ಶನಿವಾರ, ಏಪ್ರಿಲ್ 16, 2011

ಸ್ವಾಮಿ ದೇವನೆ ಲೋಕಪಾಲನೆ..............

ಹೀಗೆ ಪ್ರಾರಂಭವಾಗುವ ಹಳೆಯ ಕನ್ನಡ ಚಿತ್ರಗೀತೆ ಇಂದು ಎಲ್ಲಾ ರಾಜಕಾರಣಿಗಳ ಅಧಿಕಾರಶಾಹಿಗಳ ಜಪದ ಗೀತೆಯಾಗಿದೆ.
ಹೌದು ಲೋಕಾಯುಕ್ತವೆಂಬ ಹಗ್ಗದ ಹಾವನ್ನು ತೋರಿಸುತ್ತ "ಭ್ರಷ್ಟಾಚಾರವನ್ನು ಹತ್ತಿಕ್ಕುತ್ತಿದ್ದೇವೆ" ಎನ್ನುತ್ತಿದ್ದ ಭ್ರಷ್ಟಶಾಹಿಗಳ ನಿದ್ದೆಗೆಡಿಸಿದ್ದು "ಅಣ್ಣ ಹಜಾರೆ" ಎಂಬ ಒಬ್ಬ ಸಾಮಾನ್ಯ ಮನುಷ್ಯ.
ಮಿತಿಮೀರುತ್ತಿರುವ ಭ್ರಷ್ಟಾಚಾರ ನಿಜಕ್ಕೂ ಅಭಿವೃದ್ಧಿಗೆ ದೊಡ್ಡ ತೊಡರುಗಾಲು. ಅದಕ್ಕೆ ಕಡಿವಾಣ ಹಾಕದಿದ್ದಲ್ಲಿ ಅಭಿವೃದ್ಧಿಯ ನಾಗಾಲೋಟದಲ್ಲಿರುವ ನಮ್ಮ ದೇಶ ಪಾಕಿಸ್ತಾನ, ಸೋಮಾಲಿಯಾ ಮತ್ತಿತರ ಅತೀ ಭ್ರಷ್ಟ ರಾಷ್ಟ್ರಗಳಿಗಿಂತ ಕಡೆಯಾದೀತು. ಇದು ಯಾರಿಗೂ ತಿಳಿಯದ್ದೇನಲ್ಲ. ಎಲ್ಲರಿಗೂ ಗೊತ್ತಿರುವ ವಿಚಾರವೇ ಆದರೂ ಸಮರ್ಥ ಮುಂದಾಳತ್ವದ ಕೊರತೆಯಿತ್ತು, ಅದನ್ನು ನೀಗಿಸಿದ್ದು ಹಿರಿಯ ಜೀವಿ "ಅಣ್ಣಾ ಹಜಾರೆ" ಇಅದರ ಹೋರಾಟ ಮುಗಿದು ಕೇಂದ್ರ ಸರ್ಕಾರವೂ ಲೋಕಪಾಲ ಕಾಯ್ದೆ ಜಾರಿಗೊಳಿಸಲು ಒಪ್ಪಿಗೆ ಸೂಚಿಸಿದೆ.
    ಇದು ಸ್ವಾಗತಾರ್ಹವೇ ಆದರೆ ನಿಜಕ್ಕೂ ಉತ್ತಮ ಲೋಕಪಾಲ ಕಾಯ್ದೆ ಜಾರಿಯಾಗುತ್ತದೆಯೇ? ಭ್ರಷ್ಟಚಾರ ತೊಲಗುತ್ತದೆಯೇ? ಎನ್ನುವ ಅನುಮಾನಗಳಿಗೆ ಉತ್ತರಸಿಗುವುದು ಅಷ್ಟು ಸುಲಭವಲ್ಲ. ಈ ಅನುಮಾನಗಳಿಗೆ ಪ್ರಮುಖ ಕಾರಣ ಈ ಹೋರಕ್ಕೆ ಮುಂಚಿನ ಲೋಕಪಾಲ ಕಾಯ್ದೆ ಜಾರಿಗೆ ಆಗಿರುವ ಪ್ರಯತ್ನಗಳು, ಅವುಗಳನ್ನು ಅಂಗೀಕರಿಸದಿರಲು ಆಡಳಿತ ಮತ್ತು ವಿಪಕ್ಷಗಳ ಒಗ್ಗಟ್ಟು, ಕಾರ್ಪೋರೇಟ್ ಲಾಬಿಗಳು ಅಷ್ಟೇ ಅಲ್ಲದೆ ಒಂದು ವಾರದಿಂದೀಚೆಗೆ ಜರುಗುತ್ತಿರುವ ಹೋರಾಟೋತ್ತರ ಕ್ಷಿಪ್ರ ಬೆಳವಣಿಗೆಗಳು ಅದರಲ್ಲೂ ಕಪಿಲ್ ಸಿಬಲ್ ರ ಕಾಲೆಳೆವ ಹೇಳಿಕೆಗಳು, ಕುಮಾರ ಸ್ವಾಮಿಯಂತವರ ಕುಟುಕು ಹೇಳಿಕೆಗಳು, ಎಲ್ಲಕ್ಕಿಂತ ಹೆಚ್ಚಾಗಿ ಕರಡು ಸಮಿತಿಯ ಸದಸ್ಯರ ನಿಜಾಯಿತಿಯ ಬಗ್ಗೆ ಹೊಗೆಯಾಡುತ್ತಿರುವ ವಿವಾದಗಳು ಉತ್ತಮ ಲೋಕಪಾಲ ಕಾಯ್ದೆ ಜಾರಿಯಾಗುತ್ತದೆ ಎಂಬ ನಂಬಿಕೆಯನ್ನು ಜನರಲ್ಲಿ ಮೂಡಿಸುವಲ್ಲಿ ಸಫಲವಾಗಿಲ್ಲ ಎನ್ನುವುದೂ ಸತ್ಯ.
ಇವೆಲ್ಲವನ್ನು ಒತ್ತಟ್ಟಿಗಿಟ್ಟು ಲೋಕಪಾಲ ಕಾಯ್ದೆಯ ಪೂರ್ವಾಪರಗಳತ್ತ ಒಂದು ನೋಟ ಹರಿಸೋಣ
ಪ್ರಥಮಬಾರಿಗೆ ಲೋಕಪಾಲ ಕಾಯ್ದೆಯನ್ನು ೧೯೬೮ ರಲ್ಲಿ ಮಂಡಿಸಲಾಯ್ತು, ಅದಾದ ನಂತರ ೧೯೭೧, ೭೭, ೮೫, ೮೯, ೯೬, ೯೮ ಮತ್ತು ೨೦೦೧ರಲ್ಲಿ ಒಟ್ಟು 8 ಬಾರಿ ಲೋಕಪಾಲ ಮಸೂದೆಯನ್ನು ಸಂಸತ್‌ನಲ್ಲಿ ಮಂಡಿಸಿದೆ. ಯಾವಸಾರಿಯೂ ಸಹ ಕಾಯ್ದೆಯ ಅಂಗೀಕಾರವಾಗಲೇ ಇಲ್ಲ. ಯಾರಿಗೆ ತಾನೆ ದೊಣ್ಣೆ ಕೊಟ್ಟು ಹೊಡೆಸಿಕೊಳ್ಳಕೆ ಇಷ್ಟ ಅಲ್ಲವೇ? ಆದರೆ ಇದರಿಂದ ಹಲ್ಲಿಲ್ಲದ ಹಾವು ಲೋಕಾಯುಕ್ತ ಹುದ್ದೆ ಸೃಷ್ಠಿಯಾಯ್ತು.

ಲೋಕಾಯುಕ್ತ ಸಂಸ್ಥೆ ಮತ್ತು ಅದರ ಅಧಿಕಾರವ್ಯಾಪ್ತಿ


ಅರ್ಹತೆ
ಲೋಕಾಯುಕ್ತ ಹುದ್ದೆಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಥವಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಕೆಲಸ ಮಾಡಿರಬೇಕು. ಅದೇ ರೀತಿ ಉಪ ಲೋಕಾಯುಕ್ತ ಹುದ್ದೆಗೆ ಏರುವ ವರು ಹೈಕೋರ್ಟ್ ನ್ಯಾಯಮೂರ್ತಿಯಾಗಿ ಕೆಲಸ ಮಾಡಿರಬೇಕು.
ಲೋಕಾಯುಕ್ತ, ಉಪ ಲೋಕಾಯುಕ್ತರ ನೇಮಕ
ಇವರನ್ನು ನೇಮಿಸುವುದು ರಾಜ್ಯಪಾಲರು. ಮುಖ್ಯಮಂತ್ರಿಗಳು, ಹೈಕೋರ್ಟ್ ಮುಖ್ಯ ನ್ಯಾಯ ಮೂರ್ತಿ, ವಿಧಾನಸಭೆ ಅಧ್ಯಕ್ಷ, ವಿಧಾನ ಪರಿಷತ್ ಸಭಾಪತಿ, ಎರಡೂ ಸದನಗಳ ಪ್ರತಿಪಕ್ಷ ನಾಯಕರ ಜತೆ ಸಮಾಲೋಚನೆ ನಡೆಸಿ ಲೋಕಾಯುಕ್ತ ಮತ್ತು ಉಪ ಲೋಕಾಯುಕ್ತರು ಯಾರು ಎಂಬುದನ್ನು ನಿರ್ಧರಿಸಬೇಕು.
ಈ ಸಂದರ್ಭದಲ್ಲಿ ಮೇಲಿನ ಅರ್ಹತೆಯನ್ನು ಕಡ್ಡಾಯವಾಗಿ ಪಾಲಿಸಬೇಕು. ಈ ಎಲ್ಲಾ ಪ್ರಕ್ರಿಯೆ ಮುಗಿದ ಬಳಿಕ ಲೋಕಾಯುಕ್ತ ಅಥವಾ ಉಪ ಲೋಕಾಯುಕ್ತರ ಹೆಸರನ್ನು ರಾಜ್ಯಪಾಲರಿಗೆ ಕಳುಹಿಸಬೇಕು. ರಾಜ್ಯಪಾಲರು ಈ ನೇಮಕವನ್ನು ಅಧಿಕೃತವಾಗಿ ಪ್ರಕಟಿಸುತ್ತಾರೆ.
ಅಧಿಕಾರ ವ್ಯಾಪ್ತಿ
ಮುಖ್ಯಮಂತ್ರಿ, ಸಚಿವ ಸಂಪುಟದ ಸದಸ್ಯರು, ರಾಜ್ಯ ಸರ್ಕಾರದ ಎಲ್ಲಾ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಪೋರೇಷನ್‌ಗಳ ಆಡಳಿತ ಮಂಡಳಿಗಳು, ಸಹಕಾರ ಸಂಘಗಳು, ಸರ್ಕಾರಿ ಸ್ವಾಮ್ಯದ ಎಲ್ಲಾ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಅಧಿಕಾರಿಗಳು, ರಾಜ್ಯ ಸರ್ಕಾರ ಶೇ. ೫೦ಕ್ಕಿಂತ ಹೆಚ್ಚು ಷೇರುಗಳನ್ನು ಹೊಂದಿರುವ ಕಂಪನಿಗಳು, ನೋಂದಣಿ ಮಾಡಿದ ಸೊಸೈಟಿಗಳು ಲೋಕಾಯುಕ್ತರ ವ್ಯಾಪ್ತಿಗೆ ಬರುತ್ತವೆ.
ಈ ಪೈಕಿ ಕೆ‌ಎ‌ಎಸ್‌ವರೆಗಿನ ಅಧಿಕಾರಿಗಳು ಉಪ ಲೋಕಾಯುಕ್ತ ವ್ಯಾಪ್ತಿಗೆ ಬಂದರೆ, ಅದಕ್ಕಿಂತ ಮೇಲಿನ ಅಧಿಕಾರಿಗಳು, ಜನಪ್ರತಿನಿಧಿಗಳು ಲೋಕಾಯುಕ್ತರ ಅಧಿಕಾರ ವ್ಯಾಪ್ತಿಗೆ ಬರುತ್ತಾರೆ.
ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆ ಉದಯ
ದೇಶದಲ್ಲೇ ಮುಂಚೂಣಿಯಲ್ಲಿರುವ ರಾಜ್ಯ ಲೋಕಾಯುಕ್ತ ಸಂಸ್ಥೆ ರಾಜ್ಯದಲ್ಲಿ ಆರಂಭವಾಗಿದ್ದು ಮಾತ್ರ ಸ್ವಲ್ಪ ತಡವಾಗಿ. ಮೊದಲ ಲೋಕಾಯುಕ್ತ ಸಂಸ್ಥೆ ೧೯೭೧ರಲ್ಲಿ ಮಹಾರಾಷ್ಟ್ರದಲ್ಲಿ ಆರಂಭವಾದರೆ, ಇದು ರಾಜ್ಯಕ್ಕೆ ಕಾಲಿಟ್ಟಿದ್ದು ೧೯೮೪ರಲ್ಲಿ. ಆಗ ಈ ಸಂಸ್ಥೆಗೆ ಅಷ್ಟೊಂದು ಮಹತ್ವ ಇರಲಿಲ್ಲ.೧೯೮೪ರಲ್ಲಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ ಆರಂಭವಾದ ಲೋಕಾಯುಕ್ತ ಸಂಸ್ಥೆಗೆ ಆರಂಭದಲ್ಲಿ ಪರಮಾಧಿಕಾರ ನೀಡಲಾಗಿತ್ತು.
ಆದರೆ, ನಂತರ ಅದನ್ನು ವಾಪಸ್ ಪಡೆಯಲಾಯಿತು. ಇದು ಕೂಡ ಹೆಗಡೆ ಕಾಲದಲ್ಲೆ. ಲೋಕಾ ಯುಕ್ತರ ಕೆಲಸ ಕೇವಲ ಭ್ರಷ್ಟಾಚಾರ ನಿಯಂತ್ರಣ ಮಾತ್ರವಲ್ಲ. ಭ್ರಷ್ಟಾಚಾರ ನಿಯಂತ್ರಣ ಅವರ ಒಟ್ಟಾರೆ ಕೆಲಸದ ಶೇ. ೧೦ರಷ್ಟು ಮಾತ್ರ. ಉಳಿದಂತೆ ಸರ್ಕಾರದ ಸೌಲಭ್ಯಗಳನ್ನು ಜನರಿಗೆ ಒದಗಿಸುವುದು, ಈ ವಿಚಾರದಲ್ಲಿ ಅನ್ಯಾಯ ಆಗಿದ್ದರೆ ಅದನ್ನು ಸರಿಪಡಿಸುವುದು ಕೂಡ ಲೋಕಾ ಯುಕ್ತ ಸಂಸ್ಥೆಯ ಪ್ರಮುಖ ಕೆಲಸ.
ಆದರೆ, ಭ್ರಷ್ಟಾಚಾರ ನಿಯಂತ್ರಣಕ್ಕೆ ಹೆಚ್ಚು ಜನ ಬೆಂಬಲ ಮತ್ತು ಪ್ರಚಾರ ಸಿಕ್ಕಿದ್ದರಿಂದ ಅದುವೇ ಪ್ರಧಾನ ಕೆಲಸ ಎಂಬಂತೆ ಬಿಂಬಿತವಾಯಿತು.
ಅನಾನುಕೂಲತೆಗಳು
ನಿಜವಾಗಿಯೂ ಲೋಕಾಯುಕ್ತ ಸಂಸ್ಥೆ ಒಂದು ಹಲ್ಲಿಲ್ಲದ ಹಾವು. ಅಧಿಕಾರಿಗಳ ವಿರುದ್ಧ ದಾಳಿ ನಡೆಸುವ, ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡುವ ಅಧಿಕಾರ ಮಾತ್ರ ಈ ಸಂಸ್ಥೆಗೆ ಇದೆ. ಮತ್ತೊಂದು ಪ್ರಮುಖ ಅಂಶವೆಂದರೆ ಉಪ ಲೋಕಾಯುಕ್ತರಿಗೆ ಇರುವ ಅಧಿಕಾರವೂ ಲೋಕಾಯುಕ್ತರಿಗೆ ಇಲ್ಲ. ಯಾವುದೇ ವಿಚಾರವಾಗಲಿ ಉಪ ಲೋಕಾಯುಕ್ತರು ತಮ್ಮ ವ್ಯಾಪ್ತಿಗೆ ಬರುವ ಪ್ರಕರಣಗಳ ಬಗ್ಗೆ ಸ್ವಯಂಪ್ರೇರಿತ ತನಿಖೆ ಕೈಗೊಳ್ಳಬಹುದು.
ಆದರೆ, ಲೋಕಾಯುಕ್ತರಿಗೆ ಆ ಅಧಿಕಾರ ಇಲ್ಲ. ಯಾರಾದರೂ ದೂರು ನೀಡಿದರೆ ಅಥವಾ ಸರ್ಕಾರ ವಹಿಸಿದರೆ ಮಾತ್ರ ತನಿಖೆ ನಡೆಸಬೇಕು. ಅದೇ ರೀತಿ ಸರ್ಕಾರದ ಅನುಮತಿ ಇಲ್ಲದೆ ಅಧಿಕಾರಿ ಗಳನ್ನು ವಿಚಾರಣೆಗೆ ಒಳಪಡಿಸುವ ಅಧಿಕಾರವೂ ಲೋಕಾಯುಕ್ತರಿಗೆ ಇಲ್ಲ.
ಲೋಕಾಯುಕ್ತ ಸಂಸ್ಥೆ
ಆಡಳಿತ ಶಾಖೆ. ರಿಜಿಸ್ಟ್ರಾರ್ (ನಿಬಂಧಕರು) ಈ ವಿಭಾಗದ ಮುಖ್ಯಸ್ಥರು. ದೂರು ಸ್ವೀಕರಿಸುವ ಮತ್ತು ಅಧಿಕಾರಿಗಳಿಗೆ ಇದನ್ನು ವಿತರಿಸುವ ಅಧಿಕಾರ ಹೊಂದಿದ್ದಾರೆ.
ಪೊಲೀಸ್ ಶಾಖೆ. ಎಡಿಜಿಪಿ ಇದರ ಮುಖ್ಯಸ್ಥರು. ಇವರ ಕೈಕೆಳಗೆ ಆಯಾ ಜಿಲ್ಲಾ ಮಟ್ಟದಲ್ಲಿ ಲೋಕಾಯುಕ್ತ ಪೊಲೀಸರು ಇರುತ್ತಾರೆ. ಭ್ರಷ್ಟಾಚಾರ ಕುರಿತ ತನಿಖೆ ಪೊಲೀಸರು ನಡೆಸುತ್ತಾರೆ.
ತಾಂತ್ರಿಕ ವಿಭಾಗ. ಮುಖ್ಯ ಎಂಜಿನಿಯರ್ ನೇತೃತ್ವದಲ್ಲಿ ಇದು ಕಾರ್ಯನಿರ್ವಹಿಸುತ್ತದೆ. ಲೋ ಕೋಪಯೋಗಿ, ನೀರಾವರಿ ಇಲಾಖೆ ಇತ್ಯಾದಿ ತಾಂತ್ರಿಕ ಇಲಾಖೆಗೆ ಸಂಬಂಧಿಸಿದ ತನಿಖೆ ನಡೆಸುತ್ತಾರೆ.
ಈ ಮೂರೂ ವಿಭಾಗಗಳಿಗೆ ಲೋಕಾಯುಕ್ತರು ಮತ್ತು ಉಪ ಲೋಕಾಯುಕ್ತರು ಮುಖ್ಯಸ್ಥರಾಗಿರು ತ್ತಾರೆ. ಆದರೆ, ಲೋಕಾಯುಕ್ತರು ಮತ್ತು ಉಪ ಲೋಕಾಯುಕ್ತರು ಪ್ರತ್ಯೇಕವಾಗಿ ಕೆಲಸ ಮಾಡು ತ್ತಾರೆ. ಯಾರಿಗೆ ಯಾರೂ ಅಧೀನರಲ್ಲ.
ಇಷ್ಟಕ್ಕೂ ಈ ಲೋಕಾಯುಕ್ತ ಅಥವಾ ಉಪ ಲೋಕಾಯುಕ್ತ ಎಂಬ ಸಂಸ್ಥೆ ಹುಟ್ಟಿಕೊಳ್ಳಲು ಮೂಲ ಓಂಬುಡ್ಸ್‌ಮನ್. ೧೯೬೦ರ ದಶಕದಲ್ಲಿ ದೇಶಕ್ಕೆ ಕಾಲಿಟ್ಟ ಓಂಬುಡ್ಸ್‌ಮನ್ ವ್ಯವಸ್ಥೆಯೇ ಮುಂದಿನ ದಿನಗಳಲ್ಲಿ ಲೋಕಾಯುಕ್ತ ಸಂಸ್ಥೆಯಾಗಿ ಪರಿವರ್ತನೆ ಹೊಂದಿತು.
ಲೋಕಾಯುಕ್ತ ಅಥವಾ ಉಪ ಲೋಕಾಯುಕ್ತ ನೇಮಕ ವಿಚಾರದಲ್ಲಿ ಬೇರೆ ಬೇರೆ ರಾಜ್ಯಗಳು ತಮ್ಮದೇ ಆದ ನಿಯಮಗಳನ್ನು ಹೊಂದಿದೆ. ಕೆಲವು ರಾಜ್ಯಗಳಲ್ಲಿ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಅಥವಾ ಹೈಕೋರ್ಟ್‌ನಲ್ಲಿ ೭ ವರ್ಷ ನ್ಯಾಯಮೂರ್ತಿಯಾಗಿದ್ದರೆ ಸಾಕು. ಅದೇ ರೀತಿ ಉಪ ಲೋಕಾಯುಕ್ತರಾಗುವವರು ಹೈಕೋರ್ಟ್ ನ್ಯಾಯಮೂರ್ತಿಯಾಗಿರಬೇಕು ಎಂಬ ನಿಯಮ ರಾಜ್ಯದಲ್ಲಿ ಜಾರಿಯಲ್ಲಿದೆ.
ಆದರೆ, ಇತರ ಕೆಲವು ರಾಜ್ಯಗಳಲ್ಲಿ ಸರ್ಕಾರದ ಕಾರ್ಯದರ್ಶಿ ಅಥವಾ ಏಳು ವರ್ಷ ಜಿಲ್ಲಾ ನ್ಯಾಯಾಧೀಶರು ಅಥವಾ ಕೇಂದ್ರ ಸರ್ಕಾರದ ಜಂಟಿ ಕಾರ್ಯದರ್ಶಿ ಹುದ್ದೆ ಏರಿದವರು ಈ ಹುದ್ದೆಗೆ ಅರ್ಹರು. ಇನ್ನು ದೂರಿನ ವಿಚಾರದಲ್ಲೂ ಸಾಕಷ್ಟು ಬದಲಾವಣೆಗಳಿವೆ. ಕೆಲವು ರಾಜ್ಯ ಗಳಲ್ಲಿ ದೂರುಗಳನ್ನು ಇಂತಿಷ್ಟು ಅವಧಿಯಲ್ಲಿ ನೀಡಬೇಕು ಎಂದು ಇದೆ. ಇನ್ನು ಕೆಲವು ಕಡೆ ಅಂತಹ ಯಾವುದೇ ಕಾಲಮಿತಿ ಇಲ್ಲ. ಮತ್ತೊಂದೆಡೆ ದೂರು ನೀಡಲು ನಿರ್ದಿಷ್ಟ ಶುಲ್ಕ ಪಾವತಿ ಸಬೇಕು ಎಂಬ ನಿಯಮ ಇದೆ.

ಲೋಕಪಾಲ ಕಾಯ್ದೆಯೋ ಜನ ಲೋಕಪಾಲ ಕಾಯ್ದೆಯೋ?
ಇಲ್ಲಿ ಕೇಳಿಬರುತ್ತಿರುವ ಲೋಕಪಾಲ, ಜನ ಲೋಕಪಾಲ ಎಂಬ ಪದಗಳಿಗೆ ಒಂದಿಷ್ಟು ಸ್ಪಷ್ಟನೆ: ಲೋಕಪಾಲ ಮಸೂದೆ ಎಂಬುದು ಸರಕಾರ ಸಿದ್ಧಪಡಿಸುತ್ತಿರುವ ಮಸೂದೆಯಾಗಿದ್ದು, ಜನ ಲೋಕಪಾಲ ಮಸೂದೆ ಎಂಬುದು ಅಣ್ಣಾ ಹಜಾರೆ ನೇತೃತ್ವದಲ್ಲಿ ಜನರಿಂದಲೇ ರೂಪುಗೊಳ್ಳುವ ಮಸೂದೆಯಾಗಿರುತ್ತದೆ
ಸರಕಾರದ ಪ್ರಸ್ತಾಪದಲ್ಲಿರುವುದು - ಲೋಕಪಾಲ ಕಾಯ್ದೆ
ಲೋಕಪಾಲರಿಗೆ ಭ್ರಷ್ಟರ ವಿರುದ್ಧ ತಾವಾಗಿಯೇ ಕ್ರಮ ಆರಂಭಿಸುವ ಅಧಿಕಾರವಿರುವುದಿಲ್ಲ ಅಥವಾ ಅವರು ಭ್ರಷ್ಟಾಚಾರದ ಕುರಿತು ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸುವಂತಿಲ್ಲ. ಲೋಕಸಭಾ ಸ್ಪೀಕರ್ ಅಥವಾ ರಾಜ್ಯಸಭಾ ಅಧ್ಯಕ್ಷರು ಅನುಮತಿ ಮೂಲಕ ಬಂದ ದೂರುಗಳನ್ನು ಮಾತ್ರವೇ ಅದು ತನಿಖೆ ನಡೆಸಬೇಕು. (ಇದು ಆಡಳಿತಾರೂಢ ಪಕ್ಷಕ್ಕೆ ತನ್ನನ್ನು ತಾನು ರಕ್ಷಿಸಿಕೊಳ್ಳುವ ಉಪಾಯ.)
ಲೋಕಪಾಲ ಎಂಬುದು ಸಲಹಾ ಸಂಸ್ಥೆಯಾಗಿರುತ್ತದೆ. ಅದು ಅದರ ತನಿಖಾ ವರದಿಯನ್ನು ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರವಿರುವ "ಜವಾಬ್ದಾರಿಯುತ ಮಂಡಳಿಗೆ" ಸಲ್ಲಿಸುತ್ತದೆ. (ಹಾಗಿದ್ದರೆ, ಲೋಕಪಾಲರು ಪ್ರಧಾನಮಂತ್ರಿ ವಿರುದ್ಧವೇ ವರದಿ ಸಲ್ಲಿಸಿದರೆ, ಅವರ ವಿರುದ್ಧ ಕ್ರಮ ಕೈಗೊಳ್ಳುವ ನಿರ್ಣಯ ತೆಗೆದುಕೊಳ್ಳುತ್ತದೆಯೇ?)
ಲೋಕಪಾಲರಿಗೆ ಪೊಲೀಸ್ ಅಧಿಕಾರಗಳಿಲ್ಲ. ಅದರ ಎಲ್ಲ ತನಿಖೆಗಳು 'ಪ್ರಾಥಮಿಕ ತನಿಖೆಗಳಿಗೆ' ಸಮ. (ಹಾಗಿದ್ದರೆ, ಅದರ ವರದಿ ಅಂಗೀಕೃತವಾದರೆ ಚಾರ್ಜ್ ಶೀಟ್ ಸಲ್ಲಿಸುವುದು ಯಾರು?)
ಮಸೂದೆ ಜಾರಿಗೆ ಬಂದ ಬಳಿಕ ಕೇಂದ್ರೀಯ ತನಿಖಾ ಮಂಡಳಿಯ ಪಾತ್ರ ಏನು ಎಂಬುದರ ಉಲ್ಲೇಖವಿಲ್ಲ. ರಾಜಕಾರಣಿಗಳ ವಿರುದ್ಧ ತನಿಖೆ ಕೈಗೊಳ್ಳುವ ಸಿಬಿಐ ಅಧಿಕಾರ ಹೋಗುತ್ತದೆಯೇ?
ಭ್ರಷ್ಟಾಚಾರಕ್ಕೆ ತೀರಾ ಸಣ್ಣ ಶಿಕ್ಷೆ - ಕನಿಷ್ಠ ೬ ತಿಂಗಳು, ಗರಿಷ್ಠ ೭ ವರ್ಷ.
ಅಕ್ರಮ ಸಂಪತ್ತು ಹೊರತೆಗೆಯುವ ಅಧಿಕಾರವಿಲ್ಲ. ಅಂದರೆ ಯಾವುದೇ ಭ್ರಷ್ಟ ವ್ಯಕ್ತಿಯು ಜೈಲಿನಿಂದ ಹೊರಬಂದ ಬಳಿಕ, ಅದೇ ಹಣ-ಸಂಪತ್ತನ್ನು ಬಳಸಿಕೊಳ್ಳಬಹುದಾಗಿದೆ.
ಈ ಅಂಶಗಳನ್ನು ನೋಡಿದ ಯಾರಿಗಾದರೂ ತಿಳಿಯುತ್ತದೆ ಇದೊಂದು ಕಣ್ಣೊರುವ ತಂತ್ರದ ಕಾಯ್ದೆ ಎಂದು
ಇನ್ನು ಜನ ಲೋಕಪಾಲ ಕಾಯ್ದೆ ಅಂದ್ರೆ ಅಣ್ಣಾ ಹಜಾರೆಯವರ ಪ್ರಸ್ತಾಪದ ಕಾಯ್ದೆಯಬಗ್ಗೆ ಗಮನ ಹರಿಸೋಣ
ಅಣ್ಣಾ ಹಜಾರೆಯವರ ಪ್ರಸ್ತಾಪದ - ಜನ ಲೋಕಪಾಲ ಕಾಯ್ದೆ
ಯಾವುದೇ ಕೇಸಿನಲ್ಲಿ ತಾವಾಗಿಯೇ ತನಿಖೆ ಆರಂಭಿಸುವ ಹಕ್ಕು ಲೋಕಪಾಲರಿಗೆ ಇರಬೇಕು ಮತ್ತು ನೇರವಾಗಿ ಸಾರ್ವಜನಿಕರಿಂದ ಅವರು ದೂರುಗಳನ್ನು ಸ್ವೀಕರಿಸಬಹುದು. ಯಾವುದೇ ಕೇಸಿನ ತನಿಖೆ ಆರಂಭಿಸಲು ಯಾರದೇ ಅನುಮತಿ ಅಥವಾ ಉಲ್ಲೇಖಗಳು ಬೇಕಾಗಿಲ್ಲ.
ಲೋಕಪಾಲ ಎಂಬುದು ಸಲಹಾ ಸಂಸ್ಥೆಯಲ್ಲ. ಕೇಸಿನ ವಿಚಾರಣೆ ಪೂರ್ಣಗೊಳಿಸಿದ ಬಳಿಕ ಶಿಕ್ಷೆ ವಿಧಿಸುವ ಹಕ್ಕು ಕೂಡ ಅದಕ್ಕೆ ಇರಬೇಕು. ಯಾವುದೇ ಸರಕಾರಿ ನೌಕರರ ವಿರುದ್ಧ ಶಿಸ್ತು ಕ್ರಮ ಆದೇಶಿಸುವ ಅಧಿಕಾರವನ್ನೂ ಅದು ಹೊಂದಿರಬೇಕು
ಲೋಕಪಾಲರಿಗೆ ಪೊಲೀಸ್ ಅಧಿಕಾರ ಬೇಕು. ಎಫ್ಐಆರ್ ದಾಖಲು ಮಾಡಲು, ಕ್ರಿಮಿನಲ್ ತನಿಖೆ ನಡೆಸಲು ಮತ್ತು ದಂಡನಾ ಕ್ರಮಗಳನ್ನು ಕೈಗೊಳ್ಳಲು ಅವರಿಗೆ ಅಧಿಕಾರ ಬೇಕು.
ಸಿಬಿಐಯ ಭ್ರಷ್ಟಾಚಾರ-ನಿಗ್ರಹ ಘಟಕವನ್ನು ಲೋಕಪಾಲ ಜೊತೆ ವಿಲೀನಗೊಳಿಸಬೇಕು. ಈ ಮೂಲಕ, ಭ್ರಷ್ಟಾಚಾರ ವಿರುದ್ಧ ಕ್ರಮ ಕೈಗೊಳ್ಳಲು ಏಕೈಕ ಸ್ವತಂತ್ರ ಸಂಸ್ಥೆ ಇರುವಂತಾಗುತ್ತದೆ.
ಶಿಕ್ಷೆ ಕಠಿಣವಾಗಬೇಕು. ಕನಿಷ್ಠ 5 ವರ್ಷಗಳು ಹಾಗೂ ಗರಿಷ್ಠ ಜೀವಾವಧಿ ಶಿಕ್ಷೆ.
ಭ್ರಷ್ಟಾಚಾರದಿಂದಾಗಿ ಸರಕಾರಕ್ಕೆ ಆಗುವ ನಷ್ಟವನ್ನು ಆಪಾದಿತರಿಂದಲೇ ವಸೂಲು ಮಾಡಬೇಕು.

ಹಜಾರೆಯವರ ಪ್ರಸ್ತಾವನೆಗಳೇನೋ ಜನ ಸ್ನೇಹಿ ಎನ್ನುವುದೇನೋ ಸರಿ. ಆದರೆ ಈ ಕಾಯ್ದೆ ಅಂಗೀಕಾರವಾಗಿ ಭ್ರಷ್ಟಾಚಾರ ತೊಲಗುವುದೋ ಅಥವಾ ಅಂಗೀಕಾರವಾಗದ ೯ನೇ ಕಾಯ್ದೆಯಾಗುವುದೋ ಕಾದು ನೋಡಬೇಕಿದೆ

ಮೇಲ್ನೋಟಕ್ಕೆ ಇದು ಸಾಧ್ಯವಾಗಬಹುದು, ಎಂದು ಅನ್ನಿಸುವುದು ಸಹಜವೇ, ಆದರೆ ಈ ಹಿಂದೆ ಶುರುವಾದ ಹೋರಾಟಗಳು ಅವುಗಳು ಕಂಡ ಅಂತ್ಯಗಳ ಬಗ್ಗೆ ಹಿನ್ನೋಟ ಹರಿಸಿದರೆ ಇದೂ ಸಹ ಅಂಗೀಕಾರವಾಗುವುದಿಲ್ಲ ಎನಿಸುತ್ತದೆ, ಆದರೂ ಸಹ ಅದು ದುರ್ಬಲವಾಗಿರುತ್ತದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಇದಕ್ಕೆ ಪುಷ್ಠಿ ನೀಡುವಂತೆ ಕಾಂಗ್ರೇಸ್ ಪಕ್ಷವು ಆಗಲೇ ಒಡೆದು ಆಳುವ ನೀತಿಯನ್ನು ಅನುಸರಿಸಲು ಸಚಿವರುಗಳಾದ ಕಪಿಲ್ ಸಿಬಲ್, ದಿಗ್ವಿಜಯ್ ಸಿಂಗ್ ಅವರುಗಳನ್ನು ಮಾಧ್ಯಮದ ಮುಂದೆ ಕೂರಿಸಿ ದಿನಕ್ಕೊಂದು ಹೇಳಿಕೆ ಕೊಡಿಸುತ್ತಿದ್ದರೆ, ಇತ್ತ ಕುಮಾರಸ್ವಾಮಿಯವರು ತಮ್ಮ ಸ್ಥಾನಕ್ಕೆ "ತಕ್ಕ" ಮಾತಗಳನ್ನಾಡುತ್ತಿದ್ದಾರೆ. ಇದಕ್ಕೆ ತಕ್ಕನಾಗಿ "ನ್ಯೂಸೆನ್ಸ್" ಚಾನೆಲ್ ಗಳು ವಿಚಿತ್ರವಾಗಿ ವರ್ತಿಸಿ ಜನರ ಮನಸ್ಸನ್ನು "ಪರಿವರ್ತಿಸಲು” ಅವಿರತ ಶ್ರಮಿಸುತ್ತಿವೆ.

ಏನೇ ಆಗಲಿ ಒಂದು ಒಳ್ಳೆಯ ಕಾಯ್ದೆ ರೂಪುಗೊಂಡು ಭ್ರಷ್ಟಾಚಾರ ತಹಂಬದಿಗೆ ಬರಲಿ ಎನ್ನುವುದು ನಮ್ಮೆಲ್ಲರ ಆಶಯವಲ್ಲವೇ?

2 ಕಾಮೆಂಟ್‌ಗಳು:

Unknown ಹೇಳಿದರು...

ಉಮಾಶಂಕರ್ ರವರೆ,
ಯಾವ ರಾಜಕೀಯ ಪಕ್ಷವು ಅಧಿಕಾರಕ್ಕೆ ಬಂದರೂ ಲೋಕಾಯುಕ್ತಕ್ಕೆ ಅದೇ ಸಮಸ್ಯೆಗಳು, ಅದೇ ಅಡೆತಡೆಗಳು...!! ಜನ ಬಂದು ಹೋಗುತ್ತಾರೇ ಹೊರತು ರಾಜಕೀಯ ಮತ್ತು ಅದರ ಸ್ವಚ್ಚತೆ ಆಗುವುದು ಅಷ್ಟಕಷ್ಟೇ ಇದೆ.. ಇದು ನಮ್ಮ ಕಾನೂನಿಗೆ ಹಿಡಿದ ಕನ್ನಡಿ...

ಉಮಾಶಂಕರ ಬಿದರಕೋಟೆ ಸಣ್ಣೇಗೌಡ ಹೇಳಿದರು...

ನಿಮ್ಮ ಮಾತು ನಿಜ ವಿನಯ್ ಸರ್,
ಏನೇ ಆದ್ರೂ ಈ ಹೋರಾಟ ಒಣ್ದು ಆಶಾಕಿರಣ, ಹಾಗಾಗಿ ಕಾದು ನೋಡೋಣ