ಗುರುವಾರ, ಏಪ್ರಿಲ್ 22, 2010

ಅಪ್ಪ ಹಾಕಿದ ಆಲ...

ಮೂಡಲದ ಕಲ್ಲು ತಿಟ್ಟಿನ



ಕಡೇವಲದ ಕೆಂಪು ದಿಬ್ಬದ ಮೇಲಿದೆ



ನಮ್ಮಪ್ಪ ಹಾಕಿದ ಆಲ



ಬೃಹದಾಕಾರ ಬಹಳ ಬಹಳ ವಿಶಾಲ!!



ಹಿಮ ಪರ್ವತದ ಜಡೆಮುನಿಯ ಹಾಗೆ



ಜೋತುಬಿದ್ದ ಬಿಡುಬೀಸು ಬೀಳುಗಳು



ಜಗದನುಭವದ ತಿರುಳ ಎಳೆಗಳು!!



ಗೂಡು ಕಟ್ಟಲು ಹಕ್ಕಿಗಳ ಅರಚಾಟ



ಎಲೆಯಮೇಯಲು ಕುರಿ ಮೇಕೆಗಳ ಮೇಲಾಟ!!



ಇಂತಿಪ್ಪ ಮರದ ನೆಳಲ ಒಳಗೆ



ಸೂರ್ಯ ಜಾರಿ ಮೈ ಮರೆಯುವಮುನ್ನ



ಸೋಲು, ಹತಾಶೆಯ 'ಹ್ಯಾಪು' ಮೋರೆ ಹಾಕಿ



ಪ್ರಾಣ ಹರಣಕೆ ನಿಂತೆ!!!



"ಮಗು!"



ಎಷ್ಟು ಕಕ್ಕುಲತೆಯ ಧನಿ!



ಚಿಂತೆಗೆ ಸಿಂಚಿಸಿತು ಮಂಜಿನ ಮಳೆಹನಿ!!



ಶಿರವೆತ್ತಿ ನೋಡಿದೆ!!



''ನಿಮ್ಮಪ್ಪ ನನ್ನನ್ನು ಬೆಳೆಸಿದ್ದು ನಿನ್ನ ನೆರಳಿಗೆ!!



ಕೊರಳಿಗಲ್ಲ!!"



ಮನದ ಮೂಲೆಯಲಿ ಇಬ್ಬಗೆಯ ತಾಕಲಾಟ!



ತೋಚದ ತೊಳಲಾಟ!!



"ಚಿತೆಯೇರಲು ದಾರಿ ಬರಿ ನೂರು!



ಬದುಕ ಬಂಡಿಯೆಳೆಯಲು ಸಹಸ್ರಾರು,



ಸೋತೆನೆಂದು ಕುಗ್ಗಬೇಡ



ಗೆಲ್ಲಿಸಿದವರನು ತೊರೆಯಬೇಡ!!



ಪ್ರಯತ್ನದ ಫಲ ನಿನಗುಂಟು!"



ಕಾಣದ ಜಾಗದಲ್ಲಿ ಬೀಡು ಬಿಟ್ಟಿದ್ದ



ಸಾವೆಂಬ ಪದ, ನನ್ನೊಳಗಣ ತಾಮಸಿಯ ತಮವನ್ನು



ನಮ್ಮಪ್ಪಹಾಕಿದ ಆಲ!!



ತೊಳೆದು ಓಡಿಸಿತ್ತು!!

ಕಾಮೆಂಟ್‌ಗಳಿಲ್ಲ: