ಭಾನುವಾರ, ಜೂನ್ 6, 2010

ಚೈತನ್ಯನ ಚೇತಕ್!!!

ಚೈತನ್ಯನ ಬಳಿ ಒಂದು ವಿಶಿಷ್ಠವಾದ ದ್ವಿಚಕ್ರವಾಹನವೊಂದಿತ್ತು. ಅದರ ಆಕಾರ ನೋಡಲು ಬಜಾಜ್ ಚೇತಕ್ ನಹಾಗಿದ್ದರೂ ಅದು ಬಜಾಜ್ ಕಂಪನಿಯವರದ್ದಲ್ಲ, ಇನ್ನೂ ೪ ಸ್ಟ್ರೋಕ್ ಇಂಜಿನ್ ಆದರೂ ಹೀರೋ ಹೋಂಡಾ ಕಂಪನಿಯದ್ದೂ ಅಲ್ಲ. ಹಾಗಿದ್ರೆ ಇನ್ಯಾವ್ದು ಅಂದ್ರೆ, ಅದು ಕೈನೆಟಿಕ್ ಕೆ೪ ಎಂಬ ವಿಚಿತ್ರ ಬೈಕ್. ಅದೇ ಬೈಕ್ ಇತರ ಸ್ನೇಹಿತರ ಬಳಿ ಇದ್ದರೂ ಚೈತನ್ಯನ ಬೈಕಿನ ಸಂಗತಿಯೇ ಬೇರೆ. ಅದಕ್ಕೆ ನಾವೆಲ್ಲ ಪ್ರೀತಿಯಿಂದ ಇಟ್ಟ ಹೆಸರೇ ಚೈತನ್ಯನ ಚೇತಕ್!!!
ಓಹ್!!! ಕ್ಷಮಿಸಿ!! ಚೈತನ್ಯ ಯಾರು ಅನ್ನೋದನ್ನ ಹೇಳಲೇ ಇಲ್ಲ.
ನಾನು ಎಂ.ಎಸ್ಸಿ ಮುಗಿಸಿ ಮುಂದೇನು? ಎಂಬ ಪ್ರಶ್ನಾರ್ಥಕವೇ ಕುಡುಗೋಲಾಗಿ ನನ್ನನ್ನು ಕತ್ತರಿಸಲು ಬಂದಾಗ ನನ್ನ ಸಹಪಾಠಿ ಸ್ನೇಹಿತ ದಿನೇಶನ ಮೂಲಕ ಪರಿಚಯವಾದವನು ಮತ್ತು ನನ್ನನ್ನು ಈ ವೈದ್ಯಕೀಯ ಪ್ರತಿನಿಧಿ ವೃತ್ತಿಗೆ ತಂದವನೇ ಅವನು. ಯಾರೇ ಸರಿ ಚೈತನ್ಯನನ್ನು ಮೊದಲಬಾರಿ ಭೇಟಿಯಾದರೆ ಅವನ ಸ್ನೇಹಿತರಾಗುವುದು ಸೆಂಟ್ ಪರ್ಸೆಂಟ್ ಗ್ಯಾರಂಟಿ. ಯಾವಾಗಲೂ ತಮಾಷೆಯಾಗೆ ಮಾತನಾಡುತ್ತಾ, ಏನೇ ತೊಂದರೆ ಬಂದರೂ ನಗುತ್ತಲೇ ಪರಿಹರಿಸುವಂತಹ ವ್ಯಕ್ತಿತ್ವ.
ಇಂತಹ ಚೈತನ್ಯನಿಗೆ ಅವನ ಬೈಕ್ ಎಂದರೆ ಪಂಚಪ್ರಾಣ! ೧ ಲೀ ಪೆಟ್ರೋಲ್ ಗೆ ಸುಮಾರು ೮೦ ಕಿ.ಮಿ ಮೈಲೇಜ್ ಬರುತ್ತಿತ್ತು. ಆದರೆ ಆಕ್ಸ್ಲರೇಟರ‍್ ಎಷ್ಟು ಹೊತ್ತಿದರೂ ೪೦ ರ ಮೇಲೆ ಯಾವತ್ತೂ ಹೋಗುತ್ತಿರಲಿಲ್ಲ. ಭಾರೆಯಮೇಲೆ ಎಳೆಯುತ್ತಿರಲಿಲ್ಲ, ಇಳಿಜಾರಿನಲ್ಲಿ ನಿಲ್ಲುತ್ತಿರಲಿಲ್ಲ.
ಒಂದು ಸಾರಿ ಸಂಜೆ ಏಳು ಗಂಟೆಯ ಸಮಯ ರಾಮಸ್ವಾಮಿ ವೃತ್ತದಿಂದ ಬಲ್ಲಾಳ್ ವೃತ್ತದೆಡೆಗೆ ಇಬ್ಬರು ಜೊತೆಗೂಡಿ ಹೊರಟಿದ್ದೆವು, ಮುಂದಿನಿಂದ ಟ್ರಾಫಿಕ್ ಪೋಲೀಸ್ ಒಬ್ಬ ಮುಂದೆ ಬಂದು ಗಾಡಿಯನ್ನು ಪಕ್ಕಕ್ಕೆ ಹಾಕಲು ಹೇಳಿದ. ಇಬ್ಬರಿಗೂ ನಡುಕ ಶುರುವಾಯ್ತು. ನಮ್ಮಿಬ್ಬರ ಬಳಿ ಲೈಸೆನ್ಸ್ ಇರಲಿ ಎಲ್. ಎಲ್. ಆರ್. ಕೂಡ ಇರಲಿಲ್ಲ!! ಅದು ಹೋಗಲಿ ಅಂದ್ರೆ ಗಾಡಿಗೆ ಇನ್ಶೂರೆನ್ಸ್ ಕೂಡ ಇಲ್ಲ!! ಸಧ್ಯ! ಗಾಡಿಯನ್ನು ಚೈತನ್ಯ ಓಡಿಸುತ್ತಿದಾನೆಂಬುದೇ ನನ್ನ ಸಮಾಧಾನ! ಅವನೋ
"ಮಗ!! ಇವತ್ತು ಜೋಬಿಗೆ ಬರೆ ಗ್ಯಾರಂಟಿ !!" ಎಂದು ಗೊಣಗಾಡಿದ.
"ಎಲ್ರಿ? ಗಾಡಿಗೆ ಲೈಟ್ ಇಲ್ಲದೆ ಓಡೀಸುತ್ತಿದ್ದೀರಾ? ಸ್ವಲ್ಪನೂ ಬುದ್ದಿ ಇಲ್ವಾ?" ಅಂತ ಪಿ. ಸಿ ಸಾಹೇಬ್ರು ಗುಡುಗೋದರ ಜೊತೆಗೆ
"ಎಜುಕೇಟೆಡ್ ಬೇರೆ" ಅಂತಹ ಮತ್ತಷ್ಟು ಮರ್ಯಾದೆಯನ್ನು ತಗೆಯುತ್ತಿದ್ದರೆ ನಮ್ಮಿರಗೂ ಸ್ವಲ್ಪ ನಿರಾಳವಾದಂತಾಯ್ತು. ಸಧ್ಯ ಇದು ಪೆಟ್ಟಿ ಕೇಸು ಅಂತಾ!!
"ಯಾರ್ ಸರ್ ಹೇಳಿದ್ದು? ನೋಡಿ" ಎನ್ನುತ್ತ ತನ್ನ ಕೆ೪ ನ ಹೆಡ್ ಲೈಟ್ ಅನ್ನು ತೋರಿಸಿದ. ಆ ಪೋಲಿಸಪ್ಪನಿಗೆ ನಮಗೆ ಮತ್ತೆ ಬೈಯ್ಯಬೇಕೋ ಅಥವಾ ಈಗಾಗಲೇ ಬೈದದ್ದಕ್ಕೆ ಪಶ್ಚಾತ್ತಾಪ ಪಡಬೇಕೋ ತಿಳಿಯದೆ ತಲೆಯಮೇಲಿನ ಟೋಪಿ ತೆಗೆದು ಸೆಕೆ ಬೀಸಿಕೊಳ್ಳುತ್ತಾ ನಿಂತು ಬಿಟ್ಟ!
ಏಕೆಂದರೆ ಬೈಕ್ ನ ಲೈಟು ಎಂಟಾಣಿ ಕ್ಯಾಂಡಂಲ್ ಗಿಂತಲೂ ಕಡೆಯಾಗಿ ಉರಿಯುತ್ತಿತ್ತು!!! ಏನೂ ತೋಚದ ಆರಕ್ಷಕ ಮಹಾಶಯ ಬಿಟ್ಟು ಕಳುಹಿಸಿದ.
ಮತ್ತೊಂದು ಸಂಜೆ ನಮ್ಮ ಕೆ.ಇ.ಬಿ ಯವರ ಕೃಪೆಯಿಂದಾಗಿ ಕರೆಂಟ್ ಇಲ್ಲದ ಸಮಯದಲ್ಲಿ ಅದೇ ಮಾರ್ಗವಾಗಿ ಬರುತ್ತಿರಬೇಕಾದರೆ ಅದೇ ಬಲ್ಲಾಳ್ ವೃತ್ತದ ಬಳಿ ಇವನ ಬೈಕ್ ಗೆ ಒಬ್ಬ ಹಣ್ಣು ಹಣ್ಣು ಮುದುಕಿ ಅಡ್ಡ ಬಂದುಬಿಡುವುದೇ!!? ಮೊದಲೇ ಬೈಕ್ ನ ಲೈಟ್ ಬೇರೆ ಇಲ್ಲ! ಸೀದ ಆ ಮುದುಕಿಗೆ ಇಕ್ಕಿದ್ದ. ಸಧ್ಯ! ಇವನ ಬೈಕ್ ಗೆ ಸ್ಪೀಡ್ ಇರಲಿಲ್ಲ ಬರೀ ತರಚಿದ ಗಾಯವಾಯ್ತು ಅಷ್ಟೇ. ಎಲ್ಲಕ್ಕಿಂತ ಹೆಚ್ಚಾಗಿ ಈಗಿನಹಾಗೆ ರಾತ್ರಿ ಏಳರ ನಂತರ ಜನಸಂದಣೆ ೧೦ ವರ್ಷಗಳ ಹಿಂದೆ ಇರುತ್ತಿರಲಿಲ್ಲ. ಇದ್ದಿದ್ದರೆ ಇಬ್ಬರಿಗೂ ಧರ್ಮದೇಟು ಖಾಯಂ!! ತಕ್ಷಣ ಆ ಅಜ್ಜಿಯನ್ನು ಅದೇ ಗಾಡಿಯ ಮೇಲೆ ಕೂರಿಸಿಕೊಂಡು ಪಕ್ಕದ ವಿನಾಯಕ ನರ್ಸಿಂಗ್ ಹೋಂ ನಲ್ಲಿ ಉಪಚರಿಸಿ ಕಳುಹಿಸಿದೆವು. ನಮ್ಮ ಪುಣ್ಯ ಆ ಅಜ್ಜಿಗೆ ಆಕೆಗೆ ಗುದ್ದಿದ್ದು ನಾವೇ ಅನ್ನುವ ಸತ್ಯ ತಿಳಿಯಲೇ ಇಲ್ಲ!!
ಇಂತಿಪ್ಪ ಗಾಡಿಗೆ ನಾವೆಲ್ಲರೂ ಬೈಯ್ದು, ಕಾಡಿ, ಬೇಡಿದ ನಂತರ ಕಡೆಗೂ ಇನ್ಶೂರೆನ್ಸ್ ಮಾಡಿಸಿಯೇ ಬಿಟ್ಟ!!
"ಹೇಗೂ ಗಾಡಿಯನ್ನು ಹುಷಾರಾಗಿ ಹೋಡಿಸ್ತೇನೆ, ಎಲ್ಲೂ ಆಕ್ಸಿಡೆಂಟ್ ಆಗೋ ಚಾನ್ಸು ಕಡಿಮೆ, ಆಗಲೇ ಗಾಡಿ ಆಯಸ್ಸು ಅರ್ಧ ಮುಗ್ದೋಗಿದೆ, ಸುಮ್ಮನೆ ಇನ್ಶೂರೆನ್ಸ್ ದುಡ್ಡು ವೇಸ್ಟು ಮಗಾ! ಎಂಗಾದ್ರೂ ಮಾಡಿ ಆ ದುಡ್ಡು ವಸೂಲಿ ಮಾಡ್ಕೋಬೇಕು" ಎಂದು ಅವಲತ್ತು ಕೊಳ್ಳುತ್ತಿದ್ದವನಿಗೆ ಆ ಬೈಕ್ ನ ಷೋ ರೂಂ ನ ಮೆಕ್ಯಾನಿಕ್ ಮಹಮದ್ ಒಂದ್ ಐಡಿಯಾ ಕೊಟ್ಟ!
"ಸಾರ್ ನಿಮ್ ಬೈಕ್ ಗೆ ನಂ ಷೋರೂಂದಲ್ಲಿ ಗುದ್ದರ್ಸಿ ಕೊಟ್ಬಿಢ್ಹತ್ತಿನಿ, ಸುಮ್ಕೆ ಮನೆ ಹತ್ರ ನಿಲ್ಸಿದಾಗ ಜಾರಿ ಬಿದ್ದದ್ದು ಅಂತ ಪೋಲೀಸ್ ಕಂಪ್ಲೇಂಟ್ಗೆ ಕೊಟ್ಟಿ ಇನ್ಶೂರೆನ್ಸ್ ಕ್ಲೈಮು ಮಾಡ್ಕಳಿ" ಅಂದ. ಸರಿ ಒಂದು ಭಾನುವಾರ ಅವನು ಹೇಳಿದ ಹಾಗೆ ಮಾಡಿ ಕಂಪ್ಲೇಂಟ್ ಕೊಟ್ಟು ಹತ್ತು ಹದಿನೈದು ದಿನಕ್ಕೆಲ್ಲಾ ೩೨೦೦/- ರೂ ಹಣವೂ ಬಂತು, ಅದರಲ್ಲಿ ಅವನ ಬೈಕ್ ರಿಪೇರಿಗೆಂದು ೭೦೦ ಖರ್ಚಾಯ್ತು.! ಚೈತನ್ಯನಿಗೆ ತನ್ನ ಸಾಧನೆಗೆ ಖುಷಿಯೋ ಖುಷಿ!!
"ನೋಡ್ಮಗ! ಒಣ್ಟು ತ್ರಿಬ್ಬಲ್ ವಸೂಲಿ ಮಾಡ್ದೆ ಇನ್ಶೂರೆನ್ಸ್ ನೋರ ಹತ್ರ" ಅಂತ ಹೇಳಿಕೊಂಡು ತಿರುಗ ತೊಡಗಿದ. ಆ ಸಮಯದಲ್ಲಿ ನಾವೆಲ್ಲಾ ಕರುಬಿದರೂ ನಮ್ಮ ಬೈಕ್ ಗಳ ಮೇಲೆ ರಿಸ್ಕ್ ತೆಗೆದುಕೊಳ್ಳಾಲು ತಯಾರಿರಲಿಲ್ಲ.
ಸರಿ ಬೈಕ್ ಪುನರ್ನಿಮಾಣಗೊಂಡು ೨ ದಿನ ಕಳೆದ ನಂತ ಗುಂಡ್ಲುಪೇಟೆಗೆ ಕೆಲಸಕ್ಕೆಂದು ಹೊರಟ. ಆ ದಿನ ನಾನು ಮೈಸೂರಿನಲ್ಲೇ ಇದ್ದೆ. ಊಟಕ್ಕೆಂದು ಮಧ್ಯಾನ್ಹ ರೂಮಿಗೆ ಬಂದಾಗ ಟೆಲಿಗ್ರಾಂ ಬಂತು. ಅದು ಚೈತನ್ಯನಿಂದ!!!! ಈಗಿನ ಹಾಗೆ ಮೊಬೈಲ್ ಫೋನ್ ಇಲ್ಲದ್ದರಿಂದ ನಮ್ಮ ವೃತ್ತಿಯಲ್ಲಿ ಒಬ್ಬರನ್ನೊಬ್ಬರು ಸಂಪರ್ಕಿಸಬೇಕೆಂದರೆ ಈ ರೀತಿ ಟೆಲಿಗ್ರಾಂ ಕೊಟ್ಟು ತಮಗೆ ಕರೆಮಾಡಲು ಅಥವಾ ತಾವೇ ಕರೆಮಾಡುತ್ತೇವೆಂದು ತಿಳಿಸುತ್ತಿದ್ದರು. ಅದೇ ರೀತಿ ಅಂದು ಸಂಜೆ ೪ ಗಂಟೆಗೆ ಅವನೇ ನನಗೆ ಫೋನ್ ಮಾಡುವವನಿದ್ದ. ಪಕ್ಕದ ಅಂಗಡಿಯ ಕಾಯಿನ್ ಭೂತ್ ನಲ್ಲಿ ಇವನ ಫೋನಿಗೆ ಕಾಯುತ್ತಾ ಕುಳಿತೆ. ಫೋನ್ ಬಂತು,
"ಮಗಾ!! ಈಗ ನಂಜನಗೂಡಿನಲ್ಲಿ ಟ್ರೈನ್ ಹತ್ತುತ್ತಿದ್ದೀನಿ, ಈಗೇನೂ ಹೇಳಕ್ಕಾಗಲ್ಲ ಸೀದಾ ಐದ್ಗಂಟೆಗೆ ರೈಲ್ವೇ ಸ್ಟೇಷನ್ ಹತ್ರ ಬಂದ್ಬಿಡು ನಮ್ಮನೆಗೇನು ಹೇಳ್ಬೇಡ" ಅಂತ ಕ್ಷೀಣ ಧ್ವನಿಯಲ್ಲೇಳಿ ಫೋನಿಟ್ಟುಬಿಟ್ಟ. ನನ್ನ ಕೈಕಾಲುಗಳೆಲ್ಲಾ ನಡುಗಲು ಪ್ರಾರಂಭಿಸಿದವು. ತಲೆಯಲ್ಲಿ ನೂರಾರು ಯೋಚನೆಗಳು!!
ಬೆಳಿಗ್ಗೆ ತಾನೆ ಬೈಕಿನಲ್ಲೇ ಹೊರಟ! ಏನಾಯ್ತು? ಏನಾದರೂ ಆಕ್ಸಿಡೆಂಟ್!!? ಛೇ!! ಬಿಡ್ತು! ಹಾಗಾಗ್ದಿರ್ಲಿ. ಮತ್ಯಾಕೆ ಟ್ರೈನಲ್ಲಿ ಬರ್ತಿದಾನೆ? ಹೀಗೆ ಯೋಚಿಸುತ್ತಾ ರೈಲು ನಿಲ್ದಾಣದ ಬಳಿ ಬಂದೆ.
ಚೈತನ್ಯ ಒಂದು ಗೋಣಿ ಚೀಲದ ಮೂಟೆಯನ್ನು ಕಷ್ಟ ಪಟ್ಟು ಎಳೆದುಕೊಂಡು ಹೊರಬರಲು ಹೆಣಗುತ್ತಿದ್ದ. ತಕ್ಷಣ ಅವನ ಬಳಿ ಓಡಿದೆ.
"ಏನೋ ಇದು?" ಅಂದೆ
"ಪ್ಚ್ಲ್!! ನನ್ಗಾಡಿ ಮಗಾ!!" ಅಂದ ನನಗೆ ನಗು ತಡೆಯಲಾಗಲಿಲ್ಲ. ಜೋರಾಗಿ ನಗತೊಡಗಿದೆ.
"ನಗು ಮಗಾ ಟೈಮ್ ನಿಂದು!" ಎಂದ ಮ್ಲಾನವದನನಾಗಿ. ನನಗೆ ಪಿಚ್ಚೆನಿಸಿತು, ನಗು ನಿಲ್ಲಿಸಿ
"ಏನಾಯ್ತೋ? ಏನಿಂಗೆ?" ಅಂದೆ.
"ಗುಂಡ್ಲುಪೇಟೆ ತಲುಪ್ಲೇ ಇಲ್ಲ ಮಗಾ! ನಂಜುನ್ಗೂಡು ಸುಜಾತ ಫ್ಯಾಕ್ಟರಿ ಹತ್ರ ಬೈಕ್ ಇಂಜಿನ್ ಸೀಝಾಗೋಯ್ತು, ಕಿಕ್ ಮಾಡಿ ಮಾಡಿ ಸುಸ್ತಾಯ್ತು, ಏನಾಗಿದೆ ಅಂತಾ ನೋಡಿದ್ರೆ ಆಯಿಲ್ ಸೀಲ್ ಬಿಚ್ಚೋಗಿತ್ತು, ಸರಿ ಅಂತೇಳಿ ಅದನ್ನಾಕ್ಸಿ ಮತ್ತೆ ಸ್ಟಾರ್ಟ್ ಮಾಡ್ದೆ ಪಾರ್ಟ್ಸ್ ಗಳೆಲ್ಲಾ ಪೀಸ್ ಪೀಸ್, ಆ ಮೆಕಾನಿಕ್ಕು ಗೋಣೀಚೀಲುಕ್ಕಾಕ್ಕೋಟ್ಟ. ಇಲ್ಬಂದಿದೀನಿ" ಅಂದ.
ಈ ರೀತಿ ಚೈತನ್ಯನ ಚೇತಕ್ ತನ್ನ ಇಹಲೋಕ ಯಾತ್ರೆಯನ್ನು ಮುಗಿಸಿತ್ತು.!!

ಬುಧವಾರ, ಜೂನ್ 2, 2010

ಬ್ರಮ್ಮ ತೀರ್ಸೋಗವ್ನೆ!!!!!!

ಸುಮಾರು ೧೯೮೩ ಮೇ ತಿಂಗಳಿರಬಹುದು, ನಾನಾವಾಗ ೨ನೇ ತರಗತಿಯಲ್ಲಿದ್ದೆ. ನಮ್ಮೂರಾದ ಬಿದರಕೋಟೆಯಲ್ಲಿ ಕೌಂಡಲೀಕನ ವಧೆ ಎಂಬ ಪೌರಾಣಿಕ ನಾಟಕವಾಡುತ್ತಿದ್ದರು. ಹೞಿಗಳಲ್ಲಿ ನಾಟಕ ಅಂದರೆ ಕೇಳಬೇಕೆ?!? ಸಂಭ್ರಮವೋ ಸಂಭ್ರಮ!! ಏಕೆಂದರೆ ಈಗಿನ ಹಾಗೆ ಟಿ.ವಿ ಗಳ ಹಾಳು ಧಾರಾವಾಹಿಗಳಾಗಲಿ, ರಿಯಾಲಿಟಿ ಷೋಗಳಾಗಲಿ ಇರಲಿಲ್ಲ. ಅಷ್ಟೇ ಏಕೆ ಸಿನಿಮಾ ನೋಡಬೇಕೆನಿಸಿದರೆ ಪಿ.ಜಿ. ದೊಡ್ಡಿ ಟೆಂಟಿಗೋ ಅಥವಾ ಕೊಪ್ಪಾದ ಸಿನಿಮಾ ಗುಡಿಸಲಿಗೋ ಈಗಿನ ಹಾಗೆ ಬಸ್ಸುಗಳಿಲ್ಲದ ಕಾರಣ ಎತ್ತಿನ ಗಾಡಿಯಲ್ಲಿ ಹೋಗಬೇಕಿತ್ತು. ಹಾಗಾಗಿ ವರ್ಷ ೨ ಅಥವಾ ಮುರೋ ನಡೆಯುತ್ತಿದ್ದ ಪೌರಾಣಿಕ ನಾಟಕಗಳೇ ನಮ್ಮ ಜನಗಳ ಮನರಂಜನೆಯ ಸರುಕಾಗಿದ್ದವು.
ಹಾಗಾಗಿ ಬಹುತೇಕ ಊರಿನ ಎಲ್ಲಾ ಮನೆಯವರು ತಂತಮ್ಮ ನೆಂಟರಿಷ್ಟರನ್ನೆಲ್ಲಾ ಬರಮಾಡಿಕೊಂಡು ಹಬ್ಬದೂಟ, ಬಾಡೂಟಗಳನ್ನೇರ್ಪಡಿಸಿ, ನಾಟಕ ನಡೆಯುವ ಸ್ಥಳವಾದ ದೇವಿರಮ್ಮನ ಗುಡಿಯ ಮುಂದೆ ಚಾಪೆ ಗೋಣಿತಾಟುಗಳನ್ನು ಹರವಿ ತಂತಮ್ಮ ಜಾಗಗಳನ್ನು ಕಾಯ್ದಿರಿಸಿ, ಅವುಗಳನ್ನು ಕಾಯಲು ಮಕ್ಕಳನ್ನು ಅಲ್ಲಿ ಕಾವಲಿರಿಸುತ್ತಿದ್ದದ್ದು ಸರ್ವೇಸಾಮಾನ್ಯವಾಗಿತ್ತು. ಅದೇ ರೀತಿ ಕಾಕತಾಳಿಯವೆಂಬಂತೆ ನಾಟಕದ ಹಿಂದಿನ ದಿನವೇ ನಮ್ಮ ಹೊಸಮನೆಯ ಗೃಹಪ್ರವೇಶವಿದ್ದುದ್ದರಿಂದ ನಮ್ಮ ಮನೆಗೂ ಸಹ ಸ್ವಲ್ಪ ಹೆಚ್ಚೆನ ನೆಂಟರು ಇದ್ದರು ಹಾಗಾಗಿ ಜಾಗ ಹಿಡಿದು ಕೂರುವ 'ಗುರುತರ ಜವಾಬ್ದಾರಿ' ನನ್ನ ಮತ್ತು ನನ್ನತಂಗಿಯರ ಹೆಗಲಿಗೆ ಬಿತ್ತು. ಎಷ್ಟೇ ಆಗಲಿ ಬಾಲಸಹಜ ಗುಣವಲ್ಲವೇ? ಹಾಗೆಯೇ ವೇದಿಕೆಯ ಮುಂಬಾಗದಲ್ಲಿ ಜಾಗ ಕಾಯ್ದಿರಿಸಿ, ನರಿಗೆ ಹೇಳಿದ ಕೆಲಸವನ್ನು ಅದು ತನ್ನ ಬಾಲಕ್ಕೆ ಹೇಳಿತಂತೆ ಹಾಗೆ ನನ್ನ ಕೆಲಸವನ್ನು ನನ್ನ ತಂಗಿಯರ ತಲೆಗೆ ಕಟ್ಟಿ ನನ್ನ ಚಡ್ಡಿ ಸ್ನೇಹಿತರೊಡನೆ ಸ್ಟೇಜಿನ ಹಿಂಬಾಗದಲ್ಲಿದ್ದ ಮೇಕಪ್ ರೂಮಿನಲ್ಲೇನು ನಡೆಯುತ್ತಿದೆ?ಎಂದು ತಿಳಿಯುವ ಸಲುವಾಗಿ ಬಗ್ಗಿ ನೋಡುತ್ತಿದ್ದೆವು.
ಆಗಲೇ ಕೆಲವರು ಮೇಕಪ್ ಮುಗಿಸಿ ಪಕ್ಕದಲ್ಲಿ ಕುಳಿತು ಬೀಡಿ ಸಿಗರೇಟು ಸೇದುತ್ತಿದ್ದರು. ಅಷ್ಟರಲ್ಲಿ ನಮ್ಮ ಪಟಾಲಂನಲ್ಲೊಬ್ಬನಾದ ಮುದ್ದುರಾಜು ಈಶ್ವರ ಪಾತ್ರದಾರಿ ಟೈಲರ್ ವೆಂಕಟೇಶಣ್ಣನನ್ನು ನೋಡಿ.
"ಲೋ! ಅಲ್ನೋಡ್ಲಾ! ಕೈಲಾಸ್ದಲ್ಲಿ ಚಳಿ ತಡೀಕಾಗ್ದೆ ಈಸ್ವುರ ಬೀಡಿ ದಂ ಎಳಿತಾವ್ನೆ" ಅಂದ. ಅದನ್ನು ಕೇಳಿಸಿಕೊಂಡ ಹಾಗು ನಾವು ಇಣುಕುತ್ತಿದ್ದ ಜಾಗದ ಬಳಿ ಕುಳಿತಿದ್ದ ಕೌಂಡಲೀಕ ಪಾತ್ರದಾರಿ ಶಾಂತಪ್ಪನವರು ತಮ್ಮ ನಗು ಮಿಶ್ರಿತ ಸಿಟ್ಟಿನಿಂದ,
"ಯಾವ್ಲ ಅವು? ಬಗ್ನೋಡದು? ಅತ್ಲಾಗೋದಿರೂ? ಚಬ್ಬೆ ತಗಳನೋ?" ಎನ್ನುತ್ತ ಮೇಲೆದ್ದು ಪಕ್ಕದಲ್ಲಿದ ಗದೆಯೊಂದನ್ನು ಎಳೆದುಕೊಂಡರು.
"ಲೇ!!! ಓಡ್ರುಲಾ!!" ಎನ್ನುತ್ತ ಒಬ್ಬರಮೇಲೊಬ್ಬರು ಬಿದ್ದೆದ್ದು ಓಡುವಾಗ ಎದುರಿನಿಂದ ಆ ನಾಟಕದ ಸ್ಟೇಜ್ ಮ್ಯಾನೇಜರ್ ಆದ ಕಾಡೇಗೌಡರು ಎದುರಾಗಬೇಕೆ?
"ನಿಂತ್ಕಳಿ ಬಡ್ಡಿವಾ! ನಿಮ್ಗೆ ಅದ ಕಾಯ್ಸುತೀನಿ." ಎನ್ನುತ್ತಾ ಕೈಗೆ ಸಿಕ್ಕಿದ ಕಲ್ಲೊಂದನ್ನು ನಮ್ಮೆಡೆಗೆ ತೂರಿದರು, ಅದು ಗುರಿತಪ್ಪಿ ಪಕ್ಕದಲ್ಲಿ ಓಡುತ್ತಿದ್ದ ನಾಯಿಯೊಂಕ್ಕೆ ಬಿದ್ದು 'ಕ್ಜ್ಞೂಂ ಕ್ಜ್ಞೂಯಿ' ಎನ್ನುತ್ತಾ ಓಡಿಹೋಯ್ತು. ಇಲ್ಲಿ ನಮ್ಮ ಕಾಡೇಗೌಡರ ಬಗ್ಗೆ ಸ್ವಲ್ಪ ಹೇಳದಿದ್ದರೆ ಕಥೆಯ ಮುಂದಿನ ಭಾಗಕ್ಕೆ ಧಕ್ಕೆಯಾದೀತು?
ನಮ್ಮೂರಿನಲ್ಲಿ ಕಾಡೇಗೌಡ ಎನ್ನುವವರು ಬಹುಶಃ ಹತ್ತರಿಂದ ಹದಿನೈದು ಮಂದಿಯಾದರೂ ಸಿಗುತ್ತಾರೆ ಹಾಗಾಗಿ ಪ್ರತಿಯೊಬ್ಬರ ಹೆಸರಿನ ಹಿಂದೆ ಒಂದೊಂದು ಅಡ್ಡಹೆಸರಿರುತ್ತದೆ. ಹಾಗೆ ಈ ಕಾಡೇಗೌಡರಿಗೆ "ಬಕ್ರಣ್ಣ" ಎಂಬ ಅಡ್ಡ ಹೆಸರು ಹೇಗೆ ತಳುಕು ಹಾಕಿಕೊಂಡಿತೋ ಗೊತ್ತಿಲ್ಲ. ಬಹಳ ಸಹೃದಯಿ ಮನುಷ್ಯ, ಜೊತೆಗೆ ಶ್ರಮಜೀವಿ, (ಈಗ್ಗೆ ೩ ವರ್ಷದ ಕೆಳಗೆ ತೀರಿಕೊಂಡರು), ಆದರೆ ಮಾತಿಗೆ ಮುನ್ನ "ಅಪ್ಪಟ ಸಂಸ್ಕೃತ" ಪದಗಳು ಹೊರಡುತ್ತಿದ್ದರಿಂದ ಅವರ ಕೆಲಸಗಾರರಿಗೆ ಬಹಳ ಭಯವಿತ್ತು. ಆದರೆ ನೇರ ನಿಷ್ಠುರ ನುಡಿಗಳಿಗೆ ಹೆಸರಾಗಿದ್ದರು. ಇಂತಹವರನ್ನು ಸ್ಟೇಜ್ ಮ್ಯಾನೇಜರ್ ಆಗಿ ನೇಮಿಸಲಾಗಿತ್ತು. ಅವರ ಕೆಲಸ ದೃಷ್ಯಗಳಿಗೆ ತಕ್ಕನಾಗಿ ಪಾತ್ರದಾರಿಗಳನ್ನು ಅಣಿಮಾಡಿ ಕಳುಹಿಸುವುದು ಅವರ ಕೆಲಸವಾಗಿತ್ತು. ಅಲ್ಲದೆ ಸಮಯ ಪರಿಪಾಲನೆಗೆ ಸಹ ಗಮನವಿರಿಸಬೇಕ್ಕಾದದ್ದು ಅವರ ಕೆಲಸವಾಗಿತ್ತು. ಪಾತ್ರದಾರಿಗಳೆಲ್ಲರೂ ಇವರ ಬೈಗುಳಿಗೆ ಹೆದರಿ ತಮ್ಮ ತಮ್ಮ ಪಾತ್ರಗಳು ಬರುವ ಮೊದಲೇ ಅಣಿಯಾಗಿ ನಿಂತಿರುತ್ತಿದ್ದರು.
ಸರಿ ನಾಟಕ ಪ್ರಾರಂಭವಾಯ್ತು!! ಸೂತ್ರಧಾರಿ ನಾಟಕದ ಪರಿಚಯಮಾಡಿಕೊಟ್ಟ ನಂತರ ಕೌಂಡಲೀಕನ ದರ್ಬಾರು ದೃಶ್ಯ.
ಆಗಲೇ ಸ್ಟೇಜಿನ ಹಿಂಭಾಗದಲ್ಲಿ ಕಾಡೇಗೌಡರ ಆರ್ಭಟ ಮೈಕಿನ ಧ್ವನಿಗಿಂತ ಹೆಚ್ಚಾಗಿ ಕೇಳಿ ಬರುತ್ತಿತ್ತು. ನಮ್ಮ ಪಟಾಲಂಗೆ ಕುತೂಹಲ ತಡೆಯಲಾಗಲಿಲ್ಲ.
"ಲೋ! ಆ ಬಕ್ರಪ್ಪುಂಗೆ ವಸಿ ಸುಮ್ನಿರಾಕ್ಯೋಳ್ರುಲಾ" ಅಂತಾ ಸಿಟ್ಟಿನಿಂದ ಪ್ರೇಕ್ಷಕರು ಕೂಗಾಡುವುದು ಹೆಚ್ಚಾಯ್ತು. ಅದೇ ವೇಳೆಗೆ ನಮ್ಮ ಪಟಾಲಂಗೆ ಕುತೂಹಲ ತಡೆಯಲಾಗಲಿಲ್ಲ.
"ಗೌಡ್ರು ಈ ಪಾಟಿ ಕೂಗಾಡ್ತಾವ್ರೆ ಅಂದ್ರೆ ಏನೋ ಆಗದೆ!! ನಡ್ರುಲ ನೋಡವಾ!!" ಎಂದು ಒಬ್ಬರಿಗೊಬ್ಬರು ಮಾತನಾಡಿಕೊಂಡು ಮೇಲೆದ್ದೆವು. ಅಷ್ಟರಲ್ಲಿ ಮತ್ತೊಬ್ಬ ಸ್ಟೇಜ್ ಮ್ಯಾನೇಜರ್ ಆದ ಹೊಸಳ್ಳಿ ಕರೀಗೌಡರು ಕಾಡೇಗೌಡರನ್ನು ಸಮಾಧಾನಿಸುತ್ತಿದ್ದರು.
"ಲೋ! ನಿನ್ ಗಾಳಿ ಗಂಟ್ಲ ವಸಿ ಕಮ್ಮಿ ಮಾಡು, ಇಂಗೆ ಕೂಗಾಡು ಬದ್ಲು ಅವ್ನೆಲ್ಲವ್ನೆ? ಅಂತಾ ವಸಿ ಹುಡ್ಕು" ಎಂದು ಸಮಾಧಾನಿಸಿ ಕಳುಹಿಸುತ್ತಿದ್ದರು.
ನಮಗೋ ತಲೆ ಬುಡ ಒಂದೂ ತಿಳಿಯಲಿಲ್ಲ. ಕುತೂಹಲ ತಡೀಯಲಾರದೆ ಮೆಲ್ಲನೆ ಕಾಡೇಗೌಡರನ್ನು ಹಿಂಬಾಲಿಸಲು ಪ್ರಾರಂಭಿಸಿದೆವು.
"ಹಲ್ಕಾನನ್ಮಗ ನಾನ್ ಸ್ಟೇಜ್ ಮ್ಯಾನೇಜರ್ರಾದಾಗ್ಲೆ ಈ ಬೋ....ಮಗ ಇಂಗ್ಮಾಡ್ಬೇಕೋ? ಸೂ...ಮಗ, ,....... ,........, " ಇತ್ಯಾದಿಯಾಗಿ ಸಂಸ್ಕೃತ ಸಹಸ್ರಾರ್ಚನೆ ಮಾಡುತ್ತಾ ವರದಪ್ಪನ ಗುಡಿ ಬೀದೆಯೆಡೆಗೆ ಸರಸರನೆ ನಡೆಯತೊಡಗಿದರು. ಆಗಲೂ ನಮಗೇನು ಅರ್ಥವಾಗದಿದ್ದರೂ ಅದು ಅವರ "ಪಿಸ್ಟೇಜ್'' ನ ವಿಷಯವೆಂದು ಅರ್ಥವಾಗಿತ್ತು. ಅದೇನಿರಬಹುದೆಂದು ನಮ್ಮನಮ್ಮಲ್ಲಿ ಚರ್ಚೆ ಮೂದಲಾಯ್ತಾದರೂ ಅವರನ್ನು ಹಿಂಬಾಲಿಸುವುದನ್ನು ಬಿಟ್ಟಿರಲಿಲ್ಲ. ಅಷ್ಟರಲ್ಲಿ ಆ ಕತ್ತಲಿನಲ್ಲೂ ಅವರ ದೃಷ್ಠಿ ನಮ್ಮೆಡೆಗೆ ಬಿದ್ದಾಗ ನಮ್ಮಗಳ ಜೀವ ಬಾಯಿಗೆ ಬಂದಂತಾಯ್ತು, ಚಡ್ಡಿ ವದ್ದೆಯಾಗುವುದೊಂದು ಬಾಕಿ. ತಪ್ಪಿಸಿಕೊೞಲು ತಿರುಗುವಷ್ಟರಲ್ಲಿ
"ಲೇಯ್! ಬರ್ರುಲಾ ಇಲ್ಲಿ!" ಸಿಡಿಗುಂಡಿನಂತಹ ಧನಿ, ನಮ್ಮ ಐವರ ಎದೆಯಲ್ಲಿ ಕಜ್ಜಾಯದ ಅಕ್ಕಿ ಕುಟ್ಟುವ ಸದ್ದು!! ಒಂದು ಕ್ಷಣ ಏನು ಮಾಡಬೇಕೆಂದು ತೋಚದೆ ವಿಗ್ರಹಗಳಾಗಿದ್ದೆವು.
"ಬಂದಿರೋ!?! ದಡಿ ತಕಳನೋ?" ಮತ್ತೊಂದು ಖಡಕ್ಕಾದ ಆದೇಶ! ವಿದಿಯಿಲ್ಲದೆ ಅವರೆಡೆಗೆ ಒಬ್ಬರಿಗೊಬ್ಬರು ಅಂಟಿಕೊಂಡೇ ಹೆಜ್ಜೆಯಿಟ್ಟೆವು. ಸ್ವಲ್ಪವೇ ಸ್ವಲ್ಪ ಧೈರ್ಯತಂದುಕೊಂಡ ನಾನು,
"ಏ...ಏನ್ ದೊಡ್ಡಪ್ಪ!!" (ನಮ್ಮ ಅಪ್ಪನಿಗಿಂತ ಬಹಳ ದೊಡ್ಡವರಾದ್ದರಿಂದ ನಮಗೆ ರಕ್ತಸಂಬಂಧಿಗಳಲ್ಲದಿದ್ದರೂ ಅವರನ್ನು ಹಾಗೆ ಸಂಭೋದಿಸುತ್ತಿದ್ದೆ) ಎಂದೆ.
"ಇಲ್ಲೆಲ್ಲೋ ಆ ಸ್ರೀಕಂಟ ಇರ್ಬೇಕು ಉಡ್ಕುರ್ಲಾ" ಸಧ್ಯ!! ಇವರ ವಕ್ರ ದೃಷ್ಠಿ ನಮ್ಮಮೇಲಲ್ಲ, ಮೇಲಾಗಿ ನಮ್ಮನ್ನು ಕರೆದದ್ದು ಅವರ ಸಹಾಯಕ್ಕೆಂದು ತಿಳಿದು ನಮ್ಮ ನಮ್ಮ ದೇಹಗಳು ತಹಂಬದಿಗೆ ಬಂದಿದ್ದವು. ಆದರೆ "ಯಾವ ಶ್ರೀಕಂಠ?" ಅನ್ನುವುದು ಅರ್ಥವಾಗಲಿಲ್ಲ.
"ಯಾವ ಸ್ರೀಕಂಟ?" ಎಲ್ಲರಿಗಿಂತಾ ಮೊದಲೇ ಶಂಕರಲಿಂಗ ಕೇಳಿದ್ದ.
"ಇನ್ಯಾವನಿದ್ದನ್ರುಲಾ ನಮ್ ನಾಟ್ಕುದಲಿ? ಆ ಆಚಾರ್ರು ಸ್ರೀಕಂಟ, ಊರುಗ್ಮುಂದೇ ಮೇಕಪ್ಪ ಮಾಡಿಸ್ಕಂಡು ಎಲ್ಲಾಳಾಗೋದ್ನೋ? ಜಲ್ದಿ ಉಡ್ಕುರ್ಲಾ" ಎಂದು ಆದೇಶವಿತ್ತರು. ಆಗಲೇ ನಮಗೆ ಗೊತ್ತಾಗಿದ್ದು ಬ್ರಹ್ಮನ ಪಾತ್ರದಾರಿ ಶ್ರೀಕಂಠಾಚಾರ್ ಕಾಣಿಯಾಗಿದ್ದಾರೆಂದು, ಮುಂದಿನ ದೃಷ್ಯದಲ್ಲಿ ಕೌಂಡಲೀಕನಿಗೆ ಪ್ರತ್ಯಕ್ಷವಾಗಿ ವರ ನೀಡಬೇಕಿದ್ದರಿಂದ ಅವರನ್ನು ಹುಡುಕಲು ಗೌಡರು ಹಡಾವುಡಿ ಮಾಡುತ್ತಿದ್ದಾರೆಂದು ಅರ್ಥಮಾಡಿಕೊಳ್ಳುವಷ್ಟರಲ್ಲೇ,
" ವೋ! ಲೋ ಬ್ರಮ್ಮ ತೀರ್ಸೋಗವ್ನೆ!!! ಹ್ಹೀ ಹ್ಹೆ ಹ್ಹೆ ಹ್ಹೆ!!" ಎಂದು ಕೂಗಲು ಶುರು ಮಾಡಿದ ಸುಂದರ. ಗೌಡ್ರಿಗೆ ನಖಶಿಖಾಂತ ಉರಿದು ಹೋಯ್ತು.
"ಮುಚ್ಚುರ್ಲಾ ಬಾಯ!! ನೆರೂರೊರೆಲ್ಲಾ ನಾಟ್ಕ ನೋಡಕ್ಬಂದವ್ರೆ ಅವ್ರ್ಮುಂದೆ ಮರ್ಯಾದೆ ತಗೀಬ್ಯಾಡೀ. ತೆಪ್ಗೆ ಉಡ್ಕುರ್ಲಾ. ಆ ಬಡ್ಡೀಮಗ ನನ್ಕೈಗ್ ಸಿಗ್ಲಿ ಹದಾ ಕಾಯ್ಸ್ತೀನಿ, ಹೋಗುರ್ಲಾ ಉಡ್ಕುರ್ಲಾ" ತಮ್ಮ ಮನದಿಂಗಿತವನ್ನು ಹೊರಹಾಕುತ್ತಾ ಜೋರಾಗಿ ಕಿರುಚುತ್ತಾ ಮತ್ತೊಮ್ಮೆ ಹೇಳಿದರು.
ಸರಿ ಅವರ ಆದೇಶ ಅಂದ್ಮೇಲೆ ಕೇಳ್ಬೇಕೆ? ಮಾರೀಗುಡಿ, ಸ್ಕೂಲುಮನೆ, ರಾಮಮಂದಿರದ ಪಡಸಾಲೆ, ಬಸವನಗುಡಿಯ ಇಸ್ಪೀಟು ಅಡ್ಡ ಎಲ್ಲವನ್ನೂ ಹುಡುಕಿದೆವು. ಫಲಿತಾಂಶ ಮಾತ್ರ ಸೊನ್ನೆ!! ನಮ್ಮ ಬ್ರಹ್ಮ ಕಾಣಲೇ ಇಲ್ಲ!! ಅದನ್ನೇ ಕಾಡೇಗೌಡರಿಗೆ ಅರುಹಿದೆವು.
"ಅವ್ನ ಮನೇತಾವಿದ್ದನೇಂಗ್ ನೋಡ್ರುಲಾ!" ಅಂದ್ರು. ಸರಿ! ಗೌಡರೊಡಗೂಡಿ ಆಚಾರರ ಮನೆಬಳಿ ಬಂದರೆ ಮನೆಗೆ ದಪ್ಪ ಬೀಗ!!! ನಮಗೆಲ್ಲಾ ಏನೂ ತೋಚದಂತಾಯ್ತು.
ನೀರವ ರಾತ್ರಿ, ಅಲ್ಲೊಂದು ಇಲ್ಲೊಂದು ನಾಯಿ ಬೊಗಳವ ಸದ್ದಿನ ಮಧ್ಯೆ ಒಂದೊಂದು ಮನೆಯಲ್ಲಿ ಗೊರಕೆ ಶಬ್ದ!! ಬೇರೆಲ್ಲಿಯಾದರೂ ಹುಡುಕುವುದೆಂದು ನಿಷ್ಕರಿಸಿ ಅವರ ಮನೆಯಿಂದ ಹೊರಟೆವು. ವೆಂಕಟೇಶಾಚಾರ್ ಮನೆಮುಂದೆ ಬಂದಾಗ ಆಗತಾನೆ ತಯಾರಿಸಿಟ್ಟಿದ್ದ ಮರದ ಪೆಟಾರಿಯಮೇಲೆ ಏನೋ ಹೊಳೆದಂತಾಯ್ತು. ಆ ಪೆಟಾರಿಯನ್ನು ವೆಂಕಟೇಶಾಚಾರ್ ಅವರಿಗೆ ನಮ್ಮ ತಂದೆಯೇ ಹೊಸಮನೆಗೆ ಹೋಗುತ್ತಿದ್ದೇವೆ ಬಟ್ಟೆ ಬರೆ ಹಾಕಲು ಬೇಕಾಗುತ್ತದೆಂದು ತಯಾರಿಸಲು ಹೇಳಿದ್ದರು.
ಆ ಪೆಟಾರಿಯಮೇಲೆ ಹೊಳೆಯುದೇನೆಂದು ಸ್ವಲ್ಪ ಹತ್ತಿರ ಹೋಗಿ ಪರೀಕ್ಷಿಸಿದರೆ ಅದು!!!! ಬ್ರಹ್ಮನ ಮೂರು ತಲೆಗಳು!!!!!! ಗೌಡರಿಗೆ ಶ್ರೀಕಂಠಾಚಾರರ ಮೇಲಿನ ಸಿಟ್ಟು ಮತ್ತೂ ಉಲ್ಬಣಿಸಿತು.
"ಆ ನನ್ಮಗ ತಲೆ ಇಲ್ಮಡುಗ್ಬುಟ್ಟು ಎಲ್ಲಾಳಾಗೋದ್ರುನ್ಲಾ! ಲೇ ಕೆರೆಗಿರೆಕಡಿಕೆಲಾರ ಹೋದ್ನ ನೋಡ್ರುಲಾ" ಅನ್ನುವಷ್ಟರಲ್ಲಿ ಬ್ರಹ್ಮ ಕಾಣಿಯಾಗಿರುವ ವಿಚಾರ ಬಹಳಷ್ಟು ಜನರಿಗೆ ತಿಳಿದು ಎಲ್ಲರೂ ಬ್ರಹ್ಮನನ್ನು ಹುಡುಕುತ್ತಾ ಅಲ್ಲಿಗೇ ಬಂದರು. ಅಷ್ಟರಲ್ಲಿ ಪೆಟಾರಿಯೊಳಗೆ ಏನೋ ಒರಳಾಡುವ ಸದ್ದು!!! ಆ ಮನೆಯ ಸುತ್ತ ಕಲ್ಲು ಮುಳ್ಳುಗಳಿದ್ದುದ್ದರಿಂದ ಅದರೊಳಗೆ ಹಾವು ಚೇಳು ಸೇರಿಕೊಡಿರಬೇಕೆಂಬ ಅನುಮಾನ ಹಲವರನ್ನು ಕಾಡಿತು. ಇವ್ಯಾವುದಕ್ಕೂ ಕಿವಿಗೊಡದ ಕಾಡೇಗೌಡರು ಬ್ರಹ್ಮನ ತಲೆಗಳನ್ನು ಪಕ್ಕಕ್ಕಿಟ್ಟು ಪೆಟ್ಟಿಗೆ ತಗೆದು ನೋಡುತ್ತಾರೆ!!!
'ಬ್ರಹ್ಮ ಸುಖವಾಗಿ ಪೆಟಾರಿಯೊಳಗೆ ಪವಡಿಸಿದ್ದಾನೆ!!!!!!!!!'' ಬಾಯಿಂದ ಸರಾಯಿ ವಾಸನೇ ಬೇರೆ!!! ಅಲ್ಲಿಯವರೆವಿಗೂ ಸ್ತೀಮಿತದಲ್ಲಿದ್ದ ಗೌಡರ ಸಿಟ್ಟಿನ ಕಟ್ಟೆಯೊಡೆದು
"ಹಲ್ಕಾ ಸೂ............, ನೇ ನಾವಲ್ಲೆಲ್ಲಾ ಒದ್ದಾಡ್ತಿದ್ರೆ ಇಲ್ಬಂದ್ಮಲ್ಗಿದ್ದೀಯಾ?" ಎನ್ನುತ್ತಾ ಜಾಡಿಸಿ ಒಂದು ಒದ್ದರು.

ಉಳಿದವರು ಬ್ರಹ್ಮ ಎಲ್ಲಿ ಎಂದು ಹುಡುಕುವಷ್ಟರಲ್ಲಿ ನಾಟಕದ ಸ್ಟೇಜಿನಲ್ಲಿ ಕೌಂಡಲೀಕನಿಗೆ ವರ ನೀಡುತ್ತಿದ್ದ!!!..