ಅಬ್ಬಬ್ಬ್ಬಾ!!!!!!!! ನಾವು ನಮ್ಮ ಜಗತ್ತು, ನಮ್ಮ ವೈಜ್ಞಾನಿಕತೆ ಎಷ್ಟೊಂದು ಮುಂದುವರೆದಿದೆ. ಅದು ನಿಜಕ್ಕೂ ಸಂತಸವೇ. ಆದರೆ ಅದೇ ತಾಂತ್ರಿಕತೆ ಎಷ್ಟೆಲ್ಲ ಎಡವಟ್ಟುಗಳಿಗೆ ಕಾರಣವಾಗಿದೆ ಎನ್ನುವುದನ್ನು ನೆನೆಸಿಕೊಂಡರೆ ಮೈಜುಮ್ಮೆನ್ನದಿರುವುದಿಲ್ಲ. ಈಗ ಅದನ್ನೆಲ್ಲ ಹೇಳಿ ನಿಮ್ಮ ತಲೆಗೆ ಹುಳು ಬಿಡುವಿದಿಲ್ಲ ಬಿಡಿ. ಸದ್ಯಕ್ಕೆ ಕೇವಲ 'ಟಿ.ವಿ' ಎಂಬ ಒಂದುಕಾಲದ ಮೂರ್ಖಪೆಟ್ಟಿಗೆ ಎಷ್ಟೊಂದು ಜನರನ್ನು ಮೂರ್ಖರನ್ನಾಗಿಸಿದೆ ನೋಡಿ!!
ಮೊದಮೊದಲು ಟಾಟಾ-ಬಿರ್ಲಾ, ಅಂಬಾನಿ, ಬಜಾಜ್, ಐಟಿಸಿ ಮತ್ತಿತರ ಕಂಪನಿಗಳ ಜೋಬಿಗೆ Advertizeಗಳ ರೂಪದಲ್ಲಿ ಕೈಹಾಕಿ ಕಾಸು ಕಾಣುತ್ತಿದ್ದ ಚಾನಲ್ ಗಳು, ನಿಧಾನವಾಗಿ ನಮ್ಮ ಸಂಸ್ಕೃತಿಯ ಮೇಲೆ ಯಾವರೀತಿಯ ದಾಳಿಯಿಟ್ಟವೆಂದರೆ ಇಂದು ಅವೇನೇ ಮಾಡಿದರೂ ಅದು ನಮ್ಮ ಸಂಸ್ಕೃತಿಯ ಭಾಗವೆಂದೇ ನಾವೂ ನೀವೂ ಎಲ್ಲರೂ ನಂಬುವಂತಿದೆ. ಅಷ್ಟೂ ಸಾಲದೆಂಬಂತೆ ಇಂದು ಬೆಳ್ಳಂಬೆಳಿಗ್ಗೆ ಜೋತಿಷ್ಯ ಕಾರ್ಯಕ್ರಮಗಳನ್ನು ಪ್ರಸಾರಮಾಡುವಮೂಲಕ ಬೀದಿ ಬದಿ ಕುಳಿತು ಗಿಳಿ ಶಾಸ್ತ್ರ ಹೇಳುತ್ತಾ ಹೊಟ್ಟೆಹೊರೆದುಕೊಳ್ಳುತ್ತಿದ್ದವರ ಬಾಯಿಗೆ ಮಣ್ಣುಹಾಕಿವೆ. ಅದು ಹೋಗಲಿ ಅಂದರೆ ಊರೂರು ತಿರುಗಿ ಹತ್ತಾರುಕಡೆ ವಿಚಾರಿಸಿ ಒಂದು ಗಂಡಿಗೆ ಒಂದು ಒಳ್ಳೆಯ ಹೆಣ್ಣಿನ ಸಂಬಂದಗಳನ್ನು ಹುಡುಕಿ ಐನೂರು ಸಾವಿರವೋ ತೆಗೆದುಕೊಂಡು ಸಂಸಾರದೂಗಿಸುತ್ತಿದ್ದ ಬಡಪೆಟ್ಟಿಗೆಗೂ ನಮ್ಮ ಮಾಜಿ ನಟೀಮಣಿ ರಕ್ಷಿತಾರಂತಹವರು ಸುತ್ತಿಗೆಯ ಮೊಳೆಯೊಡೆದಿದ್ದಾರೆ.
ಕಳೆದ ಭಾನುವಾರ ಎಂದಿನಂತೆ ಹತ್ತು ಗಂಟೆಗೆ ಎದ್ದು ಹಬೆಯಾಡುತ್ತಿದ್ದ ಕಾಫಿಯ ಕಪ್ಪಿಗೆ ತುಟಿಯಿಟ್ಟು ಟಿ.ವಿಯ ರಿಮೋಟಿಗೊಂದು ಮೊಟುಕಿ, ಚಾನಲ್ ಗಳನ್ನು ಬದಲಾಯಿಸುತ್ತಾ ಕುಳಿತೆ. ಸುವರ್ಣ ಚಾನಲ್ ನಲ್ಲಿ ಆ ವಾರ ಪೂರ್ತಿ ಪ್ರಸಾರವಾಗಿದ್ದ 'ಸ್ವಯಂವರ' ಕಾರ್ಯಕ್ರಮದ ಮರುಪ್ರಸಾರ ಬರುತ್ತಿತ್ತು. ಆ ಅಸಂಬದ್ದ reality showಗಳನ್ನು ನೋಡಲು ಇಷ್ಟವಿಲ್ಲದ್ದಿದ್ದರಿಂದ ಚಾನಲ್ ಬದಲಾಯಿಸಿದೆ. ಆ ತರಹದ ಕಾರ್ಯಕ್ರಮಗಳು ಸಮಾಜಕ್ಕೆ ಒಳಿತುಮಾಡುವುದಕ್ಕಿಂತ ಕೇಡು ಬಗೆದಿರುವುದೇ ಹೆಚ್ಚೆಂದು ನನ್ನ ಅಭಿಪ್ರಾಯ. ಅಷ್ಟರಲ್ಲಿ ನನ್ನ ಭಾವಮೈದುನ ಹರಿ
''ಭಾವ! ಭಾವ! ಬದ್ಲಾಯಿಸ್ಬೇಡಿ ಈವಾರ ಪೂರ್ತಿ ಆ programme ನೋಡೋಕಾಗ್ಲಿಲ್ಲ ಪ್ಲೀಸ್!" ಅಂದ. ವಿದಿಯಿಲ್ಲದೆ ಕಾಫಿ ಹೀರೋವರೆಗೆ ಕಷ್ಟಪಟ್ಟು ಆ ಕಾರ್ಯಕ್ರಮ ನೋಡುವ ಅನಿವಾರ್ಯತೆಗೆ ಸಿಲುಕಿದೆ. ಯಾರೋ ಒಬ್ಬ ಜುಬ್ಬ ಪೈಜಾಮ ಹಾಕಿದ ಸತ್ತನಾಯಿ ಎಳೆಯುವವರು ತಲೆಗೆ ಎಣ್ಣೆ ಬಳಿದುಕೊಂಡವರಂತೆ ಎಣ್ಣೆ ಬಳಿದುಕೊಂಡ (ಆತನ ಮೇಲೆ ಇಷ್ಟು ಕೋಪವನ್ನು ವ್ಯಕ್ತಪಡಿಸುತ್ತಿತುವ ಕಾರಣ ಮುಂದೆ ನಿಮಗೇ ತಿಳಿಯುತ್ತದೆ) ವ್ಯಕ್ತಿಯೊಬ್ಬ ಅಲ್ಲಿ ಬಂದಿದ್ದ ವಧುವಿಗೆ ಆ ಸ್ಪರ್ಧೆಗೆ ಬಂದಿರುವ ಹುಡುಗರ ಜನ್ಮದಿನಾಂಕವನ್ನಾಧರಿಸಿ ಅವರ ಭವಿಷ್ಯವೇಳುತ್ತಿದ್ದ. ಹಾಗೆ ಹೇಳುತ್ತಾ ಒಬ್ಬ ಹುಡುಗನ ಜನ್ಮದಿನಾಂಕವನ್ನು ನೋಡಿ,
"ಈ ದಿನಾಂಕದಲ್ಲಿ ಹುಟ್ಟಿದವರನ್ನು ಮದುವೆಯಾಗುವುದಿರಲಿ ಭೂಮಿಯ ಮೇಲೂ ಅವರು ಬದುಕಲು ಅರ್ಹರಲ್ಲ" ಎಂಬ ಅರ್ಥಬರುವಂತೆ ಘೋಷಿಸಿಬಿಟ್ಟ. ಆ ಕ್ಷಣದಲ್ಲಿ ಆತ ನನಗೆ ನಮ್ಮ ಸಂಸ್ಕೃತಿಯ ಭಯೋತ್ಪಾದಕನಂತೆ ಕಂಡ. ಎಲ್ಲರೂ ತಿಳಿದ ಮಟ್ಟಿಗೆ ಜ್ಯೋತಿಷ್ಯಶಾಸ್ತ್ರವೆಂಬುದು ನಮ್ಮ ದೇಶದ ಅಷ್ಟೇ ಏಕೆ ಪ್ರಪಂಚದ ಖಗೋಳಶಾಸ್ತ್ರದ ಭದ್ರಬುನಾದಿ.ಅದು ಮನುಷ್ಯ ಬದುಕಲು ಬೇಕಾಗುವ ಜೀವನೋತ್ಸಾಹವನ್ನು ತುಂಬುತ್ತದೆ. ಜೀವನದಲ್ಲಿ ಮುಂದೇನು ಎನ್ನುವಾಗ ಧೈರ್ಯ ತುಂಬಿ ಜೀವನದ ಮೇಲಿ ನಂಬಿಕೆ ಬರುವಂತೆ ಮಾಡುವುದು ನಮ್ಮ ಜ್ಯೋತಿಷ್ಯ. ಅದು ಇಂದು ಇಂತಹ ಅರೆಬರೆ ತಿಳಿದವರಿಂದ ನಂಬಿಕೆ ಹುಟ್ಟಿಸುವ ಬದಲು ಮೂಡನಂಬಿಕೆ ಮೂಡಲು ಕಾರಣವಾಗಿರುವುದು ಪ್ರಸ್ತುತ ಸ್ಥಿತಿಯ ದುರಂತವೇ ಸರಿ. ಈ ರೀತಿ ಯೋಚನಾಲಹರಿ ಹರಿಯುವಷ್ಟರಲ್ಲಿ ನನ್ನ ಪಾಲಿನ ಕಾಫಿ ಮುಗಿದಿತ್ತು. ಲೋಟ ಕೆಳಗಿಟ್ಟು ಮೇಲೆದ್ದೆ. ಹರಿಗೂ ಸಹ ಬೇಜಾರಾಗಿರಬೇಕೆನಿಸುತ್ತೆ. ಮಧ್ಯಾನ್ಹ ತಾನು ಸ್ನೇಹಿತನ ನಿಶ್ಚಿತಾರ್ಥವೊಂದಕ್ಕೆ ಹೊರಟಿರುವುದಾಗಿಯೂ ಊಟಕ್ಕೆ ಕಾಯಬೇಡಿರೆಂದು ತಿಳಿಸಿ ಹೊರಟ.
ಸುಮಾರು ೩ ಘಂಟೆಯ ಸುಮಾರಿಗೆ ವಾಪಸ್ಸು ಬಂದು ನನ್ನವಳಿಗೆ ಅಂದರೆ ಅವನ ಅಕ್ಕನಿಗೆ
"ಊಟ ಕೊಡಕ್ಕ ಹೊಟ್ಟೆ ಹಸಿತೀದೆ" ಅಂದ. ನಮಗೋ ಆಶ್ಚರ್ಯ!! ತಡೆಯದೇ ಕೇಳಿದೆ.
"ಯಾಕಯ್ಯ? ಎಂಗೇಜ್ಮೆಂಟ್ ನಲ್ಲಿ ಊಟ ಹಾಕ್ಲಿಲ್ವೋ?" ರೇಗಿಸಿದೆ
"ಅಯ್ಯೋ! ಯಾಕೇಳ್ತೀತೀ ಭಾವ!! ಆ ದರಿದ್ರ ಸ್ವಯಂವರ ಕಾರ್ಯಕ್ರಮದಿಂದಾಗಿ ನನ್ನ ಸ್ನೇಹಿತನ ಮದ್ವೆ ಮುರಿದುಬಿತ್ತು" ಅಂದ.
"ಏಕೆ? ಏನಾಯ್ತು?"
"ಏನಿಲ್ಲ ಭಾವ ಬೆಳಿಗ್ಗೆತಾನೆ ನೋಡಿದ್ರಲ್ಲ ಆ programmeನ, ಅವನ್ಯಾವನೋ ಹೇಳಿದ್ನಲ್ಲ ಆ ಡೇಟ್ ನಲ್ಲಿ ಹುಟ್ಟುದೋರು ಸರೀ ಇಲ್ಲಾಂತ, ಅದಕ್ಕೆ ನಿಂತೋಯ್ತು, ಯಾಕಂದ್ರೆ ನನ್ನ friend ಕೂಡ ಹುಟ್ಟಿರೋದು ಅದೇ ಡೇಟ್ ನಲ್ಲಿ" ಅಂದ.
ಈಗ ನೀವೇ ಹೇಳಿ ಇದು ಅವಾಂತರವಲ್ಲದೆ ಮತ್ತಿನ್ನೇನು. ಇವುಗಳಿಗೆ ಕಡಿವಾಣಹಾಕಲು ಯಾವುದೇ ಮಾರ್ಗಗಳಿಲ್ಲವೇ?
ಇದು ನಿಜಕ್ಕೂ ಚಿಂತಿಸಬೇಕಾದ ವಿಷಯ. ಅಲ್ಲವೇ?
2 ಕಾಮೆಂಟ್‌ಗಳು:
ಉಮಾಶಂಕರ ಅವರೆ,
ಬಹಳ ಒಳ್ಳೆಯ ಬರಹ. ನಿಮ್ಮ ಬ್ಲಾಗಿಗೆ ಮೊದಲ ಬಾರಿ ಭೇಟಿ ನೀಡುತ್ತಿದೇನೆ. ನಿಮ್ಮ ಬರಹಗಳನ್ನ ಓದಿ ಬಹಳ ಸಂತಸವಾಯಿತು. ’ಬ್ಲಾಗ್ ಅಂದರೆ ಹೀಗಿರಬೇಕು’ ಅನ್ನಿಸುವಷ್ಟು ಮಾದರಿಯಾಗಿದೆ ನಿಮ್ಮ ತಾಣ. ಬ್ಲಾಗ್ ಸಾಹಿತ್ಯವೆಂದರೆ ಮೂಗು ಮುರಿವ ಅನೇಕರಿಗೆ ಬ್ಲಾಗೊಂದು ಹೀಗೂ ಇರಬಲ್ಲದು ಅಂತ ನಿಮ್ಮ ಉದಾಹರಣೆ ನೀಡುವೆ.
ಟೀನಾ ಮೇಡಂ,
ನನ್ನ ಬ್ಲಾಗಿಗೆ ಭೇಟಿ ಕೊಟ್ಟಿದ್ದಕ್ಕೆ ಬಹಳಾ ಧನ್ಯವಾದಗಳು. ನಿಮ್ಮ "ಟೀನಾ ಝೋನ್" ತುಂಬಾ ಚೆನ್ನಾಗಿ ಮೂಡಿಬರುತ್ತಿದೆ.
ಕಾಮೆಂಟ್ ಪೋಸ್ಟ್ ಮಾಡಿ