ದಿನವೆಲ್ಲಾ ಸುತ್ತಾಡಿ ಫೀಲ್ಡ್ ವರ್ಕ್ ಮುಗಿಸಿ ಮನೆಗೆ ಬಂದಾಗ ತಲೆ ಧಿಂ! ಎನ್ನುತ್ತಿತ್ತು.
ಏಕೋ ಏನೋ ಇತ್ತೀಚೆಗೆ ಮನೆಗೆ ಬಂದಕೂಡಲೆ 'ಯಾಕಾದರೂ ಮನೆಗೆ ಬಂದನಪ್ಪಾ?' ಅನಿಸುತ್ತಿತ್ತು. ಮಗುವಿನ ಮುದ್ದಾದ ತೊದಲುನುಡಿಗಳಿಂದಷ್ಟೇ ಸ್ವಲ್ಪ ಸಾಂತ್ವಾನದ ಸಿಂಚನ.
ಕೈಯಿಂದ ಬ್ಯಾಗು ತೆಗೆದುಕೊಂಡು "ಕಾಫಿ ತರ್ತೀನಿ, ಸ್ವಲ್ಪ ಹಾಗೆ ಹಾಸಿಗೆಯಲ್ಲಿ ಉರುಳಿಕೊಳ್ಳಿ" ಎಂಬ ಹಸನ್ಮುಖಿ ಮಡದಿಯ ಪ್ರೀತಿಯ ನುಡಿಗಳು ಬರಬಹುದೇನೋ ಅಂದುಕೊಂಡು ಅವಳ ಮುಖ ನೋಡಿದೆ.
ಅಷ್ಟರಲ್ಲಿ ಬಚ್ಚಲುಮನೆಯಲ್ಲಿ ನೀರಿನಲ್ಲಿ ಆಟವಾಡುತ್ತಿದ್ದ ಕಂದ "ಅಪ್ಪಾ! ಅಮ್ಮ ಅಮ್ಮ ! ಅಪ್ಪ ಬತ್ತು" ಎನ್ನುತ್ತಾ ಓಡಿಬಂತು.
ಅದುವರೆಗು ಆಗಿದ್ದ ಬೇಸರವೆಲ್ಲಾ ಕಂದನ ಬಟ್ಟೆಗಾಗಿದ್ದ ನೀರಿನ ಜೊತೆ ಬೆರೆತು ಕರಗಿ ಹೋಯ್ತು.
"ಅಲೆಲೆಲೆಲೇ ಪುಡ್ಡು ಬಾರೋ ರಾಜ, ಅಪ್ಪಗೆ ಮುತ್ಚ ಕೊಲೋ'' ಎನ್ನುತ್ತಾ ಕಂದನನ್ನು ಬಾಚಿ ತಬ್ಬಿ ಹಾಸಿಗೆಯಲ್ಲಿ ಉರುಳಾಡಿದೆ.
" ಅಪ್ಪ ಕೂಲಲಿ (ಸ್ಕೂಲಲ್ಲಿ) ಮಿಚ್ಸು ಕೊತಮ್ಮುಗೆ (ಗೌತಮ್ ಗೆ) ಒರುದ್ಬುತ್ರು''
"ಆಕೋ ಹೊಡಿದ್ರೋ ಪುಟ್ಟಾ? ಅವ್ನೇನ್ ಮಾಡ್ದ?"
"ಆನು ನಂತಳೆಕೆ (ನಂ ತಲೆಗೆ) ಮನ್ನು ಉಯಿಬುತ್ಟ (ಉಯಿದುಬಿಟ್ಟ) ಅಕ್ಕೆ ಒರುದ್ಬುತ್ರು''
" ಹೌದಾ ಕಂದಾ ಅಂಗೆಲ್ಲಾ ಮಣ್ಣಲ್ಲಿ ಜಾಸ್ತಿ ಆಡ್ಬಾರ್ದು ಕಂದ, ಅಂಗೆಲ್ಲ ಆಡಿದ್ರೆ ಬಟ್ಟೆ ಕೊಳೆಯಾಗ್ಬಿಡುತ್ತೆ"
"ಹೂಂ ಆಮೇಕೆ...................................." ಹೀಗೆ ಮುಂದುವರಿಯುತ್ತಲೇ ಇತ್ತು.
ಮಗುವಿನ ಜೊತೆ ನಾನು ಮಗುವಾಗಿಬಿಟ್ಟೆ. "ಕಾಫಿ" ಎನ್ನುವ ಮಡದಿಯ ಕೂಗಿಗೆ ನಾನು ಬಾಹ್ಯಪ್ರಪಂಚಕ್ಕೆ ಬಂದಿದ್ದು.
ಮದುವೆಯಾಗಿ ಕೇವಲ ನಾಲ್ಕೇ ವರ್ಷ, ಆದರೂ ಇಬ್ಬರ ನಡುವೆ ಮಾತುಗಳಿಗೆ ಸಾಕಷ್ಟು ಬರ! ಮಾತನಾಡಿದರೆ 'ಎಲ್ಲಿ ಜಗಳವಾಗುತ್ತೋ' ಅನ್ನುವ ಆತಂಕ ಆನಂತರ ಜಗಳಾ 'ಎಲ್ಲಿ ತಲುಪುತ್ತದೋ' ಎನ್ನುವ ಭಯ ಇಬ್ಬರನ್ನೂ ಕಾಡುತ್ತಿದ್ದರಿಂದಲೋ ಏನೋ ಮಾತುಗಳು ಇಬ್ಬರ ಬಾಯಿಂದಲೂ ಬಹಳ ತುಲನಾತ್ಮಕವಾಗಿ ಹೊರ ಬರುತ್ತಿದ್ದವು.
" ಅಪ್ಪಾ, ಪ್ಬುಕ್ಕು (ಬುಕ್) ತತ್ತಿನ ತಡೀ" ಎನ್ನುತ್ತಾ ಕೈಯಿಂದ ಜಾರಿ ಪಕ್ಕದ ಕೊಠಡಿಗೆ ಮಗು ಓಡಿದ ನಂತರ 'ಸರಕ್ ಸರಕ್'' ಎಂಬ ಕಾಫಿ ಹೀರುವ ಕರ್ಕಶ ಶಬ್ದವಷ್ಟೇ ಬೆಡ್ ರೂಮನ್ನು ಆವರಿಸಿತ್ತು.
" ನಾಲ್ಕು ದಿನ ಎಲ್ಲದ್ರೂ ಹೋಗ್ಬರ್ತೀನಿ" ಎಂದು ಮೌನ ಮುರಿದ ಮಡದಿಯ ಪ್ರಶ್ನೆಗೆ ಉತ್ತರಿಸುವ ಗೋಜಿಗೆ ಹೋಗದೆ ಸುಮ್ಮನಾದೆ.
ಅವಳು ಮಾತ್ರ ಹಾಗೆ ನೋಡುತ್ತಾ ಕುಳಿತಿದ್ದಳು, ನನ್ನ ಉತ್ತರಕ್ಕೆ ಕಾಯುತ್ತಾ.
ಮೊದಲಾಗಿದ್ದರೆ ಎಲ್ಲಾದ್ರೂ ಇರಲಿ ಅವಳ 'ಅಪ್ಪನ ಮನೆಗೆ ಹೋಗ್ತೀನಿ' ಅಂದ್ರೆ ನಖಶಿಖಾಂತ ಉರಿಯುತ್ತಿತ್ತು, ಆಗ ಅವಳು ನನ್ನನ್ನು ರಮಿಸಿ ಸಮಾಧಾನ ಮಾಡಿ 'ತಾನು ಹೇಳಿದ್ದು ತಮಾಷೆಗೆ' ಅನ್ನುತ್ತಿದ್ದಳು. ನಾನು ಸಹ ಸುಖಾಸುಮ್ಮನೆ ಸಿಟ್ಟು ಮಾಡಿಕೊಂಡದ್ದು 'ತಪ್ಪಾಯಿತು ಸಾರ್ರಿ' ಎಂದು ಕೇಳಿ ಅವಳನ್ನು ನಾನೂ ರಮಿಸಿ, ಹೊರಕ್ಕೆ ಕರೆದು ಕೊಂಡು ಹೋಗಿ ಪಾನಿ ಪುರಿ ಕೊಡಿಸಿ, ಸುತ್ತಾಡಿಸಿ ಮನೆಗೆ ಕರೆತರುತ್ತಿದ್ದೆ, ಆದರೆ ಇವತ್ತು ಹಾಗೆನಿಸಲಿಲ್ಲ, ಬದಲಾಗಿ "ಎಲ್ಲಾದ್ರು ಅಂದ್ರೆ, ಎಲ್ಲಿಗೆ?" ಎಂದೆ.
ನನ್ನ ಈ ಪ್ರತಿಕ್ರಿಯೆಯನ್ನು ಅವಳು ನಿರೀಕ್ಷಿರಲಿಲ್ಲವೇನೋ? ಅವಳ ಕಣ್ಣಂಚಿನಲ್ಲಿ ನೀರು ಹರಳುಗಟ್ಟತೊಡಗಿತು. ಪಕ್ಕಕ್ಕೆ ಮುಖ ತಿರುಗಿಸಿ ಗದ್ಗದಿತ ಕಂಠದಿಂದ
"ಅಮ್ಮನ ಮನೆಗೋ ಅಥವಾ ಅಕ್ಕನ ಮನೆಗೋ" ಅಂದಳು.
"ಯಾವಾಗ ಹೋಗ್ತಿಯಾ?'' ಅಂದುಬಿಟ್ಟೆ. ತಕ್ಷಣ ಅಡುಗೆ ಮನೆಗೆ ಓಡಿದಳು, ಅಲ್ಲಿಂದ ಬಿಕ್ಕಳಿಸುವ ಶಬ್ಧ ನನ್ನ ಕಿವಿಯನ್ನು ಇರಿಯುತ್ತಿತ್ತು. ಎದ್ದು ಹೋಗಿ 'ತಪ್ಪಾಯಿತು ಸಾರ್ರಿ' ಅನ್ನಬೇಕು ಎನಿಸಿತು, ತಡೆದು ಸುಮ್ಮನಾದೆ. ಇಂದಿನ ಸಮಸ್ಯೆಗೆ ಉತ್ತರ ಹುಡುಕಲು ನನ್ನ ಮನಸ್ಸು ಎರಡು ದಿನ ಹಿಂದಕ್ಕೆ ಓಡಿತು..................
ಎಂದಿನಂತೆ ಕೆಲಸ ಮುಗಿಸಿ ಸಂಜೆ ಮನೆಗೆ ಬಂದಾಗ ಮಡದಿಯ ಮುಖ ನಿಗಿನಿಗಿ ಕೆಂಡದಂತೆ ಕೆಂಪಾಗಿತ್ತು, ಬೆಲ್ ಶಬ್ದ ಕೇಳಿ ಬಾಗಿಲು ತೆಗೆದವಳೆ ಮಗುವನ್ನು ದರದರನೆ ಎಳೆದು ಕೊಂಡು,
" ಲೋ! ನಿಮ್ಮಪ್ಪಂಗೆಹೇಳೋ, ಸ್ಟೌ ಮೇಲೆ ಕಾಫಿ ಇದೆ ಕುಡಿ ಅಂತ!" ಏನು ಹೇಳಬೇಕು ಎಂದು ತಿಳಿಯದ ಕಂದಮ್ಮ ಪಿಳೀ ಪಿಳಿ ಕಣ್ಣು ಬಿಡುತ್ತಾ ನನ್ನ ಬಳಿ ಬಂತು, ಅದನು ಹೆಗಲಿಗೆ ಏರಿಸುತ್ತಾ,
"ಏನೋ ಕಂದಾ! ಊರಲ್ಲಿ ಮಾರಿಹಬ್ಬ ಇನ್ನೂ 2 ತಿಂಗಳಿದೆ, ಆಗಲೇ ನಿಮ್ಮಮ್ಮನ ಮೈಮೇಲೆ ಮಾರಿ ಬಂದವಳಲ್ಲೋ?" ಎನ್ನುತ್ತಾ ಮಾಮುಲಿಯಾಗೆ ರಮಿಸಲು ಅವಳ ಪಕ್ಕಕ್ಕೆ ಹೋಗಿ ಕುಳಿತು ಗಲ್ಲ ಹಿಡಿಯಲು ಹೋದೆ. ಕೋಪದಿಂದ ಕೈಯನ್ನು ದೂರ ಸರಿಸಿ
" ಮುಟ್ಟಬೇಡಿ ನನ್ನ!!" ಎಂದು ಚೀರಿದಳು. ವಿಷಯವೇನೋ ಗಂಭೀರವಾದ್ದೇ ಅನಿಸಿ ಕೋಪದಿಂದ "ಏನಾಯ್ತು! ಮೊದ್ಲು ಬೊಗ್ಳು!" ಎಂದೆ. ಮರುಮಾತನಾಡದೆ ಹಾಸಿಗೆ ಕೆಳಗಿದ್ದ ಬ್ಯಾಂಕಿನ ನನ್ನ ಅಕೌಂಟಿನ ಸ್ಟೇಟ್ ಮೆಂಟು ಕೈಗಿತ್ತು
"ಹೋದ ತಿಂಗಳು 50,000 ರೂಪಾಯಿ ನನ್ಗೇಳದೆ ಸಾಲಯಾಕ್ ಮಾಡಿದ್ದೀರಿ? ಯಾವಳ್ಗೆ ಸುರಿಯಕೆ ಮಾಡಿದ್ದೀರಿ?" ಅಂದಳು
ಇವಳೇ ನನ್ನ ಸರ್ವಸ್ವ, ಇವಳೇ ನನ್ನ ಜೀವ, ಇವಳಿಲ್ಲದೆ ನನ್ನ ಬದುಕಿಲ್ಲ, ಇವಳೇ ನನ್ನ ಜೀವನದ ಮೊದಲ ಮತ್ತು ಕಡೆಯ ಹೆಣ್ಣು ಎಂದು ತಿಳಿದು ಹಾಗೆಯೇ ಬಾಳುತ್ತಿದ್ದವನಿಗೆ ಇವಳ ಕೆಟ್ಟ ಮಾತುಗಳನ್ನು ಕೇಳಿ ಕಿವಿಗೆ ಕಾದ ಸೀಸ ಉಯ್ದಂತಾಯ್ತು, ಮುಂದೇನು ಮಾಡಬೇಕು ಎಂದು ಯೋಚಿಸುವಷ್ಟರಲ್ಲಿ ಅವಳ ಎಡಗೆನ್ನೆಯ ಮೇಲೆ ನನ್ನ ಬಲಗೈ ಬೆರಳುಗಳ ಗುರುತು ಮೂಡಿದ್ದವು. ಇಷ್ಟೆಲ್ಲಾ ಘಟನೆಗಳಿಗೆ ಮೂಕ ಸಾಕ್ಷಿಯಾಗಿದ್ದ ಮಗು ಏನು ಮಾಡಬೇಕೆಂದು ತಿಳಿಯದೆ ಜೋರಾಗಿ ಅಳತೊಡಗಿತು. ಸಮಾಧಾನಪಡಿಸಲು ಮಗುವನ್ನೆತ್ತಿಕೊಂಡೆ.
"ಏನ್ ಇವರಪ್ಪ ಸಾಕಿದ್ದ್ನೇನೋ ಅನ್ನುವಹಾಗೆ ನನ್ನ್ಮೇಲೆ ಕೈ ಮಾಡ್ತಾನೆ" ತಕ್ಷಣ ನನ್ನ ತಪ್ಪಿನ ಅರಿವಾಯ್ತು, 'ದುಡುಕಿ ಬಿಟ್ಟೆ' ಅನ್ನಿಸಿತು.
''ತಪ್ಪಾಯಿತು ಸಾರ್ರಿ, ಕ್ಷಮಿಸು", ಅಂದೆ. ಅವಳು ಅಳು ನಿಲ್ಲಿಸಲಿಲ್ಲ, ಮಗು ಕೂಡ.
"ನೀನೆ ನನ್ನ ಸರ್ವಸ್ವ, ನೀನೇ ನನ್ನ ಜೀವ, ನೀನಿಲ್ಲದೆ ನನ್ನ ಬದುಕಿಲ್ಲ, ಅಂತ ತಿಳ್ಕೊಂಡಿರೋ ನಂಗೆ 'ಯಾವಳ್ಗೆ ಸುರಿಯಕೆ ' ಅಂತ ಕೇಳ್ತೀಯಲ್ಲ ಇದು ಸರೀನಾ?" ನನ್ನ ಧ್ವನಿ ತುಂಬಾ ಕ್ಷೀಣಿಸಿತ್ತು, ನಾನು ತಪ್ಪಿತಸ್ತ ಎಂಬ ಭಾವನೆ ಎದ್ದು ಕಾಣುತಿತ್ತು. ಮಗು ಕೂಡ ಸುಮ್ಮನಾಯ್ತು. ಮತ್ತೆ ನೀರವ ಮೌನ...........
ಅದು ಮುರುದದ್ದು " ನಾಲ್ಕು ದಿನ ಎಲ್ಲದ್ರೂ ಹೋಗ್ಬರ್ತೀನಿ" ಎನ್ನುವ ಪದದೊಂದಿಗೆ...........
ನನ್ನ ಬಗ್ಗೆ ನನಗೆ ಅಸಹ್ಯ ವೆನಿಸಿತು. ಮೇಲೆದ್ದು ಮಗುವಿನೊಡನೆ ಅಡುಗೆ ಮನೆಗೆ ಹೋಗಿ ಅಳುತ್ತಿದ್ದ ಅವಳ ಪಕ್ಕ ಕುಳಿತು ಅವಳ ತೊಡೆಯ ಮೇಲೆ ತಲೆ ಇಟ್ಟು
''ತಪ್ಪಾಯಿತು ಸಾರ್ರಿ, ಕ್ಷಮಿಸು, ಆದ್ರೆ ನೀನೆಲ್ಲೂ ಹೋಗ್ಬಾರ್ದು?!" ಅಂದೆ. ತಕ್ಷಣ ನನ್ನ ಬಾಯಿ ಮುಚ್ಚಿ, ಬಿಕ್ಕಳಿಸುತ್ತಾ
" ಹಿಂದೂ ಮುಂದೂ ಯೋಚಿಸದೇ ಮಾತಾಡಿದವಳು ನಾನು, ಪ್ಲೀಸ್! ನೀವು ನನ್ನನ್ನ ಕ್ಷಮಿಸಿಬಿಡಿ" ಎನ್ನುತ್ತಾ ನನ್ನ ತಲೆಯ ಮೇಲೆ ಅವಳ ತಲೆಯಿಟ್ಟು, ನನ್ನ ಬೆನ್ನು ನೇವರಿಸತೊಡಗಿದಳು.
" ನಾನು ನಿನಗೆ ಹೇಳ್ಬೇಕಿತ್ತಲ್ವ? ಸಾಲ ಮಾಡಿದ್ಯಾಕೇಂತ? ನಂದೇ ತಪ್ಪು ಸಾ....." ಅನ್ನುವಷ್ಟರಲ್ಲಿ ನನ್ನ ಬಾಯಿಯಮೇಲೆ ಅವಳ ಕೈಯಿತ್ತು.
" ನಾನು ದುಡುಕಿ ಹಾಗೆ ಮಾತಾಡ್ಬಾರ್ದಾಗಿತ್ತು ಅಲ್ವಾ? ಸಾರ್ರಿ" ಅಂದಳು. ಇದೆಲ್ಲವನ್ನೂ ನೋಡುತ್ತಾ ನಿಂತಿದ್ದ ನಮ್ಮ ಮುಗ್ದ ಮಗು ಅಷ್ಟೇ ಮುಗ್ಧತೆಯಿಂದ
"ಅಪ್ಪಾ ಪಾನಿ ಪುಯೀ" ಎನ್ನುತ್ತಾ ಖುಷಿಯಿಂದ ಚಪ್ಪಾಳೆ ತಟ್ಟತೊಡಗಿತು.
ಆ ದುಃಖದಲ್ಲೂ ಇಬ್ಬರಿಗೂ ನಗು ಉಕ್ಕಿ ಉಕ್ಕಿ ಬಂತು....
ಮರುಕ್ಷಣದಲ್ಲಿ ಮೂವರೂ ಬೈಕಿನ ಮೇಲೆ ಕುಳಿತು ಹೊರಟಿದ್ದೆವು.........
ಪಾನಿಪೂರಿ ತಿನ್ನಲು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ