ಗುರುವಾರ, ಏಪ್ರಿಲ್ 22, 2010

ಮತದಾನ ಕಡ್ಡಾಯ ಸಧ್ಯ ಪ್ರಸ್ತುತವೇ........?

ಪರೀಕ್ಷಾ ಸಮಯದಲ್ಲಿ ಓದಲು ವಿದ್ಯಾರ್ಥಿಗಳಿಗೆ ವಿದ್ಯುತ್ ಇಲ್ಲ, ಏರಿದ ಬೆಲೆಗಳು ಕೆಳ ಬರುವ ಸೂಚನೆಗಳೇ ಇಲ್ಲ, ರಣ ಬಿಸಿಲು ನೆತ್ತಿ ಸುಡುತ್ತಾ ಅಂತರ್ಜಲವನ್ನೇ ಅಂತಾರ್ಧನ ಮಾಡಿ ನಾಲಗೆಯ ಪಸೆ ಇಂಗಿಸಲೂ ಬಿಡುವಿಲ್ಲದ ಸರ್ಕಾರ.



ಪಾಪ! ಅದು ತಾನೆ ಏನು ಮಾಡೀತು!!?



ಚುನಾವಣೇ ಮೇಲೆ ಚುನಾವಾಣೇ ಮೇಲೆ ಚುನಾವಣೆ ಬರುತ್ತಲೇ ಇವೇ. ಸ್ಥಳಿಯ ಸಂಸ್ಥೆಗಳಿಗಾಯ್ತು, ಬಿ ಬಿ ಎಂ ಪಿ ಬಂತು. ಗ್ರಾಮಪಂಚಾಯ್ತಿ ಚುನಾವಣೆಗೆ ಅಧಿಸೂಚನೆ ಬಂದಾಯ್ತು ಮುಗಿಯುತ್ತಿದ್ದಂತೆ ಪದವೀಧರ ಕ್ಷೇತ್ರ, ನಂತರ ಜಿಲ್ಲಾ ಪಂಚಾಯ್ತಿ, ತದನಂತರ ವಿಧಾನಸಭೆ, ಲೋಕಸಭೆ...... ಹನುಮಂತನ ಬಾಲದಂತೆ, ಒಂದಕ್ಕೊಂದು ಜೋಡಿಸಿಕೊಂಡು ಬರುವ ಗೂಡ್ಸ್ ರೈಲುಗಾಡಿಯ ಹಾಗೆ ಚುನಾವಣೆಗಳು ಬರುತ್ತಲೇ ಇರುತ್ತವೆ.



ಇದರಿಂದ ಯಾರಿಗೆ ಲಾಭ!!? ಮರಿಪುಡಾರಿಗಳಿಗೆ ಜೇಬಿನ ತುಂಬಾ ದುಡ್ಡೋ ದುಡ್ಡು! ಕುಡಿಯುವ ಕುಡುಕರಿಗೆ ಕೞಭಟ್ಟಿ! ಓಟಿಗೊಂದು ನೋಟು! ಪಾಪ!! ನಮ್ಮನಿಮ್ಮಂತವರ ಪಾಲಿಗೆ ಹೊಸಬಾಟಲಿಯಲ್ಲಿ ಬರುವ ಅದೇ ಈಡೇರಿಸಲಾಗದ ಹಳೇ ಭರವಸೆಗಳು!! ಇದಕ್ಕೇನು ಪರಿಹಾರ? ಇವೆಲ್ಲ ಸಮಸ್ಯೆಗಳ ಮೂಲ ಯಾವುದು? ಕಾರಣಕರ್ತರಾರು? ಹೀಗೆ ಮೂಲ ಹುಡುಕುತ್ತಾ ಹೊರಟರೆ ಎಲ್ಲಾ ಬೆಟ್ಟುಗಳು ಜನಸಾಮಾನ್ಯರಾದ ನಮ್ಮೆಡೆಗೆ!! ಎನ್ನುವುದೂ ಎಲ್ಲರೂ ಸಹ ಒಪ್ಪಲೇಬೇಕಾದ ಸತ್ಯ!!



ಅದು ಹೇಗೆ? ನಾವು ಆರಿಸಿ ಕಳುಹಿಸಿದ ಜನಪ್ರತಿನಿಧಿಗಳು ಸರಿಯಾಗಿ ಕೆಲಸ ಮಾಡದೇ ಇದ್ದದ್ದು ಅವರ ತಪ್ಪಲ್ಲವೇ? ಎಂದು ನಾವು ಪ್ರತಿ ಪ್ರಶ್ನೆ ಹಾಕುವ ಮುನ್ನ ನಾವು ಸರಿಯಾದ ನಾಯಕರನ್ನು ಆರಿಸಿದ್ದೇವೆಯೇ? ಎಂಬ ಮತ್ತೊಂದು ಪ್ರಶ್ನೆ ಹರಿತವಾದ ಕುಡುಗೋಲಿನಂತೆ ತಯಾರಗಿರುತ್ತದೆ.



ಸದ್ಯ ಈ ಚಿಂತನೆಗೆ ಕಾರಣ ಈಗತಾನೆ ಮುಗಿದ ಬೃ, ಬೆಂ, ಮ ಪಾ, ಚುನಾವಣೆಯಲ್ಲಿ ಚಲಾವಣೆಯಾದ ಶೇಕಡಾವಾರು ಮತಗಳು. ಅದೂ ಶೇ ೪೪ ಮಾತ್ರ. ಯಾವುದೇ ಒಂದು ಜನಪ್ರತಿನಿದಿಗಳ ಸಭೆಯ ಅಧಿಕಾರ ಹಿಡಿಯಬೇಕಾದರೆ ಶೇಖಡ ೫೧ಕ್ಕಿಂತಾ ಜಾಸ್ತಿ ಸೀಟುಗಳು ಬರಬೇಕೆಂಬ ಕಾನೂನು ಇದೆ. ಹಾಗಿರುವಾಗ ಕೇವಲ ಶೇ ೪೪ರಷ್ಟು ಮತ ಚಲಾವಣೆಯಾಗಿರುವ ಈ ಚುನಾವಣೆ ನಿಜವಾಗಿಯೂ ಸಿಂಧುವೇ? ಈಗ ಚುನಾಯಿತ ಪ್ರತಿನಿದಿಗಳು ಇಡೀ ಬೆಂಗಳೂರಿಗರ ಪ್ರತಿನಿಧಿಗಳೇಗಾಗುತ್ತಾರೆ? ನಿಜಕ್ಕೂ ಚಿಂತಿಸಬೇಕಾದ ವಿಷಯವೇ..!!



"ಚುನಾವಣೆ ಬಂದರೇ ಸಾಕು ೪ ದಿನ ರಜಾ ಗ್ಯಾರಂಟಿ ಜೊತೆಗೆ ಬರೋ ಶನಿವಾರ ಮತ್ತು ಭಾನುವಾರ ಎಲ್ಲಾ ಸೇರಿದರೆ ಒಟ್ಟು ಒಂದುವಾರ ರಜ" ಎಂದು ಯೋಚಿಸುವ ಅಧಿಕಾರಿ ಮತ್ತು ಕಾರ್ಮಿಕ ವರ್ಗ,



"ಯಾರಿಗೆ ಓಟುಹಾಕಿ ಯಾರನ್ನು ಉದ್ದಾರಮಾಡಿದರೇನು? ನಾವು ಮಣ್ಣು ಹೊರುವುದು ತಪ್ಪುತ್ತದೆಯೇ?" ಎಂದು ಸಹಜ ಪ್ರಶ್ನೆಯನ್ನೇ ಕೇಳುವ ಕೂಲಿ ಮಾಡಿ ಹೊಟ್ಟೆಹೊರೆವ ಶ್ರಮಜೀವಿಗಳು.



"ಯಾರಿಗೆ ಮತ ಹಾಕಿದ್ರೂ ನಮ್ಮ ದೇಶದ ಮತ್ತು ನಮ್ಮ ಪರಿಸ್ಥಿತಿ ಇಷ್ಟೇ?!!" ಎನ್ನುವ ಸಿನಿಕವರ್ಗ ಮತ್ತೊಂದೆಡೆಯಿಂದಾಗಿ ಇಷ್ಟು ಕಡಿಮೆ ಮತದಾನವಾಗಿದೆಯೆಂದು ವಿಶ್ಲೇಷಿಸಬಹುದು. ಇದರಿಂದ ಲಾಭವಾಗಿದ್ದು ಅದೇ ದುಡ್ಡುೞುವರಿಗೆ, ಅದೇ ರೌಡಿ ಹಿನ್ನೆಲೆಯೂೞವರಿಗೆ.



ಈ ರೀತಿ ಯೋಚಿಸಿ ನಮ್ಮ ಜವಾಬ್ದಾರಿಯಿಂದ ನುಣುಚಿಕೊೞುವವರು ಯಾವುದೇ ತೊಂದರೆಗಾಳಾದಾಗ ಪ್ರತಿಭಟಿಸಲು ಮುಂದಿನ ಸಾಲಿನಲ್ಲೇ ನಿಂತಿರುತ್ತಾರೆ. ಅವರಿಗೆ ಪ್ರತಿಭಟಿಸುವ ನೈತಿಕ ಹಕ್ಕಾದರೂ ಇದೆಯೇ? ಎಂದೂ ಸಹ ಯೋಚಿಸುವುದಿಲ್ಲ. ಎಲ್ಲವನ್ನೂ ಕೇಳುವುದರಲ್ಲಿ, 'ನ್ಯೂಸೆನ್ಸ್' ಚಾನಲ್ ಗಳಲ್ಲಿ ಮುಖ ತೋರಿಸುವುದರಲ್ಲೂ ಸಹ ಮುಂದು.



ಇವರಿಗೆ ಬೇಕಾದ ನಾಯಕನಿಗೆ ಮತ ಹಾಕಿ ಅವನನ್ನು ಚುನಾಯಿಸಿದ್ದರೇ ಒೞೆಯದಾಗುತ್ತಿತ್ತೋ ಏನೋ? ಎನ್ನುವ ಆಶಾಭಾವನೆಗಾದರೂ ಮತದಾನ ಕಡ್ಡಾಯಗೊಳಿಸಬೇಕಾಗಿದೆ, ಹಾಗೂ ಇದರ ಆಗು ಹೋಗುಗಳನ್ನು ಚಿಂತಿಸಬೇಕಾಗಿದೆ.



ಮೊದಲನೆಯ ತೊಡಕು ಸಂವಿದಾನದ ತೊಡಕು ವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಮುಂದಿಟ್ಟುಕೊಂಡು ನಮ್ಮ ಪ್ರಗತಿಪರರು ಕೂಗಾಡಬಹುದು.



ಕಡ್ಡಾಯ ಮಾಡಿದರಷ್ಟೇ ಸಾಲದು, ಮತಹಾಕದವರಿಗೆ ಶಿಕ್ಷೆಯ ಪ್ರಮಾಣವೂ ಇರಬೇಕು, ಇದು ಮತ್ತಷ್ಟು ವಿವಾದಕ್ಕೆಡೆಮಾಡುವುದೂ ಸಹ ಖಂಡಿತಾ.



ಹೊಟ್ಟೆಪಾಡಿಗಾಗಿ ಸರ್ಕಾರಿ ಕೆಲಸವೋ ಖಾಸಗಿ ಕಂಪನಿಗಳಲ್ಲೋ ಕೆಲಸಕ್ಕಾಗಿ ಪರಊರುಗಳಲ್ಲಿರುವವರು ಈ ಕಾನೂನಿಂದಾಗಿ ಬಹಳವೇ ತೊಂದರೆಗೊಳಗಾಗುವ ಸಾಧ್ಯತೆಯೇ ಹೆಚ್ಚು. ಅಲ್ಲದೇ ರೋಗಿಗಳು, ರೋಗಿಗಳ ಪೋಷಕರೂ ಈ ಕಾಯ್ದೆಯಿಂದ ತೊಂದರೆಗೊಳಗಾಗಬಹುದು.



ಒಟ್ಟಿನಲ್ಲಿ ಮೇಲಿನ ಮತ್ತಿತರ ತೊಡಕುಗಳಿಗೆ ಮೊದಲೇ ಸಾರ್ವಜನಿಕವಾಗಿ ಚರ್ಚಿಸಿ ಕಾಯಿದೆ ರೂಪಿಸಿದರೆ ಒಂದು ಒೞೆಯ ಕಾಯ್ದೆಯ ಜೊತೆಗೆ ಸಮಾಜಕ್ಕೂ ಒಳಿತಾಗಬಹುದೆಂಬ ಆಶಯ.



ಯಾರು ಯಾರಿಗಾದರೂ ಮತಹಾಕಲಿ ಅದು ಬೇರೆಯ ಪ್ರಶ್ನೆ ಒಟ್ಟಿನಲ್ಲಿ ಮತದಾನ ಕಡ್ಡಾಯವಾದರೆ ಹಣದ ಮದದಿಂದ ತೋಳ್ಬಲದಿಂದ ಚುನಾಯಿತರಾಗುತ್ತಿರುವ ರೌಡಿ ರಾಜಕಾರಣಕ್ಕೆ ಸ್ವಲ್ಪವಾದರೂ ಕಡಿವಾಣ ಬಿದ್ದು ಕೆಲವರಾದರೂ ಉತ್ತಮ ರಾಜಕಾರಣಿಗಳನ್ನು ರೂಪಿಸಲು ಸಹಾಯವಾಗುತ್ತದೆ ಎನ್ನುವುದು ನನ್ನ ಅನಿಸಿಕೆ.



ಅದಕ್ಕಾದರೂ ಮತದಾನವನ್ನು ಕಡ್ಡಾಯ ಮಾಡಲೇಬೇಕೆನಿಸುತ್ತದೆ ಅಲ್ಲವೇ?

ಕಾಮೆಂಟ್‌ಗಳಿಲ್ಲ: