ಶನಿವಾರ, ಜನವರಿ 30, 2010

ನ್ಯಾಯಾಂಗ ಮತ್ತು ನ್ಯಾಯ.....??!!

ಪ್ರಚಲಿತ ವಿದ್ಯಮಾನ

ನ್ಯಾಯಾಂಗದಿಂದಷ್ಟೇ ಅಲ್ಲ ಬೇರ್ಯಾವುದೇ ರೀತಿಯಿಂದಲೂ ಸಾಮಾನ್ಯರಿಗೆ 'ನ್ಯಾಯ' ಎನ್ನುವುದು ಮರುಭೂಮಿಯ ಮರೀಚಿಕೆಯಾಗಿದೆ..ಅದಕ್ಕೆ ಇತ್ತೀಚಿನ ಉದಾಹರಣೆಗಳನ್ನು ನೋಡಿ.. ಪ್ರಜಾಸತ್ತೆಯ ದ್ಯೋತಕವಾದ ರಾಜ ಭವನ ವನ್ನೇ ತಮ್ಮ ಕಾಮತೃಷೆಯನ್ನು ತೀರಿಸಿ ಕೊಳ್ಳಲು ಬಳಸಿದ ಆರೋಪದ ಮೇಲೆ ಅತ್ಯಂತ ಅವಮಾನಕರವಾದ ರೀತಿಯಲ್ಲಿ ಪದತ್ಯಾಗ ಮಾಡಿದ ರಾಜ್ಯಪಾಲರು. ಕ್ರೀಡಾಪಟುವಾಗುವ ಕನಸು ಹೊತ್ತು ರಾಜ್ಯ ಟೆನ್ನಿಸ್ ಸಂಸ್ಥೆಯ ಅಧ್ಯಕ್ಷನೂ ಆಗಿದ್ದ ಉಪಪೊಲೀಸ್ ಮಹಾ ನಿರ್ದೇಶಕನ ಕಚೇರಿಗೆ ಹೋಗಿದ್ದ 14 ವರ್ಷದ ಬಾಲೆಯ ಮೇಲೆ ತನ್ನ ಕಚೇರಿಯಲ್ಲೇ ಅತ್ಯಾಚಾರ ವೆಸಗಿದ ರಾಕ್ಷಸ ಸ್ವರೂಪಿ ಆರಕ್ಷಕ 19 ವರ್ಷಗಳ ನಂತರವೂ ರಾಜಾರೋಷವಾಗಿ ಓಡಾಡಿಕೊಂಡಿರುವುದು. ತನ್ನ ಇಲಾಖೆಯ ಪೇದೆರ್ಯೋವನ ಪತ್ನಿಯನ್ನು ಮನೆಗೆ ಕರೆದುಕೊಂಡು ಹೋಗಿ ಆಕೆಯ ಮಾನಹರಣ ಮಾಡಿ, ರಾಜಕೀಯ ಹಾಗೂ ಅಧಿಕಾರಿ ವಲಯದಲ್ಲಿ ತನ್ನ ಪ್ರಭಾವ ವನ್ನು ಬಳಸಿ 13 ವರ್ಷಗಳು ಕಳೆದು ಹೋದ ನಂತರವೂ ಕಣ್ಣು ತಪ್ಪಿಸಿ ತಿರುಗುತ್ತಿರುವ ಮರ್ತ್ತೋವ ಉಪಪೊಲೀಸ್ ಮಹಾ ನಿರ್ದೇಶಕ ಮಹಾಶಯ. ಲೈಂಗಿಕ ಅಪರಾವರ್ತನೆಯ ಆರೋಪಕ್ಕೆ ಒಳಗಾಗಿ ಪ್ರಜಾ ಪ್ರತಿನಿಧಿ ಎಂಬ ಪರಿಕಲ್ಪನೆ ಹಾಗೂ ಆಚರಣೆಗಳೆರಡಕ್ಕೂ ವಿರುದ್ಧವೆನಿಸಿದ ರೀತಿಯಲ್ಲಿ ವರ್ತಿಸಿದ ವ್ಯಕ್ತಿಗೆ ಮಂತ್ರಿ ಪದವಿ ದಯಪಾಲಿಸಿದ ಆಡಳಿತಾರೂಢ ವ್ಯವಸ್ಥೆ. ಮೇಲಿನ ಎಲ್ಲಾ ಉದಾಹರಣೆಗಳನ್ನು ನೋಡಿದ ನಂತರ "ಭ್ರಷ್ಟಾಚಾರದಿಂದ ನ್ಯಾಯಾಂಗವೋ, ನ್ಯಾಯಾಂಗದಿಂದ ಭ್ರಷ್ಟಾಚಾರವೋ?" ಎನ್ನುವ ಪ್ರಶ್ನೆಗೆ 'ಕೋಳಿ ಮೊದಲೋ ಮೊಟ್ಟೆ ಮೊದಲೋ?' ಎನ್ನುವುದಕ್ಕೆ ಉತ್ತರ ಉಡುಕುವುದು ಎಷ್ಟು ಕಷ್ಟವೋ ಅಷ್ಟೇ ಕಷ್ಟ. ಈ ಮಾತನ್ನು ಹೇಳಲು ಕಾರಣ ಮೇಲಿನ ಎಲ್ಲ ಘಟನೆಗಳಲ್ಲಿ ಅನ್ಯಾಯವೆಸಗಿರುವವರು "ನ್ಯಾಯ ಕೊಡಿಸುವವರು ಅಥವಾ ನ್ಯಾಯ ಕಾಪಾಡುವವರು ಅಥವಾ ನ್ಯಾಯವನ್ನು ರೂಪಿಸುವವರೇ ಆಗಿದ್ದಾರೆ. ಮೇಲೆ ತಿಳಿಸಿದ ಉದಾಹರಣೆಗಳು ಸಮಾಜದ ಮೇಲ್ವರ್ಗದ ಜನರಿಗಾದ ಅನ್ಯಾಯಗಳು. ಇನ್ನು ನಮ್ಮನಿಮ್ಮಂತಹ ಸಾಮಾನ್ಯರಿಗೆ 'ನ್ಯಾಯ' ಕನ್ನಡಿಯೊಳಗಿನ ಗಂಟಲ್ಲದೆ ಮತ್ತೇನು ಅಲ್ಲ ಅಲ್ಲವೇ? ಪರಿಸ್ಥಿತಿ ಹೀಗೆಯೇ ಮುಂದು ವರೆದರೆ ಗತಿಸಿ ಹೋಗಿರುವ ಕಾಲ ಘಟ್ಟವೆಂಬ ಕಪಾಟಿನಲ್ಲಿ ಹುದುಗಿ ಹೋಗಿರುವ ಇನ್ನೆಷ್ಟು ಪ್ರಕರಣಗಳು ಹೊರಬರುತ್ತವೆಯೋ ತಿಳಿಯದು. ಇದಕ್ಕೆ ಮುಖ್ಯ ಕಾರಣಗಳು ಅಧಿಕಾರದ ದುರುಪಯೋಗ ಹಾಗೂ ಅದನ್ನು ಎದುರಿಸುವಲ್ಲಿ ಸಂಪೂರ್ಣ ವಾಗಿ ಸೋತಿರುವ ಪ್ರಜೆಗಳು ಎನ್ನುವುದು ಸೂರ್ಯನಷ್ಟೇ ಸತ್ಯ. ಇದರಬಗ್ಗೆ ಸಾಮಾಜಿಕ ಚಿಂತನೆ ಮತ್ತು ಪರಿಹಾರ ಎರಡೂ ಶೀಘ್ರ ಅತ್ಯಗತ್ಯ..

ಕಾಮೆಂಟ್‌ಗಳಿಲ್ಲ: