ಸೋಮವಾರ, ಜೂನ್ 6, 2011

ಬಾ! ಬಾ! ಬ್ಲಾಕ್ ಮನಿ............

ನಗುವುದೋ ಅಳುವುದೋ
ನೀವೇ ಹೇಳಿ....
ಎನ್ನುವ ಅಣ್ಣಾವ್ರ ಸಂಪತ್ತಿಗೆ ಸವಾಲ್ ಗೀತೆ ನಿನ್ನೆಯಿಂದ ಬೇಡ ಬೇಡವೆಂದರೂ ನಾಲಿಗೆಯ ತುದಿಯಲ್ಲಿ ಗುನುಗುವಂತಾಗುತ್ತಿದೆ. ಭಾನುವಾರ ನಸುಕಿನಲ್ಲಿ ನಡೆದ ಯು ಪಿ ಎ ಸರ್ಕಾರ ಮತ್ತು ಬಾಬಾ ರಾಮದೇವ್ ರವರ ನಡುವಿನ ಜಟಾಪಟಿ. ಬಾಬಾರ ನಿರಶನವನ್ನು ಪ್ರಹಸನವನ್ನಾಗಿ ಪರಿವರ್ತಿಸಿ ಯು.ಪಿ.ಎ ಯ ಕಪಿಗಳು ಸಿಂಗಲೀಕಗಳು ಅಲ್ಲಲ್ಲ ಕಪಿಲ್(ಸಿಬಲ್) ಮತ್ತು ಸಿಂಗ್(ದಿಗ್ವಿಜಯ್) ಗಳು ರಾತ್ರೋರಾತ್ರಿ ’ಹೊಸ ಹೀರೋ’ ಒಬ್ಬನನ್ನು ಪ್ರಪಂಚಕ್ಕೆ ನೀಡಿದ (ಕು)ಖ್ಯಾತಿಗೆ ಒಳಗಾಗಿದ್ದಾರೆ. ಇಬರಿಬ್ಬರ ಜಟಾಪಟಿಗೆ ಕಾರಣ ಬ್ಲಾಕ್ ಮನಿ ಅರ್ಥಾತ್ ಕಪ್ಪು ಹಣ. ವಿದೇಶಗಳಲ್ಲಿನ ಕಪ್ಪು ಹಣ ವನ್ನು ವಾಪಸ್ ತರಬೇಕೆಂದು ಬಾಬಾ ನಿರಶನಗೊಂಡರೆ, ಹಜಾರೆಯವರಿಂದ ಹೈರಾಣಾಗಿದ್ದ ಕೇಂದ್ರ ಸರ್ಕಾರ ಬಾಬಾರವರೇ ಕಪ್ಪು ಹಣದ ಸರದಾರನೆನ್ನುವಂತೆ ಬಿಂಬಿಸುತ್ತಿದೆ.
    ಅಸಲಿಗೆ ಇದೆಲ್ಲಾ ಶುರುವಾಗಿದ್ದು ಬಾಬಾ ರಾಮದೇವ್ ಕಪ್ಪು ಹಣವಾಪಸ್ ತರಬೇಕೆಂದು ಜೂನ್ ನಾಲ್ಕರಂದು ಉಪವಾಸ್ ನಿರಶನ ಆರಂಭಿಸುತ್ತೇನೆ ಎಂಬ ಘೋಷಣೆಯೊಂದಿಗೆ. ಅಣ್ಣಾ ಹಜಾರೆಯವರ ಉಪವಾಸದಿಂದ ಸೊರಗಿ ಸುಸ್ತಾಗಿದ್ದ ಕೇಂದ್ರ ಸರ್ಕಾರಕ್ಕೆ ರಾಮದೇವರ ನಿರ್ಧಾರದಿಂದ ವಿಧಿಯಿಲ್ಲದೆ ’ರಾಮನಾಮ’ ಇದೇ ಪ್ರಥಮ ಬಾರಿಗೆ ಜಪಿಸುವಂತಾಯ್ತು. ವಿಚಲಿತಗೊಂಡ ಸೋನಿಯಾ ರಾಮದೇವರ ಹಿಂದೆ ಕಪಿ(ಲ್) ಸೈನ್ಯವನ್ನು ಛೂ!! ಬಿಟ್ಟಿತು. ಐದು ದಿನ ಬಾಬಾರ ಯೋಗಾಸನದ ಮುಂದೆ ಮಂತ್ರಿಗಳ ’ದೀರ್ಘದಂಡಾಸನ’ವೆಲ್ಲಾ ದಂಡವಾಗಿ ಫಲವೇನೂ ಸಿಗಲಿಲ್ಲ. ’ಕುಳಿತು ಹಾಳಾಗಿ ಹೋಗಲಿ’ ಎಂದು ಸುಮ್ಮನಾಯ್ತು. ನಿರಶನವೂ ಪ್ರಾರಂಭವಾಯ್ತು. ಅದಕ್ಕೆ ಹರಿದು ಬರುತ್ತಿದ್ದ ಜನಸಾಗರ ನೋಡಿ ಕೇಂದ್ರಕ್ಕೆ ಮತ್ತಷ್ಟು ದಿಗಿಲಾಯ್ತು. ಸಂಧಾನದ ಗೊಂದಲಗಳು ಪ್ರಾರಂಭವಾಗಿ ಎಲ್ಲವೂ ಸಂಜೆಯ ವೇಳೆಗೆ ’ಸುಖಾಂತ್ಯ’ ಎನ್ನುವಷ್ಟರಲ್ಲಿ ಎಂಟ್ರಿಕೊಟ್ಟರು ನೋಡಿ ’ಸಾಧ್ವಿ ರಿತುಂಬರಾದೇವಿ’!!!! ದಿಗ್ವಿಜಯ್ ದಿಕ್ಕೆಂಟ್ಟಂತೆ ಮಾತನಾಡಲು ಶುರುಮಾಡಿದ್ದೇ ಆವಾಗ!!!!
    ’ರಾಮದೇವ್ ಮೋಸಗಾರ!! ಜನರ ದಿಕ್ಕು ತಪ್ಪಿಸುತ್ತಿದ್ದಾರೆ! ಅವರೇ ಕಪ್ಪುಹಣದ ಸರದಾರರು!! ಅವರಿಗೆ ನಿರಶನ ಕೂರುವ ನೈತಿಕತೆ ಇಲ್ಲ!! ...ಇತ್ಯಾದಿ..ಇತ್ಯಾದಿ.... ಆದರೆ ಕೇಂದ್ರ ಮತ್ತಷ್ಟು ತಲೆಕೆಡಿಸಿಕೊಂಡಿದ್ದು ’ಆರ್. ಎಸ್ ಎಸ್’ನ ಮುಖಂಡರು ವೇದಿಕೆ ಹಂಚಿಕೊಂಡಾಗ!!! ತಡೆದುಕೊಳ್ಳದ ಸರ್ಕಾರ ಮಧ್ಯರಾತ್ರಿ ಮಹಿಳೆಯರು, ಮಕ್ಕಳು ಒಳಗೊಂಡು ಸತ್ಯಾಗ್ರಹಿಗಳು ಸವಿನಿದ್ದೆಯಲ್ಲಿದ್ದಾಗ ಪೊಲೀಸರು ಲಾಠಿ ಚಾರ್ಜ್ ಮಾಡಿ, ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದರು. ಕಪ್ಪು ಹಣ ವಾಪಸ್ ತರಬೇಕು, ಕಳ್ಳ ದಾರಿಯಲ್ಲಿ ಹಣ ಮಾಡಿರುವ ಜನರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು, ಈ ಕುರಿತ ಪ್ರಕರಣಗಳ ವಿಚಾರಣೆಗೆ `ಫಾಸ್ಟ್ ಟ್ರ್ಯಾಕ್~ ಕೋರ್ಟ್‌ಗಳನ್ನು ಸ್ಥಾಪಿಸಬೇಕು ಎಂದು ಶನಿವಾರ ಬೆಳಗಿನ ಜಾವದಿಂದ ಆಮರಣ ಉಪವಾಸ ಕೈಗೊಂಡಿದ್ದ ಬಾಬಾ ಮತ್ತು ಅವರ ಶಿಷ್ಯರನ್ನು ರಾಮಲೀಲಾ ಮೈದಾನದಿಂದ ಖಾಲಿ ಮಾಡಿಸಲು ಪೊಲೀಸರು ಸರ್ಕಾರದ ನಿರ್ದೇಶನದಂತೆ ಈ ಕ್ರಮ ಕೈಗೊಂಡರು. ಭಾನುವಾರ ಬೆಳಗಿನ ಜಾವ ಸತ್ಯಾಗ್ರಹಿಗಳ ಪಾಲಿಗೆ ಕರಾಳ ರಾತ್ರಿಯಾಯಿತು. ಇದೆಲ್ಲವನ್ನೂ ಪ್ರಪಂಚದಾದ್ಯಂತ ಜನರು ನೋಡಿದ್ದಾರೆ ಮತ್ತು ನೋಡುತ್ತಿದ್ದಾರೆ. ಇಡೀ ಪ್ರಕರಣವನ್ನು ಒಟ್ಟಾರೆಯಾಗೆ ನೋಡಿದಾಗ ಬಾಬಾರಿಗಿಂತ ಸರ್ಕಾರದ ನಡೆಯ ಮೇಲೆ ಹೆಚ್ಚು ಸಂಶಯವಾಗುವುದು ಹತ್ತು ಹಲವು ಉತ್ತರಸಿಗದ ಪ್ರಶ್ನೆಗಳು ಕಾಡುವುದೂ ಸ್ಪಷ್ಟ..
    ಮೊದಲಿಗೆ ’ಬಾಬಾರವರಿಗೆ ಒಂದು ದಿನಕ್ಕೆ ಯೋಗ ಶಿಬಿರಕ್ಕೆ ಮಾತ್ರ ಅನುಮತಿಸಲಾಗಿತ್ತು’ ಎಂದು ಸರ್ಕಾರ ಹೇಳುವುದು ನಿಜವಾಗಿದ್ದಲ್ಲಿ ಬಾಬಾರವರ ಹಿಂದೆ ಐದು ದಿನಗಳಿಂದ ಅಲೆದದ್ದೇಕೆ? ಅವರೊಡನೆ ಸತ್ಯಾಗ್ರಹ ಕೈಬಿಡಲು ದಂಬಾಲು ಬಿದ್ದದ್ದೇಕೆ? ಹಾಗೆ ಯೋಗ ಶಿಬಿರಕ್ಕೆ ಮಾತ್ರ ಅನುಮತಿಸಿದ್ದಲ್ಲಿ ಅದರ ಪ್ರತಿಯನ್ನೇಕೆ ಮಾಧ್ಯಮಗಳ ಮೂಲಕ ಜನರಮುಂದೆ ಇಡಲಿಲ್ಲ? ಅಕಸ್ಮಾತ್ ಹಾಗೆ ಅನುಮತಿ ನೀಡಿದ್ದಲ್ಲಿ ಹಗಲುಹೊತ್ತೇಕೆ ರಾಮಲೀಲಾ ಮೈದಾನವನ್ನು ತೆರವುಗೊಳಿಸಲಿಲ್ಲ? ನಟ್ಟನಡುರಾತ್ರಿ ನಿದ್ರಿಸುತ್ತಿರುವವರ ಮೇಲೆ ಕೈಮಾಡಿದ್ದು ತಪ್ಪಲ್ಲವೇ?
    ಎರಡನೆಯದು ’ಬಾಬಾರವರ ಸಮಾರಂಬಕ್ಕೆ ಹಣ ಹೇಗೆ ಬಂತು? ಅದು ಕಪ್ಪು ಹಣವಲ್ಲವೇ?’ ಎನ್ನುವುದು ಸರ್ಕಾರದ ವಾದ. ಇದು ಅತಿ ಮುಖ್ಯವಾದ ಪ್ರಶ್ನೆ ಇದು ನಿಜವೆನಿಸಿದಲ್ಲಿ ಅದರ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ಸಾರ್ವಜನಿಕರ ಮುಂದೆ ದಾಖಲೆ ಸಮೇತ ಇಡುವುದು ಬಿಟ್ಟು ಮಾಧ್ಯಮದ ಮುಂದೆ ಒಣ ಹೇಳಿಕೆಗಳನ್ನು ನೀಡುವುದೇಕೆ? ಕೇಂದ್ರ ಸರ್ಕಾರದ ಬಳಿ ಸಧ್ಯ ದಾಖಲೆಗಳಿಲ್ಲ ಎನ್ನುವುದಾದರೆ ಸುಮ್ಮನೆ ಅದರ ಬಗ್ಗೆ ಮಾತನಾಡುವುದೇಕೆ? ಅಥವಾ ಕೇಂದ್ರದ ಗುಪ್ತಚರ ಇಲಾಖೆಯೇನು ಕಡ್ಲೇಪುರಿ ತಿನ್ನುತ್ತಿದೆಯೇ?
    ಈ ರೀತಿಯ ಕೇಂದ್ರದ (ದುರ್)ವರ್ತೆನೆಗೆ ವಿದೇಶಗಳಲ್ಲಿ ಅತಿ ಹೆಚ್ಚು ಕಪ್ಪು ಹಣ ಇಟ್ಟಿರುವವರ ಪಟ್ಟಿಯಲ್ಲಿ ಯು.ಪಿ.ಎ ಸರ್ಕಾರದವರದ್ದು ಸಿಂಹಪಾಲು!! ಅವರನ್ನು ರಕ್ಷಿಸುವ ಗುರುತರ ಹೊಣೆ ಅವರದ್ದೇ ಆಗಿದೆ. ವಿಪರ್ಯಾಸವೆಂದರೆ ಹಗರಣಗಳಲ್ಲಿ ಮುಳುಗೇಳುತ್ತಿರುವ ಕೇಂದ್ರ ಸರ್ಕಾರವನ್ನು ಯೋಗ ಕಲಿಸುವ ಗುರು, ಔಷಧಿ ಮಾರುವ ವ್ಯಾಪಾರಿಯೊಬ್ಬರು ಹೆದರಿಸುವಂತಾಗಿದೆ.
    ಹಾಗೆಂದ ಮಾತ್ರಕ್ಕೆ ಬಾಬಾರವರನ್ನು ಸಾಚ ವ್ಯಕ್ತಿ ಎಂದೇನು ಸಮರ್ಥಿಸಿಕೊಳ್ಳುತ್ತಿಲ್ಲ. ಅವರ ಮೇಲೂ ಸಾಕಷ್ಟು ಗುರುತರ ಆಪಾದನೆಗಳಿವೆ. ಅದರಲ್ಲೂ ದೃಶ್ಯಮಾಧ್ಯಮಗಳಲ್ಲಿ ಕ್ಷಣ ಕ್ಷಣಕ್ಕೂ ಚಿತ್ರ ವಿಚಿತ್ರ ಬಣ್ಣದ ಸುದ್ದಿಯಾಗುತ್ತಿದ್ದಾರೆ. ಅವುಗಳಲ್ಲಿ ಕೆಲ ಪ್ರಶ್ನೆಗಳು ಸಹಜವೆನಿಸುತ್ತವೆ. ಭ್ರಷ್ಟಾಚಾರ ವಿರೋಧಿಸುವುದು ಈಗೀಗ ಒಂದು ಫ್ಯಾಷನ್. ಭ್ರಷ್ಟಾಚಾರ ವಿರೋಧಿ ಹೋರಾಟಗಳನ್ನು ಬೆಂಬಲಿಸುವವರ ಪೈಕಿ ಸಾಕಷ್ಟು ಮಂದಿಗೆ ತಮ್ಮ ಕಳಂಕಗಳನ್ನು ತೊಳೆದುಕೊಳ್ಳುವ ಆತುರ. ಅಣ್ಣಾ ಹಜಾರೆ ಹೋರಾಟಕ್ಕೆ ವ್ಯಕ್ತವಾದ ಸಾರ್ವತ್ರಿಕ ಬೆಂಬಲವನ್ನು ಗಮನಿಸಿದ ಮೇಲೆ ಇಂಥದ್ದೇ ಬೆಂಬಲದ ನಿರೀಕ್ಷೆಯಲ್ಲಿ ರಾಮದೇವ ಉಪವಾಸಕ್ಕೆ ಕೂರುತ್ತಿದ್ದಾರೆ. ಅಲ್ಲದೆ ಸರ್ಕಾರದ ಹೇಳಿಕೆಗಳು ಸಧ್ಯದ ಪರಿಸ್ಥಿತಿಯಿಂದ ಬಚಾವಾಗಲು ನೀಡುತ್ತಿರುವ ದಾರಿ ತಪ್ಪಿಸುವ ಹೇಳಿಕೆಗಳೆಂಬುದು ಸ್ಪಷ್ಟ. ಅದೇನೇ ಆಗಲಿ ಅವರು ತಪ್ಪು ಮಾಡಿದ್ದೇ ಆದಲ್ಲಿ ಅವರಿಗೂ ಶಿಕ್ಷೆಯಾಗಲೇ ಬೇಕು ಅವರೇನು ದೇವಲೋಕದಿಂದ ಇಳಿದು ಬಂದವರೇನಲ್ಲ. ಈ ನೆಲದ ಕಾನೂನುಗೆ ಯಾರೂ ಅತೀತರಲ್ಲ. ಸಂಸ್ಕೃತಿಯನ್ನೇ ಬಂಡವಾಳವಾಗಿಸಿಕೊಂಡು ಜನರನ್ನು ದಾರಿತಪ್ಪಿಸುವ ಇತರ ಸ್ವಾಮಿಜಿಗಳೂ ಸಹ ಈ ಸಮಾಜದಲ್ಲಿದ್ದಾರೆ ಅವರುಗಳ ವಿರುದ್ಧವೂ ಸಹ ತನಿಕೆಯಾಗಬೇಕು. ಏಕೆಂದರೆ ವಿದೇಶದಲ್ಲಿ ಕಪ್ಪು ಹಣವನ್ನಿಡಲು ಮಠಮಾನ್ಯಗಳ ’ಕೊಡುಗೆ’ ಅಪಾರ. ಆದ್ದರಿಂದ ಲೋಕಪಾಲ ಕಾಯ್ದೆಯಡಿಯಲ್ಲಿ ಅವರನ್ನೂ ತರುವ ಪ್ರಾಮಾಣಿಕ ಪ್ರಯತ್ನವಾದಾಗಲೇ ಭ್ರಷ್ಟಾಚಾರವೆನ್ನುವುದು ಭಾರತದಿಂದ ಬುಡಸಮೇತ ತೊಲಗಲು ಸಾಧ್ಯ.

1 ಕಾಮೆಂಟ್‌:

sagarlanasa ಹೇಳಿದರು...

Casino, Poker, and Sportsbook Near Me | Jtm Hub
Casino, Poker, 청주 출장샵 and Sportsbook Near 동두천 출장안마 Me · Golden Nugget · The 밀양 출장안마 Venetian · Harrah's Reno · 청주 출장샵 The LINQ Hotel & 양주 출장마사지 Casino · Days Inn & Suites by Wyndham Reno.