ಶನಿವಾರ, ಮೇ 10, 2014

ಸುಂದರ ಆಸೆಗಳು ...

ಇನ್ನೂ ಆಡಬೇಕು ಅನ್ನುವಷ್ಟರಲ್ಲಿ ... ಮುಗಿವ ಮಾತು...
ಇನ್ನೂ ಸ್ವಲ್ಪ ಜೊತೆಗಿರಬಾರದೇ ಎನ್ನುವ ಸ್ನೇಹ...
ಎಷ್ಟು ಮಿಂದರೂ ... ಮತ್ತೆ ಸಾಲದೆನ್ನುವ ಪ್ರೇಮ...
ಸುಂದರ....... ಅತೀ ....ಸುಂದರ ..

ನಿನಗಾಗಿ ... ಕಾಯುವ ಕಾತರಿಕೆ...
ನಿಲ್ಲದ ಕನಸುಗಳ ಕನವರಿಕೆ...
ಅಂತರಾಳದ ಅನುಭೂತಿ .....
ನೆನಪುಗಳ ಬಿಸಿಗೆ...  ಕರಗುವ ಕಣ್ಣೇರು...
ಸುಂದರ....... ಅತೀ ....ಸುಂದರ ..

ಕತ್ತಲಲಿ ಕೋಲ್ಮಿಂಚಿನ ನಿನ್ನ ಮೆಲುನಗು...
ನಿನ ಮುದ್ದು ... ಮಾತುಗಳ ಮೆರವಣಿಗೆ...
ರೆಕ್ಕೆ ಹೋಗುವುದೂ ಗೊತ್ತಿದ್ದರೂ ...
ಸುಡುವ ದೀಪಕ್ಕೆ ಮುತ್ತಿಕ್ಕುವ ದೀಪಣಗಿತ್ತಿಯಂತೆ ...
ನಿನ್ನೆಳೆತದ ಸುಳಿಯಲ್ಲಿ ಸಿಕ್ಕಿಕೊಳ್ಳುವುದು...
ಇನ್ನೂ.. ಸುಂದರ....... ಅತೀ ....ಸುಂದರ ..

ಕನಸುಗಳಿಗೆ ಬಣ್ಣ ಹಚ್ಚಿ ...ಹಾರಿ ಬಿಟ್ಟು ...
ಬಯಕೆಗಳ ಬಾನಾಡಿಗೆ ರೆಕ್ಕೆ ಕಟ್ಟಿ... ನೀಲಾಗಸದಲ್ಲಿ ...
ವಿಹರಿಸುತ ... ಕಟ್ಟಳೆಗಳ ಅಣಕಿಸುವುದು...
ಸುಂದರ....... ಅತೀ ....ಸುಂದರ ..

ನಿನ ಅಂತರಾಳದೆದೆಗೊರಗಿ ... ನಿನ್ನ ಮನದ ಪಿಸುಮಾತುಗಳ ...
ಕಿವಿಗೊಟ್ಟು ಕೇಳುವಾಸೆ...
ಯಾರಿಗೂ ಕಾಣದ ನಿನ್ನ ನೋವುಗಳನು  ನನ್ನೆದೆಯ ಬಿಸಿಲು ಮಚ್ಚೆಯ ಮೆಲೆ...
ಹರವಿ ಒಣಗಿಸಿ ಕೊಲ್ಲುವಾಸೆ ...
ಮರುಗುವ ಹೃದಯಕ್ಕೊರಗಿ ... ಕಣ್ಣೀರನೊರಸುವಾಸೆ...
ಸುಂದರ....... ಅತೀ ....ಸುಂದರ ..