ಭಾನುವಾರ, ಜನವರಿ 12, 2020

ಎಷ್ಟು ದಿನ ಆಯ್ತಲ್ವಾ...

ಎಷ್ಟು ದಿನಗಳ ಆಯಿತಲ್ಲವೇ....!! ಈಕಡೆ ಬಂದು .??
ದಿನಗಳಲ್ಲ ವರ್ಷಗಳೇ ಉರುಳಿ ಹೋಗಿವೆ..
ಈ ಕಾಲಘಟ್ಟದಲ್ಲಿ ಏನೇನೋ ಬದಲಾವಣೆಗಳಾಗಿವೆ ಹಿಂದೆ ಬ್ಲಾಗ್ ಬರೆಯಲು ತಂತ್ರಜ್ಞಾನ ಒಂದು ಅಷ್ಟರಮಟ್ಟಿಗೆ ತೊಡಕಾಗಿತ್ತು ಆದರೆ ಇಂದು ತಂತ್ರಜ್ಞಾನ ಬಹಳ ಮುಂದುವರೆದು ಬ್ಲಾಗ್ಗಳನ್ನು ಹೇಗೆ ಬೇಕಾದರೂ ಬಹಳ ಸುಲಭವಾಗಿ ಬರೆದುಬಿಡಬಹುದು.
ಮೊದಲಾದರೆ ಇಂಗ್ಲೀಷಿನಲ್ಲಿ ಟೈಪಿಸಿದರೆ ಅದು ಕನ್ನಡಕ್ಕೆ ಸರಿಯಾಗಿ ಭಾಷಾಂತರವಾಗುತ್ತಿರಲಿಲ್ಲ,  ಎಷ್ಟೋ ಕಾಗುಣಿತ ಹಾಗೂ ವ್ಯಾಕರಣಗಳ ದೋಷವನ್ನು ಸರಿಪಡಿಸಲು ಸಹ ಆಗುತ್ತಿರಲಿಲ್ಲ. ಇದನ್ನು ನೀವು ನನ್ನ ಬ್ಲಾಗ್ ಗಳಲ್ಲಿಯೇ ಕಾಣಬಹುದು, (ಇಂದು ಅವೆಲ್ಲವನ್ನೂ ಸರಿಪಡಿಸುವ ಅವಕಾಶವಿದ್ದರೂ ನೆನಪಿಗಾಗಿ ಇರಲಿ ಎಂದು ಹಾಗೆಯೇ ಬಿಟ್ಟಿದ್ದೇನೆ ಎನ್ನುವುದು ಸತ್ಯ ಅದರ ಜೊತೆಗೆ ನನ್ನ ಸೋಮಾರಿತನವೂ ಅದಕ್ಕೆ ಒಪ್ಪುತ್ತಿಲ್ಲ ಎಂಬುದು ಅಷ್ಟೇ ಸತ್ಯಾತಿ ಸತ್ಯ 😁😁)..
ಇಂದು ತಂತ್ರಜ್ಞಾನ ಅಷ್ಟೊಂದು ಮುಂದುವರೆದಿದ್ದರೂ  ಫೇಸ್ಬುಕ್, ವಾಟ್ಸಾಪ್ ಮುಂತಾದ ಸಾಮಾಜಿಕ ಜಾಲತಾಣಗಳ ಭ್ರಮಾಲೋಕದಲ್ಲಿ ಎಲ್ಲರೂ ಕಳೆದುಹೋಗಿದ್ದೇವೆ. ಮೊಬೈಲ್ಗಳು ಬಂದನಂತರ ಟಿವಿ, ಪುಸ್ತಕ, ಕ್ಯಾಲ್ಕುಲೇಟರ್, ಕಂಪ್ಯೂಟರ್ ಮುಂತಾದವುಗಳು ಮರೆಯಾಗಿ ಬಿಟ್ಟವು. ಆದರೆ ಫೇಸ್ಬುಕ್ ವಾಟ್ಸಾಪ್ ಇನ್ಸ್ಟಾಗ್ರಾಮ್ ಗಳು ಬಂದನಂತರ ಎಲ್ಲವನ್ನು ಆಪೋಶನ ತೆಗೆದುಕೊಂಡು ಬಿಟ್ಟವು ಈ ಹಾಳು  ಸಾಮಾಜಿಕ ಜಾಲತಾಣಗಳು. ಇದೆಲ್ಲದರ ನಡುವೆಯೂ ಪುಸ್ತಕ ಓದುವವರಿಗೆ ಓದುವ ಹವ್ಯಾಸ ಉಳ್ಳವರಿಗೆ ನೆರವಾಗಿದ್ದು ಇದೆ ಮೊಬೈಲ್ ಗಳು ಎಂದರೆ ತಪ್ಪಿಲ್ಲ. ಅದರಲ್ಲೂ ಬ್ಲಾಗ್ ಸ್ಪಾಟ್ ಗಳು ಓದುಗರನ್ನು ಬಹಳ ಸಫಲವಾಗಿದ್ದವು,  ಅಷ್ಟೇ ಅಲ್ಲ ಎಷ್ಟೋ ಸೃಜನಾತ್ಮಕ ಲೇಖಕರು ಹುಟ್ಟಿಕೊಳ್ಳಲು ಇದೇ ಬ್ಲಾಗ್ ಸ್ಪಾಟ್ ಗಳು ಕಾರಣವಾಗಿದ್ದವು. ಬ್ಲಾಗುಗಳಲ್ಲಿ ಬರೆಯುವುದು ಎಂದರೆ ಮನಸ್ಸಿಗೆ ಎಷ್ಟು ಖುಷಿ  ಸಿಗುತ್ತಿತ್ತು. ಅದರಲ್ಲೂ ನಾವು ಬರೆದದ್ದು ಹೇಗಾದರೂ ಇರಲಿ, ಚೆನ್ನಾಗಿರಲಿ, ಚೆನ್ನಾಗಿಲ್ಲದಿರಲಿ, ಏನೇ ಆಗಿರಲಿ ಅದನ್ನು ಯಾರಾದರೂ ಒಬ್ಬರು ಓದುತ್ತಾರೆ ಎನ್ನುವ ಅನುಭೂತಿಯೇ ವರ್ಣಿಸಲಸದಳವಾದದ್ದು. ಯಾಕೆಂದರೆ ನನ್ನಂತಹ ಬಡಪಾಯಿಗಳಿಗೆ ನಾವು ಬರೆದಿದ್ದನ್ನು ಅಚ್ಚುಹಾಕಿಸಿ ಮಾರಾಟ ಮಾಡಿ ನಾಲ್ಕು ಜನರಿಗೆ ತಲುಪಿಸುವಂತಹ ಕಲೆ ಎಂದಿಗೂ ಕರಗತವಾಗಿದ್ದಲ್ಲ.  ಹಾಗಾಗಿ ಬ್ಲಾಗ್ಸ್ಪಾಟ್ ಗಳು ನನ್ನಂಥವರಿಗೆ ನೆಚ್ಚಿನ ತಾಣಗಳಾಗಿದ್ದವು.

 ಆದರೆ ಈ ಫೇಸ್ಬುಕ್, ವಾಟ್ಸಾಪ್, ಇನ್ಸ್ಟಾಗ್ರಾಮ್ ಮೊದಲಾದ ಸಾಮಾಜಿಕ ಜಾಲತಾಣಗಳು ಬಂದನಂತರ ಓದುವ ಬರೆಯುವ ಮಾತಿರಲಿ ಮನುಷ್ಯತ್ವವೇ ಮಾಯವಾಗಿದೆ ಏನು ಎನ್ನುವ ಆತಂಕ ಎಷ್ಟು ಬಾರಿ ನನ್ನನ್ನು ಕಾಡಿದ್ದಿದೆ.. ಹಾಗಾಗಿ ಸಾಮಾಜಿಕ ಜಾಲತಾಣಗಳಿಂದ ಆದಷ್ಟು ದೂರವಿರಲು ಪ್ರಯತ್ನಿಸುತ್ತಿದ್ದೇನೆ ಆ ನಿಟ್ಟಿನಲ್ಲಿ ತಕ್ಕಮಟ್ಟಿಗೆ ಯಶ ಗಳಿಸಿದ್ದೇನೆ,  ಆದರೆ ಉದರ ನಿಮಿತ್ತ ವಾಗಿ ಎಷ್ಟೋ ಸಾಮಾಜಿಕ ಜಾಲತಾಣಗಳಿಂದ ಹೊರಬರಲಾಗದಂತಹ ಪರಿಸ್ಥಿತಿ ಇದೆ. ಹಾಗಾಗಿ ಅವುಗಳನ್ನು ಉಪಯೋಗಿಸುವುದನ್ನು ಆದಷ್ಟು ಕಡಿಮೆ ಮಾಡಿದ್ದೇನೆ.
ಆದರೆ ಸಮಯದ ಸುಳಿಗಳಲ್ಲಿ ಸಿಲುಕಿ ಒದ್ದಾಡುತ್ತಿದ್ದೇನೆ..

ಒಟ್ಟಿನಲ್ಲಿ ಇಲ್ಲಿಗೆ ಬಾರದೇ ಇದ್ದುದಕ್ಕೆ ಏನೇನೋ ಕಾರಣಗಳು ಏನೇನೋ ಸಬೂಬುಗಳು ಇಲ್ಲಿಗೆ ಬರಲು ಆಗಲೇ ಇಲ್ಲ ಎನ್ನುವುದು ಅಷ್ಟೇ ಸತ್ಯ... ಮಿಕ್ಕಿದ್ದೆಲ್ಲ ಮಿಥ್ಯ

ಅಬ್ಭಬ್ಭಾ...." ಬಿಡು ಮಾರಾಯಾ ಇದೆಲ್ಲಾ ಗೊತ್ತಿರೊದೇ ನಿನ್ನ  ಬ್ಲಾಗಿಗೆ ಎಂಟ್ರಿ ಕೊಟ್ಟು ಇದನ್ನೆಲ್ಲಾ ಓದುವ ಕರ್ಮ ನಮಗೆ ಬೇಕಾ" ಅಂತಾ ಅನ್ಕೊತಾ ಇದಿರಾಂತ ಗೊತ್ತು
ಜಾಸ್ತಿ ತಲೆ ತಿನ್ನೊಲ್ಲ ಬಿಡಿ

ನನ್ನ ಹೊಸ ವರ್ಷದ ಸಂಕಲ್ಪದಂತೆ ಪ್ರತೀ ತಿಂಗಳು ಕಡಿಮೆ ಅಂದ್ರೂ ಎರಡು ಲೇಖನಗಳನ್ನು ನನ್ನ ಬ್ಲಾಗಿನಲ್ಲಿ ಪ್ರಕಟಿಸಲೇಬೇಕೆಂದುಕೊಂಡಿದ್ದೇನೆ

ಹಾಗಾಗಿ ತಾವು ಓದೋದು ಬಿಡೋದು, ಅಪ್ಪಿ ತಪ್ಪಿ ಓದಿ ತಪ್ಪೆನಿಸಿದ್ರೆ ಕಾಮೆಂಟಿನಲ್ಲಿ ಉಗಿಯಬೇಕಾಗಿರೋದು ನಿಮ್ಮ  ಧರ್ಮ ಹಾಗು ಕರ್ಮ...

ಕಡೆಯದಾಗಿ ಯಾವತ್ತೋ ಯಾವಾಗಲೋ ಗೀಚಿದ್ದ ಎರಡು ಸಾಲು ಕುಟ್ಟಿ ಮುಗಿಸುತ್ತೇನೆ..


ಮೊದಲ
ಮಳೆಗೆ
ಮುಖವೊಡ್ಡಿದ
ಇಳೆಗೀಗ
ಉಡಿ
ತುಂಬಾ
ಮಕ್ಕಳು


ಭುವಿ

ನಗುತಿಹಳು

ಉಮಾಶಂಕರ ಬಿದರಕೋಟೆ