ಭಾನುವಾರ, ನವೆಂಬರ್ 29, 2009

ಚಾರ್ಲ್ಸ್ ಡಾರ್ವಿನ್ ಮತ್ತು ವಿಕಾಸವಾದ.......

ಚಾರ್ಲ್ಸ್ ರಾಬರ್ಟ್ ಡಾರ್ವಿನ್ (ಫೆಬ್ರುವರಿ ೧೨ ೧೮೦೯ — ಏಪ್ರಿಲ್ ೧೯ ೧೮೮೨) ಇಂಗ್ಲೆಂಡ್ ದೇಶದ ಪ್ರಸಿದ್ಧ ಜೀವವಿಜ್ಞಾನಿ. ಈತನು ೧೮೫೮ರಲ್ಲಿ ಮಂಡಿಸಿದ ಜೀವ ವಿಕಾಸವಾದವು ಆಧುನಿಕ ಜೀವವಿಜ್ಞಾನದ ಬುನಾದಿಯಾಗಿದೆ. ಎಡಿನ್‍ಬ್ರೊ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ನಡಿಸಿದ ಇವರು ೧೮೩೧ರಿಂದ ೧೮೩೬ರ ಮಧ್ಯದಲ್ಲಿ ಎಚ್ ಎಮ್ ಎಸ್ ಬೀಗಲ್ ಹಡಗಿನಲ್ಲಿ ಭೂರಚನಶಾಸ್ತ್ರ ವಿಜ್ಞಾನಿಯಾಗಿ ಪ್ರವಾಸ ಕೈಗೊಂಡಾಗ ನಡೆಸಿದ ಸಂಶೊಧನೆಯಿಂದ ಮೊದಲು ಪ್ರಖ್ಯಾತರಾದರು. ಅದೇ ಸಮಯದಲ್ಲಿ ಅನೇಕ ಜೀವ ಪಳಯುಳಿಕೆಗಳನ್ನೂ ಸಂಗ್ರಹಿಸಿ, ಅನೇಕ ಜೀವವಿಧಗಳನ್ನು ವೀಕ್ಷಿಸಿದರು. ಇದೆಲ್ಲವನ್ನೂ ವಿವರಿಸಲು "ನೈಸರ್ಗಿಕ ಆಯ್ಕೆಯಿಂದ ಜೀವ ವಿಕಾಸವಾದ" ಸಿದ್ಧಾಂತವನ್ನು ೧೮೫೮ರಲ್ಲಿ ಮಂಡಿಸಿದರು. ೧೮೫೯ರಲ್ಲಿ ಈ ಸಿದ್ಧಾಂತವನ್ನು ವಿವರವಾಗಿ ಬಣ್ಣಿಸುವ ಆನ್ ದ ಆರಿಜಿನ್ ಆಫ್ ಸ್ಪೀಶೀಸ್ ಎಂಬ ಭವ್ಯಕೃತಿಯನ್ನು ಪ್ರಕಟಿಸಿದರು.

ಬೀಗಲ್ ಹಡಗಿನಲ್ಲಿ ಪ್ರವಾಸ

ಬೀಗಲ್ ಹಡಗು ಪ್ಲೈಮೌಥ್ ಬಂದರನ್ನು ೧೮೩೧ರ ಡಿಸೆಂಬರ್ ೨೭ರಂದು ಬಿಟ್ಟು ಸುಮಾರು ೫ ವರ್ಷಗಳ ನಂತರ ೧೮೩೬ರ ಅಕ್ಟೋಬರ್ ೨ರಂದು ಹಿಂದಿರುಗಿತು. ಇಡೀ ಭೂಮಿಯನ್ನು ಸುತ್ತುವರೆದ ಈ ಪ್ರವಾಸದಲ್ಲಿ ಡಾರ್ವಿನ್ ಹೋದ ಕಡೆಗಳಲ್ಲೆಲ್ಲಾ ಅಲ್ಲಿನ ಭೂರಚನೆ ಮತ್ತು ಜೀವ ವಿಧಗಳನ್ನು ಅಧ್ಯಯನ ಮಾಡಿದರು. ಸಮುದ್ರಯಾನದಿಂದ ಅಸ್ವಸ್ಥರಾಗಿದ್ದರೂ ಈ ಅಧ್ಯಯನಗಳನ್ನು ಬಹಳ ಎಚ್ಚರಿಕೆಯಿಂದ ದಾಖಲಿಸಿದರು. ನೀರಿನಲ್ಲಿ ವಾಸಿಸುವ ಬೆನ್ನೆಲುಬುಳ್ಳದ ಪ್ರಾಣಿಗಳ ಬಗ್ಗೆ ಅತ್ಯಂತ ಹೆಚ್ಚು ಮಾಹಿತಿ ಸಂಗ್ರಹಿಸಿದರು. ಭೂರಚನೆಯ ಅಧ್ಯಯನದಲ್ಲಿ ಚಾರ್ಲ್ಸ್ ಲ್ಯೆಲ್ ಅವರ "ಪ್ರಿನ್ಸಿಪಲ್ಸ್ ಆಫ್ ಜಿಯಾಲಜಿ" ಪುಸ್ತಕವನ್ನು ಹೆಚ್ಚಾಗಿ ಉಪಯೋಗಿಸಿದರು.

ಪೆಟಗೋನಿಯ ಪ್ರದೇಶದಲ್ಲಿ ಇದ್ದಾಗ ಇವರು ಅಳಿದುಹೋಗಿರುವ ಸಸ್ತನಿ ಪ್ರಾಣಿಗಳ ಒಂದು ದೊಡ್ಡ ಜೀವಪಳಯುಳಿಕೆ ಪ್ರದೇಶವನ್ನು ಕಂಡುಕೊಂಡರು. ಇಲ್ಲಿನ ಸಂಶೋಧನೆಗಳಿಂದ ಮತ್ತು ದಕ್ಷಿಣ ಅಮೇರಿಕದಲ್ಲಿ ಇವರು ಕಂಡ ಜೀವ ವಿಧಗಳ ಅಧ್ಯಯನದಿಂದ ಲ್ಯೆಲ್ ಅವರು ಪ್ರಸ್ತಾಪಿಸಿದ್ದ ಜೀವಿಗಳ ಉಗಮದ ಸಿದ್ಧಾಂತದಲ್ಲಿನ ದೋಶಗಳನ್ನು ಕಾಣತೊಡಗಿದರು. ಆದರೆ ಇವರ ಮೇಲೆ ಅತ್ಯಂತ ಪ್ರಭಾವ ಬೀರಿದ ಪ್ರದೇಶವೆಂದರೆ ಗ್ಯಾಲಾಪಗೊಸ್ ದ್ವೀಪಗಳು. ಭೂರಚನಶಾಸ್ತ್ರದ ಮಾಪನದ ಪ್ರಕಾರ ಇತ್ತೀಚೆಗೆ ಸೃಷ್ಟಿತವಾಗಿರುವ ಈ ದ್ವೀಪಗಳಲ್ಲಿ ಅನೇಕ ಜೀವವಿಧಗಳನ್ನು ಕಂಡರು. ಈ ಜೀವವಿಧಗಳು ಪ್ರಪಂಚದ ಬೇರೆಲ್ಲೂ ಇಲ್ಲದಿದ್ದರಿಂದ, ಎಲ್ಲಾ ಜೀವವಿಧಗಳು ಒಮ್ಮೆಲೇ ಸೃಷ್ಟಿತವಾದವು ಎಂಬ ಸಿದ್ಧಾಂತದ ಬಗ್ಗೆ ತೀವ್ರ ಸಂಶಯ ಹೊಂದತೊಡಗಿದರು.

ಜೀವ ವಿಕಾಸವಾದದ ಮನವರಿಕೆ
(The Evolution)

ಡಾರ್ವಿನ್ ಅವರು ೧೮೩೬ರ ಅಕ್ಟೋಬರ್ ಅಲ್ಲಿ ಪ್ರವಾಸದಿಂದ ಹಿಂದಿರುಗಿದ ಹೊತ್ತಿಗೆ, ಇವರು ಹೆನ್ಸ್ಲೊ ಅವರಿಗೆ ಕಳುಹಿಸಿದ್ದ ಪತ್ರಗಳಿಂದ ಪ್ರಖಾತರಾಗಿದ್ದರು. ತಂದೆಯವರ ಆರ್ಥಿಕ ಸಹಾಯದಿಂದ, ಇವರು ಪ್ರವಾಸದ ವೇಳೆಯಲ್ಲಿ ಸಂಗ್ರಹಿಸಿದ್ದ ಜೀವಿಗಳನ್ನು ಮತ್ತು ಜೀವಪಳೆಯುಳಿಕೆಗಳನ್ನು ಗುರುತಿಸಿ ವರ್ಗೀಕರಣ ಮಾಡಿಸತೊಡಗಿದರು. ಜೀವರಚನಶಾಸ್ತ್ರ ತಜ್ಞರಾಗಿದ್ದ ರಿಚರ್ಡ್ ಒವೆನ್ ಇದರಲ್ಲಿ ಇವರಿಗೆ ಸಹಾಯ ಮಾಡಿದರು. ಪ್ರಮುಖವಾಗಿ ಇವರು ಗ್ಯಾಲಪಗೋಸ್ ದ್ವೀಪಗಳಲ್ಲಿ ಸಂಗ್ರಹಿಸಿದ್ದ ಪಕ್ಷಿಗಳು ಫಿಂಚ್ ಮತ್ತು ವ್ರೆನ್ ಕುಟುಂಬದ ೧೨ ವಿವಿಧ ಪ್ರಜಾತಿಗಳಿಗೆ ಸೇರಿರುವಂತಹವು ಎಂಬುದನ್ನು ಪಕ್ಷಿ ತಜ್ಞ ಜಾನ್ ಗೂಲ್ಡ್ ಗುರುತಿಸಿದರು.

ಮಾರ್ಚ್ ಹೊತ್ತಿಗೆ ಡಾರ್ವಿನ್ ಲಂಡನ್ ನಗರಕ್ಕೆ ಸ್ಥಳಾಂತರಗೊಂಡರು. ಇಲ್ಲಿ ಚಾರ್ಲ್ಸ್ ಲ್ಯೆಲ್ ಅವರ ಸೇರಿದ್ದ ಚಿಂತಕರ ಗುಂಪೊಂದನ್ನು ಸೇರಿದರು. ಅಲ್ಲಿ ಜೀವ ಪ್ರಜಾತಿಗಳ ಸೃಷ್ಟಿಯ ಬಗ್ಗೆ ಕೂಡ ಚಿಂತನ ನಡೆಯುತ್ತಿತ್ತು. ಆಗಿನ ಪ್ರಮುಖ ಚಿಂತಕರು ಎಲ್ಲಾ ಪ್ರಜಾತಿಗಳು ಒಮ್ಮೆಲೇ ಸೃಷ್ಟಿಹೊಂದಿದವು ಎಂಬ ವಾದವನ್ನು ನಂಬಿದ್ದರು. ಆದರೆ ಡಾರ್ವಿನ್ ತಮ್ಮ ಗ್ಯಾಲಪಗೋಸ್ ಪಕ್ಷಿಗಳ ವೈವಿಧ್ಯತೆಯ ಬಗ್ಗೆ ಯೋಚಿಸುತ್ತ, ಒಂದು ಪ್ರಜಾತಿ ಇತರ ಪ್ರಜಾತಿಗಳಾಗಿ ಪರಿವರ್ತನಗೊಳ್ಳಬಹುದೇನೊ ಎಂದು ಚಿಂತನೆ ಮಾಡತೊಡಗಿದರು. ಇದರ ಜೊತೆಗೆ ಇವರು ತಮ್ಮ ಪ್ರವಾಸದ ಬಗ್ಗೆ ಒಂದು ಪುಸ್ತಕವನ್ನು ಕೂಡ ಬರೆಯಲು ಪ್ರಾರಂಭಿಸಿದರು.

ನೈಸರ್ಗಿಕ ಆಯ್ಕೆಯ ಸಿದ್ಧಾಂತದ ಪ್ರಕಟಣೆ (Theory Of Natural Selection)
ಈ ಸಿದ್ದಾಂತದ ಮೂಲ ಅಂಶವೇನೆಂದರೆ, ಪ್ರಕೃತಿಯು ತನಗೆ ಬೇಡದ ಹೆಚ್ಚಾಗಿ ಬದಲಾಗುತ್ತಿರುವ ನೈಸರ್ಗಿಕ ವಿಕೋಪಗಳನ್ನು ತಡೆದುಕೊಳ್ಳದೇ ಇರುವ ಜೀವಿಗಳನ್ನು ತೆಗೆದುಹಾಕುತ್ತದೆ, ಅಥವಾ ಆ ಜೀವಿಯು ತಂತಾನೆ ನಶಿಸುತ್ತದೆ.
ನೈಸರ್ಗಿಕ ಆಯ್ಕೆಯ ಸಿದ್ಧಾಂತದ ಮೂಲ ಆಯಕಟ್ಟನ್ನು ಮನಸ್ಸಿನಲ್ಲಿ ಹೊಂದಿದ್ದೇನೆಂದು ಭಾವಿಸಿ, ಈ ಬಗ್ಗೆ ಹೆಚ್ಚು ಸಂಶೋಧನೆ ನಡೆಸತೊಡಗಿದರು. ಮುಂದಿನ ದಶಕದಲ್ಲಿ ತಮ್ಮ ಬೀಗಲ್ ಪ್ರವಾಸದ ವೈಜ್ಞಾನಿಕ ಫಲಿತಾಂಶಗಳನ್ನು ಪ್ರಕಟನೆ ಮಾಡುವಲ್ಲಿ ನಿರತರಾಗಿದ್ದರಿಂದ ತಮ್ಮ ಸಿದ್ಧಾಂತದ ಬಗ್ಗೆ ಸಂಶೋಧನೆ ಹಿಂಬದಿಯಲ್ಲಿ ಉಳಿಯಿತು. ಮೂರು ವರ್ಷಗಳ ಕೆಲಸದ ನಂತರ ೧೮೪೨ರಲ್ಲಿ ಡಾರ್ವಿನ್ ಅವರು ಹವಳದ ಬಗ್ಗೆ ಒಂದು ದೊಡ್ಡ ಕೃತಿಯನ್ನು ಪ್ರಕಟಿಸಿದರು. ಕೆಲಸಗಳ ಒತ್ತಡದಿಂದ ವಿಶ್ರಾಂತಿ ಪಡೆಯಲು ಗ್ರಾಮಾಂತರ ಪ್ರದೇಶದಲ್ಲಿನ ತಮ್ಮ ಮನೆಯಾದ ಡೌನ್ ಹೌಸ್‍ಗೆ ತೆರಳಿದರು. ೧೮೪೪ರ ಜನವರಿಯಲ್ಲಿ ತಮ್ಮ ಸಿದ್ಧಾಂತದ ಬಗ್ಗೆ ಒಂದು ಕರಡು ಪ್ರತಿಯನ್ನು ರಚಿಸಿ, ಸಸ್ಯಶಾಸ್ತ್ರಜ್ಞ ಜೊಸೆಫ್ ಡಾಲ್ಟನ್ ಹೂಕರ್ ಅವರಿಗೆ ಇದರ ಬಗ್ಗೆ ತಿಳಿಸಿದರು. ಹೂಕರ್ ಇದರ ಬಗ್ಗೆ ಒಳ್ಳೆ ಅಭಿಪ್ರಾಯವನ್ನು ನೀಡಿದರು. ಜುಲೈ ಹೊತ್ತಿಗೆ ಈ ಕರಡು ಪ್ರತಿಯನ್ನು ೨೩೦ ಪುಟಗಳ ಪ್ರಬಂಧವಾಗಿ ಪರಿವರ್ತಿಸಿದ್ದರು. ೧೮೪೬ರಲ್ಲಿ ಡಾರ್ವಿನ್ ತಮ್ಮ ಮೂರನೆಯ ಭೂರಚನಶಾಸ್ತ್ರದ ಬಗ್ಗೆಯ ಪುಸ್ತಕವನ್ನು ರಚಿಸಿದರು. ೧೮೪೭ರಲ್ಲಿ ಹೂಕರ್ ಅವರಿಗೆ ತಮ್ಮ ಪ್ರಬಂಧವನ್ನು ಕಳುಹಿಸಿದರು ಮತ್ತು ಅವರಿಂದ ಕ್ರಿಯಾತ್ಮಕ ಪ್ರತ್ಯತ್ತರಗಳನ್ನು ಪಡೆದರು.
೧೮೫೬ರಲ್ಲಿ ಲ್ಯೆಲ್ ಅವರು ಆಲ್ಫ್ರೆಡ್ ರಸೆಲ್ ವಾಲೇಸ್ ಅವರ ಒಂದು ಲೇಖನವನ್ನು ಓದಿದರು. ಅದರಲ್ಲಿನ ವಿಚಾರಗಳು ಡಾರ್ವಿನ್ ಅವರ ಸಿದ್ಧಾಂತಗಳನ್ನು ಹೋಲುವುದನ್ನು ನೋಡಿ, ಡಾರ್ವಿನ್ ಅವರಿಗೆ ತಮ್ಮ ವಾದವನ್ನು ಮೊದಲು ಪ್ರಕಟಿಸಲು ಎಚ್ಚರಿಸಿದರು. ಆದರೆ ಡಾರ್ವಿನ್ ಇದರ ಬಗ್ಗೆ ಹೆಚ್ಚು ಚಿಂತಿಸದೆ ತಮ್ಮ ಸಂಶೋಧನೆಗಳನ್ನು ಮುಂದುವರೆಸಿದರು. ತಮ್ಮ ಸಿದ್ಧಾಂತದ ಬಗ್ಗೆ ಒಂದು ಚಿಕ್ಕ ಲೇಖನವನ್ನು ರಚಿಸಿದರೂ, ಮುಖ್ಯವಾಗಿ ಇದರ ಬಗ್ಗೆ ದೊಡ್ಡ ಪುಸ್ತಕವನ್ನು ಬರೆಯುವುದರಲ್ಲಿ ಹೆಚ್ಚು ಮಗ್ನರಾಗಿದ್ದರು. ೧೮೫೮ರ ಜೂನ್ ೧೮ರಂದು ವಾಲೇಸ್ ಅವರಿಂದ ತಮ್ಮ ವಾದವನ್ನು ಹೆಚ್ಚಾಗಿ ಹೋಲುವ ಲೇಖನವೊಂದನ್ನು ಪಡೆದರು. ಇದರಿಂದ ದಿಗಿಲುಗೊಂಡರೂ, ಇದನ್ನು ಲ್ಯೆಲ್ ಅವರಿಗೆ ಕಳುಹಿಸಿ, ವಾಲೇಸ್ ಅವರಿಗೆ ಇದನ್ನು ಪ್ರಕಟಣೆ ಮಾಡುವಲ್ಲಿ ಸಹಕರಿಸುವ ಮಾತು ನೀಡಿದರು. ಮಾತುಕತೆಯ ನಂತರ ಈ ಲೇಖನವನ್ನು ತಮ್ಮ ಲೇಖನದೊಂದಿಗೆ ಲಿನ್ನಿಯನ್ ಸೊಸೈಟಿಯಲ್ಲಿ ಪ್ರಸ್ತಾಪಿಸಲು ನಿರ್ಧರಿಸಿದರು. ತಮ್ಮ ಚಿಕ್ಕ ಮಗ ಸ್ಕಾರ್ಲೆಟ್ ಜ್ವರದಿಂದ ಮರಣ ಹೊಂದಿದರಿಂದ, ಈ ಲೇಖನಗಳನ್ನು ಲ್ಯೆಲ್ ಮತ್ತು ಹೂಕರ್ ಅವರು ಜುಲೈ ೧ರಂದು ಮಂಡಿಸಿದರು.

ಈ ಪ್ರಕಟಣೆಗಳು ವಿಜ್ಞಾನಿಗಳಲ್ಲಿ ಮೊದಲಿಗೆ ಹೆಚ್ಚು ಆಸಕ್ತಿ ಉಂಟು ಮಾಡಲಿಲ್ಲ. ಮುಂದಿನ ೧೩ ತಿಂಗಳುಗಳಲ್ಲಿ ಡಾರ್ವಿನ್ ತಮ್ಮ ಪುಸ್ತಕದ ರಚನೆಯ ಮೇಲೆ ಹೆಚ್ಚಾಗಿ ಕೆಲಸ ನಡೆಸಿದರು. ೧೮೫೯ರ ನವೆಂಬರ್ ೨೨ರಂದು ಆನ್ ದ ಆರಿಜಿನ್ ಆಫ್ ಸ್ಪೀಶೀಸ್ ಪುಸ್ತಕವು ಪ್ರಕಟನೆಗೊಂಡಿತು. ಮೊದಲ ಆವತರಣಿಕೆಯ ೧,೨೫೦ ಪ್ರತಿಗಳು ಬಹಳ ಬೇಗನೆಯೇ ಮಾರಾಟಗೊಂಡವು

ಅಸ್ಥಿತ್ವಕ್ಕಾಗಿ ಹೋರಾಟ (Struggle for Existance)ನೈಸರ್ಗಿಕ ಆಯ್ಕೆಯ ಸಿದ್ದಾಂತಕ್ಕನುಗುಣವಾಗಿ ಯಾವುದೇ ಜೀವಿಯು ತನ್ನ ಉಳಿವಿಗಾಗಿ ತನ್ನ ರಕ್ಷಣೆಯಲ್ಲಿ ತೊಡಗುತ್ತದೆ. ಆ ರಕ್ಷಣೆಯು ಇತರ ಬೇರೆ ಜೀವಿಗಳ ವಿರುದ್ದವಾದ ಹೋರಾಟವಾಗಬಹುದು, ತನ್ನ ಆಹಾರಕ್ಕಾಗಿ, ವಸತಿಗಾಗಿ, ವಂಶಾಬಿವೃದ್ಧಿಗಾಗಿಯಾದರೂ ಸರಿ ತನ್ನದೇ ಅಥವಾ ಬೇರೆ ವರ್ಗಗಳ ಜೀವಿಯೊಡನೆಯ ಹೋರಾಟ್ದಲ್ಲಿ ಯಾವ ಜೀವಿಯು ಆ ಉಳಿವಿನಲ್ಲಿ ಬದುಕುಳಿಯುತ್ತದೋ ಅದು ಮತ್ತು ಅದರ ಸಂತತಿಗಳು ಮಾತ್ರ ಬದುಕುಳಿಯುತ್ತವೆ ಎಂಬುದು ಈ ಸಿದ್ದಾಂತದ ಅರ್ಥ. ಆ ಜೀವಿಯ ಹೋರಾಟವು ಇತರ ಜಾತಿಯ ಜಿವಿಗಳ ವಿರುದ್ದವಾಗಬಹುದು ಅಥವಾ ಪ್ರಾಕೃತಿಕ ವಿಪರೀತಗಳಾವಿರುದ್ದವಾಗಬಹುದು ಎಲ್ಲವನ್ನೂ ಮೀರಿ ಉಳಿಯುವ ಜೀವಿ ಬದುಕಿ ಉಳಿಯುತ್ತದೆ. ಈ ರೀತಿ ಹೋರಾಟದ ಗುಣ ಅವುಗಳ ಜೀನು ಗಳಲ್ಲಿ ಒಂದು ಸಂತತಿಯಿಂದ ಮತ್ತೊಂದು ಸಂತತಿಗೆ ಹರಿದುಬರುತ್ತದೆ.
ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ಸೊಳ್ಳೆಗಳು ಮತ್ತು ಡಿ. ಡಿ. ಟಿ ಕೀಟನಾಶಕ 1950ರ ಸುಮಾರಿನಲ್ಲಿ ಭಾರತ ಮತ್ತಿತರ ಅಬ್ಹಿವೃಧ್ಧಿಹೊಂದುತ್ತಿರುವ ರಾಷ್ಟ್ರಗಳಲ್ಲಿ ಮಲೇರಿಯಾದಿಂದ ಸಾವಿನ ಸಂಖ್ಯೆಗಳು ಹೆಚ್ಚತೊಡಗಿದವು, ಹಾಗು ಮಲೇರಿಯಾ ಹರಡಲು 'ಆನಾಫಿಲೀಸ್ ' ಎಂಬ ಸೊಳ್ಳೆಯೇ ಕಾರಣವೆಂದರಿತ 'ವಿಶ್ವ ಆರೋಗ್ಯ ಸಂಸ್ಥೆ' ಯು ಸೊಳ್ಳೆಗಳು ಬರದಂತೆ ಡಿ.ಡಿ.ಟಿ ಕೀಟನಾಶಕವನ್ನು ಸಿಂಪಡಿಸಲು ಆರಂಭಿಸಿತು. ತಕ್ಷಣವೇ ಮಲೇರಿಯಾವು ಕಾಣಿಯಾಗತೊಡಗಿತು, ಸಾವಿನ ಸಂಖ್ಯೆಯಲ್ಲಿ ಗಣನೀಯ ಇಳಿಮುಖವಾಯ್ತು. ಆದರೆ 1960 ಆಸುಪಾಸಿನಲ್ಲಿ ಈ ಮಹಾಮಾರಿ ಮತ್ತೆ ಬಂದೆರಗಿತು. ಅಷ್ಟೇಅಲ್ಲ ಡಿ.ಡಿ,ಟಿ ಸಿಂಪರಣೆಯಿಂದ ಸೊಳ್ಳೆಗಳು ಸಾಯಲೂ ಇಲ್ಲ. ಇದಕ್ಕೆ ಕಾರಣವನ್ನು ಅಭ್ಯಸಿಸಲು ಆ ಸೊಳ್ಳೆಗಳ ಸಂತತಿಗಳ 'ಜೀನ್ ' (Genes) ಗಳನ್ನು ಪರೀಕ್ಷಿಸಿದಾಗ ಅವುಗಳು ಡಿ.ಡಿ,ಟಿ ಗೆ ಸಾಯದೇ ಅದನ್ನೇ ತಿಂದು ಬದುಕುವ ಶಕ್ತಿಯನ್ನು ಹೊಂದಿದ್ದವು.
ಇದಲ್ಲದೇ ಮತ್ತಷ್ಟು ಉದಾಹರಣೆಯೆಂದರೆ ಜಿರಾಫೆಯ ಕತ್ತು, ದೈತ್ಯ ಡೈನಾಸೋರ್ ಗಳ ವಿನಾಶ ಜೊತೆಗೆ ಅಳಿವಿನ ಅಂಚಿನಲ್ಲಿರುವ ಇತರ ಪ್ರಸ್ತುತ ಜೀವಿಗಳನ್ನೂ ನಾವು ಕಾಣಬಹುದು. (ಕೆಲ ಜೀವಿಗಳ ವಿನಾಶಕ್ಕೆ ನಾವು ನಮ್ಮ ಸ್ವಾರ್ಥವೂ ಕಾರಣವಾದರೂ ಅವುಗಳಿಗೂ ಈ ಸಿದ್ದಾಂತ ಅನ್ವಯವಾಗುತ್ತದೆ)

ಸಿದ್ಧಾಂತದ ಬಗ್ಗೆ ಪ್ರತಿಕ್ರಿಯೆಗಳುಪುಸ್ತಕದ ಪ್ರಕಟಣೆಯು ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಜ್ಞಾನಿಗಳಲ್ಲಿ ಆಸಕ್ತಿ ಮೂಡಿಸಿತು. ಡಾರ್ವಿನ್ ಅಸ್ವಸ್ಥ್ಯತೆಯಿಂದ ಸಾರ್ವಜನಿಕ ವಾದಗಳಲ್ಲಿ ಭಾಗವಹಿಸದಿದ್ದರೂ, ಪ್ರತಿಕ್ರಿಯೆಗಳನ್ನು ಅನುಸರಿಸಿದರು ಮತ್ತು ಆದಷ್ಟು ಪತ್ರಮುಖೇನ ತಮ್ಮ ಸಿದ್ಧಾಂತದ ಬಗ್ಗೆ ಪ್ರಶ್ನೆಗಳನ್ನು ಉತ್ತರಿಸಿದರು. ಇಂಗ್ಲೆಂಡಿನ ಚರ್ಚು ಮತ್ತು ಇತರ ಧಾರ್ಮಿಕ ಸಂಘಟನೆಗಳು ಡಾರ್ವಿನ್ ಅವರ ವಾದಗಳಿಗೆ ವಿರೋಧ ವ್ಯಕ್ತಪಡಿಸಿದವು. ಆದರೆ ಡಾರ್ವಿನ್‌ರ ಆಪ್ತ ಮಿತ್ರರಾದ ಗ್ರೇ, ಹೂಕರ್, ಹಕ್ಸ್ಲಿ ಮತ್ತು ಲ್ಯೆಲ್ ಅವರನ್ನು ಬೆಂಬಲಿಸಿದರು.

ಕಾಲಕ್ರಮೇಣ ನೈಸರ್ಗಿಕ ಆಯ್ಕೆ ಸಿದ್ಧಾಂತಕ್ಕೆ ಹೆಚ್ಚು ಪುರಾವೆಯನ್ನು ನೀಡುವ ಪುಸ್ತಕಗಳು ಪ್ರಕಟಗೊಂಡವು. ಜೀವಶಾಸ್ತ್ರದ ಬುನಾದಿಯಾಗಿ ಈ ಸಿದ್ಧಾಂತವನ್ನು ವಿಜ್ಞಾನಿಗಳು ಒಪ್ಪಿಕೊಂಡರು. ಈ ಸಾಧನೆಗೆ ೧೮೬೪ರ ನವೆಂಬರ್ ೩ರಂದು ಬ್ರಿಟನ್ನಿನ ಅತ್ಯಂತ ಶ್ರೇಷ್ಠ ವೈಜ್ಞಾನಿಕ ಪ್ರಶಸ್ತಿಯಾದ ರಾಯಲ್ ಸೊಸೈಟಿಯ ಕೋಪ್ಲೆ ಪದಕವನ್ನು ಡಾರ್ವಿನ್ ಅವರಿಗೆ ನೀಡಲಾಯಿತು.

ಕಾಮೆಂಟ್‌ಗಳಿಲ್ಲ: