ಗುರುವಾರ, ಏಪ್ರಿಲ್ 22, 2010

ಮೀಡಿಯಾದವರಿಗೆ 'ನ್ಯೂಸ್' ಮುಖ್ಯವೋ? ''ನ್ಯೂಸೆನ್ಸ್" ಮುಖ್ಯವೋ?

ಹೌದು! ಇದು ನನ್ನನ್ನು ಬಹಳವಾಗಿ ಕಾಡುತ್ತಿರುವ ಬಹುಕಾಲದ ಉತ್ತರ ಸಿಗದ ಪ್ರಶ್ನೆ! ಅದ್ರಲ್ಲೂ ಮೊನ್ನೆ ನಡೆದ ಬೆಂಗಳೂರಿನ ಕಟ್ಟಡವೊಂದರ ಅಗ್ನಿದುರಂತದ ವರದಿಗಳನ್ನು ವೀಕ್ಷಿಸುತ್ತಿದ್ದಾಗ...!!????



ಅಲ್ಲಿಂದ ವರದಿಮಾಡುತ್ತಿದ್ದ ವರದಿಗಾರರು ಬಳಸುತ್ತಿದ್ದ ವಾಕ್ಯಗಳು ಆ ಸುದ್ದಿಯ ತೀವ್ರತೆಗಿಂತ ವಾಕರಿಕೆ ಬರಿಸುವಂತಿದ್ದದ್ದು ಇಂದಿನ ನ್ಯೂಸ್ ಚಾನೆಲ್'ಗಳು ವಿಕೃತ ಮನಸ್ಸಿನವೇನೋ ಎಂದು ಯಾರಿಗಾದರೂ ಅನ್ನಿಸಲು ಸಾಧ್ಯ.



ಈಗ್ಯೆ ೪-೫ ವರ್ಷಗಳ ಹಿಂದೆ ನಾನು ವಿಶಾಖಪಟ್ಟಣದಲ್ಲಿದ್ದಾಗ 'ಅಲೆಕ್ಸ್' ಎಂಬ ತೆಲುಗು ಸಿನಿಮಾ ಬಂದಿತ್ತು. ಅದರಲ್ಲಿ ನಾಯಕ ವಿಮಾನದಲ್ಲಿ ಸಂಚರಿಸುತ್ತಿದ್ದಾಗ ಅದು ದುರಂತಕ್ಕೀಡಾಗಿ ಸಮುದ್ರಪಾಲಾಗುತ್ತದೆ. ಅದರಲ್ಲಿ ಸಾಕಷ್ಟು ಜನ ಸಾವು ಬದುಕಿನೊಡನೆ ಹೋರಾಡುತ್ತಿರುತ್ತಾರೆ. ಈ ಸುದ್ದಿ ತಿಳಿದ ನ್ಯೂಸ್ ಚಾನಲ್ಲೊಂದು ತನ್ನ ಸ್ವಂತ ಹೆಲಿಕಾಪ್ಟರ್ ನಲ್ಲಿ ಬಂದು ಆ ದೃಶ್ಯಗಳನ್ನು ಸೆರೆಹಿಡಿದು ನೇರ ಪ್ರಸಾರ ಮಾಡುತ್ತಿರುತ್ತದೆ. ಚೆನ್ನಾಗಿ ಈಜು ಬರುತ್ತಿದ್ದ ನಾಯಕ ಸುಮಾರು ಜನರ ಪ್ರಾಣ ಉಳಿಸುತ್ತಾನೆ. ಹೆಲಿಕಾಪ್ಟರ್ ನಲ್ಲಿ ಸೆರೆಹಿಡಿಯುತ್ತಿದ್ದ ಕ್ಯಾಮರಾಮನ್ ವೀಕ್ಷಕ ವಿವರಣೆ ಕೊಡುತ್ತಿದ್ದವನನ್ನು "ಸರ್ ನಮ್ಮ ಹೆಲಿಕಾಪ್ಟರ್ ನ ಸಹಾಯದಿಂದ ಸುಮಾರು ಜನರ ಪ್ರಾಣ ಉಳಿಸಬಹುದಲ್ವೇ? ನಡಿಯಿರಿ ಸಹಾಯ ಮಾಡೋಣ" ಎನ್ನುತ್ತಾನೆ. ಅದಕ್ಕೆ ವೀಕ್ಷಕ ವಿವರಣೆಕಾರ "ಅದು ನಮ್ಮ ಕೆಲಸವಲ್ಲ ಅದರ ಉಸಾಬರಿ ನಿನಗ್ಯಾಕೆ? ಸುಮ್ಮನೆ 'ಬ್ರೇಕಿಂಗ್ ನ್ಯೂಸ್'ನ ಚಿತ್ರೀಕರಿಸು" ಎನ್ನುತ್ತಾನೆ.



ಮೊನ್ನಿನ ಅಗ್ನಿದುರಂತದ ವರದಿಗಳನ್ನು ನೋಡುತ್ತಿದ್ದಾಗ ಮೇಲಿನ ಚಿತ್ರದ ದೃಶ್ಯ ಎಷ್ಟು ಸಲೀಸಾಗಿ ಹೊಂದುತ್ತಿತ್ತು. ಎಲ್ಲಾ ಚಾನಲ್ ಗಳಲ್ಲಿ ಅದು ಸುದ್ದಿಯಾಗಿ ಬಿತ್ತರವಾಗುವುದರ ಜೊತೆಗೆ ಅದನ್ನು ವೀಕ್ಷಿಸುತ್ತಿದ್ದ ವೀಕ್ಷಕರು ಮತ್ತು ದುರಂತಕ್ಕೀಡಾದವರ ಸಂಬಂಧಿಕರು ಅಗತ್ಯಕ್ಕಿಂತ ಹೆಚ್ಚಾಗಿ ಗಾಬರಿ ಮತ್ತು ಖಿನ್ನತೆಗೊಳಗಾಗಿ ಆತಂಕದಿಂದ ಕ್ಷಣಗಳನ್ನು ಖಂಡಿತವಾಗಿಯೂ ಅನುಭವಿಸಿರುತ್ತಾರೆ. ಆ ರೀತಿ ವರದಿಯ ಜೊತೆಗೆ ಸ್ವಲ್ಪವಾದರೂ ಸಾಮಾಜಿಕ ಪ್ರಜ್ಞೆಯಿಂದ ಚಾನಲ್ ಗಳು ವರ್ತಿಸಿದ್ದಿದ್ದರೆ ಅವುಗಳ ಕಾಳಜಿಯನ್ನು ಮೆಚ್ಚಬಹುದಾಗಿತ್ತು. ಅದನ್ನು ಬಿಟ್ಟು "ಅಲ್ಲಿ ನೋಡಿ!! ನೋಡಿ!! ಜೀವಭಯದಿಂದ ಜನರು ಕೆಳಗೆ ಹಾರುತ್ತಿದ್ದಾರೆ!!! ಇದು ನಮ್ಮ ಚಾನೆಲ್ ನಲ್ಲಿ ಮಾತ್ರ ಪ್ರಸಾರವಾಗುತ್ತಿದೆ" ಎಂದು ವಿಕೃತವಾಗಿ ಕೂಗುತ್ತಿದ್ದ ವರದಿಗಾರನನ್ನು ನೋಡಿದಾಗ ಅಂತಹ ಸಮಯದಲ್ಲೂ ಅದು ದುಃಖ ತರುವಂತಹ 'ನ್ಯೂಸ್' ಆಗಿದ್ದರೂ ಚಾನೆಲ್ ಗಳದ್ದು ಶುದ್ದ "ನ್ಯೂಸೆನ್ಸ್" ಅನ್ನದೆ ಮತ್ತಿನ್ನೇನು ಅನ್ನಲು ಸಾದ್ಯ ಅಲ್ಲವೇ? ಇದರ ಜೊತೆಗೆ ಮೃತರು ಮತ್ತು ಗಾಯಾಳುಗಳು ದಾಖಲಾಗಿದ್ದ ಆಸ್ಪತ್ರೆಗೆ ಬಂದು ಅವರ ಸಂಬದಿಕರ ಮುಂದೆ ಮೈಕ್ ಹಿಡಿದು ಹಲ್ಲು ಗಿಂಜುತ್ತಾ



''ಸರ್/ ಮೇಡಂ ನಿಮ್ಮ ಅಭಿಪ್ರಾಯವೇನು?" ಎಂದು ಕೇಳುವ ದೃಷ್ಯಗಳನ್ನು ವೀಕ್ಷಿಸಿದ ಯಾವುದೇ ಹೃದಯವಂತರಿಗೆ ಅದು 'ಇವು ಬುದ್ದಿಗೇಡಿ ಚಾನಲ್'ಗಳು' ಎನ್ನಸಿದೇ ಇರಲು ಸಾಧ್ಯವೇ ಇರಲಿಲ್ಲ. ಇಂತಹ ಚಾನಲ್ ಗಳಿಗೆ ಬರೀ 'ಬ್ರೇಕಿಂಗ್ ನ್ಯೂಸ್' ಮುಖ್ಯವೇ ಹೊರತು, ಅದರಿಂದ ಮನಗಳು 'ಬ್ರೇಕ್' ಆಗುತ್ತವಲ್ಲ ಅದರ ಬಗ್ಗೆ ಅವುಗಳ ವರ್ತನೆ ಮತ್ತು ಚಿಂತನೆ ತಿಳಿಗೇಡಿಗಳಿಗೆ ಅನಾವಾಶ್ಯಕ!!!! ಇದೆಂತಹಾ ವಿಪರ್ಯಾಸ



ಇವರಿಗೆ ಕಿವಿಹಿಂಡಿ ಬುದ್ದಿಹೇಳಲು ಯಾರೂ ಇಲ್ಲವೇ?



ದುರಂತದಲ್ಲಿ ಮಡಿದವರ ಕುಟುಂಬಕ್ಕೆ ಆ ದುಃಖವನ್ನು ಸಹಿಸುವ ಶಕ್ತಿಯನ್ನು ಆ ದೇವರು ಕರುಣಿಸಲಿ, ಹಾಗು ದಯವಿಟ್ಟು ಸುದ್ದಿ ಚಾನೆಲ್ ಗಳು ಇನ್ನಾದರೂ ಸ್ವಲ್ಪ ಪ್ರಜ್ಞೆಯಿಂದ ಸುದ್ದಿ ಪ್ರಸಾರ ಮಾಡಲಿ.

'Fourth Estate' ಎಂದು ಕರೆಸಿಕೊಂಡು ದೇಶದ ಪ್ರಜೆಗಳ ಮುಖವಾಣಿಯಾಗಿ ಅತ್ಯಂತ ಗೌರವವನ್ನು ಹೊಂದಿದ್ದ ಮಾಧ್ಯಮ ಇಂದು ಸಂಪೂರ್ಣವಾಗಿ ತನ್ನನ್ನು ಹಣಕ್ಕಾಗಿ ಮಾರಿಕೊಂಡು ನಗೆಪಾಟಲಿಗೀಡಾಗಿರುವುದು ಎಂತಹಾ ವಿಪರ್ಯಾಸ!. ದುಡ್ಡಿಗಾಗಿ ಅತ್ಯಂತ ಕೀಳು ಮಟ್ಟಕ್ಕೂ ಇಳಿದಿರುವ ಮಾಧ್ಯಮ ಇಂದು 'ಸುದ್ದಿಗಾಗಿ ದುಡ್ಡು' ಪಡೆದು (Paid News) ಜನರನ್ನು ವಂಚಿಸುತ್ತಿರುವುದು ನಾಚಿಕೆಗೇಡಿನ ವಿಚಾರ. 'News' ಅನ್ನುವುದು ಇಂದು ಶುದ್ಧ 'commodity' ಅಷ್ಟೇ. ಎಂತಹ ಸಣ್ಣ ಸುದ್ದಿಯನ್ನೂ 'sensationalise' ಮಾಡಿ ಜನರನ್ನು 'ರಂಜಿಸಲು' ಹೆಣಗಾಡುತ್ತಿರುವ ಚಾನೆಲ್ ಗಳ ಬಗ್ಗೆ ಅಸಹ್ಯವೆನಿಸುತ್ತದೆ. ಟಿ.ವಿ. ವರದಿಗಾರರು 'ಇಲಿ' ಬಂದುದನ್ನು 'ಹುಲಿ' ಬಂತು ಎಂಬಂತೆ ಮೈ ಕೈ ಕುಣಿಸುತ್ತಾ ಅಟ್ಟಹಾಸದ ಸ್ವರದಲ್ಲಿ 'ತೀಕು'ವುದನ್ನು ನೋಡಿದರೆ ನಾಲ್ಕು ದಿನಗಳಿಂದ 'constipation' ತೊಂದರೆಯಿಂದ ಬಳಲುತ್ತಿರುವಂತೆ ಕಾಣುತ್ತದೆ!.



ಇವೆಲ್ಲದರ ಮಧ್ಯೆ ಇನ್ನೂ ಕೆಲವೊಂದು (ವಾರ್ತಾ ಪತ್ರಿಕೆಗಳು) ತಮ್ಮ ಗೌರವ, ಘನತೆ ಕಾಪಾಡುತ್ತಾ ಜನರ ಧ್ವನಿಯಾಗಿ ಇರಲು ಪ್ರಯತ್ನಿಸುತ್ತಿರುವುದು ನಮ್ಮ ಭಾಗ್ಯ.

ಕಾಮೆಂಟ್‌ಗಳಿಲ್ಲ: