ಏನೂ?!!?? ನನಗೂ ಗೊತ್ತಾಗುತ್ತಿಲ್ಲ. ಅದರಲ್ಲೂ ಗೋಹತ್ಯೆ ನಿಷೇದ ಕಾಯ್ದೆ ಮಂಡಿಸುವ ಮೊದಲು ಮತ್ತು ವಿದೇಯಕದ ನಂತರ ನಮ್ಮ "ಪ್ರಗತಿಪರರು" ಮೈ ಪರಚಿಕೊಳ್ಳುವುದನ್ನು ನೋಡಿದರೆ ಹೀಗನ್ನಿಸುವುದೂ ನ್ಯಾಯವೇ. ಗೋಮಾಂಸವನ್ನು ಹೆಚ್ಚಾಗಿ ಇಷ್ಟಪಟ್ಟು ತಿನ್ನುತ್ತಿದ್ದ ಮುಸಲ್ಮಾನರೇ "ಬೇರೆಯವರ ಮನಸ್ಸಿಗೆ ನೋವಾಗುವುದಾದರೆ ನಮಗೆ ಅದರ ಮಾಂಸವೇ ಬೇಡ, ಬಿಡಿ" ಎಂದು ಸುಮ್ಮನಿರುವಾಗ ಮಧ್ಯದಲ್ಲಿ ಇವರ ಒಗ್ಗರಣೆ ಯಾಕೆ? ಅನ್ನುವುದು ಯಾವತ್ತಿಗೂ ಅರ್ಥವಾಗದಿರುವ ಯಕ್ಷ ಪ್ರಶ್ನೆ..
ಅಂದ ಮಾತ್ರಕ್ಕೆ ಈ ಕಾಯ್ದೆಯಲ್ಲಿ ಲೋಪಗಳೇ ಇಲ್ಲವೆಂದಲ್ಲ, ಈ ಹಿಂದೆ ಇದ್ದ ಕರ್ನಾಟಕ ಗೋಹತ್ಯಾ ನಿಷೇಧ ಮತ್ತು ಜಾನುವಾರು ಸಂರಕ್ಷಣಾ ವಿಧೇಯಕ-೧೯೬೪ ರ ಬದಲಿಗೆ ಈ ಹೊಸ ಮಸೂದೆ ಜಾರಿಗೆ ಬರಲಿದೆ. ೧೯೬೪ರ ಕಾಯಿದೆ, ಗೋಹತ್ಯೆಯನ್ನು ನಿಷೇಧ ಮಾಡಿದ್ದರೂ ೧೨ ವರ್ಷಕ್ಕೆ ಮೇಲ್ಪಟ್ಟ ಹಸು, ಎಮ್ಮೆ, ದನ, ಕೋಣ ಇನ್ನಿತರ ಜಾನುವಾ ರುಗಳನ್ನು ಕೊಲ್ಲಲು ಅವಕಾಶ ನೀಡಲಾಗಿತ್ತು. ಆದರೆ ಈ ಹೊಸ ಕಾಯಿದೆ ಹಸುಗಳನ್ನೂ ಒಳಗೊಂಡಂತೆ ಕರು, ಎತ್ತು, ಕೋಣ, ಎಮ್ಮೆ ಮತ್ತದರ ಕರು ಎಲ್ಲವನ್ನೂ ಜಾನುವಾರು ಎಂದೇ ನಿರ್ವಚನ ಮಾಡುತ್ತದಲ್ಲದೆ ಅವುಗಳ ಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸುತ್ತದೆ. ಪೊಲೀಸರ ಮತ್ತು ಸರ್ಕಾರದ ದ್ವೇಷ ರಾಜ ಕಾರಣ ಮತ್ತು ಆಡಳಿತವನ್ನು ನೋಡಿದವರಿಗೆ ಮಸೂದೆಯ ಈ ಅಂಶ ತಳಮಟ್ಟದಲ್ಲಿ ಪೊಲೀಸರಿಗೆ ಎಂಥಾ ಸರ್ವಾ ಧಿಕಾರವನ್ನು ಕೊಡುತ್ತದೆ ಎಂಬುದು ಗೊತ್ತಾಗುತ್ತದೆ. ಉದಾ ಹರಣೆಗೆ ‘ಅಪರಾಧ’ ಸಂಭವಿಸಿದೆ ಯೆಂದು ತನಿಖೆ ಮಾಡುವ ಅಧಿಕಾರಿಗೆ ಅಲ್ಲಿ ದನದ ಮಾಂಸದ ಬದಲಿಗೆ ಕುರಿ ಮಾಂಸ ಸಿಕ್ಕರೂ ಅದು ದನದ ಮಾಂಸವೆಂಬ ‘ಅನುಮಾನ’ದ ಮೇಲೆ ಬಂಧಿಸಬಹುದು. ಏಕೆಂದರೆ ಅದು ದನದ ಮಾಂಸವಲ್ಲ ಎಂದು ಸಾಬೀತಾಗಬೇಕಿರುವುದು ಕೋರ್ಟಿನಲ್ಲಿ!
ಈ ಮಸೂದೆ ರಾಜ್ಯದ ಎಲ್ಲಾ ರೈತರನ್ನೂ ಸಂಭವನೀಯ ಅಪರಾಧಿಗಳನ್ನಾಗಿಸುತ್ತದೆ. ಈ ಕಾಯಿದೆಯ ಸೆಕ್ಷನ್ (೮) ‘ಜಾನುವಾರುಗಳನ್ನು ಕೊಲ್ಲುವ ಉದ್ದೇಶದಿಂದ ಮಾರುವುದು, ಕೊಳ್ಳುವುದು, ಅಥವಾ ಪರಭಾರೆ ಮಾಡುವುದನ್ನು ನಿಷೇಧಿಸುತ್ತದೆ’. ಇದರ ಪ್ರಕಾರ ದನಗಳನ್ನು ಕೊಲ್ಲುವ ಉದ್ದೇಶಕ್ಕೆ ಮಾರಿದರೆ ಮಾತ್ರವಲ್ಲ, ಆ ದನಗಳನ್ನು ಕೊಲ್ಲುವ ಉದ್ದೇಶಕ್ಕೆ ಕೊಳ್ಳಲಾಗುತ್ತಿದೆ ಎಂದು ಗೊತ್ತಿದ್ದರೆ, ಅಥವಾ ದನಗಳನ್ನು ಕೊಲ್ಲಲೆಂದೇ ಕೊಳ್ಳಲಾಗುತ್ತಿದೆ ಎಂದು ನಂಬುವ ಕಾರಣವಿದ್ದೂ ಮಾರಿದರೆ ಅವರನ್ನೂ ಸಹ ಈ ಮಸೂದೆ ಅಪರಾಧಿಯನ್ನಾಗಿಸುತ್ತದೆ. ಆದರೆ ರೈತನಿಗೆ ‘ಕೊಲ್ಲಲೆಂದು ಕೊಳ್ಳಲಾಗುತ್ತಿದೆ’ ಎಂದು ನಂಬುವ ಕಾರಣವಿತ್ತು ಎಂಬುದನ್ನು ನಿರ್ಧರಿಸುವವರು ಸರ್ಕಾರಿ ಅಧಿಕಾರಿಗಳು!
ಈ ಕಾಯಿದೆಯಡಿ ಸಂಭವಿಸುವ ಅಪರಾಧಕ್ಕೆ ನೀಡಲಾಗುವ ಶಿಕ್ಷೆಗಳ ಪ್ರಮಾಣ. ಸೆಕ್ಷನ್ (೧೨)ರಲ್ಲಿ ನಿಗದಿ ಪಡಿಸಿರುವಂತೆ ಜಾನುವಾರು ಹತ್ಯೆ ಮಾಡಿದ ಅಪರಾಧಕ್ಕೆ ಒಂದು ವರ್ಷದಿಂದ ಏಳು ವರ್ಷದವರೆಗೆ ಜೈಲು ಶಿಕ್ಷೆ ಮತ್ತು ೨೫,000 ರೂ.ಗಳಿಂದ ೧,00,000 ರೂ.ವರೆಗೆ ಜುಲ್ಮಾನೆ. ಭಯೋತ್ಪಾದನೆ, ಉದ್ದೇಶ ಪೂರ್ವಕ ಕೊಲೆ, ಬಲಾತ್ಕಾರ, ಕಳ್ಳಸಾಗಣೆ, ಭ್ರಷ್ಟಾಚಾರಗಳಿಗೂ ಈ ಪ್ರಮಾಣದ ಶಿಕ್ಷೆಯನ್ನು ಇಂಡಿಯನ್ ಪೀನಲ್ ಕೋಡ್ ವಿಧಿಸುವುದಿಲ್ಲ. ಅದೇ ರೀತಿ ಈ ಕಾಯಿದೆಯಡಿ ಎಸಗಲಾಗುವ ಇತರ ಅಪರಾಧಗಳಿಗೆ ಎಂದರೆ ದನದ ಸಾಗಾಟ ಮಾಡುವುದು, ದನದ ಪರಭಾರೆ ಮಾಡುವುದು, ದನದ ಮಾಂಸ ತಿನ್ನುವುದು, ತಿನ್ನಲು ಪ್ರೋತ್ಸಾಹಿಸುವುದು ಹಾಗೂ ಇನ್ನಿತರ ಅಪರಾಧಗಳಿಗೆ ಒಂದು ವರ್ಷದಿಂದ ಮೂರು ವರ್ಷದ ಸಜೆ ಮತ್ತು ೧0,000 ರೂ -೨೫,000 ರೂ.ವರೆಗೆ ಜುಲ್ಮಾನೆ ವಿಧಿಸಬಹುದಾಗಿದೆ.
,ಮೇಲಿನ ಕಾರಣಗಳಿಂದಾಗಿ ಈ ಕಾಯ್ದೆಯನ್ನು ವಿರೋಧಿಸುವವರನ್ನು ನಾನು ಬೆಂಬಲಿಸುತ್ತೇನೆ. ಅದು ಬಿಟ್ಟು ಬೇರೆಯ ಧರ್ಮದವರಿಗೆ ನೋವಾಗುತ್ತದೆ, ಜ್ಯಾತ್ಯಾತೀತತೆ, ಇತ್ಯಾದಿ ಕಾರಣನೀಡಿದರೆ ಅದು ಪ್ರಗತಿಪರ ಚಿಂತನೆಯೆನಿಸುವುದಿಲ್ಲ. ಜೊತೆಗೆ ಅವರ ಹಿಂದಿನ ಚಿಂತನಾಲಹರಿಯನ್ನು ಗಮನಿಸಿ.
ಮರ್ಯಾದಾಪುರುಷೋತ್ತಮ ಶ್ರೀರಾಮ ಮರ್ಯಾದೆಯಿಲ್ಲದವನು, ಶ್ರೀಕೃಷ್ಣ ಸ್ತ್ರೀಲೋಲ, ಪಾಂಡವರಿಂದ ದುರ್ಯೋದನನಿಗೆ ಅನ್ಯಾಯವಾಯ್ತು, ಅವರೇ ಅಧರ್ಮಿಗಳು, ರಾವಣ ಸೀತೆಯನ್ನು ಅಪಹರಿಸಿದ್ದು ನ್ಯಾಯ ........... ಇತ್ಯಾದಿ, ಇತ್ಯಾದಿಯಾಗಿ ಪುಖಾನುಪುಂಖವಾಗಿ ಬಾಯಿಗೆ ಬಂದಂತೆ ಬರೆದು ತಮ್ಮ ತೆವಲು ತೀರಿಸಿಕೊಂಡವರು ಇದೇ (ಅ)ಜ್ನಾನಪೀಠಿಗಳು, ಇದೇ ಪ್ರಗತಿಪರ ಮುಖವಾಡದವರು. ಕೆಲ ವಿಚಾರಗಳು ಕೆಲ ಕೋನಗಳಲ್ಲಿ ಶ್ರೀರಾಮನ ವಿಚಾರದಲ್ಲಿ ಇವರು ಹೇಳುವಂತೆ ಸರಿ ಅನ್ನಿಸಬಹುದು ಆದರೆ ನಾವ್ಯಾಕೆ ಅವನಲ್ಲಿರುವ ಕೆಲವೇ ಕೆಲ ನೆಗೆಟಿವ್ ಅಂಶಗಳನ್ನು ಗಮನಿಸಬೇಕು ಅವನಲ್ಲಿರುವ ಗುಣಗಳು ಆ ಶ್ರೀರಾಮನೆಂಬ ಪಾತ್ರ ಯಾವತ್ತಿಗೂ ಸರ್ವಕಾಲದಲ್ಲೂ ಮಾದರಿ ಪುರುಷನೇ ಅಲ್ಲವೇ? ಆ ಪಾತ್ರವನ್ನು ನಮ್ಮ ಮುಂದಿನ ಪೀಳಿಗೆಗೆ ಉಳಿಸಿ ಒಳ್ಳೆಯದು ಕೆಟ್ಟದರ ನಡುವಿನ ವ್ಯತ್ಯಾಸ ತಿಳಿ ಹೇಳಿ ಒಂದು ಆರೋಗ್ಯಕರ ಸಮಾಜವನ್ನು ಕಟ್ಟುವುದು ಈ ಪ್ರಗತಿಪರರ ಜವಾಬ್ದಾರಿಯಲ್ಲವೇ?
ಶ್ರೀಕೃಷ್ಣ ಸ್ತ್ರೀಲೋಲನೇ ಆಗಿರಲಿ ಬಿಡಿ ಅವನ ರಾಜನೀತಿಗಳು, ಆರ್ಥಿಕ ಚಿಂತನೆಗಳು ಯಾವ ಮೇನೇಜ್ ಮೆಂಟ್ ಗುರುವೂ ಸಹ ಕಲಿಯಲೇಬೇಕಾದದ್ದಲ್ಲವೇ? ಅವುಗಳನ್ನು ಯುವಜನತೆಗೆ ತಿಳಿಸಿಕೊಡಬೇಕಾದದ್ದು ಸಮಾಜವನ್ನು ಪ್ರಗತಿಯೆಡೆಗೆ ಸೆಳೆಯಬೇಕಾದದ್ದು ಈ ಪ್ರಗತಿಪರರ ಕೆಲಸವಲ್ಲವೇ?
ಇದೇ ಯಡ್ಡ್ಯೂರಪ್ಪನವರು ರಾಜ್ಯದ ಜನತೆಯನ್ನು ಕರೆಂಟ್ ಇಲ್ಲದೆ ಕತ್ತಲೆಯಲ್ಲಿ ಮುಳುಗಿಸಿ ಆನಂದ ಪಡುತ್ತಿರುವಾಗ ಅವರ ಕಿವಿ ಹಿಂಡಿ ಕರೆಂಟ್ ಕೊಡಿಸಬೇಕಾದ್ದು ಈ ಪ್ರಗತಿಪರರ ಕೆಲಸವಲ್ಲವೇ?
ಖೇಣಿಯಂತಹ ಭೂಗಳ್ಳರು ಒಂದೆಡೆಯಿಂದ ಕರ್ನಾಟಕವನ್ನು ಮಾರಿಕೊಂಡು ಬರುತ್ತಿರುವುದನ್ನು ತಡೆಯಲು ಜನರಲ್ಲಿ ಅರಿವು ಮೂಡಿಸಿ ಸರಕಾರ ಕಣ್ಣುತೆರೆಯುವಂತೆ ಮಾಡುವುದು ಈ ಪ್ರಗತಿಪರರ ಚಿಂತನೆಯ ಹಾದಿಯಲ್ಲವೇ?
ಈ ರೀತಿ ಮಾಡಲು ಬೇಕಾದಷ್ಟು ಕೆಲಸವಿರುವಾಗ ಇವರು ಪರಚಿ ಕಿರುಚಿಕೊಳ್ಳುತ್ತಿರುವುದಾದರೂ ಏತಕ್ಕೆ? ಗೋಹತ್ಯೆ ನಿಷೇದ ಕಾಯ್ದೆಗೆ. ನಿಷೇದಿಸಿದರೆ ತಪ್ಪೇನು? ಎಂದು ಇವರನ್ನು ಕೇಳಿನೋಡಿ.
"ಇದು ಜ್ಯಾತ್ಯಾತೀತ ವಿರೋದಿ" ಅನ್ನುತ್ತಾರೆ.
ಹೇಗೆ? ಅಂತ ಮತ್ತೊಮ್ಮೆ ಕೇಳಿದರೆ ಉತ್ತರ ಗೊತ್ತಿರುವುದಿಲ್ಲ, ಮತ್ತೂ ಕೆದಕಿದರೆ ಆ ಉತ್ತರವನ್ನು ಅರ್ಥಮಾಡಿಕೊಳ್ಳುವಷ್ಟರಲ್ಲಿ ಒಂದು ಪಿಹೆಚ್. ಡಿ ಪಡೆದುಬಿಡಬಹುದೇನೋ?
ಇದೆಲ್ಲವನ್ನು ಬದಿಗಿಟ್ಟು ಸ್ವಲ್ಪ ಗೋವುಗಳ ಬಗ್ಗೆ ಚಿಂತಿಸೋಣ.
ಸುಮಾರು ೧೦-೧೫ ವರ್ಷಗಳ ಕೆಳಗೆ ಸುಮಾರು ೮೦೦ ಮನೆಗಳಿರುವ ನನ್ನ ಹುಟ್ಟೂರು ಬಿದರಕೋಟೆಯಲ್ಲಿ ಏನಿಲ್ಲವೆಂದರೂ ೩೫೦ ಹೆಚ್ಚು ಮನೆಗಳಲ್ಲಿ ಹೊಲ-ಗದ್ದೆ ಕೆಲಸಗಳಿಗಾಗಿ ಎತ್ತುಗಳನ್ನು ಸಾಕುತ್ತಿದ್ದರು. ಆದರೆ ಇಂದು ೪೦-೫೦ ಮನೆಗಳಲ್ಲೂ ಸಹ ಎತ್ತುಗಳು ಇಲ್ಲ. ಏಕೆಂದರೆ ನಾಟಿ ಹಸುಗಳನ್ನು ಸಾಕಲು ಜನಗಳು ಸಿದ್ದವಿದ್ದರೂ ಆ ತಳಿಗಳೇ ವಿನಾಶದ ಅಂಚಿನಲ್ಲಿರುವುದು, ಅವುಗಳನ್ನು ಸಾಕಲು ಆಗುವ ಖರ್ಚುವೆಚ್ಚಗಳು ಹೆಚ್ಚಾಗಿರುವುದು, ಅವುಗಳನ್ನು ಸಲಹಲು ಜಾಗದ ಕೊರತೆ (ಏಕೆಂದರೆ ಅವಿಭಕ್ತ ಕುಟುಂಬಗಳು ಒಡೆದು ಒಂಟಿ ಕುಟುಂಬಗಳಾಗಿವೆ ಅದರ ಜೊತೆ ಜೊತೆಗೆ ಎಕರೆಗಟ್ಟಲೆ ಜಾಗಗಳು ಕೆಲ ಕುಂಟೆಗಳಿಗೆ ಇಳಿದಿವೆ). ಎಲ್ಲಕ್ಕಿಂತ ಹೆಚ್ಚಾಗಿ ಗೋವುಗಳು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ ಎನ್ನುವುದು ಎಲ್ಲರು ಒಪ್ಪಬೇಕಾದ ಸತ್ಯ. ಅವುಗಳ ಹತ್ಯೆಯನ್ನು ನಿಷೇದಿಸಿ ಅವುಗಳ ಮಹತ್ವವನ್ನು ಮುಂದಿನ ಪೀಳಿಗೆಗೆ ತಿಳಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯವಲ್ಲವೇ? ಪ್ರಿಯ ಪ್ರಗತಿಪರರೇ? ಅಷ್ಟಕ್ಕೂ ವಾಣಿಜ್ಯಪ್ರಾಣಿಗಳಾದ ಕುರಿ,ಮೇಕೆ, ಕೋಳಿಗಳ ಹತ್ಯೆಯನ್ನೇನು ನಿಷೇದಿಸಿಲ್ಲವಲ್ಲ. ಮಾಂಸ ಪ್ರಿಯರು ಅವುಗಳನ್ನು ತಿಂದು ಆನಂದಿಸಬಹುದಲ್ಲವೇ?
ಇನ್ನಾದರೂ ಸ್ವಲ್ಪ ಪ್ರಗತಿಪರ ಚಿಂತನೆ ನಡೆಯಲಿ. ಇಲ್ಲವಾದಲ್ಲಿ
" ಇಟ್ಟರೆ ಸಗಣಿಯಾದೆ
ಬಿಟ್ಟರೆ ಗೊಗ್ಗರವಾದೆ
ತಟ್ಟಿದರೆ ಬೆರಣಿಯಾದೆ
ಸುಟ್ಟರೆ ವಿಭೂತಿಯಾದೆ
ನೀನಾರಿಗಾದೆಯೋ? ಎಲೆಮಾನವ
ಎಂದು ಗೋವುಗಳು ಹಾಡಿ ಅಣಕಿಸಿಬಿಟ್ಟಾವು?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ