ಶುಕ್ರವಾರ, ಮೇ 21, 2010

ಪ್ರಚಾರದ ಹುಚ್ಚು ಮತ್ತು ನಮ್ಮ ಮಂತ್ರಿಗಳೆಂಬ ಮಂದ ಮತಿಗಳು!!!

ಏನಾಗಿದೆ ನಮ್ಮ ಮಂತ್ರಿ ಮಹೋದಯರಿಗೆ? ಮೊನ್ನೆ ಮೊನ್ನೆ ತಾನೆ ವಿದೇಶಾಂಗ ಸಚಿವ ಶಶಿ ತರೂರ‍್ ಅಂತೂ ತನ್ನದೇ ಆದ ಸರ್ಕಾರದ ನೀತಿಗಳ ಬಗ್ಗೆ ಅಂತೂ ಬಾಯಿಗೆ ಬಂದತದ್ದನ್ನು ಒದರಿ ಬಣ್ಣಗೇಡಿ ಯಾದದ್ದು ಎಲರಿಗೂ ತಿಳಿದದ್ದೆ. ಅದೇ ರೀತಿ ವಾಣಿಜ್ಯ ಸಚಿವ ಕಮಲ್ ನಾಥ್ ಮತ್ತು ಚಿದಂಬರಂ ನಡುವಿನ ವಿರಸ, ದೂರ ಸಂಪರ್ಕ ಸಚಿವ ರಾಜಾ ರವರ ರಗಳೆ ಒಂದೇ ಎರಡೇ? ಹೇಳುತ್ತಾ ಹೋದರೆ ಮುಗಿಯುವುದಿಲ್ಲವೇನೋ ಅನ್ನಿಸುತ್ತದೆ. ಅಂದಹಾಗೆ ಇದು ಬರೀ ಈಗಿನ ಸರ್ಕಾರದ್ದಷ್ಟೇ ಸಮಸ್ಯೆಯಲ್ಲ. ಬಿ.ಜೆ.ಪಿ ಸರ್ಕಾರದಲ್ಲಿ ಜಸ್ವಂಸಿಂಗ್ ಮತ್ತಿ ಎಲ್. ಕೆ. ಅಡ್ವಾಣಿ ಯವರ ವಿರಸವಂತೂ ಭಾರಿ ಜನಜನಿತ. ಇನ್ನು ಜನತಾಪರಿವಾರದ ಸರ್ಕಾರವಿದ್ದಾಗಲಂತೂ ಎಲ್ಲರೂ ಪ್ರಧಾನಮಂತ್ರಿಗಳೇ. ಇವತ್ತಿಗೆ ಹೊಸ ಸೇರ್ಪಡೆ ನಮ್ಮ ಕನ್ನಡಿಗರೇ ಆದ ಶ್ರಿ ಜೈರಾಂರಮೆಶ್ ರವರು ಅಷ್ಟೆ.
ತಾವೊಂದು ತುಂಬಾ ಜವಾಬ್ದಾರಿಯುತ ಸ್ಥಾನದಲ್ಲಿದ್ದೇವೆ, ನಮ್ಮ ಮಾತುಗಳನ್ನಾಗಲಿ, ನಮ್ಮ ನಡತೆಯನ್ನಾಗಲಿ ನಮ್ಮದೇಶವಷ್ಟೇ ಅಲ್ಲ, ಇಡೀ ಪ್ರಪಂಚವೇ ಗಮನಿಸುತ್ತದೆ, ಅಷ್ಟೇ ಅಲ್ಲ ನಮ್ಮ ಮಾತುಗಳು ನಮ್ಮ ದೇಶದ ಘನತೆಯನ್ನು ಗೌರವವನ್ನು ಕಾಪಾಡಬಲ್ಲವು/ ಹರಾಜು ಸಹ ಹಾಕಬಲ್ಲವು ಎಂಬ ಪರಿಜ್ನಾನವೂ ಇಲ್ಲದೇ ಆಚಾರವಿಲ್ಲದ ನಾಲಗೆಯನ್ನು ಹರಿಯಬಿಡುತ್ತಾರೆ. ಆಚಾರಮುಖ್ಯವಲ್ಲ ಪ್ರಚಾರ ಬೇಕೆನ್ನುವ ಜಾತಿಯವರು, ಇವರು ಮಾತನಾಡುವ ರೀತಿ ನೋಡಿದವರಾರಿಗಾದರೂ ಇವರ ಪ್ರಚಾರದ ಹುಚ್ಚು ಅರ್ಥವಾದೀತು.
ಈಗ ಜೈರಾಂರಮೇಶ್ ಮತ್ತೊಮ್ಮೆ ಮಾಡಿರುವುದನ್ನು ಅದನ್ನೇ. ಇದೇನು ಅವರಿಗೆ ಹೊಸತಲ್ಲ, ಮೊನ್ನೆ, ಮೊನ್ನೆ ಯಾವುದೋ ವಿಶ್ವವಿದ್ಯಾನಿಲಯದ ಘಟಿಕೋತ್ಸವವೊಂದರಲ್ಲಿ ಭಾಷಣ ಮಾಡುವ ಮುನ್ನ ತಾವೇನೋ ಭಾರಿ ಸಮಾಜಸುಧಾರಕ, ಚಿಂತಕ ಎಂದು ತೋರಿಸುವ ಭರದಲ್ಲಿ ಪಾಪ ವಿಶ್ವವಿದ್ಯಾನಿಲಯದವರು ತೊಡಿಸಿದ್ದ ಗೌನನ್ನು ಕಿತ್ತೊಗೆದು
"ನನಗೆ ಇನ್ನೂ ದಾಸ್ಯದಲ್ಲಿರಲು ಇಷ್ಟವಿಲ್ಲ ಅದಕ್ಕೆ ಗೌನನ್ನು ಕಿತ್ತೊಗೆಯುತ್ತಿದ್ದೇನೆ" ಅಂತ ಪೋಸು ಕೊಟ್ಟರು. ಆದರೆ
"ಅಯ್ಯೋ ಅವಯ್ಯುಂಗೆ ಸೆಕೆಆಯ್ತಂತೆ ಅದ್ಕೆ ಗೌನ್ ಕಿತ್ತಾಕಿ ಶೋ ಕೊಡ್ತಾವ್ರೆ" ಅಂತ ಅಕ್ಕಪಕ್ಕದವರು ಮಾತನಾಡಿಕೊಂಡಿದ್ದು ಸಾಹೇಬರ ಕಿವಿಗೆ ಬೀಳಲೇಇಲ್ಲ. ಆದರೂ ತಮ್ಮ ಎಲುಬಿಲ್ಲದ ನಾಲಿಗೆಯನ್ನು ಕೋಪನ್ ಹೇಗನ್ ನ ಜಾಗತಿಕ ತಾಪಮಾನದಲ್ಲಿ ಮತ್ತೂ ಹೊರಳಾಡಿಸಿದರು. ಅಲ್ಲಿ ನಮ್ಮ ದೇಶದ ಗೌರವಕ್ಕೆ ಹೇಳಿಕೊಳ್ಳುವಂತಹ ಧಕ್ಕೆಯೇನೂ ಆಗದಿದ್ದರೂ ಅವರ ಮಾತಿನ ಮಹತ್ವದ ಅರಿವು ಜಗಜ್ಜಾಹೀರಾಯ್ತು.
ಇಂದು ವಿಚಾರವಂತರಿಗಿಂತ ಪ್ರಚಾರವಂತರಿಗೆ ಹೆಚ್ಚು ಬೆಲೆ ಕೊಡುವ ಕಾಲ ಬಂದಿದೆ. ಹಿಂದೆ ಒೞೆ ಕೆಲಸ ಮಾಡಿದ್ರೆ ಒೞೆ ಹೆಸರು, ಪ್ರಚಾರ ಸಿಗ್ತಿತ್ತು. ಕೆಟ್ಟ ಕೆಲಸ ಮಾಡಿದ್ರೆ ಸ್ಥಾನ ಹಾಗೂ ಮಾನ ಎರಡೂ ಹೋಗ್ತಿತ್ತು. ಈಗ ಕಾಲ ಬದಲಾಗಿದೆ - ಏನೇ ಆಗ್ಲಿ, ಪ್ರಚಾರ ಬೇಕು - ಮಾಧ್ಯಮದವರಿಗೂ ಅಶ್ಟೆ- ತಮ್ಮ ಚಾನಲ್ಗಳ TRP ಹೆಚ್ಚಿಸಲು ಇಂತಹವರ 'soundbites' ಗಳೇ ಬೇಕು. ಕಾಲಾಯ ತಸ್ಮೈ ನಮಹಃ.....
ಈ ಮಾಧ್ಯಮಗಳಿಗೂ ಅಷ್ಟೇ ಇಂತವರ ವಿಚಾರಗಳನ್ನು ಮತ್ತೆ ಮತ್ತೆ ಪ್ರಕಟಿಸಿ ದೇಶದ ಮಾನ ಕಳೆಯುವೌದರಲ್ಲಿ ಎತ್ತಿದ ಕೈ.
ಅತಿ ಪ್ರಾಮಾಣಿಕ, ಬುಧ್ಧಿವಂತ, ವಿವೇಕಿ ಎಂದು ಹೆಸರು ಪಡೆದಿರುವ ಜೈರಾಮ್ ರಮೇಶ್ ಇಂಥ ಮುಜುಗರದ ಸನ್ನಿವೇಶ ತಂದು ಒಡ್ಡುತ್ತಾರೆ ಅಂತ ಅಂದುಕೊಂಡಿರಲಿಲ್ಲ. ಚೀನಾ ಬಗೆಗಿನ ಅವರ ಸೌಮ್ಯ ನೀತಿ ಎಲ್ಲರಿಗೂ ತಿಳಿದದ್ದೇ. ಅದು ಅವರ ಪುಸ್ತಕ " Making Sense of Chindia " ದಲ್ಲಿ ವ್ಯಕ್ತವಾಗಿದೆ. ಆದರೆ ಅವರ ಈ ವರ್ತನೆ ಅಸಮಾಧಾನಕರ.
ಹೋಗಲಿಲಿ ಅಂತಾ ಸುಮ್ಮನಿದ್ದರೆ ಇಂದು ಬೆಳಿಗ್ಗೆ ಅವರು ಚೀನಾ ಭೇಟಿಯವೇಳೆ ಉದುರಿಸಿದ್ದ ಅಣಿಮುತ್ತುಗಳು ಬಹಿರಂಗವಾಗಿವೆ. "ನಮ್ಮ ದೇಶದ ಗೃಹ ಇಲಾಖೆ ನಾಲಾಯಕ್ಕು, ಅದಕ್ಕೆ ಬುದ್ದಿಭ್ರಮಣೆಯಾಗಿದೆ" ಇತ್ಯಾದಿ, ಇತ್ಯಾದಿಯಾಗಿ ಮಾತನಾಡಿರುವುದು ಬೇರೆಲ್ಲೂ ಅಲ್ಲ. ಅದೂ ನಮ್ಮ ಮೇಲೆರಗಲು ಕಾಯುತ್ತಿರುವ ದೇಶದಲ್ಲಿ . ಅಲ್ಲಿ ಇಂತಹ ಮಾತುಗಳನ್ನಾಡಿದರೆ ಏನಾಗಿತ್ತದೆ ಎಂಬ ಸಣ್ಣ ಅರಿವೂ ಇಲ್ಲದ ಬುದ್ದಿಗೇಡಿಯೊಬ್ಬರನ್ನು ಒಂದು ಜವಾಬ್ದಾರಿಯುತ ಜಾಗದಲ್ಲಿ ಕೂರಿಸಿರುವ ನಾವೇ ಪುಣ್ಯವಂತರಲ್ಲವೇ?

ಇನಾದರೂ ತಾವು ಮಾತನಾಡುವಾಗ ಎಚ್ಚರವಹಿಸಿಮಾತನಾಡಿದರೆ ಒಳ್ಳೆಯದಲ್ಲವೇ? ರಮೇಶ್ ಸರ್.

ನುಡಿದರೆ ಮುತ್ತಿನ ಹಾರದಂತಿರಬೇಕು

ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು

ಎಂಬ ನಿಮ್ಮದೇ ನಾಡಿನ ಶರಣರು ಹೇಳಿದ್ದು ಬಹುಶಃ ಮರೆತುಹೋಯ್ತೇ?

ನಿಮಗಎಲ್ಲಿ ಗೊತ್ತಿರಬೇಕು ವಚನಗಳು, ಎಷ್ಟೇ ಆಗಲಿ ವಿದೇಶದಲ್ಲಿ ಕಲಿತವರಲ್ಲವೇ ನೀವು

ಶನಿವಾರ, ಮೇ 8, 2010

ಸುಮ್ಮನೆ ಹಿಂಗೊಂದು ಪುರಾಣ!!

ಪುರಾಣ ಅಂದ ಮಾತ್ರಕ್ಕೆ ಅದೇ ಶಿವಚರಿತಾಮೃತ, ವಿಷ್ಣುಪುರಾಣ ಇತ್ಯಾದಿ, ಇತ್ಯಾದಿಗಳೇ ಜ್ನಾಪಕಕ್ಕೆ ಬರುತ್ತವೆ ಅಂತಾ ಗೊತ್ತಿದ್ದೂ ಅದೇ ಪುರಾಣಗಳನ್ನ ಮತ್ತೆ ಮತ್ತೆ ಹೇಳಿ ನಿಮ್ಗೆ ಬೋರ್ ಹೊಡ್ಸೋಕೆ ನಂಗಿಷ್ಟವಿಲ್ಲ. ಈಗ ಹೇಳಕ್ಕೊರಟಿರೋದು ನಮ್ಮ ಹಾಸ್ನದ ಸಾವ್ಕಾರ್ ಸಿದ್ದಪ್ಪನೋರ್ ಪುರಾಣ
ಒಂದಾನೊಂದ್ಸಾತಿ ನಮ್ಮ ಇಂತಿಪ್ಪ ಸಿದ್ದಪ್ಪನೋರೇನ್ ಸಾವ್ಕಾರ್ರಾಗಿರ್ಲಿಲ್ಲ. ಅವ್ರೂವೇ ಸಿಕ್ಕಾಪಟ್ಟೆ ಬಡುವ್ರೆಯಾ!! ಅವ್ರು ಸಾವ್ಕಾರ್ರೆಂಗಾದ್ರೂ ಅಂತಾ ಗೊತ್ತಾಗ್ಬೇಕಾದ್ರೆ, ನಂ ಹರಿಕಥಾ ವಿಧ್ವಾನ್ ಶ್ರೀ ಗುರುರಾಜಲು ನಾಯ್ಡು ರವರ ನಲ್ಲತಂಗಾದೇವಿ ಅನ್ನೋ ಹರಿಕಥೇಲ್ ಬರೋ ಒಂದು ಉಪಕಥೆನ ನೀವು ಜ್ನೆಪ್ತಿ ಮಾಡ್ಕಬೇಕು. ಅದೇ ಗುರುವೇ ಕೈಲಾಸ್ದಿಂದ ನಮ್ ಸಿವ್ನ ವೆಹಿಕಲ್ಲು ನಂದೀಸಪ್ಪ್ನೋರು ರಾತ್ರಿವೊತ್ತು ಬೂಮಿಗಿಳ್ದು ಕಬ್ಬು ತರ್ಕಾರಿ ಮೇಯ್ಕೊಂಡೋಯ್ತಿದ್ರಲ್ಲಾ ಅದೇ ಕಥೆ!!
"ಅಯ್ಯೋ! ಅದ್ಯಾರುಗ್ಗೊತ್ತಿಲ್ಲಾ? ಬುಡು ಸಿವಾ! ಅದ್ಕೂವೇ ಸಿದ್ದಪ್ಪ ಸಾವ್ಕಾರ್ ಸಿದ್ದಪ್ಪ ಆಗಾಕುವೇ ಏನ್ ಲಿಂಕು? ಅದೊಸಿ ವದ್ರು" ಅಂತಾ ನೀವು ಸಿಡ್ಕೋಕ್ ಮುಂಚೆ ನಾನೇ ಸುರು ಮಾಡ್ಬುಡ್ತೀನಿ.
ನಮ್ ಸಿದ್ದಪ್ಪನೋರ್ಗಿದ್ದ ಬರೀ ೧೫ ಕುಂಟೆ ಗದ್ದೇಲಿ ಕಬ್ಬುನ್ ರೇಟ್ ಜಾಸ್ತಿ ಆದಾಗ ಕಬ್ ನೆಟ್ಟಿದ್ರು, ಅವ್ರ ಗ್ರಾಚಾರ ಅದು ಕಟಾವ್ಗೆ ಬರೋ ಹೊತ್ಗೆ ರೇಟು ತಳಾಕಚ್ಚಿತ್ತು. ಕಡೇ ಪಕ್ಷ ಹಾಕ್ದ ಬಂಡ್ವಾಳಾನಾದ್ರೂ ಬರಲಿ, ಇನ್ನು ವಸಿ ರೇಟ್ ಜಂಪ್ ಆದ್ಮ್ಯಾಕೆ ಕಡ್ಸುದ್ರಾಯ್ತು. ಅನ್ನೂ ಉದ್ದೇಸ ಮಡೀಕಂಡು, ಕಳ್ಳ್ರು ಗಿಳ್ರು ಕದ್ಬುಟ್ಟಾರೂ ಅಂತಾ ದಿನಾ ರಾತ್ರಿ ವತ್ಗೆ ಕಬ್ ಕಾಯಕೆ ವೋಗೋರು.
ಅಂಗೇ ಒಂದಿನ ಸಿವ್ನ ವೆಹಿಕಲ್ಲು ನಂದೀಸಪ್ಪ ಇವ್ರ ಕಬ್ಬ ಮೆಯ್ಯೋಕೆ ಅಂತಾ ಬಂದ್ಬುಡೋದೆ!!!!!.
ಸಿದ್ದಪ್ನೋರ್ಗೆ ಎಲ್ಲಿಲ್ಲದ ಕ್ವಾಪ ಬಂದ್ಬುಡ್ತು, " ಇರದೇ ಕಚ್ಚೆ ಪವ್ಡೆ ಅಗಲಾ ಗದ್ದೆ, ಏನೋ ವಂಚೂರ್ ಬೆಳುದ್ರೆ, ಹೊಟ್ಗಾದ್ರೆ ಬಟ್ಗಾಯಿಕಿಲ್ಲ, ಅಂತಾದ್ರಲ್ಲಿ ಈ ಬಡ್ಡಿ ಹೈದ್ನ ದನ ಯಾವ್ನನ್ಮಗುಂದೋ ಕಾಣೇ ನನ್ಗದ್ದೇಗೇ ಬರ್ಬೇಕೊ?" ಅಂತಾ ಬಯ್ಕಂಡು ದೊಣ್ಣೆ ತಗಂಡು ಓಡ್ಸಕೋದ್ರೆ ಇದ್ಕಿದ್ದಂಗೆ ಮ್ಯಾಕೆ ಆರಕೆ ಸುರುಮಾಡ್ಬುಡಾದೇ!?!?!?
ಸಿದ್ದಪ್ನೋರ್ಗೆ ಏನ್ ಮಾಡ್ಬೇಕು ಅಂತಾ ಗೊತ್ತಾಗ್ಲಿಲ್ಲ! ಯಾವ್ದೋ ಮಾಯಾವಿ ಅಸ ಇರ್ಬೇಕು!?!? ಅನ್ಕಂತಿದ್ದಾಂಗೆಯಾ ಸಿವ್ರಾತ್ರಿ ದಿಸ ಸ್ವಾಮಪ್ಪನ ಗುಡಿತವ ಕೇಳಿದ್ದ ಹರಿಕತೆ ಗ್ಯೆಪ್ತಿಗ್ಬಂದ್ಬುಡ್ತು!! "ಓಹ್ಹೋ!! ಇದು ಇಂಗೆಲ್ಲಾ ಆರದ್ಕಲ್ತದೆ ಅಂದ್ರೆ ಇದು ಅದೇ ದನ ಇರ್ಬೇಕು ಅನ್ಕಂಡು. ಪಟಕ್ ಅಂತಾ ಅದ್ರು ಬಾಲ್ದ ತುದಿ ಹಿಡ್ಕಂಡು ನಂದೀ ಜೊತೆ ಇವ್ರು ಜೀವಂತ್ವಾಗಿಯೇ ಕೈಲಾಸುಕ್ಕೋದ್ರು. ಅಲ್ಗೆ ತಲ್ಪುದ್ಮಾಕೆ ನಂದೀಸಪ್ಪ ನೋಡ್ತಾನೆ, ಮಾನವ!!! ಇದೊಳ್ಳೆ ಪೀಕ್ಲಾಟಕ್ಬಂತಲ್ಲಪ್ಪ! ನಾನು ಮೇಯಕ್ಕೋಗದೇ ಕದ್ದು ಮುಚ್ಚಿ! ಅಂತಾದ್ರಾಗೆ ಈ ವಯ್ಯ ಬಂದೀರೋದು ನಮ್ ಬಾಸ್ಗೇನಾರ ಗೊತ್ತಾದ್ರೆ ನನ್ ಕೆಲ್ಸದ ಗತಿ ಅಷ್ಟೇಯಾ? ಅಂತಾ ಯೋಚ್ನೆ ಸುರುವಾಯ್ತು. ಅದ್ಕು ಮುಂಚೆ ಇವಯ್ಯನ್ನ ಸಾಗಾಕ್ಬೇಕು ಅನ್ಕಂಡು "ಯಾರಯ್ಯ ನೀನು? ಇಲ್ಗ್ಯಾಕ್ ಬಂದೇ? ಹೋಗ್ ನಿಮ್ಮೂರ್ಗೆ" ಅಂತಾ ದಬಾಯ್ಸಿದ.
ಸಿದ್ದಪ್ನೋರ್ಗೆ ಪಿತ್ತ ನತ್ತಿಗೇರ್ಬುಡ್ತು! " ಎಲಾ!! ಇವ್ನ ನನ್ ಗದ್ದೇಗ್ ಬಂದು ಮೇಯ್ದುದ್ದು ಅಲ್ದೆ! ನಂಗೇ ರೋಪಾಕ್ತೀಯ? ಕರೀಯಲೇ ನಿಂ ಯಜ್ಮಾನ್ರುನ ಅವ್ನತಾವೇ ನ್ಯಾಯ ಕೇಳುಮ?" ಅಂತ ರಾಂಗ್ ಆಗಿ ನಿಂತ್ಕಂಡ್ರು. ನಂದೀಸಪ್ಪುಂಗೆ "ಓಹೋ ! ಇವ್ನು ಆ ಗದ್ದೆ ಹೋನರ್ರು ಅಂತಾ ಗೊತ್ತಾಗೋಯ್ತು.
" ನೋಡು ಗುರುವೇ ಸುಮ್ನೆ ಕೂಗಾಡಿ ನನ್ ಮರ್ವಾದೆ ತಗೀಬ್ಯಾಡ ನಿಂಗೇನ್ಬೇಕು ಕೇಳು ಕೊಡ್ತೀನಿ ಸುಮ್ನೆ ತಗಂಡು ಇಲ್ಲಿಂದ ವಂಟೋಗು" ಅಂತಾ ಬೇಡ್ಕಂಡ.
ಹೇಳೀ ಕೇಳೀ ಸಿದ್ದಪ್ನೋರು ಬುಟ್ಟಾರೆ ಅವ್ಕಾಸವಾ!! ಸಿಕ್ಕಾಬಟ್ಟೆ ಐಸ್ಪುರ್ಯವ ನಂದೀಸುಂತವು ಡೀಲ್ ಮಾಡ್ಕಂಡು ಭೂಮಿಗ್ ಬಂದ್ರು.
ಜನ ನೋಡ್ ನೋಡ್ತಿದ್ದಂಗೆಯಾ ಮಾಡಿ ಮೇಲ್ ಮಾಡೀ, ಮಾಡಿ ಮೇಲ್ ಮಾಡೀ, ಮಾಡಿ ಮೇಲ್ ಮಾಡೀ ಕಟ್ಟುದ್ರು. ಆ ಮಾಡೀ ತುದಿ ನೋಡ್ಬೇಕು ಅಂದ್ರೆ ನೆಲುದ್ಮ್ಯಾಗೆ ಮನಿಕಂಡು ನೋಡ್ಬೇಕಿತ್ತು ಅಷ್ಟೆತ್ರುಕ್ ಕಟ್ಬುಟ್ರು. ಆ ಮೇಲ್ ಮದ್ವೇ ಆಯ್ತು. ೨ ಗಂಡ್ಮಕ್ಕಳೂ ಆದೋ.
ಇಷ್ಟೆಲ್ಲಾ ಆದ್ಮೇಲೆ ಸಿದ್ದಪ್ಪ್ನೋರ್ಗೆ ಜೀವನಾನೇ ಬೇಸರ ಅನ್ನಿಸ್ಬುಡ್ತು. ಜೀವ್ಣುದಲ್ಲಿ ಮಾಡಾದೆಲ್ಲಾ ಮಾಡೀವ್ನಿ, ಇನ್ನೇನ್ ಸಾಯಾದೆಯಾ! ಅಂತಾ ತೀರ್ಮಾನ್ಸಿದ್ರು.
ತಾನು ಇಂತಾ ಸಾವ್ಕಾರ ಸುಮ್ನೆ ಸತ್ರೆ ಬೆಲೆ ವಯ್ತುದೆ ಅನ್ಕಂಡು ಕರ್ನಾಟ್ಕದ ಅತೀ ದೊಡ್ಡ ಬಿಲ್ಡಿಂಗ್ ಆದ "ಉಟಿಲಿಟಿ" ಬಿಲ್ಡಿಂಗ್ ಮ್ಯಾಲಿಂದಾನೆ ಬಿದ್ ಸಾಯವ ಅನ್ಕಂಡು, ಬ್ಯೆಂಗ್ಳೂರ್ ಬಸ್ ಹತ್ತುದ್ರು. ಬಸ್ಸು ಮುಂದ್ಕೋಯ್ತಾದೆ ಒಳ್ಗೆ ನೋಡ್ತಾರೆ ಇವ್ರು ಸೇರಿ ಇರೋರೇ ೪ ಜನ!!! ಅದ್ರಲ್ಲೊಬ್ಬ ಕಂಡಾಟ್ರು!, ಒನ್ನೊಬ್ಬ ಡೆವರ್ರು!, ಇನ್ನೊಬ್ಬ ಬಾರೀ ಡುಮ್ಮಣ್ಣ. ತಿಕೀಟ್ ತಗಂಡು ಆ ಡುಮ್ಮಣ್ಣನ್ ಪಕ್ಕ ಕೂತ್ಗಂಡ್ರು. ಎಂಗಿದ್ರೂ ಸಾಯವಾ ಅಂತಾ ವಯ್ತಾವ್ನಿ ಇವುಂತಾವಾರ ಮಾತಾಡ್ಕಂಡ್ ಹೋಗವಾ ಅನ್ಕಂಡು " ಏನಪ್ಪಾ ಬೆಂಗ್ಳೂರ್ಗೋ??? " ಅಂದ್ರು.
ಕೈ ಬಾಯಿ ೨ ಫ್ರೀ ಇರದ ಡುಮ್ಮಣ್ಣ " ಹ್ನೂಂ!!" ಅಂದ. ಬಸ್ಸು ಹಿರೀಸಾವೆ ಬುಟ್ಟಿ ಬೆಳ್ಳೂರ್ ಕ್ರಾಸ್ ಬಂದ್ರೂ ಯಾರೂ ಅತ್ನಿಲ್ಲ. ಮತ್ತದೇ ಡುಮ್ಮಣ್ಣನ್ನ ವಿಧಿಯಿಲ್ಲದೇ ಮಾತಿಗೆಳೆದರು.
"ತಿಕೀಟು ತಗಂಡಿದಿಯೋ?" ಅಂದ್ರು. ಡುಮ್ಮಣ್ಣನಿಗೆ ಎಲ್ಲಿಲ್ಲದ ಖುಷಿಯಾಯ್ತು.
"ಹೂಂ!! ೨ ತಿಖೀಟು ತಗಂಡೀವ್ನಿ, ನೋಡೀ!!" ಅಂತಾ ತೋರಿಸಿದ. ತಿಣುಕಾಡೋ ಸರದಿ ಸಿದ್ದಪ್ಪ್ನೋರ್ದು!!!
"ಅಲ್ಲಪ್ಪಾ!! ನೀ ಇರೋದು ಒಬ್ನೆಯಾ! ೨ ತಿಕೀಟು ಯಾಕೆ" ಅಂದ್ರು ಕುತೂಹಲವ ತಡೀನಾರ್ದೆ.
"ಹೂಂ!! ನಾನೇನ್ ದಡ್ಡ ಅಲ್ಲಾ! ಒಂದು ತೀರ್ಸೋದ್ರೆ ಇನ್ನೊಂದಿರ್ಲೀ ಅಂತಾ ೨ ತಗಂಡೇ" ಅಂದ,
"ಆ ತಿಕೀಟು ತೀರ್ಸೋದ್ರೆ?" ಮತ್ತೆ ಕೆಣ್ಕುದ್ರು,
" ನಂಗೂ ಬುದ್ದೀ ಅದೆ, ತೀರ್ಸೋದ್ರೆ ನಂತಾವಾ ಪಾಸ್ ಐತೆ" ಅಂದ ಕೈಲಿದ್ದ ಬನ್ ತಿನ್ನುತ್ತಾ. ಸಿದ್ದಪ್ನೋರ್ಗೆ ಬವಳಿ ಬಂದಂಗಾತು,ಆದ್ರೂವೆ ನಗ್ತಾ,
"ಅದೂ ತೀರ್ಸೋದ್ರೆ?" ಅಂದ್ರು
"ಹೋಲಿ ಬುಡಿ!! ಅಲ್ ಬಸ್ಸೋಡಿಸ್ತಾವ್ನಲ್ಲ ಅವ್ನೇ ನಮಪ್ಪ!!" ಅಂದ ಡುಮ್ಮಣ್ಣನ್ ಮಾತ್ಕೇಳಿ ಬಸ್ಸಿನ ಕಿಟ್ಕಿಯಿಂದ ನೆಗೆದ್ಬುಟ್ರು. ಅವ್ರ ದುರಾದ್ರುಸ್ಟ, ಅವ್ರ ಪ್ರಾಣುಕ್ಕೇನಾಗ್ಲಿಲ್ಲ! ಮ್ಯಾಕೆದ್ದು ನೋಡ್ತಾರೆ!! ಎದುರ್ಗೆ "ಉಟಿಲಿಟಿ" ಬಿಲ್ಡಿಂಗ್ !!!
ಕುಸಿಯಾಗ್ಬುಟ್ಟು ಕಷ್ಟಾಪಟ್ಟು ಮ್ಯಾಕೆ ಅಂದ್ರೆ ಬಿಲ್ಡಿಂಗ್ನ ತುದಿ ತಲ್ಪಿ " ಸಿವನೇ ಸ್ವಾಮಪ್ಪ ನನ್ ತಪ್ಪು ನೆಪ್ಪು ಎಲ್ಲಾನುವೆ ನಿನ್ನೊಟ್ಟೆಗಾಕಳಪ್ಪಾ!" ಅಂದ್ಬುಟ್ಟು ಮ್ಯಾಲಿಂದಾ ಇನ್ನೇನ್ ಕೆಳಾಕ್ ನೆಗೀಬೇಕು ಆಗ ಕೆಳಗೊಬ್ಬ ೨ ಕೈ ೨ ಕಾಲೂ ಇಲ್ದಿರೋ ಅಂಗವಿಕಲ ಬಿಕ್ಸುಕ ಕುಸಿಯಿಂದಾ ಡ್ಯಾನ್ಸ್ ಮಾಡ್ತಿರೊವಂಗೆ ಕಾಣುಸ್ತು.
"ಅರೆರೆರೆ!! ಇಷ್ಟೆಲ್ಲಾ ಐಸ್ಪುರ್ಯ್ ಇದ್ರೂವೇ ನಂಗ್ ನೆಮ್ದಿ ಅನ್ನದೇ ಸಿಕ್ನಿಲ್ಲಾ!! ಅಂತಾದ್ರಲ್ಲಿ ೨ಕಯ್ಯಿ, ೨ ಕಾಲೂ ಇಲ್ದಿರೋ ಈ ಪುಣ್ಯಾತ್ಮ ಅದೆಂಗ್ ಕುಸಿಯಾಗಿ ಡ್ಯಾನ್ಸ್ ಮಾಡಾಕಾಯ್ತದೆ ಅನ್ನಾದ ಸಾಯೋ ಮುಂದಾದ್ರೂ ತಿಳ್ಕಳವಾ" ಅಂತಾ ಮತ್ತ ಕೆಳ್ಗೆ ಇಳ್ದು ಬಂದ್ರು. ಬಂದು ಅವ್ನ,
" ಏನಪ್ಪ ಸ್ವಾಮಿ!! ಇಷ್ಟೆಲ್ಲಾ ಐಸ್ಪುರ್ಯ್ ಇದ್ರೂವೇ ನಂಗ್ ನೆಮ್ದಿ ಅನ್ನದೇ ಸಿಕ್ನಿಲ್ಲಾ!! ಅದ್ಕೆ ಸಾಯಾಕೆ ಅಂತಾ ಬಂದೀವ್ನಿ. ಅಂತಾದ್ರಲ್ಲಿ ನೀನು ೨ಕಯ್ಯಿ, ೨ ಕಾಲೂ ಇಲ್ದಿರೋ ಪುಣ್ಯಾತ್ಮ ಅದೆಂಗ್ ಕುಸಿಯಾಗಿ ಡ್ಯಾನ್ಸ್ ಮಾಡಾಕಾಯ್ತದೆ? ನಿನ್ ನೆಮ್ದಿ ಗುಟ್ಟೇನು? ನಂಗೂ ವಸಿ ಹೇಳಪ್ಪಾ! ತಿಳ್ಕಂಡ್ ಸಾಯವಾ" ಅಂದ್ರು.
ಪಾಪ! ಬಿಖ್ಸುಕುನ್ಗೆ ಎಲ್ಲಿಲ್ಲದ ಕ್ಯಾಣ ಹತ್ಬುಡ್ತು! "ಅಯ್ಯೋ! ಕ್ಯಾಮೆ ಗೀಮೆ ಇದ್ರೆ ನೋಡೋಗಯ್ಯೋ!! ಕುಸಿಯಂತೆ ಡ್ಯಾನ್ಸಂತೆ ಇವ್ರಜ್ಜಿ ಪಿಂಡ! ಬೆನ್ನು ಕೆರ್ಕಳಾಕಾಗ್ದೆ ನಾ ಒದ್ದಾಡ್ತಾವ್ನಿ, ಸಾಯೊಂಗಿದ್ರೆ ವಸಿ ಬೆನ್ನ ಕೆರುದ್ಬುಟ್ಟು ಸಾಯೋಗ್!!" ಅಂತ ರೇಗ್ಬಿಡೋದೇ?!!
ಪಾಪ ನಂ ಸಿದಪ್ನೋರ್ಗೆ ಜ್ನಾನೋದಯದ ಜೊತೆಗೆ ಪಾಪ ಪ್ರಜ್ನೆ ಕಾಡೋಕೆ ಸುರು ಆಯ್ತು, " ಇಂತಾ ಕಸ್ಟ ಜೀವಿ ಮನ್ಸ ನೋಯ್ಸ್ಬುಟ್ನಲ್ಲಾ!?" ಅಂತಾ ಅವ್ನ ಬೆನ್ನು ಕೆರೆದು ಜೋಬೊಳ್ಗಿದ್ದ ೧೦೦ ನೋಟನ್ನ ಅವ್ನ ತಟ್ಟೆಗಾಕಿ ಜೊತೆಗೆ ಸಾಯೋ ಯೋಚ್ನೇನು ಅಲ್ಲೇ ಹಾಕಿ ಕಾಲಿ ಜೋಬಾದ್ರಿಂದಾ "ನಡ್ಕಂಡೇ ಆಸ್ನ ಸೇರವಾ" ಅಂತ ತೀರ್ಮಾನ್ಸಿ ನಡೆಯೋಕ್ ಸುರುಮಾಡುದ್ರು.
ನೆಲ್ಮ ಗ್ಲ ಬುಟ್ಟು ಕುಣುಗ್ಲು ಕಡೀಕ್ ತಿರಿಕಂಡ್ರು, ಕಾಲು ಪದ ಯೋಳಾಕ್ ಸುರು ಮಾಡ್ದೋ! " ತಡೀಯಪ್ಪ ಯಾವ್ದಾರಾ ಕೂಟ್ರು, ಕಾರು ಸಿಕ್ಕುದ್ರೆ ವಸಿ ಡ್ರಾಪ್ ತಗಳವಾ ಅನ್ಕಂಡು ಯೆಂಟ್ಗಾನಳ್ಳಿ ಬಾರೆ ಇಳಿಯಕ್ ಸುರುಮಾಡುದ್ರು. ದೂರ್ದಿಂದ ಒಂದ್ಕಾರು ನಿದಾನುಕ್ಕೆ ಬತ್ತಾಯಿತ್ತು. ಸಿದ್ದಪ್ನೋರು ಕೈ ತೋರುದ್ರು ಕಾರು ಸುಮಾರಾಗಿ ಸ್ಲೋ ಆಯ್ತು. ಪಟಕ್! ಅಂತಾ ಡೋರ್ ತಗ್ದುದ್ದೆಯಾ ಹತ್ತಿ ಒಳಕ್ಕೂತ್ಕಂಡ್ರು.
ನೀ ಯಾರೋ ಪುಣ್ಯಾತ್ಮ ನಿನ್ನೊಟ್ಟೆ ತಣ್ಗಿರ್ಲಿ!" ಅಂತಾ ಬಾಗ್ಲಾಕ್ಕಂಡು ತಮ್ಮೆಗ್ಲು ಮೇಲಿದ್ದ ಟವಲಿಂದ ಬೆವರೊಸಿಕಂಡು ನೋಡ್ತಾರೆ!! ಏನಾಶ್ಚರ್ಯ!!!!!!!!!!!
ಕಾರೊಳ್ಗೆ ಡೈವರ್ರೂ ಇಲ್ಲಾ!! ಯಾರೂ ಇಲ್ಲಾ!! ಕಣ್ಮುಂದೆ ನಕ್ಸತ್ರ ಕಾಣಕ್ ಸುರುಆದೋ!! "ಓಹೋ!! ಇದು ದೆವ್ವಾನೆ ಇರ್ಬೇಕು ಅನ್ಕೊಂಡು,
" ದೆವ್ವಾ!! ದೆವ್ವಾ!! ದೆವ್ವಾ!! ಕಾಪಾಡ್ರಪ್ಪೋ ಯಾರಾದ್ರಾ ಕಾಪಾಡ್ರಪ್ಪೋ!! ದೆವ್ವಾ!! ದೆವ್ವಾ!! " ಅಂತಾ ಕೂಗ್ಕಂತ್ತಿದ್ದಂಗೇ ಇಂದ್ಲಿಂದಾ ತಲೇ ಮೇಲೆ ರಪ್!! ಅಂತಾ ಏಟು ಬಿತ್ತು.
" ಹಲ್ಕಾ ನನ್ಮಗನೇ!! ಪೆಟ್ರೋಲ್ ಆಗೋಯ್ತು ಅಂತಾ ೨ ಕಿಲಾಮೀಟ್ರಿಂದಾ ತಳ್ಕಬತ್ತಾವ್ನಿ!! ಒಳಕ್ಕತ್ತುದ್ದೂ ಅಲ್ದೆ! ದೆವ್ವಾ!! ದೆವ್ವಾ!! ಅಂತಾ ಬ್ಯಾರೆ ಅಂತೀಯಾ? ಇಳ್ಯೋ ನನ್ಮಗನೆ ಕೆಳಕ್ಕೆ!" ಅಂತಾ ಕಾರ್ನೋನರ್ರು ಮುಂದೆ ಬಂದ!!
ಪಾಪ!! ಸಿದ್ದಪ್ನೋರು ಕೆಳಕ್ಕಿಳಿದು ತಿರ್ಗಾ ನಡ್ಕಂಡು ಓಗಾಕೆ ಸುರು ಮಾಡುದ್ರು! ಇನ್ನೊಸಿ ದೂರ ಓದ್ಮೇಲೆ ಯಾರೋ ಜ್ಯಾಡ್ಸಿ ಸೊಂಟಕ್ಕೊದ್ದಂಗಾಯ್ತು.
" ಎದ್ದೇಳೋ! ಬೇವರ್ಸೀ! ಮೂರ್ ಮದ್ದೀನಾ ಅಯ್ತು ಇನ್ನೂ ಬಿದ್ದವ್ನೆ!!" ಅಂತಾ ಸಿದ್ದಮ್ಮ ಗೊಣಗೋದು ಕೇಳ್ಸುದ್ಮೇಲೆಯಾ ನಮ್ ಸಿದ್ದಪ್ನೋರ್ಗೆ ತಾವ್ ಕಂಡಿದ್ದು ಕನ್ಸು ಅಂತಾ ಗೊತ್ತಾಗಿದ್ದು!!!!