ಶನಿವಾರ, ಜನವರಿ 30, 2010

ಕದ್ದ SMS ಜೋಕುಗಳು.................

ಅಬಕಾರಿ ಇಲಾಖೆಯ 9 ಹೊಸ ಯೋಜನೆಗಳು

1. ಮರಳಿ ಬಾ ಬಾರಿಗೆ
2. ಕುಡುಕರ ಅಂಗಳ
3. ಮದ್ಯಾಹ್ನದ ಮದ್ಯಪಾನ
4. ಭಾಗ್ಯದ ಬ್ರಾಂದಿ ಯೋಜನೆ
5. ದುಡಿ ಕುಡಿ ಯೋಜನೆ
6. ಕುಡುಕರಿಗಾಗಿ ದೇವದಾಸ್ ವಸತಿ ಶಾಲೆ
7. ಕುಡಿತ ಬಿಟ್ಟವರನ್ನು ಬಾರ್ ಕಡೆ ಆಕರ್ಷಿಸಲು ಮದ್ಯಪಾನ ಮೇಳ
8. ಕುಡುಕರ ಪ್ರತಿಭ ಪ್ರದರ್ಶನಕ್ಕಾಗಿ ಮದ್ಯಪಾನ ಕಾರಂಜಿ
9. ಜಿಲ್ಲಾ ಮಟ್ಟದ ಬಾರ್ & ರೆಸ್ಟೋರೆಂಟ್ ಗಳ ದರ್ಶನ
Sponsor :ಸರ್ವ ಕುಡುಕರ ಅಭಿಯಾನ (ಎಲ್ಲರೂ ಕುಡಿಯೋಣ ಎಲ್ಲರಿಗೂ ಕುಡಿಸೋಣ)ರಾಜಕಾರಣಿ ವೇಷ


ಕಳ್ಳ-೧: ಏನ್ ಗುರು ಈ ಗೆಟಪ್......? ಒಳ್ಳೆ ರಾಜಕಾರಣಿ ವೇಷ ಹಾಕ್ಬಿಟ್ಟಿದ್ದೀಯಾ ?
ಕಳ್ಳ-೨: ಹೂಂ ಶಿಷ್ಯ, ಈ ಗೆಟಪ್‍ನಲ್ಲಿ ಹೋದ್ರೆ ಯಾವ ನನ್ಮಗ ನನ್ನ ಕಳ್ಳ ಅಂತ ಗುರ್ತು ಹಿಡೀತಾನೆ ?

ಮಹಿಳೆಯ ಅಭಿನಂದನೆ

ಕಳ್ಳನನ್ನು ಹಿಡಿದು ಹೊಡೆದು ಮೂರ್ಚೆ ಹೋಗುವಂತೆ ಮಾಡಿದ ಮಹಿಳೆಯನ್ನು ಅಭಿನಂದಿಸುತ್ತ ಪೋಲೀಸ್ ಅಧಿಕಾರಿ:
'ನಿಮ್ಮ ಸಾಹಸ ಮೆಚ್ಚಿಕೊಳ್ಳಬೇಕಮ್ಮಾ. ಇದೆಲ್ಲಾ ನಿಮಗೆ ಹೇಗೆ ಸಾಧ್ಯವಾಯಿತು' ಎಂದು ಕೇಳಿದರು.
ಮಹಿಳೆ: 'ನಿಜವಾಗಿ ಹೇಳಬೇಕೂಂದ್ರೆ ಆಗ ಬಂದವ ಕಳ್ಳ ಅಂತ ನನಗೆ ಗೊತ್ತೇ ಇರಲಿಲ್ಲ. ಅಷ್ಟು ರಾತ್ರೀಲಿ ಬಂದವ ನನ್ನ ಗಂಡನೇ ಅಂತ ತಿಳಿದು ಒನಕೆಯಿಂದ ಒಂದು ಬಿಗಿದೆ. ಆದರೆ ಚೀರಿಕೊಂಡ ಧ್ವನಿ ಬೇರೆ ಬಂತು' ಎಂದಳು.


ಅಪಘಾತ ವಲಯ ಅನ್ನೊ ಬೋರ್ಡು


ಈ ಹೈವೇ ತಿರುವಿನಲ್ಲಿ ’ಅಪಘಾತ ವಲಯ ನಿಧಾನವಾಗಿ ಚಲಿಸಿ’ ಅನ್ನೊ ಬೋರ್ಡು ಇತ್ತು ಈಗ ಕಾಣ್ತಾ ಇಲ್ಲವಲ್ಲ ???
ಬೋರ್ಡು ಹಾಕಿದ ಮೇಲೆ ಒಂದೂ ಅಪಘಾತ ಆಗಲಿಲ್ಲ ಸಾರ್. ಆದರಿಂದ ತೆಗೆದುಬಿಟ್ವಿ.ಎಕ್ಸಿಡೆಂಟ್


ಪೋಲೀಸ್ : ಹೇಗಪ್ಪಾ ಎಕ್ಸಿಡೆಂಟ್ ಆಯ್ತು?
ಡ್ರೈವರ್ : ಅದೇ ಸರ್ ನಂಗೂ ಗೊತ್ತಾಗ್ತಾ ಇಲ್ಲ...!! ನಾನಾಗ ನಿದ್ದೆ ಮಾಡ್ತಾ ಇದ್ದೆ..!!!ಏಟು - ತಿರುಗೇಟು


ಪೋಲೀಸ್: ಡೈನಮೋ ಇದ್ರೂ ಯಾಕ್ರೀ ಲೈಟಿಲ್ದೆ ಹೊಗ್ತಿದ್ದೀರಿ ?
ಸೈಕಲ್ ಸವಾರ: ರಸ್ತೆ ತುಂಬಾ ಲಿಟ್ ಇರುವಾಗ ಸೈಕಲ್‍ಗೆ ಯಾಕೆ ಸಾರ್ ಲೈಟು?
ಸೈಕಲ್ ಸವಾರ: ಸಾರ್ ! ಸಾರ್ ! ಚಕ್ರದ ಗಾಳಿ ಯಾಕೆ ಬಿಡ್ತಾ ಇದೀರಿ ?
ಪೋಲೀಸ್: ಹೊರಗೆಲ್ಲಾ ಇಷ್ಟೊಂದು ಗಾಳಿ ಇರುವಾಗ ಚಕ್ರಕ್ಕೆ ಯಾಕ್ರೀ ಗಾಳಿ !!!ಡಾಕ್ಟರ್ ಮತ್ತು ರೋಗಿ...


ಡಾಕ್ಟರ್: ನಿಮ್ಮ ಕಿವಿಯಲ್ಲಿ 'ಹಲ್ಲಿ', ಹೋಗುವವರೆಗೆ ಏನು ಮಾಡುತ್ತಿದ್ದಿರಿ ?
ರೋಗಿ: ಸಾರ್ ಮೊದಲು ಕಿವಿ ಒಳಗೆ ಸೊಳ್ಳೆ ಹೋಯ್ತು,
ಅದನ್ನು ಹಿಡಿಯೋಕೆ 'ಹಲ್ಲಿ' ಹೋಯ್ತು,
ಅದಕ್ಕೆ ನಾನು ಹಲ್ಲಿ ಆ ಸೊಳ್ಳೆಯನ್ನು ಹಿಡ್ಕೊಂಡು ಬರುತ್ತೆ ಅಂತ ಸುಮ್ಮನಿದ್ದೆ. !!!ಸ್ವಿಮ್ - ಸ್ಲಿಮ್


ಡಾಕ್ಟರ್ ಗುಂಡನಿಗೆ : ಎಲ್ಲೋದ್ರು ಡೈಲಿ ಸ್ವಿಮ್ ಮಾಡಿ ನೀವು ಸ್ಲಿಮ್ ಆಗ್ತೀರ.
ಗುಂಡ : ಹಲ್ಲೋ ಸುಮ್ಮನಿರಯ್ಯ ಸಾಕು ತಿಮಿಂಗ್ಳಗಳು ಡೈಲಿ ಸ್ವಿಮ್ ಮಾಡಲ್ವ ಅವು ಯಾಕೆ ಸ್ಲಿಮ್ ಆಗಿಲ್ಲ..... !!!ಡಾ. Pshychotherapist


ಒಮ್ಮೆ ಡಾ. ಚೋಪ್ರ, Pshychotherapist, ಮನೆಯ ಮುಂದೆ ತಮ್ಮ ಹೆಸರನ್ನು ಬರೆಸಿಕೊಳ್ಳಲು ಆಸೆಯಾಗುತ್ತದೆ.
ಅದಕ್ಕೆ ಒಬ್ಬ painterನಿಗೆ ಕೆಲಸ ಒಪ್ಪಿಸುತ್ತಾನೆ.
ಆ painter ಕುಡಿದ ನಶೆಯಲ್ಲಿ ಹೀಗೆ ಬರೆಯುತ್ತಾನೆ.....
ಡಾ. ಚೋಪ್ರ, Pshycho The Rapist !!!ಹೂವಿನ ಹಾರ


ರೋಗಿ : ಆಪರೇಷನ್ ಥಿಯೇಟರ್‌ನಲ್ಲಿ ಹೂವಿನ ಹಾರ ಯಾಕಿದೆ ?
ಡಾಕ್ಟರ್ : ಇದು ನನ್ನ ಮೊದಲ ಆಪರೇಷನ್. ಸಕ್ಸಸ್ ಆದ್ರೆ ನನಗೆ, ಫೇಲ್ ಆದ್ರೆ ನಿನಗೆ ! ! !ನಾಲ್ಕು ನಾಲ್ಕು ಜನ


ಒಮ್ಮೆ ಗುಂಡ ಕಣ್ಣಿನ ಡಾಕ್ಟರ್ ಬಳಿ ಹೋದ :
ಗುಂಡ : ಡಾಕ್ಟರೆ ಏಕೋ ಇತ್ತಿಚೆಗೆ ನಾನು ಯಾರನ್ನಾದರೂ ನೋಡಿದರೆ ಇಬ್ಬಿಬ್ಬರು ಕಾಣುತ್ತಾರೆ.... ?
ಡಾಕ್ಟರ್ : ಅದನ್ನು ಹೇಳುವುದಕ್ಕೆ ಯಾಕ್ರಿ ನಾಲ್ಕು ಜನ ಬಂದ್ದಿದ್ದೀರ ! ! !ಸ್ಕೂಲ್‍ಗೇ ಹೋಗಿಲ್ಲ .....


ಡಾಕ್ಟರ್ : ನಿಮ್ಮ ಕಿಡ್ನಿ ಫೇಲ್ ಆಗಿದೆ. !
ಗುಂಡ : ಏನ್ ಹೇಳ್ತಿದೀರಾ ಡಾಕ್ಟರ್ ? ನನ್ನ ಕಿಡ್ನಿ ಸ್ಕೂಲಿಗೇ ಹೋಗಿಲ್ಲ. ಹಾಗಿರೋವಾಗ ಕಿಡ್ನಿ ಫೇಲ್ ಆಗೋದು ಹೇಗೆ ???

ಭೂಕಂಪ

ಭೂಕಂಪದ ಬಗ್ಗೆ ಈಗ ಬರೆಯಲು ಕಾರಣ ಹೈಟಿಯಲ್ಲಿ ಮೊನ್ನೆ ಜರುಗಿದ ಭೀಭತ್ಸ "ಭೂಕಂಪನ". ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ, ಲೆಕ್ಕವಿಲ್ಲದಷ್ಟು ಜನ ನಿರ್ವಸತಿಕರಾಗಿ ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ಪ್ರಾಣ ಕಳೆದುಕೊಂಡ ಜೀವಿಗಳಿಗೆ ಅಶ್ರುತರ್ಪಣದ ಶ್ರದ್ದಾಂಜಲಿ ಅರ್ಪಿಸುತ್ತಾ ಭೂಕಂಪದ ಬಗ್ಗೆ ಸ್ವಲ್ಪತಿಳಿದುಕೊಳ್ಲೋಣ.ಭೂಕಂಪ = ಭೂಮಿಯ ಅದಿರಾಟ = ಹೊಯ್ದಾಡುವಿಕೆ ಎಂಬುದು ಭೂಮಿಯ ಹೊರಪದರದಲ್ಲಿ ಶಕ್ತಿಯು ಇದ್ದಕ್ಕಿದ್ದಂತೆ ಬಿಡುಗಡೆಯಾದಾಗ ಅದು ಉಂಟುಮಾಡುವ ಭೂಕಂಪದ ತರಂಗಗಳ ಪರಿಣಾಮ ಎನ್ನಬಹುದು. ಭೂಕಂಪಗಳನ್ನು ಭೂಕಂಪದ ಮಾಪಕ ಅಥವಾ ರಿಕ್ಟರ್' ಮಾಪಕದ ಸಹಾಯದಿಂದ ದಾಖಲಿಸಲಾಗುತ್ತದೆ. ಇದಕ್ಕೆ ಭೂಕಂಪಲೇಖಿ (ಸೈಸ್ಮಗ್ರಾಫ್) ಎಂಬ ಹೆಸರೂ ಇದೆ. ಭೂಕಂಪವೊಂದರ ಕ್ಷ್ ಣದ ಪ್ರಮಾಣವನ್ನು ಅಥವಾ ಸಂಬಂಧಿತ ಮತ್ತು ಬಹುತೇಕ ಬಳಕೆಯಲ್ಲಿಲ್ಲದ 3ರಷ್ಟು ಪ್ರಮಾಣದೊಂದಿಗಿನ ರಿಕ್ಟರ್ ಪ್ರಮಾಣವನ್ನು, ಅಥವಾ ಬಹುತೇಕ ಗ್ ರಹಿಸಲು ಅಸಾಧ್ಯವಾದ ಕೆಳಮಟ್ಟದ ಭೂಕಂಪಗಳನ್ನು ಮತ್ತು ವಿಶಾಲವ್ಯಾಪ್ತಿಯಲ್ಲಿ ಮಾರ್ಪಡಿಸಲಾಗಿರುವ ಮೆರ್ಕ್ಯಾಲಿ ಮಾಪಕ ದಲ್ಲಿಅಲುಗಾಟದ ತೀವ್ರತೆಯನ್ನು ಅಳೆಯಲಾಗುತ್ತದೆ.ಭೂಮಿಯ ಮೇಲ್ಮೈಯಲ್ಲಿ ಅಲುಗಾಟವನ್ನು ಉಂಟುಮಾಡುವ ಹಾಗೂ ಕೆಲವೊಮ್ಮೆ ನೆಲವನ್ನು ಸ್ಥಾನಪಲ್ಲಟಗೊಳಿಸುವ ಮೂಲಕ ಭೂಕಂಪಗಳು ಸ್ವತಃ ಸ್ಪಷ್ಟವಾಗಿ ಗೋಚರಿಸುತ್ತವೆ.ಕಡಲತೀರದಾಚೆಗೆ ಭೂಕಂಪದ ಒಂದು ದೊಡ್ಡ 'ಅಧಿಕೇಂದ್ರ'ವು ಸ್ಥಿತವಾಗಿದ್ದಾಗ, ಕೆಲವೊಮ್ಮೆ ಸಾಕಷ್ಟು ಸ್ಥಾನಪಲ್ಲಟಕ್ಕೆ ಈಡಾಗುವ ಸಮುದ್ರತಳದ ಭೂಮಿಯು 'ಸುನಾಮಿ'ಯೊಂದನ್ನು ಉಂಟುಮಾಡುತ್ತದೆ.ಭೂಕಂಪಗಳ ಸಮಯದಲ್ಲಿ ಕಂಡುಬರುವ ಅಲುಗಾಟಗಳು, ಭೂಕುಸಿತಗಳನ್ನು ಹಾಗೂ ಕೆಲವೊಮ್ಮೆ ಜ್ವಾಲಾಮುಖಿಯಂತಹ ಚಟುವಟಿಕೆಯನ್ನೂ ಪ್ರಚೋದಿಸಬಲ್ಲವು. ಅದರದೇ ಆದ ಅತ್ಯಂತ ಸಾರ್ವತ್ರಿಕ ಅರ್ಥದಲ್ಲಿ ಹೇಳುವುದಾದರೆ, ಭೂಕಂಪದ ಅಲೆಗಳನ್ನು ಹುಟ್ಟುಹಾಕುವ- ಅದು ಒಂದು ನೈಸರ್ಗಿಕ ಅನುಭವವೇದ್ಯ ಸಂಗತಿ ವಿದ್ಯಮಾನವಿರಬಹುದು ಅಥವಾ ಮನುಷ್ಯರಿಂದ ಉಂಟಾದ ಒಂದು ಘಟನೆಯೇ ಆಗಿರಬಹುದು- ಯಾವುದೇ ಭೂಕಂಪ ಘಟನೆಯನ್ನು ವಿವರಿಸಲು ''ಭೂಕಂಪ'' ಎಂಬ ಪದವನ್ನು ಬಳಸಲಾಗುತ್ತದೆ

ಸಂಕ್ರಾಂತಿ ಮತ್ತು ಆರೋಗ್ಯ

ಸಂಜೆಯ ವೇಳೆಗೆ ಎಳ್ಳುಬೆಲ್ಲಗಳನ್ನು ಒಬ್ಬರಿಗೊಬ್ಬರಿಗೆ ಕೊಟ್ಟು ಎಳ್ಳು ಬೆಲ್ಲ ತಿಂದು ಒಳ್ಳೆಯಮಾತಾಡೋಣ ಎಂದು ಹೇಳುತ್ತಾರೆ.

ಸಂಕ್ರಾಂತಿಯ ನಂತರ ಹಗಲು ಹೆಚ್ಚಾಗಿ ವಾತಾವರಣದಲ್ಲಿ ತಾಪವು ಹೆಚ್ಚುತ್ತದೆ. ಆಯುರ್ವೇದ ರೀತಿ ಉತ್ತರಾಯಣದಲ್ಲಿ ಸೂರ್ಯನು ಪ್ರಬಲವಾಗುವುದರಿಂದ ಪ್ರಾಣಿಗಳ ಹಾಗೂ ಸಸ್ಯಗಳ ಬಲವನ್ನು ಹೀರುತ್ತಾನೆ. ಸಂಕ್ರಾಂತಿ ಇದು ಸೂರ್ಯ ಸಾಮೀಪ್ಯದಿಂದ ಸಿಕ್ಕುವ ಉಷ್ಣತೆಯ ಲಾಭದ ಆನಂದದ ಸಂಕೇತ. ಈ ಸಂಕ್ರಮಣ ಕಾಲದಿಂದ ಹಗಲಿನ ಭಾಗ ಹೆಚ್ಚಾಗುತ್ತದೆ. ಚಳಿಗಾಲದ ಕೊರೆತದ ಪರಿಣಾಮದಿಂದ ಬರಡಾದ ವಸ್ತುಗಳಲ್ಲಿ ನವಚೇತನ ತುಂಬಿಕೊಳ್ಳುತ್ತದೆ. ಈ ದಿವಸದಿಂದ ಸೂರ್ಯನು ತನ್ನ ಉತ್ತರಾಭಿಮುಖದ ಪ್ರಯಾಣವನ್ನು ಪ್ರಾರಂಭಿಸುತ್ತಾನೆ. ಹಾಗಾಗಿ ಇಂದಿನಿಂದ ‘ಉತ್ತರಾಯಣ’ ಪ್ರಾರಂಭ. ಇದು ಸಾಮಾನ್ಯವಾಗಿ ಜನವರಿ ತಿಂಗಳಿನ ಮಧ್ಯಭಾಗದಲ್ಲಿ ಬರುತ್ತದೆ. ಸಂಕ್ರಾಂತಿಯ ನಂತರ ಹಗಲು ಹೆಚ್ಚಾಗಿ ವಾತಾವರಣದಲ್ಲಿ ತಾಪವು ಹೆಚ್ಚುತ್ತದೆ. ಆಯುರ್ವೇದ ರೀತಿ ಉತ್ತರಾಯಣದಲ್ಲಿ ಸೂರ್ಯನು ಪ್ರಬಲವಾಗುವುದರಿಂದ ಪ್ರಾಣಿಗಳ ಹಾಗೂ ಸಸ್ಯಗಳ ಬಲವನ್ನು ಹೀರುತ್ತಾನೆ. ದಕ್ಷಿಣಾಯನದಲ್ಲಿ ಚಂದ್ರನು ಪ್ರಬಲವಾಗುವುದರಿಂದ ಇವಕ್ಕೆ ಬಲವನ್ನು ನೀಡುತ್ತಾನೆ. ಉತ್ತರಾಯಣವು ಶಿಶಿರ ಋತುವಿನಿಂದ ಪ್ರಾರಂಭವಾಗಿ ವಸಂತ ಹಾಗೂ ಗ್ರೀಷ್ಮ ಋತುಗಳನ್ನೊಳಗೊಂಡಿರುತ್ತದೆ. ಹಾಗೆಯೇ ದಕ್ಷಿಣಾಯನವು ವರ್ಷಋತುವಿ ನಿಂದ ಪ್ರಾರಂಭವಾಗಿ ಶರತ್ ಮತ್ತು ಹೇಮಂತ ಋತುಗಳನ್ನು ಒಳಗೊಂಡಿರುತ್ತದೆ.ಎಳ್ಳು, ಬೆಲ್ಲ(ಸಕ್ಕರೆ),ಕೊಬ್ಬರಿ ಮುಂತಾದವುಗಳಲ್ಲಿ ಸ್ನಿಗ್ಧತ್ವವು ಅಧಿಕವಾಗಿದ್ದು ಅವುಗಳು ಪ್ರಬಲವಾದ ವಾತ ಹಾಗೂ ಅಗ್ನಿಗಳನ್ನು ನಿಗ್ರಹಿಸುವ ಗುಣಗಳನ್ನು ಪಡೆದಿರುವುದರಿಂದ ಸಾಂಕೇತಿಕವಾಗಿ ಸಂಕ್ರಾಂತಿ ಯಂದು ಅವುಗಳ ಮಿಶ್ರಣವನ್ನು ಎಲ್ಲರಿಗೂ ಹಂಚುವ ಹಾಗೂ ತಿನ್ನುವ ವಾಡಿಕೆ ಬಂದಿದೆ. ಅಂದು ಎಳ್ಳು ಬೆಲ್ಲವನ್ನು ಹಂಚಿ ಒಳ್ಳೆ ಒಳ್ಳೆ ಮಾತನಾಡಬೇಕೆಂಬ ಪ್ರತೀತಿಯು ಒಬ್ಬರಿಗೊಬ್ಬರ ಸ್ನೇಹವರ್ಧನೆಯ ಸಂಕೇತವಾಗಿದೆ. ಶರೀರದಲ್ಲಿ ಈ ಕಾಲದಲ್ಲಿ ರೂಕ್ಷತೆ ಹೆಚ್ಚಾಗುವುದರಿಂದ ಎಳ್ಳೆಣ್ಣೆಯ(ಅಂದರೆ ತೈಲಾದಿಗಳಿಂದ)ಶರೀರ ಮರ್ಧನೆ, ಬಿಸಿ ನೀರು ಸ್ನಾನ, ವ್ಯಾಯಾಮ ಮಾಡುವುದು, ಕಬ್ಬನ್ನು, ಕಬ್ಬಿನ ರಸದಲ್ಲಿ ತಯಾರಿಸಿದ ಪದಾರ್ಥಗಳನ್ನು ಸೇವಿಸುವುದು ಆಚರಣೆಗೆ ಬಂದಿದೆ. ಅಲ್ಲದೆ ಈ ಋತುವಿನ ಶೀತ ವಾತಾವರಣದ ಪ್ರಭಾವದಿಂದಾಗಿ ಚರ್ಮದಲ್ಲಿರುವ ಶಾರೀರಿಕ ಉಷ್ಣತೆಯು ಹೊಟ್ಟೆಗೆ ಹೊಕ್ಕಿರುತ್ತದೆ. ಹಾಗಾಗಿ ಈ ಋತುಗಳಲ್ಲಿ ಜನರಿಗೆ ಹಸಿವು ಹೆಚ್ಚಾಗಿರುತ್ತದೆ. ಹಸಿವನ್ನು ನಿಗ್ರಹಿಸಲು ಆಯುರ್ವೇದವು ಜೀರ್ಣಕ್ಕೆ ಭಾರವಾದ ಅಂದರೆ ಗುರು ಗುಣವುಳ್ಳ, ಸ್ನಿಗ್ಧಗುಣವುಳ್ಳ, ಸಿಹಿ ರುಚಿಯುಳ್ಳ, ಹೊಸದಾಗಿ ಬೆಳೆದ ಧಾನ್ಯಗಳ ಉಪಯೋಗವನ್ನು ಸೂಚಿಸುತ್ತದೆ. ಜೊತೆಯಲ್ಲಿ ಕಬ್ಬಿಗೂ ಹಾಗೂ ಕಬ್ಬಿನ ರಸದಿಂದ ತಯಾರಿಸಿದ ಪದಾರ್ಥಗಳಿಗೂ (ಅಂದರೆ ಸಿಹಿ ಪದಾರ್ಥಗಳು) ಗುರು, ಸ್ನಿಗ್ಧ ಮುಂತಾದ ಗುಣಗಳು ಹೇರಳವಾಗಿರುವುದರಿಂದ ಅವುಗಳ ಸೇವನೆಯು ಆ ಋತುವಿಗೆ ಹಿತಕರವಾಗಿರುವುದರಿಂದ ಸಾಂಕೇತಿಕವಾಗಿ ಸಂಕ್ರಾಂತಿಯಂದು ಎಳ್ಳು, ಬೆಲ್ಲ ಅಥವಾ ಸಕ್ಕರೆ ಮಿಶ್ರಣ ಹಾಗೂ ಸಿಹಿ ಪದಾರ್ಥಗಳ ಭೋಜನ ವಾಡಿಕೆಯಲ್ಲಿ ಬಂದಿದೆ.
ಸಂಕ್ರಾಂತಿಯಂದು ಪ್ರಾರಂಭವಾಗುವ ಶಿಶಿರ ಋತುವು ಶಾರೀರಿಕ ಬಲವನ್ನು ನೀಡುವ ಋತುವಾಗಿರು ವುದರಿಂದ ಆ ಋತುವಿನಲ್ಲಿ ವ್ಯಾಯಾಮ, ಮೈಥುನ ಸುಖ, ಪ್ರೀತಿಯುಕ್ತ ಸಂಭಾಷಣೆ ಮುಂತಾದ ಉತ್ಸಾಹದಾಯಕ ವರ್ತನೆ, ಚಟುವಟಿಕೆ, ಸಂತೋಷದಾಯಕವಾದ ಕ್ರಿಯೆಗಳಲ್ಲಿ ಮನಸೋಚ್ಛೆ ತೊಡಗಲು ಆಯುರ್ವೇದದಲ್ಲಿ ಉಪದೇಶವಾಗಿದೆ. ಇದರ ಸಂಕೇತವಾಗಿಯೇ ಸಂಕ್ರಾಂತಿ ಯನ್ನು ಜನರು ಸಡಗರದಿಂದ ಉಲ್ಲಾಸದಾಯಕವಾಗಿ ಪ್ರೀತಿ ಹರ್ಷಗಳೊಡನೆ ಆಚರಿಸುವುದು ರೂಢಿಗೆ ಬಂದಿದೆ.

ಸರ್ವೇಸಾಮಾನ್ಯವಾಗಿರುವ ಥೈರಾಯ್ಡ್ ಸಮಸ್ಯೆ..

ಮುಟ್ಟು ಹೆಚ್ಚಾಗಿ ಹೋದರೂ ಸರಿ, ಕಡಿಮೆಯಾದರೂ ಸರಿ ಡಾಕ್ಟರು ಮೊದಲು ಥೈರಾಯ್ಡಾ ಪರೀಕ್ಷೆ ಮಾಡಿಸುತ್ತಾರಲ್ಲಾ, ಹೀಗೇಕೆ? ಮುಖ ಸುಂದರವಾಗಿದ್ದರೂ, ಕೆಲವರಲ್ಲಿ ಗಳಗಂಡ ಬೆಳೆದುಕೊಂಡು ಅವರಿಗೆ ಬೇಸರ ಮೂಡಿಸುತ್ತಲ್ಲಾ ಯಾಕೆ?

ನೋಡಿ, ನಮ್ಮ ಕತ್ತಿನ ಮುಂಭಾಗದಲ್ಲಿ ಚಿಟ್ಟೆಯಾಕಾರದ ಗ್ರಂಥಿ ಒಂದಿದೆ. ಅದು ಗುರಾಣಿಯನ್ನು ಹೋಲುವ ಕಾರಣ, ಅದಕ್ಕೆ ಗ್ರೀಕ್ ಭಾಷೆಯ ಎರವಲಾದ ‘ಥೈರಾಯ್ಡೆ’ ಹೆಸರನ್ನು ನೀಡಿದ್ದಾರೆ. ಕೇವಲ 15-20 ಗ್ರಾಂ ತೂಗುವ ಈ ಪುಟ್ಟ ಅಂಗಕ್ಕೆ ಧಾರಾಳವಾದ ರಕ್ತ ಸರಬರಾಜಾಗಿರುವುದು ಅದರ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ.
ಈ ಥೈರಾಯ್ಡಿನ ಮೂಲ ಘಟಕ (ಯೂನಿಟ್)ದ ಪರಿಧಿಯ ಒಳಹಾಸಿನಲ್ಲಿ ಒಂದೇ ಸ್ವರೂಪದ ಜೀವಕೋಶಗಳು ಸಾಲಾಗಿ ನಿಂತಿವೆ. ಅಲ್ಲಲ್ಲಿ ಕ್ಯಾಲ್ಸಿಟೋನಿನ್ ತಯಾರಿಸುವ ಸ್ವಲ್ಪ ಭಿನ್ನರೂಪದ ಜೀವಕೋಶಗಳೂ ಕಣ್ಣಿಗೆ ಬೀಳುತ್ತವೆ.

ಈ ಘಟಕದ ನಡುವೆ ಇರುವ ಸ್ಥಳದಲ್ಲಿ ಥೈರೊಗ್ಲಾಬ್ಯುಲಿನ್, ಥೈರೊಪ್ರೊಟೀನ್ ಇತ್ಯಾದಿಗಳ ಕಲಸು ದ್ರವ ತುಂಬಿಕೊಂಡಿದ್ದು, ಇಲ್ಲಿಂದಲೇ ಟಿ-4 ಮತ್ತು ಟಿ-3 ರಸದೂತಗಳು ಸಿದ್ಧವಾಗಿ ಸಂಚಿತವಾಗುತ್ತವೆ. ಈ ಪ್ರಕ್ರಿಯೆಗೆ ಪ್ರೇರಣೆ, ಪಿಟ್ಯುಟರಿ ಗ್ರಂಥಿಯಿಂದ ಒಸರುವ ಟಿ.ಎಸ್.ಎಚ್. ರಸದೂತದಿಂದ ಹಾಗೂ ಅದಕ್ಕೆ ಪ್ರಚೋದನೆ ಮಿದುಳಿನಲ್ಲಿನ ಹೈಪೊಥಾಲಮಸ್‌ನಿಂದ.

ಥೈರಾಯ್ಡೆ ಗ್ರಂಥಿಯ ಸ್ರವಿಕೆಯನ್ನು ಹೊರತರಲು ಯಾವ ನಾಳವೂ ಇಲ್ಲ! ಇದೊಂದು ನಿರ್ನಾಳ ಗ್ರಂಥಿ. ಇಲ್ಲಿನ ಸ್ರಾವ ನೇರವಾಗಿ ರಕ್ತ ಸೇರುತ್ತದೆ. ‘ಎತ್ತಣ ಮಾಮರ, ಎತ್ತಣ ಕೋಗಿಲೆ, ಎತ್ತಣಿಂದೆತ್ತಣ ಸಂಬಂಧವಯ್ಯಾ’ ಎನ್ನುವಂತೆ, ಥೈರಾಯ್ಡಾ ರಸದೂತಕ್ಕೆ ಮೂಲ ವಸ್ತು ಐಯೊಡಿನ್. ಈ ಮೂಲಧಾತು ನಮ್ಮ ಆಹಾರದಿಂದಲೇ ಬರಬೇಕಾಗಿದೆ. ಆಹಾರದಲ್ಲಿನ ಐಯೊಡೈಡ್ ಅಂಶ ಹೀರಿಕೆಯಾಗಿ, ರಕ್ತ ಸೇರಿ, ಥೈರಾಯ್ಡೆ ಗ್ರಂಥಿಯನ್ನು ತಲಪುತ್ತದೆ. ‘ಪೆರಾಕ್ಸಿಡೇಸ್’ ಕಿಣ್ವದ ಸಹಾಯದಿಂದ ಅದು ಥೈರಾಯ್ಡಿ ಗ್ರಂಥಿಯ ಜೀವಕೋಶಗಳಲ್ಲಿ ಆಮ್ಲಜನಕೀಕರಣ ಹೊಂದುತ್ತದೆ. ಮುಂದೆ ಸಂಕೀರ್ಣ ಬದಲಾವಣೆಗಳಾಗಿ, ನಂತರ, ಟಿ-4 ಹಾಗೂ ಟಿ-3 (ಥೈರಾಕ್ಸಿನ್, ಟ್ರೈ ಐಯೊಡೋ ಥೈರೊಸಿನ್) ರಸದೂತಗಳು ತಯಾರಾಗಿ, ರಕ್ತಕ್ಕೆ ಬಿಡುಗಡೆಯಾಗುತ್ತವೆ.

ಟಿ-4 ಮತ್ತು ಟಿ-3ಗಳ ಹೆಚ್ಚು ಭಾಗ ರಕ್ತಸಾರ (ಸೀರಮ್)ದ ಪ್ರೋಟೀನ್ ಅಂಶದೊಡನೆ ಬಂಧಿತವಾಗುತ್ತದೆ. ಉಳಿದ ಅನಿರ್ಬಂಧಿತ ಭಾಗ ಚಲನಶೀಲವಾಗಿದ್ದು, ದೇಹದ ನಾನಾ ಅಂಗಾಂಶಗಳಿಗೆ ಸಾಗುತ್ತದೆ. ಟಿ-4, ಟಿ-3ಗಳ ಪ್ರಮಾಣದಲ್ಲೇನಾದರೂ ಹೆಚ್ಚೂಕಡಿಮೆಯಾದರೆ, ಆ ಅಂಗಾಂಗಗಳ ಮಾಮೂಲು ಕೆಲಸಗಳು ಕುಂಠಿತವಾಗುವುದನ್ನು ಗಮನಿಸುತ್ತೇವೆ.

ಈ ಐಯೊಡಿನ್ ಅಂಶ ಸಮುದ್ರದ ಉತ್ಪನ್ನಗಳಲ್ಲಿ ಹೇರಳವಾಗಿ ಸಿಗುತ್ತದೆ. ಮೀನು, ಕಾಡ್ ಲಿವರ್ ಎಣ್ಣೆ ಇತ್ಯಾದಿಗಳು ಆಹಾರದಲ್ಲಿದ್ದಾಗ ಇದರ ಕೊರತೆ ಇರುವುದಿಲ್ಲ. ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಹಾಲು, ಮಾಂಸ, ತರಕಾರಿಗಳಲ್ಲೂ ಸಿಗುತ್ತದೆ. ಒಳನಾಡಿನ ಗುಡ್ಡಪ್ರದೇಶಗಳಲ್ಲಿ ವಾಸಿಸುವವರ ಆಹಾರದಲ್ಲಿ ಐಯೊಡಿನ್ ಅಂಶ ಬಹಳ ಕಡಿಮೆ ಇರುವ ಕಾರಣ ಅಲ್ಲಿನ ಅನೇಕರಲ್ಲಿ ಥೈರಾಯ್ಡಾ ರಸದೂತದ ಪ್ರಮಾಣವೂ ತಗ್ಗಿರುತ್ತದೆ.

ಅಂಥವರ ಕುತ್ತಿಗೆಯ ಮುಂಭಾಗದಲ್ಲಿ ಥೈರಾಯ್ಡಿ ಗ್ರಂಥಿ ಉಬ್ಬಿಕೊಂಡು ಅವರಿಗೆ ‘ಗಳಗಂಡ’ (ಗಾಯ್ಟರ್) ಇದೆ ಎನ್ನುತ್ತೇವೆ. ವಿಚಿತ್ರವೆಂದರೆ, ಕರಾವಳಿಯ ಕೆಲವು ಪ್ರದೇಶಗಳಲ್ಲಿಯೂ ಗಳಗಂಡ ಇರುವವರನ್ನು ಹೆಚ್ಚಾಗಿ ಕಾಣುತ್ತೇವೆ. ಬಹುಶಃ ಅವರ ಆಹಾರದಲ್ಲಿ ಮೀನು ಧಾರಾಳವಾಗಿದ್ದರೂ, ಐಯೊಡಿನ್ ಹೀರಿಕೆಯನ್ನು ತಡೆಯುವ ಬೇರೆ ಅಂಶಗಳೂ ಅಲ್ಲಿ ಇರಬಹುದೇನೋ. ಆದರೆ ಇತ್ತೀಚೆಗೆ ಅಡಿಗೆ ಉಪ್ಪಿನಲ್ಲಿ ಐಯೊಡಿನ್ ಸೇರಿಸುವಂತೆ ಕಾನೂನು ನಿರ್ಬಂಧಿಸಿರುವುದರಿಂದ ಎಲ್ಲೆಲ್ಲೂ ಗಳಗಂಡದ ಪಿಡುಗು ಕಡಿಮೆಯಾಗಿದೆ ಎನ್ನಬಹುದು.

ಥೈರಾಯ್ಡ ರಸದೂತದ ಏರುಪೇರುಗಳನ್ನು ಹದಿಹರೆಯದ ಹುಡುಗಿಯರಲ್ಲೂ ಗರ್ಭಿಣಿಯರಲ್ಲೂ ಹೆಚ್ಚಾಗಿ ಗಮನಿಸುತ್ತೇವೆ. ಹದಿಹರೆಯದ ಬಿಸುಪು ದಿನಗಳಲ್ಲಿ ಆ ರಸದೂತ ಕೆಲವೊಮ್ಮೆ ಇಳಿಮುಖವಾದಾಗ ಹುಡುಗಿಯರ ತೂಕ ಹೆಚ್ಚುವುದನ್ನು ಕಾಣುತ್ತೇವೆ. ಪಾಠಗಳಲ್ಲಿ ಪ್ರಗತಿ ಕುಗ್ಗಿ, ಅವರಲ್ಲಿ ಸೋಮಾರಿತನವೂ ಹೆಚ್ಚುವ ಸಾಧ್ಯತೆ ಇದೆ. ದೃಷ್ಟಿದೋಷಗಳೂ ಇರಬಹುದು. ಈ ಸಮಯದಲ್ಲಿ, ಶಾಲಾ ಮಕ್ಕಳ ತಪಾಸಣೆ ಬಹಳ ಮುಖ್ಯ. ಥೈರಾಕ್ಸಿನ್ ರಸದೂತವನ್ನು ತಕ್ಕ ಪ್ರಮಾಣದಲ್ಲಿ ನೀಡುವುದರ ಮೂಲಕ, ಸಮಸ್ಯೆ ಪರಿಹಾರವಾಗುತ್ತೆ.

ಥೈರಾಯ್ಡೆ ರಸದೂತದ ಮಟ್ಟ ಏರುವುದೂ ಉಂಟು, ಆಗ ಆ ಮಕ್ಕಳು ಸಣ್ಣಗಾಗುತ್ತಾರೆ, ಅವರಿಗೆ ನಿದ್ರೆ ದೂರವಾಗುತ್ತದೆ, ಚಡಪಡಿಕೆ ಹೆಚ್ಚುತ್ತದೆ, ಕಣ್ಣುಗಳು ಅಗಲವಾಗುವುದೂ ಉಂಟು, ಆಗ ಕಾರ್ಬಮಸೋಲ್, ರೇಡಿಯೊ ಆಕ್ಟಿವ್ ಐಯೊಡಿನ್, ಅಪರೂಪಕ್ಕೆ ಶಸ್ತ್ರಚಿಕಿತ್ಸೆ ಇತ್ಯಾದಿಗಳು ಬೇಕಾಗುತ್ತವೆ.

ಸ್ತ್ರೀಯರಿಗೆ ಮಕ್ಕಳಾಗದಿದ್ದಾಗ, ಪದೇ ಪದೇ ಗರ್ಭಪಾತವಾದಾಗ, ಹುಟ್ಟಿದ ಮಗುವಿನಲ್ಲಿ ಆಜನ್ಮ ವಿಕಲತೆ, ಬುದ್ಧಿಮಾಂದ್ಯತೆ ಇತ್ಯಾದಿ ದೋಷಗಳಿದ್ದಾಗ, ಥೈರಾಯ್ಡಾ ತಪಾಸಣೆ ತೀರಾ ಅಗತ್ಯವಾಗುತ್ತದೆ. ಋತುಸ್ರಾವ ತೀರಾ ಹೆಚ್ಚಾದರೂ, ಕಡಿಮೆಯಾದರೂ ಥೈರಾಯ್ಡಾ ಗ್ರಂಥಿಯೇ ಅನೇಕ ಸಮಯಗಳಲ್ಲಿ ಅಪರಾಧಿ ಸ್ಥಾನದಲ್ಲಿ ನಿಲ್ಲುತ್ತದೆ. ಈ ಎಲ್ಲಾ ಸಂದರ್ಭಗಳಲ್ಲಿಯೂ ತಜ್ಞರು ಟಿ-4, ಟಿ-3 ಪ್ರಮಾಣವನ್ನು ಮೊದಲು ತಿಳಿದುಕೊಳ್ಳುತ್ತಾರೆ. ಟಿ.ಎಸ್.ಎಚ್. (ಥೈರಾಯ್ಡಾ ಪ್ರೇರಕ ರಸದೂತ) ಮಟ್ಟವನ್ನೂ ಅಳೆಯಬೇಕಾಗುತ್ತದೆ.

ಗರ್ಭಿಣಿಯಲ್ಲಿ ಆಯಾಸ, ಮಲಬದ್ಧತೆ, ಚಳಿ ತಡೆದುಕೊಳ್ಳಲಾಗದ ಪರಿಸ್ಥಿತಿ, ಮೈಬಾವು, ಹೃದಯ ಬಡಿತದ ತೀವ್ರತೆ ಹೆಚ್ಚಾಗುವುದು, ಥೈರಾಯ್ಡಾ ಗ್ರಂಥಿಯ ಉಬ್ಬುವಿಕೆಗಳಿದ್ದರೂ ಥೈರಾಯ್ಡಾ ಪರೀಕ್ಷೆ ಅನಿವಾರ್ಯವಾಗುತ್ತದೆ.

ಗರ್ಭಸ್ಥ ಮಗುವಿಗೆ ಥೈರಾಯ್ಡೆ ರಸದೂತಗಳು ಸರಿಯಾದ ಪ್ರಮಾಣದಲ್ಲಿ ದಕ್ಕದಿದ್ದರೆ, ಸೊರಗುತ್ತದೆ. ಕೆಲವೊಮ್ಮೆ ಹೆರಿಗೆಯಲ್ಲಿ ಬೇಗ ಜೀವ ನೀಗುವುದೂ ಉಂಟು. ಹಾಗಾಗಿ, ಥೈರಾಯ್ಡೆ ಕೊರತೆಯನ್ನು ಪ್ರಾರಂಭದಲ್ಲಿಯೇ ಕಂಡುಹಿಡಿದು, ‘ಥೈರಾಕ್ಸಿನ್’ ಮಾತ್ರೆಗಳನ್ನು ಗರ್ಭಿಣಿಗೆ ಕೊಡಬೇಕಾಗುತ್ತದೆ.

ಥೈರಾಯ್ಡೆ ತನ್ನ ಪ್ರಭಾವವನ್ನು ದೇಹದ ಎಲ್ಲಾ ಪ್ರಕ್ರಿಯೆಗಳ ಮೇಲೂ ಆಕ್ಟೋಪಸ್‌ನಂತೆ ಚಾಚಿಕೊಂಡಿರುತ್ತದೆ. ಅದೊಂದು ಸ್ನೇಹಗ್ರಂಥಿ, ನಿಜ. ಹಾಗಿದ್ದರೂ, ಕೆಲವೊಮ್ಮೆ ಅದರ ಕಾರ್‍ಯನಿರ್ವಹಣೆ ಮುಗ್ಗರಿಸುತ್ತದೆ. ಆಗ ಆರಂಭದ ಹಂತದಲ್ಲಿಯೇ ತಜ್ಞರು ಅದನ್ನು ಪತ್ತೆ ಮಾಡಬಲ್ಲರು. ಅದಕ್ಕೆ ಸೂಕ್ತ ಚಿಕಿತ್ಸೆ ನೀಡಬಲ್ಲರು. ಆ ಪುಟ್ಟ ಗ್ರಂಥಿಯನ್ನು ಮತ್ತೆ ಹಳಿಗೆಳೆದು ನಿಲ್ಲಿಸಿ, ನಮಗೆ ಆರೋಗ್ಯವನ್ನು ನೀಡಬಲ್ಲರು. ಇದನ್ನು ನಾವು ಮರೆಯಬಾರದು!

ಮರೆಯಾಗುತ್ತಿರುವ ಕನ್ನಡ ಶಿಶು ಗೀತೆಗಳು....

ಮಗಳಿಗೆ ಎರಡುವರೆ ವರ್ಷವಾಗುತ್ತಿದ್ದಂತೆ ಮಡದಿಯ ಗೊಣಗಾಟದ ಅವಧಿ ದಿನದಿಂದ ದಿನಕ್ಕೆ ಹೆಚ್ಚುವ ನಿತ್ಯಬಳಕೆಯ ವಸ್ತುಗಳಂತೆ ಹೆಚ್ಚುತ್ತಿತ್ತು. ಕಡೆಗೊಂದು ದಿನ"ನೋಡಮ್ಮ ನಂಗೆ ಪ್ರೀ ಸ್ಕೂಲ್ ಗೋಸ್ಕರ ೫೦-೬೦ ಸಾವಿರ ಕಟ್ಟೋಕೆ ಇಷ್ಟವಿಲ್ಲ. ಇಲ್ಲೇ ಮನೆ ಹತ್ರ ಇರೋ ಸ್ಕೂಲ್ ಗೆ ಸೇರಿಸ್ತೀನಿ, ಆಗುತ್ತಾ?'' ಅಂದೆ."ಓ ಕೆ, ಆದ್ರೆ ೧ನೇ ಕ್ಲಾಸ್ ಗೆ ಸೆಂಟ್ರಲ್ ಸ್ಕೂಲೇ ಬೇಕು ಏಕೆಂದರೆ ನಮ್ಮ ಮಕ್ಕಳಿಗೆ ನಾವ್ ಕೊಡೋಕಾಗೋ ಆಸ್ತಿ ಅಂದ್ರೆ ಉತ್ತಮ ವಿದ್ಯಬ್ಯಾಸ ಅಷ್ಟೇ" ಅಂತ ತೀರ್ಪಿತ್ತಳು."ಅಲ್ವೇ ನೀನು ನಾನು ಇಬ್ರೂ ಗೌರ್ನಮೆಂಟ್ ಸ್ಕೂಲಲ್ಲೇ ಅಲ್ವಾ ಓದಿದ್ದು? ಏನಾಗಿದೆ ನಮಗೆ ಇವಾಗ? ಅದೂ ಅಲ್ದೆ ಅಷ್ಟು ದುಡ್ಡು ಮೇಲಿಂದ ಉದುರುತ್ತಾ?'' ವಾದ ಮುಂದಿಟ್ಟೆ.. ಮಡದಿಯ ಮೂಗಿನ ತುದಿಯ ಕೋಪ ನಾಲಿಗೆಗೆ ಬಂತು"ರ್ರೀ ಮೂಲೆಗ್ಹಾಕ್ರಿ ನಿಮ್ಮ ಕಂತೆ ಪುರಾಣನ, ಯಾವ್ಯಾವ್ದುಕ್ಕೋ ಸುಮ್ ಸುಮ್ಮನೆ ಸಾಲ ಮಾಡೋಕೆ ಆಗುತ್ತೆ, ನಂ ಮಗು ಭವಿಷ್ಯಕ್ಕೆ ಮಾಡಿ ಕಷ್ಟಪಟ್ಟು ಸಾಲತೀರ್ಸಿದ್ರೇ ತಪ್ಪೇನೂ ಇಲ್ಲ, ಸುಮ್ಮನೆ ಏನೇನೋ ಯೋಚಿಸಿ ಯಾರಾರ್ದೋ ಮಾತು ಕೇಳಿ ನನ್ ತಲೆ ತಿನ್ ಬೇಡಿ. ಹೇಳ್ದಷ್ಟ್ ಮಾಡ್ರೀ"ಬಹುಶಃ ಈ ರೀತಿಯ ಸಂಭಾಷಣೆಗಳು ಎಲ್ಲರ ಮನೆಯಲ್ಲೂ ಸರ್ವೇ ಸಾಮಾನ್ಯ. ಕೈಯಲ್ಲಿ ಕಾಸಿದ್ದವರು ಚಿಂತೆಯಿಲ್ಲದೆ ದೊಡ್ಡ ದೊಡ್ಡ ಶಾಲೆ ಸೇರಿಸುತ್ತಾರೆ, ಕಾಸಿಲ್ಲದ ನಮ್ಮಂತವರು ಅಷ್ಟು ದೊಡ್ಡ ಶಾಲೆ ಅಲ್ಲದಿದ್ದರೂ ಸುಮಾರಾಗಿರೊ ಆಂಗ್ಲಶಾಲೆಗೆ ಸೇರಿಸಿ ಮಕ್ಕಳ ಭವಿಷ್ಯದ ಬಗ್ಗೆ ದೊಡ್ಡ ದೊಡ್ಡ ಕನಸು ಕಾಣುತ್ತಾ ಇರುತ್ತೇವೆ. ನಾನು ಸಹ ಹಾಗೆಯೇ ಮನೆಯ ಹತ್ತಿರವಿದ್ದ ಶಾಲೆಗೆ ಮಗಳನ್ನು ದಾಖಲಿಸಿದೆ, ಅವಳ ಪುಸ್ತಕ ಫೀಜು ಅದು ಇದಿ ಅಂತ ಒಂದಷ್ಟು ತೆತ್ತು ಮನೆಗೆ ಬಂದೆ. ೨ ದಿನ ಕಳೆಯಿತು ಮೂರನೇ ದಿನಕ್ಕೆ "ತಿಂಕಳ್ ತಿಂಕಳ್ ಇಟ್ಸು ತಾರ್" (Twinkle twinkle little staar) ಅನ್ನುವುದನ್ನು ನನ್ನ ಮಗಳ ಬಾಯಿಂದ ಕೇಳಿ ನಮಗೆಲ್ಲಾ ಆನಂದವೋ ಆನಂದ..,ಸ್ವರ್ಗ ಒಂದೇ ಗೇಣು.....!!!!!!! ಖುಷಿಯಾಗಿ ಅವಳಿಗೆ ಕೊಟ್ಟಿದ್ದ ಪುಸ್ತಕಗಳನ್ನು ನೋಡಿದೆ... ಏನಾಶ್ಚರ್ಯ!!! ಕೊಟ್ಟಿದ್ದ ೯ ಪುಸ್ತಕಗಳಲ್ಲಿ ಕನ್ನಡವರ್ಣಮಾಲೆಯ ಒಂದೇ ಒಂದು ಪುಸ್ತಕ ಬಿಟ್ಟ್ರೆ ಮಿಕ್ಕೆಲ್ಲವೂ ಆಂಗ್ಲಭಾಶೆಯ ಪುಸ್ತಕಗಳು!! ಕಡೇ ಪಕ್ಷ ಮಕ್ಕಳ ಶಿಶು ಗೀತೆಗಳನ್ನು ತಿಳಿಸಿಕೊಡುವ ಪುಸ್ತಕವೂ ಸಹ ಇಂಗ್ಲೀಷಿನದ್ದೇ..!!ನಮಗೆ ಇಂದಿನ ಸ್ಪರ್ಧಾಜಗತ್ತಿಗೆ ಇಂಗ್ಲೀಷ್ ನ ಅವಶ್ಯಕಥೆ ಇದೆ ನಿಜ, ಆದರೆ ನಾವು ಎಷ್ಟೇ ದೊಡ್ಡವರಾದರೂ ಬದುಕಿರುವಾಗ ಮತ್ತು ನಂತರ ನಮ್ಮನ್ನು ಜಗತ್ತು ಗುರುತಿಸುವುದು ನಮ್ಮ ಹುಟ್ಟಿನ ನೆಲೆಯಿಂದಲೇ ಅಲ್ಲವೇ? ನಮ್ಮ ಮೂಲ ನೆಲೆಯಾದ ಕನ್ನಡವನ್ನು ಎತ್ತರಕ್ಕೆ ತಲುಪಿದಾಗ ಮರೆತುಹೋದರೆ ನಾವು ಕನ್ನಡಿಗರಾಗಿ ಹುಟ್ಟಿ ಸಾರ್ಥಕವೇನು ಅಲ್ಲವೇ?ಬಹುಶಃ ಎಷ್ಟೋ ತಂದೇತಾಯಂದಿರು ಈ ಬಗ್ಗೆ ಯೋಚಿಸುವುದಿಲ್ಲವೇನೋ? ಅಥವಾ ನಮ್ಮ ಶಿಕ್ಷಣ ವ್ಯವಸ್ಥೆ ಅದಕ್ಕೆ ಸ್ಪಂದಿಸುತ್ತಿಲ್ಲವೇನೋ? ಅಥವಾ ಆಧುನಿಕ ಜಗತ್ತಿನಲ್ಲಿ ಸ್ಪರ್ಧಿಸಲು ಕನ್ನಡಬೇಕಾಗಿಲ್ಲವೆಂಬ ಸಿನಿಕತನವೋ? ಕೇವಲ ಒಂದೇ ಒಂದು ಪೀಳಿಗೆಯಿಂದ ಪೀಳಿಗೆಗೆ ಎಂತಹ ವ್ಯತ್ಯಾಸ!!!. ಮಹಾನ್ ಕವಿಗಳಾದ ಶ್ರೀ ಜಿ.ಪಿ.ರಾಜರತ್ನಂ, ಕಯ್ಯಾರ ಕಿಯ್ಣಣ್ಣ ರೈ ಮತ್ತಿತರ ಮಹಾನ್ ಕವಿಗಳು ಮಕ್ಕಳಿಗೆಂದೇ ಬರೆದು ಪ್ರಸಿದ್ದಿ ಪಡೆದಿದ್ದ ಜನಪ್ರಿಯ ಶಿಶು ಗೀತೆಗಳನ್ನು ಕಲಿಯುವ ಅವಕಾಶದಿಂದ ನಮ್ಮಮಕ್ಕಳು ವಂಚಿತರಾಗುತ್ತಿದ್ದಾರೆ ಎನಿಸಿತು. ಬಹುಶಃ ಎಷ್ಟೋ ತಂದೇತಾಯಂದಿರು ಈ ಬಗ್ಗೆ ಯೋಚಿಸುವುದಿಲ್ಲವೇನೋ? ಅಥವಾ ನಮ್ಮ ಶಿಕ್ಷಣ ವ್ಯವಸ್ಥೆ ಅದಕ್ಕೆ ಸ್ಪಂದಿಸುತ್ತಿಲ್ಲವೇನೋ? ಅಥವಾ ಆಧುನಿಕ ಜಗತ್ತಿನಲ್ಲಿ ಸ್ಪರ್ಧಿಸಲು ಕನ್ನಡಬೇಕಾಗಿಲ್ಲವೆಂಬ ಸಿನಿಕತನವೋ? ಅಥವಾ ಈ ಎಲ್ಲಾ ಕಾರಣಗಳು ಇರಬಹುದು. ನಂತರ ನನ್ನ ಮಗಳನ್ನು ಕರೆದುಶ್ರೀ ಜಿ.ಪಿ.ರಾಜರತ್ನಂ ರವರ 'ನಾಯಿಮರಿ ನಾಯಿಮರಿ ತಿಂಡಿ ಬೇಕೇ?' ಹಾಡು ಹೇಳಿಕೊಟ್ಟೆ "ತಿಂಕಳ್ ತಿಂಕಳ್ " ಗಿಂತ ಚೆನ್ನಾಗಿ ಹೇಳತೊಡಗಿದಳು. ಅವಳ ಜೊತೆ ನಾನು ಮಗುವಾದೆ. ಮುಂದಿನ ಭಾನುವಾರ ಯಾವುದೋ ಪುಸ್ತಕದ ಹುಡುಕಾಟಕ್ಕಾಗಿ 'ಸ್ವಪ್ನ' ಪುಸ್ತಕಮಳಿಗೆಗೆ ಹೋದಾಗ ಆಕಸ್ಮಿಕವಾಗಿ ಮಕ್ಕಳಹಾಡುಗಳ "ಚಿಣ್ಣರ ಚಿಲಿಪಿಲಿ" ಮತ್ತು "ಚಿಣ್ಣರ ಮುತ್ತಿನ ಹಾಡುಗಳು" ಎಂಬ ೨ ಸಿ.ಡಿ ಗಳನ್ನು (ತಯಾರಕರು Buzzers) ತಂದು ಮಗಳಿಗೆ ತೋರಿಸಿದಾಗ ಬಹಳ ಖುಶಿಪಟ್ಟಳು. ನಾನು ನನ್ನ ಬಾಲ್ಯದಲ್ಲಿ ಕಲಿತ ಎಷ್ಟೋ ಹಾಡುಗಳನ್ನು ಅವಳಿಗೂ ಕಲಿಸಿದ ಸಂತ್ರುಪ್ತಿ ನನಗೂ ಉಂಟಾಯ್ತು. ಇತ್ತೀಚೆಗೆ ಅವಳ ಶಾಲೆಯಲ್ಲಿ ನಡೆದ ಶಿಶುಗೀತೆಯ ಸ್ಪರ್ಧೆಯಲ್ಲಿ (ಅವರ ಶಾಲೆಯ ಪ್ರಕಾರ Rhymes Compitetion) ಅದೇ 'ನಾಯಿಮರಿ ನಾಯಿಮರಿ' ಗೀತೆಹಾಡಿ ಎಲ್ಲರ ಮೆಚ್ಚುಗೆ ಮತ್ತು ಪ್ರಶಂಸೆಗಳಿಸಿದಳು ಅಷ್ಟೇ ಅಲ್ಲ ಅವಳ ಟೀಚರ್ ನನ್ನಿಂದ ಆ ಸಿ.ಡಿಗಳನ್ನು ಎರವಲು ಪಡೆದು ಶಾಲೆಯಲ್ಲೂ ಸಹ English Rhymes ನ ಜೊತೆ ಬಣ್ಣದ ತಗಡಿನ ತುತ್ತೂರಿಯನ್ನೂ ಸಹ ಕಲಿಸುತ್ತಿದ್ದಾರೆ. ಅದರ ಸಾಹಿತ್ಯದ ಸಾಲುಗಳನ್ನು ಒಮ್ಮೆ ನೋಡಿ....ಬಣ್ಣದ ತಗಡಿನ ತುತ್ತೂರಿ
ಕಾಸಿಗೆ ಕೊಂಡನು ಕಸ್ತೂರಿ
ಸರಿಗಮಪದನಿಸ ಊದಿದನು
ಸನಿದಪಮಗರಿಸ ಊದಿದನು
ತನಗೆ ತುತ್ತೂರಿ ಇದೆಯೆಂದು ಬೇರಾರಿಗು ಅದು ಇಲ್ಲೆಂದ
ತುತ್ತುರಿ ಊದಿದ ಕೊಳದ ಬಳಿ ಕಸ್ತೂರಿ ನಡೆದನು ಬೀದಿಯಲಿ
ಜಂಬದ ಕೋಳಿಯ ರೀತಿಯಲಿ
ಜಾರಿತು ನೀರಿಗೆ ತುತ್ತೂರಿ ಗಂಟಲು ಕಟ್ಟಿತು ನೀರೂರಿ
ಸರಿಗಮ ಊದಲು ನೋಡಿದನು ಗಗಗಗ ಸದ್ದನು ಮಾಡಿದನು
ಬಣ್ಣವು ನೀರಿನ ಪಾಲಾಯ್ತು ಜಂಬದಕೋಳಿಗೆ ಗೋಳಾಯ್ತು
ಖಂಡಿತ ನೀವು ಸಹ ನಿಮ್ಮ ಬಾಲ್ಯಕ್ಕೆ ಹೊರಟುಹೋದ್ರಿ ಅನ್ಸುತ್ತೆ.. ನಿಮ್ಮ ಮಕ್ಕಳಿಗೂ ಕಲಿಸುತ್ತಿರುತ್ತೀರ ಅಂತ ಗೊತ್ತು ಅಕಸ್ಮಾತ್ ಮರೆತಿದ್ದರೆ ಕಲಿಸಿನೋಡಿ ಎಷ್ಟು ಆನಂದ ಸಿಗುತ್ತೆ ಅಂತ...
ಅರ್ಥವತ್ತಾದ ಶಿಶುಗೀತೆಗಳು, ಇಂಪಾದ ಹಾಡು ಮತ್ತು ಕನ್ನಡ ಸೊಗಡಿನ ಕಾರ್ಟೂನ್ ಗಳು ಈ ಕೊಂಡಿಯ ಮೂಲಕ ನಿಮ್ಮದಾಗಲಿ. ಮಕ್ಕಳಿಗೆ ತೋರಿಸಿ ನಲಿಸಿರಿ. ಮಕ್ಕಳು ಆನಂದತುಂದಿಲರಾಗುತ್ತಾರೆ. ದೊಡ್ಡವರಲ್ಲಿನ ಮಗು ಮನಸ್ಸು ಕೂಡ ಸಂತಸಪಡುತ್ತದೆhttp://www.youtube.com/profile_videos?user=chakrira&p=r

ನ್ಯಾಯಾಂಗ ಮತ್ತು ನ್ಯಾಯ.....??!!

ಪ್ರಚಲಿತ ವಿದ್ಯಮಾನ

ನ್ಯಾಯಾಂಗದಿಂದಷ್ಟೇ ಅಲ್ಲ ಬೇರ್ಯಾವುದೇ ರೀತಿಯಿಂದಲೂ ಸಾಮಾನ್ಯರಿಗೆ 'ನ್ಯಾಯ' ಎನ್ನುವುದು ಮರುಭೂಮಿಯ ಮರೀಚಿಕೆಯಾಗಿದೆ..ಅದಕ್ಕೆ ಇತ್ತೀಚಿನ ಉದಾಹರಣೆಗಳನ್ನು ನೋಡಿ.. ಪ್ರಜಾಸತ್ತೆಯ ದ್ಯೋತಕವಾದ ರಾಜ ಭವನ ವನ್ನೇ ತಮ್ಮ ಕಾಮತೃಷೆಯನ್ನು ತೀರಿಸಿ ಕೊಳ್ಳಲು ಬಳಸಿದ ಆರೋಪದ ಮೇಲೆ ಅತ್ಯಂತ ಅವಮಾನಕರವಾದ ರೀತಿಯಲ್ಲಿ ಪದತ್ಯಾಗ ಮಾಡಿದ ರಾಜ್ಯಪಾಲರು. ಕ್ರೀಡಾಪಟುವಾಗುವ ಕನಸು ಹೊತ್ತು ರಾಜ್ಯ ಟೆನ್ನಿಸ್ ಸಂಸ್ಥೆಯ ಅಧ್ಯಕ್ಷನೂ ಆಗಿದ್ದ ಉಪಪೊಲೀಸ್ ಮಹಾ ನಿರ್ದೇಶಕನ ಕಚೇರಿಗೆ ಹೋಗಿದ್ದ 14 ವರ್ಷದ ಬಾಲೆಯ ಮೇಲೆ ತನ್ನ ಕಚೇರಿಯಲ್ಲೇ ಅತ್ಯಾಚಾರ ವೆಸಗಿದ ರಾಕ್ಷಸ ಸ್ವರೂಪಿ ಆರಕ್ಷಕ 19 ವರ್ಷಗಳ ನಂತರವೂ ರಾಜಾರೋಷವಾಗಿ ಓಡಾಡಿಕೊಂಡಿರುವುದು. ತನ್ನ ಇಲಾಖೆಯ ಪೇದೆರ್ಯೋವನ ಪತ್ನಿಯನ್ನು ಮನೆಗೆ ಕರೆದುಕೊಂಡು ಹೋಗಿ ಆಕೆಯ ಮಾನಹರಣ ಮಾಡಿ, ರಾಜಕೀಯ ಹಾಗೂ ಅಧಿಕಾರಿ ವಲಯದಲ್ಲಿ ತನ್ನ ಪ್ರಭಾವ ವನ್ನು ಬಳಸಿ 13 ವರ್ಷಗಳು ಕಳೆದು ಹೋದ ನಂತರವೂ ಕಣ್ಣು ತಪ್ಪಿಸಿ ತಿರುಗುತ್ತಿರುವ ಮರ್ತ್ತೋವ ಉಪಪೊಲೀಸ್ ಮಹಾ ನಿರ್ದೇಶಕ ಮಹಾಶಯ. ಲೈಂಗಿಕ ಅಪರಾವರ್ತನೆಯ ಆರೋಪಕ್ಕೆ ಒಳಗಾಗಿ ಪ್ರಜಾ ಪ್ರತಿನಿಧಿ ಎಂಬ ಪರಿಕಲ್ಪನೆ ಹಾಗೂ ಆಚರಣೆಗಳೆರಡಕ್ಕೂ ವಿರುದ್ಧವೆನಿಸಿದ ರೀತಿಯಲ್ಲಿ ವರ್ತಿಸಿದ ವ್ಯಕ್ತಿಗೆ ಮಂತ್ರಿ ಪದವಿ ದಯಪಾಲಿಸಿದ ಆಡಳಿತಾರೂಢ ವ್ಯವಸ್ಥೆ. ಮೇಲಿನ ಎಲ್ಲಾ ಉದಾಹರಣೆಗಳನ್ನು ನೋಡಿದ ನಂತರ "ಭ್ರಷ್ಟಾಚಾರದಿಂದ ನ್ಯಾಯಾಂಗವೋ, ನ್ಯಾಯಾಂಗದಿಂದ ಭ್ರಷ್ಟಾಚಾರವೋ?" ಎನ್ನುವ ಪ್ರಶ್ನೆಗೆ 'ಕೋಳಿ ಮೊದಲೋ ಮೊಟ್ಟೆ ಮೊದಲೋ?' ಎನ್ನುವುದಕ್ಕೆ ಉತ್ತರ ಉಡುಕುವುದು ಎಷ್ಟು ಕಷ್ಟವೋ ಅಷ್ಟೇ ಕಷ್ಟ. ಈ ಮಾತನ್ನು ಹೇಳಲು ಕಾರಣ ಮೇಲಿನ ಎಲ್ಲ ಘಟನೆಗಳಲ್ಲಿ ಅನ್ಯಾಯವೆಸಗಿರುವವರು "ನ್ಯಾಯ ಕೊಡಿಸುವವರು ಅಥವಾ ನ್ಯಾಯ ಕಾಪಾಡುವವರು ಅಥವಾ ನ್ಯಾಯವನ್ನು ರೂಪಿಸುವವರೇ ಆಗಿದ್ದಾರೆ. ಮೇಲೆ ತಿಳಿಸಿದ ಉದಾಹರಣೆಗಳು ಸಮಾಜದ ಮೇಲ್ವರ್ಗದ ಜನರಿಗಾದ ಅನ್ಯಾಯಗಳು. ಇನ್ನು ನಮ್ಮನಿಮ್ಮಂತಹ ಸಾಮಾನ್ಯರಿಗೆ 'ನ್ಯಾಯ' ಕನ್ನಡಿಯೊಳಗಿನ ಗಂಟಲ್ಲದೆ ಮತ್ತೇನು ಅಲ್ಲ ಅಲ್ಲವೇ? ಪರಿಸ್ಥಿತಿ ಹೀಗೆಯೇ ಮುಂದು ವರೆದರೆ ಗತಿಸಿ ಹೋಗಿರುವ ಕಾಲ ಘಟ್ಟವೆಂಬ ಕಪಾಟಿನಲ್ಲಿ ಹುದುಗಿ ಹೋಗಿರುವ ಇನ್ನೆಷ್ಟು ಪ್ರಕರಣಗಳು ಹೊರಬರುತ್ತವೆಯೋ ತಿಳಿಯದು. ಇದಕ್ಕೆ ಮುಖ್ಯ ಕಾರಣಗಳು ಅಧಿಕಾರದ ದುರುಪಯೋಗ ಹಾಗೂ ಅದನ್ನು ಎದುರಿಸುವಲ್ಲಿ ಸಂಪೂರ್ಣ ವಾಗಿ ಸೋತಿರುವ ಪ್ರಜೆಗಳು ಎನ್ನುವುದು ಸೂರ್ಯನಷ್ಟೇ ಸತ್ಯ. ಇದರಬಗ್ಗೆ ಸಾಮಾಜಿಕ ಚಿಂತನೆ ಮತ್ತು ಪರಿಹಾರ ಎರಡೂ ಶೀಘ್ರ ಅತ್ಯಗತ್ಯ..

ಮತ್ತೆ ಬಾ!!

ಗಾನಗಾರುಡಿಗ ಸಿ. ಅಶ್ವಥ್ ಗೆ ಅಶ್ರುತರ್ಪಣ

ಕಂಚಿನ ಕಂಠದ ಓ ಗಾರುಡಿಗ
ಇಹ ಲೋಕಕೆ ಏಕೆ ಹಾಡಿದೆ ಚರಮಗೀತೆ?
ಭಾವತುಂಬಿದ ಎನ್ನ ಮನ ಅಗಲ ಕರ್ಣಗಳ ತೆರೆದು
ಕಾಯುತ್ತಿದೆ ಬಕಪಕ್ಷಿಯಂತೆ ನಿನ ನಾದನಿನಾದಕ್ಕೆ
ಮತ್ತೆ ಬಾ!! ತಪ್ಪದೆ ಬಾ!!

ಸೋಮವಾರ, ಜನವರಿ 4, 2010

ಕರ್ನಾಟಕದಲ್ಲಿ ಪ್ರಳಯ ಆಗಿಹೋಗಿದೆ!!!!!!!!!!!!!

ಹೌದು ನಮ್ಮ ಕರ್ನಾಟಕದಲ್ಲಿ ನಿಜಕ್ಕೂ ಪ್ರಳಯ ಆಗಿಹೋಗಿದೆ!!
ನಿನ್ನೆ ಸಿ.ಅಶ್ವಥ್, ಇಂದು ಡಾII ವಿಷ್ಣುವರ್ಧನ್!!!!!!!
ಬೆಳ್ಳಂಬೆಳಗ್ಗೆ ಮತ್ತೊಂದು ಶಾಕ್! ಅದೇ 'ಸಿಂಹ' ತನ್ನ 'ಘರ್ಜನೆ' ನಿಲ್ಲಿಸಿದೆ..
'ವಂಶವೃಕ್ಷ' ದಿಂದ ಚಿತ್ರ ಅಭಿಯಾನ ಪ್ರಾರಂಭಿಸಿ, 'ನಾಗರಹಾವಿನ' ಬಿಸಿರಕ್ತದ ಯುವಕ, 'ಗಂಧದಗುಡಿ'ಯ ಚಲಬಿಡದ ಸಾಹಸಿ 'ಕರ್ಣ' ದ 'ಕರುಣಾಮಯಿ', 'ಗಂಡುಗಲಿ ರಾಮ' ನಾಗಿ 'ಸಾಹಸಸಿಂಹ' ನಾದ ಈ "ಯಜಮಾನ' ಇಂದು ತನ್ನ ಇಹಲೋಕದ ಪಯಣ ಮುಗಿಸಿದ್ದಾರೆ...

ವಿಷ್ಣು ಸರ್ ನಿಮ್ಮ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ.......

ನಿಮ್ಮ ಆತ್ಮವೆಂಬ 'ಬಂಗಾರದ ಕಳಶ' ಚಿರವಾಗಿ ಕನ್ನಡಿಗರಾದ ನಮ್ಮೆಲರ ಮನದಲ್ಲಿ ಹೊಳೆಯುತ್ತಿರುತ್ತದೆ
ಮೇರು ನಟನ ಸಾವು ಕನ್ನಡ ಕಲಾ ಜಗತ್ತಿಗೆ ತುಂಬಲಾರದ ನಷ್ಟ!. ನಂಬಲು ಸಾಧ್ಯವಾಗದ ಸುದ್ದಿ ಮನಸಿಗೆ ಆಘಾತ ತಂದಿದೆ. ವಿಷ್ಣು ಕುಟುಂಬಕ್ಕೆ ದು:ಖ ಸಹಿಸಿಕೊಳ್ಳುವ ಶಕ್ತಿ ಪರಮಾತ್ಮನು ನೀಡಲಿ. ಅದ್ಬುತ ಕಲಾವಿದನ ಆತ್ಮಕ್ಕೆ ದೇವರು ಶಾಂತಿ ನೀಡಲಿ.....

ಕೇವಲ ಹಿಂದಿ ಗಾಯಕರಿದ್ದರಷ್ಟೇ ಜನ ಸೇರುತ್ತಾರೆ!! ಎಂದು ಕೊಂಡಿದ್ದ ನಮಗೆ "ಕನ್ನಡವೇ ಸತ್ಯ" ಎಂಬ ಡಿಂಡಿಮ ಭಾರಿಸಿ ಕನ್ನಡಿಗರ ಕನ್ನಡತನವನ್ನು ಬಡಿದೆಬ್ಬಿಸಿದ 'ಗಾನ ಗಾರುಡಿಗ' "ನಮ್ಮ ನಡುವೆ ಇಲ್ಲಾ!!" ಎನ್ನುವುದನ್ನೂ ಕಲ್ಪಿಸಿಕೊಳ್ಳಲೂ ಸಹ ಆಗುತ್ತಿಲ್ಲ
ಅವರ ಹಾಡುಗಳನ್ನು ಕೇಳುತ್ತಾ ಅವರಿಗೆ ಶ್ರದಾಂಜಲಿ ಸಲ್ಲಿಸೋಣ..

ಕೇಳ್ರಪ್ಪೋ........ ಕೇಳಿ.......ನಮ್ ರಾಜೇಂದ್ರ ಸಿಂಗ್ ಬಾ(0)ಬು ಹೇಳ್ತಾವ್ರೆ.....

1) ಕನ್ನಡ ಚಿತ್ರ ನಿರ್ದೇಶಿಶಲು ಹೊಸಬರಿಗೆ ಅವಕಾಶವಿಲ್ಲ.........

2) ಇನ್ನು ಮುಂದೆ ಕನ್ನಡ ಚಿತ್ರ ನಿರ್ದೇಶಿಸುವವರು 8 ಚಿತ್ರಕ್ಕೆ ಸಹನಿರ್ದೇಶಕರಾಗಿರ್ಬೇಕು..........

3)ಕ್ಯಾಮರಾಮೆನ್ ಡಿಪ್ಲೋಮೋ ಮುಗಿಸಿದ ಕೂಡಲೆ ಕ್ಯಾಮರಾ ಹಿಡಿದು ಚಿತ್ರ ತೆಗೆಯುವಂತಿಲ್ಲ..........

4)ಕಲಾವಿದರ ಸಂಭಾವನೆ ನಾವು ಕೊಟ್ಟಷ್ಟು...........

5) ಒಂದು ಚಿತ್ರವನ್ನು ಕೇವಲ 45 ದಿನಗಳಲ್ಲಿ ಮುಗಿಸಲೇಬೇಕು...........

ಇತ್ಯಾದಿ........ಇತ್ಯಾದಿ........ಇತ್ಯಾದಿ........ಇತ್ಯಾದಿ........ಇತ್ಯಾದಿ........


ಅಂತ ನಮ್ಮ ಅಂದ ಕಾಲತ್ತಿಲ್ ಸೂಪರ ಹಿಟ್ ಚಿತ್ರಗಳ ನಿರ್ದೇಶಕ, ಮಕ್ಕಳ ಚಿತ್ರ ಇದ್ದರೆ 'ನಾಗರಹೊಳೆ' ಇದ್ದಂತೆ ಇರಬೇಕು ಎಂದು ತೋರಿಸಿಕೊಟ್ಟಂತಹ ನಿರ್ದೇಶಕ, ಒಂದು ರಾಜಕೀಯ ಚಿತ್ರ ಹೇಗಿದ್ದರೆ ಚೆನ್ನ 'ಅಂತ' ತೋರಿಸಿಕೊಟ್ಟಂತಹ ನಿರ್ದೇಶಕ, ಕನ್ನಡದಲ್ಲಿ ಮಿಲಿಟರಿ ಕಥೆಯುಳ್ಳ ಸಿನಿಮಾವನ್ನು 'ಮುತ್ತಿನ ಹಾರ' ದಹಾಗೆ ಪೋಣಿಸಬಹುದೆಂದು ತೋರಿಸಿಕೊಟ್ಟಂತಹ ನಿರ್ದೇಶಕ, ಒಂದು ಹಾಸ್ಯ ಚಿತ್ರ ಜನರಿಗೆ ಹೇಗೆ ರಿಲೀಫ್ ಕೊಡಬಲ್ಲದು ಎನ್ನುವುದಕ್ಕೆ 'ಕುರಿಗಳು ಸಾರ್ ಕುರಿಗಳು ' ತೋರಿಸಿಕೊಟ್ಟಂತಹ ನಿರ್ದೇಶಕ, ಒಂದೂವರೆ ವರ್ಷ ಸಮಯ ತೆಗೆದುಕೊಂಡು ಒಂದು ಕೆಟ್ಟ ಸಿನಿಮಾವನ್ನು ಹೇಗೆ ಮಾಡಬಾರದೆಂದು 'ಲವ್ 2004' ತೆಗೆದುತೋರಿಸಿಕೊಟ್ಟಂತಹ ನಿರ್ದೇಶಕ "ರಾಜೇಂದ್ರಸಿಂಗ್ ಬಾಬು" ರವರು ಮೇಲಿನ ರೀತಿಯ 'ಫುಂಖಾನುಫುಂಖ' ಮಾತುಗಳನ್ನು ಮೊನ್ನೆಯ ಪತ್ರಿಕಾಗೋಷ್ಠಿಯಲ್ಲಿ ಉದುರಿಸುತ್ತವುದನ್ನು ನೋಡಿದಾಗ ಇವರೇನಾ ಆ "ಪ್ರಭುದ್ದ ನಿರ್ದೇಶಕ?" ಎಂದು ಯಾರಿಗಾದರೂ ಅನ್ನಿಸುತ್ತಿದ್ದುದ್ದು ಸಹಜವೇ.
ಇದಕ್ಕೆಲ್ಲಾ ಅವರು ಕೊಡುವ ಕಾರಣ "ಕನ್ನಡ ಚಿತ್ರರಂಗದ ಸದ್ಯದ ದುಸ್ಥಿತಿಯಿಂದ ಪಾರುಮಾಡಲು ಈ ಶರತ್ತುಗಳು ಅತ್ಯವಶ್ಯಕ"
ಹೌದು! ಇಂದು ಕನ್ನಡ ಚಿತ್ರರಂಗ ಹಲವಾರು ಸಮಸ್ಯೆಗಳ ಸಾಗರದಲ್ಲಿ ಮುಳುಗಿದೆ, ಈ ವರ್ಷ ಇಲ್ಲಿಯವರೆಗೂ ಬಿಡುಗಡೆಯಾಗಿರುವ 110 ಚಿತ್ರಗಳಲ್ಲಿ ಸೂಪರ್ ಹಿಟ್ ಬದಿಗಿರಲಿ ಕಾಸು ಹಾಕಿದ ನಿರ್ಮಾಪಕರಿಗೆ ಹಾಕಿದ ಕಾಸು ಗಿಟ್ಟಿದ್ದು ಕೇವಲ 6 ಚಿತ್ರಗಳಲ್ಲಿ ಮಾತ್ರ ಎನ್ನುವ ಸತ್ಯ ಯಾರಿಗೂ ನೋವುಂಟುಮಾಡುತ್ತದೆ. ಹಾಗೆಂದು ನಿಮ್ಮ ಇಷ್ಟಕ್ಕೆ ಬಂದಂತೆ ನಿಯಮಗಳನ್ನು ಮಾಡಿ ಯಾವಪುರುಷಾರ್ಥವನ್ನು ಸಾಧಿಸಲು ಹೊರಟಿದ್ದೀರಾ? ಬಾಬುರವರೆ..
1) ಕನ್ನಡ ಚಿತ್ರ ನಿರ್ದೇಶಿಶಲು ಹೊಸಬರಿಗೆ ಅವಕಾಶವಿಲ್ಲ.........
ಎನ್ನುವ ನೀವು ಸಹ ನಿಮ್ಮ ಮೊದಲ ಚಿತ್ರ ನಿರ್ದೇಶಿಸುವಾಗ ನೀವು ಹಳಬರಾಗಿರಲಿಲ್ಲ ಅಲ್ಲವೆ? ನಿಮ್ಮ ಚಿತ್ರತೆಗೆಯುವ ತಂತ್ರಗಾರಿಕೆ ಮರೆತುಹೋಗಿ ನಿಮಗೆ ಅವಕಾಶವಿಲ್ಲವೆಂಬ ಹತಾಶೆ ನಿಮ್ಮನ್ನು ಹೀಗೆ ಮಾತಾಡಿಸುತ್ತಿದೆಯೋ.........? ನೀವೆ ಹೇಳಬೇಕು..

2) ಇನ್ನು ಮುಂದೆ ಕನ್ನಡ ಚಿತ್ರ ನಿರ್ದೇಶಿಸುವವರು 8 ಚಿತ್ರಕ್ಕೆ ಸಹನಿರ್ದೇಶಕರಾಗಿರ್ಬೇಕು..........
ನೀವು ನಿಮ್ಮ ಮೊದಲ ಚಿತ್ರ ನಿರ್ದೇಶಿಸುವ ಮೊದಲು ಯಾವ ಚಿತ್ರದ ಟೈಟಲ್ ಕಾರ್ಡ್ ನಲ್ಲೂ ನೀವು ಸಹ ನಿರ್ದೇಶಕರಾಗಿದ್ದೀರೆಂದು ನೋಡಿದ ನೆನಪಿಲ್ಲ, ಹಾಗೇನಾದರು ಇದ್ದರೆ 1 ಅಥವಾ 2 ಚಿತ್ರಗಳಲ್ಲಿ ಇರಬಹುದು. ಹೀಗಿರುವ ನೀವೇ ಈರೀತಿ ಹೇಳುವುದು ನ್ಯಾಯವೇ?

5) ಒಂದು ಚಿತ್ರವನ್ನು ಕೇವಲ 45 ದಿನಗಳಲ್ಲಿ ಮುಗಿಸಲೇಬೇಕು..........
ಎನ್ನುವ ನೀವು ನಿಮ್ಮ ಮಗನ ಭವಿಶ್ಯ ರೂಪಿಸಲು 'ಲವ್ 2004' ಚಿತ್ರವನ್ನು ಒಂದೂವರೆ ವರ್ಷ ಸಮಯ ತೆಗೆದುಕೊಂಡು ಚಿತ್ರೀಕರಿಸಿದ್ದು ಯಾಕೆ?...
ಈ ರೀತಿ ಹುಚ್ಚು ನಿಯಮಗಳನ್ನು ರೂಪಿಸಿ ನಿಮ್ಮತೂಕವನ್ನು ಕಡಿಮೆ ಮಾಡಿಕೊಳ್ಳುವ ಬದಲು, ಹೊಸಬರಿಗೆ ನಿಮ್ಮ ನಿರ್ದೇಶನ ಸಾಮರ್ಥ್ಯವನ್ನು ಧಾರೆಯೆರೆದು ಮಾರ್ಗದರ್ಶನ ನೀಡಿ ಅವರು ತಪ್ಪುಗಳನ್ನು ಸರಿಪಡಿಸಲೆತ್ನಿದ್ದರೆ ನಿಮ್ಮ ಹಿರಿತನಕ್ಕೆ, ನಿಮ್ಮ ಅನುಭವಕ್ಕೆ ನಿಮ್ಮ ಮು(ತ್ಸ)ದಿತನಕ್ಕೆ ನಿಜವಾದ ಬೆಲೆಬಂದು ಕನ್ನಡ ಚಿತ್ರರಂಗಕ್ಕೆ ಅನುಕೂಲವಾಗಿ ಉದ್ದಾರವಾಗುತ್ತಿತ್ತಲ್ಲವೆ?..................
"ಯೋಚಿಸಿ ನೋಡಿ .........."