ಭಾನುವಾರ, ನವೆಂಬರ್ 14, 2010

ನಮ್ಮ ಸಣ್ಣತಾಯಮ್ಮ

ಈ ಹಿಂದೆ ಇದೇ blog ಲ್ಲಿ ಸಣ್ಣತಾಯಮ್ಮ ಕಪ್ಪೆ ನುಂಗಿದ್ದು ಮತ್ತು ಸಣ್ಣತಾಯಮ್ಮನಿಗೆ ಸೂಟ್ಕೇಸ್ ಸಿಕ್ಕಿದ್ದು ಎಂಬ ಎರಡು ಹಾಸ್ಯಬರಹಗಳನ್ನು ಪ್ರಕಟಿಸಿದ್ದೆ. ವಾಸ್ತವದಲ್ಲಿ ಅವು ಹಾಸ್ಯಬರಹಗಳೇ ಆಗಿದ್ದರೂ ನಮ್ಮ ಸಣ್ಣತಾಯಮ್ಮನ ಮುಗ್ದತೆಯಿಂದ ಘಟಿಸಿದ ನಿಜ ಪ್ರಸಂಗಗಳೇ ಆಗಿದ್ದವು. ಇಂತಹ ಸಣ್ಣತಾಯಮ್ಮನ ಬಗ್ಗೆ ಈಗ ಬರೆಯಲು ಮುಖ್ಯಕಾರಣ ಆಕೆಯ ಮುಗ್ದತೆ ಮತ್ತು ಆಕೆಯ ಮತ್ತು ಆಕೆಯ ಕುಟುಂಬದೊಡನೆ ನನ್ನ ಬಾಲ್ಯದ ಒಡನಾಟ.
    ಹೌದು! ನಮ್ಮ ಸಣ್ಣತಾಯಮ್ಮ ಲೋಕಜ್ನಾನದ ತಿಳುವಳಿಕೆಯಲ್ಲಿ ಆಕೆ ಬಹಳ ಮುಗ್ದಳೇ, ಆದರೆ ಆಕೆಯೆ ವ್ಯಾವಹಾರಿಕತೆ, ತನ್ನ ಸೋಮಾರಿ ಗಂಡನನ್ನು ದೂರದೆ, ಲೋಕನಿಂದನೆಗೆ ಒಳಗಾಗದೆ, ಸಮಾಜದಲ್ಲಿ ಗೌರವವಾಗಿ ಹೇಗೆ ಬಾಳಿದಳು ಎಂಬುದನ್ನು ನೋಡಿದರೆ ಆಕೆ ಖಂಡಿತವಾಗಿಯೂ ಒಬ್ಬ ಮಾದರಿ ಹೆಣ್ಣಾಗಿ ನಿಲ್ಲುತ್ತಾಳೆ. ಇನ್ನು ಅವಳ ಮುಗ್ದತೆಯಿಂದಾಗಿ ಘಟಿಸಿದ ಸಂಗತಿಗಳ ವಿಚಾರಕ್ಕೆ ಬಂದರಂತೂ ಒಂದು ಉತ್ತಮ ಹಾಸ್ಯಗ್ರಂಥವಾಗುವದರಲ್ಲಿ ಸಂಶಯವಿಲ್ಲ.
    ಆಕೆಯೇನು ನಮ್ಮ ಸಂಬದಿಕಳೇನಲ್ಲ. ನಮ್ಮ ಅಪ್ಪನ ಮದುವೆಗೆ ಮೊದಲೇ ಅಲ್ಲೆಲ್ಲೋ ಚಾಮರಾಜನಗರದ ಹಳ್ಳಿಗಳಲ್ಲಿ ಭೀಕರ ಬರಗಾಲ ಬಂದದ್ದರಿಂದ ತನ್ನ ಗಂಡ ಮತ್ತು ಚಿಕ್ಕ ಮಗಳೊಂದಿಗೆ ನಮ್ಮೂರಿಗೆ ವಲಸೆ ಬಂದವಳು. ಆಕೆಯ ಗಂಡನಾದ ಬೋಜಣ್ಣ ಭತ್ತದ ವ್ಯಾಪಾರದ ದಳ್ಳಾಳಿಯಾಗಿ ಊರೂರು ತಿರುಗುವುದರಲ್ಲೇ ಹೆಚ್ಚು ಕಾಲಕಳೆಯುತ್ತಿದ್ದನು. ಈ ಮಧ್ಯೆ ಮತ್ತೆರಡು ಹೆಣ್ಣು ಮಕ್ಕಳು ಮತ್ತು ಒಬ್ಬ ಗಂಡು ಮಗು ಹುಟ್ಟಿದವು. ಅವುಗಳನ್ನು ಅವರವರ ದಡ ಸೇರಿಸಲು ಆಕೆ ನೆಚ್ಚಿಕೊಂಡಿದ್ದು ಕೂಲಿ ಮಾಡುವ ಕಾಯಕವನ್ನು. ಅದರಲ್ಲೂ ಭತ್ತ ನಾಟಿಮಾಡಲು ಮತ್ತು ಕಬ್ಬು ಕಟಾವು ಮಾಡಲು ಆಕೆ ಕೂಲಿ ಆಳುಗಳ ತಂಡವನ್ನು ಸಂಘಟಿಸುತ್ತಿದ್ದ ರೀತಿ, ಗಣಿತದ ಗಂಧಗಾಳಿಯೇ ಗೊತ್ತಿಲ್ಲದ ಅವಳು ಕೆಲಸ ಮುಗಿದನಂತರ ಬರುವ ದುಡ್ಡನ್ನು ತನ್ನ ತಂಡದ ಸದಸ್ಯರಿಗೆ ಸಮನಾಗಿ ಹಂಚುತ್ತಾ ವ್ಯವಹರಿಸುತ್ತಿದ್ದ ರೀತಿಗೆ ನಿಜಕ್ಕೂ ಒಂದು ’ಹ್ಯಾಟ್ಸಾಫ್’.
    ಎಲ್ಲಕ್ಕಿಂತಲೂ ಹೆಚ್ಚಾಗಿ ನಾನು ಆಕೆಯನ್ನು ಎಂದೂ ಮರೆಯಲು ಸಾಧ್ಯವಿಲ್ಲ ಏಕೆಂದರೆ ಆಕೆ ಒಮ್ಮೆ ನನ್ನ ಜೀವ ಉಳಿಸಿದವಳು.
    ಹೌದು!! ಇದು ೧೯೭೭ ರಲ್ಲಿ ನಡೆದ ಘಟನೆ. ನಾನಾಗ ೧ ವರ್ಷದ ಮಗುವಂತೆ. ನಮ್ಮ ತಾಯಿಯವರ ಮೊದಲನೇ ತಮ್ಮ ಒಮ್ಮೆ ನಮ್ಮ ಊರಿಗೆ ಬಂದಿದ್ದ. ಅಂದೇ ಗದ್ದೆಯ ಬಳಿ ಹೆಚ್ಚಿನ ಕೆಲಸವಿದ್ದದ್ದರಿಂದ ನನ್ನ ಅಮ್ಮ ಮತ್ತು ಅಪ್ಪ ನನ್ನನ್ನು ನೋಡಿಕೊಳ್ಳಲು ಅವನಿಗೆ ಹೇಳಿ ಗದ್ದೆ ಕೆಲಸಕ್ಕೆ ಹೊರಟುಹೋದರಂತೆ. ಆಗೆಲ್ಲಾ ಹಳ್ಳಿಗಳಲ್ಲಿ ಬೆಳಿಗ್ಗೆ ಎಂಟು ಗಂಟೆಗೆ ಮನೆ ಬಿಟ್ಟರೆ ಎಲ್ಲರೂ ಸಾಮಾನ್ಯವಾಗಿ ವಾಪಸಾಗುತ್ತಿದ್ದುದ್ದು ಮಧ್ಯಾನ್ಹ ಎರಡು ಗಂಟೆಯ ನಂತರವಷ್ಟೆ. ಈ ಸಮಯವನ್ನೇ ಉಪಯೋಗಿಸಿಕೊಂಡ ಭೂಪ! ನನ್ನ ಮಾವ, ಮನೆಯಲ್ಲಿದ್ದ ಒಡವೆಗಳನ್ನು ತೆಗೆದುಕೊಂಡು ನನ್ನನ್ನು ಮನೆಯ ಒಳಗೆ ಕೂಡಿಹಾಕಿ, ಹೊರಗಿನಿಂದ ಅಗುಳಿಯನ್ನು ಯಾರೂ ತೆಗೆಯಲಾಗದಂತೆ ಹಾಕಿ ಪರಾರಿಯಾಗಿದ್ದ. ಸಧ್ಯ ನನ್ನ ಜೀವಕ್ಕೇನೂ ತೊಂದರೆಮಾಡಿರಲಿಲ್ಲ. ಬೀದಿ ನಿರ್ಜನವಾದ್ದರಿಂದ ಮತ್ತು ನಮ್ಮ ಮನೆ ಆಗ ಮಾಳಿಗೆ ಮನೆಯಾದ್ದರಿಂದ ಬೀದಿಗೆ ಸದ್ದೂ ಸಹ ಅಷ್ಟಾಗಿ ಕೇಳಿಸುತ್ತಿರಲಿಲ್ಲ. ಅದೇ ಸಮಯಕ್ಕೆ ತನ್ನ ಮನೆಗೆ ಊಟಕ್ಕೆಂದು ಬಂದ ಸಣ್ಣತಾಯಮ್ಮ ನಮ್ಮ ಮನೆಯಿಂದ ಬರುತ್ತಿದ್ದ ನನ್ನ ಅಳುವಿನ ಶಬ್ಧ ಕೇಳಿ ಅನುಮಾನಗೊಂಡು ಪರಿಶೀಲಿಸಿದಾಗ ಅದು ನನ್ನ ಅಳುವಿನ ಶಬ್ಧವೆಂದು ಖಾತ್ರಿಯಾಯ್ತು. ಬಾಗಿಲನ್ನು ತೆಗೆಯಲು ಶತಪ್ರಯತ್ನ ನಡೆಸಿ ವಿಫಲಳಾದ ಆಕೆ, ತಕ್ಷಣವೇ ನಮ್ಮ ಗದ್ದೆಯ ಬಳಿ ಹೋಗಿ ನಮ್ಮ ತಂದೆ ತಾಯಿಗಳಿಗೆ ವಿಚಾರ ತಿಳಿಸಿ ಕರೆತಂದಳು. ತಂದೆಯವರು ಮನೆಯ ಮಾಡಿನ ಮೇಲಿದ್ದ ಬೆಳಕಿಂಡಿಯಿಂದ ಒಳಜಿಗಿದು ನನ್ನನ್ನು ರಕ್ಷಿಸಿದರು. ಹೀಗಾಗಿ ಒಂದರ್ಥದಲ್ಲಿ ಸಣ್ಣತಾಯಮ್ಮ ನನ್ನ ಜೀವದಾತೆ.
    ಇನ್ನು ಆಕೆಯ ಮುಗ್ದತೆಯನ್ನು ಬಹಳಷ್ಟು ಮಂದಿ ’ಆಕೆಯ ದಡ್ಡತನ’ ಎಂದೇ ಪರಿಗಣಿಸಿದ್ದರು. ಅದರಲ್ಲೂ ಆಕೆಯ ಮತ್ತು ಆಕೆಯ ಮನೆಯೆದುರುಗಿನ ’ಡೈರಿ ನಾಗರಾಜು’ ರವರ ಸಂಭಾಷಣೆಗಳನ್ನು ಕೇಳಿದವರಿಗೆ ತುಟಿಯಂಚಿನ ನಗುವನ್ನು ಮರೆಮಾಚಲು ಸಾಧ್ಯವಾಗುತ್ತಲೇ ಇರಲೇ ಇಲ್ಲ.
    ಒಂದು ನಮ್ಮ ಶಿಶುವಿಹಾರದ ಮೇಡಂ ನಮ್ಮ ಬೀದಿಯಲ್ಲಿ ಹಾದುಹೋಗುತ್ತಿದ್ದರು. ಅವರ ಜಡೆ ಮಂಡಿವರೆಗೆ ತಾಗುವಷ್ಟು ಉದ್ದವಿತ್ತು. ಅವರ ಜಡೆ ಮತ್ತು ನಡೆಯನ್ನೇ ತನ್ನ ಹೊಗೆಸೊಪ್ಪು ತುಂಬಿದ ಬಾಯನ್ನು ಬಿಟ್ಟುಕೊಂಡೇ ನೋಡುತ್ತಿದ್ದ ಸಣ್ಣತಾಯಮ್ಮನನ್ನು ನೋಡಿದ ನಾಗರಾಜಣ್ಣ
"ಅಮ್ಮೋ!! ಬಾಯ್ಮುಚ್ಚಮ್ಮೊ!! ಇರೋ ಬರೋ ಸೊಳ್ಳೆಯಲ್ಲ ನಿನ್ಬಾಯ್ಗೋದಾವು, ಮೊದ್ಲೇ ಜನ್ಗೊಳ್ಗೆ ಕಚ್ಚಸ್ಕಳಕೆ ಸೊಳ್ಳೆನೇ ಇಲ್ಲ," ಎಂದು ಕಿಚಾಯ್ಸಿದರು.
"ಅಲ್ಲಾ ಕಣ್ ನಾಗ್ರಾಜಣ! ಮೂರೊತ್ತು ಕೈಯೆಣ್ಣೆ ಜಡಿಯೋ ನನ್ ಜುಟ್ಟು ಕೋಳಿ ಪುಕ್ದಂಗೆ ಮೋಟುದ್ದ ಅದೆ, ಇವ್ಳಮನ್ಕಾಯ್ವಾಗ ಅದ್ಯಂಗ್ ಇವ್ಳ ಕೂದ್ಲು ಇಸ್ಟಿದ್ದ ಆಯ್ತು? ಅಂತ" ಎಂದು ತನ್ನ ಅನುಮಾನವನ್ನು ವ್ಯಕ್ತಪಡಿಸಿದಳು. ಅವಳ ಪ್ರಶ್ನೆ ನಗುತರಿಸಿದರೂ ನಾಗರಾಜಣ್ಣ ಅದನ್ನು ತೋರ್ಪಡಿಸದೇ
"ಈಗ ನೀನು ತಲೆಬಾಚ್ದಾಗ ಕೂದ್ಲು ಬಾಚಣ್ಗೆಗೆ ಅಂಟ್ಕತುದಲ್ಲ ಅದ್ನೇನ್ಮಾಡೀ?" ಎಂದು ಮರು ಪ್ರಶ್ನಿಸಿದರು.
"ಅದೇನ್ಮಾಡರು ತಗಣ! ಉಪ್ಪುಕಾರ ಹಾಕಿ ನೆಕ್ಕಿಯಾ ಅದ? ತಗ್ದು ತಿಪ್ಗೆಸಿತೀವಪ್ಪ. ಏಕೆ? ನೀ ಕಾಣ?" ತನಗೂ ಸಹ ತಿಳುವಳಿಕೆ ಇದೆ ಎಂಬರ್ಥದಲ್ಲಿ ಹೇಳಿದಳು.
"ಅಲ್ಲೇ ನೋಡು ನೀ ತಪ್ಮಾಡದು, ಅವ್ರೇನು ನಿನ್ನಂಗೆ ದಡ್ಡರೂ ಅನ್ಕಂಡಾ? ಅವ್ರು ಕೂದ್ಲಾ ತಿಪ್ಗೆಸಿಯಲ್ಲ, ಉದ್ರೋದ ಕೂದ್ಲಗಳ್ನ ಗೊಬ್ಳಿ ಗೋಂದು ತಗಂಡು ಒಂದ್ರು ತಿಕ್ಕೊಂದ ಅಂಟ್ರುಸಿ ಅಂಟ್ರುಸಿ ಅಷ್ಟುದ್ದ ಮಾಡ್ಕತರೆ" ಎಂದು ಕಣ್ಣು ಕೈ ಅಗಲಿಸಿ ಹೇಳುತ್ತಿದ್ದನ್ನು ಯಾವುದೋ ಮಹತ್ತರ ರಹಸ್ಯವನ್ನು ಕೇಳಿಸಿಕೊಳ್ಳುವವಳಂತೆ ಕಣ್ಣು ಬಾಯಿತೆರೆದು, ಸೊಂಟದಮೇಲೊಂದು ಕೈ, ಮೂಗಿನ ಮೇಲೆಮತ್ತೊಂದು ಕೈ ಇಟ್ಟು
"ಅಂಗೂ ಮಾಡಾರಾ!!??!!" ಎಂದು ಕೇಳಿದಾಗ ಅಕ್ಕಪಕ್ಕದಲ್ಲಿದ್ದವರಾರಿಗೂ ನಗು ತೆಡೆಯಲಾಗಲಿಲ್ಲ.
    ಮತ್ತೊಮ್ಮೆ ತನಗೆ ಗೊತ್ತಿರುವ ಎರಡೇ ಎರಡು ಬೈಗುಳಗಳಾದ "ನಿನ್ಬಾಯ್ಗೆ ಮಣ್ಣಾಕ" "ನಿನ್ಮನೆಕಾಯ್ವಾಗ" ಎಂದು ತನ್ನ ಸಹ ಕೆಲಸಗಾರರೊಬ್ಬಳನ್ನು ಬಯ್ಯುತ್ತಿರುವುದನ್ನು ಆಗತಾನೆ ಕೊಂಡುತಂದಿದ್ದ ತಮ್ಮ ಹೊಸ ಟೇಪ್-ರೆಕಾರ್ಡರ್ ನಲ್ಲಿ ಆಕೆಗೆ ತಿಳಿಯದಂತೆ ರೆಕಾರ್ಡ್ ಮಾಡಿ ಅವಳ ಬೈಗುಳಗಳನ್ನು ಅವಳಿಗೇ ಕೇಳಿಸಿದಾಗ, ಮೂಗಿನ ಬೆರಳಿಟ್ಟೂ
"ಇಂಗೂ ಆದಾದ?!!?!!" ಎಂದು ಆಶ್ಚರ್ಯ ವ್ಯಕ್ತಪಡಿಸುವ ಆಕೆಯ ಭಾವ ಭಂಗಿಯನ್ನು ನೆನೆದರೆ ಇಂದಿಗೂ ನಗು ತೆಡೆಯಲಾಗುವುದಿಲ್ಲ.
    ಇನ್ನು ವಿದ್ಯಾಭ್ಯಾಸದ ವಿಚಾರದಲ್ಲಿ ಸಣ್ಣತಾಯಮ್ಮನಿಗೆ "ಬಿ. ಎ" ಒದಿದರೆ ಮಾತ್ರ ದೊಡ್ಡ ವಿದ್ಯೆ. ನಾನಾವಾಗ ಎಂ.ಎಸ್ಸಿ ಕೊನೆಯ ವರ್ಷದಲ್ಲಿದ್ದೆ. ಒಮ್ಮೆ ಊರಿನಲ್ಲಿ ಎದುರಾದ ಆಕೆ
"ಉಮಣ್ಣ ಚೆನ್ನಾಗಿದ್ದೀಯಾ? ಈಗೇನೊದ್ತಾಯಿದ್ದೀ?" ಎಂದಳು
"ಎಂ. ಎಸ್ಸಿ. ಓದ್ತಿದೀನಿ.". ಎಂದೆ.
"ಅಯ್ಯೋ!! ಮುಕ್ಕ ಹೋಗು! ಈಗ ಎಂಯೆಸಿಯೇ? ಇನ್ನುವೇ ನೀನು ಬಿ.ಎ. ಮಾಡಿ ಕೆಲ್ಸುಕ್ಸೇರಿ, ನಿಮ್ಮಪ್ಪ ಅವ್ವುಂಗೆ ಇಟ್ಟಾಕದ್ಯಾವಗಾ?" ಅಂದು ಬಿಡೋದೆ!!.? ಅವಾಕ್ಕಾಗುವ ಸರದಿ ಈಗ ನನ್ನದಾಗಿತ್ತು!! ಎಂ. ಎಸ್ಸಿ ಅನ್ನುವುದು ಬಿ. ಎ ಗಿಂತ ಸ್ವಲ್ಪ ಜಾಸ್ತಿ ಡಿಗ್ರಿ ಅಂತ ಆಕೆಗೆ ತಿಳಿಹೇಳುವ ಕಷ್ಟವನ್ನು ನಾನು ತೆಗೆದುಕೊಳ್ಳಲಿಲ್ಲ.
    ಈ ರೀತಿ ಆಕೆಯ ನೈಜಘಟನೆಗಳನ್ನು ನೆನೆಯುತ್ತಾ ಹೋದರೆ ಸಮುದ್ರದ ಅಲೆಗಳಂತೆ ನಗು ಉಕ್ಕಿ ಉಕ್ಕಿ ಬರುತ್ತಲೇ ಇರುತ್ತದೆ. ಇಂತಹ ಸಣ್ಣತಾಯಮ್ಮನಿಗೆ ಒಂದು ಚಟವಿತ್ತು, ಅದೇ ಹೊಗೆಸೊಪ್ಪು ಕಡ್ಡಿಪುಡಿ ಜಗಿಯುವ ಕೆಟ್ಟ ಅಭ್ಯಾಸ.  ದುರಂತವೆಂದರೆ ಅದೇ ಚಟ ಅವಳನ್ನು ಬಲಿ ತೆಗೆದುಕೊಂಡಿತ್ತು.
    ಹೌದು!! ಈಗ್ಗೆ ವರ್ಷದ ಕೆಳಗೆ ಒಮ್ಮೆ ಕೆಲಸದ ನಿಮಿತ್ತ ಮಂಡ್ಯದ ಜಿಲ್ಲಾಸ್ಪತ್ರೆಗೆ ಹೋಗಿದ್ದಾಗ, ಆಕೆಯ ಮಕ್ಕಳು ಮತ್ತು ಮೊಮ್ಮಕ್ಕಳು ಆಕೆಯನ್ನು ಸ್ಟ್ರೆಕ್ಚರ್ ನಮೇಲೆ ಮಲಗಿಸಿಕೊಂಡು ತಳ್ಳುತ್ತಾಹೋಗುತ್ತಿದ್ದರು. ಆಕೆಯ ಹತ್ತಿರಹೋದೆ, ಮಾತುಗಳು ಆಕೆಯ ಗಂಟಲಿನಿಂದ ಹೊರಬರಲು ಕಷ್ಟಪಡುತ್ತಿದ್ದವು. ಕಣ್ಣಂಚಿನಲ್ಲಿ ನೀರಾಡಿತ್ತು.
"ಹೇಗಿದ್ದಿಯಮ್ಮ? " ಎಂದೆ, ಸಾವರಿಸಿಕೊಂಡು.
"ಚೆನ್ನಾಗಿದ್ದೀಯಾ ಉಮಣ್ಣ?" ಎಂದಾಗ ಆಕೆಯ ಕಂಗಳಲ್ಲಿ ಅದೇನೋ ವ್ಯಾಕುಲತೆ. ತಕ್ಷಣ ವೈದ್ಯರಲ್ಲಿ ವಿಚಾರಿಸಿದಾಗ ಗಂಟಲು ಮತ್ತು ಬಾಯಿಯ ಕ್ಯಾನ್ಸರೆಂದೂ, ಅದಾಗಲೆ ಕೊನೆಯ ಘಟ್ಟದಲ್ಲಿದೆಯೆಂದು ತಿಳಿಸಿದರು. ಆ ವಿಚಾರ ಈ ಮೊದಲೇ ಆಕೆಗೆ ತಿಳಿದಿದ್ದರಿಂದ ಆಕೆಯೇನು ದುಃಖಗೊಳ್ಳಲಿಲ್ಲ.
" ಇನ್ನೇನು ಇಲ್ಲಾಕನುಮಣ, ಮಗುಂಗೆ ಮದ್ವೆ ಗೊತ್ತಾಗದೆ, ಮದ್ವೆ ನೋಡಗಂಟ ಆ ಜವ್ರಾಯ ನನ್ಬುಟ್ರೆ ಸಾಕಾಗದೆ" ಎನ್ನುವಾಗ ಆಕೆಯ ಕಣ್ಣುಗಳ ಪಕ್ಕದಿಂದ ಕಿವಿಯೊಳಗೆ ನೀರು ಸೇರಿತ್ತು.
"ಏನಾಗಲ್ಲ! ಬಾರಮ್ಮ, ಎಲ್ಲಾ ಸರಿ ಹೋಗುತ್ತೆ"  ಪರಿಸ್ಥಿತಿಯ ಅರಿವಿದ್ದೂ ಆಕೆಯ ಸಮಾಧಾನಕ್ಕಾಗಿ ಬಾಯಿಮಾತಿಗೆಂದು ಹೊರ ಬಂದಿದ್ದೆ.
    ಇದಾದ ಎರಡು ತಿಂಗಳಲ್ಲಿ ಆಕೆಯ ಮಗನ ಮದುವೆ ಮುಗಿದಾಗ ಆಕೆಯ ಸಂತೋಷಕ್ಕೆ ಪಾರವೇ ಇರಲಿಲ್ಲ. ಇದಾದ ಸ್ವಲ್ಪದಿನಗಳಿಗೆ ಕಂಪನಿಯ ಮೀಟಿಂಗ್ ಗಾಗಿ ಹೈದರಾಬಾದ್ ಗೆ ಹೋಗಬೇಕಾಗಿ ಬಂತು. ದುರದೃಷ್ಟವಶಾತ್ ಅಂದೇ ಆಕೆ ಇಹಲೋಕದ ವ್ಯವಹಾರ ಮುಗಿಸಿ ಪರಲೋಕಾಧೀನಳಾಗಿದ್ದಳು. ಕಡೆಯಬಾರಿಗೆ ಆಕೆಯ ಮುಖ ದರ್ಶನದಿಂದ ವಂಚಿತನಾದೆಲ್ಲ ಎಂಬ ಕೊರಗು ಇಂದಿಗೂ ಕಾಡುತ್ತಿದೆ.
’ಎಲ್ಲಾರ ಇರು, ಚೆಂದಾಗಿರು’ ಎಂಬ ಆಕೆಯ ಆಶೀರ್ವಾದ ಇನ್ನೂ ಕಿವಿಯಲ್ಲಿ ಗುನುಗುತ್ತಿದೆ. ಅದನ್ನು ನೆನೆದಾಗಲೆಲ್ಲಾ ನನಗಾಗುವ ಅನುಭೂತಿಯನ್ನು ವರ್ಣಿಸಿಲು ಸಾಧ್ಯವಿಲ್ಲ.

ಕಾಮೆಂಟ್‌ಗಳಿಲ್ಲ: