ಭಾನುವಾರ, ಜೂನ್ 22, 2014

ನಿನ್ನ ಮಂದಹಾಸ

ಮರುಗಿ ನರಳಿದ ಮನದೊಳಗೆ
ಮಿಡಿವ ನಿನ್ನ ನೆನಪಿನ ಮಧುರ ವೀಣೆ
ಸುಮ ಸಂಜೆಯ ಇನಿದನಿಯ ಮಿಡಿತ ರಾಗಕೆ
ಎದೆ ಬಡಿತದ ತಾಳಮೇಳಗಳ  ಮದ್ದಳೆ

ರಾಗ ನಿರಾಗಗಳ ಪರಿವೆಯಿಲ್ಲದೆ
ಎಲ್ಲ ದಿಕ್ಕುಗಳಲ್ಲಿ ದಾಂಗುಡಿ
ಬಗೆದಷ್ಟೂ ಆಳ, ಮೊಗೆದಷ್ಟೂ ದಾಹ,
ಅರಿತಷ್ಟೂ ನಿಗೂಘಡವಾಗಿಹ
ಬದುಕಲ್ಲಿ ಪತ್ತೆದಾರಿಕೆಯ ಹಂಗೇಕೆ

ಸತ್ತ ಸತ್ಯಗಳು ಪ್ರೇಮ ಪ್ರಲಾಪದ
ಮಧುರ ಆಲಾಪಾನೆಗಳು
ಬದುಕುಳಿದ ಸುಳ್ಳುಗಳು ಸತ್ಯದ
ಸಮಾಧಿಯೊಳಗಿನ ಕದಲಿಕೆಗಳು

ಜಗಕೆ ನಿತ್ಯ ಮಿಥ್ಯದಿ ಮುಖ ಮಜ್ಜನ
ಸತ್ಯಕೆ ಜಗವ ಬಡಿದೆಬ್ಬಿಸಿ ಅಭ್ಯಂಜಿಸುವ ತವಕ
ಸ್ವಾರ್ಥ ಜಂಗುಳಿಯೊಳಗೆ ನೀ ನಿಸ್ವಾರ್ಥದ ಪ್ರತೀಕ
ಆದರೂ ನಿನ್ನ ಕಾಣುವ ಬಾವ
ನನಗೆ ಮಾತ್ರ ಅನಂತದ ಸ್ವಾರ್ಥ

ಮನದ ಕುಲುಮೆಯೊಳಗೆ ಕುಡಿಯೊಡೆವ
ನಿರಂತರ ಮೌನದ ಲಹರಿಗಳಿಗೆ ಎಲ್ಲ ಗೊಡವೆಗಳು ಗೌಣ
ತಮದ ತೊಡರುಕಾಲಿಗೆ ಎಡವಿಬಿದ್ದಾಗ ಆಸರೆಯಾಗಿದ್ದು
ನಿನ್ನ ನಿರ್ಮಲ ಸಾಂತ್ವಾನದ ಊರುಗೋಲು

ಹೇಳಲಾಗಾದ ಮಾತುಗಳಿಗೆ ಧನಿಯಾದೆ
ಕೇಳಲಾಗದ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರವಾದೆ
ಕೊರಗುವ ಎದೆಯೊಳಗೆ ಏರುವ ಮಿಡಿತ
ಸದಾ ನಿನ್ನ ಹಿತವಾದ ಮಾತ ಕೇಳುವ ತುಡಿತ

ಎಷ್ಟು ಚಂದ .......
ದುಗುಡವ ತದುಕುವ ನಿನ್ನ ನಗು
ಮುಂಗುರುಳೊಳಗೆ ಇಣುಕಿ ಕೊಲ್ಲುವ
ನಿನ್ನ ಬಟ್ಟಲು ಕಂಗಳ ನೋಟ
ನನ್ನ ಸೃತಿಯಲ್ಲಿ ಮಿತಿಯಿಲ್ಲದ ಅಚ್ಚ ಹಸುರಿನ ಅಚ್ಚು.....
ಮಂದಾನಿಲದ ನಿನ್ನ ಮಂದಹಾಸ ನೆನೆದಾಗಲೆಲ್ಲ
ಮನ ಬ್ರಹ್ಮಕಮಲ........

ಕಾಮೆಂಟ್‌ಗಳಿಲ್ಲ: