ಘಟನೆ -೧
ಸುಮಾರು ೨೦೦೨-೨೦೦೩ ನೇ ಇಸವಿಯ ಮಧ್ಯಭಾಗದಲ್ಲಿ ಕಾರ್ಯ ನಿಮಿತ್ತ ಬೆಂಗಳೂರಿಗೆ ಹೋಗಿದ್ದೆ. ಮೀಟಿಂಗ್ ಮುಗಿದ ನಂತರ ನಮ್ಮ ಬ್ಯಾಗುಗಳನ್ನು ಹೋಟೆಲ್ ಲಾಡ್ಜ್ ನಲ್ಲಿ ಇಟ್ಟು ಸ್ನೇಹಿತರೊಡನೆ ತಿರುಗಲು ಹೊರಟೆ. ತ್ರಿಭುವನ್ ಥಿಯೇಟರ್ ಬಳಿ ಬಂದಾಗ
"ಲೋ ಉಮಾ!!.....ಲೋ!!...."ಎಂದು ಯಾರೋ ಕೂಗಿದಂತಾಯ್ತು.
ಏನಾಶ್ಚರ್ಯ!!??!! ಕೆಲ ಧಾರಾವಾಹಿ ಮತ್ತಷ್ಟು ಚಲನಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಮುಖತೋರಿಸಿ ಪ್ರವರ್ಧಮಾನಕ್ಕೆ ಬರುತ್ತಿದ್ದ ನನ್ನ ಹೈಸ್ಕೂಲ್ ಸಹಪಾಠಿ...! ಅದೂ ಸುಮಾರು ೧೦ ವರ್ಷಗಳ ನಂತರ ಭೇಟಿಯಾಗುತ್ತಿದ್ದಾನೆ.
"ಓಹೋ....!!! ಏನ್ ಸರ್ ಸಮಾಚಾರ!! ಚೆನ್ನಾಗಿದೀರಾ..? ಕುಶಲೋಪರಿ ವಿಚಾರಿಸಿದೆ.
"ಏಯ್! ಏನ್ಲಾ ಇದು? ಸರ್ರು ಗಿರ್ರು ಅಂತೆಲ್ಲಾ ಬಯ್ಯೋದ್ ಕಲ್ತಿದ್ದೀಯಾ?" ಎಂದು ಕೆಣಕಿದ
"ಏನೇ ಹಾದ್ರೂ ನೀನು ಸ್ಟಾರ್ರು ನಾವು ಬರೀ ಪ್ರೇಕ್ಷಕರು.." ನಾನೂ ಮಾತಿನಲ್ಲೇ ಕಾಲೆಳೆದೆ.
"ನೋಡಮ್ಮ ನಾವೆಷ್ಟೇ ಎತ್ತರಕ್ಕೋದ್ರು ನಮ್ಮೋರು ನಮ್ಮತನವನ್ನ ಯಾವತ್ತಿಗೂ ಮರೀಬಾರ್ದು, ಅನ್ನೋದು ನನ್ನ ಪ್ರಿನ್ಸಿಪಲ್. ಕಾಫಿ ...?" ಎಂದ ಥೇಟ್ ಸಿನಮಾ ಸ್ಟೈಲ್ ನಲ್ಲಿ. ಬಹಳ ಖುಷಿಯಾಯ್ತು ಅವನ ಮಾತುಗಳನ್ನು ಕೇಳಿ. ಕಾಫಿ ಸಮಾರಾಧನೆಯ ಜೊತೆಗೆ ನನ್ನ ಸಹೋದ್ಯೋಗಿಗಳಿಗೂ ಅವನನ್ನು ಪರಿಚಯಿಸಿದೆ. ಹೈಸ್ಕೂಲ್ ನಲ್ಲಿ ಜೊತೆಜೊತೆಗೆ ನಾಟಕಗಳನ್ನು ಆಡಿದ್ದು, ನಂತರ ಕಾಲೇಜಿನ ಕ್ಯಾಂಟೀನಿನಲ್ಲಿ ಕದ್ದು ಜೊತೆಯಾಗಿ ಸಿಗರೇಟ್ ಸೇದಿದ್ದು.... ಇತ್ಯಾದಿ ಗಳನ್ನು ಮೆಲುಕು ಹಾಕುತ್ತಾ ಸ್ನೇಹಿತರೊಡನೆ ಬೀಳ್ಕೊಟ್ಟು ಹೊರಟುಬಂದೆ. ನಂತರ ಬೆಂಗಳೂರಿಗೆ ಹೋದಾಗ ಆಗಾಗ ನಮ್ಮ ಭೇಟಿಯಾಗುತ್ತಿತ್ತು. ಈಗ್ಗೆ ಸುಮಾರು ೪ ವರ್ಷಗಳಿಂದೀಚೆಗೆ ಆಗಿರಲಿಲ್ಲ
ಮೊನ್ನೆ ಸುಮಾರು ೧೫ ದಿನಗಳ ಕೆಳಗೆ ಮೈಸೂರಿನಲ್ಲಿ ಯಾವುದೋ ಡಾಕ್ಟರ್ ಬಳಿ ಕಾಯುತ್ತಾ ಕುಳಿತಿದ್ದೆ. ಅರೆ! ಅವನೆ ಅದೂ ೪ ವರ್ಷಗಳ ನಂತರ ಜೊತೆಯಲ್ಲಿ ಅವನ ಶ್ರೀಮತಿ ಮತ್ತು ಒಂದು ಮುದ್ದಾದ ಮಗು. ಈಗಂತೂ ಕನ್ನಡ ಚಿತ್ರರಂಗದ ಪ್ರಮುಖ ಪೋಷಕ ಪಾತ್ರಗಳಲ್ಲಿ ಇವನು ಇರಲೇಬೇಕು ಎನ್ನುವಷ್ಟು ಜನಪ್ರಿಯತೆ!
ಸುತ್ತಮುತ್ತಲೂ ಇತರೆ ಕಂಪನಿಗಳ ಪ್ರತಿನಿಧಿಗಳು ನನ್ನ ಹಾಗೆ ವೈದ್ಯರ ಭೇಟಿಗೆ ಕಾಯುತ್ತಾ ಕುಳಿತಿದ್ದರು. ಈಗ ಇಂತಾ ಜನಪ್ರಿಯ ನಟನನ್ನು ಮಾತನಾಡಿಸಿದರೆ ಅವರೆಲ್ಲರ ಮುಂದೆ ನನ್ನ "ತೂಕ" ಇನ್ನು ಹೆಚ್ಚಬಹುದೆನ್ನಿಸಿತು. ಎಷ್ಟೇ ಆಗಲಿ ನಾನೂ ಸಹ ಸಾಮಾನ್ಯ ಮಾನವ ಹಾಗೆ ಯೋಚನೆ ಬಂದಿದ್ದರಲ್ಲಿ ತಪ್ಪೇನು ಇಲ್ಲವೆನಿಸಿತು. ತತ್ ಕ್ಷಣ ಅವನ ಮುಂದೆ ನಿಂತು
"ಹಾಯ್!!.. ಹೇಗಿದ್ದೀಯಾ?" ಎಂದೆ
ಎಲ್ಲರೂ ಆಶ್ಚರ್ಯದಿಂದ ನನ್ನೆಡೆಗೆ ನೋಡುತ್ತಿದ್ದರು! ನನ್ನೊಳಗಿನ ಅಹಂ ಮತ್ತಷ್ಟು ಬಲಿಷ್ಟವಾಯ್ತು.. ಕುತ್ತಿಗೆ ಪಟ್ಟಿ ನೀವುತ್ತಾ ಸ್ವಲ್ಪ ಅವನ ಹತ್ತಿರ ಹೋಗಿ
ಇನ್ನೊಮ್ಮೆ
"ಹಾಯ್.......!" ಎಂದೆ
ಆ ನಟ ನನ್ನೆಡೆಗೆ ತಿರುಗಿದ..
"...ಆ...ಆಹಾಯ್...!" ಬಹಳ ಪ್ರಾಯಾಸದಿಂದ, ಅಸಹ್ಯಭಾವದ ಧ್ವನಿ, ಅಪರಿಚಿತರೆಡೆಗೆ ನೋಡುವ ನೋಟ, ಆತನಿಂದ ನನ್ನೆಡೆಗೆ...???
"...ನಾನೂ.........!" ಮಾತು ಮುಂದುವರೆಸಲು ಪ್ರಯತ್ನಿಸಿದೆ...
"ನೀವ್ಯಾರೋ ಗೊತ್ತಾಗ್ಲಿಲ್ವಲ್ಲ?" ಮತ್ತದೇ ಧ್ವನಿ ಕೇಳಿ ಯಾರೋ ಎಕ್ಕಡದಿಂದ ಕೆನ್ನೆಗೆ ಬಾರಿಸಿದಂತಾಯ್ತು.
ತಕ್ಷಣ ಸಾವರಿಸಿಕೊಂಡೆ...
"....ಹಾ..ಹಾ..ಹಾಯ್..! ನೀವು '.......... ' ಅವರಲ್ವ?!? ಅದಕ್ಕೆ ಮಾತಾಡಿಸ್ದೆ ! ಸಾರಿ..!" ಅಂದೆ
"ಓಕೆ ! ಬಾಯ್!" ಅಂದವ ನನ್ನ ಪ್ರತಿಕ್ರಿಯೆಗೂ ಕಾಯದೆ ಸಂಸಾರದೊಡನೆ ಹೊರಟು ಹೋದ...
ಅದನ್ನೆಲ್ಲ ನೋಡುತ್ತಿದ್ದ ವೈದ್ಯರು ನಾನು ಒಳಹೋದ ನಂತರ
''ಏನ್ ಉಮಾ? ''........" ಅವರು ನಿಂಗೆ ಗೊತ್ತಾ?" ಅಂದರು. ಏನ್ ಹೇಳ್ಬೇಕು ಅಂತ ಒಂದು ಕ್ಷಣ ತಿಳೀಲಿಲ್ಲ....... ಆದರೂ ಸಾವರಿಸಿಕೊಂಡು
"ಅಯ್ಯೋ... ಅವರ್ಯಾಗೊತ್ತಿಲ್ಲಾ ಸರ್!! ಇಡೀ ಕರ್ನಾಟಕಕ್ಕೇ ಗೊತ್ತು......" ಅಂತ ಆ ವಿಷಯವನ್ನು ಹಾಗೆ ತೇಲಿಸಿ ನನ್ನ ಕೆಲಸ ಮುಗಿಸಿ ಹೊರ ಬಂದೆ.
ಘಟನೆ - ೨
ಮೊನ್ನಿನ ಶುಕ್ರವಾರ ಬೆಳ್ಳಂಬೆಳಗ್ಗೆ ವಾಕಿಂಗ್ ಮುಗಿಸಿ ಮನೆಗೆ ಬರುವಾಗ ದಾರಿಯಲ್ಲಿ ಸಿಕ್ಕಾಪಟ್ಟೆ ಜನ ಸೇರಿದ್ದರು. "ಏನಿದು? ಜನ ೭ ವರೆಯಾದ್ರೂ ಕೆಲ್ಸಾ ಕಾರ್ಯ ಬಿಟ್ಟು ಇಲ್ಲಿ ಜಮಾಯ್ಸಿದ್ದಾರಲ್ಲ" ಅಂತ ಹತ್ತಿರ ಹೋಗಿ ನೋಡಿದರೆ ಅಲ್ಲಿ ದುನಿಯಾ ವಿಜಯ್ ರವರು ನಟಿಸುತ್ತಿರುವ "ಕರಿ ಚಿರತೆ" ಚಿತ್ರದ ಚಿತ್ರೀಖರಣ!
ಕುತೂಹಲದಿಂದ ನಾನೂ ವೀಕ್ಷಿಸಲು ಜಂಗುಳಿಯಲ್ಲಿ ಒಬ್ಬನಾದೆ. ಯಾವುದೋ ಬೈಕ್ ಚೇಸಿಂಗ್ ದೃಷ್ಯದ ಚಿತ್ರೀಕರಣ.
ಮದ್ಯದಲ್ಲಿ ವಿಜಯ್ ಗೆ ಸ್ವಲ್ಪ ರೆಸ್ಟ್. ವಿಜಯ್ ರವರ ಬೆನ್ನ ಹಿಂದೆ ಎನ್ನುವಷ್ಟು ಸನಿಹದಲ್ಲೇ ನಿಂತಿದ್ದೆ.. ಅವರ ಎದುರಿಗೆ ಒಬ್ಬ ವ್ಯಕ್ತಿ ಜನರ ನಡುವೆ ಮುನ್ನುಗ್ಗಿ ಮುಂದೆ ಬರಲು ತಿಣುಕಾಡುತ್ತಿದ್ದ..
"ಹಾಯ್! ಏನ್ ಮಗ ..........ಗುರು ಸ್ವಲ್ಪ ಜಾಗ ಬಿಡ್ರಪ್ಪ ! ಅವರಿಗೆ.." ಅಂತ ತಮ್ಮ ಗಡುಸು ಧ್ವನಿಯಲ್ಲಿ ಹೇಳಿ ಆ ವ್ಯಕ್ತಿಯನ್ನು ತನ್ನೆಡೆಗೆ ಕರೆಸಿ ಮಾತನಾಡತೊಡಗಿದರು...
"ಎಷ್ಟು ವರ್ಷ ಆಯ್ತು ಮಗ ನಿನ್ನ ನೋಡಿ.. ಹೇಗಿದ್ದೀಯಾ?...." ಆ ಅಪರಿಚಿತನ ಹೆಗಲ ಮೇಲೆ ವಿಜಯ್ ರವರ ಆಪ್ತ ಅಪ್ಪುಗೆ... ಹಾಗೆ ಅವರಿಬ್ಬರ
ಮಾತು ಮುಂದುವರಿದಿತ್ತು. ಬಹುಶಃ ಅವರಿಬ್ಬರೂ ತಮ್ಮ ಫ್ಲ್ಯಾಶ್ ಬ್ಯಾಕ್ ಗೆ ಹೋಗಿರಬೇಕು.
ನನ್ನ ಮೆದುಳು ಈ ಹಿಂದಿನ ಘಟನೆಯನ್ನು ಮೆಲುಕುಹಾಕುತ್ತಾ...ಇತ್ತು
ಹಾಗೆ ಆ ನಟನ ಬದಲು ಯಶಸ್ಸಿನ ನಶೆಯೇರಿಸಿಕೊಳ್ಳದ ಈ ವಿಜಯ್ ನನ್ನ ಸ್ನೇಹಿತನಾಗಬಾರದಿತ್ತೇ? ಅನ್ನಿಸಿತು..
ಅಷ್ಟರಲ್ಲಿ ಮನೆ ತಲುಪಿದ್ದೆ...
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ