ಶನಿವಾರ, ಫೆಬ್ರವರಿ 20, 2010

'ವೃಕ್ಷ ರಾಜ'ನ ಸ್ವಗತ.....


ಜಕ್ಕೂ ಮರವಾಗಿ ಹುಟ್ಟಲು ಪುಣ್ಯ ಮಾಡಿರಬೇಕು. ಪೂರ್ವಜನ್ಮದ ಸುಕೃತದಿಂದ ನಾನು ಈ ಜನ್ಮದಲ್ಲಿ ಮರವಾಗಿ ಜನಿಸಿದ್ದೀನಿ, ಅದರಲ್ಲೂ ಬೃಹದಾಕಾರವಾಗಿ ಬೆಳೆಯಬಲ್ಲ 'ವೃಕ್ಷಗಳ ರಾಜ' ಆಲದ ಮರವಾಗಿದ್ದೇನೆ.


ವಿಶಾಲ ಆಲದಮರ 'ಗತಕಾಲ

ನೋಡಿ ಎಷ್ಟು ವಿಶಾಲವಾಗಿದ್ದೇನೆ.

ಸುಮಾರು ೧೦೦-೧೫೦ ವರ್ಷಗಳಿರಬಹುದು, ಒಬ್ಬ ಪುಣ್ಯಾತ್ಮನಾದ ರೈತ ಬೇರ್ಯಾವುದೋ ಆಲದ ಮರದಿಂದ ಒಂದು ಸಣ್ಣಕೊಂಬೆ ಕಡಿದು ಅವನ ಹೊಲದಲ್ಲಿ ನನ್ನನ್ನು ನೆಟ್ಟು ಪ್ರತಿಸ್ಠಾಪಿಸಿದ. ದಿನವೂ ನನಗೆ ನೀರೆರೆದು, ಕಾಲಕಾಲಕ್ಕೆ ಆಹಾರ ನೀಡಿ, ಮೇಕೆ ಕುರಿದನಗಳ ದಾಳಿಯಿಂದ ನನ್ನನ್ನು ರಕ್ಷಿಸಿದ ಆ ಮಹಾನುಭಾವ. ಅವನಿಗೆ ನಾನು ಚಿರರುಣಿ.

ನಾನು ನೆಲಕ್ಕೆ ಬೇರೂರಿ ಸುಮಾರು ೧೫ ವರ್ಷವಾದಾಗ ನನ್ನ ಹೊಟ್ಟೆಯ ಮೇಲೆ ಮೊದಲ ಸಣ್ಣ ಪೆಟ್ಟು ಬಿತ್ತು, ಅದೂ ಈ ಊರಿನ ಯುವಪ್ರೇಮಿಗಳಿಂದ, ಯುವಕನು ತನ್ನ ಪ್ರೇಯಸಿಗೆ ತನ್ನ ಪ್ರೇಮ ನಿವೇದಿಸಲು ತನ್ನೀರ್ವರ ಹೆಸರುಗಳನ್ನು ನನ್ನ ಹೊಟ್ಟೆಯ ಮೇಲೆ ಕೆತ್ತಿದಾಕ್ಷಣಕ್ಕೆ ನೋವಾದರು ನನಗೆ ಖುಷಿಯೇ ಆಯಿತು 'ನಾನು ಅವರ ಪ್ರೇಮಕ್ಕೆ ಸಾಕ್ಷಿಯಾದೆನಲ್ಲ' ಎಂದು. ಅವರ ನಂತರ ಅದೆಷ್ಟು ಜೋಡಿ ಜೀವಗಳು ನನ್ನ ನೆರಳ ಕೆಳಗೆ ಪಿಸುಗುಟ್ಟಿದ್ದಾರೆ! ಅದೆಷ್ಟು ಜನ ನನ್ನೆದೆಗೊರಗಿ ತಮ್ಮ ದುಃಖತೋಡಿಕೊಂಡು ಸಾಂತ್ವಾನಪಡೆದುಕೊಂಡರು! ಒಂದೆ ಎರಡೇ ಅವುಗಳನ್ನು ಮೆಲುಕುಹಾಕುತ್ತಿದ್ದರೆ ಅದೆಂತಹ ಮಧುರಾನುಭೂತಿ!! "ನಾನೇನು ಭೂತಾಯಿಗಿಂತಲೂ ಒಂದು ಕೈ ಮೇಲೇನೋ' ಎಂಬ ಅಹಂ ನನ್ನನ್ನು ಆಗಾಗ ಕಾಡುವುದುಂಟು.

ಮತ್ತೆ ನನಗೆ ಸ್ವಲ್ಪಜಾಸ್ತಿ ಅನ್ನುವಷ್ಟು ಏಟು ಬಿದ್ದದ್ದು ನನ್ನನ್ನು ನೆಟ್ಟ ರೈತನಿಂದಲೆ!!! ಹೌದು ಅದೊಂದು ದಿನ ತನ್ನಿಬ್ಬರು ಸ್ನೇಹಿತರೊಡನೆ ಬೆೞಂಬೆಳಿಗ್ಗೆ ಹೊಲಕ್ಕೆ ಬಂದ ರೈತ ನನ್ನ ರೆಂಬೆ ಕೊಂಬೆಗಳನ್ನು ಕತ್ತರಿಸತೊಡಗಿದ. ತುಂಬಾನೇ ನೋವಾಯ್ತು! ಕಡಿಬೇಡಿ! ಕಡಿಬೇಡಿ! ಅಂತ ಕೂಗಿಕೊಂಡೆ. ಆದರೆ ನನ್ನ ಮಾತನ್ನು ಯಾರೂ ಕೇಳಲಿಲ್ಲ. ನನ್ನ ಜೀವನ ಇಲ್ಲಿಗೆ ಸಮಾಧಿಯಾಯ್ತು ಅಂದುಕೊಡೇ ೨ ವಾರ ಕಳೆದೆ. ಆದರೇನಾಶ್ಚರ್ಯ!!!!!!! ಅವರು ಕತ್ತರಿ ಜಾಗದಲ್ಲೇಲ್ಲಾ ಮೊದಲಿದ್ದದ್ದಕ್ಕಿಂತಾ ಹೆಚ್ಚು ಹೆಚ್ಚು ರೆಂಬೆಗಳು ಚಿಗುರೊಡೆಯತೊಡಗಿದವು, ನನ್ನ ಹೊಟ್ಟೆ, ಕೈಕಾಲುಗಳು ಮತ್ತಷ್ಟು ದಪ್ಪವಾಗತೊಡಗಿದವು. ಕೆಲದಿನಗಳ ನಂತರ ನಾನು ಮೊದಲಿಗಿಂತಲೂ ಎತ್ತರೆತ್ತರಕ್ಕೆ ಅಗಲಕ್ಕೆ ಬೆಳೆಯತೊಡಗಿದೆ. ಕುರಿ ಮೇಕೆ ಮೇಯಿಸುವವರು ನನ್ನ ಸಣ್ಣ ಕೊಂಬೆಗಳನ್ನು ಕಡಿದು ಅವುಗಳಿಗೆ ತಿನ್ನಿಸುವಾಗ "ಮಗುವಿಗೆ ಹಾಲುಣಿಸುವ ತಾಯ್ತನವನ್ನು ನನಗೂ ಕರುಣಿಸಿದೆಯಲ್ಲಾ ಭಗವಂತಾ! ನಿನಗೆ ನಾನು ಚಿರರುಣಿ" ಎಂದು ಆ ದಯಾಮಯನಿಗೆ ವಂದಿಸಿದೆ.

ಅಬ್ಭಾ!! ಅದೆಷ್ಟು ವರ್ಷಗಳುರುಳಿದವು ನನ್ನ ಕೊಂಬೆಗಳು ನನಗಿಂತಲೂ ಬಲಿತು "ಬೀಳು"ಗಳ ಚಿಗುರಿಸಲು. ಮೊದಲ ಬೀಳು ಚಿಗುರಿ ಇನ್ನೇನು ನೆಲ ಮುಟ್ಟುತ್ತದೆ ಎನ್ನುವಾಗ ಒಂದಿಷ್ಟು ಮಕ್ಕಳು ಬಂದು ಆ ಬೀಳಿಗೆ ಜೋತಾಡಿ ಕುಣಿದು ಕುಪ್ಪಳಿಸುವಾಗ ನನಗೆಷ್ಟು ಆತಂಕವಾಯ್ತು ಗೊತ್ತೇ? ನನ್ನ ಬೀಳುಗಳು ಮುರಿದುಹೋದಾವೆಂದಲ್ಲ ಆ ಮುದ್ದು ಮಕ್ಕಳು ಕೆಳಗೆ ಬಿದ್ದಾವೆಂದು!!! ಸಧ್ಯ!! ಹಾಗಾಗಲಿಲ್ಲ.

ಆ ಊರಿನ ಭಗ್ನಪ್ರೇಮಿಗಳಿಬ್ಬರು ನನ್ನ ಬೀಳುಗಳಿಗೆ ನೇಣು ಬಿಗಿದು ಪ್ರಾಣತೆತ್ತಾಗ. ಅದೆಷ್ಟು ದುಃಖವಾಯ್ತು. ಇಂದಿಗೂ ಅದ ನೆನೆದರೆ ಎದೆಯಲ್ಲಿ "ಚುಳುಕ್" ಎನ್ನದಿರುವುದಿಲ್ಲ ಆದರೆ ಕೆಲದಿನಗಳಲ್ಲಿಯೇ ನನಗೊಂದು ಆಘಾತ ಕಾದಿತ್ತು. ಆ ಊರಿನ ಭಗ್ನಪ್ರೇಮಿಗಳಿಬ್ಬರು ನನ್ನ ಬೀಳುಗಳಿಗೆ ನೇಣು ಬಿಗಿದು ಪ್ರಾಣತೆತ್ತಾಗ. ಅದೆಷ್ಟು ದುಃಖವಾಯ್ತು. ಇಂದಿಗೂ ಅದ ನೆನೆದರೆ ಎದೆಯಲ್ಲಿ "ಚುಳುಕ್" ಎನ್ನದಿರುವುದಿಲ್ಲ.

ಕಾಲಚಕ್ರ ಉರುಳಿತು, ವರ್ಷಗಳು ಕಳೆದಂತೆ ಅದೆಷ್ಟು ಲೆಕ್ಕವಿಲ್ಲದಷ್ಟು ಬದಲಾವಣೆಗಳಾದವು. ನನ್ನನ್ನು ಸಾಕಿ ಬೆಳೆಸಿದ ರೈತ ಅಸುನೀಗಿದ, ಅವನ ಸಮಾಧಿ ನನ್ನೊಡಲಲ್ಲೇ ಇದೆ ಅನ್ನುವುದು ನನಗೆ ಸಿಕ್ಕ ಅಲ್ಪತೃಪ್ತಿ. ಅವನ ಅನಂತರ ಆತನ ಮಕ್ಕಳು ನನ್ನನ್ನು ಬಹಳ ಪ್ರೀತಿ ಆದರಗಳಿಂದ ನೋಡಿಕೊಂಡರು. ನನ್ನ ಸುತ್ತಮುತ್ತಲಿದ್ದ ಹೊಲದಲ್ಲಿ ದನಕರುಗಳ ಆಸ್ಪತ್ರೆ ಕಟ್ಟಿಸಿದರು, ಆಸ್ಪತ್ರೆಗೆ ಬರುತ್ತಿದ್ದ ಜನ ದನಗಳಿಗೆ ನನ್ನ ನೆರಳೇ ಆಶ್ರಯ, ದಾರಿಹೋಕರಿಗೆ ನನ್ನೊಡಲ ತಂಪು ಬಹಳ ಹಿತ.



"ಹಾಂ!! ಅದೆಲ್ಲಾ ಬರೀ ನೆನಪು ಮಾತ್ರ!! ಆಧುನಿಕತೆಯ ದಾಳಿಗೆ ಸಿಲುಕಿ ನಾನು ಸಹ ನಲುಗಿಹೋದೆ. ನಂತರ ನನ್ನದೆಲ್ಲಾ ಕಣ್ಣೀರ ಕಥೆ. ನಾನೀಗ ಹೇಗಿದ್ದೇನೆ ಅಂತ ನೀವೆ ನೋಡಿ









ಇಂದಿನ ನನ್ನ ಸ್ಥಿತಿ
ನೀವೆ ಹೇಳಿ ನಾ ಮಾಡಿದ ತಪ್ಪೇನು?

ಕಾಮೆಂಟ್‌ಗಳಿಲ್ಲ: