ಶನಿವಾರ, ಫೆಬ್ರವರಿ 20, 2010

ವಸೀಮನೂ ಅವನ 'ಖನಡ'ವೂ

ಮಾರ್ಚ್ ೨೭ ೨೦೦೭, ಇದು ನನ್ನ ಮತ್ತು ವಸೀಮ್ ಅಹಮ್ಮದ್ ಭೇಟಿಯಾದ ದಿನ. ಆ ದಿನ ನನಗೆ ಚೆನ್ನಾಗಿ ನೆನಪಿರಲು ಕಾರಣ ಅವನ ಕನ್ನಡ ಪದಗಳ ಉಚ್ಚಾರ.



"ಏನಯ್ಯ ವಸೀಮ್? ಕನ್ನಡ ಸರಿಯಾಗ್ ಮಾತಾಡಯ್ಯ" ಅಂತ ಯಾರಾದ್ರೂ ಈಗ ಕೇಳಿದ್ರೂ



"ಸರ್! ಯಾರ್ಗೆ ಹ್ಹೇಳಿದ್ದೂ? ಸರ್, ನಾಂಗೆ ಖನಾಡ ಬರಲ್ಲಾಂತಃ?'' ಎಂಬ ಮರುಪ್ರಶ್ನೆಯನ್ನು ಬಹಳ ಆತ್ಮವಿಶ್ವಾಸದಿಂದ ಎಸೆಯುತ್ತಾನೆ.



ಅವನ ಆ ಆತ್ಮವಿಶ್ವಾಸವೇ ಅವನನ್ನ ನಮ್ಮ ಕಂಪನಿಗೆ ಸೇರಿಸಿಕೊೞಲು ನನಗೆ ಪ್ರೇರೇಪಿಸಿ ಅವನನ್ನ ಆಯ್ಕೆಮಾಡಿದೆ. ಅದೂ ಅಲ್ಲದೆ ಕನ್ನಡಕ್ಕಿಂತ ನನಗೆ ವೈದ್ಯರಬಳಿ ನಮ್ಮ ಉತ್ಪನ್ನಗಳ ಬಗ್ಗೆ ಮಾತನಾಡಲು ಇಂಗ್ಲೀಷ್ ನ ಅವಶ್ಯಕತೆ ಸ್ವಲ್ಪ ಹೆಚ್ಚು, ಜೊತೆಗೆ ಅವನಿಗೂ ಕೂಡ ಕೆಲಸದ ಅನಿವಾರ್ಯತೆಯೂ ಇತ್ತು, ಅವನಿಗೂ ಕೆಲಸ ಕೊಟ್ಟರೆ ಅವನು ಮಾಡುತ್ತಾನೆ ಎಂಬ ನನ್ನ ನಂಬಿಕೆಯನ್ನು ಅವನು ಸಹ ಹುಸಿ ಮಾಡಲಿಲ್ಲ. ಇರಲಿ ಈಗ ವಿಷಯಕ್ಕೆ ಬರೋಣ.



ವಸೀಮ ತುಂಬಾ ಒೞೆಯ ಹುಡುಗ, ಯಾವುದೇ ದುರಬ್ಯಾಸಗಳಾಗಲಿ, ಸುೞು ಹೇಳುವ ಚಟವಾಗಲಿ, ಅವನ ವಯೋಸಹಜಗುಣವಾದ ಹುಡುಗಿಯರನ್ನು ರೇಗಿಸುವ ಚಾಳಿಯಾಗಲಿ ಇರಲಿಲ್ಲ. ಆದರೆ ನನಗೆ ಕುತೂಹಲವಿದ್ದದ್ದು ಅವನ ಕನ್ನಡ ಪದಗಳ ಉಚ್ಚಾರದಲ್ಲಿ!!! ಅವನ 'ಖನಡ' ವು ನನಗೆ ಅವನೊಡನೆ ಕೆಲಸಕ್ಕೆ ಹೋದಾಗಲೆಲ್ಲ ಕುತೂಹಲಭರಿತ ಅವಾಂತರಗಳನ್ನು ಸೃಷ್ಟಿಸಿವೆಯಲ್ಲದೆ, ಆ ಘಟನೆಗಳನ್ನು ಯಾವಾಗ ಮೆಲುಕು ಹಾಕಿದರೂ ಮನದ ಮೂಲೆಯಲ್ಲಿ ಕಚಗುಳಿ ಬರುವುದು ಖಂಡಿತ.



ಅಂತಹ ಈ ಒಂದು ಅನುಭವವನ್ನು ನೀವೇ ಓದಿ ನೋಡಿ..



ಅವನಷ್ಟೇ ಅಲ್ಲ ಮೈಸೂರು ಮತ್ತು ಬೆಂಗಳೂರು ಭಾಗದ ಬಹುತೇಕ ಮುಸಲ್ಮಾನರ ಕನ್ನಡ ನಮ್ಮ ವಸೀಮನ 'ಖನಡ'ದ ಹಾಗೆಯೇ ಇರುತ್ತದೆ. ಅಂದಮಾತ್ರಕ್ಕೆ ಸ್ವಚ್ಚ ಕನ್ನಡ ಮಾತನಾಡುವವರು ಇಲ್ಲವೆಂದರೆ ನಮ್ಮ ನಾಡಿನ ಸಾರಸ್ವತಲೋಕದ ದಿಗ್ಗಜರಾದ ಶ್ರೀಮಾನ್ ನಿಸಾರ್ ಅಹಮದ್, ಜಾನಪದ ಕವಿ ಕರೀಮ್ ಖಾನ್ ರಂಥವರಿಗೆ ಅವಮಾನ ಮಾಡಿದಂತಾಗುತ್ತದೆ, ಎಲ್ಲೋ ಕೆಲವರ ಉಚ್ಚಾರದಲ್ಲಿ ವ್ಯತಾಸವಿರುತ್ತದೆ. ಹಾಗಾಗಿ ಒಮ್ಮೆ ವಸೀಮನನ್ನೇ ಕೇಳಿದೆ



"ವಸೀಮ್ ನಂಗೆ ಒಂದ್ವಿಷ್ಯ ಅರ್ಥ ಆಗ್ಲಿಲ್ಲ, ನೀನು ಹುಟ್ಟಿ ಬೆಳದದ್ದು ಎಲ್ಲಾ ಮೈಸೂರಿನಲ್ಲೇ, ಆದ್ರೂ ನಿನ್ನ ಕನ್ನಡ ಯಾಕೆ ಹೀಗೆ?"



''ಸಾರ್! ಹೇನ್ ಮಾಡಾದು ನಮ್ಗೆ ಬಚಪನ್ ದಿಂದ ಬಂದ್ಬಿಟ್ಟಿ ಇಂಗೆ ಹಾಗೋಯ್ತು" ಎಂದ.



"ಹಾಗಾದ್ರೆ ನೀನು ಸ್ಕೂಲು ಕಾಲೇಜ್ನಲ್ಲಿ ಕನ್ನಡ ಹ್ಯಾಗ್ ಪಾಸ್ಮಾಡ್ದೆ ಮತ್ತೆ?" ಎಂದು ಕುತೂಹಲದಿಂದ ಕೇಳಿದೆ.



"ಸಾರ್! ನಮ್ಗೆ ಕಿರಿಷ್ಣಮೂರ್ತಿ ಅಂತ ಮೇಸ್ಟಾರ್ರು ಒಬ್ಬ್ರು ಇದ್ದ್ರು, ಅವರ್ಗೆ ಚೀಟಿ ಕೊಟ್ಟಿ ಎಕ್ಸಾಂದಲ್ಲಿ ಬರಿಸ್ಬಿಟ್ಟಿ ಪಾಸ್ ಮಾಡ್ಸಿದ್ದು" ಅಂದ ಅಷ್ಟೇ ಮುಗ್ದತೆಯಿಂದ.



ಸಧ್ಯ! ಅವನಿಗೂ ಕನ್ನಡ ಓದಲು ಬರೆಯಲು ಬರುತ್ತದಲ್ಲ ಎಂದು ನನಗೆ ಬಹಳ ಖುಷಿಯಾಯ್ತು. ಅದನ್ನು ಹೊರ ತೋರಿಸದೆ, ಅವನು ಕನ್ನಡವನ್ನು ಹೇಗೆ ಓದುತ್ತಾನೆ ನೋಡೋಣವೆನ್ನಿಸಿ ಆ ತಕ್ಷಣಕ್ಕೆ ಎದುರು ಬಂದ ಆಟೋ ಹಿಂದೆ ಬರೆದಿದ್ದ ಒಂದು ಚಿತ್ರದ ಹೆಸರು ನೋಡಿ



" ಸರಿ ವಸೀಮ್!! ಆ ಆಟೋ ಮೇಲಿರೋದ್ನ ಓದು ನೋಡೋಣ್" ಅಂದೆ



"ಹಷ್ಟೇನಾ ಸಾರ್! " ಎಂದು ಆಟೋ ಕಡೆ ಕಣ್ಣೊರಳಿಸಿ



" ಅಮ್ಮ ತಾಯಿಧೇರೇ" ಅಮ್ದು ಬಿಡೋದೇ!!!



ಆ ಕ್ಷಣದಲ್ಲಿ ನಾನು ಮೂರ್ಚೆ ಬಂದು ಕೆಳಗೆ ಬೀಳುವಂತಾಗುವುದರ ಜೊತೆಗೆ ಹೊಟ್ಟೆ ಹುಣ್ಣಾಗುವಷ್ಟು ನಗು ವತ್ತರಿಸಿ ಬಂತು.



ಏಕೆಂದರೆ ಆಟೋ ಮೇಲಿದ್ದದ್ದು ನಾಗತೀಹೞಿ ಯವರು ನಿರ್ದೇಶಿಸಿರುವ "ಅಮೃತ ಧಾರೆ" ಚಿತ್ರದ ಹೆಸರು



ಅದೇ ಮೊದಲು ಅದೇ ಕೊನೆ ಇಂದಿಗೂ ನಮ್ಮ ವಸೀಮನ 'ಖನಡ" ನನಗೆ ಪ್ರಶ್ನಾತೀತ

ಕಾಮೆಂಟ್‌ಗಳಿಲ್ಲ: