ಬುಧವಾರ, ಸೆಪ್ಟೆಂಬರ್ 8, 2010

'ಸ್ವಯಂವರ' ಎಂಬ ಅವಾಂತರ ....!!!!!!!

ಅಬ್ಬಬ್ಬ್ಬಾ!!!!!!!! ನಾವು ನಮ್ಮ ಜಗತ್ತು, ನಮ್ಮ ವೈಜ್ಞಾನಿಕತೆ ಎಷ್ಟೊಂದು ಮುಂದುವರೆದಿದೆ. ಅದು ನಿಜಕ್ಕೂ ಸಂತಸವೇ. ಆದರೆ ಅದೇ ತಾಂತ್ರಿಕತೆ ಎಷ್ಟೆಲ್ಲ ಎಡವಟ್ಟುಗಳಿಗೆ ಕಾರಣವಾಗಿದೆ ಎನ್ನುವುದನ್ನು ನೆನೆಸಿಕೊಂಡರೆ ಮೈಜುಮ್ಮೆನ್ನದಿರುವುದಿಲ್ಲ. ಈಗ ಅದನ್ನೆಲ್ಲ ಹೇಳಿ ನಿಮ್ಮ ತಲೆಗೆ ಹುಳು ಬಿಡುವಿದಿಲ್ಲ ಬಿಡಿ. ಸದ್ಯಕ್ಕೆ ಕೇವಲ 'ಟಿ.ವಿ' ಎಂಬ ಒಂದುಕಾಲದ ಮೂರ್ಖಪೆಟ್ಟಿಗೆ ಎಷ್ಟೊಂದು ಜನರನ್ನು ಮೂರ್ಖರನ್ನಾಗಿಸಿದೆ ನೋಡಿ!!
ಮೊದಮೊದಲು ಟಾಟಾ-ಬಿರ್ಲಾ, ಅಂಬಾನಿ, ಬಜಾಜ್, ಐಟಿಸಿ ಮತ್ತಿತರ ಕಂಪನಿಗಳ ಜೋಬಿಗೆ Advertizeಗಳ ರೂಪದಲ್ಲಿ ಕೈಹಾಕಿ ಕಾಸು ಕಾಣುತ್ತಿದ್ದ ಚಾನಲ್ ಗಳು, ನಿಧಾನವಾಗಿ ನಮ್ಮ ಸಂಸ್ಕೃತಿಯ ಮೇಲೆ ಯಾವರೀತಿಯ ದಾಳಿಯಿಟ್ಟವೆಂದರೆ ಇಂದು ಅವೇನೇ ಮಾಡಿದರೂ ಅದು ನಮ್ಮ ಸಂಸ್ಕೃತಿಯ ಭಾಗವೆಂದೇ ನಾವೂ ನೀವೂ ಎಲ್ಲರೂ ನಂಬುವಂತಿದೆ. ಅಷ್ಟೂ ಸಾಲದೆಂಬಂತೆ ಇಂದು ಬೆಳ್ಳಂಬೆಳಿಗ್ಗೆ ಜೋತಿಷ್ಯ ಕಾರ್ಯಕ್ರಮಗಳನ್ನು ಪ್ರಸಾರಮಾಡುವಮೂಲಕ ಬೀದಿ ಬದಿ ಕುಳಿತು ಗಿಳಿ ಶಾಸ್ತ್ರ ಹೇಳುತ್ತಾ ಹೊಟ್ಟೆಹೊರೆದುಕೊಳ್ಳುತ್ತಿದ್ದವರ ಬಾಯಿಗೆ ಮಣ್ಣುಹಾಕಿವೆ. ಅದು ಹೋಗಲಿ ಅಂದರೆ ಊರೂರು ತಿರುಗಿ ಹತ್ತಾರುಕಡೆ ವಿಚಾರಿಸಿ ಒಂದು ಗಂಡಿಗೆ ಒಂದು ಒಳ್ಳೆಯ ಹೆಣ್ಣಿನ ಸಂಬಂದಗಳನ್ನು ಹುಡುಕಿ ಐನೂರು ಸಾವಿರವೋ ತೆಗೆದುಕೊಂಡು ಸಂಸಾರದೂಗಿಸುತ್ತಿದ್ದ ಬಡಪೆಟ್ಟಿಗೆಗೂ ನಮ್ಮ ಮಾಜಿ ನಟೀಮಣಿ ರಕ್ಷಿತಾರಂತಹವರು ಸುತ್ತಿಗೆಯ ಮೊಳೆಯೊಡೆದಿದ್ದಾರೆ.
ಕಳೆದ ಭಾನುವಾರ ಎಂದಿನಂತೆ ಹತ್ತು ಗಂಟೆಗೆ ಎದ್ದು ಹಬೆಯಾಡುತ್ತಿದ್ದ ಕಾಫಿಯ ಕಪ್ಪಿಗೆ ತುಟಿಯಿಟ್ಟು ಟಿ.ವಿಯ ರಿಮೋಟಿಗೊಂದು ಮೊಟುಕಿ, ಚಾನಲ್ ಗಳನ್ನು ಬದಲಾಯಿಸುತ್ತಾ ಕುಳಿತೆ. ಸುವರ್ಣ ಚಾನಲ್ ನಲ್ಲಿ ಆ ವಾರ ಪೂರ್ತಿ ಪ್ರಸಾರವಾಗಿದ್ದ 'ಸ್ವಯಂವರ' ಕಾರ್ಯಕ್ರಮದ ಮರುಪ್ರಸಾರ ಬರುತ್ತಿತ್ತು. ಆ ಅಸಂಬದ್ದ reality showಗಳನ್ನು ನೋಡಲು ಇಷ್ಟವಿಲ್ಲದ್ದಿದ್ದರಿಂದ ಚಾನಲ್ ಬದಲಾಯಿಸಿದೆ. ಆ ತರಹದ ಕಾರ್ಯಕ್ರಮಗಳು ಸಮಾಜಕ್ಕೆ ಒಳಿತುಮಾಡುವುದಕ್ಕಿಂತ ಕೇಡು ಬಗೆದಿರುವುದೇ ಹೆಚ್ಚೆಂದು ನನ್ನ ಅಭಿಪ್ರಾಯ. ಅಷ್ಟರಲ್ಲಿ ನನ್ನ ಭಾವಮೈದುನ ಹರಿ
''ಭಾವ! ಭಾವ! ಬದ್ಲಾಯಿಸ್ಬೇಡಿ ಈವಾರ ಪೂರ್ತಿ ಆ programme ನೋಡೋಕಾಗ್ಲಿಲ್ಲ ಪ್ಲೀಸ್!" ಅಂದ. ವಿದಿಯಿಲ್ಲದೆ ಕಾಫಿ ಹೀರೋವರೆಗೆ ಕಷ್ಟಪಟ್ಟು ಆ ಕಾರ್ಯಕ್ರಮ ನೋಡುವ ಅನಿವಾರ್ಯತೆಗೆ ಸಿಲುಕಿದೆ. ಯಾರೋ ಒಬ್ಬ ಜುಬ್ಬ ಪೈಜಾಮ ಹಾಕಿದ ಸತ್ತನಾಯಿ ಎಳೆಯುವವರು ತಲೆಗೆ ಎಣ್ಣೆ ಬಳಿದುಕೊಂಡವರಂತೆ ಎಣ್ಣೆ ಬಳಿದುಕೊಂಡ (ಆತನ ಮೇಲೆ ಇಷ್ಟು ಕೋಪವನ್ನು ವ್ಯಕ್ತಪಡಿಸುತ್ತಿತುವ ಕಾರಣ ಮುಂದೆ ನಿಮಗೇ ತಿಳಿಯುತ್ತದೆ) ವ್ಯಕ್ತಿಯೊಬ್ಬ ಅಲ್ಲಿ ಬಂದಿದ್ದ ವಧುವಿಗೆ ಆ ಸ್ಪರ್ಧೆಗೆ ಬಂದಿರುವ ಹುಡುಗರ ಜನ್ಮದಿನಾಂಕವನ್ನಾಧರಿಸಿ ಅವರ ಭವಿಷ್ಯವೇಳುತ್ತಿದ್ದ. ಹಾಗೆ ಹೇಳುತ್ತಾ ಒಬ್ಬ ಹುಡುಗನ ಜನ್ಮದಿನಾಂಕವನ್ನು ನೋಡಿ,
"ಈ ದಿನಾಂಕದಲ್ಲಿ ಹುಟ್ಟಿದವರನ್ನು ಮದುವೆಯಾಗುವುದಿರಲಿ ಭೂಮಿಯ ಮೇಲೂ ಅವರು ಬದುಕಲು ಅರ್ಹರಲ್ಲ" ಎಂಬ ಅರ್ಥಬರುವಂತೆ ಘೋಷಿಸಿಬಿಟ್ಟ. ಆ ಕ್ಷಣದಲ್ಲಿ ಆತ ನನಗೆ ನಮ್ಮ ಸಂಸ್ಕೃತಿಯ ಭಯೋತ್ಪಾದಕನಂತೆ ಕಂಡ. ಎಲ್ಲರೂ ತಿಳಿದ ಮಟ್ಟಿಗೆ ಜ್ಯೋತಿಷ್ಯಶಾಸ್ತ್ರವೆಂಬುದು ನಮ್ಮ ದೇಶದ ಅಷ್ಟೇ ಏಕೆ ಪ್ರಪಂಚದ ಖಗೋಳಶಾಸ್ತ್ರದ ಭದ್ರಬುನಾದಿ.ಅದು ಮನುಷ್ಯ ಬದುಕಲು ಬೇಕಾಗುವ ಜೀವನೋತ್ಸಾಹವನ್ನು ತುಂಬುತ್ತದೆ. ಜೀವನದಲ್ಲಿ ಮುಂದೇನು ಎನ್ನುವಾಗ ಧೈರ್ಯ ತುಂಬಿ ಜೀವನದ ಮೇಲಿ ನಂಬಿಕೆ ಬರುವಂತೆ ಮಾಡುವುದು ನಮ್ಮ ಜ್ಯೋತಿಷ್ಯ. ಅದು ಇಂದು ಇಂತಹ ಅರೆಬರೆ ತಿಳಿದವರಿಂದ ನಂಬಿಕೆ ಹುಟ್ಟಿಸುವ ಬದಲು ಮೂಡನಂಬಿಕೆ ಮೂಡಲು ಕಾರಣವಾಗಿರುವುದು ಪ್ರಸ್ತುತ ಸ್ಥಿತಿಯ ದುರಂತವೇ ಸರಿ. ಈ ರೀತಿ ಯೋಚನಾಲಹರಿ ಹರಿಯುವಷ್ಟರಲ್ಲಿ ನನ್ನ ಪಾಲಿನ ಕಾಫಿ ಮುಗಿದಿತ್ತು. ಲೋಟ ಕೆಳಗಿಟ್ಟು ಮೇಲೆದ್ದೆ. ಹರಿಗೂ ಸಹ ಬೇಜಾರಾಗಿರಬೇಕೆನಿಸುತ್ತೆ. ಮಧ್ಯಾನ್ಹ ತಾನು ಸ್ನೇಹಿತನ ನಿಶ್ಚಿತಾರ್ಥವೊಂದಕ್ಕೆ ಹೊರಟಿರುವುದಾಗಿಯೂ ಊಟಕ್ಕೆ ಕಾಯಬೇಡಿರೆಂದು ತಿಳಿಸಿ ಹೊರಟ.
ಸುಮಾರು ೩ ಘಂಟೆಯ ಸುಮಾರಿಗೆ ವಾಪಸ್ಸು ಬಂದು ನನ್ನವಳಿಗೆ ಅಂದರೆ ಅವನ ಅಕ್ಕನಿಗೆ
"ಊಟ ಕೊಡಕ್ಕ ಹೊಟ್ಟೆ ಹಸಿತೀದೆ" ಅಂದ. ನಮಗೋ ಆಶ್ಚರ್ಯ!! ತಡೆಯದೇ ಕೇಳಿದೆ.
"ಯಾಕಯ್ಯ? ಎಂಗೇಜ್ಮೆಂಟ್ ನಲ್ಲಿ ಊಟ ಹಾಕ್ಲಿಲ್ವೋ?" ರೇಗಿಸಿದೆ
"ಅಯ್ಯೋ! ಯಾಕೇಳ್ತೀತೀ ಭಾವ!! ಆ ದರಿದ್ರ ಸ್ವಯಂವರ ಕಾರ್ಯಕ್ರಮದಿಂದಾಗಿ ನನ್ನ ಸ್ನೇಹಿತನ ಮದ್ವೆ ಮುರಿದುಬಿತ್ತು" ಅಂದ.
"ಏಕೆ? ಏನಾಯ್ತು?"
"ಏನಿಲ್ಲ ಭಾವ ಬೆಳಿಗ್ಗೆತಾನೆ ನೋಡಿದ್ರಲ್ಲ ಆ programmeನ, ಅವನ್ಯಾವನೋ ಹೇಳಿದ್ನಲ್ಲ ಆ ಡೇಟ್ ನಲ್ಲಿ ಹುಟ್ಟುದೋರು ಸರೀ ಇಲ್ಲಾಂತ, ಅದಕ್ಕೆ ನಿಂತೋಯ್ತು, ಯಾಕಂದ್ರೆ ನನ್ನ friend ಕೂಡ ಹುಟ್ಟಿರೋದು ಅದೇ ಡೇಟ್ ನಲ್ಲಿ" ಅಂದ.
ಈಗ ನೀವೇ ಹೇಳಿ ಇದು ಅವಾಂತರವಲ್ಲದೆ ಮತ್ತಿನ್ನೇನು. ಇವುಗಳಿಗೆ ಕಡಿವಾಣಹಾಕಲು ಯಾವುದೇ ಮಾರ್ಗಗಳಿಲ್ಲವೇ?
ಇದು ನಿಜಕ್ಕೂ ಚಿಂತಿಸಬೇಕಾದ ವಿಷಯ. ಅಲ್ಲವೇ?

ಪೋಲೀಸ್ ಸ್ಟೇಷನ್ ನಲ್ಲಿ ಎರಡು ಘಂಟೆ.... !!!!!!!!!!!!!

ಅನೇಕ ಪೋಲೀಸ್ ಮಿತ್ರರಿದ್ದಿದ್ದರಿಂದ ಅವರನ್ನು ಭೇಟಿಯಾಗಲು ಕೆಲವೊಮ್ಮೆ ಪೋಲೀಸ್ ಸ್ಟೇಷನ್ ನ ಮೆತ್ತಿಲು ಹತ್ತಿದ್ದುಂಟು, ಹಾಗೆ ಹೋದಾಗ ಕುರುಕಲು ತಿಂಡಿ, ಕಾಫಿ, ಚಹಾಗಳ ಸಮಾರಾಧನೆ ಆಗಿದ್ದೂ ಉಂಟು, ಹಾಗಾಗಿ ಅವರ ಸಹೋದ್ಯೋಗಿಗಳಿಂದಲೂ ಗೌರವ ಸಿಗುತ್ತಿದ್ದರಿಂದ ಆ ಇಲಾಖೆಯ ಬಗ್ಗೆ ಸ್ವಲ್ಪ ಗೌರವವೂ ಉಳಿದುಕೊಂಡಿತ್ತು. ಆದರೆ ಸಿನಿಮಾಗಳಲ್ಲಿ ತೋರಿಸುವಷ್ಟು ಪೋಲೀಸರೇನು ಕೆಟ್ಟವರಲ್ಲ ಎಂಬ ಭಾವನೆ ಮನದ ಯಾವುದೋ ಮೂಲೆಯಲ್ಲಿ ಮುದುರಿ ಕುಳಿತಿತ್ತು.
ಆದರೆ ಈಗ ಪೋಲೀಸ್ ಸ್ಟೇಷನ್ ನಲ್ಲಿ ಆದ ಅನುಭವ ಅವರ ನಿಜವಾದ ಮುಖವನ್ನು ಪರಿಚಯಿಸಿತಲ್ಲದೆ, ಅವರೆಡೆಗಿನ ಅಸಡ್ಡೆ ಉಲ್ಬಣಿಸಲೂ ಕಾರಣವಾಯ್ತು. ಆ ಅನುಭವನ್ನು ನೀವೂ ಸಹ ಓದಿ, ಮುಂದೆ ನಿಮಗೊಂದು ದಿನ ಸಹಾಯವಾಗಬಹುದು
ಕಳೆದ ತಿಂಗಳ ಕೊನೆಯ ಸೋಮವಾರ ದಂದು ಸಂಜೆ ೭ ರ ಸುಮಾರಿಗೆ ಮೈಸೂರಿನ ಎಮ್. ಜಿ ರಸ್ತೆಯಲ್ಲಿ (ಚಾವಡಿ ಬೀದಿ) ಸರಿಯಾದ ಜಾಗದಲ್ಲೇ ಅಂದರೆ ಯಾವ ಜಾಗದಲ್ಲಿ ಪೋಲೀಸರು ಪಾರ್ಕಿಂಗ್ ಗೆಂದು ಜಾಗ ನಿಗದಿಪಡಿಸಿದ್ದಾರೋ ಆ ಜಾಗದಲ್ಲೇ ಬೈಕ್ ನಿಲ್ಲಿಸಿ ಎದುರಿಗೇ ಇರುವ ವೈದ್ಯರನ್ನು ಭೇಟಿಮಾಡಲು ಹೊರಟೆ. ನನ್ನ ಕೆಲಸ ಮುಗಿಸಿ ಮತ್ತೆ ಬೈಕ್ ಬಳಿ ಬರಲು ಸುಮಾರು ಅರ್ಧಗಂಟೆಯಾಗಿರಬೇಕು. ಬಂದು ನೋಡಿದರೆ.....ಮಹದಾಶ್ಚರ್ಯ!!!!!!!!! ನನ್ನ ಬೈಕ್ ಕಾಣುತ್ತಿಲ್ಲ!! ಮತ್ತೆ ಮತ್ತೆ ಜ್ನಾಪಿಸಿಕೊಂಡೆ, "ಸರಿಯಾದ ಜಾಗದಲ್ಲೇ ಬೈಕ್ ನಿಲ್ಲಿಸಿದ್ದೆನಾ? ಬೈಕ್ ನಿಲ್ಲಿಸಿದ್ದಲ್ಲೇ ನೋಡುತ್ತಿದ್ದೇನೆಯೆ?" ಆದರೂ ನನ್ನ ಬೈಕ್ ಕಾಣುತ್ತಿಲ್ಲವಲ್ಲ ಅಂದರೆ ಅದು ಕಳುವಾಗಿದೆ" ಎಂದುಕೊಂಡಾಗ ಬಹಳ ಬೇಸರವಾಯ್ತು. ಕಾಸಿಗೆ ಕಾಸು ಕೂಡಿಟ್ಟು, ಸಾಲ ಸೋಲ ಮಾಡಿ ಕೊಂಡು ಕೊಂಡ ಬೈಕ್ ಅದು, ಅದಕ್ಕಿಂತ ಹೆಚ್ಚಾಗಿ ತಿಂಗಳ ಕೊನೆ ಬೇರೆ, ನನ್ನ ಬಾಸ್ ನಿಂದ ಬೇರೆ ಫೋನ್ ನ ಮೇಲೆ ಫೋನ್!!
" ಏನ್ರೀ? ಉಮಾಶಂಕರ್, ಎಲ್ಲಾ ಟೆರಿಟರೀದೂ ಬಿಲ್ಲಿಂಗ್ ಮುಗೀತು. ನಿಮ್ಮೊಬ್ರದ್ದೇ ಬಾಕಿ! ಇನ್ನು ಎಷ್ಟೊತ್ರೀ?" ಎಂದು ಕೂಗಾಡುತ್ತಿದ್ದಾರೆ. ಈಗೇನಾದರೂ ಈ ವಿಷಯವನ್ನು ತಿಳಿಸಿದರೆ. ಏನ್ರೀ? ಟಾರ್ಗೆಟ್ ಮಾಡ್ಬೇಕು ಅಂತಾ ನಾಟ್ಕನಾ? ಎನ್ನುವ ಬೈಗುಳ ಬೇರೆ ತಿನ್ನಬೇಕಾಗುತ್ತದೆಂದು ತಿಳಿದು
"ಸರ್! ಇಲ್ಲೇ ಸ್ಟಾಕಿಸ್ಟ್ ಹತ್ತಿರಾನೇ ಇದೀನಿ ಸರ್! ಅವರೆಲ್ಲೋ ಹೊರಗೋಗಿದ್ದಾರೆ ಬಂತಕ್ಷಣ ಆರ್ಡರ್ ಕಳಿಸ್ತೀನಿ" ಅಂತ ಸುಳ್ಳು ಹೇಳಿ, ಏನೂ ಮಾಡಲು ತೋಚದೆ ಒಂದು ಕ್ಷಣ ಕಣ್ಣು ಮುಚ್ಚಿ ತಲೆ ತಗ್ಗಿಸಿ ನಿಂತೆ. ನಂತರ ನನ್ನ ಮಿತ್ರ ಗುರುಪ್ರಸಾದನಿಗೆ ಫೋನಾಯಿಸಿ ವಿಷಯ ತಿಳಿಸಿ ನಾನಿರುವಲ್ಲಿಗೆ ಬರಲು ಹೇಳಿದೆ. ಅವನು ಬರುವಷ್ಟರಲ್ಲಿ ನನ್ನ ಸ್ಟಾಕಿಸ್ಟ್ ಗೆ ಫೋನಾಯಿಸಿ ಆರ್ಡರ್ ತೆಗೆದುಕೊಂಡು ಕಂಪನಿ ಕೆಲಸ ಮುಗಿಸಿ ಸ್ವಲ್ಪ ನಿರಾಳವಾಗುವಷ್ಟರಲ್ಲಿ ಗುರುಪ್ರಸಾದ್ ಎದುರಿಗಿದ್ದ.
"ಈ ಏರಿಯಾ ಲಕ್ಷ್ಮೀಪುರಂ ಸ್ಟೇಷನ್ ರೇಂಜ್ಗೆ ಬರುತ್ತೆ. ಅಲ್ಲೋಗಿ ಕಂಪ್ಲೇಟ್ ಕೊಡೋಣ ನಡಿ" ಎಂದ.
"ಅದು ಸರಿ, ಹೇಗೂ ಇನ್ಶ್ಯೂರೆನ್ಸ್ ಇದೆ ನಡಿ" ಎನ್ನುತ್ತ ಬೈಕ್ ಏರಿ ಲಕ್ಷ್ಮೀಪುರಂ ಸ್ಟೇಷನ್ ಮುಂದೆ ಇಳಿದೆವು. ಅಲ್ಲಿ ನನಗೆ ಮತ್ತೊಂದು ಅದ್ಭುತ ಕಾದಿತ್ತು!! ನನ್ನ ಬೈಕ್ ಅಲ್ಲೇ ನಿಂತಿತ್ತು !!! ಅದನ್ನು ನೋಡಿದ ಗುರು.
"ಏನ್ಮಗಾ! ನಿನ್ನದ್ರುಷ್ಟ ಚೆನ್ನಾಗಿದೆ, ಕದ್ದೋರು ಗಾಡೀನ ಸ್ಟೇಷನ್ಗೇ ತಂದಿಟ್ಟವರಲ್ಲೋ!" ಎಂದ ಖುಷಿಯಿಂದ. ಬೈಕ್ ಅಲ್ಲಿರುವುದನ್ನು ನೋಡಿ ಆನಂದವಾದರೂ ಆ ಬೈಕ್ ಅಲ್ಲಿಗೇಗೆ ಬರಲು ಸಾಧ್ಯ ಎಂಬ ಪ್ರಶ್ನೆ ತಲೆಕೊರೆಯಲು ಶುರುವಾಯ್ತು. ಸೀದಾ ಆ ಸ್ಟೇಷನ್ ನ ವ್ರೈಟರ್ ಬಳಿ ಹೋಗಿ
"ಸರ್ ! ನನ್ನ ಬೈಕ್ ಇಲ್ಲಿಗೇಗೆ ಬಂತು?" ಎಂದೆ
"ಓಹೋ!! ಸಖ್ಖತ್ತಾಗ್ಕೇಳೀರೀ. ನೋ ಪಾರ್ಕಿಂಗ್ ಜಾಗದಲ್ಲಿ ನಿಲಿಸ್ಬುಟ್ಟು ಹೋಗಿದೀರಿ, ನಂ ಟೈಗರ್ನೋರು ಎತ್ತಾಕಂಬದವ್ರೆ, ೩೦೦ ರೂ ಫೈನ್ ಕಟ್ಟಿ, ಡಾಕ್ಯುಮೆಂಟ್ ತೋರ್ಸಿ ಗಾಡಿ ತಗಂಡೋಗಿ" ಎಂಬ ಉತ್ತರ ಕೇಳಿ ಆಶ್ಚರ್ಯವಾಯ್ತು.
"ಸರ್ ಗಾಡೀನ ಸರಿಯಾದ ಜಾಗದಲ್ಲೇ ಪಾರ್ಕ್ ಮಾಡಿ ಹೋಗಿದ್ದೆ, ಅದಕ್ಕೆ ನಾನ್ಯಾಕ್ ಫೈನ್ ಕಟ್ಟಲಿ?" ಎಂದೆ. ನನ್ನ ಉತ್ತರ ಕೇಳಿ ಆ ಪೇದೆ ಮಹಾಶಯನಿಗೆ ಮೈ ಉರಿದು ಹೋಗಿರಬೇಕು.
"ಕಟ್ದಿದ್ರೆ ಹೋಗಪ್ಪ ನಾಳೆ ಕೋರ್ಟಲ್ಬಂದು ಅಲ್ಲೇ ಫೈನ್ ಕಟ್ಟಿ ಬುಡುಸ್ಕೊ" ಎನ್ನುವ ಆ ಸಿಟ್ಟಿನ ಧನಿಯಲ್ಲಿ ನಮ್ಮೆಡೆಗಿನ ಗೌರವವೂ ಕಡಿಮೆಯಾಗಿತ್ತು.
"ಫೈನ್ ಕಟ್ತೀನಿ ಆದ್ರೆ ನೋ ಪಾರ್ಕಿಂಗ್ ಜಾಗದಲ್ಲಿ ನಿಲ್ಸಿದ್ದಕ್ಕೆ ಸಾಕ್ಷಿ ತೋರ್ಸಿ" ಸ್ವಲ್ಪ ಸಿಟ್ಟಿನಲ್ಲೇ ಕೇಳಿದೆ.
"ಸಾಕ್ಷಿ ಬೇಕಂದ್ರೆ ಫೈನ್ ಕಟ್ಟು ಇಲ್ಲ ನಾಳೆ ಕೋರ್ಟ್ಗೆ ಬಾ ಹೋಗು, ಸುಮ್ಮನ್ಯಾಕಾರಾಡ್ತೀಯಾ?" ಅಂದ. ಅಷ್ಟರಲ್ಲಿ ಗುರು ನನ್ನ ಭುಜ ಅದುಮಿ
ಸಮಾಧಾನದಿಂದುರುವಂತೆ ಕಣ್ಸನ್ನೆ ಮಾಡಿದ. ದುಡ್ಡು ಕೊಡುವಂತೆ ಸೂಚಿಸಿದ. ೩೦೦ ರೂಗಳನ್ನು ಆ ಪೇದೆಯ ಮುಂದಿಟ್ಟೆ. ಅದಕ್ಕೆ ಅವನು ೧೦೦ ರೂಗಳಿಗೆ ಹಣ ಸಂದ ರಶೀತಿ ಮತ್ತಿನ್ನೂರು ರೂಗಳಿಗೆ ಟ್ರಾಫಿಕ್ ಸಿಗ್ನಲ್ ನಲ್ಲಿ ನೀಡುವ ನೋಟೀಸ್ ನೀಡಿದ. ಅದರ ಬಗ್ಗೆ ವಿಚಾರಿಸಲು ಬಾಯಿತೆರೆದಾಗ ಗುರುಪ್ರಸಾದ್ ನನ್ನನ್ನು ಪಕ್ಕಕ್ಕೆಳೆದು
"ಕಂದಾ! ನಿನ್ನ ಅನ್ಮಾನ ನಂಗೊತ್ತು, ಸುಮ್ಮನೆ ಕೊಟ್ಟು ಗಾಡಿ ತಗೊಂಡು ನಡಿ" ಅಂದ. ಆ ಕ್ಷಣದಲ್ಲಿ ಅವನ ಮೇಲೂ ಸಿಟ್ಟು ಬಂದರೂ ಪೋಲೀಸ್ ಸ್ಟೇಷನ್ ನ ವಾತವಾರಣದ ಬಗ್ಗೆ ಸ್ವಲ್ಪ ಅರಿವಿದ್ದದ್ದರಿಂದ ಸುಮ್ಮನಾದೆ. ಸ್ವಲ್ಪ ಸಾವರಿಸಿಕೊಂಡ ನಂತರ
"ಸಾಕ್ಷಿ ತೋರ್ಸಿ ಏನಿದೆ?" ಎಂದು ಆ ಪೇದೆಯನ್ನೇ ಕೇಳಿದೆ.
"ಅಲ್ಕುಂತ್ಕೊ, ಇನ್ನೇನ್ ನಂ ಎ ಎಸ್ಸೈ ಸಾಹೇಬ್ರು ರೌಂಡ್ಸ್ ಮುಗ್ಸಿ ಬತ್ತಾರೆ, ಅವ್ರು ವೀಡಿಯೋ ತೋರ್ಸ್ತಾರೆ" ಎನ್ನುತ್ತಾ ಕತ್ತಿನಲ್ಲೇ ಎದುರಿಗಿದ್ದ ಬೆಂಚ್ ತೋರಿಸಿದ. ಮುಕ್ಕಾಲು ಗಂಟೆಯ ನಂತರ ರಾಚಪ್ಪ ಎಂಬ ಎ ಎಸ್ಸೈ ಬಂದರು. ಅವರಿಗೆ ಎದೆ ಸೆಟೆದು ಸಲ್ಯೂಟ್ ಹೊಡೆದ ಆ ಪೇದೆ,
"ಇವ್ರೇನೋ ಆ ಸೀಝ್ ಮಾಡೀರೋ ಕ್ಲಿಪ್ಪಿಂಗ್ ನೋಡ್ಬೇಕಂತೆ, ಕ್ಯಾಮ್ರಾ ಕೊಡಿ ಸಾ, ತೋರುಸ್ತೀನಿ" ಎನ್ನುತ್ತ ಕ್ಯಾಮರ ಆನ್ ಮಾಡುವುದರಲ್ಲಿ ಮಗ್ನನಾದ.
"ಗಾಡಿ ಸರಿಯಾದ ಜಾಗ್ದಲಿ ನಿಲ್ಸುದ್ರೆ ನಾವ್ಯಾಕೆತ್ತಾಕಂಬತ್ತೀವಿ, ಎಜುಕೇಟೆಡ್ ಆದ ನೀವೆ ರೂಲ್ಸು ಫಾಲೋ ಮಾಡ್ದಿದ್ರೆಂಗೆ?" ರಾಚಪ್ಪನವರು ಭಾಷಣ ಶುರು ಮಾಡಿದರು. ಕೇಳುವ ವ್ಯವಧಾನ ನಮಗಿರಲಿಲ್ಲ.
"ಇದೆಯೇನಪ್ಪಾ ನಿಂಗಾಡಿ?, ನೋಡು" ಎನ್ನುತ್ತಾ ಕ್ಯಾಮರಾ ಮುಂದಿಡಿದ ಆ ಪೇದೆ. ಇಡೀ ಕ್ಯಾಮರ ಹುಡುಕಾಡಿದರೂ ನನ್ನ ಬೈಕ್ ನ ಚಿತ್ರಣ ಸಿಗಲೇ ಇಲ್ಲ
"ಸರ್ ಇಲ್ಲಿ ನನ್ನ ಗಾಡಿ ಶೂಟ್ ಆಗಿಲ್ಲ, ಯಾಕಂದ್ರೆ ಅದು ನೋ ಪಾರ್ಕಿಂಗ್ ಜಾಗದಲ್ಲಿ ಇರಲಿಲ್ಲ, ಸರಿಯಾದ ಜಾಗದಲ್ಲೇ ಇತ್ತು, ಈಗ ನೀವು ಸುಮ್ನೆ ನನ್ನ ಹತ್ರ ದುಡ್ಡು ಕಟ್ಟಿಸ್ಕೊಂಡಿದ್ದೀರ, ಹೋಗಲಿ ಆ ದುಡ್ಡಾದ್ರೂ ವಾಪಸ್ ಕೊಡಿ" ಎಂದೆ. ನನ್ನ ಮಾತನ್ನು ಕೇಳಿಸಿಕೊಳ್ಳದೆ ಆ ಕ್ಯಾಮರಾದಲ್ಲಿ ನನ್ನ ಗಾಡಿಯನ್ನು ಹುಡಕತೊಡಗಿದರು. ಕಾಲು ಗಂಟೆ ಹುಡುಕಿದ ನಂತರವೂ ನನ್ನ ಗಾಡಿಯ ಚಿತ್ರಣ ಸಿಗಲಿಲ್ಲ. ಅಷ್ಟು ಹೊತ್ತಿಗೆ ಗುರುವಿಗೂ ಸ್ವಲ್ಪ ಧೈರ್ಯ ಬಂದಂತಿತ್ತು.
ಸಿಕ್ತಾ ಸರ್!" ಎಂದ, ಆ ಪೇದೆಯಿಂದಾಗಲಿ ರಾಚಪ್ಪನವರಿಂದಾಗಲಿ ಉತ್ತರ ಬರಲಿಲ್ಲ.
"ಸರ್ ಅದ್ರಲ್ಲಿ ಬರೋಕೆ ಸಾಧ್ಯಾನೇ ಇಲ್ಲ! ದಯವಿಟ್ಟು ದುಡ್ಡುಕೊಡಿ, ನಮ್ಗೂ ಕೆಲ್ಸಗಳಿವೆ" ಎಂದೆ.
"ಅದೆಂಗ್ಮಿಸ್ಸಾಯ್ತು ಅಂತ ಗೊತ್ತಿಲ್ಲ, ಅಂಗೆಲ್ಲಾ ತಪ್ಪಾಗಲ್ಲ ನಂಕಡೀಂದ.... ಆದ್ರೂ ಎಲ್ಲೋ ಮಿಸ್ಸಾಗದೆ, ಅಂದ್ಮಾತ್ರುಕ್ಕೆ ದುಡ್ಡೆಂಕ್ಕೊಡಕಾಯ್ತುದೆ ಸರ್? ಅದು ಬಿಲ್ಲಾಕ್ದೇಟ್ಗೆ ಸರ್ಕಾರಕ್ಕೋಯ್ತು" ಈಗ ಅದೇ ಪೇದೆಯ ಬಾಯಲ್ಲಿ ಮತ್ತೆ ನಮ್ಮೆಡೆಗಿ ಗೌರವ ಮರುಕಳಿಸಿದ್ದು ನಮಗೇನು ಆಶ್ಚರ್ಯವೆನಿಸಲಿಲ್ಲ, ಏಕೆಂದರೆ ತಪ್ಪು ಅವರದೆಂದು ಸ್ವಲ್ಪ ಅವರಿಗೆ ಅರಿವಾದಂತಿತ್ತು.
"ಸಾರ್! ದುಡ್ಡು ಕಟ್ಟೋಕ್ಮುಂಚೆನೇ ಹೇಳಿದ್ನಲ್ಲ ಸರ್, ಸಾಕ್ಷಿ ತೋರ್ಸಿ ಅಂತ" ಅನಾವಶ್ಯಕ ವಾದವೆಂದು ನನಗೂ ಅನಿಸಿತು. ಹೆಚ್ಚುಕಡಿಮೆ ನಿವೃತ್ತಿಯ ಅಂಚಿನಲ್ಲಿದ್ದ ರಾಚಪ್ಪನವರು
"ನೋಡಿ ಮಿಸ್ಟರ್! ಒಂದ್ಸಾರಿ ಬಿಲ್ಲಾಕಿದ ಹಣಾನ ಮತ್ತೆ ವಾಪಸ್ ಕೊಡೋಕೆ ಬರೊಲ್ಲ, ಕೊಟ್ರೆ ನಂ ಕೈಯಿಂದ ಹೋಗುತ್ತೆ! ಏನ್ಮಾಡ್ಬೇಕು ನೀವೇ ಹೇಳಿ ಸರ್!" ಅಂದರು. ಅಷ್ಟರಲ್ಲಿ ಗುರು ಮುಂದೆ ಬಂದು
"ಸರ್ ಈ ರೀತಿ ವಾದ ಮಾಡ್ತಿದ್ರೆ ಮುಗಿಯೊಲ್ಲ, ನೀವೇ ಹಿರೀಕರು, ನೀವೇ ಪರಿಹಾರ ತಿಳಿಸಿ" ಎನ್ನುತ್ತಿದ್ದ ಹಾಗೆ ಗಿಜಿಗುಡುತ್ತಿದ್ದ ಪೋಲೀಸ್ ಸ್ಟೇಷನ್ ಸ್ತಬ್ದವಾಯ್ತು. ಸುಮಾರು ೨೮ ರ ವಯಸ್ಸುಳ್ಳ ಯುವಕ ಎಸ್ಸೈ ಠಾಕು ಠೀಕಿನಿಂದ ಒಳಬಂದವನೆ ತನ್ನ ಆಸನದಲ್ಲಿ ಆಸೀನಾನಾಗುತ್ತಾ
"ಯಾರ್ರೀ ನೀವು? ಏನಾಗ್ಬೇಕಿತ್ತು?" ಎಂದ ದರ್ಪದಿಂದ. ಗುರು ಮತ್ತು ನಾನು ಆತನಿಗೆ ವಿವರಿಸಿದೆವು. ಎಲ್ಲವನ್ನೂ ಕೇಳಿದ ನಂತರ
"ನೋಡ್ರೀ, ನಮ್ಮೋರು ಹಾಗೆಲ್ಲಾ ಸುಮ್ ಸುಮ್ನೆ ಗಾಡಿ ಎತ್ತಾಕಂಬರಲ್ಲ, ಫೈನ್ ಕಟ್ಟಿದೀರಿ ತಾನೆ ಗಾಡಿತಗೊಂಡು ರೈಟ್ ಹೇಳಿ" ಎಂದ ಅದೇ ಪೋಲೀಸ್ ದರ್ಪದಿಂದ. ಈ ಬಾರಿ ನನಗಿಂತಲೂ ಸಿಟ್ಟು ಬಂದಿದ್ದು ಗುರುವಿಗೆ
"ಲೋ! ಉಮಾ! ರೆಸಿಪ್ಟ್ ತೊಗೊಂಡಿದ್ದೀಯ ತಾನೆ? ಗಾಡಿತೊಗೊಂಡು ಈಗ ನಡಿ, ನಾಳೆ ಬೆಳಿಗ್ಗೆ ಕನ್ಸೂಮರ್ ಕೋರ್ಟನಲ್ಲಿ ಕಂಪ್ಲೇಂಟ್ ಮಾಡೋಣ ಬಾ!!" ಎನ್ನುತ್ತಾ ನನ್ನ ಪ್ರತಿಕ್ರಿಯೆಗೂ ಕಾಯದೆ, ನನ್ನ ರಟ್ಟೆ ಹಿಡಿದು ಹೊರಗೆಳೆದುಕೊಂಡು ಬಂದು, ನನ್ನ ಬೈಕ್ ಬಳಿ ಬಿಟ್ಟ. 'ಅಯ್ಯೋ! ಸುಮ್ನೆ ೩೦೦ ರೂ ಹೋಯ್ತಲ್ಲಪ್ಪ' ಎನ್ನುತ್ತಾ ಬೇಸರದಿಂದ ಗಾಡಿಯನ್ನು ಹೊರಗೆ ತೆಗೆದು ಸ್ಟೇಷನ್ ಕಾಂಪೌಂಡಿನಿಂದ ಹೊರಗೆ ಬಂದೆವು. ಹಿಂದಿನಿಂದ ಪೋಲೀಸೊಬ್ಬ ಓಡಿ ಬರುವ ಬೂಟಿನ ಶಬ್ದ ಕೇಳಿ ಎದೆಯ ಬಡಿತ ಇಬ್ಬರಿಗೂ ಜೋರಾಯ್ತು. 'ಈಗೇನಪ್ಪಾ ಕಾದಿದೆ! ಅಲ್ನೋಡಿದ್ರೆ ಅವಾಜ್ ಬೇರೆ ಹಾಕಿ ಬಂದಿದೀವಿ' ಎಂದು ಕೊೞುತ್ತಿರುವಾಗಲೇ
"ಸರ್ ಸರ್ ಸರ್!! ಒಂದ್ನಿಮಷ ಬರ್ಬೇಕಂತೆ ಸರ್ ಸಾಯೇಬ್ರು ಕರೀತಾವ್ರೆ" ಎಂದ ಆ ಪೇದೆಯ ಧ್ವನಿಯಲ್ಲಿ ಸೋಲು ಇತ್ತು.
"ಇಲ್ಲ ಬಿಡಿ ಸರ್! ಬೆಳಿಗ್ಗೆ ಕೋರ್ಟ್ ಹತ್ರಾನೇ ಸಿಗೋಣ" ಎಂದು ಸ್ವಲ್ಪ ವ್ಯಂಗ್ಯದಿಂದಲೇ ತಿರುಗೇಟು ನೀಡಿದೆ. ಈಗ ಮತ್ತೆ ಗುರು
"ನಡಿಯೋ! ನೋಡೋಣ!" ಅಂದ. ಗಾಡಿ ನಿಲ್ಲಿಸಿ ಕೆಳಗಿಳಿಯುವಷ್ಟರಲ್ಲಿ ರಾಚಪ್ಪನವರು ನನ್ನ್ ಬಳಿ ಬಂದು ೩೦೦ ರೂ ಗಳನ್ನು ನನ್ನ ಜೇಬಿಗೆ ತುರುಕಿ
"ಅದು ಗಾಡಿ ಎತ್ತಾಕುವಾಗ ನಂ ಹುಡುಗರು ಸರಿಯಾಗಿ ನೋಡಿರ್ಲಿಲ್ವಂತೆ! ಹೋಗ್ಲಿ ಬಿಡಿ ಸರ್! ಆ ಬಿಲ್ ಕೊಡಿ" ಎಂದು ಬಿಲ್ ತೆಗೆದುಕೊಂಡು ಹೋದರು.
ಇಬ್ಬರೂ ಬೈಕ್ ಸ್ಟಾರ್ಟ್ ಮಾಡಿ ಹಿಂದಿನ ಬೀದಿಯಲ್ಲಿದ್ದ ಮಹೇಶ್ ಪ್ರಸಾದ್ ಹೋಟೆಲ್ ಕಡೆಗೆ ಹೊರೆಟೆವು. ಆಗ ನಮ್ಮ ಅಪ್ಪ ಹೇಳುತ್ತಿದ್ದ ಒಂದು ಗಾದೆ ನೆನಪಾಯ್ತು.
"ಈ ಜನಾನೇ ಹಿಂಗೆ, ಎದ್ರೆ ಕಾಲಿಡೀತಾರೆ, ಬಗ್ಗುದ್ರೆ ಜುಟ್ಟು ಹಿಡೀತಾರೆ"