ಸೋಮವಾರ, ಫೆಬ್ರವರಿ 21, 2011

ಕತ್ತಲೆಯ ಅಲೆಮಾರಿ

ಕಣ್ಣಿಂದ ಮಿಂಚು ಹರಿಸಿ
ಕುಡಿನೋಟದಿ ಕೊಂದವಳೆ
ಖಾಲಿಯಿಲ್ಲದ ಮನವ
ನಿತ್ಯ ಕಾಡುವ ನಯನಾಂಗಿ!!

ನನ್ನ ಮನವೇನೋ ಬೆತ್ತಲೆ
ಆದರೆ ಬೆಳಕು ಕಾಣದಷ್ಟು ಕತ್ತಲೆ
ದಾರಿ ದೀವಿಗೆಗೂ ಉಸಿರಿಲ್ಲ
ಬದುಕು ಸಾಕೆಂಬ ಹಂಬಲ
ಮೂಡಲೂ ಸ್ಥಳವಿಲ್ಲ
ಇನ್ನು ಈಸಬೇಕೆಂಬ ಆಸೆಯಾದರೂ
ಕುಡಿಯೋಡೆವುದೆಲ್ಲಿಂದ?

ಬರಡು ತಿಟ್ಟನುತ್ತಿ, ಮೊಳಕೆ ಕಾಳ
ಬಿತ್ತಿದರೂ ಜೀವಜಲವಿಲ್ಲದೆ
ಬದುಕ ಸೆಲೆಯುಂಟೆ?
ಹಂಬಲವಿಲ್ಲದ ಮನ,
ಛಲವಿಲ್ಲದಾ ಪ್ರೀತಿ
ಬಲ್ಲಿದಗೆ ದಕ್ಕುವುದುಂಟೆ?

ಎಲ್ಲೆಯೊಳಗೆ ಬದುಕಲು
ನೂರಾರು ದಾರಿ
ಎಲ್ಲೆ ಮೀರಿದ ಬದುಕು ನಿಸ್ಸತ್ವ!!
ಕಲ್ಲ ಕೆತ್ತಿ, ಸುಡು ಬಿಸಲಲ್ಲಿ ನೆತ್ತಿಯ
ಅಡವಿಟ್ಟು ಬಿಸುಲುಣಿಸದೆ ಸಾಕೇನು
ಇಚ್ಚೆಯಿದ್ದೊಡೆ ಕೊಚ್ಚೆಯದಾಟಿ ಬಾ!!
ಸ್ವಚ್ಚವಾಗಿ ಬದುಕೋಣ

ನಂಬಿಕೆಯೇ ನೆರಳು
ಅನುಮಾನವೇ ಉರುಳು
ನಿನಗಾಗಿ ಕಾದಿರುವೆ ಹಗಲಿರುಳು
ತಿಮಿರವನೋಡಿಸಿ
ಶುದ್ಧ ಬೆಳಕಲ್ಲಿ ಬಾಳೋಣ ಬಾ!!
    ಇತಿ ನಿನ್ನ ದಾರಿಕಾಯುವ
        ಕತ್ತಲೆಯ ಅಲೆಮಾರಿ

ಕಾಮೆಂಟ್‌ಗಳಿಲ್ಲ: