ಮುಟ್ಟು ಹೆಚ್ಚಾಗಿ ಹೋದರೂ ಸರಿ, ಕಡಿಮೆಯಾದರೂ ಸರಿ ಡಾಕ್ಟರು ಮೊದಲು ಥೈರಾಯ್ಡಾ ಪರೀಕ್ಷೆ ಮಾಡಿಸುತ್ತಾರಲ್ಲಾ, ಹೀಗೇಕೆ? ಮುಖ ಸುಂದರವಾಗಿದ್ದರೂ, ಕೆಲವರಲ್ಲಿ ಗಳಗಂಡ ಬೆಳೆದುಕೊಂಡು ಅವರಿಗೆ ಬೇಸರ ಮೂಡಿಸುತ್ತಲ್ಲಾ ಯಾಕೆ?
ನೋಡಿ, ನಮ್ಮ ಕತ್ತಿನ ಮುಂಭಾಗದಲ್ಲಿ ಚಿಟ್ಟೆಯಾಕಾರದ ಗ್ರಂಥಿ ಒಂದಿದೆ. ಅದು ಗುರಾಣಿಯನ್ನು ಹೋಲುವ ಕಾರಣ, ಅದಕ್ಕೆ ಗ್ರೀಕ್ ಭಾಷೆಯ ಎರವಲಾದ ‘ಥೈರಾಯ್ಡೆ’ ಹೆಸರನ್ನು ನೀಡಿದ್ದಾರೆ. ಕೇವಲ 15-20 ಗ್ರಾಂ ತೂಗುವ ಈ ಪುಟ್ಟ ಅಂಗಕ್ಕೆ ಧಾರಾಳವಾದ ರಕ್ತ ಸರಬರಾಜಾಗಿರುವುದು ಅದರ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ.
ಈ ಥೈರಾಯ್ಡಿನ ಮೂಲ ಘಟಕ (ಯೂನಿಟ್)ದ ಪರಿಧಿಯ ಒಳಹಾಸಿನಲ್ಲಿ ಒಂದೇ ಸ್ವರೂಪದ ಜೀವಕೋಶಗಳು ಸಾಲಾಗಿ ನಿಂತಿವೆ. ಅಲ್ಲಲ್ಲಿ ಕ್ಯಾಲ್ಸಿಟೋನಿನ್ ತಯಾರಿಸುವ ಸ್ವಲ್ಪ ಭಿನ್ನರೂಪದ ಜೀವಕೋಶಗಳೂ ಕಣ್ಣಿಗೆ ಬೀಳುತ್ತವೆ.
ಈ ಘಟಕದ ನಡುವೆ ಇರುವ ಸ್ಥಳದಲ್ಲಿ ಥೈರೊಗ್ಲಾಬ್ಯುಲಿನ್, ಥೈರೊಪ್ರೊಟೀನ್ ಇತ್ಯಾದಿಗಳ ಕಲಸು ದ್ರವ ತುಂಬಿಕೊಂಡಿದ್ದು, ಇಲ್ಲಿಂದಲೇ ಟಿ-4 ಮತ್ತು ಟಿ-3 ರಸದೂತಗಳು ಸಿದ್ಧವಾಗಿ ಸಂಚಿತವಾಗುತ್ತವೆ. ಈ ಪ್ರಕ್ರಿಯೆಗೆ ಪ್ರೇರಣೆ, ಪಿಟ್ಯುಟರಿ ಗ್ರಂಥಿಯಿಂದ ಒಸರುವ ಟಿ.ಎಸ್.ಎಚ್. ರಸದೂತದಿಂದ ಹಾಗೂ ಅದಕ್ಕೆ ಪ್ರಚೋದನೆ ಮಿದುಳಿನಲ್ಲಿನ ಹೈಪೊಥಾಲಮಸ್‌ನಿಂದ.
ಥೈರಾಯ್ಡೆ ಗ್ರಂಥಿಯ ಸ್ರವಿಕೆಯನ್ನು ಹೊರತರಲು ಯಾವ ನಾಳವೂ ಇಲ್ಲ! ಇದೊಂದು ನಿರ್ನಾಳ ಗ್ರಂಥಿ. ಇಲ್ಲಿನ ಸ್ರಾವ ನೇರವಾಗಿ ರಕ್ತ ಸೇರುತ್ತದೆ. ‘ಎತ್ತಣ ಮಾಮರ, ಎತ್ತಣ ಕೋಗಿಲೆ, ಎತ್ತಣಿಂದೆತ್ತಣ ಸಂಬಂಧವಯ್ಯಾ’ ಎನ್ನುವಂತೆ, ಥೈರಾಯ್ಡಾ ರಸದೂತಕ್ಕೆ ಮೂಲ ವಸ್ತು ಐಯೊಡಿನ್. ಈ ಮೂಲಧಾತು ನಮ್ಮ ಆಹಾರದಿಂದಲೇ ಬರಬೇಕಾಗಿದೆ. ಆಹಾರದಲ್ಲಿನ ಐಯೊಡೈಡ್ ಅಂಶ ಹೀರಿಕೆಯಾಗಿ, ರಕ್ತ ಸೇರಿ, ಥೈರಾಯ್ಡೆ ಗ್ರಂಥಿಯನ್ನು ತಲಪುತ್ತದೆ. ‘ಪೆರಾಕ್ಸಿಡೇಸ್’ ಕಿಣ್ವದ ಸಹಾಯದಿಂದ ಅದು ಥೈರಾಯ್ಡಿ ಗ್ರಂಥಿಯ ಜೀವಕೋಶಗಳಲ್ಲಿ ಆಮ್ಲಜನಕೀಕರಣ ಹೊಂದುತ್ತದೆ. ಮುಂದೆ ಸಂಕೀರ್ಣ ಬದಲಾವಣೆಗಳಾಗಿ, ನಂತರ, ಟಿ-4 ಹಾಗೂ ಟಿ-3 (ಥೈರಾಕ್ಸಿನ್, ಟ್ರೈ ಐಯೊಡೋ ಥೈರೊಸಿನ್) ರಸದೂತಗಳು ತಯಾರಾಗಿ, ರಕ್ತಕ್ಕೆ ಬಿಡುಗಡೆಯಾಗುತ್ತವೆ.
ಟಿ-4 ಮತ್ತು ಟಿ-3ಗಳ ಹೆಚ್ಚು ಭಾಗ ರಕ್ತಸಾರ (ಸೀರಮ್)ದ ಪ್ರೋಟೀನ್ ಅಂಶದೊಡನೆ ಬಂಧಿತವಾಗುತ್ತದೆ. ಉಳಿದ ಅನಿರ್ಬಂಧಿತ ಭಾಗ ಚಲನಶೀಲವಾಗಿದ್ದು, ದೇಹದ ನಾನಾ ಅಂಗಾಂಶಗಳಿಗೆ ಸಾಗುತ್ತದೆ. ಟಿ-4, ಟಿ-3ಗಳ ಪ್ರಮಾಣದಲ್ಲೇನಾದರೂ ಹೆಚ್ಚೂಕಡಿಮೆಯಾದರೆ, ಆ ಅಂಗಾಂಗಗಳ ಮಾಮೂಲು ಕೆಲಸಗಳು ಕುಂಠಿತವಾಗುವುದನ್ನು ಗಮನಿಸುತ್ತೇವೆ.
ಈ ಐಯೊಡಿನ್ ಅಂಶ ಸಮುದ್ರದ ಉತ್ಪನ್ನಗಳಲ್ಲಿ ಹೇರಳವಾಗಿ ಸಿಗುತ್ತದೆ. ಮೀನು, ಕಾಡ್ ಲಿವರ್ ಎಣ್ಣೆ ಇತ್ಯಾದಿಗಳು ಆಹಾರದಲ್ಲಿದ್ದಾಗ ಇದರ ಕೊರತೆ ಇರುವುದಿಲ್ಲ. ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಹಾಲು, ಮಾಂಸ, ತರಕಾರಿಗಳಲ್ಲೂ ಸಿಗುತ್ತದೆ. ಒಳನಾಡಿನ ಗುಡ್ಡಪ್ರದೇಶಗಳಲ್ಲಿ ವಾಸಿಸುವವರ ಆಹಾರದಲ್ಲಿ ಐಯೊಡಿನ್ ಅಂಶ ಬಹಳ ಕಡಿಮೆ ಇರುವ ಕಾರಣ ಅಲ್ಲಿನ ಅನೇಕರಲ್ಲಿ ಥೈರಾಯ್ಡಾ ರಸದೂತದ ಪ್ರಮಾಣವೂ ತಗ್ಗಿರುತ್ತದೆ.
ಅಂಥವರ ಕುತ್ತಿಗೆಯ ಮುಂಭಾಗದಲ್ಲಿ ಥೈರಾಯ್ಡಿ ಗ್ರಂಥಿ ಉಬ್ಬಿಕೊಂಡು ಅವರಿಗೆ ‘ಗಳಗಂಡ’ (ಗಾಯ್ಟರ್) ಇದೆ ಎನ್ನುತ್ತೇವೆ. ವಿಚಿತ್ರವೆಂದರೆ, ಕರಾವಳಿಯ ಕೆಲವು ಪ್ರದೇಶಗಳಲ್ಲಿಯೂ ಗಳಗಂಡ ಇರುವವರನ್ನು ಹೆಚ್ಚಾಗಿ ಕಾಣುತ್ತೇವೆ. ಬಹುಶಃ ಅವರ ಆಹಾರದಲ್ಲಿ ಮೀನು ಧಾರಾಳವಾಗಿದ್ದರೂ, ಐಯೊಡಿನ್ ಹೀರಿಕೆಯನ್ನು ತಡೆಯುವ ಬೇರೆ ಅಂಶಗಳೂ ಅಲ್ಲಿ ಇರಬಹುದೇನೋ. ಆದರೆ ಇತ್ತೀಚೆಗೆ ಅಡಿಗೆ ಉಪ್ಪಿನಲ್ಲಿ ಐಯೊಡಿನ್ ಸೇರಿಸುವಂತೆ ಕಾನೂನು ನಿರ್ಬಂಧಿಸಿರುವುದರಿಂದ ಎಲ್ಲೆಲ್ಲೂ ಗಳಗಂಡದ ಪಿಡುಗು ಕಡಿಮೆಯಾಗಿದೆ ಎನ್ನಬಹುದು.
ಥೈರಾಯ್ಡ ರಸದೂತದ ಏರುಪೇರುಗಳನ್ನು ಹದಿಹರೆಯದ ಹುಡುಗಿಯರಲ್ಲೂ ಗರ್ಭಿಣಿಯರಲ್ಲೂ ಹೆಚ್ಚಾಗಿ ಗಮನಿಸುತ್ತೇವೆ. ಹದಿಹರೆಯದ ಬಿಸುಪು ದಿನಗಳಲ್ಲಿ ಆ ರಸದೂತ ಕೆಲವೊಮ್ಮೆ ಇಳಿಮುಖವಾದಾಗ ಹುಡುಗಿಯರ ತೂಕ ಹೆಚ್ಚುವುದನ್ನು ಕಾಣುತ್ತೇವೆ. ಪಾಠಗಳಲ್ಲಿ ಪ್ರಗತಿ ಕುಗ್ಗಿ, ಅವರಲ್ಲಿ ಸೋಮಾರಿತನವೂ ಹೆಚ್ಚುವ ಸಾಧ್ಯತೆ ಇದೆ. ದೃಷ್ಟಿದೋಷಗಳೂ ಇರಬಹುದು. ಈ ಸಮಯದಲ್ಲಿ, ಶಾಲಾ ಮಕ್ಕಳ ತಪಾಸಣೆ ಬಹಳ ಮುಖ್ಯ. ಥೈರಾಕ್ಸಿನ್ ರಸದೂತವನ್ನು ತಕ್ಕ ಪ್ರಮಾಣದಲ್ಲಿ ನೀಡುವುದರ ಮೂಲಕ, ಸಮಸ್ಯೆ ಪರಿಹಾರವಾಗುತ್ತೆ.
ಥೈರಾಯ್ಡೆ ರಸದೂತದ ಮಟ್ಟ ಏರುವುದೂ ಉಂಟು, ಆಗ ಆ ಮಕ್ಕಳು ಸಣ್ಣಗಾಗುತ್ತಾರೆ, ಅವರಿಗೆ ನಿದ್ರೆ ದೂರವಾಗುತ್ತದೆ, ಚಡಪಡಿಕೆ ಹೆಚ್ಚುತ್ತದೆ, ಕಣ್ಣುಗಳು ಅಗಲವಾಗುವುದೂ ಉಂಟು, ಆಗ ಕಾರ್ಬಮಸೋಲ್, ರೇಡಿಯೊ ಆಕ್ಟಿವ್ ಐಯೊಡಿನ್, ಅಪರೂಪಕ್ಕೆ ಶಸ್ತ್ರಚಿಕಿತ್ಸೆ ಇತ್ಯಾದಿಗಳು ಬೇಕಾಗುತ್ತವೆ.
ಸ್ತ್ರೀಯರಿಗೆ ಮಕ್ಕಳಾಗದಿದ್ದಾಗ, ಪದೇ ಪದೇ ಗರ್ಭಪಾತವಾದಾಗ, ಹುಟ್ಟಿದ ಮಗುವಿನಲ್ಲಿ ಆಜನ್ಮ ವಿಕಲತೆ, ಬುದ್ಧಿಮಾಂದ್ಯತೆ ಇತ್ಯಾದಿ ದೋಷಗಳಿದ್ದಾಗ, ಥೈರಾಯ್ಡಾ ತಪಾಸಣೆ ತೀರಾ ಅಗತ್ಯವಾಗುತ್ತದೆ. ಋತುಸ್ರಾವ ತೀರಾ ಹೆಚ್ಚಾದರೂ, ಕಡಿಮೆಯಾದರೂ ಥೈರಾಯ್ಡಾ ಗ್ರಂಥಿಯೇ ಅನೇಕ ಸಮಯಗಳಲ್ಲಿ ಅಪರಾಧಿ ಸ್ಥಾನದಲ್ಲಿ ನಿಲ್ಲುತ್ತದೆ. ಈ ಎಲ್ಲಾ ಸಂದರ್ಭಗಳಲ್ಲಿಯೂ ತಜ್ಞರು ಟಿ-4, ಟಿ-3 ಪ್ರಮಾಣವನ್ನು ಮೊದಲು ತಿಳಿದುಕೊಳ್ಳುತ್ತಾರೆ. ಟಿ.ಎಸ್.ಎಚ್. (ಥೈರಾಯ್ಡಾ ಪ್ರೇರಕ ರಸದೂತ) ಮಟ್ಟವನ್ನೂ ಅಳೆಯಬೇಕಾಗುತ್ತದೆ.
ಗರ್ಭಿಣಿಯಲ್ಲಿ ಆಯಾಸ, ಮಲಬದ್ಧತೆ, ಚಳಿ ತಡೆದುಕೊಳ್ಳಲಾಗದ ಪರಿಸ್ಥಿತಿ, ಮೈಬಾವು, ಹೃದಯ ಬಡಿತದ ತೀವ್ರತೆ ಹೆಚ್ಚಾಗುವುದು, ಥೈರಾಯ್ಡಾ ಗ್ರಂಥಿಯ ಉಬ್ಬುವಿಕೆಗಳಿದ್ದರೂ ಥೈರಾಯ್ಡಾ ಪರೀಕ್ಷೆ ಅನಿವಾರ್ಯವಾಗುತ್ತದೆ.
ಗರ್ಭಸ್ಥ ಮಗುವಿಗೆ ಥೈರಾಯ್ಡೆ ರಸದೂತಗಳು ಸರಿಯಾದ ಪ್ರಮಾಣದಲ್ಲಿ ದಕ್ಕದಿದ್ದರೆ, ಸೊರಗುತ್ತದೆ. ಕೆಲವೊಮ್ಮೆ ಹೆರಿಗೆಯಲ್ಲಿ ಬೇಗ ಜೀವ ನೀಗುವುದೂ ಉಂಟು. ಹಾಗಾಗಿ, ಥೈರಾಯ್ಡೆ ಕೊರತೆಯನ್ನು ಪ್ರಾರಂಭದಲ್ಲಿಯೇ ಕಂಡುಹಿಡಿದು, ‘ಥೈರಾಕ್ಸಿನ್’ ಮಾತ್ರೆಗಳನ್ನು ಗರ್ಭಿಣಿಗೆ ಕೊಡಬೇಕಾಗುತ್ತದೆ.
ಥೈರಾಯ್ಡೆ ತನ್ನ ಪ್ರಭಾವವನ್ನು ದೇಹದ ಎಲ್ಲಾ ಪ್ರಕ್ರಿಯೆಗಳ ಮೇಲೂ ಆಕ್ಟೋಪಸ್‌ನಂತೆ ಚಾಚಿಕೊಂಡಿರುತ್ತದೆ. ಅದೊಂದು ಸ್ನೇಹಗ್ರಂಥಿ, ನಿಜ. ಹಾಗಿದ್ದರೂ, ಕೆಲವೊಮ್ಮೆ ಅದರ ಕಾರ್‍ಯನಿರ್ವಹಣೆ ಮುಗ್ಗರಿಸುತ್ತದೆ. ಆಗ ಆರಂಭದ ಹಂತದಲ್ಲಿಯೇ ತಜ್ಞರು ಅದನ್ನು ಪತ್ತೆ ಮಾಡಬಲ್ಲರು. ಅದಕ್ಕೆ ಸೂಕ್ತ ಚಿಕಿತ್ಸೆ ನೀಡಬಲ್ಲರು. ಆ ಪುಟ್ಟ ಗ್ರಂಥಿಯನ್ನು ಮತ್ತೆ ಹಳಿಗೆಳೆದು ನಿಲ್ಲಿಸಿ, ನಮಗೆ ಆರೋಗ್ಯವನ್ನು ನೀಡಬಲ್ಲರು. ಇದನ್ನು ನಾವು ಮರೆಯಬಾರದು!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ