ಶನಿವಾರ, ಡಿಸೆಂಬರ್ 6, 2014

ಪ್ರಶ್ನಾ ಸರೋವರ

ಉತ್ತರಗಳ ಸರೋವರಕ್ಕೆ ಪ್ರಶ್ನೆಯೊಂದ ಹಿಡಿದು ಧುಮುಕಿದರೆ 
ಮನದ ಮಾತುಗಳೆಲ್ಲ ಖಾಲಿ ಖಾಲಿ...........
ಸರೋವರವ ಬರಿದು ಮಾಡಿತ್ತು ಹೊಸ ಪ್ರಶ್ನೆಗಳ ಪರ್ವ..
ಮನಕೇನೋ ಇನ್ನೇನೋ ಹೇಳುವ ಕಾತುರ
ಕೇಳುವ ಕಿವಿಗಳಲ್ಲಿ ಸಾಂತ್ವಾನ ಸಂತೈಕೆಗಳ ಸೊಲ್ಲಿಲ್ಲ .....
ಕಂಡ ಕನಸುಗಳೆಷ್ಟೋ ..?? ನನಸಾಗಲು ಒಂದೂ ಇಲ್ಲ.....
ಎಲ್ಲವೂ ಕಮರಿವೆ... ಮರಟಿ, ಮುದುಡಿ, ಮುದಿಯಾಗಿವೆ...
ಪ್ರೀತಿಯ ನೀರೆರೆದರೂ ಚಿಗುರುವುದಿಲ್ಲ....
ಹಾಗೆಂದು ತಿಪ್ಪೆಗೆಸೆಯಲೂ ಸಾಧ್ಯವೇ ಇಲ್ಲ...
ಹೆಕ್ಕಿ ತಗೆದರೆ ಬರೀ ನೋವು....
ಹಾಗೆ ಮರೆತರೆ ಸಾವು..!!! ನನಗೂ ಅವಕ್ಕೂ........

ಹೃದಯದ ತೊಲೆಗೆ ಕೊಂಡಿಗಳಾಗಿ ನೇತಾಡುತ್ತಾ...
ಪ್ರತಿ ಕ್ಷಣದ ನೆನಪಿನ ಗಾಳಿಗೆ ಜೀಕುತ್ತಾ.. ಜೋಕುತ್ತಾ..
ನೆಮ್ಮದಿಯ ನೆತ್ತರ ಬಸಿದು .... ಅಟ್ಟಹಾಸ.....!!!!!!
ಎದುರಿಸುವ ಧೈರ್ಯ... ಅಂದೂ ಇಲ್ಲ.... ಇಂದೂ ಇಲ್ಲ..


ಬುಧವಾರ, ಅಕ್ಟೋಬರ್ 8, 2014

ನಿರಂತರ ಯಾತನೆ

ನಿನ ಕುಡಿ ನೋಟದ ಕಣ್ಬೆಳಕ ಕಂಡು ಕವಿಯಾದೆ
ಅದೇ ಬೆಳಕ ಬಾಳ ದೀಪವಾಗಿಸಲು ಸೋತು ಹೋದೆ

ನಿನ ನಸು ನಗೆಯ ನೆನಪಲೆ ಕನಸುಗಳ ಹೆಣದೆ
ಅದೇ ಕನಸುಗಳ ನನಸಾಗಿಸದೆ ನರಳಿ ನೆಲವನ್ನು ಕಂಡೆ

ನೀ ನಡೆದಾಡಿದೆಡೆ ನಿನ ಹೆಜ್ಜೆಗಳ ಗುರುತಿಸಿ ಗೆಜ್ಜೆ ಕಟ್ಟಿ ಕುಣಿದೆ
ಅದೇ ಹೆಜ್ಜೆಗಳ ಜೊತೆ ಹೆಜ್ಜೆಯನಿರಿಸಿ 

ಬಾಳ ಜೇನಾಗಿಸದೆ ಹೆಳವನಾದೆ

ಎದೆಯ ಮಂದಿರದ ದೇವಿಯ ಮಾಡಿ ಪೂಜಿಸಿದೆ
ಅದೇ ಎದೆಗೆ ನಿನ ಕಿವಿಯ ತಾಗಿಸಿ 

ಪ್ರೀತಿಯ ಮಂತ್ರಘೋಷವ ಕೇಳಿಸದಾದೆ


ನಾನುಸುರುವ ಪ್ರತಿ ಉಸಿರು ನೀನಾದೆ
ಆ ಉಸಿರಿನೆಸರ ಜಗಕೆ ಸಾರದಾದೆ

ಕಂಡ ಕನಸುಗಳಿಗೆ ಲೆಕ್ಕವಿಲ್ಲ
ಕಾಡಿ ಕೊಲ್ಲುವ ನೆನಪುಗಳಿಗೆ ಕೊನೆಯೇ ಇಲ್ಲ
ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ನಿನ ಭಜಿಸಿದರೂ
ನೀನೀಗ ಒಲಿಯುವುದಿಲ್ಲ
ಎದೆಯುಸಿರ ಹೆಸರು
ನೆನಪುಗಳ ಹಿಮದಲ್ಲಿ ಹೆಪ್ಪುಗಟ್ಟಿ ನಿಂತಿದೆ
ಕವಿತೆಗೂ ಕರಗಿಸುವ ಶಕ್ತಿಯಿಲ್ಲ

ಶೀತಲದ ನೋವು ನಿರಂತರ ಯಾತನೆ

ಶುಕ್ರವಾರ, ಜೂನ್ 27, 2014

ಎದೆಯೊಳಗೆ ನಿನ್ನದೇ ಸದ್ದುಗಳು......

ಎದೆಯೊಳಗೆ ನಿನ್ನದೇ ಸದ್ದುಗಳು
ಹೆಜ್ಜೆಗಳ  ಗುರುತಿದೆ
ಗೆಜ್ಜೆಯ ನಾದವಿದೆ

ಕಣ್ಣೊಳಗೆ ನಿನದೇ ಕನಸುಗಳು
ಕಾಮನಬಿಲ್ಲಿಗೇ ಗಾಳ ಹಾಕಿ
ಬಣ್ಣಗಳ ಹೀರುತ್ತಾ ಬರೆದ
ಚೆಂದದ ಸುಂದರ ಚಿತ್ತಾರ
ಮನದ ಗೋಡೆಯ ಮೇಲೆ
ಅಳಿಸಲಾಗದ ಅಚ್ಚ ಹಸಿರು

ಕರ್ಣದೊಳಗೆ
ನಿನ್ನ ಕರುಣೆಯ ಇನಿದನಿ
ಭಾವರಾಗಕೆ ಮಿಡಿದ ಶೃತಿಯಾಗಿ
ಹೊಮ್ಮಿದ ನಾದತರಂಗ
ನೀ ಪಿಸುಗುಟ್ಟಿದ ಪ್ರೀತಿ
ಮಾತುಗಳ  ಪ್ರತಿಧ್ವನಿ

ನಿನ ಸುಕೋಮಲ
ಕರಗಳಿಗರಷ್ಟು  ಶಕ್ತಿ
ಎನ್ನ ಮನದ ಕರಿಮುಗಿಲೆತ್ತರದ
ಕಡು ಕಷ್ಟಗಳ  ಕತ್ತು ಹಿಚುಕಿ
ಹುಡಿಮಾಡಿ ನೆಮ್ಮದಿಯ
ನೆರಳನೆರೆದ ಬೆರಳುಗಳ
ಸುಸ್ಪರ್ಶ ನನಗೆಂದಿಗೂ
ಧೈರ್ಯದ ದಾರಿದೀಪ

ಭಾನುವಾರ, ಜೂನ್ 22, 2014

ನಿನ್ನ ಮಂದಹಾಸ

ಮರುಗಿ ನರಳಿದ ಮನದೊಳಗೆ
ಮಿಡಿವ ನಿನ್ನ ನೆನಪಿನ ಮಧುರ ವೀಣೆ
ಸುಮ ಸಂಜೆಯ ಇನಿದನಿಯ ಮಿಡಿತ ರಾಗಕೆ
ಎದೆ ಬಡಿತದ ತಾಳಮೇಳಗಳ  ಮದ್ದಳೆ

ರಾಗ ನಿರಾಗಗಳ ಪರಿವೆಯಿಲ್ಲದೆ
ಎಲ್ಲ ದಿಕ್ಕುಗಳಲ್ಲಿ ದಾಂಗುಡಿ
ಬಗೆದಷ್ಟೂ ಆಳ, ಮೊಗೆದಷ್ಟೂ ದಾಹ,
ಅರಿತಷ್ಟೂ ನಿಗೂಘಡವಾಗಿಹ
ಬದುಕಲ್ಲಿ ಪತ್ತೆದಾರಿಕೆಯ ಹಂಗೇಕೆ

ಸತ್ತ ಸತ್ಯಗಳು ಪ್ರೇಮ ಪ್ರಲಾಪದ
ಮಧುರ ಆಲಾಪಾನೆಗಳು
ಬದುಕುಳಿದ ಸುಳ್ಳುಗಳು ಸತ್ಯದ
ಸಮಾಧಿಯೊಳಗಿನ ಕದಲಿಕೆಗಳು

ಜಗಕೆ ನಿತ್ಯ ಮಿಥ್ಯದಿ ಮುಖ ಮಜ್ಜನ
ಸತ್ಯಕೆ ಜಗವ ಬಡಿದೆಬ್ಬಿಸಿ ಅಭ್ಯಂಜಿಸುವ ತವಕ
ಸ್ವಾರ್ಥ ಜಂಗುಳಿಯೊಳಗೆ ನೀ ನಿಸ್ವಾರ್ಥದ ಪ್ರತೀಕ
ಆದರೂ ನಿನ್ನ ಕಾಣುವ ಬಾವ
ನನಗೆ ಮಾತ್ರ ಅನಂತದ ಸ್ವಾರ್ಥ

ಮನದ ಕುಲುಮೆಯೊಳಗೆ ಕುಡಿಯೊಡೆವ
ನಿರಂತರ ಮೌನದ ಲಹರಿಗಳಿಗೆ ಎಲ್ಲ ಗೊಡವೆಗಳು ಗೌಣ
ತಮದ ತೊಡರುಕಾಲಿಗೆ ಎಡವಿಬಿದ್ದಾಗ ಆಸರೆಯಾಗಿದ್ದು
ನಿನ್ನ ನಿರ್ಮಲ ಸಾಂತ್ವಾನದ ಊರುಗೋಲು

ಹೇಳಲಾಗಾದ ಮಾತುಗಳಿಗೆ ಧನಿಯಾದೆ
ಕೇಳಲಾಗದ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರವಾದೆ
ಕೊರಗುವ ಎದೆಯೊಳಗೆ ಏರುವ ಮಿಡಿತ
ಸದಾ ನಿನ್ನ ಹಿತವಾದ ಮಾತ ಕೇಳುವ ತುಡಿತ

ಎಷ್ಟು ಚಂದ .......
ದುಗುಡವ ತದುಕುವ ನಿನ್ನ ನಗು
ಮುಂಗುರುಳೊಳಗೆ ಇಣುಕಿ ಕೊಲ್ಲುವ
ನಿನ್ನ ಬಟ್ಟಲು ಕಂಗಳ ನೋಟ
ನನ್ನ ಸೃತಿಯಲ್ಲಿ ಮಿತಿಯಿಲ್ಲದ ಅಚ್ಚ ಹಸುರಿನ ಅಚ್ಚು.....
ಮಂದಾನಿಲದ ನಿನ್ನ ಮಂದಹಾಸ ನೆನೆದಾಗಲೆಲ್ಲ
ಮನ ಬ್ರಹ್ಮಕಮಲ........

ಚಾರಣ

ಪ್ರಿಯ ಗೆಳತಿ ಹೊರಟಿಹೆ
ಕನಸುಗಳ ಪರ್ವತ ಚಾರಣ
ದಾರಿಗಿದೆ ನಿನ ನೆನಪಿನ ಹೂರಣ

ಬಳಲಿಕೆಗೆ ನಿನ ಮುಂಗುರಳ  ಬೀಸಣಿಕೆ
ಕತ್ತಲಿಗೆ ನಿನ್ನ ಕಣ್ಣ ಕೋಲ್ಮಿಂಚು ದೀವಟಿಕೆ
ಬಿಸಿಲಿಗೆ ನಿನ ನಗೆಯ ನೆರಳು

ಹಸಿವಿಗೆ ನಿನ್ನ ಹಿತ ಇನಿದನಿ
ಬಾಯಾರಲು ನಿನ ಕರುಣೆಯ ಕಡಲು
ನಿನ ಸಂತಸದ ನುಡಿಗಳು
ನನಗೆ ದಾರಿಯ ನೀಲ ನಕ್ಷೆ

ಸಮಾಧಾನಗಳೇ ಊರುಗೋಲು
ನಿನ್ನ ನೋಡಿ ಕಟ್ಟದ ಗೋಪುರಕೆ
ನಿನದೇ ಹೆಸರು ನೀನೆ ಉಸಿರು
ನೆಪವಷ್ಟೇ ನಾನು

ತುತ್ತ ತುದಿ ತಲುಪಲು
ಕಾರಣವೇ ನೀನು

ಮಿಥ್ಯದ ಕಾಡು ಕಡಿದು
ಸತ್ಯದ ಹೂವ ಬಿತ್ತಿ
ಪ್ರೇಮದ ಸೌಗಂಧ ಬೆಳೆಸಿ
ನಿನ್ನಡಿಗಾಗಿ ಕಾಯುವೆ
ಇಂದು ನನ್ನ ಹಾಡು ಹಾಡಲಲ್ಲ
ನಿನ್ನ ಹಾಡು ಕೇಳಲು.........

ಪ್ರಶ್ನೆಯ ಪರಿ.....

ಕುಣಿದು ಕುಣಿಸಿದೆ
ನಲಿದು ನಲಿಸಿದೆ
ನೀನು ನಕ್ಕು ನನ್ನ
ನಗಿಸಿ ನೋವ ಮರೆಸಿ
ನೀನು ಮರೆತೆ

ದುಃಖ ನೀಗಿ ಕಣ್ಣೀರ
ಕುಡಿದು ಸಿಹಿ ಸಜ್ಜಿಗೆಯ
ಬಡಿಸಿ ಮನಕೆ ಮಲ್ಲಿಗೆಯ
ಬನವಾದೆ....
ಕಂಪ ಬೀರಿದೆ

ಮನದ ಮರೆಯಲಿ ನಿಂತು
ಎದೆಯ ಬಡಿತವೇ
ನೀನಾದೆ
ಕಣ್ಣ ಬಿಂಬದ
ಪಟವೂ ನೀನೆ
ಎನ್ನ ಕವನದ
ದಾಟಿಯೂ ನೀನೇ
ಪಲ್ಲವಿ ಅನುಪಲ್ಲವಿಗಳ
ಹೆಜ್ಜೆಯೂ ನಿಂದೆ

ಆದರೂ .........

ನೀನೇಗೆ ಪದಗಳಿಗೆ
ಬಣ್ಣದ ಜೀವ ಕೊಟ್ಟೆ!!!!!
ಎಂಬ ನಿನ್ನ ಪ್ರಶ್ನೆಯ
ಪರಿ ತಿಳಿಸೆಯಾ
ಎನ್ನ ಮನ ಮಂದಿರದ
ಒಡತಿ.....!!

ನಿನ್ನ ಹೊಳಪು

ಸಮುದ್ರಕ್ಕೂ ಉಣ್ಣಿಮೆಯ ಕಂಡು
ಉಕ್ಕುವ ಆಸೆ
ಆಗಸದಿ ಚಂದ್ರನೇ ಇಲ್ಲ .....

ಚಂದ್ರನಿಗೂ ಇಳೆಗೆ
ತಂಪ ಪಸರಿಸುವಾಸೆ .....
ಮೋಡಗಳ ತೆರೆಯ ತೊರೆಯಲಾಗುತ್ತಿಲ್ಲ.......

ಸುಡುವ ಸೂರ್ಯನಿಗೂ
ಬರೀ ಬೆಳಕ  ನೀಡುವಾಸೆ....
ತನ್ನೊಡಲ ದಾವಾಗ್ನಿ  ದಹಿಸುತ್ತಲೇ ಇರಲು
ಅವನೇನು ಮಾಡಲು ಸಾಧ್ಯ......

ನೈದಿಲೆಗೆ ನಗುವ ಆಸೆ .....
ಮಾವಿನಮರದಲಿ ಚಿಗುರೇ ಇಲ್ಲ
ಇನ್ನು ಇಂಪು ಬರುವುದಾದರೂ ಎಲ್ಲಿಂದ.......

ಬರಡು ಕಾನನದಿ ಹಸಿರು
ಸಿರಿಯ ಕಾಣುವಾಸೆ....
ಮೊಳಕೆಗಳು ಚಿಗುರಲು
ಜಲದ ಸೆಲೆಯೇ ಇಲ್ಲ....

ನನಗೆ ಗೊತ್ತು ನಿನ್ನ ಸಹನೆ ಪ್ರಶ್ನಾತೀತ......
ಅದಕ್ಕೂ ಕಟ್ಟಕಡೆಯ ತುದಿಯುಂಟು........
ಒಡೆದ ಮಾತುಗಳು ಮನದೊಳಗೆ
ತಿದಿಯೊತ್ತಿ ಕೊರಳುಬ್ಬುವುದು ಸಹಜವೇ.....
.
ಎಲ್ಲವೂ ಕ್ಷಣಿಕ ........

ನಿನ್ನ ತಾಳ್ಮೆ ಗೆ ಜಯವುಂಟು....
ಪುಟಕ್ಕಿಟ್ಟ ಚಿನ್ನವು ನೀನು......
ಬೆಂಕಿಯಲಿ ಬೆಂದರೂ
ನಿನ್ನ ಹೊಳಪು ಜಗದ ಬೆಳಕು..

ಶನಿವಾರ, ಮೇ 10, 2014

ಸುಂದರ ಆಸೆಗಳು ...

ಇನ್ನೂ ಆಡಬೇಕು ಅನ್ನುವಷ್ಟರಲ್ಲಿ ... ಮುಗಿವ ಮಾತು...
ಇನ್ನೂ ಸ್ವಲ್ಪ ಜೊತೆಗಿರಬಾರದೇ ಎನ್ನುವ ಸ್ನೇಹ...
ಎಷ್ಟು ಮಿಂದರೂ ... ಮತ್ತೆ ಸಾಲದೆನ್ನುವ ಪ್ರೇಮ...
ಸುಂದರ....... ಅತೀ ....ಸುಂದರ ..

ನಿನಗಾಗಿ ... ಕಾಯುವ ಕಾತರಿಕೆ...
ನಿಲ್ಲದ ಕನಸುಗಳ ಕನವರಿಕೆ...
ಅಂತರಾಳದ ಅನುಭೂತಿ .....
ನೆನಪುಗಳ ಬಿಸಿಗೆ...  ಕರಗುವ ಕಣ್ಣೇರು...
ಸುಂದರ....... ಅತೀ ....ಸುಂದರ ..

ಕತ್ತಲಲಿ ಕೋಲ್ಮಿಂಚಿನ ನಿನ್ನ ಮೆಲುನಗು...
ನಿನ ಮುದ್ದು ... ಮಾತುಗಳ ಮೆರವಣಿಗೆ...
ರೆಕ್ಕೆ ಹೋಗುವುದೂ ಗೊತ್ತಿದ್ದರೂ ...
ಸುಡುವ ದೀಪಕ್ಕೆ ಮುತ್ತಿಕ್ಕುವ ದೀಪಣಗಿತ್ತಿಯಂತೆ ...
ನಿನ್ನೆಳೆತದ ಸುಳಿಯಲ್ಲಿ ಸಿಕ್ಕಿಕೊಳ್ಳುವುದು...
ಇನ್ನೂ.. ಸುಂದರ....... ಅತೀ ....ಸುಂದರ ..

ಕನಸುಗಳಿಗೆ ಬಣ್ಣ ಹಚ್ಚಿ ...ಹಾರಿ ಬಿಟ್ಟು ...
ಬಯಕೆಗಳ ಬಾನಾಡಿಗೆ ರೆಕ್ಕೆ ಕಟ್ಟಿ... ನೀಲಾಗಸದಲ್ಲಿ ...
ವಿಹರಿಸುತ ... ಕಟ್ಟಳೆಗಳ ಅಣಕಿಸುವುದು...
ಸುಂದರ....... ಅತೀ ....ಸುಂದರ ..

ನಿನ ಅಂತರಾಳದೆದೆಗೊರಗಿ ... ನಿನ್ನ ಮನದ ಪಿಸುಮಾತುಗಳ ...
ಕಿವಿಗೊಟ್ಟು ಕೇಳುವಾಸೆ...
ಯಾರಿಗೂ ಕಾಣದ ನಿನ್ನ ನೋವುಗಳನು  ನನ್ನೆದೆಯ ಬಿಸಿಲು ಮಚ್ಚೆಯ ಮೆಲೆ...
ಹರವಿ ಒಣಗಿಸಿ ಕೊಲ್ಲುವಾಸೆ ...
ಮರುಗುವ ಹೃದಯಕ್ಕೊರಗಿ ... ಕಣ್ಣೀರನೊರಸುವಾಸೆ...
ಸುಂದರ....... ಅತೀ ....ಸುಂದರ ..ಶುಕ್ರವಾರ, ಏಪ್ರಿಲ್ 18, 2014

ಉಸಿರ ಬಲ .......

ನಿನ್ನ ದಟ್ಟ ನೆನಹುಗಳೇ ತುಂಬಿದ ನನ್ನ ಮನದ ಕಾನನದಿ
ನಿನನ ಚೆಂದದ ಚಿತ್ತಾರದ ವಿಹಾರ ....
ಬಡಿದೆಬ್ಬಿಸಿದ ಕುಳಿರ್ಗಾಳಿಗೆ
ಎನ್ನ ಮನಾವಾಯ್ತು ಶಿಶಿರ .....

ಸಿಹಿಯೋ ಕಹಿಯೋ ಅರಿಯದ ತಳಮಳ
ಮನ ಬೇಗುದಿಯಲ್ಲಿ ಬೆಂದಾಗ ಕಣ್ಣು ನೀರ ಕೊಳ
ಬೆಂಬಿಡದೆ ಕಾಡುವ ಮಧುರ  ಮನದೊಳಗೆ
ತಡಕಾಟ ತಾಕಲಾಟಗಳ ತುಂತುರು .......

ನೀ ದೂರವಿದ್ದಾಗ ಎನ್ನ ಸನಿಹದಲ್ಲೇ ಇದ್ದೆ..
ಕಾಣದ ಆಗಸದಿಂದ ಮರಳಿ ಬಳಿ ಬಂದು
ಇಲ್ಲಾ!! ದೂರಾಗುವೆನೆಂದಾಗ .....
ಸಲಿಲದಿಂದ ಸಡಿಲಗೊಂಡ ಮೀನಿನಂತೆ ಮನ ವಿಲವಿಲ.......

ಮರಳಿ ಸ್ನೇಹ ಹಸ್ತದ ಜಲವನೆರೆದು
ಉಳಿಸಲಾರೆಯ ಉಸಿರ ಬಲ .......................