ಗುರುವಾರ, ಏಪ್ರಿಲ್ 22, 2010

ಮೊಗೆದಷ್ಟು ಉಕ್ಕುವ ಕನ್ನಡದ ಪಿಸುಮಾತಿನ(ಬ್ಲಾಗು) ತಾಣಗಳು- ನಿಮಗಾಗಿ

ಈ ಹಿಂದೆ ಕನ್ನಡಿಗರಿಗಾಗಿ ಒಂದಿಷ್ಟು ಮತ್ತೊಂದಿಷ್ಟು ಪಿಸುಮಾತಿನ ತಾಣಗಳು (ಬ್ಲಾಗು ತಾಣಗಳು) ಮತ್ತು ನಿಮಗಾಗಿ ಕನ್ನಡಿಗರ ಬ್ಲಾಗ್ ವಿಳಾಸಗಳು ಎರಡು ಮಾಲಿಕೆಗಳಲ್ಲಿ ಕನ್ನಡ ಬ್ಲಾಗ್ ತಾಣಗಳ ಮಾಹಿತಿ ನೀಡಿದ್ದೆ. ಆಗ ತಾಣಗಳ ಹೆಸರನ್ನಷ್ಟೇ ಹಾಕಿದ್ದೆ. ಈ ಬಾಅರಿ ಮತ್ತೊಂದಿಷ್ಟು ಹೊಸ ಪಿಸುಮಾತಿನ ತಾಣಗಳೊಡನೆ ಅವುಗಳ ಕಿರುಪರಿಚಯದೊಂದಿಗೆ ಪ್ರಕಟಿಸುತ್ತಿದ್ದೇನೆ. ನಿಮಗೂ ಇಷ್ಟವಾಗಬಹುದು. ತಾಣಗಳಿಗೆ ಇಣುಕಿ ನೋಡಿ.



http://vimarshaki.wordpress.com ಮತ್ತು http://kshakirana.blogspot.com ಈ ೨ ಬ್ಲಾಗುಗಳು ಪತ್ರಿಕಾ ವಿಮರ್ಶೆಗೆ ಮೀಸಲಾಗಿವೆ. ಹೆಚ್ಚಾಗಿ ಪತ್ರಿಕಾವರದಿಗಳ ಕೈಗನ್ನಡಿಯಂತಿವೆ.



http://www.sallaap.blogspot.com ಸುನಾತ್ ರವರ ಈ ಬ್ಲಾಗ್ ನಲ್ಲಿ ವಸ್ತುನಿಸ್ಠ ಚಿಂತನಾ ಬರಹಗಳು ಮನಸ್ಸಿಗೆ ಹಿಡಿಸುತ್ತವೆ. http://gaduginabharata.blogspot.com ಹೆಸರೇ ಹೇಳುವಂತೆ ಗದುಗಿನ ಭಾರತವನ್ನು ವಿದ್ಯುನ್ಮಾನ ಮಾಧ್ಯಮದಲ್ಲಿ ಅಳವಡಿಸುವ ಅಚಲ ಪ್ರಯತ್ನ ಈ ತಾಣದ್ದು.



ನೀವೇನಾದರೂ ಅಶೋಕ್ ರವರ http://ashok567.blogspot.com/ ಈ ತಾಣವನ್ನು ನೋಡದೇ ಉಳಿದು ಬಿಟ್ಟರೆ, ನಿಮಗೆ ಮಾಹಿತಿ ತಂತ್ರಜ್ನಾನದ ಆಗು ಹೋಗುಗಳು ದೊರಕದೇ ಹೋದಾವು?



ಅನ್ನಪೂರ್ಣ ದೈತೋಟ ರವರ ಈ http://nannakhajaane.blogspot.com ಬ್ಲಾಗ್ ಭಾವನೆಗಳ ಖಜಾನೆಯೇ ಸರಿ. ಶೇ-ಪು ರವರ http://timepass-kadlekaayi.blogspot.com ಈ ತಾಣ ಬರೀ ಟೈಮ್ ಪಾಸ್ ಗಷ್ಟೇ ಅಲ್ಲ ಮನಕ್ಕೂ ಮುದ ಗ್ಯಾರಂಟಿ. http://antharangadamaathugalu.blogspot.com ಅಂತೂ ಅಂತರಂಗದ ಮಾತುಗಳು ..... ಅಂತರಂಗದಾ ಮೃದಂಗ ಅಂತು ತೋಂತನಾನ..........



ವಿ ಆರ‍್ ಭಟ್ಟರ http://nimmodanevrbhat.blogspot.com ಈ ತಾಣ ಕಾವ್ಯಗಳ ಕಜ್ಜಾಯಗಳನ್ನು ಉಣಬಡಿಸುತ್ತದೆ. ಕನ್ನಡದ ಪುಸ್ತಕಗಳ ಬಗ್ಗೆ ವಿಶಿಷ್ಠ ಮಾಹಿತಿ ನೀಡುವ ಪುಸ್ತಕ ಮತ್ತು ಅದರ ಪ್ರೀತಿಯನ್ನು ಹಂಚುವ ಆಸೆ ಹೊತ್ತವರ ‘ಒನ್ ಸ್ಟಾಪ್ ಶಾಪ್ http://pusthakapreethi.wordpress.com ಇದು. ಪುಸ್ತಕಗಳ ಸೊಗಸಾದ ವಿಮರ್ಶೆ,ಇತ್ತೀಚಿಗೆ ಪ್ರಕಟವಾದ, ಪುಸ್ತಕಗಳ ಪರಿಚಯ ಈ ಎಲ್ಲಾ ಸಮಗ್ರ ಮಾಹಿತಿಗಳು ಇಲ್ಲಿ ಲಭ್ಯ.ಒಂದು ಉತ್ತಮ ಡಾಕ್ಯುಮೆಂಟರಿಯೇ ಸರಿ.



ಇನ್ನು ಹಾಸನದ ಸುಬ್ರಹ್ಮಣ್ಯ ರವರು "ತಮ್ಗನ್ಸಿದ್ದನ್ನ ಹೇಳ್ಬಿಡಿ" ಎನ್ನುತ್ತಾ http://subrahmanyabhat.blogspot.com ಎಂಬ ಸುಂದರ ತಾಣ ನೀಡಿದ್ದಾರೆ..ಭೇಟಿ ಕೊಡಿ.



http://anil-ramesh.blogspot.com ಅನಿಲ್ ರಮೇಶ್ ರವರ ಈ ತಾಣ ತನ್ನ ಕಪ್ಪು ಬಿಳುಪು ವಿನ್ಯಾಸದಿಂದ ಮನತಣಿಸುವುದಷ್ಟೇ ಅಲ್ಲದೆ, ಸೊಗಸಾದ ಲೇಖನಗಳನ್ನು ಬಚ್ಚಿಟ್ಟುಕೊಂಡಿದೆ.



ಬೆಂಗಳೂರಿನ ವಿನುತ ರವರ http://vinuspeaks.blogspot.com/ ಅಂತು ಮನಸ್ಸಿಗೆ ಹತ್ತಿರವಾಗುವುದರಲ್ಲಿ ಅನುಮಾನವೇ ಇಲ್ಲ. http://avadhi.wordpress.com ಕನ್ನಡ ವಿವಿಧ ಲೇಖಕರು ಬರೆಯುವ ಸೊಗಸಾದ ಲೇಖನಗಳ ಸಂಗ್ರಹ.



http://www.baraha.com/kannada/index.php ಬರಹ ತಂತ್ರಾಂಶ ರವರ ಈ ತಾಣ ವಿದ್ಯುನ್ಮಾನದ ಕನ್ನಡ ಪದಕೋಶ.



ಪೂಜೆ ಪುನಸ್ಕಾರಗಳನ್ನು ಹೇಗೆ ಮಾಡಬೇಕೆಂಬ ಮಾಹಿತಿ ಬೇಕೆ? ಹಾಗಿದ್ದರೆ http://poojavidhana.blogspot.com ಗೆ ತಪ್ಪದೇ ಭೇಟಿಕೊಡಿ.



ಹೂವು ನೀಲಿ, ನಾನು ಮಾಲಿ ಎನ್ನುತ್ತಾ ಕಾವ್ಯ ಕನ್ನಿಕೆಯನ್ನು ತೆರೆದಿಡುವ http://neelihoovu.wordpress.com ಈ ತಾಣ ರಂಜಿತ್ ಅಡಿಗರದ್ದು. ಇನ್ನು ಜಿತೇಂದ್ರ ಕಶ್ಯಪ್ ರವರ್ http://hindumane.blogspot.com ನಲ್ಲಿ ಮಲೆನಾಡಿನ ಹಳ್ಳಿಗಳ ಪ್ರಸ್ತುತ ಸಾಮಾಜಿಕ ಸ್ಥಿತಿಯನ್ನು ಕಾಣಬಹುದು.



ಡಿ.ವಿ.ಜಿ ಯವರ ಮಂಕುತಿಮ್ಮನ ಕಗ್ಗವನ್ನು ಅಮೇರಿಕಾದಲ್ಲಿದ್ದುಕೊಂಡೇ ಅರೆದು ಕುಡಿಯುತ್ತಿರುವ http://todayskagga.blogspot.com ವೆಂಕಟೇಶ ಮೂರ್ತಿಯವರದ್ದು.



ಇನ್ನು ನಮ್ಮ ವಿಸ್ಮಯನಗರಿಗ ಶಿವಮೊಗ್ಗದ ಇಸ್ಮಾಯಿಲ್ ಅಣ್ಣನವರ ಈ http://ismailmkshivamogga.blogspot.com ತಾಣ ಸಿಂಪ್ಲಿ ಸೂಪರ್ ಬ್.. ಓದಿನ ಹಸಿವಿರುವ ನರೇಂದ್ರ ಪೈಗಳ ಈ http://narendrapai.blogspot.com ಹೊಸ ಪುಸ್ತಕಗಳ ಚುಟುಕು ವಿಮರ್ಶೆಯಲ್ಲಿ ಎತ್ತಿದ ಕೈ. ಬಿಸಿಲಿಗೂಬದುಕಿಗೂ ಒಂದು ರೀತಿಯ ಗಾಢ ಸಂಬಂಧವಿದೆ.



ಜೀವ ಸಂಕುಲಕ್ಕೆಲ್ಲ ಬಿಸಿಲು ಬೇಕು ಎನ್ನುತ್ತಾ ಬಿಸಿಲ ಪ್ರಿತಿಯುಳ್ಳ ಇಂಗ್ಲೀಶ್ ಪ್ರಾಧ್ಯಾಪಕ ಉದಯ್ ಇಟಗಿಯವರ ಕನ್ನಡ ಪ್ರೀತಿ http://bisilahani.blogspot.com ನಲ್ಲಿ ಸೊಗಸಾಗಿ ದಾಖಲಾಗಿದೆ.



ದೇವರನ್ನೇ ಮರೆತು ಹೋಗಿರುವ ಕಾಲದಲ್ಲಿ ಯಾರನ್ನಾದರೂ "ದೇವರನಾಮ ಹಾಡಿ, ಹಸೆ ಹಾಡು ಹೇಳಿ" ಎಂದರೆ ದಿಕ್ಕೇ ತೋಚದಂತಾಗಬಹುದು. ಅವರು http://bhakthigeetha.blogspot.com ತಾಣಕ್ಕೆ ಭೇಟಿ ಕೊಟ್ಟರೆ ಎಲ್ಲವನ್ನೂ ಕಲಿಯಬಹುದು. ಸರ್ವಜ್ನ ಮೂರುತಿಯ ವಚನಗಳು ತಕ್ಷಣಕ್ಕೆ ಬೇಕೆ? http://sarvagnana-vachanagalu.blogspot.com ಇಲ್ಲಿಗೆ ಭೇಟಿ ಕೊಟ್ಟರೆ ಸಿಕ್ಕೇ ಸಿಗುತ್ತವೆ.



ಕನ್ನಡದ ಎಲ್ಲಾ ಸಿನಿಮಾ ಹಾಡುಗಳು ಬೇಕೆ? http://anuzlalaland.blogspot.com/ ಗೆ ತಪ್ಪದೇ ಭೇಟಿಕೊಡಿ.



http://aravindh-rao.blogspot.com ಮತ್ತು http://accounts-information.blogspot.com ಈ ಎರಡೂ ತಾಣಗಳ ಒಡೆಯರು ನಮ್ಮ ವಿಸ್ಮಯನಗರಿಗರೇ ಆದ ಅರವಿಂದರಿಗೆ ಸೇರಿದವು ಮೊದಲ ತಾಣ ಕವನ ಕಥೆಗಳನ್ನು ಕೊಟ್ಟರೆ ೨ನೇ ತಾಣ ತಾವು ಹೇಗೆ ತೆರಿಗೆ ಉಳಿಸಬಹುದೆಂಬ ಮಾಹಿತಿ ನೀಡುತ್ತದೆ. www.kannadavoice.blogspot.com ಇದು ನಮ್ಮ ಮತ್ತೊಬ್ಬ ವಿಸ್ಮಯನಗರಿಗ ಶಫೀರ್ ರವರ ಆತ್ಮಸಾಕ್ಷಿಯ ತಾಣ.



ಈ ಲೇಖನ ಪ್ರಕಟಿಸಿದ ನಂತರ ಮಿತ್ರರಾದ ವಿನಯ್ - ಜಿ ರವರು ಹೊಸದೊಂದು ತಾಣದ ಲಿಂಕ್ ನೀಡಿದ್ದಾರೆ. http://www.indiblogger.in/languagesearch.php?pageNum_Recent=0&totalRows_Recent=70&lang=kannada ಇದರಲ್ಲಿ ಕನ್ನಡದ ಎಲ್ಲರೀತಿಯ ನವರಸ ತಾಣಗಳ ಲಿಂಕ್ ಗಳು ಸಿಕ್ಕುತ್ತವೆ, ತಪ್ಪದೇ ನೋಡಿ, ಅತ್ಯುತ್ತಮ ಮನರಂಜನೆ ಮತ್ತು ಮೆದುಳಿಗೆ ಮೇವು ಗ್ಯಾರಂಟಿ.



ಒಂದೇ ಎರಡೇ ಮೊಗೆದಷ್ಟು ಉಕ್ಕುವ ಸಮುದ್ರದಂತೆ ಕನ್ನಡ ಪಿಸುಮಾತಿನ ತಾಣಗಳು ಉಕ್ಕಿ ಉಕ್ಕಿ ಬರುತ್ತವೆ. ಹೆಕ್ಕಿ ಓದಲು ನೀವು ನಾವು ತಯಾರಿರಬೇಕಷ್ಟೇ ಅಲ್ಲವೇ?

ಮತದಾನ ಕಡ್ಡಾಯ ಸಧ್ಯ ಪ್ರಸ್ತುತವೇ........?

ಪರೀಕ್ಷಾ ಸಮಯದಲ್ಲಿ ಓದಲು ವಿದ್ಯಾರ್ಥಿಗಳಿಗೆ ವಿದ್ಯುತ್ ಇಲ್ಲ, ಏರಿದ ಬೆಲೆಗಳು ಕೆಳ ಬರುವ ಸೂಚನೆಗಳೇ ಇಲ್ಲ, ರಣ ಬಿಸಿಲು ನೆತ್ತಿ ಸುಡುತ್ತಾ ಅಂತರ್ಜಲವನ್ನೇ ಅಂತಾರ್ಧನ ಮಾಡಿ ನಾಲಗೆಯ ಪಸೆ ಇಂಗಿಸಲೂ ಬಿಡುವಿಲ್ಲದ ಸರ್ಕಾರ.



ಪಾಪ! ಅದು ತಾನೆ ಏನು ಮಾಡೀತು!!?



ಚುನಾವಣೇ ಮೇಲೆ ಚುನಾವಾಣೇ ಮೇಲೆ ಚುನಾವಣೆ ಬರುತ್ತಲೇ ಇವೇ. ಸ್ಥಳಿಯ ಸಂಸ್ಥೆಗಳಿಗಾಯ್ತು, ಬಿ ಬಿ ಎಂ ಪಿ ಬಂತು. ಗ್ರಾಮಪಂಚಾಯ್ತಿ ಚುನಾವಣೆಗೆ ಅಧಿಸೂಚನೆ ಬಂದಾಯ್ತು ಮುಗಿಯುತ್ತಿದ್ದಂತೆ ಪದವೀಧರ ಕ್ಷೇತ್ರ, ನಂತರ ಜಿಲ್ಲಾ ಪಂಚಾಯ್ತಿ, ತದನಂತರ ವಿಧಾನಸಭೆ, ಲೋಕಸಭೆ...... ಹನುಮಂತನ ಬಾಲದಂತೆ, ಒಂದಕ್ಕೊಂದು ಜೋಡಿಸಿಕೊಂಡು ಬರುವ ಗೂಡ್ಸ್ ರೈಲುಗಾಡಿಯ ಹಾಗೆ ಚುನಾವಣೆಗಳು ಬರುತ್ತಲೇ ಇರುತ್ತವೆ.



ಇದರಿಂದ ಯಾರಿಗೆ ಲಾಭ!!? ಮರಿಪುಡಾರಿಗಳಿಗೆ ಜೇಬಿನ ತುಂಬಾ ದುಡ್ಡೋ ದುಡ್ಡು! ಕುಡಿಯುವ ಕುಡುಕರಿಗೆ ಕೞಭಟ್ಟಿ! ಓಟಿಗೊಂದು ನೋಟು! ಪಾಪ!! ನಮ್ಮನಿಮ್ಮಂತವರ ಪಾಲಿಗೆ ಹೊಸಬಾಟಲಿಯಲ್ಲಿ ಬರುವ ಅದೇ ಈಡೇರಿಸಲಾಗದ ಹಳೇ ಭರವಸೆಗಳು!! ಇದಕ್ಕೇನು ಪರಿಹಾರ? ಇವೆಲ್ಲ ಸಮಸ್ಯೆಗಳ ಮೂಲ ಯಾವುದು? ಕಾರಣಕರ್ತರಾರು? ಹೀಗೆ ಮೂಲ ಹುಡುಕುತ್ತಾ ಹೊರಟರೆ ಎಲ್ಲಾ ಬೆಟ್ಟುಗಳು ಜನಸಾಮಾನ್ಯರಾದ ನಮ್ಮೆಡೆಗೆ!! ಎನ್ನುವುದೂ ಎಲ್ಲರೂ ಸಹ ಒಪ್ಪಲೇಬೇಕಾದ ಸತ್ಯ!!



ಅದು ಹೇಗೆ? ನಾವು ಆರಿಸಿ ಕಳುಹಿಸಿದ ಜನಪ್ರತಿನಿಧಿಗಳು ಸರಿಯಾಗಿ ಕೆಲಸ ಮಾಡದೇ ಇದ್ದದ್ದು ಅವರ ತಪ್ಪಲ್ಲವೇ? ಎಂದು ನಾವು ಪ್ರತಿ ಪ್ರಶ್ನೆ ಹಾಕುವ ಮುನ್ನ ನಾವು ಸರಿಯಾದ ನಾಯಕರನ್ನು ಆರಿಸಿದ್ದೇವೆಯೇ? ಎಂಬ ಮತ್ತೊಂದು ಪ್ರಶ್ನೆ ಹರಿತವಾದ ಕುಡುಗೋಲಿನಂತೆ ತಯಾರಗಿರುತ್ತದೆ.



ಸದ್ಯ ಈ ಚಿಂತನೆಗೆ ಕಾರಣ ಈಗತಾನೆ ಮುಗಿದ ಬೃ, ಬೆಂ, ಮ ಪಾ, ಚುನಾವಣೆಯಲ್ಲಿ ಚಲಾವಣೆಯಾದ ಶೇಕಡಾವಾರು ಮತಗಳು. ಅದೂ ಶೇ ೪೪ ಮಾತ್ರ. ಯಾವುದೇ ಒಂದು ಜನಪ್ರತಿನಿದಿಗಳ ಸಭೆಯ ಅಧಿಕಾರ ಹಿಡಿಯಬೇಕಾದರೆ ಶೇಖಡ ೫೧ಕ್ಕಿಂತಾ ಜಾಸ್ತಿ ಸೀಟುಗಳು ಬರಬೇಕೆಂಬ ಕಾನೂನು ಇದೆ. ಹಾಗಿರುವಾಗ ಕೇವಲ ಶೇ ೪೪ರಷ್ಟು ಮತ ಚಲಾವಣೆಯಾಗಿರುವ ಈ ಚುನಾವಣೆ ನಿಜವಾಗಿಯೂ ಸಿಂಧುವೇ? ಈಗ ಚುನಾಯಿತ ಪ್ರತಿನಿದಿಗಳು ಇಡೀ ಬೆಂಗಳೂರಿಗರ ಪ್ರತಿನಿಧಿಗಳೇಗಾಗುತ್ತಾರೆ? ನಿಜಕ್ಕೂ ಚಿಂತಿಸಬೇಕಾದ ವಿಷಯವೇ..!!



"ಚುನಾವಣೆ ಬಂದರೇ ಸಾಕು ೪ ದಿನ ರಜಾ ಗ್ಯಾರಂಟಿ ಜೊತೆಗೆ ಬರೋ ಶನಿವಾರ ಮತ್ತು ಭಾನುವಾರ ಎಲ್ಲಾ ಸೇರಿದರೆ ಒಟ್ಟು ಒಂದುವಾರ ರಜ" ಎಂದು ಯೋಚಿಸುವ ಅಧಿಕಾರಿ ಮತ್ತು ಕಾರ್ಮಿಕ ವರ್ಗ,



"ಯಾರಿಗೆ ಓಟುಹಾಕಿ ಯಾರನ್ನು ಉದ್ದಾರಮಾಡಿದರೇನು? ನಾವು ಮಣ್ಣು ಹೊರುವುದು ತಪ್ಪುತ್ತದೆಯೇ?" ಎಂದು ಸಹಜ ಪ್ರಶ್ನೆಯನ್ನೇ ಕೇಳುವ ಕೂಲಿ ಮಾಡಿ ಹೊಟ್ಟೆಹೊರೆವ ಶ್ರಮಜೀವಿಗಳು.



"ಯಾರಿಗೆ ಮತ ಹಾಕಿದ್ರೂ ನಮ್ಮ ದೇಶದ ಮತ್ತು ನಮ್ಮ ಪರಿಸ್ಥಿತಿ ಇಷ್ಟೇ?!!" ಎನ್ನುವ ಸಿನಿಕವರ್ಗ ಮತ್ತೊಂದೆಡೆಯಿಂದಾಗಿ ಇಷ್ಟು ಕಡಿಮೆ ಮತದಾನವಾಗಿದೆಯೆಂದು ವಿಶ್ಲೇಷಿಸಬಹುದು. ಇದರಿಂದ ಲಾಭವಾಗಿದ್ದು ಅದೇ ದುಡ್ಡುೞುವರಿಗೆ, ಅದೇ ರೌಡಿ ಹಿನ್ನೆಲೆಯೂೞವರಿಗೆ.



ಈ ರೀತಿ ಯೋಚಿಸಿ ನಮ್ಮ ಜವಾಬ್ದಾರಿಯಿಂದ ನುಣುಚಿಕೊೞುವವರು ಯಾವುದೇ ತೊಂದರೆಗಾಳಾದಾಗ ಪ್ರತಿಭಟಿಸಲು ಮುಂದಿನ ಸಾಲಿನಲ್ಲೇ ನಿಂತಿರುತ್ತಾರೆ. ಅವರಿಗೆ ಪ್ರತಿಭಟಿಸುವ ನೈತಿಕ ಹಕ್ಕಾದರೂ ಇದೆಯೇ? ಎಂದೂ ಸಹ ಯೋಚಿಸುವುದಿಲ್ಲ. ಎಲ್ಲವನ್ನೂ ಕೇಳುವುದರಲ್ಲಿ, 'ನ್ಯೂಸೆನ್ಸ್' ಚಾನಲ್ ಗಳಲ್ಲಿ ಮುಖ ತೋರಿಸುವುದರಲ್ಲೂ ಸಹ ಮುಂದು.



ಇವರಿಗೆ ಬೇಕಾದ ನಾಯಕನಿಗೆ ಮತ ಹಾಕಿ ಅವನನ್ನು ಚುನಾಯಿಸಿದ್ದರೇ ಒೞೆಯದಾಗುತ್ತಿತ್ತೋ ಏನೋ? ಎನ್ನುವ ಆಶಾಭಾವನೆಗಾದರೂ ಮತದಾನ ಕಡ್ಡಾಯಗೊಳಿಸಬೇಕಾಗಿದೆ, ಹಾಗೂ ಇದರ ಆಗು ಹೋಗುಗಳನ್ನು ಚಿಂತಿಸಬೇಕಾಗಿದೆ.



ಮೊದಲನೆಯ ತೊಡಕು ಸಂವಿದಾನದ ತೊಡಕು ವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಮುಂದಿಟ್ಟುಕೊಂಡು ನಮ್ಮ ಪ್ರಗತಿಪರರು ಕೂಗಾಡಬಹುದು.



ಕಡ್ಡಾಯ ಮಾಡಿದರಷ್ಟೇ ಸಾಲದು, ಮತಹಾಕದವರಿಗೆ ಶಿಕ್ಷೆಯ ಪ್ರಮಾಣವೂ ಇರಬೇಕು, ಇದು ಮತ್ತಷ್ಟು ವಿವಾದಕ್ಕೆಡೆಮಾಡುವುದೂ ಸಹ ಖಂಡಿತಾ.



ಹೊಟ್ಟೆಪಾಡಿಗಾಗಿ ಸರ್ಕಾರಿ ಕೆಲಸವೋ ಖಾಸಗಿ ಕಂಪನಿಗಳಲ್ಲೋ ಕೆಲಸಕ್ಕಾಗಿ ಪರಊರುಗಳಲ್ಲಿರುವವರು ಈ ಕಾನೂನಿಂದಾಗಿ ಬಹಳವೇ ತೊಂದರೆಗೊಳಗಾಗುವ ಸಾಧ್ಯತೆಯೇ ಹೆಚ್ಚು. ಅಲ್ಲದೇ ರೋಗಿಗಳು, ರೋಗಿಗಳ ಪೋಷಕರೂ ಈ ಕಾಯ್ದೆಯಿಂದ ತೊಂದರೆಗೊಳಗಾಗಬಹುದು.



ಒಟ್ಟಿನಲ್ಲಿ ಮೇಲಿನ ಮತ್ತಿತರ ತೊಡಕುಗಳಿಗೆ ಮೊದಲೇ ಸಾರ್ವಜನಿಕವಾಗಿ ಚರ್ಚಿಸಿ ಕಾಯಿದೆ ರೂಪಿಸಿದರೆ ಒಂದು ಒೞೆಯ ಕಾಯ್ದೆಯ ಜೊತೆಗೆ ಸಮಾಜಕ್ಕೂ ಒಳಿತಾಗಬಹುದೆಂಬ ಆಶಯ.



ಯಾರು ಯಾರಿಗಾದರೂ ಮತಹಾಕಲಿ ಅದು ಬೇರೆಯ ಪ್ರಶ್ನೆ ಒಟ್ಟಿನಲ್ಲಿ ಮತದಾನ ಕಡ್ಡಾಯವಾದರೆ ಹಣದ ಮದದಿಂದ ತೋಳ್ಬಲದಿಂದ ಚುನಾಯಿತರಾಗುತ್ತಿರುವ ರೌಡಿ ರಾಜಕಾರಣಕ್ಕೆ ಸ್ವಲ್ಪವಾದರೂ ಕಡಿವಾಣ ಬಿದ್ದು ಕೆಲವರಾದರೂ ಉತ್ತಮ ರಾಜಕಾರಣಿಗಳನ್ನು ರೂಪಿಸಲು ಸಹಾಯವಾಗುತ್ತದೆ ಎನ್ನುವುದು ನನ್ನ ಅನಿಸಿಕೆ.



ಅದಕ್ಕಾದರೂ ಮತದಾನವನ್ನು ಕಡ್ಡಾಯ ಮಾಡಲೇಬೇಕೆನಿಸುತ್ತದೆ ಅಲ್ಲವೇ?

ಅಪ್ಪ ಹಾಕಿದ ಆಲ...

ಮೂಡಲದ ಕಲ್ಲು ತಿಟ್ಟಿನ



ಕಡೇವಲದ ಕೆಂಪು ದಿಬ್ಬದ ಮೇಲಿದೆ



ನಮ್ಮಪ್ಪ ಹಾಕಿದ ಆಲ



ಬೃಹದಾಕಾರ ಬಹಳ ಬಹಳ ವಿಶಾಲ!!



ಹಿಮ ಪರ್ವತದ ಜಡೆಮುನಿಯ ಹಾಗೆ



ಜೋತುಬಿದ್ದ ಬಿಡುಬೀಸು ಬೀಳುಗಳು



ಜಗದನುಭವದ ತಿರುಳ ಎಳೆಗಳು!!



ಗೂಡು ಕಟ್ಟಲು ಹಕ್ಕಿಗಳ ಅರಚಾಟ



ಎಲೆಯಮೇಯಲು ಕುರಿ ಮೇಕೆಗಳ ಮೇಲಾಟ!!



ಇಂತಿಪ್ಪ ಮರದ ನೆಳಲ ಒಳಗೆ



ಸೂರ್ಯ ಜಾರಿ ಮೈ ಮರೆಯುವಮುನ್ನ



ಸೋಲು, ಹತಾಶೆಯ 'ಹ್ಯಾಪು' ಮೋರೆ ಹಾಕಿ



ಪ್ರಾಣ ಹರಣಕೆ ನಿಂತೆ!!!



"ಮಗು!"



ಎಷ್ಟು ಕಕ್ಕುಲತೆಯ ಧನಿ!



ಚಿಂತೆಗೆ ಸಿಂಚಿಸಿತು ಮಂಜಿನ ಮಳೆಹನಿ!!



ಶಿರವೆತ್ತಿ ನೋಡಿದೆ!!



''ನಿಮ್ಮಪ್ಪ ನನ್ನನ್ನು ಬೆಳೆಸಿದ್ದು ನಿನ್ನ ನೆರಳಿಗೆ!!



ಕೊರಳಿಗಲ್ಲ!!"



ಮನದ ಮೂಲೆಯಲಿ ಇಬ್ಬಗೆಯ ತಾಕಲಾಟ!



ತೋಚದ ತೊಳಲಾಟ!!



"ಚಿತೆಯೇರಲು ದಾರಿ ಬರಿ ನೂರು!



ಬದುಕ ಬಂಡಿಯೆಳೆಯಲು ಸಹಸ್ರಾರು,



ಸೋತೆನೆಂದು ಕುಗ್ಗಬೇಡ



ಗೆಲ್ಲಿಸಿದವರನು ತೊರೆಯಬೇಡ!!



ಪ್ರಯತ್ನದ ಫಲ ನಿನಗುಂಟು!"



ಕಾಣದ ಜಾಗದಲ್ಲಿ ಬೀಡು ಬಿಟ್ಟಿದ್ದ



ಸಾವೆಂಬ ಪದ, ನನ್ನೊಳಗಣ ತಾಮಸಿಯ ತಮವನ್ನು



ನಮ್ಮಪ್ಪಹಾಕಿದ ಆಲ!!



ತೊಳೆದು ಓಡಿಸಿತ್ತು!!

ಯಶಸ್ಸಿನ ನಶೆ.............

ಘಟನೆ -೧
ಸುಮಾರು ೨೦೦೨-೨೦೦೩ ನೇ ಇಸವಿಯ ಮಧ್ಯಭಾಗದಲ್ಲಿ ಕಾರ್ಯ ನಿಮಿತ್ತ ಬೆಂಗಳೂರಿಗೆ ಹೋಗಿದ್ದೆ. ಮೀಟಿಂಗ್ ಮುಗಿದ ನಂತರ ನಮ್ಮ ಬ್ಯಾಗುಗಳನ್ನು ಹೋಟೆಲ್ ಲಾಡ್ಜ್ ನಲ್ಲಿ ಇಟ್ಟು ಸ್ನೇಹಿತರೊಡನೆ ತಿರುಗಲು ಹೊರಟೆ. ತ್ರಿಭುವನ್ ಥಿಯೇಟರ್ ಬಳಿ ಬಂದಾಗ
"ಲೋ ಉಮಾ!!.....ಲೋ!!...."ಎಂದು ಯಾರೋ ಕೂಗಿದಂತಾಯ್ತು.




ಏನಾಶ್ಚರ್ಯ!!??!! ಕೆಲ ಧಾರಾವಾಹಿ ಮತ್ತಷ್ಟು ಚಲನಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಮುಖತೋರಿಸಿ ಪ್ರವರ್ಧಮಾನಕ್ಕೆ ಬರುತ್ತಿದ್ದ ನನ್ನ ಹೈಸ್ಕೂಲ್ ಸಹಪಾಠಿ...! ಅದೂ ಸುಮಾರು ೧೦ ವರ್ಷಗಳ ನಂತರ ಭೇಟಿಯಾಗುತ್ತಿದ್ದಾನೆ.
"ಓಹೋ....!!! ಏನ್ ಸರ್ ಸಮಾಚಾರ!! ಚೆನ್ನಾಗಿದೀರಾ..? ಕುಶಲೋಪರಿ ವಿಚಾರಿಸಿದೆ.
"ಏಯ್! ಏನ್ಲಾ ಇದು? ಸರ್ರು ಗಿರ್ರು ಅಂತೆಲ್ಲಾ ಬಯ್ಯೋದ್ ಕಲ್ತಿದ್ದೀಯಾ?" ಎಂದು ಕೆಣಕಿದ
"ಏನೇ ಹಾದ್ರೂ ನೀನು ಸ್ಟಾರ್ರು ನಾವು ಬರೀ ಪ್ರೇಕ್ಷಕರು.." ನಾನೂ ಮಾತಿನಲ್ಲೇ ಕಾಲೆಳೆದೆ.
"ನೋಡಮ್ಮ ನಾವೆಷ್ಟೇ ಎತ್ತರಕ್ಕೋದ್ರು ನಮ್ಮೋರು ನಮ್ಮತನವನ್ನ ಯಾವತ್ತಿಗೂ ಮರೀಬಾರ್ದು, ಅನ್ನೋದು ನನ್ನ ಪ್ರಿನ್ಸಿಪಲ್. ಕಾಫಿ ...?" ಎಂದ ಥೇಟ್ ಸಿನಮಾ ಸ್ಟೈಲ್ ನಲ್ಲಿ. ಬಹಳ ಖುಷಿಯಾಯ್ತು ಅವನ ಮಾತುಗಳನ್ನು ಕೇಳಿ. ಕಾಫಿ ಸಮಾರಾಧನೆಯ ಜೊತೆಗೆ ನನ್ನ ಸಹೋದ್ಯೋಗಿಗಳಿಗೂ ಅವನನ್ನು ಪರಿಚಯಿಸಿದೆ. ಹೈಸ್ಕೂಲ್ ನಲ್ಲಿ ಜೊತೆಜೊತೆಗೆ ನಾಟಕಗಳನ್ನು ಆಡಿದ್ದು, ನಂತರ ಕಾಲೇಜಿನ ಕ್ಯಾಂಟೀನಿನಲ್ಲಿ ಕದ್ದು ಜೊತೆಯಾಗಿ ಸಿಗರೇಟ್ ಸೇದಿದ್ದು.... ಇತ್ಯಾದಿ ಗಳನ್ನು ಮೆಲುಕು ಹಾಕುತ್ತಾ ಸ್ನೇಹಿತರೊಡನೆ ಬೀಳ್ಕೊಟ್ಟು ಹೊರಟುಬಂದೆ. ನಂತರ ಬೆಂಗಳೂರಿಗೆ ಹೋದಾಗ ಆಗಾಗ ನಮ್ಮ ಭೇಟಿಯಾಗುತ್ತಿತ್ತು. ಈಗ್ಗೆ ಸುಮಾರು ೪ ವರ್ಷಗಳಿಂದೀಚೆಗೆ ಆಗಿರಲಿಲ್ಲ
ಮೊನ್ನೆ ಸುಮಾರು ೧೫ ದಿನಗಳ ಕೆಳಗೆ ಮೈಸೂರಿನಲ್ಲಿ ಯಾವುದೋ ಡಾಕ್ಟರ್ ಬಳಿ ಕಾಯುತ್ತಾ ಕುಳಿತಿದ್ದೆ. ಅರೆ! ಅವನೆ ಅದೂ ೪ ವರ್ಷಗಳ ನಂತರ ಜೊತೆಯಲ್ಲಿ ಅವನ ಶ್ರೀಮತಿ ಮತ್ತು ಒಂದು ಮುದ್ದಾದ ಮಗು. ಈಗಂತೂ ಕನ್ನಡ ಚಿತ್ರರಂಗದ ಪ್ರಮುಖ ಪೋಷಕ ಪಾತ್ರಗಳಲ್ಲಿ ಇವನು ಇರಲೇಬೇಕು ಎನ್ನುವಷ್ಟು ಜನಪ್ರಿಯತೆ!
ಸುತ್ತಮುತ್ತಲೂ ಇತರೆ ಕಂಪನಿಗಳ ಪ್ರತಿನಿಧಿಗಳು ನನ್ನ ಹಾಗೆ ವೈದ್ಯರ ಭೇಟಿಗೆ ಕಾಯುತ್ತಾ ಕುಳಿತಿದ್ದರು. ಈಗ ಇಂತಾ ಜನಪ್ರಿಯ ನಟನನ್ನು ಮಾತನಾಡಿಸಿದರೆ ಅವರೆಲ್ಲರ ಮುಂದೆ ನನ್ನ "ತೂಕ" ಇನ್ನು ಹೆಚ್ಚಬಹುದೆನ್ನಿಸಿತು. ಎಷ್ಟೇ ಆಗಲಿ ನಾನೂ ಸಹ ಸಾಮಾನ್ಯ ಮಾನವ ಹಾಗೆ ಯೋಚನೆ ಬಂದಿದ್ದರಲ್ಲಿ ತಪ್ಪೇನು ಇಲ್ಲವೆನಿಸಿತು. ತತ್ ಕ್ಷಣ ಅವನ ಮುಂದೆ ನಿಂತು
"ಹಾಯ್!!.. ಹೇಗಿದ್ದೀಯಾ?" ಎಂದೆ
ಎಲ್ಲರೂ ಆಶ್ಚರ್ಯದಿಂದ ನನ್ನೆಡೆಗೆ ನೋಡುತ್ತಿದ್ದರು! ನನ್ನೊಳಗಿನ ಅಹಂ ಮತ್ತಷ್ಟು ಬಲಿಷ್ಟವಾಯ್ತು.. ಕುತ್ತಿಗೆ ಪಟ್ಟಿ ನೀವುತ್ತಾ ಸ್ವಲ್ಪ ಅವನ ಹತ್ತಿರ ಹೋಗಿ
ಇನ್ನೊಮ್ಮೆ
"ಹಾಯ್.......!" ಎಂದೆ
ಆ ನಟ ನನ್ನೆಡೆಗೆ ತಿರುಗಿದ..
"...ಆ...ಆಹಾಯ್...!" ಬಹಳ ಪ್ರಾಯಾಸದಿಂದ, ಅಸಹ್ಯಭಾವದ ಧ್ವನಿ, ಅಪರಿಚಿತರೆಡೆಗೆ ನೋಡುವ ನೋಟ, ಆತನಿಂದ ನನ್ನೆಡೆಗೆ...???
"...ನಾನೂ.........!" ಮಾತು ಮುಂದುವರೆಸಲು ಪ್ರಯತ್ನಿಸಿದೆ...
"ನೀವ್ಯಾರೋ ಗೊತ್ತಾಗ್ಲಿಲ್ವಲ್ಲ?" ಮತ್ತದೇ ಧ್ವನಿ ಕೇಳಿ ಯಾರೋ ಎಕ್ಕಡದಿಂದ ಕೆನ್ನೆಗೆ ಬಾರಿಸಿದಂತಾಯ್ತು.
ತಕ್ಷಣ ಸಾವರಿಸಿಕೊಂಡೆ...
"....ಹಾ..ಹಾ..ಹಾಯ್..! ನೀವು '.......... ' ಅವರಲ್ವ?!? ಅದಕ್ಕೆ ಮಾತಾಡಿಸ್ದೆ ! ಸಾರಿ..!" ಅಂದೆ
"ಓಕೆ ! ಬಾಯ್!" ಅಂದವ ನನ್ನ ಪ್ರತಿಕ್ರಿಯೆಗೂ ಕಾಯದೆ ಸಂಸಾರದೊಡನೆ ಹೊರಟು ಹೋದ...



ಅದನ್ನೆಲ್ಲ ನೋಡುತ್ತಿದ್ದ ವೈದ್ಯರು ನಾನು ಒಳಹೋದ ನಂತರ



''ಏನ್ ಉಮಾ? ''........" ಅವರು ನಿಂಗೆ ಗೊತ್ತಾ?" ಅಂದರು. ಏನ್ ಹೇಳ್ಬೇಕು ಅಂತ ಒಂದು ಕ್ಷಣ ತಿಳೀಲಿಲ್ಲ....... ಆದರೂ ಸಾವರಿಸಿಕೊಂಡು



"ಅಯ್ಯೋ... ಅವರ್ಯಾಗೊತ್ತಿಲ್ಲಾ ಸರ್!! ಇಡೀ ಕರ್ನಾಟಕಕ್ಕೇ ಗೊತ್ತು......" ಅಂತ ಆ ವಿಷಯವನ್ನು ಹಾಗೆ ತೇಲಿಸಿ ನನ್ನ ಕೆಲಸ ಮುಗಿಸಿ ಹೊರ ಬಂದೆ.







ಘಟನೆ - ೨
ಮೊನ್ನಿನ ಶುಕ್ರವಾರ ಬೆಳ್ಳಂಬೆಳಗ್ಗೆ ವಾಕಿಂಗ್ ಮುಗಿಸಿ ಮನೆಗೆ ಬರುವಾಗ ದಾರಿಯಲ್ಲಿ ಸಿಕ್ಕಾಪಟ್ಟೆ ಜನ ಸೇರಿದ್ದರು. "ಏನಿದು? ಜನ ೭ ವರೆಯಾದ್ರೂ ಕೆಲ್ಸಾ ಕಾರ್ಯ ಬಿಟ್ಟು ಇಲ್ಲಿ ಜಮಾಯ್ಸಿದ್ದಾರಲ್ಲ" ಅಂತ ಹತ್ತಿರ ಹೋಗಿ ನೋಡಿದರೆ ಅಲ್ಲಿ ದುನಿಯಾ ವಿಜಯ್ ರವರು ನಟಿಸುತ್ತಿರುವ "ಕರಿ ಚಿರತೆ" ಚಿತ್ರದ ಚಿತ್ರೀಖರಣ!
ಕುತೂಹಲದಿಂದ ನಾನೂ ವೀಕ್ಷಿಸಲು ಜಂಗುಳಿಯಲ್ಲಿ ಒಬ್ಬನಾದೆ. ಯಾವುದೋ ಬೈಕ್ ಚೇಸಿಂಗ್ ದೃಷ್ಯದ ಚಿತ್ರೀಕರಣ.
ಮದ್ಯದಲ್ಲಿ ವಿಜಯ್ ಗೆ ಸ್ವಲ್ಪ ರೆಸ್ಟ್. ವಿಜಯ್ ರವರ ಬೆನ್ನ ಹಿಂದೆ ಎನ್ನುವಷ್ಟು ಸನಿಹದಲ್ಲೇ ನಿಂತಿದ್ದೆ.. ಅವರ ಎದುರಿಗೆ ಒಬ್ಬ ವ್ಯಕ್ತಿ ಜನರ ನಡುವೆ ಮುನ್ನುಗ್ಗಿ ಮುಂದೆ ಬರಲು ತಿಣುಕಾಡುತ್ತಿದ್ದ..
"ಹಾಯ್! ಏನ್ ಮಗ ..........ಗುರು ಸ್ವಲ್ಪ ಜಾಗ ಬಿಡ್ರಪ್ಪ ! ಅವರಿಗೆ.." ಅಂತ ತಮ್ಮ ಗಡುಸು ಧ್ವನಿಯಲ್ಲಿ ಹೇಳಿ ಆ ವ್ಯಕ್ತಿಯನ್ನು ತನ್ನೆಡೆಗೆ ಕರೆಸಿ ಮಾತನಾಡತೊಡಗಿದರು...
"ಎಷ್ಟು ವರ್ಷ ಆಯ್ತು ಮಗ ನಿನ್ನ ನೋಡಿ.. ಹೇಗಿದ್ದೀಯಾ?...." ಆ ಅಪರಿಚಿತನ ಹೆಗಲ ಮೇಲೆ ವಿಜಯ್ ರವರ ಆಪ್ತ ಅಪ್ಪುಗೆ... ಹಾಗೆ ಅವರಿಬ್ಬರ
ಮಾತು ಮುಂದುವರಿದಿತ್ತು. ಬಹುಶಃ ಅವರಿಬ್ಬರೂ ತಮ್ಮ ಫ್ಲ್ಯಾಶ್ ಬ್ಯಾಕ್ ಗೆ ಹೋಗಿರಬೇಕು.
ನನ್ನ ಮೆದುಳು ಈ ಹಿಂದಿನ ಘಟನೆಯನ್ನು ಮೆಲುಕುಹಾಕುತ್ತಾ...ಇತ್ತು
ಹಾಗೆ ಆ ನಟನ ಬದಲು ಯಶಸ್ಸಿನ ನಶೆಯೇರಿಸಿಕೊಳ್ಳದ ಈ ವಿಜಯ್ ನನ್ನ ಸ್ನೇಹಿತನಾಗಬಾರದಿತ್ತೇ? ಅನ್ನಿಸಿತು..
ಅಷ್ಟರಲ್ಲಿ ಮನೆ ತಲುಪಿದ್ದೆ...

ನಮ್ಮತನವನ್ನು, ನಮ್ಮ ಸಂಸ್ಕೃತಿಯನ್ನು ನಾವೇ ಹೀಯಾಳಿಸಿಕೊಂಡರೆ ಅದು ಪ್ರಗತಿಪರ ಚಿಂತನೆಯೇ?

ಏನೂ?!!?? ನನಗೂ ಗೊತ್ತಾಗುತ್ತಿಲ್ಲ. ಅದರಲ್ಲೂ ಗೋಹತ್ಯೆ ನಿಷೇದ ಕಾಯ್ದೆ ಮಂಡಿಸುವ ಮೊದಲು ಮತ್ತು ವಿದೇಯಕದ ನಂತರ ನಮ್ಮ "ಪ್ರಗತಿಪರರು" ಮೈ ಪರಚಿಕೊಳ್ಳುವುದನ್ನು ನೋಡಿದರೆ ಹೀಗನ್ನಿಸುವುದೂ ನ್ಯಾಯವೇ. ಗೋಮಾಂಸವನ್ನು ಹೆಚ್ಚಾಗಿ ಇಷ್ಟಪಟ್ಟು ತಿನ್ನುತ್ತಿದ್ದ ಮುಸಲ್ಮಾನರೇ "ಬೇರೆಯವರ ಮನಸ್ಸಿಗೆ ನೋವಾಗುವುದಾದರೆ ನಮಗೆ ಅದರ ಮಾಂಸವೇ ಬೇಡ, ಬಿಡಿ" ಎಂದು ಸುಮ್ಮನಿರುವಾಗ ಮಧ್ಯದಲ್ಲಿ ಇವರ ಒಗ್ಗರಣೆ ಯಾಕೆ? ಅನ್ನುವುದು ಯಾವತ್ತಿಗೂ ಅರ್ಥವಾಗದಿರುವ ಯಕ್ಷ ಪ್ರಶ್ನೆ..



ಅಂದ ಮಾತ್ರಕ್ಕೆ ಈ ಕಾಯ್ದೆಯಲ್ಲಿ ಲೋಪಗಳೇ ಇಲ್ಲವೆಂದಲ್ಲ, ಈ ಹಿಂದೆ ಇದ್ದ ಕರ್ನಾಟಕ ಗೋಹತ್ಯಾ ನಿಷೇಧ ಮತ್ತು ಜಾನುವಾರು ಸಂರಕ್ಷಣಾ ವಿಧೇಯಕ-೧೯೬೪ ರ ಬದಲಿಗೆ ಈ ಹೊಸ ಮಸೂದೆ ಜಾರಿಗೆ ಬರಲಿದೆ. ೧೯೬೪ರ ಕಾಯಿದೆ, ಗೋಹತ್ಯೆಯನ್ನು ನಿಷೇಧ ಮಾಡಿದ್ದರೂ ೧೨ ವರ್ಷಕ್ಕೆ ಮೇಲ್ಪಟ್ಟ ಹಸು, ಎಮ್ಮೆ, ದನ, ಕೋಣ ಇನ್ನಿತರ ಜಾನುವಾ ರುಗಳನ್ನು ಕೊಲ್ಲಲು ಅವಕಾಶ ನೀಡಲಾಗಿತ್ತು. ಆದರೆ ಈ ಹೊಸ ಕಾಯಿದೆ ಹಸುಗಳನ್ನೂ ಒಳಗೊಂಡಂತೆ ಕರು, ಎತ್ತು, ಕೋಣ, ಎಮ್ಮೆ ಮತ್ತದರ ಕರು ಎಲ್ಲವನ್ನೂ ಜಾನುವಾರು ಎಂದೇ ನಿರ್ವಚನ ಮಾಡುತ್ತದಲ್ಲದೆ ಅವುಗಳ ಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸುತ್ತದೆ. ಪೊಲೀಸರ ಮತ್ತು ಸರ್ಕಾರದ ದ್ವೇಷ ರಾಜ ಕಾರಣ ಮತ್ತು ಆಡಳಿತವನ್ನು ನೋಡಿದವರಿಗೆ ಮಸೂದೆಯ ಈ ಅಂಶ ತಳಮಟ್ಟದಲ್ಲಿ ಪೊಲೀಸರಿಗೆ ಎಂಥಾ ಸರ್ವಾ ಧಿಕಾರವನ್ನು ಕೊಡುತ್ತದೆ ಎಂಬುದು ಗೊತ್ತಾಗುತ್ತದೆ. ಉದಾ ಹರಣೆಗೆ ‘ಅಪರಾಧ’ ಸಂಭವಿಸಿದೆ ಯೆಂದು ತನಿಖೆ ಮಾಡುವ ಅಧಿಕಾರಿಗೆ ಅಲ್ಲಿ ದನದ ಮಾಂಸದ ಬದಲಿಗೆ ಕುರಿ ಮಾಂಸ ಸಿಕ್ಕರೂ ಅದು ದನದ ಮಾಂಸವೆಂಬ ‘ಅನುಮಾನ’ದ ಮೇಲೆ ಬಂಧಿಸಬಹುದು. ಏಕೆಂದರೆ ಅದು ದನದ ಮಾಂಸವಲ್ಲ ಎಂದು ಸಾಬೀತಾಗಬೇಕಿರುವುದು ಕೋರ್ಟಿನಲ್ಲಿ!



ಈ ಮಸೂದೆ ರಾಜ್ಯದ ಎಲ್ಲಾ ರೈತರನ್ನೂ ಸಂಭವನೀಯ ಅಪರಾಧಿಗಳನ್ನಾಗಿಸುತ್ತದೆ. ಈ ಕಾಯಿದೆಯ ಸೆಕ್ಷನ್ (೮) ‘ಜಾನುವಾರುಗಳನ್ನು ಕೊಲ್ಲುವ ಉದ್ದೇಶದಿಂದ ಮಾರುವುದು, ಕೊಳ್ಳುವುದು, ಅಥವಾ ಪರಭಾರೆ ಮಾಡುವುದನ್ನು ನಿಷೇಧಿಸುತ್ತದೆ’. ಇದರ ಪ್ರಕಾರ ದನಗಳನ್ನು ಕೊಲ್ಲುವ ಉದ್ದೇಶಕ್ಕೆ ಮಾರಿದರೆ ಮಾತ್ರವಲ್ಲ, ಆ ದನಗಳನ್ನು ಕೊಲ್ಲುವ ಉದ್ದೇಶಕ್ಕೆ ಕೊಳ್ಳಲಾಗುತ್ತಿದೆ ಎಂದು ಗೊತ್ತಿದ್ದರೆ, ಅಥವಾ ದನಗಳನ್ನು ಕೊಲ್ಲಲೆಂದೇ ಕೊಳ್ಳಲಾಗುತ್ತಿದೆ ಎಂದು ನಂಬುವ ಕಾರಣವಿದ್ದೂ ಮಾರಿದರೆ ಅವರನ್ನೂ ಸಹ ಈ ಮಸೂದೆ ಅಪರಾಧಿಯನ್ನಾಗಿಸುತ್ತದೆ. ಆದರೆ ರೈತನಿಗೆ ‘ಕೊಲ್ಲಲೆಂದು ಕೊಳ್ಳಲಾಗುತ್ತಿದೆ’ ಎಂದು ನಂಬುವ ಕಾರಣವಿತ್ತು ಎಂಬುದನ್ನು ನಿರ್ಧರಿಸುವವರು ಸರ್ಕಾರಿ ಅಧಿಕಾರಿಗಳು!



ಈ ಕಾಯಿದೆಯಡಿ ಸಂಭವಿಸುವ ಅಪರಾಧಕ್ಕೆ ನೀಡಲಾಗುವ ಶಿಕ್ಷೆಗಳ ಪ್ರಮಾಣ. ಸೆಕ್ಷನ್ (೧೨)ರಲ್ಲಿ ನಿಗದಿ ಪಡಿಸಿರುವಂತೆ ಜಾನುವಾರು ಹತ್ಯೆ ಮಾಡಿದ ಅಪರಾಧಕ್ಕೆ ಒಂದು ವರ್ಷದಿಂದ ಏಳು ವರ್ಷದವರೆಗೆ ಜೈಲು ಶಿಕ್ಷೆ ಮತ್ತು ೨೫,000 ರೂ.ಗಳಿಂದ ೧,00,000 ರೂ.ವರೆಗೆ ಜುಲ್ಮಾನೆ. ಭಯೋತ್ಪಾದನೆ, ಉದ್ದೇಶ ಪೂರ್ವಕ ಕೊಲೆ, ಬಲಾತ್ಕಾರ, ಕಳ್ಳಸಾಗಣೆ, ಭ್ರಷ್ಟಾಚಾರಗಳಿಗೂ ಈ ಪ್ರಮಾಣದ ಶಿಕ್ಷೆಯನ್ನು ಇಂಡಿಯನ್ ಪೀನಲ್ ಕೋಡ್ ವಿಧಿಸುವುದಿಲ್ಲ. ಅದೇ ರೀತಿ ಈ ಕಾಯಿದೆಯಡಿ ಎಸಗಲಾಗುವ ಇತರ ಅಪರಾಧಗಳಿಗೆ ಎಂದರೆ ದನದ ಸಾಗಾಟ ಮಾಡುವುದು, ದನದ ಪರಭಾರೆ ಮಾಡುವುದು, ದನದ ಮಾಂಸ ತಿನ್ನುವುದು, ತಿನ್ನಲು ಪ್ರೋತ್ಸಾಹಿಸುವುದು ಹಾಗೂ ಇನ್ನಿತರ ಅಪರಾಧಗಳಿಗೆ ಒಂದು ವರ್ಷದಿಂದ ಮೂರು ವರ್ಷದ ಸಜೆ ಮತ್ತು ೧0,000 ರೂ -೨೫,000 ರೂ.ವರೆಗೆ ಜುಲ್ಮಾನೆ ವಿಧಿಸಬಹುದಾಗಿದೆ.
,ಮೇಲಿನ ಕಾರಣಗಳಿಂದಾಗಿ ಈ ಕಾಯ್ದೆಯನ್ನು ವಿರೋಧಿಸುವವರನ್ನು ನಾನು ಬೆಂಬಲಿಸುತ್ತೇನೆ. ಅದು ಬಿಟ್ಟು ಬೇರೆಯ ಧರ್ಮದವರಿಗೆ ನೋವಾಗುತ್ತದೆ, ಜ್ಯಾತ್ಯಾತೀತತೆ, ಇತ್ಯಾದಿ ಕಾರಣನೀಡಿದರೆ ಅದು ಪ್ರಗತಿಪರ ಚಿಂತನೆಯೆನಿಸುವುದಿಲ್ಲ. ಜೊತೆಗೆ ಅವರ ಹಿಂದಿನ ಚಿಂತನಾಲಹರಿಯನ್ನು ಗಮನಿಸಿ.



ಮರ್ಯಾದಾಪುರುಷೋತ್ತಮ ಶ್ರೀರಾಮ ಮರ್ಯಾದೆಯಿಲ್ಲದವನು, ಶ್ರೀಕೃಷ್ಣ ಸ್ತ್ರೀಲೋಲ, ಪಾಂಡವರಿಂದ ದುರ್ಯೋದನನಿಗೆ ಅನ್ಯಾಯವಾಯ್ತು, ಅವರೇ ಅಧರ್ಮಿಗಳು, ರಾವಣ ಸೀತೆಯನ್ನು ಅಪಹರಿಸಿದ್ದು ನ್ಯಾಯ ........... ಇತ್ಯಾದಿ, ಇತ್ಯಾದಿಯಾಗಿ ಪುಖಾನುಪುಂಖವಾಗಿ ಬಾಯಿಗೆ ಬಂದಂತೆ ಬರೆದು ತಮ್ಮ ತೆವಲು ತೀರಿಸಿಕೊಂಡವರು ಇದೇ (ಅ)ಜ್ನಾನಪೀಠಿಗಳು, ಇದೇ ಪ್ರಗತಿಪರ ಮುಖವಾಡದವರು. ಕೆಲ ವಿಚಾರಗಳು ಕೆಲ ಕೋನಗಳಲ್ಲಿ ಶ್ರೀರಾಮನ ವಿಚಾರದಲ್ಲಿ ಇವರು ಹೇಳುವಂತೆ ಸರಿ ಅನ್ನಿಸಬಹುದು ಆದರೆ ನಾವ್ಯಾಕೆ ಅವನಲ್ಲಿರುವ ಕೆಲವೇ ಕೆಲ ನೆಗೆಟಿವ್ ಅಂಶಗಳನ್ನು ಗಮನಿಸಬೇಕು ಅವನಲ್ಲಿರುವ ಗುಣಗಳು ಆ ಶ್ರೀರಾಮನೆಂಬ ಪಾತ್ರ ಯಾವತ್ತಿಗೂ ಸರ್ವಕಾಲದಲ್ಲೂ ಮಾದರಿ ಪುರುಷನೇ ಅಲ್ಲವೇ? ಆ ಪಾತ್ರವನ್ನು ನಮ್ಮ ಮುಂದಿನ ಪೀಳಿಗೆಗೆ ಉಳಿಸಿ ಒಳ್ಳೆಯದು ಕೆಟ್ಟದರ ನಡುವಿನ ವ್ಯತ್ಯಾಸ ತಿಳಿ ಹೇಳಿ ಒಂದು ಆರೋಗ್ಯಕರ ಸಮಾಜವನ್ನು ಕಟ್ಟುವುದು ಈ ಪ್ರಗತಿಪರರ ಜವಾಬ್ದಾರಿಯಲ್ಲವೇ?



ಶ್ರೀಕೃಷ್ಣ ಸ್ತ್ರೀಲೋಲನೇ ಆಗಿರಲಿ ಬಿಡಿ ಅವನ ರಾಜನೀತಿಗಳು, ಆರ್ಥಿಕ ಚಿಂತನೆಗಳು ಯಾವ ಮೇನೇಜ್ ಮೆಂಟ್ ಗುರುವೂ ಸಹ ಕಲಿಯಲೇಬೇಕಾದದ್ದಲ್ಲವೇ? ಅವುಗಳನ್ನು ಯುವಜನತೆಗೆ ತಿಳಿಸಿಕೊಡಬೇಕಾದದ್ದು ಸಮಾಜವನ್ನು ಪ್ರಗತಿಯೆಡೆಗೆ ಸೆಳೆಯಬೇಕಾದದ್ದು ಈ ಪ್ರಗತಿಪರರ ಕೆಲಸವಲ್ಲವೇ?



ಇದೇ ಯಡ್ಡ್ಯೂರಪ್ಪನವರು ರಾಜ್ಯದ ಜನತೆಯನ್ನು ಕರೆಂಟ್ ಇಲ್ಲದೆ ಕತ್ತಲೆಯಲ್ಲಿ ಮುಳುಗಿಸಿ ಆನಂದ ಪಡುತ್ತಿರುವಾಗ ಅವರ ಕಿವಿ ಹಿಂಡಿ ಕರೆಂಟ್ ಕೊಡಿಸಬೇಕಾದ್ದು ಈ ಪ್ರಗತಿಪರರ ಕೆಲಸವಲ್ಲವೇ?



ಖೇಣಿಯಂತಹ ಭೂಗಳ್ಳರು ಒಂದೆಡೆಯಿಂದ ಕರ್ನಾಟಕವನ್ನು ಮಾರಿಕೊಂಡು ಬರುತ್ತಿರುವುದನ್ನು ತಡೆಯಲು ಜನರಲ್ಲಿ ಅರಿವು ಮೂಡಿಸಿ ಸರಕಾರ ಕಣ್ಣುತೆರೆಯುವಂತೆ ಮಾಡುವುದು ಈ ಪ್ರಗತಿಪರರ ಚಿಂತನೆಯ ಹಾದಿಯಲ್ಲವೇ?



ಈ ರೀತಿ ಮಾಡಲು ಬೇಕಾದಷ್ಟು ಕೆಲಸವಿರುವಾಗ ಇವರು ಪರಚಿ ಕಿರುಚಿಕೊಳ್ಳುತ್ತಿರುವುದಾದರೂ ಏತಕ್ಕೆ? ಗೋಹತ್ಯೆ ನಿಷೇದ ಕಾಯ್ದೆಗೆ. ನಿಷೇದಿಸಿದರೆ ತಪ್ಪೇನು? ಎಂದು ಇವರನ್ನು ಕೇಳಿನೋಡಿ.



"ಇದು ಜ್ಯಾತ್ಯಾತೀತ ವಿರೋದಿ" ಅನ್ನುತ್ತಾರೆ.



ಹೇಗೆ? ಅಂತ ಮತ್ತೊಮ್ಮೆ ಕೇಳಿದರೆ ಉತ್ತರ ಗೊತ್ತಿರುವುದಿಲ್ಲ, ಮತ್ತೂ ಕೆದಕಿದರೆ ಆ ಉತ್ತರವನ್ನು ಅರ್ಥಮಾಡಿಕೊಳ್ಳುವಷ್ಟರಲ್ಲಿ ಒಂದು ಪಿಹೆಚ್. ಡಿ ಪಡೆದುಬಿಡಬಹುದೇನೋ?



ಇದೆಲ್ಲವನ್ನು ಬದಿಗಿಟ್ಟು ಸ್ವಲ್ಪ ಗೋವುಗಳ ಬಗ್ಗೆ ಚಿಂತಿಸೋಣ.



ಸುಮಾರು ೧೦-೧೫ ವರ್ಷಗಳ ಕೆಳಗೆ ಸುಮಾರು ೮೦೦ ಮನೆಗಳಿರುವ ನನ್ನ ಹುಟ್ಟೂರು ಬಿದರಕೋಟೆಯಲ್ಲಿ ಏನಿಲ್ಲವೆಂದರೂ ೩೫೦ ಹೆಚ್ಚು ಮನೆಗಳಲ್ಲಿ ಹೊಲ-ಗದ್ದೆ ಕೆಲಸಗಳಿಗಾಗಿ ಎತ್ತುಗಳನ್ನು ಸಾಕುತ್ತಿದ್ದರು. ಆದರೆ ಇಂದು ೪೦-೫೦ ಮನೆಗಳಲ್ಲೂ ಸಹ ಎತ್ತುಗಳು ಇಲ್ಲ. ಏಕೆಂದರೆ ನಾಟಿ ಹಸುಗಳನ್ನು ಸಾಕಲು ಜನಗಳು ಸಿದ್ದವಿದ್ದರೂ ಆ ತಳಿಗಳೇ ವಿನಾಶದ ಅಂಚಿನಲ್ಲಿರುವುದು, ಅವುಗಳನ್ನು ಸಾಕಲು ಆಗುವ ಖರ್ಚುವೆಚ್ಚಗಳು ಹೆಚ್ಚಾಗಿರುವುದು, ಅವುಗಳನ್ನು ಸಲಹಲು ಜಾಗದ ಕೊರತೆ (ಏಕೆಂದರೆ ಅವಿಭಕ್ತ ಕುಟುಂಬಗಳು ಒಡೆದು ಒಂಟಿ ಕುಟುಂಬಗಳಾಗಿವೆ ಅದರ ಜೊತೆ ಜೊತೆಗೆ ಎಕರೆಗಟ್ಟಲೆ ಜಾಗಗಳು ಕೆಲ ಕುಂಟೆಗಳಿಗೆ ಇಳಿದಿವೆ). ಎಲ್ಲಕ್ಕಿಂತ ಹೆಚ್ಚಾಗಿ ಗೋವುಗಳು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ ಎನ್ನುವುದು ಎಲ್ಲರು ಒಪ್ಪಬೇಕಾದ ಸತ್ಯ. ಅವುಗಳ ಹತ್ಯೆಯನ್ನು ನಿಷೇದಿಸಿ ಅವುಗಳ ಮಹತ್ವವನ್ನು ಮುಂದಿನ ಪೀಳಿಗೆಗೆ ತಿಳಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯವಲ್ಲವೇ? ಪ್ರಿಯ ಪ್ರಗತಿಪರರೇ? ಅಷ್ಟಕ್ಕೂ ವಾಣಿಜ್ಯಪ್ರಾಣಿಗಳಾದ ಕುರಿ,ಮೇಕೆ, ಕೋಳಿಗಳ ಹತ್ಯೆಯನ್ನೇನು ನಿಷೇದಿಸಿಲ್ಲವಲ್ಲ. ಮಾಂಸ ಪ್ರಿಯರು ಅವುಗಳನ್ನು ತಿಂದು ಆನಂದಿಸಬಹುದಲ್ಲವೇ?



ಇನ್ನಾದರೂ ಸ್ವಲ್ಪ ಪ್ರಗತಿಪರ ಚಿಂತನೆ ನಡೆಯಲಿ. ಇಲ್ಲವಾದಲ್ಲಿ



" ಇಟ್ಟರೆ ಸಗಣಿಯಾದೆ



ಬಿಟ್ಟರೆ ಗೊಗ್ಗರವಾದೆ



ತಟ್ಟಿದರೆ ಬೆರಣಿಯಾದೆ



ಸುಟ್ಟರೆ ವಿಭೂತಿಯಾದೆ



ನೀನಾರಿಗಾದೆಯೋ? ಎಲೆಮಾನವ



ಎಂದು ಗೋವುಗಳು ಹಾಡಿ ಅಣಕಿಸಿಬಿಟ್ಟಾವು?

ಮೀಡಿಯಾದವರಿಗೆ 'ನ್ಯೂಸ್' ಮುಖ್ಯವೋ? ''ನ್ಯೂಸೆನ್ಸ್" ಮುಖ್ಯವೋ?

ಹೌದು! ಇದು ನನ್ನನ್ನು ಬಹಳವಾಗಿ ಕಾಡುತ್ತಿರುವ ಬಹುಕಾಲದ ಉತ್ತರ ಸಿಗದ ಪ್ರಶ್ನೆ! ಅದ್ರಲ್ಲೂ ಮೊನ್ನೆ ನಡೆದ ಬೆಂಗಳೂರಿನ ಕಟ್ಟಡವೊಂದರ ಅಗ್ನಿದುರಂತದ ವರದಿಗಳನ್ನು ವೀಕ್ಷಿಸುತ್ತಿದ್ದಾಗ...!!????



ಅಲ್ಲಿಂದ ವರದಿಮಾಡುತ್ತಿದ್ದ ವರದಿಗಾರರು ಬಳಸುತ್ತಿದ್ದ ವಾಕ್ಯಗಳು ಆ ಸುದ್ದಿಯ ತೀವ್ರತೆಗಿಂತ ವಾಕರಿಕೆ ಬರಿಸುವಂತಿದ್ದದ್ದು ಇಂದಿನ ನ್ಯೂಸ್ ಚಾನೆಲ್'ಗಳು ವಿಕೃತ ಮನಸ್ಸಿನವೇನೋ ಎಂದು ಯಾರಿಗಾದರೂ ಅನ್ನಿಸಲು ಸಾಧ್ಯ.



ಈಗ್ಯೆ ೪-೫ ವರ್ಷಗಳ ಹಿಂದೆ ನಾನು ವಿಶಾಖಪಟ್ಟಣದಲ್ಲಿದ್ದಾಗ 'ಅಲೆಕ್ಸ್' ಎಂಬ ತೆಲುಗು ಸಿನಿಮಾ ಬಂದಿತ್ತು. ಅದರಲ್ಲಿ ನಾಯಕ ವಿಮಾನದಲ್ಲಿ ಸಂಚರಿಸುತ್ತಿದ್ದಾಗ ಅದು ದುರಂತಕ್ಕೀಡಾಗಿ ಸಮುದ್ರಪಾಲಾಗುತ್ತದೆ. ಅದರಲ್ಲಿ ಸಾಕಷ್ಟು ಜನ ಸಾವು ಬದುಕಿನೊಡನೆ ಹೋರಾಡುತ್ತಿರುತ್ತಾರೆ. ಈ ಸುದ್ದಿ ತಿಳಿದ ನ್ಯೂಸ್ ಚಾನಲ್ಲೊಂದು ತನ್ನ ಸ್ವಂತ ಹೆಲಿಕಾಪ್ಟರ್ ನಲ್ಲಿ ಬಂದು ಆ ದೃಶ್ಯಗಳನ್ನು ಸೆರೆಹಿಡಿದು ನೇರ ಪ್ರಸಾರ ಮಾಡುತ್ತಿರುತ್ತದೆ. ಚೆನ್ನಾಗಿ ಈಜು ಬರುತ್ತಿದ್ದ ನಾಯಕ ಸುಮಾರು ಜನರ ಪ್ರಾಣ ಉಳಿಸುತ್ತಾನೆ. ಹೆಲಿಕಾಪ್ಟರ್ ನಲ್ಲಿ ಸೆರೆಹಿಡಿಯುತ್ತಿದ್ದ ಕ್ಯಾಮರಾಮನ್ ವೀಕ್ಷಕ ವಿವರಣೆ ಕೊಡುತ್ತಿದ್ದವನನ್ನು "ಸರ್ ನಮ್ಮ ಹೆಲಿಕಾಪ್ಟರ್ ನ ಸಹಾಯದಿಂದ ಸುಮಾರು ಜನರ ಪ್ರಾಣ ಉಳಿಸಬಹುದಲ್ವೇ? ನಡಿಯಿರಿ ಸಹಾಯ ಮಾಡೋಣ" ಎನ್ನುತ್ತಾನೆ. ಅದಕ್ಕೆ ವೀಕ್ಷಕ ವಿವರಣೆಕಾರ "ಅದು ನಮ್ಮ ಕೆಲಸವಲ್ಲ ಅದರ ಉಸಾಬರಿ ನಿನಗ್ಯಾಕೆ? ಸುಮ್ಮನೆ 'ಬ್ರೇಕಿಂಗ್ ನ್ಯೂಸ್'ನ ಚಿತ್ರೀಕರಿಸು" ಎನ್ನುತ್ತಾನೆ.



ಮೊನ್ನಿನ ಅಗ್ನಿದುರಂತದ ವರದಿಗಳನ್ನು ನೋಡುತ್ತಿದ್ದಾಗ ಮೇಲಿನ ಚಿತ್ರದ ದೃಶ್ಯ ಎಷ್ಟು ಸಲೀಸಾಗಿ ಹೊಂದುತ್ತಿತ್ತು. ಎಲ್ಲಾ ಚಾನಲ್ ಗಳಲ್ಲಿ ಅದು ಸುದ್ದಿಯಾಗಿ ಬಿತ್ತರವಾಗುವುದರ ಜೊತೆಗೆ ಅದನ್ನು ವೀಕ್ಷಿಸುತ್ತಿದ್ದ ವೀಕ್ಷಕರು ಮತ್ತು ದುರಂತಕ್ಕೀಡಾದವರ ಸಂಬಂಧಿಕರು ಅಗತ್ಯಕ್ಕಿಂತ ಹೆಚ್ಚಾಗಿ ಗಾಬರಿ ಮತ್ತು ಖಿನ್ನತೆಗೊಳಗಾಗಿ ಆತಂಕದಿಂದ ಕ್ಷಣಗಳನ್ನು ಖಂಡಿತವಾಗಿಯೂ ಅನುಭವಿಸಿರುತ್ತಾರೆ. ಆ ರೀತಿ ವರದಿಯ ಜೊತೆಗೆ ಸ್ವಲ್ಪವಾದರೂ ಸಾಮಾಜಿಕ ಪ್ರಜ್ಞೆಯಿಂದ ಚಾನಲ್ ಗಳು ವರ್ತಿಸಿದ್ದಿದ್ದರೆ ಅವುಗಳ ಕಾಳಜಿಯನ್ನು ಮೆಚ್ಚಬಹುದಾಗಿತ್ತು. ಅದನ್ನು ಬಿಟ್ಟು "ಅಲ್ಲಿ ನೋಡಿ!! ನೋಡಿ!! ಜೀವಭಯದಿಂದ ಜನರು ಕೆಳಗೆ ಹಾರುತ್ತಿದ್ದಾರೆ!!! ಇದು ನಮ್ಮ ಚಾನೆಲ್ ನಲ್ಲಿ ಮಾತ್ರ ಪ್ರಸಾರವಾಗುತ್ತಿದೆ" ಎಂದು ವಿಕೃತವಾಗಿ ಕೂಗುತ್ತಿದ್ದ ವರದಿಗಾರನನ್ನು ನೋಡಿದಾಗ ಅಂತಹ ಸಮಯದಲ್ಲೂ ಅದು ದುಃಖ ತರುವಂತಹ 'ನ್ಯೂಸ್' ಆಗಿದ್ದರೂ ಚಾನೆಲ್ ಗಳದ್ದು ಶುದ್ದ "ನ್ಯೂಸೆನ್ಸ್" ಅನ್ನದೆ ಮತ್ತಿನ್ನೇನು ಅನ್ನಲು ಸಾದ್ಯ ಅಲ್ಲವೇ? ಇದರ ಜೊತೆಗೆ ಮೃತರು ಮತ್ತು ಗಾಯಾಳುಗಳು ದಾಖಲಾಗಿದ್ದ ಆಸ್ಪತ್ರೆಗೆ ಬಂದು ಅವರ ಸಂಬದಿಕರ ಮುಂದೆ ಮೈಕ್ ಹಿಡಿದು ಹಲ್ಲು ಗಿಂಜುತ್ತಾ



''ಸರ್/ ಮೇಡಂ ನಿಮ್ಮ ಅಭಿಪ್ರಾಯವೇನು?" ಎಂದು ಕೇಳುವ ದೃಷ್ಯಗಳನ್ನು ವೀಕ್ಷಿಸಿದ ಯಾವುದೇ ಹೃದಯವಂತರಿಗೆ ಅದು 'ಇವು ಬುದ್ದಿಗೇಡಿ ಚಾನಲ್'ಗಳು' ಎನ್ನಸಿದೇ ಇರಲು ಸಾಧ್ಯವೇ ಇರಲಿಲ್ಲ. ಇಂತಹ ಚಾನಲ್ ಗಳಿಗೆ ಬರೀ 'ಬ್ರೇಕಿಂಗ್ ನ್ಯೂಸ್' ಮುಖ್ಯವೇ ಹೊರತು, ಅದರಿಂದ ಮನಗಳು 'ಬ್ರೇಕ್' ಆಗುತ್ತವಲ್ಲ ಅದರ ಬಗ್ಗೆ ಅವುಗಳ ವರ್ತನೆ ಮತ್ತು ಚಿಂತನೆ ತಿಳಿಗೇಡಿಗಳಿಗೆ ಅನಾವಾಶ್ಯಕ!!!! ಇದೆಂತಹಾ ವಿಪರ್ಯಾಸ



ಇವರಿಗೆ ಕಿವಿಹಿಂಡಿ ಬುದ್ದಿಹೇಳಲು ಯಾರೂ ಇಲ್ಲವೇ?



ದುರಂತದಲ್ಲಿ ಮಡಿದವರ ಕುಟುಂಬಕ್ಕೆ ಆ ದುಃಖವನ್ನು ಸಹಿಸುವ ಶಕ್ತಿಯನ್ನು ಆ ದೇವರು ಕರುಣಿಸಲಿ, ಹಾಗು ದಯವಿಟ್ಟು ಸುದ್ದಿ ಚಾನೆಲ್ ಗಳು ಇನ್ನಾದರೂ ಸ್ವಲ್ಪ ಪ್ರಜ್ಞೆಯಿಂದ ಸುದ್ದಿ ಪ್ರಸಾರ ಮಾಡಲಿ.

'Fourth Estate' ಎಂದು ಕರೆಸಿಕೊಂಡು ದೇಶದ ಪ್ರಜೆಗಳ ಮುಖವಾಣಿಯಾಗಿ ಅತ್ಯಂತ ಗೌರವವನ್ನು ಹೊಂದಿದ್ದ ಮಾಧ್ಯಮ ಇಂದು ಸಂಪೂರ್ಣವಾಗಿ ತನ್ನನ್ನು ಹಣಕ್ಕಾಗಿ ಮಾರಿಕೊಂಡು ನಗೆಪಾಟಲಿಗೀಡಾಗಿರುವುದು ಎಂತಹಾ ವಿಪರ್ಯಾಸ!. ದುಡ್ಡಿಗಾಗಿ ಅತ್ಯಂತ ಕೀಳು ಮಟ್ಟಕ್ಕೂ ಇಳಿದಿರುವ ಮಾಧ್ಯಮ ಇಂದು 'ಸುದ್ದಿಗಾಗಿ ದುಡ್ಡು' ಪಡೆದು (Paid News) ಜನರನ್ನು ವಂಚಿಸುತ್ತಿರುವುದು ನಾಚಿಕೆಗೇಡಿನ ವಿಚಾರ. 'News' ಅನ್ನುವುದು ಇಂದು ಶುದ್ಧ 'commodity' ಅಷ್ಟೇ. ಎಂತಹ ಸಣ್ಣ ಸುದ್ದಿಯನ್ನೂ 'sensationalise' ಮಾಡಿ ಜನರನ್ನು 'ರಂಜಿಸಲು' ಹೆಣಗಾಡುತ್ತಿರುವ ಚಾನೆಲ್ ಗಳ ಬಗ್ಗೆ ಅಸಹ್ಯವೆನಿಸುತ್ತದೆ. ಟಿ.ವಿ. ವರದಿಗಾರರು 'ಇಲಿ' ಬಂದುದನ್ನು 'ಹುಲಿ' ಬಂತು ಎಂಬಂತೆ ಮೈ ಕೈ ಕುಣಿಸುತ್ತಾ ಅಟ್ಟಹಾಸದ ಸ್ವರದಲ್ಲಿ 'ತೀಕು'ವುದನ್ನು ನೋಡಿದರೆ ನಾಲ್ಕು ದಿನಗಳಿಂದ 'constipation' ತೊಂದರೆಯಿಂದ ಬಳಲುತ್ತಿರುವಂತೆ ಕಾಣುತ್ತದೆ!.



ಇವೆಲ್ಲದರ ಮಧ್ಯೆ ಇನ್ನೂ ಕೆಲವೊಂದು (ವಾರ್ತಾ ಪತ್ರಿಕೆಗಳು) ತಮ್ಮ ಗೌರವ, ಘನತೆ ಕಾಪಾಡುತ್ತಾ ಜನರ ಧ್ವನಿಯಾಗಿ ಇರಲು ಪ್ರಯತ್ನಿಸುತ್ತಿರುವುದು ನಮ್ಮ ಭಾಗ್ಯ.