮುಂದೊಂದು ದಿನ ನಮ್ಮನ್ನು ನಾವೇ ಶಪಿಸಿಕೊಳ್ಳಬೇಕಾದೀತು!! ಎಲ್ಲರೂ ತಮ್ಮ ಹೊಟ್ಟೆಪಾಡಿನ ಕೆಲಸ ಬಿಟ್ಟು ದಿನ ಪೂರ್ತಿ ಉಪವಾಸದ ಗುಡಾರಗಳಲ್ಲಿ ಕುಳಿತರೆ ಮಾತ್ರ ಅಣ್ಣಾರವರಿಗೆ ಬೆಂಬಲ ಎಂದುಕೊಳ್ಳುವಂತಿಲ್ಲ. ಸಾಂಕೇತಿವಾಗಿ ಧರಣಿಕುಳಿತು, ಕಪ್ಪು ಪಟ್ಟಿ ಧರಿಸಿಯೂ ಸಹ, ಸಾರ್ವಜನಿಕರಲ್ಲಿ ಅರಿವು ಮೂಡಿಸುವುದರ ಮೂಲಕವೂ ಸಹ ಬೆಂಬಲ ವ್ಯಕ್ತಪಡಿಸಬಹುದು! ಅಲ್ಲದೇ ಅಣ್ಣಾರವರು ಕರೆ ನೀಡಿರುವಂತೆ ಪ್ರತಿ ದಿನ ರಾತ್ರಿ ೮ ರಿಂದ ೯ ಗಂಟೆಯವರೆಗೆ ನಮ್ಮ ನಮ್ಮ ಮನೆಯ ದೀಪಗಳನ್ನು ಆರಿಸಿ, ಮನೆಯಿಂದ ಹೊರಬಂದು, ಘೋಷಣೆ ಕೂಗುವುದರ ಮೂಲಕ, ನಿಮ್ಮ ಜಿಲ್ಲಾಧಿಕಾರಿಗಳಿಗೆ, ನಿಮ್ಮ ತಾಲ್ಲೋಕುಗಳಲ್ಲಿ ತಹಶೀಲ್ದಾರರಿಗೆ ಮನವಿ ಸಲ್ಲಿಸುವುದರ ಮೂಲಕ, ಅಥವಾ ನಿಮ್ಮ ಹೋಬಳಿಗಳಲ್ಲಿರುವ ಉಪತಹಶೀಲ್ದಾರರಿಗೆ ಕಾನೂನು ಜಾರಿಗೆ ಮನವಿ ಸಲ್ಲಿಸುವುದರ ಮೂಲಕ ಶಾಂತಿಯುತವಾಗಿಯೂ ಕಾನೂನಿನ ಜಾರಿಗೆ ಒತ್ತಾಯಿಸಬಹುದು.

ಜೊತೆಗೆ ಪ್ರತಿಯೊಬ್ಬರಿಗೂ ತಮ್ಮದೇ ಆದ ಶಾಂತಿಯುತ ದಾರಿಗಳು ಇದ್ದೇ ಇರುತ್ತವೆ. ಅವುಗಳೆಲ್ಲವುದರ ಮೂಲಕವೂ ಕೇಂದ್ರ ಸರ್ಕಾರಕದ ಮೇಲೆ ಒತ್ತಡ ತರಬಹುದು. ದಯವಿಟ್ಟು ನಿಮಗೆ ತಿಳಿದಿದ್ದನ್ನು ಮಾಡಿ, ಅದು ಶಾಂತಿಯ ಮಾರ್ಗವಾಗಿರಲಿ ಆದರೆ ಕೇಂದ್ರದ ಮೇಲೆ ಒತ್ತಡವಿರಲಿ. ’ಜನ ಲೋಕಪಾಲ ಮಸೂದೆ’ ಜಾರಿಯಾಗೇ ತೀರಲಿ.

ಜೈ ಅಣ್ಣಾ ಹಜಾರೆ!!

ಭ್ರಷ್ಟಾಚಾರ ವಿರುದ್ದದ ಹೋರಾಟಕ್ಕೆ ಜಯವಾಗಲಿ!!

ಮಂಗಳವಾರ, ಆಗಸ್ಟ್ 9, 2011

’ಸಂತೋಷ’ದ ಆ ದಿನಗಳು

"ಮೇ ಐ ಕಂ ಇನ್ ಸರ್?" ಎಂಬ ನನ್ನ ವಿನಮ್ರ ಧ್ವನಿ ಕೇಳಿ, ನಿಶ್ಯಭ್ಧವಾಗಿ ಪಾಠ ಕೇಳುತ್ತಿದ್ದ ಮಂಡ್ಯದ ಕಾಳೇಗೌಡ ಪ್ರೌಢಶಾಲೆಯ ೯ನೇ ತರಗತಿ ಹುಡುಗರಲ್ಲಾ ಬಾಗಿಲ ಬಳಿ ಸರಕ್ಕನೆ ತಿರುಗಿದ್ದರು.
"ಯಾರಪ್ಪ ನೀನು? ಏನಾಗ್ಬೇಕಿತ್ತು?" ಗುರುಗಳ ಕಂಚಿನ ಕಂಠದ ಖಢಕ್ಕಾದ ಧನಿ ಪ್ರಶ್ನೆಯ ರೂಪದಲ್ಲಿ ಬಂತು.
"ಸರ್! ಹೊಸ ಅಡ್ಮೀಶನ್" ಎನ್ನುತ್ತಾ ಕೈಲಿದ್ದ ರೆಸಿಪ್ಟನ್ನು ಮುಂದೆ ಹಿಡಿದೆ.
"ಓ! ಹೌದಾ! ವೆರಿಗುಡ್! ಬಾ ಒಳ್ಗೆ" ಎನ್ನುತ್ತಾ ಬಳಿ ಕರೆದು ರೆಸಿಪ್ಟನ್ನು ಪರಿಶೀಲಿಸಿ ಅಟೆಂಡೆನ್ಸ್ ನಲ್ಲಿ ನನ್ನ ಹೆಸರು ನಮೂದಿಸಿ
" ಏಯ್! ಸಂತೋಷ ಸ್ವಲ್ಪ ಸರ್ಕೊಳೊ" ಎಂದು ದಡೂತಿ ದೇಹದ ಮಾಂಸ ಪರ್ವತದಂದಿದ್ದವನಿಗೆ ಆದೇಶಿಸಿದರು, ನನ್ನನ್ನು ಅಲ್ಲಿ ಕೂರುವಂತೆ ಸನ್ನೆಮಾಡಿದರು. ತರಗತಿಯಲ್ಲಿದ್ದ ಹುಡುಗರು ನನ್ನನ್ನು ಅನ್ಯಗ್ರಹದ ಜೀವಿಯೊಂದು ತಪ್ಪಿಸಿಕೊಂಡು ಬಂದಾಗ ನೋಡುವಂತೆ, ಬಿಟ್ಟ ಬಾಯಿ ಬಿಟ್ಟ ಕಣ್ಣು ಬಿಟ್ಟಹಾಗೆ, ಅವರವರ ಕತ್ತನ್ನು ನನ್ನ ಚಲನೆಗನುಗುಣವಾಗಿ ಸಮೀಕರಿಸಿದಂತೆ ತಿರುಗಿಸುತ್ತಿದ್ದರು,
"ಆಹಾ! ಅವ್ನೇನು ಯಾವಗ್ರಹದಿಂದ ತಪ್ಪಿಸ್ಕಂಡು ಬಂದೋನೇನಲ್ಲ, ಎಲ್ರೂ ನಿಮ್ಮನಿಮ್ಬಾಯಿ ಮುಚ್ಕಂಡು ಪಾಠ ಕೇಳ್ರಿ!" ಮತ್ತದೇ ಗುಂಡು ಹೊಡೆದಂತಾ ಸ್ವರಕ್ಕೆ ಎಲ್ಲರ ದೃಷ್ಠಿ ಕಪ್ಪು ಹಲಗೆಯ ಕಡೆ ನೆಡುವಷ್ಟರಲ್ಲಿ ಸಂತೋಷನಪಕ್ಕದಲ್ಲಿದ್ದ ಸ್ವಲ್ಪವೇ ಸ್ವಲ್ಪ ಜಾಗದಲ್ಲಿ ಕುಳಿತಿದ್ದೆ.
"ನಾನೊಸಿ ದಪ್ಪ! ಬೈಯ್ಕಬ್ಯಾಡ ಗುರು!" ಎಂದು ಪಿಸುಗುಟ್ಟಿದ್ದ ಪಕ್ಕದಲ್ಲಿದ್ದ ಸಂತೋಷ ಆ ಕ್ಷಣಕ್ಕೇ ಹತ್ತಿರವಾಗಿಬಿಟ್ಟ. ಈ ರೀತಿ ನನಗೆ ಸಂತೋಷನ ಪರಿಚಯವಾಗಿತ್ತು. ಬೆಳಗಿನ ತರಗತಿಗಳೆಲ್ಲಾ ಮುಗಿದು, ಊಟದ ಸಮಯದ ಬೆಲ್ ಹೊಡೆದಾಗ ಕೆಲವರು ಮನೆಗೆ ಹೊರಟರೆ, ಮತ್ತೆ ಕೆಲವರು ತಂತಮ್ಮ ಊಟದ ಡಬ್ಬಿಗಳೊಡನೆ ಹೊರ ಹೊರಟರೆ, ಸಂತೋಷ ಸೇರೆದಂತೆ ಮತ್ತೂ ಹಲವರು ತರಗತಿಯೊಳಗೇ ಡಬ್ಬಿ ಬಿಚ್ಚಿ ಊಟಕ್ಕೆ ಕುಳಿತರು. ಅಂದು ಮೊದಲ ದಿನವಾದ್ದರಿಂದ ಸ್ಕೂಲಿಗೆ ದಾಖಲಿಸಿದ ಅಪ್ಪ "ಇವತ್ತು ಹೋಟ್ಲಲ್ಲಿ ತಿನ್ಕೋ" ಎಂದೇಳಿ ೨೦ ರೂ ಕೊಟ್ಟಿದ್ದರು. ಅದಕ್ಕೆಂದೇ ಹೊರಗೆ ಹೋಟಲಿನ ಭೇಟೆಗೆ ಹೊರಡಲನುವಾದೆ.
"ಎಲ್ಲೊಯ್ತಿಯಾ ಗುರು? ಬಾ ಊಟ ಮಾಡಾಣ" ಎಂದ ಅದೇ ಸಂತೋಷ.
"ಇಲ್ಲಾ ಇವತ್ತು ನಾನೇನು ತಂದಿಲ್ಲಾ! ಅದ್ಕೆ ಹೊರ್ಗಡೆ ಹೋಟ್ಲುಗೆ ಹೋಗೋಣಾಂತಿದೀನಿ, ಇಲ್ಲಿ ಹೋಟ್ಲು ಎಲ್ಲಿದೆ?" ಡವಗುಟ್ಟುವ ಎದೆಯ ಸಂಕೋಚದ ಸದ್ದಿನೊಡನೆ ಅವನನ್ನೇ ಕೇಳಿದ್ದೆ.
"ಇರ್ಲಿ ಬಾ! ಇಲ್ಲೇ ತಿನ್ನೋಣ" ಎನ್ನುತ್ತಾ ತನ್ನ ಡಬ್ಬಿಯ ಮುಚ್ಚಳಕ್ಕೆ ತಾನು ತಂದಿದ್ದ ಉಪ್ಪಿಟ್ಟನ್ನು ಹಾಕಿ ಪಕ್ಕದವನಿಗೆ ಕೊಡುತಾ "ಏನ್ ನಿನ್ನೆಸ್ರು?" ಎನ್ನುವ ಪ್ರಶ್ನೆಯನ್ನು ನನ್ನೆಡೆಗೆ ತಳ್ಳಿದ.
"ಉಮಾಶಂಕ್ರ" ಎಂದೆ
"ಓಹೋ!! ಲೋ ಕೋಳಿ, ಸೀ ನಿಮ್ಮಿಬ್ರು ಜೊತೆಗೆ ಇನ್ನೊಬ್ಬ ಉಮಾಶಂಕ್ರ ಬಂದ ನೋಡ್ರುಲಾ!! ಎನ್ನುತ್ತಾ ಗಹಗಹಿಸಿದ ಮಿಕ್ಕವರೂ ಧನಿಗೂಡಿಸಿದರು. ಎಲ್ಲರೂ ತಂತಮ್ಮ ಹೆಸರು ಹೇಳಿ ಪರಿಚಯ ಮಾಡಿಕೊಳ್ಳುತ್ತಾ ಎದುರಿಗಿದ್ದ ಮುಚ್ಚಳಕ್ಕೆ ತಾವು ತಂದಿದ್ದ ತಿಂಡಿಯನ್ನು ಊಟವನ್ನು ಒಂದೊಂದು ಸ್ಪೂನು ಹಾಕುತ್ತಾ ಪಕ್ಕದವನಿಗೆ ಕೊಡುತ್ತಿದ್ದರು. ಎಲ್ಲರ ಪರಿಚಯವೂ ಮುಗಿದ ನಂತರ ಮದುವೆ ಮನೆಯ ಊಟದೆಲೆಯಂತೆ ಬಗೆಬಗೆಯ ತಿಂಡಿಗಳುಳ್ಳ ಮುಚ್ಚಳ ನನ್ನ ಬಳಿಗೆ ಬಂದಾಗ ಏನೂ ತಿಳಿಯದೆ ಎಲ್ಲರ ಮುಖವನ್ನು ನೋಡುತ್ತಿದ್ದಾಗ
"ಹಂಚಿ ತಿಂದೋನು ಮಿಂಚಿ ಬಾಳ್ತಾನಂತೆ!! ಮಖ ಏನೋಡ್ತಿಯಾ? ಜಮಾಯ್ಸು" ಎಂದು ಮತ್ತೆ ಕಿಚಾಯಿಸಿದ್ದರೂ ಅವನು ಸೇರಿದಂತೆ ಅಲ್ಲಿದ್ದ ಎಲ್ಲರೂ ಸೀದ ನನ್ನ ಹೃದಯದೊಳಗೆ ಬಂದು ಕುಳಿತು ಬಿಟ್ಟಿದ್ದರು. ಮೊದಲದಿನದ ಆ ಸ್ಕೂಲಿನ ಅನುಭವ ಅಚ್ಚಳಿಯದೇ ಹಾಗೇ ೨೨ ವರ್ಷಗಳನಂತರವೂ ’ಇಂದು ನಡೆದಿದ್ದೇನೋ’ ಎನ್ನುವಂತೆ ಹಸಿರಾಗಿಯೇ ಇದೆ.
    ನಾನಾಗ ಬಹಳ ಕುಳ್ಳಗಿದ್ದದ್ದರಿಂದ ಮರುದಿನದಿಂದ ಮುಂದಿನ ಡೆಸ್ಕ್ ಖಾಯಂ ಆದರೂ ಸಂತೋಷನ ಗೆಳೆತನಕ್ಕೇನು ಕುಂದು ಬಂದಿರಲಿಲ್ಲ. ಅಂದ ಮಾತ್ರಕ್ಕೆ ಉಳಿದವರೇನು ನನ್ನ ಸ್ನೇಹಿರಲ್ಲವೆಂದಲ್ಲ, ಅವನಿಗಿಂತಲೂ ಆತ್ಮೀಯ ಸ್ನೇಹಿತರು ಅನೇಕರಿದ್ದರೂ ಸಹ ಸಂತೋಷನ ವ್ಯಕ್ತಿತ್ವವೂ ಎಂದೂ ಮರೆಯಲಾಗದಂತಹದ್ದು. ಆ ವಯಸ್ಸಿಗಾಗಲೇ ಅವನು ೬೫ ರಿಂದ ೭೦ ಕೆ.ಜಿ ವರೆಗೆ ತೂಗುತ್ತಿದ್ದ!! ಅವನು ಹೆಸರಿಗೆ ತಕ್ಕಂತೆ ಸಂತೋಷವಾಗಿಯೇ ಇರುತ್ತಿದ್ದ. ಎಲ್ಲರನ್ನೂ ರೇಗಿಸುವುದು, ತರಗತಿಯ ಮೇಷ್ಟ್ರು, ಮೇಡಂಗಳನ್ನು ಅವರಿಲ್ಲದಿದ್ದಾಗ ಅಣಕಿಸುತ್ತಿದ್ದದ್ದು, ತೀರಾ ಗಂಭೀರವಾದ ವಿಚಾರಗಳನ್ನು ತನ್ನ ಹಾಸ್ಯ ಸಮಯಪ್ರಜ್ನೆಯಿಂದಾಗಿ ತಿಳಿಗೊಳಿಸುತ್ತಿದ್ದ ರೀತಿ ಎಲ್ಲರಿಗೂ ಅಚ್ಚುಮೆಚ್ಚಿನದ್ದಾಗಿತ್ತು. ಇಂತಿಪ್ಪ ಸಂತೋಷ ಸಂಜೆ ತರಗತಿಗಳು ಮುಗಿದು ಮನೆಗೆ ಹೋಗುವಾಗ ಮಾತ್ರ ಬಹಳ ಮ್ಲಾನವನನಾಗೆರುತ್ತಿದ್ದ. ಹೈಸ್ಕೂಲಿನಲ್ಲಿದ್ದ ಎಲ್ಲಾ ಸಹಪಾಠಿಗಳ ಮನೆಗೆ ಅವನೂ ಬರುತ್ತಿದ್ದ ನಾನೂ ಹೋಗುತ್ತಿದ್ದೆ, ಎಲ್ಲರೂ ನಮ್ಮ ಊರಾದ ಬಿದರಕೋಟೆಗೂ ಬಂದಿದ್ದರು. ಆದರೆ ಯಾರೂ ಸಂತೋಷನ ಮನೆಯನ್ನು ನೋಡಿರಲಿಲ್ಲ. ಒಂದು ವೇಳೆ ನೋಡಿದವರ್ಯಾರೂ ಮನೆಯೊಳಗೆ ಹೋಗಿರಲಿಲ್ಲ, ಸಂತೋಷನೂ ಸಹ ಯಾರನ್ನೂ ಕರೆಯುತ್ತಿರಲಿಲ್ಲ. ಒಂದು ದಿನ ಅದೇ ವಿಚಾರವನ್ನು ಇತರ ಸ್ನೇಹಿತರಬಳಿ ಹೇಳಿದಾಗ ’ಅವನ ತಂದೆ, ಒಬ್ಬ ಇಂಜಿನಿಯರ್ ಎಂದು ಅವರು ಬಹಳ ’ಸ್ಟಿಕ್ಟ್’ ಎಂದೂ, ಅವರ ಮಗ ಇತರರೊಡನೆ ವೃಥಾ ಕಾಲಹರಣ ಮಾಡುವುದನ್ನು ತಿಳಿದರೆ ಸಂತೋಷನಿಗೆ ’ಒದೆ’ ಬೀಳುತ್ತವೆಂದು’ ವಿನಯ್ ಹೇಳಿದ್ದ. ಯಾವಾಗಲೂ ಜಾಲಿಯಾಗಿ ಕಳೆಯುತ್ತಿದ್ದರೂ ಓದಿನಲ್ಲಿ ಸದಾ ಮುಂದೆಯೇ ಇರುತ್ತಿದ್ದ.
    ಅವನ ನಮ್ಮ ಹುಡುಗಾಟವೆಲ್ಲ ಮೇಷ್ಟ್ರು ಇಲ್ಲದಿದ್ದಾಗಲಷ್ಟೇ ನಡೆಯುತ್ತಿದ್ದರಿಂದ ಹೈಸ್ಕೂಲಿನಲ್ಲಿ ಹೆಚ್ಚು ಬಾಲ ಬಿಚ್ಚಲು ಅವನಿಗೇನು ಮತ್ಯಾರಿಗೂ ಸಾಧ್ಯವಾಗಿರಲಿಲ್ಲ. ನಾವೆಲ್ಲರೂ ನಮ್ಮನಮ್ಮ ಬಾಲಗಳನ್ನು ಬಿಚ್ಚಿ ’ನಾವೂ ಸಹ ವಾನರ ಸಂತಂತಿಯವರು’ ಎಂದು ಜಗತ್ತಿಗೆ ನಿರೂಪಿಸಿ, ’ಡಾರ್ವಿನ್ ನ ವಿಕಾಸವಾದಕ್ಕೆ’ ಇಂಬುಕೊಟ್ಟಿದ್ದು, ಕೊಡುವ ಅವಕಾಶ ಸಿಕ್ಕಿದ್ದು, ’ಬಾಲಕರ ಸರ್ಕಾರಿ ಕಾಲಿಜಿನ’ ಮೆಟ್ಟಿಲು ಹತ್ತಿದಾಗಲೆ!! ಕೇವಲ ಅಟೆಂಡೆನ್ಸ್ ಗಾಗಿ ಕ್ಲಾಸಿಗೆ ಹೋಗುವವರು ಇನ್ನೇನು ಮಾಡಲು ತಾನೆ ಸಾಧ್ಯ!! ಅಲ್ಲವೇ?
     ಅದರಲ್ಲೂ ಸಂತೋಷನ ಆಟಗಳಂತೂ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತಿದ್ದವು. ಆಗ ನಮಗೆ ಅಂಕಗಣಿತ ಮತ್ತು ರೇಖಾಗಣಿತಗಳನ್ನು ಹೇಳಿಕೊಡಲು ಕೆಂಪೇಗೌಡ ಎಂಬ ಲೆಕ್ಚರರ್ ಬರುತ್ತಿದ್ದರು, ಅವರ ಧರ್ಮಪತ್ನಿ, ವಿಜಯಲಕ್ಷ್ಮಿಯವರು ಸಸ್ಯ ಶಾಸ್ತ್ರದ ಲೆಕ್ಚರರ್. ಶುಕ್ರವಾರ ಸಂಜೆ ಕೊನೆಯ ಪೀರಿಯಡ್ ಮತ್ತು ಶನಿವಾರ ಬೆಳಿಗ್ಗೆಯ ಮೊದಲನೆ ಪೀರಿಯಡ್ ಕೆಂಪೇಗೌಡರದ್ದು. ನಂತರದ ಪೀರಿಯಡ್ ವಿಜಯಲಕ್ಷ್ಮಿಯವರದ್ದು. ಈ ಕೆಂಪೇಗೌಡರು ಸ್ವಲ್ಪ ಮೃದು ಆಸಾಮಿ. ಗಣಿತದಲ್ಲಷೇ ಅಲ್ಲ ಎಡಗೈ ಮತ್ತು ಬಲಗೈ ಎರದರಲ್ಲೂ ಸಮಾನಂತರವಾಗಿ ಕೈ ಬರಹ ವ್ಯತ್ಯಾಸ ತಿಳಿಯದಂತೆ ಬರೆಯುವುದರಲ್ಲಿ (ತ್ರೀ ಈಡಿಯಟ್ಸ್ ಚಿತ್ರದಲ್ಲಿ ಬರುವ ’ವೈರಸ್’ನಂತೆ) ನಿಸ್ಸೀಮರು. ಅದೊಂದು ಶುಕ್ರವಾರ ಸಂಜೆಯ ಕ್ಲಾಸಿನಲ್ಲಿ ಎಲ್ಲರೂ ತೂಕಡಿಸುತ್ತಾ ಕುಳಿದ್ದಾಗ ತಮ್ಮ ಎರಡೂ ಕೈಯಿಂದ ಬೋರ್ಡ್ ಮೇಲೆ ಬರೆಯುತ್ತಾ ಪಾಠದಲ್ಲಿ ಕುತೂಹಲ ಕೆರಳಿಸಲು ವಿಫಲ ಪ್ರಯತ್ನ ನಡೆಸುತ್ತಿರುವಾಗ ಹಿಂದಿನ ಬೆಂಚಿನಲ್ಲಿದ್ದ ಸಂತೋಷನ ಕೈಲಿದ್ದ ಕಾಗದದ ರಾಕೆಟ್ ಸೀದಾ ಹೋಗಿ ಕೆಂಪೇಗೌಡರ ಕಪ್ಪು ಗುಂಗುರು ಕೂದಲಿನೊಳಗೆ ನಾಟಿ ಅವರ ಕೋಪದ ಜೊತೆಗೆ ದುಃಖದ ಕಟ್ಟೆಯೂ ಸ್ಪೋಟಗೊಂಡಿತ್ತು!! "ಹೋಓಓಹೋ!!!" ಎನ್ನುತ್ತಾ ಕಿರುಚುತ್ತಿದ್ದ ನಮ್ಮ ಬಾಯಿಗೆ ಬೀಗ ಹಾಕಿದ್ದು
"ಯಾವನಯ್ಯ ಅವ್ನು?!?!?!" ಎನ್ನುವ ಅವರ ಅದೇ ದುಃಖಭರಿತ ನಡುಕದ ಏರು ಧನಿ!!
"ನಂಗೊತ್ತು ನೀವೆಲ್ಲಾ ಟ್ಯೂಷನ್ಗೋಗ್ತೀರಾ, ಬರೀ ಅಟೆಂಡೆನ್ಸ್ ಗೆ ಮಾತ್ರ ಕಾಲೇಜಿಗ್ಬರ್ತೀರಾಂತ!! ಟ್ಯೂಷನ್ ಫೀಜ್ ಕೊಡಕಾಗ್ದಿರೋ ಬಡವ್ರೂ ಇರ್ತಾರೆ, ಅವ್ರಿಗ್ಯಾಕೆ ತೊಂದ್ರೆ ಕೊಡ್ತೀರಾ? ಇಷ್ಟ ಇಲ್ದಿದ್ರೆ ಎದ್ದೋಗಿ, ಇಲ್ಲಾಂದ್ರೆ ನನ್ತಲೆಮೇಲೆ ದಪ್ಪ ದಿಂಡ್ಗಲ್ಲೆತ್ತಾಕಿ ಸಾಯ್ಸಿಬಿಡಿ!!" ಎನ್ನುತ್ತಾ ನೀರು ತುಂಬಿದ ಕಣ್ಣಾಲೆಗಳಿಂದ ಡೆಸ್ಟರ್ ರಿಜಿಸ್ಟರ್ ಗಳನ್ನೆತ್ತಿಕೊಂಡು ಪಾಠವನ್ನು ಅರ್ಧಕ್ಕೆ ಬಿಟ್ಟು ಹೊರಟು ಹೋದರು.
    ಮರುದಿನ ಎಲ್ಲವನ್ನೂ ಮರೆತ ಗೌಡರು ನಗುಮೊಗದೊಂದಿಗೆ ಕಾಲೇಜಿಗೆ ಬಂದರು, ಅಷ್ಟೇ ಖುಷಿಯಿಂದ ನಮ್ಮ ತರಗತಿಯೊಳಗೆ ಬಂದು ತಮ್ಮ ಎಂದಿನ ಅಭ್ಯಾಸಬಲದಂತೆ ಬಾಗಿಲು ಮುಚ್ಚಿ ಟೇಬಲ್ ಬಳಿ ಬಂದು ರಿಜಿಸ್ಟರ್ ಮತ್ತು ಡೆಸ್ಟರ್ ಇಡಲು ನೋಡುತ್ತಾರೆ!! ಜಾಗವೆಲ್ಲಿದೆ? ಟೇಬಲ್ ತುಂಬಾ ’ಒಂದು ದಪ್ಪ ದಿಂಡುಗಲ್ಲು!!!!!!’ಗೌಡರನ್ನು ಅಣಕಿಸುತ್ತಾ ಕುಳಿತಿತ್ತು!!!
    ಕೆಂಪೇಗೌಡರ ಮುಖ ಕೆಂಪೆಡರುವುದರ ಜೊತೆಗೆ ಜಂಘಾಬಲವೇ ಉಡುಗಿಹೋಗಿತ್ತು!! ಕಂಪಿಸುವ ಸ್ವರದಿಂದ
"ಯಾರ್ರಿ ಇದ್ನ ಇಲ್ತಂದಿದ್ದು?" ಎಂದರು, ನಿಶಬ್ಧವಾಗಿದ್ದ ಕ್ಲಾಸಿನೊಳಗೆ
"ನಿನ್ನೆ ನೀವೇ ಹೇಳಿದ್ರಲ್ಲ ಸರ್ ದಿಂಡ್ಗಲ್ಲೆತ್ತಾಕಿ ಸಾಯ್ಸಿಬಿಡಿ!! ಅಂತ!" ಎನ್ನುವ ಉತ್ತರಮಾತ್ರ ಹಿಂದಿನ ಬೆಂಚಿಂದ ಸಂತೋಷನ ಬಾಯಿಂದ ಮೊಳಗಿತ್ತು. ಕೆಂಪೇಗೌಡರು ಕೋಪದಿಂದ ನಮಗೆ ಬೇಕಿದ್ದ ಅಟೆಂಡೆನ್ಸ್ ಸಹ ಹಾಕದೆ ಹೊರಟು ಹೋಗಿದ್ದು  ಸೂರು ಎಗರಿ ಹೋಗುವ ಹಾಗೆ "ಓಹೋ!"" ಎಂದು ಅರಚುತ್ತಿರುವ ನಮ್ಮ ಗಮನಕ್ಕೆ ಬಾರಲೇ ಇಲ್ಲ. ಹಿರಿಕರು ಹೇಳುವಂತೆ ನಗುವಿನೊಡನೆ ಅಳುವೂ ಬರುತ್ತದೆನ್ನುವ ಸತ್ಯ ಮುಂದಿನ ಪೀರಿಯಡ್ ನಲ್ಲೇ ನಮಗೆಲ್ಲಾ ತಿಳಿದು ಹೋಗಿತ್ತು! ಏಕೆಂದರೆ ಮುಂದಿನ ತರಗತಿ ಮಿಸೆಸ್ ಕೆಂಪೇಗೌಡ ಅರ್ಥಾತ್ ಶ್ರೀಮತಿ ವಿಜಯಲಕ್ಷ್ಮೀ ಯವರದ್ದು. ಅವರದ್ದು ಕೆಂಪೇಗೌಡರ ತದ್ವಿರುದ್ದ ಗುಣ.
"ಯಾವನನ್ಮಗನೋ ಅವ್ನು ಕ್ಲಾಸೊಳ್ಗೆ  ಕಲ್ಲು ತಂದಿಡೋನು?? ಧೈರ್ಯ ಇದ್ರೆ ಮುಂದೆ ಬನ್ರೋ!! ಅದೇ ಕಲ್ಲೆತ್ತಾಕಿ ಸಿಗ್ದು ತೋರ್ಣ ಕಟ್ಬಿಡ್ತೀನಿ!!" ಎಂದು ಸಾಕ್ಷಾತ್ ದುರ್ಗಾದೇವಿಯ ಗೆಟಪ್ ನಲ್ಲಿ ನಿಂತಾಗ, ನಮ್ಮೆಲ್ಲರ ಎದೆಯೊಳಗೆ ತಂಬಿಟ್ಟಿಗೆ ಅಕ್ಕಿ ಕುಟ್ಟುವ ಸದ್ದು!!! ಓಡಿ ಹೋಗೋಣ ಅಂದ್ರೆ ಬಾಗಿಲು ಮುಚ್ಚಿದೆ, ಅದಕ್ಕಿಂತ ಹೆಚ್ಚಾಗಿ ಸೊಂಟಕ್ಕೆ ಸೆರಗು ಸಿಕ್ಕಿಸಿ ಕೈಯಲ್ಲಿ ಡೆಸ್ಟರ್ ಅನ್ನು ಲಾಂಗ್ ನಂತೆ ಹಿಡಿದು ನಿಂತಿರುವ ವಿಜಯಲಕ್ಷ್ಮಿ!!
"ಎಷ್ಟೋ ಧೈರ್ಯ ನಿಮ್ಗೆ? ಒಬ್ಬ ಲೆಕ್ಚರ್ನ ಈ ರೀತಿ Humiliate ಮಾಡೋಕೆ?.... ಅದ್ಯಾರು ಅಂತೇಳಿದ್ರೆ ಸರಿ ಇಲ್ಲಾಂದ್ರೆ ಪ್ರಿನ್ಸಿಪಾಲ್ಗೇಳಿ ಪೋಲೀಸ್ನೋರನ್ನ ಕರ್ಸ್ತೀನಿ" ಎಂಬ ಅವಾಜಿಗೆ ಉದಯ ಟೀವಿಯಲ್ಲಿ ಬರುವ ದರಿದ್ರವಾಹಿಗಳ ಕ್ಲೋಸ್-ಅಪ್ ಷಾಟ್ ಗಳು ನಮ್ಮ ನಮ್ಮಲ್ಲಿ ವಿನಿಮಯಗೊಂಡವು!! ಆದರೂ ’ಒಗ್ಗಟ್ಟಿನಲ್ಲಿ ಬಲವಿದೆ’ ಎನ್ನುವುದನ್ನು ತೋರಿಸಲೆಂದೇ ಆ ವಿಚಾರದಲ್ಲಿ ಯಾರೊಬ್ಬರ ತುಟಿಯೂ ಎರಡಾಗಲಿಲ್ಲ, ಕೇವಲ ಸಂತೋಷನನ್ನು ಬಿಟ್ಟು.
"ಹೋಗ್ಲಿ ಬಿಡಿ ಮೇಡಂ!! ಗೌಡ್ರ ಮರ್ಯಾದೆ ಪ್ರಶ್ನೆ!!!" ಎಂಬ ಅವನ ಉತ್ತರ ವಿಜಯಲಕ್ಷ್ಮಿಯವರನ್ನು ’ಗಲಿಬಿಲಿ’ಲಕ್ಷ್ಮಿಯನ್ನಾಗಿ ಮಾಡಿತ್ತು!! ಆ ಕ್ಷಣಕ್ಕೆ ಅವರಿಗೆ ಏನು ಹೇಳಬೇಕೆಂದು ತೋಚದೆ ಹಾಗೆ ಹೇಳಿದ್ದು ಯಾರು ಎಂದು ಹುಡುಕುವ ವಿಫಲ ಪ್ರಯತ್ನದಲ್ಲಿ ಒತ್ತರಿಸಿ ಬರುತ್ತಿದ್ದ ನಗುವನ್ನು ತಡೆಹಿಡಿದ ನಮ್ಮಗಳ ಮುಖ ನೋಡಿ ಮೊದಲೇ ಕೆಂಪಾಗಿದ್ದ ಅವರ ಮತ್ತಷ್ಟು ರಂಗೇರಿ ಅವರ ಸಣ್ಣ ಮೂಗಿನ ಹೊಳ್ಳೆಗಳು ಆಚಾರಿಯ ಕುಲುಮೆಯಂತೆ ಮೇಲೆ ಕೆಳಗೆ ಆಡುತ್ತಾ ಬುಸುಗುಡತೊಡಗಿದ್ದವು!! ಏನು ಹೇಳಬೇಕೆಂದು ತೋಚದೆ
"Belive me I'll never take your class!!" ಎನ್ನುತ್ತಾ ಬಿರುಗಾಳಿಯಂತೆ ಕ್ಲಾಸಿನಿಂದ ಹೊರನಡೆದರು. ಮುಂದುನ ಬೆಂಚಿನ ’ಗಾಂಧೀವಾದಿ’ಗಳಿಗೆ ’ತಾವು ತಪ್ಪು ಮಾಡಿಲ್ಲ’ ಎಂದು ಮೇಡಂಗೆ ಅರುಹುವ ಚಡಪಡಿಕೆಯಿತ್ತು. ಮಧ್ಯದ ಬೆಂಚಿನಲ್ಲಿ ಕುಳಿತ ನಮ್ಮನ್ನೂ ಸೇರಿದಂತೆ ಇತರರೆಲ್ಲರನ್ನು ದುರುಗುಟ್ಟಿ ನೋಡಿ ಮೇಡಂರವರನ್ನು ಓಡೋಡಿ ಹಿಂಬಾಲಿಸಿದರು. ಇದನ್ನರಿತ ಸಂತೋಷನಿಗೆ ಏನೋ ಹೊಳೆದಂತಾಗಿ
"ಲೋ!! ಎಡವಟ್ಟಾಯ್ತು ಬನ್ರಲೇ" ಎನ್ನುತ್ತಾ ಓಡೋಡಿ ಅವರಿಗಿನ್ನ ಮುಂದೆ ಬಂದು ಮೇಡಂ ಎದುರಿಗೆ ಅವನೇ ನಿಂತಿದ್ದ!!! ಈಗ ಅವಾಕ್ಕಾಗುವ ಸರಧಿ ’ಗಾಂಧಿವಾದಿ’ಗಳದ್ದು!!!!
"ಮೇಡಂ ಯಾವನೋ ಬುದ್ದಿಯಿಲ್ದೋನು ಮಾಡಿರೋ ಕೆಲ್ಸುಕ್ಕೆ ನಮ್ಗೆಲ್ಲಾ ಯಾಕೆ ಶಿಕ್ಷೆ ಮೇಡಂ!! ನೀವು ಪಾಠ ಮಾಡ್ಲಿಲ್ಲಾಂದ್ರೆ ಟ್ಯೂಷನ್ ಗೆ ಹೋಗ್ದಿರೋ ನಮ್ಮಂತೋರ್ಗತಿ ಏನು ಮೇಡಂ?" ಎನ್ನುವ ಅವನ ವರಸೆ ನೋಡಿದಾಗ ’ಮಗು ಜಿಗುಟಿ ತೊಟ್ಟಲು ತೂಗುವುದು’ ಎಂದರೇನು ಎಂದು ನಮಗೆಲ್ಲಾ ಅರ್ಥವಾಗಿತ್ತು!
    ಅದೇ ರೀತಿ ರಿಟೈರ್ಡ್ ಅಂಚಿನಲ್ಲಿದ್ದ ಜಯಭಾರತಿ ಎನ್ನುವ ’ಪರಮ ಪುರುಷದ್ವೇಶಿ’ಮಹಿಳೆಯೊಬ್ಬರು ಇಂಗ್ಲೀಷ್ ಬೋಧಿಸಲು ಬರುತ್ತಿದ್ದರು. ’ಮಂತ್ರಕ್ಕಿಂತ ಉಗುಳೇ ಹೆಚ್ಚು’ ಅನ್ನುವ ಹಾಗೆ ಅವರು ಪಾಠಮಾಡುತ್ತಿದ್ದಕ್ಕಿಂತ ಗಂಡು ಸಂತತಿಯನ್ನು ಬೈಯ್ಯುವುದರಲ್ಲೇ ಕಾಲಹರಣ ಮಾಡುತ್ತಿದ್ದರು. ಒಂದು ಗಂಟೆಯ ಒಟ್ಟಾರೆ ಸಮಯದಲ್ಲಿ ೧೦ ನಿಮಿಷ ಪಾಠಮಾಡಿದರೆ ಉಳಿದ ೫೦ ನಿಮಿಷ ’ಗಂಡುಸ್ರು ಹಾಗೆ, ಹೀಗೆ’ ಎನ್ನುವುರಲ್ಲೇ ಕಾಲ ಕಳೆಯುತ್ತಿದ್ದರು!! ಒಮ್ಮೆ ಹೀಗೆ ಮಾತನಾಡುತ್ತಾ
"ಈ ಗಂಡುಸ್ರು ಪವರ್ ಏನಿದ್ರೂ ಐದೇ ನಿಮಿಷ ಕಣ್ರಿ!!" ಅಂದ್ಬಿಡೋದೇ!!! ಅದರಲ್ಲೂ ಮೀಸೆ ಚಿಗುರುತ್ತಿರುವ, ಬಿಸಿರಕ್ತದ ಯುವಕರ ಮುಂದೆ!! ನಮ್ಮತರಗತಿಯಲ್ಲಿದ್ದ ಅರವತ್ತೂ ಹುಡುಗರಿಗೆ ನಖಶಿಖಾಂತ ಉರಿದುಹೋಯಿತು!! ’ಬಡವನ ಕೋಪ ದವಡೆಗೆ ಮೂಲ’ಎಂಬ ನಾಣ್ಣುಡಿ ಜ್ನಾಪಕಕ್ಕೆ ಬಂದು, ಮನದೊಳಗೆ ಗೊಣಗಿಕೊಳ್ಳುವುದನ್ನು ಬಿಟ್ಟರೆ ಇನ್ನೇನೂ ಮಾಡಲಾಗಲಿಲ್ಲ!! ಆಗ ನಮ್ಮ ಸಹಾಯಕ್ಕೆ ಬಂದವನು ಅದೇ ಸಂತೋಷ!
"ಹೌದು ಮೇಡಂ!! ಗಂಡಸ್ರ ಐದ್ನಿಮ್ಷ ಪವರ್ಗೆ ೯ ತಿಂಗಳು ಕಷ್ಟಪಡೋರು ಹೆಂಗುಸ್ರಲ್ವೇ?" ಎನ್ನುವ ತುಸು ಅಶ್ಲೀಲ ಉತ್ತರದಿಂದ ಜಯಭಾರತಿಯವರ ಬಾಯಿ ಹೊಲಿಯುವುದರ ಜೊತೆಗೆ ನಿಶಬ್ದವಾಗಿ ನಮ್ಮ ಮನದ ಸಮೇತ ಕಣ್ಣುಗಳೂ ಅರಳಿದ್ದವು!! ಅಂದೇ ಕೊನೆ ಜಯಭಾರತಿಯವರು ಪಠ್ಯಬಿಟ್ಟು ಮತ್ಯಾವ ವಿಷಯವನ್ನು ನಮ್ಮ ಸೆಕ್ಷನ್ ನಲ್ಲಿ ಮಾತನಾಡುತ್ತಿರಲಿಲ್ಲ!
    ಮತ್ತೊಮ್ಮೆ ಹೊಸದಾಗಿ ನೇಮಕಗೊಂಡ Physics ಲೆಕ್ಚರರ್ ಒಬ್ಬರು ನಮ್ಮ ತರಗತಿಗೆ ಬಂದರು ಅದು ಅವರ ವೃತ್ತಿ ಜೀವನದ ಪ್ರಪ್ರಥಮ ತರಗತಿಯಾಗಿತ್ತು. ಯಥಾ ಪ್ರಕಾರ ಮೊದಲ ತರಗತಿಯಾದ್ದರಿಂದ ತಮ್ಮನ್ನು ತಾವು ಪರಿಚಯಿಸಿಕೊಳ್ಳಲು ಪ್ರಾರಂಬಿಸುತ್ತಾ
"ನನ್ನ ಹೆಸರು ಮಂಜುನಾಥ ಎಂದು! ನಾ ಮಂಗಳೂರಿನವ" ಎನ್ನುತ್ತಿದ್ದಂತೆ ಸಂತೋಷನಿಗೆ ಹಿಂದಿನ ದಿನ ದೂರದರ್ಶನದಲ್ಲಿ ಬಂದಿದ್ದ ಕಾಶಿನಾಥ್ ರವರ ಚಿತ್ರದ ಡೈಲಾಗ್ ಜ್ನಾಪಕಕ್ಕೆ ಬಂದು
"ಓಹೋ!!! ಮಂಗಳೂರು ಮಂಜುನಾಥ!!!" ಎಂದು ಥೇಟ್ ಕಾಶಿನಾಥ್ ಶೈಲಿಯಲ್ಲೇ ಹೇಳಿದಾಗ ಹೊಟ್ಟೆಹುಣ್ಣಾಗುವಂತೆ ನಗುವುದನ್ನು ಮಂಜುನಾಥನಾಣೆಗೂ ತಡೆಯಲಾಗಲಿಲ್ಲ! ಪೆಚ್ಚಾಗಿ ನಿಂತಿದ್ದ ನಮ್ಮ ಹೊಸ ಲೆಕ್ಚರರ್ ಸಾವರಿಸಿಕೊಂಡು
"ಇರಲಿ! ಈಗ ನಿಮ್ಮ ಹೆಸರು, ಮುಂದೆ ನೀವೇನು ಆಗ್ಲಿಕ್ಕೆ ಬೇಕಂತೀರಾ ಹೇಳಬೇಕು ಆಯ್ತಾ?" ಎನ್ನುತ್ತಾ ಎಲ್ಲರ ಪರಿಚಯ ಕಾರ್ಯಕ್ರಮ ಮುಗಿಯುತ್ತಿದ್ದಂತೆ
"ಸರ್! ನೀವೇನಾಗ್ಬೇಕು ಅನ್ಕಂಡಿದ್ರೀ?" ಎನ್ನುವ ಪ್ರಶ್ನೆ ನಮ್ಮ ಮತ್ತೊಬ್ಬ ಸಹಪಾಠಿ ವಿಕ್ಟರ್ ನಿಂದ ತೂರಿಬಂತು.
"ನಾ ಇಂಜಿನಿಯರ್ ಆಗಬೇಕೆಂದಿದ್ದೆ! ಆದರೆ ಆಗಲಿಲ್ಲ" ಎನ್ನುವ ಮಂಜುನಾಥರ ಪ್ರಾಮಾಣಿಕ ಉತ್ತರಕ್ಕೆ
"ತಿಕ ಬಗ್ಸಿ ಓದಿದ್ರೆ ಆಯ್ತಿದ್ದೆ!!" ಎನ್ನುವ ಮಂಡ್ಯ ಸೊಗಡಿನ ಸಂತೋಷನ ಡೈಲಾಗಿಗೆ ತರಗತಿಯಿಂದ ಹೊರಬಿದ್ದ ನಗು ಕಾಲೇಜಿಗೆಲ್ಲಾ ಕೇಳಿಸಿತ್ತು!!
    ಇಂಥಹ ’ಸಂತೋಷ’ದ ದಿನಗಳಿಗೆ ಕೊನೆಗೂ ಪರೀಕ್ಷಾಸಮಯ ಮೊಳೆ ಹೊಡೆದಿತ್ತು. ದ್ವಿತಿಯ ಪಿ.ಯು.ಸಿ ಆದ್ದರಿಂದ ಎಲ್ಲರಿಗೂ ಓದಲೇ ಬೇಕಾದ ಜರೂರತ್ತು! ಒದಿದ್ದೂ ಆಗಿತ್ತು, ಪರೀಕ್ಷೆಯೂ ಮುಗಿಯುತ್ತಾ ಬಂದಿತ್ತು. ಸಂತೋಷ ಎಲ್ಲಾ ಪತ್ರಿಕೆಗಳಿಗೂ ತುಂಬಾ ಚೆನ್ನಾಗಿಯೇ ಉತ್ತರಿಸಿದ್ದರೂ
"ಇಲ್ಲಾ ಮಗ! ಚೆನ್ನಾಗ್ಮಾಡಿಲ್ಲ!" ಎನ್ನುತ್ತಿದ್ದ ಅವನು ಚೆನ್ನಾಗಿಯೇ ಓದುತ್ತಾನೆಂಬುದು ಪ್ರಿಪರೇಟರಿ ಮತ್ತು ಟ್ಯೂಷನ್ ಗಳ್ ಪರೀಕ್ಷೆಗಳಲ್ಲಿ ತಿಳಿದಿದ್ದರಿಂದ ಅವನು ತಮಾಷೆ ಮಾಡುತ್ತಿದ್ದಾನೆಂಬುದು ಎಲ್ಲರಿಗೂ ತಿಳಿದ ಸತ್ಯ ಸಂಗತಿಯಾಗಿತ್ತು. ಕೊನೆಯ ದಿನ ಗಣಿತ ಪರೀಕ್ಷೆ ಇತ್ತು, ಆದಾದ ನಂತರ ಬಳಿಬಂದ ಸಂತೋಷ ಅದೇ ಡೈಲಾಗನ್ನು ರಿಪೀಟ್ ಮಾಡಿದ್ದ. ಅವನ ಮಾತಿಗೆ ಎಂದಿನಂತೆ ಗೇಲಿಮಾಡಿ
"ಇರ್ಲಿ ಬಿಡು ಮಗಾ ಸೆಪ್ಟಂಬರ್ ಇರೋದೇ ಅದ್ಕಲ್ವೇ?" ಎಂದು ರೇಗಿಸುತ್ತಾ ಫಸ್ಟ್ ಶೋ ಫಿಲಂಗೆ ಹೋಗುವುದು, ಎಲ್ಲರೂ ೪ ಗಂಟೆಗೆ ಥಿಯೇಟರ್ ಬಳಿ ಬರುವುದೆಂದು ನಿಷ್ಕರ್ಷಿಸಿ ಮನೆಯೆಡೆಗೆ ಸೈಕಲ್ ತುಳಿದೆವು. ಈಗಿನ ಹಾಗೆ ಆಗೆಲ್ಲಾ ಮೊಬೈಲ್ ಇರಲಿಲ್ಲ ಲ್ಯಾಂಡ್ ಲೈನೇ ಗತಿಯಾಗಿತ್ತು. ಮಧ್ಯಾನ್ಹ ಮೂರುಗಂಟೆಗೆ ಮತ್ತೊಬ್ಬ ಉಮಾಶಂಕರನ ಮನೆಗೆ ಹೋಗುವುದಕ್ಕೂ ಅವರ ಮನೆಯ ಫೋನ್ ರಿಂಗಣಿಸುದಕ್ಕೂ ಒಂದೇ ಆಯ್ತು. ಆದರೆ ಆ ರಿಂಗು ಸಂತೋಷನ ಸಾವಿನ ಸುದ್ದಿಯಾಗುತ್ತದೆಂದು ನಾವ್ಯಾರೂ ಭಾವಿಸಿರಲಿಲ್ಲ!!
    ಹೌದು!! ’ಗಣಿತ ಪರೀಕ್ಷೆಯಲ್ಲಿ ಸರಿಯಾಗಿ ಉತ್ತರಿಸಿಲ್ಲ, ಫೇಲಾದರೆ ಅಪ್ಪ ನನ್ನನ್ನು ಕೊಂದುಬಿಡುತ್ತಾರೆ ಅದರ ಬದಲು ನಾನೇ ಸಾಯುವುದು ಮೇಲೆಂದು ’ಬಗೆದು ಸಂತೋಷ ಶತಾಬ್ದಿ ರೈಲಿಗೆ ತಲೆಕೊಟ್ಟಿದ್ದ! ರುಂಡ ಚಿದ್ರಗೊಂಡ ದೇಹದಿಂದ ಮೈಲು ದೂರ ಬಿದ್ದಿತ್ತು!! ಅವನಪ್ಪನ ’ಸ್ಟಿಕ್’ನೆಸ್ ಅವನ ಪ್ರಾಣವನ್ನೇ ಬಲಿಯಾಗಿ ಪಡೆದಿತ್ತು!!
    ಆದರೆ ತಿಂಗಳ ನಂತರ ಬಂದ ಫಲಿತಾಂಶದಲ್ಲಿ ಸಂತೋಷ ಎಲ್ಲಾ ಪತ್ರಿಕೆಗಳಲ್ಲೂ ಡಿಸ್ಟಿಂಕ್ಶನ್ ನಲ್ಲಿ ಪಾಸಾಗಿದ್ದದ್ದು ಅವರಪ್ಪನ ಅಹಂಮ್ಮಿಗೆ ಸರಿಯಾದ ಗುದ್ದು ನೀಡಿತ್ತು.
ಆದರೆನು ಪ್ರಯೋಜನ!! ಕಾಲಮಿಂಚಿತ್ತು ಇದ್ದ ಒಬ್ಬ ಮಗ ಬಾರದ ಲೋಕಕ್ಕೆ ಹೋಗಿದ್ದ!!