ಭಾನುವಾರ, ಫೆಬ್ರವರಿ 8, 2009

ಬಾಲ್ಯದ ನೆನಪುಗಳು


ಯವ್ವನಿಗರಿಗೆ ಬಾಲ್ಯ ಎನ್ನುವುದು ಎಲ್ಲರಿಗು, ಎಲ್ಲ ರೀತಿಯಲ್ಲೂ, ಎಲ್ಲ ವೇಳೆಯಲ್ಲೂ, ಸಿಹಿಯಾದ ನೆನಪು. ನಾವು ಯಾಕಾದರೂ ಆ ಬಾಲ್ಯವನ್ನು ಕಳೆದು ಕೊಂಡೋ? ನಾವಿನ್ನು ಚಿಕ್ಕ ಮಕ್ಕಳಾಗಿದ್ದರೆ ಎಷ್ಟು ಚೆನ್ನ? ಎಂಬೆಲ್ಲ ಪ್ರಶ್ನೆಗಳು ಯಾವುದಾದರು ಚಿಕ್ಕ ಮಕ್ಕಳನ್ನು ಕಂಡಾಗ ಅನ್ನಿಸದಿರದು. ಅದರಲ್ಲೂ ನಮ್ಮ ಸ್ವಂತ ಕರುಳಕುಡಿಗಲಾಗಿದ್ದರಂತು ಈ ಯೋಚನೆ ಬಹಳ ಕಾಡುತ್ತದೆ.
ಹೌದು!!!! ನನಗೆ ನನ್ನ ಬಾಲ್ಯದ ನೆನಪುಗಳು ಬಹಳವಾಗಿ ನನ್ನನ್ನು ಕಾಡಲು ನನ್ನ ಪುಟ್ಟ ಕಂದ ಕ್ಷಮಾ ಕಾರಣ. ಅವಳ ತೊದಲು ನುಡಿ, ನಾವು ದಿನನಿತ್ಯವೂ ನೋಡುವ ವಸ್ತುಗಳು ಅವಳ ಪುಟ್ಟ ಕಂಗಳಲ್ಲಿ ಮೂಡಿಸುವ ಕಾಂತಿ ಅಂತು ದಿನಬೆಳಗುವ ಸೂರ್ಯನಿಗೆ ಸಮ. ಇದು ಸ್ವಲ್ಪ ಉತ್ಪ್ರೇಕ್ಷೆ ಎನಿಸಿದರೊ ಎಲ್ಲ ತಂದೆ ತಾಯಿಗಳಿಗೂ ಹಾಗೆ ಅನಿಸುವುದು ಸಹಜವಲ್ಲವೇ? ಇದರ ಜೊತೆಗೆ ಇವಳಿಗಿಂತ ಸ್ವಲ್ಪ ದೊಡ್ಡ ಮಕ್ಕಳನ್ನು "ಪಾಪು!!!!" ಎಂದು ಕರೆಯುವುದು ಬೇರೆಯವರಿಗೆ ತಮಾಷೆ ಎನಿಸಿದರೆ ನನಗಂತೂ ಸೋಜಿಗವೇ. ನೀರು ಕುಡಿಯುವ ಲೋಟಕ್ಕೆ "ಟ್ಯುತಾ" ಎನ್ನುವುದರ ಜೊತೆಗೆ ನೀರಿಗೂ ಅದೇ ಹೆಸರಿಂದ ಕರೆಯುವುದು, ನಾನು ನನ್ನ ಅರ್ದಾಂಗಿ ಮೀನಾ ಎಷ್ಟೋಬಾರಿ "ನೀರು" ಎಂದು ಹೇಳಿಕೊಡಲು ಪ್ರಯತ್ನಿಸಿದಾಗ "ಟ್ಯುತಾ" ಎಂದು ನಮಗೆ ತಿರುಮಂತ್ರ ಹೇಳುವುದು, ಕೆಲಸ ಮುಗಿಸಿ ಮನೆಗೆ ಬಂದಾಗ ಅಮ್ಮನ ಬಗ್ಗೆ ತೊದಲುತ್ತಾ "ಅಪ್ಪ ಅಮ್ಮ ನನ್ನ ನಾನ್ನ" ಎನ್ನುವ ನುಡಿಗಳು ಕೆಲಸದ ಆಯಾಸ, ಬೇಸರಗಳಿಗೆ ನಿಜಕ್ಕೂ ಸಂಜೀವಿನಿಯೇ ಸರಿ. ಇಂದು ಮದ್ಯಹ್ನ್ಹ ನಮ್ಮ ಊರಿಗೆ ಅಪ್ಪ ಅಮ್ಮನನ್ನು ನೋಡಲು ಸಕುಟುಂಬ ಸಮೇತವಾಗಿ ಹೋಗಿದ್ದೆ. ಮನೆಯ ಹೊಸಲು ಮೆಟ್ಟುತ್ತಿದ್ದಂತೆ ನಮ್ಮ ಅಪ್ಪನ ತೊಡೆಯ ಮೇಲೆ ನನ್ನ ತಂಗಿಯ ಮಗ ೨ ವರ್ಷದ ಬಾಬು ಕುಳಿತಿದ್ದ. ನನ್ನ ಕಂಕುಳಲ್ಲಿದ್ದ ನನ್ನ ಕುಲಪುತ್ರಿ "ಅಪ್ಪ ಹೂಂ ! ಬಿಯೂ ಬಿಯೂ"(ಬಿಡೂ ಬಿಡೂ ) ಎನ್ನುತ್ತಾ ಕೆಳಗಿಳಿದು ಚಪ್ಪಲಿಯನ್ನು ಬಿಚ್ಚದೆ " ಎಯೇ ! ನಿಲ್ಲೇ ಚಪ್ಪಲಿ ಹಾಕೊಂಡು ಒಳಗೆ ಹೋಗಬಾರದು" ಎನ್ನುವ ನನ್ನ ಮಡದಿಯ ಕೂಗಿಗೆ ಕವಡೆ ಕಿಮ್ಮತ್ತು ಕೊಡದೆ ತನ್ನ ಬಲಗೈ ತೋರುಬೆರಳನ್ನು ಬಾಬುವಿನೆಡೆಗೆ ತೋರುತ್ತ "ತಾತ ! ಪಾಪು! ತಾತ! ಪಾಪು" ಎನ್ನುತ್ತಾ ರಾಕೆಟ್ನಂತೆ ಅಪ್ಪನೆಡೆಗೆ ನುಗ್ಗಿದಳು. ಅವಳ ತಾತ ಅಜ್ಜಿಗೆ ಅವಳು ಬಂದಳು ಎನ್ನುವ ಸಂತೋಷದ ಜೊತೆಗೆ ಮೊಮ್ಮಗಳು ಹೀಗೆ ಸಿತ್ತಿನಲ್ಲಿದ್ದಾಳೆ? ಎನ್ನುವುದು ತಿಳಿಯುವಷ್ಟರಲ್ಲಿ ಬಂದವಳೇ ನಮ್ಮಪ್ಪನ ತೊಡೆಯ ಮೇಲಿದ್ದ ಬಾಬುವನ್ನು "ಏಯ್ ! ಬಾ ! " ಎಂದು ಅವನ ಕೈ ಹಿಡಿದು ಕೆಳಗೆಳೆದು ಆ ಜಾಗವನ್ನು ಅವಳು ಆಕ್ರಮಿಸಿದ್ದು ನಮ್ಮೆಲ್ಲರಲ್ಲೂ ಆಶ್ಚರ್ಯವನ್ನು ತಂದಿತ್ತು. ಅದೇ ಘಟನೆ ಅವಳು ಕೆಲ ವರ್ಷಗಳ ಬಳಿಕ ಪುನರಾವರ್ತಿಸಿದರೆ ? ಖಂಡಿತವಾಗಿಯೂ ಸಿಟ್ಟು ಬರುವುದು ಸಹಜ. ಆದರೆ ಈಗ ಅದೊಂದು ಮಕ್ಕಳಾಟ.
ಈ ಘಟನೆಯ ಬಳಿಕ ನಾನು ಚಿಕ್ಕಂದಿನಲ್ಲಿ ಹೇಗಿದ್ದೆ? ನನ್ನ ಬಾಲ್ಯವನ್ನು ಹೇಗೆ ಕಳೆದೆ ? ಎಂದು ಯೋಚಿಸುವಂತೆ ಮಾಡಿತು.

ಕಾಮೆಂಟ್‌ಗಳಿಲ್ಲ: