ಗುರುವಾರ, ಆಗಸ್ಟ್ 25, 2011

ದೇಶಪ್ರೇಮವಿಲ್ಲದ ’ಜಾತ್ಯಾ’ತೀತ ರಾಷ್ಟ್ರದಲ್ಲಿ ಮಾತ್ರ ಇಂತಹ ಘಟನಾವಳಿಗಳು ಸಾಧ್ಯ!!

ಸ್ವಾತಂತ್ರ್ಯ ದಿನದಂದು ಟಿ. ವಿಯಲ್ಲಿ ಬರುತ್ತಿದ್ದ ಹಲವಾರು ಭಾಷಣಗಳಲ್ಲಿ ’ಭಾರತ ಒಂದು ಜಾತ್ಯಾತೀತ ರಾಷ್ಟ್ರ’ ಎಂದು ಅನೇಕಬಾರಿ ಇಣುಕಿದ್ದರಿಂದ ಪಕ್ಕದಲ್ಲೇ ಕುಳಿತಿದ್ದ ೧೧ ವರ್ಷದ ನನ್ನ ಅಣ್ಣನ ಮಗ ’ಚಿಕ್ಕಪ್ಪ ಜಾತ್ಯಾತೀತ ರಾಷ್ಟ್ರ ಎಂದರೇನು?’ ಎಂದ. ’ಯಾವುದೇ ಜಾತಿ ಭೇಧವಿಲ್ಲದೆ, ಎಲ್ಲಾ ಧರ್ಮದವರು ಸಮಾನವಾಗಿ ಬದುಕುವ ರಾಷ್ಟ್ರಕ್ಕೆ ಜಾತ್ಯಾತೀತ ರಾಷ್ಟ್ರ ಎನ್ನುತ್ತಾರೆ’ ಎನ್ನುವ ೨೦ - ೨೫ ವರ್ಷಗಳ ಕೆಳಗೆ ಸ್ಕೂಲಿನಲ್ಲಿ ಕಲಿತದ್ದನ್ನು ಅವನಿಗೆ ವಿವರಿಸಿದೆ.
’ಅಂದ್ರೆ, ನಾವು ಯಾರನ್ನೂ ನೀವು ಯಾವ ಜಾತಿ ಅಂತ ಕೇಳಬಾರದು ಅಲ್ವೇ?’ ಎಂಬ ಅವನ ಮರು ಪ್ರಶ್ನೆಗೆ ’ಹೌದಪ್ಪ’ ಎಂದು ತಲೆಯಾಡಿಸಿದೆ.
’ಹಾಗಾದ್ರೆ ನಮ್ಮ ಸ್ಕೂಲು ಅರ್ಜಿಯಲ್ಲಿ ’ನಿಮ್ಮ ಜಾತಿ ಯಾವುದು ನಮೂದಿಸಿ’ ಅಂತ ಯಾಕಿರುತ್ತೆ?’ ಎಂಬ ಅವನ ಮತ್ತೊಂದು ಮರುಪ್ರಶ್ನೆಗೆ ನಾನು ಅಕ್ಷರಶಃ ನಿರುತ್ತರನಾಗಿದ್ದೆ!
ಏಕೆ ಈ ಘಟನೆಯನ್ನು ಇಲ್ಲಿ ಪ್ರಸ್ತಾಪಿಸಿದ್ದೇನೆಂದರೆ ನಾವು ನಮ್ಮ ಮಕ್ಕಳಲ್ಲಿ ’ನಮ್ಮ ದೇಶ’ ’ನಮ್ಮ ಭಾಷೆ’ ಎಂದು ಕಲಿಸುವುದಕ್ಕಿಂತಾ ಮೊದಲೇ ’ನಮ್ಮ ಜಾತಿ’ ಎಂಬ ವಿಷಬೀಜವನ್ನು ನಮಗರಿವಿಲ್ಲದಂತೆಯೇ ನೆಟ್ಟು ಬೆಳೆಸಿ, ಅದು ಹೆಮ್ಮರವಾಗುವಂತೆ ನೋಡುಕೊಳ್ಳುವಲ್ಲಿ ಯಶಸ್ವಿಯೂ ಆಗಿರುತ್ತೇವೆ!! ಎಷ್ಟರ ಮಟ್ಟಿಗೆ ಎಂದರೆ ಇಮಾಮ್ ಬುಖಾರಿ ಯಂತಹ ಕರ್ಮಠರು ’ಅಣ್ಣಾ ಮುಸ್ಲೀಮರನ್ನು ಹೋರಾಟಕ್ಕೆ ಏಕೆ ಆಹ್ವಾನಿಸಿಲ್ಲ’ ಎಂದು ಕೇಳಿದಾಗ ಒಂದು ಸದುದ್ದೇಶಕ್ಕಾಗಿ ಹೋರಾಡುತ್ತಿರುವ ಅಣ್ಣಾ ಹಜಾರೆಯವರನ್ನು ಅನುಮಾನದಿಂದ ನೋಡುತ್ತೇವೆಯೇ ಹೊರತು ’ಯಾಕಪ್ಪ ಇಮಾಮ್ ಸಾಬ್ರೇ, ನೀವೇನು ಭಾರತೀಯರಲ್ಲವೇ?, ನಿಮಗೇನು ಭ್ರಷ್ಟಾಚಾರದ ಬಿಸಿ ತಟ್ಟಿಲ್ಲವೇ? ಅಣ್ಣಾ ಹಜಾರೆ ಕರೆ ಕೊಟ್ಟಿದ್ದು, ಹೋರಾಡುತ್ತಿರುವುದು ಬರೀ ಹಿಂದೂಗಳಿಗೋಸ್ಕರವಷ್ಟೇ ಅಲ್ಲ, ಮುಸ್ಲೀಮರು, ಕ್ರಿಸ್ತರು, ಬೌದ್ಧರು ಇತರರೂ ಸಹಬಾಳ್ವೆ ನಡೆಸುವ ’ಜಾತ್ಯಾ’ತೀತವಾದ ಭಾರತಕ್ಕೆ’ ಎಂದು ತಪರಾಕಿ ಕೊಡುವ ಕೊಡುವ ಧೈರ್ಯ ಯಾವೊಬ್ಬ ಭಾರತೀಯ ನಾಯಕನಿಗೂ ಇರಲಿಲ್ಲ! ಬದಲಾಗಿ ಹೋರಾಟವನ್ನು ಹತ್ತಿಕ್ಕಲು ಇದನ್ನೇ ಗುರಾಣಿಯಂತೆ ಬಳಸಲು ಆಡಳಿತ ಸರ್ಕಾರ ತಯಾರಿ ನಡೆಸುತ್ತಿದ್ದರೆ, ಸರ್ಕಾರ ತಪ್ಪು ಹೆಜ್ಜೆ ಇಟ್ಟಾಗ ಕಿವಿ ಹಿಂಡಿ ಸರಿದಾರಿಗೆ ತರಬೇಕಾದ ವಿಪಕ್ಷಗಳು ’ಜನಲೋಕಪಾಲ ಕಾಯ್ದೆ ಬಂದರೆ ನಮ್ಮ ಬುಡವೂ ನೀರಾದೀತು?’ ಎಂಬ ಭಯದಿಂದ ಜಾಣಕಿವುಡು - ಕುರುಡು ಪ್ರದರ್ಶಿಸುತ್ತವೆ.
    ಈಗ್ಗೆ ಎರಡು ಮೂರು ವರ್ಷಗಳ ಕೆಳಗೆ ಆಸ್ಟ್ರೀಲಿಯಾದಲ್ಲಿ ಭಯೋತ್ಪಾದಕರ ದಾಳಿಯಾದಾಗ ಅಲ್ಲಿನ ಭಯೋತ್ಪಾದನಾ ಸಂಘಟನೆಯೊಂದು ಇದೇ ರೀತಿ ಹೇಳಿಕೆ ನೀಡಿದಾಗ ಆಗಿನ ಪ್ರಧಾನಿ ’ಜಾನ್ ಹೋವಾರ್ಡ’ ಕೊಟ್ಟ ಉತ್ತರ ’ಮೊದಲು ನೀವು ಆಸ್ಟ್ರೇಲಿಯನ್ನರು, ನಂತರ ನಿಮ್ಮ ಧರ್ಮ, ಹಾಗಿದ್ದಲ್ಲಿ ನಿಮಗಿಲ್ಲಿ ಜಾಗ, ಇಲ್ಲವೇ ಪರಿಸ್ಥಿತಿ ಎದುರಿಸಿ!’ ಎಂಬ ದಿಟ್ಟ ಉತ್ತರ ಕೊಟ್ಟಿದ್ದರು. ಹಾಗೆ ಉತ್ತರಿಸಲು ನಮ್ಮ ನಾಯಕರಿಗೇಕೆ ಸಾಧ್ಯವಿಲ್ಲ?
    ಅದು ಒತ್ತಟ್ಟಿಗಿರಲಿ ಒಂದು ಉತ್ತಮ ಸಾಮಾಜಿಕ ಉದ್ದೇಶದಿಂದ ಕೂಡಿದ ಒಂದು ಚಳುವಳಿಯನ್ನು ಹೇಗೆಲ್ಲಾ ಹತ್ತಿಕ್ಕಬಹುದೆಂದು ಯು. ಪಿ. ಎ ಸರ್ಕಾರವನ್ನು ನೋಡಿ ಇಡೀ ಪ್ರಪಂಚವೇ ಕಲಿಯಬೇಕು!! ಮಾತುಕತೆಗೆ ಆಹ್ವಾನಿಸುವ ನೆಪದಲ್ಲಿ ಕಾಲಹರಣ ಮಾಡುತ್ತಾ ಸಂಸದೀಯ ಸಮಿತಿ ಮುಂದೆ ನಿಮ್ಮ ಕರಡನ್ನು ಇಡಬೇಕು, ಇದು ಸಂಸತ್ ವ್ಯವಸ್ಥೆ, ಅದನ್ನು ಮುರಿಯಲಾಗದು, ಹಾಗದಲ್ಲಿ ಅದು ಪ್ರಜಾಪ್ರಭುತ್ವಕ್ಕೆ ಮಾಡುವ ಅತೀ ದೊಡ್ಡ ಅವಮಾನ!! ಇತ್ಯಾದಿ, ಇತ್ಯಾದಿ ಬೊಗಳೆ ಬಿಡುವ ಕೇಂದ್ರ ಸರ್ಕಾರ, ತನಗೆ ಬೇಕಾದ ಅದೆಷ್ಟೋ ಮಸೂದೆಗಳನ್ನು ಸಂಸದೀಯ ಸಮಿತಿ ಮುಂದಿಡದೆ ಸಂಸತ್ತಿನಲ್ಲಿ ಅನುಮೋದನೆ ಪಡೆದಿರುವುದನ್ನು ಮರೆತೇ ಬಿಡುತ್ತದೆ. ಜೊತೆಗೆ ಅರುಣಾ ರಾಯ್, ಅರುಂಧತಿ ರಾಯ್ ಅಂತಹವರನ್ನು ಮಾಧ್ಯಮಗಳ ಮೂಲಕ ಛೂ ಬಿಟ್ಟು, ಬೆಣ್ಣೆಯಲ್ಲಿ ಕೂದಲು ತೆಗೆವಂತಹ ನಾಜೂಕಾದ ಹೇಳಿಕೆಗಳನ್ನು ಕೊಡಿಸಿ ಚಳುವಳಿಯನ್ನೇ ದಾರಿತಪ್ಪಿಸುವ ತನ್ನ ಚಾಳಿಯನ್ನು ಮುಂದುವರೆಸುತ್ತದೆ. ಇದಕ್ಕೆಲ್ಲಾ ಕಳಶಪ್ರಾಯವೆಂಬಂತೆ ಪ್ರಣವ್ ಮುಖರ್ಜಿ ಎನ್ನುವ ದೂರ್ವಾಸ ಮುನಿಯನ್ನು ಸರ್ಕಾರದ ಪರವಾಗಿ ಅಣ್ಣಾತಂಡದೊಡನೆ ಮಾತುಕತೆಗೆ ಕಳುಹಿಸಿ ’ಏನಾದರೂ ಮಾಡಿಕೊಳ್ಳಿ, ಅಣ್ಣಾ ಸತ್ತರೆ ನಮಗೇನೂ ನಷ್ಟವಿಲ್ಲ’ ಎಂಬಂತಹ ಬೇಜಾವಬ್ದಾರಿ ಸಂದೇಶವನ್ನು ಕಳುಹಿಸುತ್ತದೆ.
    ಅಸಲಿಗೆ ಜನಲೋಕಪಾಲ ಕಾಯ್ದೆಯಿಂದ ಜನರಿಗೆ ಕೆಟ್ಟದ್ದಾಗುತ್ತದೋ ಒಳ್ಳೆಯದಾಗುತ್ತದೋ ಅದರ ಜಿಜ್ನಾಸೆ ಬೇರೆ. ಆದರೆ ಸರ್ಕಾರವೂ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ಅದರ ಬಗ್ಗೆ ನಿರಾಸಕ್ತಿ ತೋರುವ ಮೂಲಕ ಪ್ರತೀ ಹಂತದ ಭ್ರಷ್ಟಾಚಾರದಿಂದ ಬೇಸತ್ತ ಜನಗಳಲ್ಲಿ ಜನಲೋಕಪಾಲ ಮಸೂದೆಯಿಂದ ಮಾತ್ರ ಭ್ರಷ್ಟಾಚಾರದ ಬುಡಮೇಲು ಸಾಧ್ಯ! ಎನ್ನುವ ಆಶಾಕಿರಣ ಮೂಡಿಸಲು ಕಾರಣವಾಗಿವೆ. ಅದಲ್ಲದೆ ಸರ್ಕಾರ ಮತ್ತು ಕೆಲ ’ಬುದ್ಧಿ ಜೀವಿಗಳು’ ಹೇಳುವಂತೆ ’ಅಣ್ಣಾ ತಂಡ ಬ್ಲಾಕ್-ಮೇಲ್ ತಂತ್ರ ಅನುಸರಿಸುತ್ತಿದೆ’ ಎನ್ನುವ ಮಾತು ಸ್ವಲ್ಪ ಸತ್ಯಕ್ಕೆ ಹತ್ತಿರವೆನಿಸಿದರೆ ರಾಜಕೀಯ ಪಕ್ಷಗಳ ಹಠಮಾರಿತನದ ಧೋರಣೆಯಿಂದ ’ಮಾಡಿದರೆ ತಪ್ಪೇನು?’ ಆಗಲಾದರೂ ಒಳಿತಾದೀತು ಎನ್ನುವ ಭಾವನೆ ಸಾಮಾನ್ಯನದ್ದು.
    ಬಹುಶಃ ವ್ಯತಿರಿಕ್ತಗಳಿಗೆ ನಮ್ಮ ದೇಶದ ಇತಿಹಾಸವೂ ಕಾರಣ! ಇದುವರೆಗೆ ನಮ್ಮದೇಶದಲ್ಲಿ ನಡೆದ ಹೋರಾಟಗಳೆಲ್ಲವೂ ಬಡವರಿಂದ, ಶೋಷಿತವರ್ಗದವರಿಂದ ಪ್ರಾರಂಭವಾದರೂ ಅವುಗಳ ಫಲ ಉಂಡವರು ಉಳ್ಳವರೇ! ಸ್ವಾತಂತ್ರ್ಯ ಸಂಗ್ರಾಮವನ್ನೇ ತೆಗೆದುಕೊಳ್ಳಿ ಅದು ಪ್ರಾರಂಭವಾಗಿದ್ದು ಮಾತ್ರ ಬ್ರಿಟೀಷರ ದಬ್ಬಾಳಿಕೆಯ ತಾಪ ತಾಳಲಾರದ ಬಡವರ್ಗದವರಿಂದಾದರೂ ಅದು ಬಲಿತು ಪಕ್ವವಾಗುವ ವೇಳೆಗೆ ಮುಂದಾಳತ್ವ ವಹಿಸಿದ್ದು ಸುಖದ ಸುಪ್ಪತ್ತಿಗೆಯ ಸಿರಿವಂತರಾದ ಗಾಂಧಿ, ನೆಹರು, ಸರ್ದಾರ್ ಪಟೇಲ್ ಮುಂತಾದವರು. ಅಂದಮಾತ್ರಕ್ಕೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅವರ ಪಾತ್ರವೇನೂ ಇಲ್ಲ ಎನ್ನುವುದು ಮುಠ್ಠಾಳತನವಾದೀತು! ಆದರೆ ಅವರಿಗೆಲ್ಲಾ ಸ್ವಾತಂತ್ರ್ಯದ ’ಫಲ’ದ ಬಗ್ಗೆ ಸ್ಪಷ್ಟ ಪರಿಕಲ್ಪನೆಯಿದ್ದೀತು! ಇದೆಲ್ಲವೂ ಅವರು ಅಧಿಕಾರಕ್ಕೆ ಬಂದಕೂಡಲೆ ಸ್ಪಷ್ಟವೂ ಆಗಿ ಹೋಗಿತ್ತು! ಕೇವಲ ಒಬ್ಬ ಲಾಲ ಬಹದ್ದೂರ್ ಶಾಸ್ತ್ರಿಯವರನ್ನು ಬಿಟ್ಟರೆ ಉಳಿದವರೆಲ್ಲಾ ಅಧಿಕಾರದಿಂದ ಏನೆಲ್ಲಾ ಗಳಿಸಬಹುದೆಂದು ತೋರಿಸಿಕೊಡುವುದರ ಮೂಲಕ ಸಾಮಾನ್ಯರೂ ಸಹ ದೇಶವನ್ನು ಮರೆತು ಅಧಿಕಾರಕ್ಕೆ ಆಸೆಪಡುವಂತಾಗಿದ್ದರಿಂದಲೇ ಇಂದು ಭ್ರಷ್ಟಾಚಾರವೆಂಬುದು ಒಂದು ಗುಣವಾಗದ ಅರ್ಬುದ ರೋಗಕ್ಕಿಂತ ಹೆಚ್ಚಾಗಿ ಬೆಳೆದು ನಿಂತಿದೆ.
    ಇದಕ್ಕೆ ವ್ಯತಿರಿಕ್ತ ಎಂಬಂತೆ ನಮ್ಮ ಪಕ್ಕದ ಚೀನಾ, ರಷ್ಯಾ, ಜರ್ಮನಿ ಮತ್ತಿತರ ದೇಶಗಳಲ್ಲಿ ಕ್ರಾಂತಿ ನಡೆದದ್ದು ಬಡವರಿಂದಲೇ. ಆದರೆ ಅಧಿಕಾರ ಅನುಭವಿಸಿ ದೇಶವನ್ನು ಒಳ್ಳೆಯ ದಾರಿಯಲ್ಲಿ ಮುನ್ನಡೆಸಿದವರು ಯಾರೂ ಸಹ ಸಿರಿವಂತರಾಗಿರಲಿಲ್ಲ, ಅದು ಹಿಟ್ಲರ್ ಆಗಿರಬಹುದು, ಲೆನಿನ್ ಆಗಿರಬಹುದು ಅಥವಾ ಮಾವೋತ್ಸೆ ತುಂಗ್ ಆಗಿರಬಹುದು ಎಲ್ಲರೂ ಹಸಿವನ್ನು ಕಂಡವರೇ. ಜನಸಾಮಾನ್ಯನ ಕಷ್ಟಗಳನ್ನು ಅನುಭವಿಸಿದವರೇ ಆದ್ದರಿಂದ ಅವರಿಗೆ ಚೆನ್ನಾಗಿ ಗೊತ್ತಿತ್ತು. ದೇಶ ಮುಂದುವರಿಯಬೇಕೆಂದರೆ ದೇಶಪ್ರೇಮ ಎಲ್ಲರಲ್ಲೂ ಮೂಡಬೇಕು ಆಗಷ್ಟೇ ಏಕತೆ ಮೂಡಲು ಸಾಧ್ಯ ಎನ್ನುವುದು. ಅವರ ವೈಚಾರಿಕತೆ ಅವರ ಕಾರ್ಯವೈಖರಿಯ ವಿಚಾರಗಳು ಬೇರೆಯೇ ಆದರೂ ಅವರ ಗುರಿ ದೇಶವನ್ನು ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿರಿಸುವುದೇ ಆಗಿತ್ತು ಅದರಲ್ಲಿ ಅವರು ಯಶಸ್ವಿಯೂ ಆದರು. ಆದರೆ ಅಂದೇ ನಮ್ಮ ನಾಯಕರುಗಳು ಅಧಿಕಾರದಾಸೆಗಾಗಿ ದೇಶವನ್ನು ಮೂರು ಭಾಗ ಮಾಡಿದ್ದಾಯಿತು, ’ಜಾತ್ಯಾತೀತ’ ರಾಷ್ಟ್ರವಾದರೂ ಪ್ರತಿಯೊಂದು ಧರ್ಮಕ್ಕೂ ಪ್ರತ್ಯೇಕ ಕಾನೂನುಗಳಾದವು. ಎಲ್ಲದರಲ್ಲೂ ಅಧಿಕಾರಗಳಿಸುವುದೇ ಮುಖ್ಯ ಚಿಂತನೆಗಳಾದವು. ’ವೋಟ್-ಬ್ಯಾಂಕ್’ ಎಂಬ ಹೊಸ ಪರಿಕಲ್ಪನೆ ನಮ್ಮ ಭಾರತದ ನಾಯಕರುಗಳಿಂದ ವಿಶ್ವಕ್ಕೇ ಪರಿಚಯವಾಯ್ತು!. ಅದು ಇಂದಿಗೂ ಮುಂದುವರೆದು ಸರ್ಕಾರದ ಎಲ್ಲಾ ಸವಲತ್ತುಗಳು ಕೇವಲ ಶ್ರೀಮಂತರಿಗೇ ಮಾತ್ರ ಮೀಸಲಾಗಿವೆ. ಅವರು ಕಟ್ಟುವ ತೆರಿಗೆಗೆ ಭಾರತದ ಬೆನ್ನೆಲುಬು ಮಧ್ಯಮವರ್ಗದವರಿಂದ ವ್ಯಾಪಾರದ ಹೆಸರಿನಲ್ಲಿ ಮತ್ತಷ್ಟು ಕಿತ್ತು ತಿಂದು ದುಂಡಗಾಗಿದ್ದಾರೆ. ಆದರೆ ನಿಜ ಅರ್ಥದಲ್ಲಿ ದೇಶ ಮುನ್ನಡೆಯುತ್ತಿರುವುದು ಅದೇ ಮಧ್ಯಮ ವರ್ಗದವರ ಬೆವರಿಳಿಸಿ ಸಂಪಾದಿಸಿದ ’ತೆರಿಗೆಯಿಂದ’.   ಸ್ವಲ್ಪವಾದರೂ ದೇಶ ಪ್ರೇಮವನ್ನು ಅವರ ಮುಂದಿನ ಪೀಳಿಗೆಗಳಲ್ಲಿ ಬೆಳೆಸಲು ಪ್ರಯತ್ನಿಸಿದ್ದರೆ ಭ್ರಷ್ಟಾಚಾರವಿಲ್ಲದ ಒಂದು ಆದರ್ಶ ’ಜಾತ್ಯಾತೀತ’ ರಾಷ್ಟ್ರವಾಗಿರುತ್ತಿತ್ತು ನಮ್ಮ ಭಾರತ!

ಭಾನುವಾರ, ಆಗಸ್ಟ್ 21, 2011

ನಮ್ಮ ಸಣ್ಣತಾಯಮ್ಮ

 

ಈ ಹಿಂದೆ ಇದೇ blog ಲ್ಲಿ ಸಣ್ಣತಾಯಮ್ಮ ಕಪ್ಪೆ ನುಂಗಿದ್ದು ಮತ್ತು ಸಣ್ಣತಾಯಮ್ಮನಿಗೆ ಸೂಟ್ಕೇಸ್ ಸಿಕ್ಕಿದ್ದು ಎಂಬ ಎರಡು ಹಾಸ್ಯಬರಹಗಳನ್ನು ಪ್ರಕಟಿಸಿದ್ದೆ. ವಾಸ್ತವದಲ್ಲಿ ಅವು ಹಾಸ್ಯಬರಹಗಳೇ ಆಗಿದ್ದರೂ ನಮ್ಮ ಸಣ್ಣತಾಯಮ್ಮನ ಮುಗ್ದತೆಯಿಂದ ಘಟಿಸಿದ ನಿಜ ಪ್ರಸಂಗಗಳೇ ಆಗಿದ್ದವು. ಇಂತಹ ಸಣ್ಣತಾಯಮ್ಮನ ಬಗ್ಗೆ ಈಗ ಬರೆಯಲು ಮುಖ್ಯಕಾರಣ ಆಕೆಯ ಮುಗ್ದತೆ ಮತ್ತು ಆಕೆಯ ಮತ್ತು ಆಕೆಯ ಕುಟುಂಬದೊಡನೆ ನನ್ನ ಬಾಲ್ಯದ ಒಡನಾಟ.
    ಹೌದು! ನಮ್ಮ ಸಣ್ಣತಾಯಮ್ಮ ಲೋಕಜ್ನಾನದ ತಿಳುವಳಿಕೆಯಲ್ಲಿ ಆಕೆ ಬಹಳ ಮುಗ್ದಳೇ, ಆದರೆ ಆಕೆಯೆ ವ್ಯಾವಹಾರಿಕತೆ, ತನ್ನ ಸೋಮಾರಿ ಗಂಡನನ್ನು ದೂರದೆ, ಲೋಕನಿಂದನೆಗೆ ಒಳಗಾಗದೆ, ಸಮಾಜದಲ್ಲಿ ಗೌರವವಾಗಿ ಹೇಗೆ ಬಾಳಿದಳು ಎಂಬುದನ್ನು ನೋಡಿದರೆ ಆಕೆ ಖಂಡಿತವಾಗಿಯೂ ಒಬ್ಬ ಮಾದರಿ ಹೆಣ್ಣಾಗಿ ನಿಲ್ಲುತ್ತಾಳೆ. ಇನ್ನು ಅವಳ ಮುಗ್ದತೆಯಿಂದಾಗಿ ಘಟಿಸಿದ ಸಂಗತಿಗಳ ವಿಚಾರಕ್ಕೆ ಬಂದರಂತೂ ಒಂದು ಉತ್ತಮ ಹಾಸ್ಯಗ್ರಂಥವಾಗುವದರಲ್ಲಿ ಸಂಶಯವಿಲ್ಲ.
    ಆಕೆಯೇನು ನಮ್ಮ ಸಂಬದಿಕಳೇನಲ್ಲ. ನಮ್ಮ ಅಪ್ಪನ ಮದುವೆಗೆ ಮೊದಲೇ ಅಲ್ಲೆಲ್ಲೋ ಚಾಮರಾಜನಗರದ ಹಳ್ಳಿಗಳಲ್ಲಿ ಭೀಕರ ಬರಗಾಲ ಬಂದದ್ದರಿಂದ ತನ್ನ ಗಂಡ ಮತ್ತು ಚಿಕ್ಕ ಮಗಳೊಂದಿಗೆ ನಮ್ಮೂರಿಗೆ ವಲಸೆ ಬಂದವಳು. ಆಕೆಯ ಗಂಡನಾದ ಬೋಜಣ್ಣ ಭತ್ತದ ವ್ಯಾಪಾರದ ದಳ್ಳಾಳಿಯಾಗಿ ಊರೂರು ತಿರುಗುವುದರಲ್ಲೇ ಹೆಚ್ಚು ಕಾಲಕಳೆಯುತ್ತಿದ್ದನು. ಈ ಮಧ್ಯೆ ಮತ್ತೆರಡು ಹೆಣ್ಣು ಮಕ್ಕಳು ಮತ್ತು ಒಬ್ಬ ಗಂಡು ಮಗು ಹುಟ್ಟಿದವು. ಅವುಗಳನ್ನು ಅವರವರ ದಡ ಸೇರಿಸಲು ಆಕೆ ನೆಚ್ಚಿಕೊಂಡಿದ್ದು ಕೂಲಿ ಮಾಡುವ ಕಾಯಕವನ್ನು. ಅದರಲ್ಲೂ ಭತ್ತ ನಾಟಿಮಾಡಲು ಮತ್ತು ಕಬ್ಬು ಕಟಾವು ಮಾಡಲು ಆಕೆ ಕೂಲಿ ಆಳುಗಳ ತಂಡವನ್ನು ಸಂಘಟಿಸುತ್ತಿದ್ದ ರೀತಿ, ಗಣಿತದ ಗಂಧಗಾಳಿಯೇ ಗೊತ್ತಿಲ್ಲದ ಅವಳು ಕೆಲಸ ಮುಗಿದನಂತರ ಬರುವ ದುಡ್ಡನ್ನು ತನ್ನ ತಂಡದ ಸದಸ್ಯರಿಗೆ ಸಮನಾಗಿ ಹಂಚುತ್ತಾ ವ್ಯವಹರಿಸುತ್ತಿದ್ದ ರೀತಿಗೆ ನಿಜಕ್ಕೂ ಒಂದು ’ಹ್ಯಾಟ್ಸಾಫ್’.
    ಎಲ್ಲಕ್ಕಿಂತಲೂ ಹೆಚ್ಚಾಗಿ ನಾನು ಆಕೆಯನ್ನು ಎಂದೂ ಮರೆಯಲು ಸಾಧ್ಯವಿಲ್ಲ ಏಕೆಂದರೆ ಆಕೆ ಒಮ್ಮೆ ನನ್ನ ಜೀವ ಉಳಿಸಿದವಳು.
    ಹೌದು!! ಇದು ೧೯೭೭ ರಲ್ಲಿ ನಡೆದ ಘಟನೆ. ನಾನಾಗ ೧ ವರ್ಷದ ಮಗುವಂತೆ. ನಮ್ಮ ತಾಯಿಯವರ ಮೊದಲನೇ ತಮ್ಮ ಒಮ್ಮೆ ನಮ್ಮ ಊರಿಗೆ ಬಂದಿದ್ದ. ಅಂದೇ ಗದ್ದೆಯ ಬಳಿ ಹೆಚ್ಚಿನ ಕೆಲಸವಿದ್ದದ್ದರಿಂದ ನನ್ನ ಅಮ್ಮ ಮತ್ತು ಅಪ್ಪ ನನ್ನನ್ನು ನೋಡಿಕೊಳ್ಳಲು ಅವನಿಗೆ ಹೇಳಿ ಗದ್ದೆ ಕೆಲಸಕ್ಕೆ ಹೊರಟುಹೋದರಂತೆ. ಆಗೆಲ್ಲಾ ಹಳ್ಳಿಗಳಲ್ಲಿ ಬೆಳಿಗ್ಗೆ ಎಂಟು ಗಂಟೆಗೆ ಮನೆ ಬಿಟ್ಟರೆ ಎಲ್ಲರೂ ಸಾಮಾನ್ಯವಾಗಿ ವಾಪಸಾಗುತ್ತಿದ್ದುದ್ದು ಮಧ್ಯಾನ್ಹ ಎರಡು ಗಂಟೆಯ ನಂತರವಷ್ಟೆ. ಈ ಸಮಯವನ್ನೇ ಉಪಯೋಗಿಸಿಕೊಂಡ ಭೂಪ! ನನ್ನ ಮಾವ, ಮನೆಯಲ್ಲಿದ್ದ ಒಡವೆಗಳನ್ನು ತೆಗೆದುಕೊಂಡು ನನ್ನನ್ನು ಮನೆಯ ಒಳಗೆ ಕೂಡಿಹಾಕಿ, ಹೊರಗಿನಿಂದ ಅಗುಳಿಯನ್ನು ಯಾರೂ ತೆಗೆಯಲಾಗದಂತೆ ಹಾಕಿ ಪರಾರಿಯಾಗಿದ್ದ. ಸಧ್ಯ ನನ್ನ ಜೀವಕ್ಕೇನೂ ತೊಂದರೆಮಾಡಿರಲಿಲ್ಲ. ಬೀದಿ ನಿರ್ಜನವಾದ್ದರಿಂದ ಮತ್ತು ನಮ್ಮ ಮನೆ ಆಗ ಮಾಳಿಗೆ ಮನೆಯಾದ್ದರಿಂದ ಬೀದಿಗೆ ಸದ್ದೂ ಸಹ ಅಷ್ಟಾಗಿ ಕೇಳಿಸುತ್ತಿರಲಿಲ್ಲ. ಅದೇ ಸಮಯಕ್ಕೆ ತನ್ನ ಮನೆಗೆ ಊಟಕ್ಕೆಂದು ಬಂದ ಸಣ್ಣತಾಯಮ್ಮ ನಮ್ಮ ಮನೆಯಿಂದ ಬರುತ್ತಿದ್ದ ನನ್ನ ಅಳುವಿನ ಶಬ್ಧ ಕೇಳಿ ಅನುಮಾನಗೊಂಡು ಪರಿಶೀಲಿಸಿದಾಗ ಅದು ನನ್ನ ಅಳುವಿನ ಶಬ್ಧವೆಂದು ಖಾತ್ರಿಯಾಯ್ತು. ಬಾಗಿಲನ್ನು ತೆಗೆಯಲು ಶತಪ್ರಯತ್ನ ನಡೆಸಿ ವಿಫಲಳಾದ ಆಕೆ, ತಕ್ಷಣವೇ ನಮ್ಮ ಗದ್ದೆಯ ಬಳಿ ಹೋಗಿ ನಮ್ಮ ತಂದೆ ತಾಯಿಗಳಿಗೆ ವಿಚಾರ ತಿಳಿಸಿ ಕರೆತಂದಳು. ತಂದೆಯವರು ಮನೆಯ ಮಾಡಿನ ಮೇಲಿದ್ದ ಬೆಳಕಿಂಡಿಯಿಂದ ಒಳಜಿಗಿದು ನನ್ನನ್ನು ರಕ್ಷಿಸಿದರು. ಹೀಗಾಗಿ ಒಂದರ್ಥದಲ್ಲಿ ಸಣ್ಣತಾಯಮ್ಮ ನನ್ನ ಜೀವದಾತೆ.
    ಇನ್ನು ಆಕೆಯ ಮುಗ್ದತೆಯನ್ನು ಬಹಳಷ್ಟು ಮಂದಿ ’ಆಕೆಯ ದಡ್ಡತನ’ ಎಂದೇ ಪರಿಗಣಿಸಿದ್ದರು. ಅದರಲ್ಲೂ ಆಕೆಯ ಮತ್ತು ಆಕೆಯ ಮನೆಯೆದುರುಗಿನ ’ಡೈರಿ ನಾಗರಾಜು’ ರವರ ಸಂಭಾಷಣೆಗಳನ್ನು ಕೇಳಿದವರಿಗೆ ತುಟಿಯಂಚಿನ ನಗುವನ್ನು ಮರೆಮಾಚಲು ಸಾಧ್ಯವಾಗುತ್ತಲೇ ಇರಲೇ ಇಲ್ಲ.
    ಒಂದು ನಮ್ಮ ಶಿಶುವಿಹಾರದ ಮೇಡಂ ನಮ್ಮ ಬೀದಿಯಲ್ಲಿ ಹಾದುಹೋಗುತ್ತಿದ್ದರು. ಅವರ ಜಡೆ ಮಂಡಿವರೆಗೆ ತಾಗುವಷ್ಟು ಉದ್ದವಿತ್ತು. ಅವರ ಜಡೆ ಮತ್ತು ನಡೆಯನ್ನೇ ತನ್ನ ಹೊಗೆಸೊಪ್ಪು ತುಂಬಿದ ಬಾಯನ್ನು ಬಿಟ್ಟುಕೊಂಡೇ ನೋಡುತ್ತಿದ್ದ ಸಣ್ಣತಾಯಮ್ಮನನ್ನು ನೋಡಿದ ನಾಗರಾಜಣ್ಣ
"ಅಮ್ಮೋ!! ಬಾಯ್ಮುಚ್ಚಮ್ಮೊ!! ಇರೋ ಬರೋ ಸೊಳ್ಳೆಯಲ್ಲ ನಿನ್ಬಾಯ್ಗೋದಾವು, ಮೊದ್ಲೇ ಜನ್ಗೊಳ್ಗೆ ಕಚ್ಚಸ್ಕಳಕೆ ಸೊಳ್ಳೆನೇ ಇಲ್ಲ," ಎಂದು ಕಿಚಾಯ್ಸಿದರು.
"ಅಲ್ಲಾ ಕಣ್ ನಾಗ್ರಾಜಣ! ಮೂರೊತ್ತು ಕೈಯೆಣ್ಣೆ ಜಡಿಯೋ ನನ್ ಜುಟ್ಟು ಕೋಳಿ ಪುಕ್ದಂಗೆ ಮೋಟುದ್ದ ಅದೆ, ಇವ್ಳಮನ್ಕಾಯ್ವಾಗ ಅದ್ಯಂಗ್ ಇವ್ಳ ಕೂದ್ಲು ಇಸ್ಟಿದ್ದ ಆಯ್ತು? ಅಂತ" ಎಂದು ತನ್ನ ಅನುಮಾನವನ್ನು ವ್ಯಕ್ತಪಡಿಸಿದಳು. ಅವಳ ಪ್ರಶ್ನೆ ನಗುತರಿಸಿದರೂ ನಾಗರಾಜಣ್ಣ ಅದನ್ನು ತೋರ್ಪಡಿಸದೇ
"ಈಗ ನೀನು ತಲೆಬಾಚ್ದಾಗ ಕೂದ್ಲು ಬಾಚಣ್ಗೆಗೆ ಅಂಟ್ಕತುದಲ್ಲ ಅದ್ನೇನ್ಮಾಡೀ?" ಎಂದು ಮರು ಪ್ರಶ್ನಿಸಿದರು.
"ಅದೇನ್ಮಾಡರು ತಗಣ! ಉಪ್ಪುಕಾರ ಹಾಕಿ ನೆಕ್ಕಿಯಾ ಅದ? ತಗ್ದು ತಿಪ್ಗೆಸಿತೀವಪ್ಪ. ಏಕೆ? ನೀ ಕಾಣ?" ತನಗೂ ಸಹ ತಿಳುವಳಿಕೆ ಇದೆ ಎಂಬರ್ಥದಲ್ಲಿ ಹೇಳಿದಳು.
"ಅಲ್ಲೇ ನೋಡು ನೀ ತಪ್ಮಾಡದು, ಅವ್ರೇನು ನಿನ್ನಂಗೆ ದಡ್ಡರೂ ಅನ್ಕಂಡಾ? ಅವ್ರು ಕೂದ್ಲಾ ತಿಪ್ಗೆಸಿಯಲ್ಲ, ಉದ್ರೋದ ಕೂದ್ಲಗಳ್ನ ಗೊಬ್ಳಿ ಗೋಂದು ತಗಂಡು ಒಂದ್ರು ತಿಕ್ಕೊಂದ ಅಂಟ್ರುಸಿ ಅಂಟ್ರುಸಿ ಅಷ್ಟುದ್ದ ಮಾಡ್ಕತರೆ" ಎಂದು ಕಣ್ಣು ಕೈ ಅಗಲಿಸಿ ಹೇಳುತ್ತಿದ್ದನ್ನು ಯಾವುದೋ ಮಹತ್ತರ ರಹಸ್ಯವನ್ನು ಕೇಳಿಸಿಕೊಳ್ಳುವವಳಂತೆ ಕಣ್ಣು ಬಾಯಿತೆರೆದು, ಸೊಂಟದಮೇಲೊಂದು ಕೈ, ಮೂಗಿನ ಮೇಲೆಮತ್ತೊಂದು ಕೈ ಇಟ್ಟು
"ಅಂಗೂ ಮಾಡಾರಾ!!??!!" ಎಂದು ಕೇಳಿದಾಗ ಅಕ್ಕಪಕ್ಕದಲ್ಲಿದ್ದವರಾರಿಗೂ ನಗು ತೆಡೆಯಲಾಗಲಿಲ್ಲ.
    ಮತ್ತೊಮ್ಮೆ ತನಗೆ ಗೊತ್ತಿರುವ ಎರಡೇ ಎರಡು ಬೈಗುಳಗಳಾದ "ನಿನ್ಬಾಯ್ಗೆ ಮಣ್ಣಾಕ" "ನಿನ್ಮನೆಕಾಯ್ವಾಗ" ಎಂದು ತನ್ನ ಸಹ ಕೆಲಸಗಾರರೊಬ್ಬಳನ್ನು ಬಯ್ಯುತ್ತಿರುವುದನ್ನು ಆಗತಾನೆ ಕೊಂಡುತಂದಿದ್ದ ತಮ್ಮ ಹೊಸ ಟೇಪ್-ರೆಕಾರ್ಡರ್ ನಲ್ಲಿ ಆಕೆಗೆ ತಿಳಿಯದಂತೆ ರೆಕಾರ್ಡ್ ಮಾಡಿ ಅವಳ ಬೈಗುಳಗಳನ್ನು ಅವಳಿಗೇ ಕೇಳಿಸಿದಾಗ, ಮೂಗಿನ ಬೆರಳಿಟ್ಟೂ
"ಇಂಗೂ ಆದಾದ?!!?!!" ಎಂದು ಆಶ್ಚರ್ಯ ವ್ಯಕ್ತಪಡಿಸುವ ಆಕೆಯ ಭಾವ ಭಂಗಿಯನ್ನು ನೆನೆದರೆ ಇಂದಿಗೂ ನಗು ತೆಡೆಯಲಾಗುವುದಿಲ್ಲ.
    ಇನ್ನು ವಿದ್ಯಾಭ್ಯಾಸದ ವಿಚಾರದಲ್ಲಿ ಸಣ್ಣತಾಯಮ್ಮನಿಗೆ "ಬಿ. ಎ" ಒದಿದರೆ ಮಾತ್ರ ದೊಡ್ಡ ವಿದ್ಯೆ. ನಾನಾವಾಗ ಎಂ.ಎಸ್ಸಿ ಕೊನೆಯ ವರ್ಷದಲ್ಲಿದ್ದೆ. ಒಮ್ಮೆ ಊರಿನಲ್ಲಿ ಎದುರಾದ ಆಕೆ
"ಉಮಣ್ಣ ಚೆನ್ನಾಗಿದ್ದೀಯಾ? ಈಗೇನೊದ್ತಾಯಿದ್ದೀ?" ಎಂದಳು
"ಎಂ. ಎಸ್ಸಿ. ಓದ್ತಿದೀನಿ.". ಎಂದೆ.
"ಅಯ್ಯೋ!! ಮುಕ್ಕ ಹೋಗು! ಈಗ ಎಂಯೆಸಿಯೇ? ಇನ್ನುವೇ ನೀನು ಬಿ.ಎ. ಮಾಡಿ ಕೆಲ್ಸುಕ್ಸೇರಿ, ನಿಮ್ಮಪ್ಪ ಅವ್ವುಂಗೆ ಇಟ್ಟಾಕದ್ಯಾವಗಾ?" ಅಂದು ಬಿಡೋದೆ!!.? ಅವಾಕ್ಕಾಗುವ ಸರದಿ ಈಗ ನನ್ನದಾಗಿತ್ತು!! ಎಂ. ಎಸ್ಸಿ ಅನ್ನುವುದು ಬಿ. ಎ ಗಿಂತ ಸ್ವಲ್ಪ ಜಾಸ್ತಿ ಡಿಗ್ರಿ ಅಂತ ಆಕೆಗೆ ತಿಳಿಹೇಳುವ ಕಷ್ಟವನ್ನು ನಾನು ತೆಗೆದುಕೊಳ್ಳಲಿಲ್ಲ.
    ಈ ರೀತಿ ಆಕೆಯ ನೈಜಘಟನೆಗಳನ್ನು ನೆನೆಯುತ್ತಾ ಹೋದರೆ ಸಮುದ್ರದ ಅಲೆಗಳಂತೆ ನಗು ಉಕ್ಕಿ ಉಕ್ಕಿ ಬರುತ್ತಲೇ ಇರುತ್ತದೆ. ಇಂತಹ ಸಣ್ಣತಾಯಮ್ಮನಿಗೆ ಒಂದು ಚಟವಿತ್ತು, ಅದೇ ಹೊಗೆಸೊಪ್ಪು ಕಡ್ಡಿಪುಡಿ ಜಗಿಯುವ ಕೆಟ್ಟ ಅಭ್ಯಾಸ.  ದುರಂತವೆಂದರೆ ಅದೇ ಚಟ ಅವಳನ್ನು ಬಲಿ ತೆಗೆದುಕೊಂಡಿತ್ತು.
    ಹೌದು!! ಈಗ್ಗೆ ವರ್ಷದ ಕೆಳಗೆ ಒಮ್ಮೆ ಕೆಲಸದ ನಿಮಿತ್ತ ಮಂಡ್ಯದ ಜಿಲ್ಲಾಸ್ಪತ್ರೆಗೆ ಹೋಗಿದ್ದಾಗ, ಆಕೆಯ ಮಕ್ಕಳು ಮತ್ತು ಮೊಮ್ಮಕ್ಕಳು ಆಕೆಯನ್ನು ಸ್ಟ್ರೆಕ್ಚರ್ ನಮೇಲೆ ಮಲಗಿಸಿಕೊಂಡು ತಳ್ಳುತ್ತಾಹೋಗುತ್ತಿದ್ದರು. ಆಕೆಯ ಹತ್ತಿರಹೋದೆ, ಮಾತುಗಳು ಆಕೆಯ ಗಂಟಲಿನಿಂದ ಹೊರಬರಲು ಕಷ್ಟಪಡುತ್ತಿದ್ದವು. ಕಣ್ಣಂಚಿನಲ್ಲಿ ನೀರಾಡಿತ್ತು.
"ಹೇಗಿದ್ದಿಯಮ್ಮ? " ಎಂದೆ, ಸಾವರಿಸಿಕೊಂಡು.
"ಚೆನ್ನಾಗಿದ್ದೀಯಾ ಉಮಣ್ಣ?" ಎಂದಾಗ ಆಕೆಯ ಕಂಗಳಲ್ಲಿ ಅದೇನೋ ವ್ಯಾಕುಲತೆ. ತಕ್ಷಣ ವೈದ್ಯರಲ್ಲಿ ವಿಚಾರಿಸಿದಾಗ ಗಂಟಲು ಮತ್ತು ಬಾಯಿಯ ಕ್ಯಾನ್ಸರೆಂದೂ, ಅದಾಗಲೆ ಕೊನೆಯ ಘಟ್ಟದಲ್ಲಿದೆಯೆಂದು ತಿಳಿಸಿದರು. ಆ ವಿಚಾರ ಈ ಮೊದಲೇ ಆಕೆಗೆ ತಿಳಿದಿದ್ದರಿಂದ ಆಕೆಯೇನು ದುಃಖಗೊಳ್ಳಲಿಲ್ಲ.
" ಇನ್ನೇನು ಇಲ್ಲಾಕನುಮಣ, ಮಗುಂಗೆ ಮದ್ವೆ ಗೊತ್ತಾಗದೆ, ಮದ್ವೆ ನೋಡಗಂಟ ಆ ಜವ್ರಾಯ ನನ್ಬುಟ್ರೆ ಸಾಕಾಗದೆ" ಎನ್ನುವಾಗ ಆಕೆಯ ಕಣ್ಣುಗಳ ಪಕ್ಕದಿಂದ ಕಿವಿಯೊಳಗೆ ನೀರು ಸೇರಿತ್ತು.
"ಏನಾಗಲ್ಲ! ಬಾರಮ್ಮ, ಎಲ್ಲಾ ಸರಿ ಹೋಗುತ್ತೆ"  ಪರಿಸ್ಥಿತಿಯ ಅರಿವಿದ್ದೂ ಆಕೆಯ ಸಮಾಧಾನಕ್ಕಾಗಿ ಬಾಯಿಮಾತಿಗೆಂದು ಹೊರ ಬಂದಿದ್ದೆ.
    ಇದಾದ ಎರಡು ತಿಂಗಳಲ್ಲಿ ಆಕೆಯ ಮಗನ ಮದುವೆ ಮುಗಿದಾಗ ಆಕೆಯ ಸಂತೋಷಕ್ಕೆ ಪಾರವೇ ಇರಲಿಲ್ಲ. ಇದಾದ ಸ್ವಲ್ಪದಿನಗಳಿಗೆ ಕಂಪನಿಯ ಮೀಟಿಂಗ್ ಗಾಗಿ ಹೈದರಾಬಾದ್ ಗೆ ಹೋಗಬೇಕಾಗಿ ಬಂತು. ದುರದೃಷ್ಟವಶಾತ್ ಅಂದೇ ಆಕೆ ಇಹಲೋಕದ ವ್ಯವಹಾರ ಮುಗಿಸಿ ಪರಲೋಕಾಧೀನಳಾಗಿದ್ದಳು. ಕಡೆಯಬಾರಿಗೆ ಆಕೆಯ ಮುಖ ದರ್ಶನದಿಂದ ವಂಚಿತನಾದೆಲ್ಲ ಎಂಬ ಕೊರಗು ಇಂದಿಗೂ ಕಾಡುತ್ತಿದೆ.
’ಎಲ್ಲಾರ ಇರು, ಚೆಂದಾಗಿರು’ ಎಂಬ ಆಕೆಯ ಆಶೀರ್ವಾದ ಇನ್ನೂ ಕಿವಿಯಲ್ಲಿ ಗುನುಗುತ್ತಿದೆ. ಅದನ್ನು ನೆನೆದಾಗಲೆಲ್ಲಾ ನನಗಾಗುವ ಅನುಭೂತಿಯನ್ನು ವರ್ಣಿಸಿಲು ಸಾಧ್ಯವಿಲ್ಲ.

ಮಂಗಳವಾರ, ಆಗಸ್ಟ್ 16, 2011

ಅಣ್ಣಾ ನಿಮ್ಮೊಂದಿಗೆ ನಾವೂ ಇದ್ದೀವಣ್ಣ!

ಬಹುಶಃ ಈ ಲೇಖನ ಪ್ರಕಟವಾಗುವ ವೇಳೆಗೆ ಅಣ್ಣಾ ಹಜಾರೆಯವರು ಭ್ರಷ್ಟಾಚಾರ ವಿರುದ್ಧದ ನಿರ್ಣಾಯಕ ಹಂತದ ಹೋರಾಟದ ಸಲುವಾಗಿ  ಉಪವಾಸಕ್ಕೆ ಕುಳಿತಿರುತ್ತಾರೆ. ಈ ಬಾರಿಯ ಅವರ ಸತ್ಯಾಗ್ರಹ ಕಳೆದಬಾರಿಗಿಂತ ವಿಭಿನ್ನ!! ಕಳೆದ ಸಾರಿ ಉಪವಾಸಕ್ಕೆ ಕುಳಿತಾಗ ಅದು ಹೊಸತಾಗಿದ್ದರಿಂದಲೋ ಏನೋ ದೇಶದ ಮೂಲೆ ಮೂಲೆಗಳಿಂದ ಅದರಲ್ಲೂ ಸಾಮಾಜಿಕ ತಾಣಗಳಿಂದ ಅತ್ಯಭೂತಪರ್ವ ಬೆಂಬಲ ವ್ಯಕ್ತವಾಗಿತ್ತು. ಅದಕ್ಕೆ ವ್ಯತಿರಿಕ್ತ ಎಂಬಂತೆ ಇದೊಂದು ’ಸಾಮಾನ್ಯ ಓರಾಟ’ ಎಂದು ಕೊಂಡಿದ್ದ ಕೇಂದ್ರ ಸರ್ಕಾರ ಬಹಳ ಪೇಚಿಗೆ ಸಿಲುಕಿತ್ತು. ವಿಧಿಯಿಲ್ಲದೆ ಅಣ್ಣನಿಗೆ ’ಶರಣು’ ಎಂದಿತ್ತು!

ಆದರೆ ಈ ಬಾರಿ ಹಾಗಿಲ್ಲ. ನೈಜವಾದ ಕಾಳಜಿಯುಳ್ಳ ಹೋರಾಟಗಳನ್ನೂ ’ಬರೀ ಓರಾಟ’ ಎಂದು ಜನಸಾಮಾನ್ಯರಲ್ಲಿ ಬಿಂಬಿಸಲು ಅಲ್ಪ ಯಶಸ್ಸು ಕಂಡಿರುವ ಕೇಂದ್ರದ ’ಕಪಿ’ ’ಸಿಂಗಲೀಕ’ಪಡೆಗಳು ತಕ್ಕ ಮಟ್ಟಿಗೆ ಹೋರಾಟದಲ್ಲಿ ಒಡಕು ಮೂಡಿಸಿರುವುದು ಒಪ್ಪತಕ್ಕ ಮಾತೆ ಸರಿ. ಈ ಬಾರಿಯೂ ಅದೇ ರೀತಿಯ ಪ್ರಯತ್ನ ಮುಂದುವರೆಸಿರುವ ಅದೇ ತಂಡ ಬೆಟ್ಟ ಅಗೆದು ಸೊಳ್ಳೆ ಹಿಡಿದಂತೆ ಅಣ್ಣಾರವರ ಮೇಲೆ ಗೂಬೆ ಕೂರಿಸಲು ಎತ್ತ ನೋಡಿದರೂ ಅವರಿಗೆ ಸಂಬಂಧವೇ ಇಲ್ಲದ ೨ ಲಕ್ಷ ರೂಗಳ ಭ್ರಷ್ಟಾಚಾರದ ಆರೋಪವನ್ನು ಹೊರಿಸಿ ತನ್ನ ೨೦ ಲಕ್ಷ ಕೋಟಿಗಳ ಹಗರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿರುವುದು ಹಾಸ್ಯಾಸ್ಪದದ ಜೊತೆಗೆ ಜನಸಾಮಾನ್ಯರಲ್ಲಿ ಅಸಹ್ಯ ಮೂಡಿಸಿರುವುದು ಎದ್ದು ಕಾಣುತ್ತದೆ. ಅಲ್ಲದೆ ಗರ್ಭಕೊರಳಿನ ಅರ್ಬುದ ರೋಗ ಚಿಕಿತ್ಸೆಗೆ ಅಮೇರಿಕಕ್ಕೆ ಹಾರಿರುವ ಇಟಲಿಯಮ್ಮನ ಸ್ಥಾನದಲ್ಲಿ ’Programmed ಫಾರಂ ಕೋಳಿ’ ರಾಹುಲ್ ಗಾಂಧಿಯ ಹೆಗಲಿಗೆ ಭ್ರಷ್ಟಾಚಾರವೆಂಬ ಔಷಧವೇ ಇಲ್ಲದ ಅರ್ಬುದ ರೋಗದ ವಿರುದ್ಧ ಸೆಣಸುತ್ತಿರುವ ಹೋರಾಟವನ್ನು ಹತ್ತಿಕ್ಕುವ ’ಗುರುತರ’ ಜವಾಬ್ದಾರಿಯನ್ನು ಹೊಣೆಗೇಡಿ ಸರ್ಕಾರ ಹೊರಿಸಿದೆ. ಮೊದಲೇ ಬೇಜಾವಾಬ್ದಾರಿಯಂತೆ ವರ್ತಿಸುವ ಈ ಗಾಂಧಿ ಕುಡಿಗೆ ದೇಶ ನಡೆಸುವ ಚುಕ್ಕಾಣಿ ಕೊಟ್ಟರೆ ನಮ್ಮನ್ನು, ನಮ್ಮ ದೇಶದ ಮರ್ಯಾದಯನ್ನು ಆ ಭಗವಂತನೇ ಕಾಪಾಡಬೇಕು.

ಇದಕ್ಕೆಲ್ಲಾ ಕಳಶವಿಟ್ಟಂತೆ, ಮೌನಿ ಮನಮೋಹನ್ ಸಿಂಗ್ ರವರು ಮೌನ ಮುರಿದು ’ಭ್ರಷ್ಟಾಚಾರವನ್ನು ಹತ್ತಿಕ್ಕಲು ಸತ್ಯಾಗ್ರಹಗಳು ಬೇಕಿಲ್ಲ’ ಎನ್ನುವ ನಾಚಿಕೆಗೇಡಿನ ಮೂಲಕ ತಮ್ಮ ಬುದ್ಧಿ ಶಕ್ತಿಯನ್ನು ಎಲ್ಲೋ ಅಡವಿಟ್ಟು ತಾವೊಂದು ’ಸೂತ್ರದ ಬೊಂಬೆ’ಎಂದು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಇದರಿಂದ ಉತ್ತೇಜನ ಗೊಂಡ ದೆಹಲಿ ಪೋಲೀಸರು ಅಣ್ಣಾರವರಿಗೆ ಹಾಕಿರುವ ೨೨ ಅಸಂಬದ್ಧ, ಅಸಂವಿಧಾನಿಕ ಶರತ್ತುಗಳಿಗೆ ಅಂಟಿಕೊಂಡು ಸತ್ಯಾಗ್ರಹದ ಸಮಾಧಿ ಮಾಡಲು ಸಜ್ಜಾಗಿದ್ದಾರೆ. ಈ ನಡೆಯಿಂದಾಗಿ ಭ್ರಷರನ್ನು, ಭ್ರಷ್ಟಾಚಾರವನ್ನು ರಕ್ಷಿಸಲು ತಾನು ಕಟಿಬದ್ದವಾಗಿರುವುದಾಗಿ ಕೇಂದ್ರ ಘೋಷಿಸಿಕೊಂಡಿದೆ. ಅಲ್ಲದೆ ಈ ಹೋರಾಟದ ಶುರುವಿನಿಂದಾಗಿ ಕೇಂದ ಸರ್ಕಾರ ವನ್ನು ಸಿಲುಕಿಸಿ ವಿಲವಿಲ ಒದ್ದಾಡುವ ಸ್ಥಿತಿಯನ್ನು ತಂದೊಡ್ಡಿರುವ ೨ ಜಿ, ಸಿ ಡಬ್ಲ್ಯ್ ಜಿ ಮತ್ತಿತರ ಹಗರಣಗಳಿಂದ ಜನರ ಮನಸನ್ನು ಬೇರೆಡೆಗೆ ತಿರುಗಿಸುವ ಚಾಣಾಕ್ಷತನವನ್ನೂ ಕೇಂದ್ರ ಮೆರೆದಿದೆ. ಅಲ್ಲದೇ ದೃಶ್ಯ ಮಾಧ್ಯಮಗಳಾಗಲಿ ಮುದ್ರಣ ಮಾಧ್ಯಮಗಳಾಗಲಿ ಈ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಏಕೆಂದರೆ ಅವುಗಳಿಗೆ ಬರೀ ’ಬ್ರೇಕಿಂಗ್ ನ್ಯೂಸ್’ ಮಾತ್ರವೇ ಮುಖ್ಯವಲ್ಲವೆ?

ಅಷ್ಟೇ ಅಲ್ಲದೆ ಕಳೆದಬಾರಿಯ ಹಜಾರೆಯವರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದ ಕಾಂಗ್ರೇಸ್ಸೇತರ ಸರ್ಕಾರಗಳು ಈ ಬಾರಿ ಮಗುಮ್ಮಾಗಿ ಉಳಿದಿವೆ. ಅದರಲ್ಲೂ ನಮ್ಮ ಕರ್ನಾಟಕದ ಬಿ ಜೆ ಪಿ ಸರ್ಕಾರ ನಿನ್ನೆಯ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಶಾಸ್ತ್ರಕ್ಕೆಂದು ಭ್ರಷ್ಟಾಚಾರದ ವಿರುದ್ದ ಒಂದೇ ಒಂದು ಸಾಲನ್ನೂ ಸಹ ಉಲ್ಲೇಖಿಸದಿರುವುದು ಶತಾಯಗತಾಯ ’ಮಾಜಿ ಭ್ರಷ್ಟಾಚಾರವನ್ನು’ ಕಾಪಾಡಲು ಟೊಂಕಕಟ್ಟಿದಂತಿದೆ!!

ಇಷ್ಟೆಲ್ಲಾ ಇಲ್ಲಗಳ ನೆಗೆಟೀವ್ ಅಂಶಗಳ ನಡುವೆಯೂ ನಾವು ಅಣ್ಣಾರವರನ್ನು ಬೆಂಬಲಿಸಲೇಬೇಕಾದ ಅಗತ್ಯವಿದೆ. ನಮ್ಮದೇಶದಲ್ಲಿ ಇರುವ ಎಲ್ಲಾ ಕಾನೂನುಗಳು ಬಲಿಷ್ಠವಾಗಿದ್ದರೂ ಅವುಗಳನ್ನು ಜಾರಿಗೆ ತರುವವರ ನಿರ್ಲಕ್ಷ್ಯದಿಂದಾಗಿ ಅವು ಕಳಪೆ ಕಾನೂನೆಸುವುದು ಸಹಜ. ಅಲ್ಲದೇ ನಮ್ಮ ಕಾನೂನುಗಳು ನಮ್ಮನ್ನಾಳುವವರ, ಸಿರಿವಂತರ ತಾಳಕ್ಕೆ ಆಗಿಂದಾಗ್ಗೆ ’ತಿದ್ದುಪಡಿ’ಆಗಿವೆ, ಆಗುತ್ತಿವೆ. ಇದೆಲ್ಲದರ ನಡುವೆ ಅಣ್ಣಾರವರು ಪ್ರಸ್ತಾಪಿಸಿರುವ ’ಜನ ಲೋಕಪಾಲ್ ಮಸೂದೆ’ಯು ಸಧ್ಯದ ಮಟ್ಟಿಗೆ ರಾಜಕಾರಣಿಗಳಲ್ಲಿ, ಅಧಿಕಾರಶಾಹಿಯಲ್ಲಿ ಮತ್ತು ಸಿರಿವಂತರಲ್ಲಿ ಚಳುಕು ಹುಟ್ಟಿಸಿರುವುದರಿಂದಲೇ ಅವರೆಲ್ಲಾ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಹೋರಾಟವನ್ನು ಹದಗೆಡಸಲು ಪ್ರಯತ್ನಿಸುತ್ತಿದ್ದಾರೆ. ಮುಂದೆ ಆ ಕಾನೂನು ಜಾರಿಯಾದಾಗ ಅದು ಸರಿಯೋ ತಪ್ಪೋ ನಂತರ ಗೊತ್ತಾಗುತ್ತದೆ. ಅಲ್ಲದೆ ಸಧ್ಯ ಮೇಲ್ನೋಟಕ್ಕೆ ಪ್ರಬಲ ಕಾಯ್ದೆಯಂತಿರುವ ’ಜನ ಲೋಕಪಾಲ್’ಮಸೂದೆ ಜಾರಿಗಾಗಿ, ಭ್ರಷ್ಟಾಚಾರವನ್ನು ಹತ್ತಿಕ್ಕುವಸಲುವಾಗಿ ಮುನ್ನುಗ್ಗುತ್ತಿರುವ ಅಣ್ಣನನ್ನು ಬೆಂಬಲಿಸದಿದ್ದಲ್ಲಿ ಮುಂದೊಂದು ದಿನ ನಮ್ಮನ್ನು ನಾವೇ ಶಪಿಸಿಕೊಳ್ಳಬೇಕಾದೀತು!! ಎಲ್ಲರೂ ತಮ್ಮ ಹೊಟ್ಟೆಪಾಡಿನ ಕೆಲಸ ಬಿಟ್ಟು ದಿನ ಪೂರ್ತಿ ಉಪವಾಸದ ಗುಡಾರಗಳಲ್ಲಿ ಕುಳಿತರೆ ಮಾತ್ರ ಅಣ್ಣಾರವರಿಗೆ ಬೆಂಬಲ ಎಂದುಕೊಳ್ಳುವಂತಿಲ್ಲ. ಸಾಂಕೇತಿವಾಗಿ ಧರಣಿಕುಳಿತು, ಕಪ್ಪು ಪಟ್ಟಿ ಧರಿಸಿಯೂ ಸಹ, ಸಾರ್ವಜನಿಕರಲ್ಲಿ ಅರಿವು ಮೂಡಿಸುವುದರ ಮೂಲಕವೂ ಸಹ ಬೆಂಬಲ ವ್ಯಕ್ತಪಡಿಸಬಹುದು! ಅಲ್ಲದೇ ಅಣ್ಣಾರವರು ಕರೆ ನೀಡಿರುವಂತೆ ಪ್ರತಿ ದಿನ ರಾತ್ರಿ ೮ ರಿಂದ ೯ ಗಂಟೆಯವರೆಗೆ ನಮ್ಮ ನಮ್ಮ ಮನೆಯ ದೀಪಗಳನ್ನು ಆರಿಸಿ, ಮನೆಯಿಂದ ಹೊರಬಂದು, ಘೋಷಣೆ ಕೂಗುವುದರ ಮೂಲಕ, ನಿಮ್ಮ ಜಿಲ್ಲಾಧಿಕಾರಿಗಳಿಗೆ, ನಿಮ್ಮ ತಾಲ್ಲೋಕುಗಳಲ್ಲಿ ತಹಶೀಲ್ದಾರರಿಗೆ ಮನವಿ ಸಲ್ಲಿಸುವುದರ ಮೂಲಕ, ಅಥವಾ ನಿಮ್ಮ ಹೋಬಳಿಗಳಲ್ಲಿರುವ ಉಪತಹಶೀಲ್ದಾರರಿಗೆ ಕಾನೂನು ಜಾರಿಗೆ ಮನವಿ ಸಲ್ಲಿಸುವುದರ ಮೂಲಕ ಶಾಂತಿಯುತವಾಗಿಯೂ ಕಾನೂನಿನ ಜಾರಿಗೆ ಒತ್ತಾಯಿಸಬಹುದು.

ಜೊತೆಗೆ ಪ್ರತಿಯೊಬ್ಬರಿಗೂ ತಮ್ಮದೇ ಆದ ಶಾಂತಿಯುತ ದಾರಿಗಳು ಇದ್ದೇ ಇರುತ್ತವೆ. ಅವುಗಳೆಲ್ಲವುದರ ಮೂಲಕವೂ ಕೇಂದ್ರ ಸರ್ಕಾರಕದ ಮೇಲೆ ಒತ್ತಡ ತರಬಹುದು. ದಯವಿಟ್ಟು ನಿಮಗೆ ತಿಳಿದಿದ್ದನ್ನು ಮಾಡಿ, ಅದು ಶಾಂತಿಯ ಮಾರ್ಗವಾಗಿರಲಿ ಆದರೆ ಕೇಂದ್ರದ ಮೇಲೆ ಒತ್ತಡವಿರಲಿ. ’ಜನ ಲೋಕಪಾಲ ಮಸೂದೆ’ ಜಾರಿಯಾಗೇ ತೀರಲಿ.

ಜೈ ಅಣ್ಣಾ ಹಜಾರೆ!!

ಭ್ರಷ್ಟಾಚಾರ ವಿರುದ್ದದ ಹೋರಾಟಕ್ಕೆ ಜಯವಾಗಲಿ!!

ಮಂಗಳವಾರ, ಆಗಸ್ಟ್ 9, 2011

’ಸಂತೋಷ’ದ ಆ ದಿನಗಳು

"ಮೇ ಐ ಕಂ ಇನ್ ಸರ್?" ಎಂಬ ನನ್ನ ವಿನಮ್ರ ಧ್ವನಿ ಕೇಳಿ, ನಿಶ್ಯಭ್ಧವಾಗಿ ಪಾಠ ಕೇಳುತ್ತಿದ್ದ ಮಂಡ್ಯದ ಕಾಳೇಗೌಡ ಪ್ರೌಢಶಾಲೆಯ ೯ನೇ ತರಗತಿ ಹುಡುಗರಲ್ಲಾ ಬಾಗಿಲ ಬಳಿ ಸರಕ್ಕನೆ ತಿರುಗಿದ್ದರು.
"ಯಾರಪ್ಪ ನೀನು? ಏನಾಗ್ಬೇಕಿತ್ತು?" ಗುರುಗಳ ಕಂಚಿನ ಕಂಠದ ಖಢಕ್ಕಾದ ಧನಿ ಪ್ರಶ್ನೆಯ ರೂಪದಲ್ಲಿ ಬಂತು.
"ಸರ್! ಹೊಸ ಅಡ್ಮೀಶನ್" ಎನ್ನುತ್ತಾ ಕೈಲಿದ್ದ ರೆಸಿಪ್ಟನ್ನು ಮುಂದೆ ಹಿಡಿದೆ.
"ಓ! ಹೌದಾ! ವೆರಿಗುಡ್! ಬಾ ಒಳ್ಗೆ" ಎನ್ನುತ್ತಾ ಬಳಿ ಕರೆದು ರೆಸಿಪ್ಟನ್ನು ಪರಿಶೀಲಿಸಿ ಅಟೆಂಡೆನ್ಸ್ ನಲ್ಲಿ ನನ್ನ ಹೆಸರು ನಮೂದಿಸಿ
" ಏಯ್! ಸಂತೋಷ ಸ್ವಲ್ಪ ಸರ್ಕೊಳೊ" ಎಂದು ದಡೂತಿ ದೇಹದ ಮಾಂಸ ಪರ್ವತದಂದಿದ್ದವನಿಗೆ ಆದೇಶಿಸಿದರು, ನನ್ನನ್ನು ಅಲ್ಲಿ ಕೂರುವಂತೆ ಸನ್ನೆಮಾಡಿದರು. ತರಗತಿಯಲ್ಲಿದ್ದ ಹುಡುಗರು ನನ್ನನ್ನು ಅನ್ಯಗ್ರಹದ ಜೀವಿಯೊಂದು ತಪ್ಪಿಸಿಕೊಂಡು ಬಂದಾಗ ನೋಡುವಂತೆ, ಬಿಟ್ಟ ಬಾಯಿ ಬಿಟ್ಟ ಕಣ್ಣು ಬಿಟ್ಟಹಾಗೆ, ಅವರವರ ಕತ್ತನ್ನು ನನ್ನ ಚಲನೆಗನುಗುಣವಾಗಿ ಸಮೀಕರಿಸಿದಂತೆ ತಿರುಗಿಸುತ್ತಿದ್ದರು,
"ಆಹಾ! ಅವ್ನೇನು ಯಾವಗ್ರಹದಿಂದ ತಪ್ಪಿಸ್ಕಂಡು ಬಂದೋನೇನಲ್ಲ, ಎಲ್ರೂ ನಿಮ್ಮನಿಮ್ಬಾಯಿ ಮುಚ್ಕಂಡು ಪಾಠ ಕೇಳ್ರಿ!" ಮತ್ತದೇ ಗುಂಡು ಹೊಡೆದಂತಾ ಸ್ವರಕ್ಕೆ ಎಲ್ಲರ ದೃಷ್ಠಿ ಕಪ್ಪು ಹಲಗೆಯ ಕಡೆ ನೆಡುವಷ್ಟರಲ್ಲಿ ಸಂತೋಷನಪಕ್ಕದಲ್ಲಿದ್ದ ಸ್ವಲ್ಪವೇ ಸ್ವಲ್ಪ ಜಾಗದಲ್ಲಿ ಕುಳಿತಿದ್ದೆ.
"ನಾನೊಸಿ ದಪ್ಪ! ಬೈಯ್ಕಬ್ಯಾಡ ಗುರು!" ಎಂದು ಪಿಸುಗುಟ್ಟಿದ್ದ ಪಕ್ಕದಲ್ಲಿದ್ದ ಸಂತೋಷ ಆ ಕ್ಷಣಕ್ಕೇ ಹತ್ತಿರವಾಗಿಬಿಟ್ಟ. ಈ ರೀತಿ ನನಗೆ ಸಂತೋಷನ ಪರಿಚಯವಾಗಿತ್ತು. ಬೆಳಗಿನ ತರಗತಿಗಳೆಲ್ಲಾ ಮುಗಿದು, ಊಟದ ಸಮಯದ ಬೆಲ್ ಹೊಡೆದಾಗ ಕೆಲವರು ಮನೆಗೆ ಹೊರಟರೆ, ಮತ್ತೆ ಕೆಲವರು ತಂತಮ್ಮ ಊಟದ ಡಬ್ಬಿಗಳೊಡನೆ ಹೊರ ಹೊರಟರೆ, ಸಂತೋಷ ಸೇರೆದಂತೆ ಮತ್ತೂ ಹಲವರು ತರಗತಿಯೊಳಗೇ ಡಬ್ಬಿ ಬಿಚ್ಚಿ ಊಟಕ್ಕೆ ಕುಳಿತರು. ಅಂದು ಮೊದಲ ದಿನವಾದ್ದರಿಂದ ಸ್ಕೂಲಿಗೆ ದಾಖಲಿಸಿದ ಅಪ್ಪ "ಇವತ್ತು ಹೋಟ್ಲಲ್ಲಿ ತಿನ್ಕೋ" ಎಂದೇಳಿ ೨೦ ರೂ ಕೊಟ್ಟಿದ್ದರು. ಅದಕ್ಕೆಂದೇ ಹೊರಗೆ ಹೋಟಲಿನ ಭೇಟೆಗೆ ಹೊರಡಲನುವಾದೆ.
"ಎಲ್ಲೊಯ್ತಿಯಾ ಗುರು? ಬಾ ಊಟ ಮಾಡಾಣ" ಎಂದ ಅದೇ ಸಂತೋಷ.
"ಇಲ್ಲಾ ಇವತ್ತು ನಾನೇನು ತಂದಿಲ್ಲಾ! ಅದ್ಕೆ ಹೊರ್ಗಡೆ ಹೋಟ್ಲುಗೆ ಹೋಗೋಣಾಂತಿದೀನಿ, ಇಲ್ಲಿ ಹೋಟ್ಲು ಎಲ್ಲಿದೆ?" ಡವಗುಟ್ಟುವ ಎದೆಯ ಸಂಕೋಚದ ಸದ್ದಿನೊಡನೆ ಅವನನ್ನೇ ಕೇಳಿದ್ದೆ.
"ಇರ್ಲಿ ಬಾ! ಇಲ್ಲೇ ತಿನ್ನೋಣ" ಎನ್ನುತ್ತಾ ತನ್ನ ಡಬ್ಬಿಯ ಮುಚ್ಚಳಕ್ಕೆ ತಾನು ತಂದಿದ್ದ ಉಪ್ಪಿಟ್ಟನ್ನು ಹಾಕಿ ಪಕ್ಕದವನಿಗೆ ಕೊಡುತಾ "ಏನ್ ನಿನ್ನೆಸ್ರು?" ಎನ್ನುವ ಪ್ರಶ್ನೆಯನ್ನು ನನ್ನೆಡೆಗೆ ತಳ್ಳಿದ.
"ಉಮಾಶಂಕ್ರ" ಎಂದೆ
"ಓಹೋ!! ಲೋ ಕೋಳಿ, ಸೀ ನಿಮ್ಮಿಬ್ರು ಜೊತೆಗೆ ಇನ್ನೊಬ್ಬ ಉಮಾಶಂಕ್ರ ಬಂದ ನೋಡ್ರುಲಾ!! ಎನ್ನುತ್ತಾ ಗಹಗಹಿಸಿದ ಮಿಕ್ಕವರೂ ಧನಿಗೂಡಿಸಿದರು. ಎಲ್ಲರೂ ತಂತಮ್ಮ ಹೆಸರು ಹೇಳಿ ಪರಿಚಯ ಮಾಡಿಕೊಳ್ಳುತ್ತಾ ಎದುರಿಗಿದ್ದ ಮುಚ್ಚಳಕ್ಕೆ ತಾವು ತಂದಿದ್ದ ತಿಂಡಿಯನ್ನು ಊಟವನ್ನು ಒಂದೊಂದು ಸ್ಪೂನು ಹಾಕುತ್ತಾ ಪಕ್ಕದವನಿಗೆ ಕೊಡುತ್ತಿದ್ದರು. ಎಲ್ಲರ ಪರಿಚಯವೂ ಮುಗಿದ ನಂತರ ಮದುವೆ ಮನೆಯ ಊಟದೆಲೆಯಂತೆ ಬಗೆಬಗೆಯ ತಿಂಡಿಗಳುಳ್ಳ ಮುಚ್ಚಳ ನನ್ನ ಬಳಿಗೆ ಬಂದಾಗ ಏನೂ ತಿಳಿಯದೆ ಎಲ್ಲರ ಮುಖವನ್ನು ನೋಡುತ್ತಿದ್ದಾಗ
"ಹಂಚಿ ತಿಂದೋನು ಮಿಂಚಿ ಬಾಳ್ತಾನಂತೆ!! ಮಖ ಏನೋಡ್ತಿಯಾ? ಜಮಾಯ್ಸು" ಎಂದು ಮತ್ತೆ ಕಿಚಾಯಿಸಿದ್ದರೂ ಅವನು ಸೇರಿದಂತೆ ಅಲ್ಲಿದ್ದ ಎಲ್ಲರೂ ಸೀದ ನನ್ನ ಹೃದಯದೊಳಗೆ ಬಂದು ಕುಳಿತು ಬಿಟ್ಟಿದ್ದರು. ಮೊದಲದಿನದ ಆ ಸ್ಕೂಲಿನ ಅನುಭವ ಅಚ್ಚಳಿಯದೇ ಹಾಗೇ ೨೨ ವರ್ಷಗಳನಂತರವೂ ’ಇಂದು ನಡೆದಿದ್ದೇನೋ’ ಎನ್ನುವಂತೆ ಹಸಿರಾಗಿಯೇ ಇದೆ.
    ನಾನಾಗ ಬಹಳ ಕುಳ್ಳಗಿದ್ದದ್ದರಿಂದ ಮರುದಿನದಿಂದ ಮುಂದಿನ ಡೆಸ್ಕ್ ಖಾಯಂ ಆದರೂ ಸಂತೋಷನ ಗೆಳೆತನಕ್ಕೇನು ಕುಂದು ಬಂದಿರಲಿಲ್ಲ. ಅಂದ ಮಾತ್ರಕ್ಕೆ ಉಳಿದವರೇನು ನನ್ನ ಸ್ನೇಹಿರಲ್ಲವೆಂದಲ್ಲ, ಅವನಿಗಿಂತಲೂ ಆತ್ಮೀಯ ಸ್ನೇಹಿತರು ಅನೇಕರಿದ್ದರೂ ಸಹ ಸಂತೋಷನ ವ್ಯಕ್ತಿತ್ವವೂ ಎಂದೂ ಮರೆಯಲಾಗದಂತಹದ್ದು. ಆ ವಯಸ್ಸಿಗಾಗಲೇ ಅವನು ೬೫ ರಿಂದ ೭೦ ಕೆ.ಜಿ ವರೆಗೆ ತೂಗುತ್ತಿದ್ದ!! ಅವನು ಹೆಸರಿಗೆ ತಕ್ಕಂತೆ ಸಂತೋಷವಾಗಿಯೇ ಇರುತ್ತಿದ್ದ. ಎಲ್ಲರನ್ನೂ ರೇಗಿಸುವುದು, ತರಗತಿಯ ಮೇಷ್ಟ್ರು, ಮೇಡಂಗಳನ್ನು ಅವರಿಲ್ಲದಿದ್ದಾಗ ಅಣಕಿಸುತ್ತಿದ್ದದ್ದು, ತೀರಾ ಗಂಭೀರವಾದ ವಿಚಾರಗಳನ್ನು ತನ್ನ ಹಾಸ್ಯ ಸಮಯಪ್ರಜ್ನೆಯಿಂದಾಗಿ ತಿಳಿಗೊಳಿಸುತ್ತಿದ್ದ ರೀತಿ ಎಲ್ಲರಿಗೂ ಅಚ್ಚುಮೆಚ್ಚಿನದ್ದಾಗಿತ್ತು. ಇಂತಿಪ್ಪ ಸಂತೋಷ ಸಂಜೆ ತರಗತಿಗಳು ಮುಗಿದು ಮನೆಗೆ ಹೋಗುವಾಗ ಮಾತ್ರ ಬಹಳ ಮ್ಲಾನವನನಾಗೆರುತ್ತಿದ್ದ. ಹೈಸ್ಕೂಲಿನಲ್ಲಿದ್ದ ಎಲ್ಲಾ ಸಹಪಾಠಿಗಳ ಮನೆಗೆ ಅವನೂ ಬರುತ್ತಿದ್ದ ನಾನೂ ಹೋಗುತ್ತಿದ್ದೆ, ಎಲ್ಲರೂ ನಮ್ಮ ಊರಾದ ಬಿದರಕೋಟೆಗೂ ಬಂದಿದ್ದರು. ಆದರೆ ಯಾರೂ ಸಂತೋಷನ ಮನೆಯನ್ನು ನೋಡಿರಲಿಲ್ಲ. ಒಂದು ವೇಳೆ ನೋಡಿದವರ್ಯಾರೂ ಮನೆಯೊಳಗೆ ಹೋಗಿರಲಿಲ್ಲ, ಸಂತೋಷನೂ ಸಹ ಯಾರನ್ನೂ ಕರೆಯುತ್ತಿರಲಿಲ್ಲ. ಒಂದು ದಿನ ಅದೇ ವಿಚಾರವನ್ನು ಇತರ ಸ್ನೇಹಿತರಬಳಿ ಹೇಳಿದಾಗ ’ಅವನ ತಂದೆ, ಒಬ್ಬ ಇಂಜಿನಿಯರ್ ಎಂದು ಅವರು ಬಹಳ ’ಸ್ಟಿಕ್ಟ್’ ಎಂದೂ, ಅವರ ಮಗ ಇತರರೊಡನೆ ವೃಥಾ ಕಾಲಹರಣ ಮಾಡುವುದನ್ನು ತಿಳಿದರೆ ಸಂತೋಷನಿಗೆ ’ಒದೆ’ ಬೀಳುತ್ತವೆಂದು’ ವಿನಯ್ ಹೇಳಿದ್ದ. ಯಾವಾಗಲೂ ಜಾಲಿಯಾಗಿ ಕಳೆಯುತ್ತಿದ್ದರೂ ಓದಿನಲ್ಲಿ ಸದಾ ಮುಂದೆಯೇ ಇರುತ್ತಿದ್ದ.
    ಅವನ ನಮ್ಮ ಹುಡುಗಾಟವೆಲ್ಲ ಮೇಷ್ಟ್ರು ಇಲ್ಲದಿದ್ದಾಗಲಷ್ಟೇ ನಡೆಯುತ್ತಿದ್ದರಿಂದ ಹೈಸ್ಕೂಲಿನಲ್ಲಿ ಹೆಚ್ಚು ಬಾಲ ಬಿಚ್ಚಲು ಅವನಿಗೇನು ಮತ್ಯಾರಿಗೂ ಸಾಧ್ಯವಾಗಿರಲಿಲ್ಲ. ನಾವೆಲ್ಲರೂ ನಮ್ಮನಮ್ಮ ಬಾಲಗಳನ್ನು ಬಿಚ್ಚಿ ’ನಾವೂ ಸಹ ವಾನರ ಸಂತಂತಿಯವರು’ ಎಂದು ಜಗತ್ತಿಗೆ ನಿರೂಪಿಸಿ, ’ಡಾರ್ವಿನ್ ನ ವಿಕಾಸವಾದಕ್ಕೆ’ ಇಂಬುಕೊಟ್ಟಿದ್ದು, ಕೊಡುವ ಅವಕಾಶ ಸಿಕ್ಕಿದ್ದು, ’ಬಾಲಕರ ಸರ್ಕಾರಿ ಕಾಲಿಜಿನ’ ಮೆಟ್ಟಿಲು ಹತ್ತಿದಾಗಲೆ!! ಕೇವಲ ಅಟೆಂಡೆನ್ಸ್ ಗಾಗಿ ಕ್ಲಾಸಿಗೆ ಹೋಗುವವರು ಇನ್ನೇನು ಮಾಡಲು ತಾನೆ ಸಾಧ್ಯ!! ಅಲ್ಲವೇ?
     ಅದರಲ್ಲೂ ಸಂತೋಷನ ಆಟಗಳಂತೂ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತಿದ್ದವು. ಆಗ ನಮಗೆ ಅಂಕಗಣಿತ ಮತ್ತು ರೇಖಾಗಣಿತಗಳನ್ನು ಹೇಳಿಕೊಡಲು ಕೆಂಪೇಗೌಡ ಎಂಬ ಲೆಕ್ಚರರ್ ಬರುತ್ತಿದ್ದರು, ಅವರ ಧರ್ಮಪತ್ನಿ, ವಿಜಯಲಕ್ಷ್ಮಿಯವರು ಸಸ್ಯ ಶಾಸ್ತ್ರದ ಲೆಕ್ಚರರ್. ಶುಕ್ರವಾರ ಸಂಜೆ ಕೊನೆಯ ಪೀರಿಯಡ್ ಮತ್ತು ಶನಿವಾರ ಬೆಳಿಗ್ಗೆಯ ಮೊದಲನೆ ಪೀರಿಯಡ್ ಕೆಂಪೇಗೌಡರದ್ದು. ನಂತರದ ಪೀರಿಯಡ್ ವಿಜಯಲಕ್ಷ್ಮಿಯವರದ್ದು. ಈ ಕೆಂಪೇಗೌಡರು ಸ್ವಲ್ಪ ಮೃದು ಆಸಾಮಿ. ಗಣಿತದಲ್ಲಷೇ ಅಲ್ಲ ಎಡಗೈ ಮತ್ತು ಬಲಗೈ ಎರದರಲ್ಲೂ ಸಮಾನಂತರವಾಗಿ ಕೈ ಬರಹ ವ್ಯತ್ಯಾಸ ತಿಳಿಯದಂತೆ ಬರೆಯುವುದರಲ್ಲಿ (ತ್ರೀ ಈಡಿಯಟ್ಸ್ ಚಿತ್ರದಲ್ಲಿ ಬರುವ ’ವೈರಸ್’ನಂತೆ) ನಿಸ್ಸೀಮರು. ಅದೊಂದು ಶುಕ್ರವಾರ ಸಂಜೆಯ ಕ್ಲಾಸಿನಲ್ಲಿ ಎಲ್ಲರೂ ತೂಕಡಿಸುತ್ತಾ ಕುಳಿದ್ದಾಗ ತಮ್ಮ ಎರಡೂ ಕೈಯಿಂದ ಬೋರ್ಡ್ ಮೇಲೆ ಬರೆಯುತ್ತಾ ಪಾಠದಲ್ಲಿ ಕುತೂಹಲ ಕೆರಳಿಸಲು ವಿಫಲ ಪ್ರಯತ್ನ ನಡೆಸುತ್ತಿರುವಾಗ ಹಿಂದಿನ ಬೆಂಚಿನಲ್ಲಿದ್ದ ಸಂತೋಷನ ಕೈಲಿದ್ದ ಕಾಗದದ ರಾಕೆಟ್ ಸೀದಾ ಹೋಗಿ ಕೆಂಪೇಗೌಡರ ಕಪ್ಪು ಗುಂಗುರು ಕೂದಲಿನೊಳಗೆ ನಾಟಿ ಅವರ ಕೋಪದ ಜೊತೆಗೆ ದುಃಖದ ಕಟ್ಟೆಯೂ ಸ್ಪೋಟಗೊಂಡಿತ್ತು!! "ಹೋಓಓಹೋ!!!" ಎನ್ನುತ್ತಾ ಕಿರುಚುತ್ತಿದ್ದ ನಮ್ಮ ಬಾಯಿಗೆ ಬೀಗ ಹಾಕಿದ್ದು
"ಯಾವನಯ್ಯ ಅವ್ನು?!?!?!" ಎನ್ನುವ ಅವರ ಅದೇ ದುಃಖಭರಿತ ನಡುಕದ ಏರು ಧನಿ!!
"ನಂಗೊತ್ತು ನೀವೆಲ್ಲಾ ಟ್ಯೂಷನ್ಗೋಗ್ತೀರಾ, ಬರೀ ಅಟೆಂಡೆನ್ಸ್ ಗೆ ಮಾತ್ರ ಕಾಲೇಜಿಗ್ಬರ್ತೀರಾಂತ!! ಟ್ಯೂಷನ್ ಫೀಜ್ ಕೊಡಕಾಗ್ದಿರೋ ಬಡವ್ರೂ ಇರ್ತಾರೆ, ಅವ್ರಿಗ್ಯಾಕೆ ತೊಂದ್ರೆ ಕೊಡ್ತೀರಾ? ಇಷ್ಟ ಇಲ್ದಿದ್ರೆ ಎದ್ದೋಗಿ, ಇಲ್ಲಾಂದ್ರೆ ನನ್ತಲೆಮೇಲೆ ದಪ್ಪ ದಿಂಡ್ಗಲ್ಲೆತ್ತಾಕಿ ಸಾಯ್ಸಿಬಿಡಿ!!" ಎನ್ನುತ್ತಾ ನೀರು ತುಂಬಿದ ಕಣ್ಣಾಲೆಗಳಿಂದ ಡೆಸ್ಟರ್ ರಿಜಿಸ್ಟರ್ ಗಳನ್ನೆತ್ತಿಕೊಂಡು ಪಾಠವನ್ನು ಅರ್ಧಕ್ಕೆ ಬಿಟ್ಟು ಹೊರಟು ಹೋದರು.
    ಮರುದಿನ ಎಲ್ಲವನ್ನೂ ಮರೆತ ಗೌಡರು ನಗುಮೊಗದೊಂದಿಗೆ ಕಾಲೇಜಿಗೆ ಬಂದರು, ಅಷ್ಟೇ ಖುಷಿಯಿಂದ ನಮ್ಮ ತರಗತಿಯೊಳಗೆ ಬಂದು ತಮ್ಮ ಎಂದಿನ ಅಭ್ಯಾಸಬಲದಂತೆ ಬಾಗಿಲು ಮುಚ್ಚಿ ಟೇಬಲ್ ಬಳಿ ಬಂದು ರಿಜಿಸ್ಟರ್ ಮತ್ತು ಡೆಸ್ಟರ್ ಇಡಲು ನೋಡುತ್ತಾರೆ!! ಜಾಗವೆಲ್ಲಿದೆ? ಟೇಬಲ್ ತುಂಬಾ ’ಒಂದು ದಪ್ಪ ದಿಂಡುಗಲ್ಲು!!!!!!’ಗೌಡರನ್ನು ಅಣಕಿಸುತ್ತಾ ಕುಳಿತಿತ್ತು!!!
    ಕೆಂಪೇಗೌಡರ ಮುಖ ಕೆಂಪೆಡರುವುದರ ಜೊತೆಗೆ ಜಂಘಾಬಲವೇ ಉಡುಗಿಹೋಗಿತ್ತು!! ಕಂಪಿಸುವ ಸ್ವರದಿಂದ
"ಯಾರ್ರಿ ಇದ್ನ ಇಲ್ತಂದಿದ್ದು?" ಎಂದರು, ನಿಶಬ್ಧವಾಗಿದ್ದ ಕ್ಲಾಸಿನೊಳಗೆ
"ನಿನ್ನೆ ನೀವೇ ಹೇಳಿದ್ರಲ್ಲ ಸರ್ ದಿಂಡ್ಗಲ್ಲೆತ್ತಾಕಿ ಸಾಯ್ಸಿಬಿಡಿ!! ಅಂತ!" ಎನ್ನುವ ಉತ್ತರಮಾತ್ರ ಹಿಂದಿನ ಬೆಂಚಿಂದ ಸಂತೋಷನ ಬಾಯಿಂದ ಮೊಳಗಿತ್ತು. ಕೆಂಪೇಗೌಡರು ಕೋಪದಿಂದ ನಮಗೆ ಬೇಕಿದ್ದ ಅಟೆಂಡೆನ್ಸ್ ಸಹ ಹಾಕದೆ ಹೊರಟು ಹೋಗಿದ್ದು  ಸೂರು ಎಗರಿ ಹೋಗುವ ಹಾಗೆ "ಓಹೋ!"" ಎಂದು ಅರಚುತ್ತಿರುವ ನಮ್ಮ ಗಮನಕ್ಕೆ ಬಾರಲೇ ಇಲ್ಲ. ಹಿರಿಕರು ಹೇಳುವಂತೆ ನಗುವಿನೊಡನೆ ಅಳುವೂ ಬರುತ್ತದೆನ್ನುವ ಸತ್ಯ ಮುಂದಿನ ಪೀರಿಯಡ್ ನಲ್ಲೇ ನಮಗೆಲ್ಲಾ ತಿಳಿದು ಹೋಗಿತ್ತು! ಏಕೆಂದರೆ ಮುಂದಿನ ತರಗತಿ ಮಿಸೆಸ್ ಕೆಂಪೇಗೌಡ ಅರ್ಥಾತ್ ಶ್ರೀಮತಿ ವಿಜಯಲಕ್ಷ್ಮೀ ಯವರದ್ದು. ಅವರದ್ದು ಕೆಂಪೇಗೌಡರ ತದ್ವಿರುದ್ದ ಗುಣ.
"ಯಾವನನ್ಮಗನೋ ಅವ್ನು ಕ್ಲಾಸೊಳ್ಗೆ  ಕಲ್ಲು ತಂದಿಡೋನು?? ಧೈರ್ಯ ಇದ್ರೆ ಮುಂದೆ ಬನ್ರೋ!! ಅದೇ ಕಲ್ಲೆತ್ತಾಕಿ ಸಿಗ್ದು ತೋರ್ಣ ಕಟ್ಬಿಡ್ತೀನಿ!!" ಎಂದು ಸಾಕ್ಷಾತ್ ದುರ್ಗಾದೇವಿಯ ಗೆಟಪ್ ನಲ್ಲಿ ನಿಂತಾಗ, ನಮ್ಮೆಲ್ಲರ ಎದೆಯೊಳಗೆ ತಂಬಿಟ್ಟಿಗೆ ಅಕ್ಕಿ ಕುಟ್ಟುವ ಸದ್ದು!!! ಓಡಿ ಹೋಗೋಣ ಅಂದ್ರೆ ಬಾಗಿಲು ಮುಚ್ಚಿದೆ, ಅದಕ್ಕಿಂತ ಹೆಚ್ಚಾಗಿ ಸೊಂಟಕ್ಕೆ ಸೆರಗು ಸಿಕ್ಕಿಸಿ ಕೈಯಲ್ಲಿ ಡೆಸ್ಟರ್ ಅನ್ನು ಲಾಂಗ್ ನಂತೆ ಹಿಡಿದು ನಿಂತಿರುವ ವಿಜಯಲಕ್ಷ್ಮಿ!!
"ಎಷ್ಟೋ ಧೈರ್ಯ ನಿಮ್ಗೆ? ಒಬ್ಬ ಲೆಕ್ಚರ್ನ ಈ ರೀತಿ Humiliate ಮಾಡೋಕೆ?.... ಅದ್ಯಾರು ಅಂತೇಳಿದ್ರೆ ಸರಿ ಇಲ್ಲಾಂದ್ರೆ ಪ್ರಿನ್ಸಿಪಾಲ್ಗೇಳಿ ಪೋಲೀಸ್ನೋರನ್ನ ಕರ್ಸ್ತೀನಿ" ಎಂಬ ಅವಾಜಿಗೆ ಉದಯ ಟೀವಿಯಲ್ಲಿ ಬರುವ ದರಿದ್ರವಾಹಿಗಳ ಕ್ಲೋಸ್-ಅಪ್ ಷಾಟ್ ಗಳು ನಮ್ಮ ನಮ್ಮಲ್ಲಿ ವಿನಿಮಯಗೊಂಡವು!! ಆದರೂ ’ಒಗ್ಗಟ್ಟಿನಲ್ಲಿ ಬಲವಿದೆ’ ಎನ್ನುವುದನ್ನು ತೋರಿಸಲೆಂದೇ ಆ ವಿಚಾರದಲ್ಲಿ ಯಾರೊಬ್ಬರ ತುಟಿಯೂ ಎರಡಾಗಲಿಲ್ಲ, ಕೇವಲ ಸಂತೋಷನನ್ನು ಬಿಟ್ಟು.
"ಹೋಗ್ಲಿ ಬಿಡಿ ಮೇಡಂ!! ಗೌಡ್ರ ಮರ್ಯಾದೆ ಪ್ರಶ್ನೆ!!!" ಎಂಬ ಅವನ ಉತ್ತರ ವಿಜಯಲಕ್ಷ್ಮಿಯವರನ್ನು ’ಗಲಿಬಿಲಿ’ಲಕ್ಷ್ಮಿಯನ್ನಾಗಿ ಮಾಡಿತ್ತು!! ಆ ಕ್ಷಣಕ್ಕೆ ಅವರಿಗೆ ಏನು ಹೇಳಬೇಕೆಂದು ತೋಚದೆ ಹಾಗೆ ಹೇಳಿದ್ದು ಯಾರು ಎಂದು ಹುಡುಕುವ ವಿಫಲ ಪ್ರಯತ್ನದಲ್ಲಿ ಒತ್ತರಿಸಿ ಬರುತ್ತಿದ್ದ ನಗುವನ್ನು ತಡೆಹಿಡಿದ ನಮ್ಮಗಳ ಮುಖ ನೋಡಿ ಮೊದಲೇ ಕೆಂಪಾಗಿದ್ದ ಅವರ ಮತ್ತಷ್ಟು ರಂಗೇರಿ ಅವರ ಸಣ್ಣ ಮೂಗಿನ ಹೊಳ್ಳೆಗಳು ಆಚಾರಿಯ ಕುಲುಮೆಯಂತೆ ಮೇಲೆ ಕೆಳಗೆ ಆಡುತ್ತಾ ಬುಸುಗುಡತೊಡಗಿದ್ದವು!! ಏನು ಹೇಳಬೇಕೆಂದು ತೋಚದೆ
"Belive me I'll never take your class!!" ಎನ್ನುತ್ತಾ ಬಿರುಗಾಳಿಯಂತೆ ಕ್ಲಾಸಿನಿಂದ ಹೊರನಡೆದರು. ಮುಂದುನ ಬೆಂಚಿನ ’ಗಾಂಧೀವಾದಿ’ಗಳಿಗೆ ’ತಾವು ತಪ್ಪು ಮಾಡಿಲ್ಲ’ ಎಂದು ಮೇಡಂಗೆ ಅರುಹುವ ಚಡಪಡಿಕೆಯಿತ್ತು. ಮಧ್ಯದ ಬೆಂಚಿನಲ್ಲಿ ಕುಳಿತ ನಮ್ಮನ್ನೂ ಸೇರಿದಂತೆ ಇತರರೆಲ್ಲರನ್ನು ದುರುಗುಟ್ಟಿ ನೋಡಿ ಮೇಡಂರವರನ್ನು ಓಡೋಡಿ ಹಿಂಬಾಲಿಸಿದರು. ಇದನ್ನರಿತ ಸಂತೋಷನಿಗೆ ಏನೋ ಹೊಳೆದಂತಾಗಿ
"ಲೋ!! ಎಡವಟ್ಟಾಯ್ತು ಬನ್ರಲೇ" ಎನ್ನುತ್ತಾ ಓಡೋಡಿ ಅವರಿಗಿನ್ನ ಮುಂದೆ ಬಂದು ಮೇಡಂ ಎದುರಿಗೆ ಅವನೇ ನಿಂತಿದ್ದ!!! ಈಗ ಅವಾಕ್ಕಾಗುವ ಸರಧಿ ’ಗಾಂಧಿವಾದಿ’ಗಳದ್ದು!!!!
"ಮೇಡಂ ಯಾವನೋ ಬುದ್ದಿಯಿಲ್ದೋನು ಮಾಡಿರೋ ಕೆಲ್ಸುಕ್ಕೆ ನಮ್ಗೆಲ್ಲಾ ಯಾಕೆ ಶಿಕ್ಷೆ ಮೇಡಂ!! ನೀವು ಪಾಠ ಮಾಡ್ಲಿಲ್ಲಾಂದ್ರೆ ಟ್ಯೂಷನ್ ಗೆ ಹೋಗ್ದಿರೋ ನಮ್ಮಂತೋರ್ಗತಿ ಏನು ಮೇಡಂ?" ಎನ್ನುವ ಅವನ ವರಸೆ ನೋಡಿದಾಗ ’ಮಗು ಜಿಗುಟಿ ತೊಟ್ಟಲು ತೂಗುವುದು’ ಎಂದರೇನು ಎಂದು ನಮಗೆಲ್ಲಾ ಅರ್ಥವಾಗಿತ್ತು!
    ಅದೇ ರೀತಿ ರಿಟೈರ್ಡ್ ಅಂಚಿನಲ್ಲಿದ್ದ ಜಯಭಾರತಿ ಎನ್ನುವ ’ಪರಮ ಪುರುಷದ್ವೇಶಿ’ಮಹಿಳೆಯೊಬ್ಬರು ಇಂಗ್ಲೀಷ್ ಬೋಧಿಸಲು ಬರುತ್ತಿದ್ದರು. ’ಮಂತ್ರಕ್ಕಿಂತ ಉಗುಳೇ ಹೆಚ್ಚು’ ಅನ್ನುವ ಹಾಗೆ ಅವರು ಪಾಠಮಾಡುತ್ತಿದ್ದಕ್ಕಿಂತ ಗಂಡು ಸಂತತಿಯನ್ನು ಬೈಯ್ಯುವುದರಲ್ಲೇ ಕಾಲಹರಣ ಮಾಡುತ್ತಿದ್ದರು. ಒಂದು ಗಂಟೆಯ ಒಟ್ಟಾರೆ ಸಮಯದಲ್ಲಿ ೧೦ ನಿಮಿಷ ಪಾಠಮಾಡಿದರೆ ಉಳಿದ ೫೦ ನಿಮಿಷ ’ಗಂಡುಸ್ರು ಹಾಗೆ, ಹೀಗೆ’ ಎನ್ನುವುರಲ್ಲೇ ಕಾಲ ಕಳೆಯುತ್ತಿದ್ದರು!! ಒಮ್ಮೆ ಹೀಗೆ ಮಾತನಾಡುತ್ತಾ
"ಈ ಗಂಡುಸ್ರು ಪವರ್ ಏನಿದ್ರೂ ಐದೇ ನಿಮಿಷ ಕಣ್ರಿ!!" ಅಂದ್ಬಿಡೋದೇ!!! ಅದರಲ್ಲೂ ಮೀಸೆ ಚಿಗುರುತ್ತಿರುವ, ಬಿಸಿರಕ್ತದ ಯುವಕರ ಮುಂದೆ!! ನಮ್ಮತರಗತಿಯಲ್ಲಿದ್ದ ಅರವತ್ತೂ ಹುಡುಗರಿಗೆ ನಖಶಿಖಾಂತ ಉರಿದುಹೋಯಿತು!! ’ಬಡವನ ಕೋಪ ದವಡೆಗೆ ಮೂಲ’ಎಂಬ ನಾಣ್ಣುಡಿ ಜ್ನಾಪಕಕ್ಕೆ ಬಂದು, ಮನದೊಳಗೆ ಗೊಣಗಿಕೊಳ್ಳುವುದನ್ನು ಬಿಟ್ಟರೆ ಇನ್ನೇನೂ ಮಾಡಲಾಗಲಿಲ್ಲ!! ಆಗ ನಮ್ಮ ಸಹಾಯಕ್ಕೆ ಬಂದವನು ಅದೇ ಸಂತೋಷ!
"ಹೌದು ಮೇಡಂ!! ಗಂಡಸ್ರ ಐದ್ನಿಮ್ಷ ಪವರ್ಗೆ ೯ ತಿಂಗಳು ಕಷ್ಟಪಡೋರು ಹೆಂಗುಸ್ರಲ್ವೇ?" ಎನ್ನುವ ತುಸು ಅಶ್ಲೀಲ ಉತ್ತರದಿಂದ ಜಯಭಾರತಿಯವರ ಬಾಯಿ ಹೊಲಿಯುವುದರ ಜೊತೆಗೆ ನಿಶಬ್ದವಾಗಿ ನಮ್ಮ ಮನದ ಸಮೇತ ಕಣ್ಣುಗಳೂ ಅರಳಿದ್ದವು!! ಅಂದೇ ಕೊನೆ ಜಯಭಾರತಿಯವರು ಪಠ್ಯಬಿಟ್ಟು ಮತ್ಯಾವ ವಿಷಯವನ್ನು ನಮ್ಮ ಸೆಕ್ಷನ್ ನಲ್ಲಿ ಮಾತನಾಡುತ್ತಿರಲಿಲ್ಲ!
    ಮತ್ತೊಮ್ಮೆ ಹೊಸದಾಗಿ ನೇಮಕಗೊಂಡ Physics ಲೆಕ್ಚರರ್ ಒಬ್ಬರು ನಮ್ಮ ತರಗತಿಗೆ ಬಂದರು ಅದು ಅವರ ವೃತ್ತಿ ಜೀವನದ ಪ್ರಪ್ರಥಮ ತರಗತಿಯಾಗಿತ್ತು. ಯಥಾ ಪ್ರಕಾರ ಮೊದಲ ತರಗತಿಯಾದ್ದರಿಂದ ತಮ್ಮನ್ನು ತಾವು ಪರಿಚಯಿಸಿಕೊಳ್ಳಲು ಪ್ರಾರಂಬಿಸುತ್ತಾ
"ನನ್ನ ಹೆಸರು ಮಂಜುನಾಥ ಎಂದು! ನಾ ಮಂಗಳೂರಿನವ" ಎನ್ನುತ್ತಿದ್ದಂತೆ ಸಂತೋಷನಿಗೆ ಹಿಂದಿನ ದಿನ ದೂರದರ್ಶನದಲ್ಲಿ ಬಂದಿದ್ದ ಕಾಶಿನಾಥ್ ರವರ ಚಿತ್ರದ ಡೈಲಾಗ್ ಜ್ನಾಪಕಕ್ಕೆ ಬಂದು
"ಓಹೋ!!! ಮಂಗಳೂರು ಮಂಜುನಾಥ!!!" ಎಂದು ಥೇಟ್ ಕಾಶಿನಾಥ್ ಶೈಲಿಯಲ್ಲೇ ಹೇಳಿದಾಗ ಹೊಟ್ಟೆಹುಣ್ಣಾಗುವಂತೆ ನಗುವುದನ್ನು ಮಂಜುನಾಥನಾಣೆಗೂ ತಡೆಯಲಾಗಲಿಲ್ಲ! ಪೆಚ್ಚಾಗಿ ನಿಂತಿದ್ದ ನಮ್ಮ ಹೊಸ ಲೆಕ್ಚರರ್ ಸಾವರಿಸಿಕೊಂಡು
"ಇರಲಿ! ಈಗ ನಿಮ್ಮ ಹೆಸರು, ಮುಂದೆ ನೀವೇನು ಆಗ್ಲಿಕ್ಕೆ ಬೇಕಂತೀರಾ ಹೇಳಬೇಕು ಆಯ್ತಾ?" ಎನ್ನುತ್ತಾ ಎಲ್ಲರ ಪರಿಚಯ ಕಾರ್ಯಕ್ರಮ ಮುಗಿಯುತ್ತಿದ್ದಂತೆ
"ಸರ್! ನೀವೇನಾಗ್ಬೇಕು ಅನ್ಕಂಡಿದ್ರೀ?" ಎನ್ನುವ ಪ್ರಶ್ನೆ ನಮ್ಮ ಮತ್ತೊಬ್ಬ ಸಹಪಾಠಿ ವಿಕ್ಟರ್ ನಿಂದ ತೂರಿಬಂತು.
"ನಾ ಇಂಜಿನಿಯರ್ ಆಗಬೇಕೆಂದಿದ್ದೆ! ಆದರೆ ಆಗಲಿಲ್ಲ" ಎನ್ನುವ ಮಂಜುನಾಥರ ಪ್ರಾಮಾಣಿಕ ಉತ್ತರಕ್ಕೆ
"ತಿಕ ಬಗ್ಸಿ ಓದಿದ್ರೆ ಆಯ್ತಿದ್ದೆ!!" ಎನ್ನುವ ಮಂಡ್ಯ ಸೊಗಡಿನ ಸಂತೋಷನ ಡೈಲಾಗಿಗೆ ತರಗತಿಯಿಂದ ಹೊರಬಿದ್ದ ನಗು ಕಾಲೇಜಿಗೆಲ್ಲಾ ಕೇಳಿಸಿತ್ತು!!
    ಇಂಥಹ ’ಸಂತೋಷ’ದ ದಿನಗಳಿಗೆ ಕೊನೆಗೂ ಪರೀಕ್ಷಾಸಮಯ ಮೊಳೆ ಹೊಡೆದಿತ್ತು. ದ್ವಿತಿಯ ಪಿ.ಯು.ಸಿ ಆದ್ದರಿಂದ ಎಲ್ಲರಿಗೂ ಓದಲೇ ಬೇಕಾದ ಜರೂರತ್ತು! ಒದಿದ್ದೂ ಆಗಿತ್ತು, ಪರೀಕ್ಷೆಯೂ ಮುಗಿಯುತ್ತಾ ಬಂದಿತ್ತು. ಸಂತೋಷ ಎಲ್ಲಾ ಪತ್ರಿಕೆಗಳಿಗೂ ತುಂಬಾ ಚೆನ್ನಾಗಿಯೇ ಉತ್ತರಿಸಿದ್ದರೂ
"ಇಲ್ಲಾ ಮಗ! ಚೆನ್ನಾಗ್ಮಾಡಿಲ್ಲ!" ಎನ್ನುತ್ತಿದ್ದ ಅವನು ಚೆನ್ನಾಗಿಯೇ ಓದುತ್ತಾನೆಂಬುದು ಪ್ರಿಪರೇಟರಿ ಮತ್ತು ಟ್ಯೂಷನ್ ಗಳ್ ಪರೀಕ್ಷೆಗಳಲ್ಲಿ ತಿಳಿದಿದ್ದರಿಂದ ಅವನು ತಮಾಷೆ ಮಾಡುತ್ತಿದ್ದಾನೆಂಬುದು ಎಲ್ಲರಿಗೂ ತಿಳಿದ ಸತ್ಯ ಸಂಗತಿಯಾಗಿತ್ತು. ಕೊನೆಯ ದಿನ ಗಣಿತ ಪರೀಕ್ಷೆ ಇತ್ತು, ಆದಾದ ನಂತರ ಬಳಿಬಂದ ಸಂತೋಷ ಅದೇ ಡೈಲಾಗನ್ನು ರಿಪೀಟ್ ಮಾಡಿದ್ದ. ಅವನ ಮಾತಿಗೆ ಎಂದಿನಂತೆ ಗೇಲಿಮಾಡಿ
"ಇರ್ಲಿ ಬಿಡು ಮಗಾ ಸೆಪ್ಟಂಬರ್ ಇರೋದೇ ಅದ್ಕಲ್ವೇ?" ಎಂದು ರೇಗಿಸುತ್ತಾ ಫಸ್ಟ್ ಶೋ ಫಿಲಂಗೆ ಹೋಗುವುದು, ಎಲ್ಲರೂ ೪ ಗಂಟೆಗೆ ಥಿಯೇಟರ್ ಬಳಿ ಬರುವುದೆಂದು ನಿಷ್ಕರ್ಷಿಸಿ ಮನೆಯೆಡೆಗೆ ಸೈಕಲ್ ತುಳಿದೆವು. ಈಗಿನ ಹಾಗೆ ಆಗೆಲ್ಲಾ ಮೊಬೈಲ್ ಇರಲಿಲ್ಲ ಲ್ಯಾಂಡ್ ಲೈನೇ ಗತಿಯಾಗಿತ್ತು. ಮಧ್ಯಾನ್ಹ ಮೂರುಗಂಟೆಗೆ ಮತ್ತೊಬ್ಬ ಉಮಾಶಂಕರನ ಮನೆಗೆ ಹೋಗುವುದಕ್ಕೂ ಅವರ ಮನೆಯ ಫೋನ್ ರಿಂಗಣಿಸುದಕ್ಕೂ ಒಂದೇ ಆಯ್ತು. ಆದರೆ ಆ ರಿಂಗು ಸಂತೋಷನ ಸಾವಿನ ಸುದ್ದಿಯಾಗುತ್ತದೆಂದು ನಾವ್ಯಾರೂ ಭಾವಿಸಿರಲಿಲ್ಲ!!
    ಹೌದು!! ’ಗಣಿತ ಪರೀಕ್ಷೆಯಲ್ಲಿ ಸರಿಯಾಗಿ ಉತ್ತರಿಸಿಲ್ಲ, ಫೇಲಾದರೆ ಅಪ್ಪ ನನ್ನನ್ನು ಕೊಂದುಬಿಡುತ್ತಾರೆ ಅದರ ಬದಲು ನಾನೇ ಸಾಯುವುದು ಮೇಲೆಂದು ’ಬಗೆದು ಸಂತೋಷ ಶತಾಬ್ದಿ ರೈಲಿಗೆ ತಲೆಕೊಟ್ಟಿದ್ದ! ರುಂಡ ಚಿದ್ರಗೊಂಡ ದೇಹದಿಂದ ಮೈಲು ದೂರ ಬಿದ್ದಿತ್ತು!! ಅವನಪ್ಪನ ’ಸ್ಟಿಕ್’ನೆಸ್ ಅವನ ಪ್ರಾಣವನ್ನೇ ಬಲಿಯಾಗಿ ಪಡೆದಿತ್ತು!!
    ಆದರೆ ತಿಂಗಳ ನಂತರ ಬಂದ ಫಲಿತಾಂಶದಲ್ಲಿ ಸಂತೋಷ ಎಲ್ಲಾ ಪತ್ರಿಕೆಗಳಲ್ಲೂ ಡಿಸ್ಟಿಂಕ್ಶನ್ ನಲ್ಲಿ ಪಾಸಾಗಿದ್ದದ್ದು ಅವರಪ್ಪನ ಅಹಂಮ್ಮಿಗೆ ಸರಿಯಾದ ಗುದ್ದು ನೀಡಿತ್ತು.
ಆದರೆನು ಪ್ರಯೋಜನ!! ಕಾಲಮಿಂಚಿತ್ತು ಇದ್ದ ಒಬ್ಬ ಮಗ ಬಾರದ ಲೋಕಕ್ಕೆ ಹೋಗಿದ್ದ!!

ಮಂಗಳವಾರ, ಜುಲೈ 5, 2011

ಲೋಕಪಾಲ ಮಸೂದೆಯಿಂದ ಭ್ರಷ್ಟಾಚಾರ ನಿಯಂತ್ರಣ ಸಾಧ್ಯವಿಲ್ಲವೇ ಇಲ್ಲ

ಫೇಸ್-ಬುಕ್ಕಿನಲ್ಲಿ ಹಜಾರೆಯಣ್ಣನಿಗೆ ’ಗೆದ್ದು ಬಾ! ನೀವು ಮುಂದೆ ನಾವು ನಿಮ್ಮ ಬೆನ್ನಿಂದೆ’ ಇತ್ಯಾದಿ ಇತ್ಯಾದಿ.. ಬರೆದು ’ವಿಶ್ವಕಪ್’ಗೆಲ್ಲಲು ಬೆಂಬಲಿಸಿದ್ದಕ್ಕಿಂತಲೂ ಹೆಚ್ಚಾಗಿ ಬೆಂಬಲಿಸಿದ್ದಾಯ್ತು, ಟ್ವಿಟ್ಟರ್ ನಲ್ಲಿ ಗಂಟಲ ಪಸೆ ಆರುವವರೆಗೂ ಚುಚ್ಚಿ ನುಡಿದದ್ದೇ ಬಂತು, ಬ್ಲಾಗು ತಾಣಗಳಲ್ಲಿ ಪುಟಗಟ್ಟಲೆ ಲೇಖನವನ್ನು ಬರೆದು ಕೈ ನೋಯಿಸಿಕೊಂಡದ್ದೇ ಭಾಗ್ಯ. ಗಂಟಲು ನರ ಕಿತ್ತರಿಯುವಂತೆ ಕೂಗಿ ಕೂಗಿ ಮಾಡಿದ ಭ್ರಷ್ಟ ವಿರೋಧಿ ಭಾಷಣಗಳು ಕಿವಿಯಲ್ಲಿ ಗುಂಯ್ ಗುಡುವಮೊದಲೇ ಮರೆತೂ ಆಗಿಹೋಯ್ತು!! ಈ ನಡುವೆ ವಿದೇಶದಲ್ಲಿರುವ ಕಪ್ಪು ಹಣವನ್ನು ಲೆಕ್ಕಹಾಕಲು ಕ್ಯಾಲ್ಕುಲೇಟರ್ ಅಲ್ಲ ಕಂಪ್ಯೂಟರ್ ಕೈಲೂ ಆಗೊಲ್ಲ, ಅದೇನಾದರೂ ಭಾರತಕ್ಕೆ ವಾಪಸ್ಸು ಬಂದರೆ ಹಳ್ಳಿಯಿಂದ ದಿಲ್ಲಿಯವರೆಗೆ ’ಡಬಲ್-ರೋಡು’ ಮಾಡಬಹುದು, ಎಲ್ಲರಿಗೂ ಮನೆ, ಸೈಟು, ತೆರಿಗೆಯಿಲ್ಲದ ಜೀವನ .................... ಹೀಗೆ ಪುಂಖಾನುಫುಂಖವಾಗಿ ಹರಿದಾಡಿದ ಎಸ್ಸೆಮ್ಮೆಸ್ಸುಗಳು ಮಿಂಚಂಚೆಗಳು ಸಿರಿವಂತರಲ್ಲಿ ನಿರ್ಲಿಪ್ತತತೆ, ಬಡವರಲ್ಲಿ ನಿರ್ಲಕ್ಷ್ಯ ಮೂಡಿಸಿದರೆ ನಮ್ಮಂತಹ ಮಧ್ಯಮವರ್ಗದವರಲ್ಲಿ ಕಮರಿಹೋದ ಕನಸುಗಳಿಗೆ ರೆಕ್ಕೆ ಪುಕ್ಕ ಬರಿಸಿ, ಬೆಂಜ್ ಕಾರಿನಲ್ಲಿ ಕುಳಿತು ವಿಮಾನದಲ್ಲಿ ಹಾರಾಡುವ ಆಸೆಗಳನ್ನು ಹಗಲುಗನಸು ಕಾಣುತ್ತಾ ಎಸ್ಸೆಮ್ಮೆಸ್ ಓದುತ್ತಾ ಈಡೇರಿಸಿಕೊಂಡದ್ದೂ ಆಯ್ತು!!!! ಆ ಮಂಪರಿನಲ್ಲಿ ಭಷ್ಟಾಚಾರವನ್ನು ತುಳಿಯಲು ಹೆಚ್ಚಾಗಿ ಬೆಂಬಲಿಸಿದ್ದು ’ಭಾರತದ ಈಗಿನ ಬೆನ್ನೆಲುಬು’ ಅದೇ ಮಧ್ಯಮವರ್ಗ!
    ಭ್ರಷ್ಟವಿರೋಧಿ ಅಲೆ ಹೇಗೆ ಅಪ್ಪಳಿಸಿತೆಂದರೆ "ಸಧ್ಯ ಪೀಡೆ ಇನ್ನೇನು ತೊಲಗಿತು" ಎಂದು ನಿಟ್ಟುಸಿರು ಬಿಡುವ ಮುನ್ನ ಮತ್ತೆ ಅದೇ ಭ್ರಷ್ಟಾಚಾರ ಕೂಗಿ ಕೂಗಿ ಹೇಳಿತ್ತು "ಗೆದ್ದದ್ದು ನಾನೆ!!" ಗೆದ್ದಲು ಹಿಡಿದಿದ್ದು ನೀವೇ!!" ಎಂದು. ಅಣ್ಣಾ ಹಜಾರೆಯ ಉಪವಾಸಕ್ಕೆ ಕಿಮ್ಮತ್ತಿಲ್ಲದಂತಾಯ್ತು, ರಾಮದೇವ್ ಬಾಬನ ’ಸ್ಟಂಟನ್ನು’ ಟೆಂಟಿನ ಸಮೇತ ಕಿತ್ತದ್ದಷ್ಟೇ ಆಗಿದ್ದು!! ಕೂದಲೂ ಕೂಡ ಕೊಂಕಿಸಲಾಗಲಿಲ್ಲ!!
    ಆದರೆ ಈ ನಡುವೆ ಬಂದ ಲೋಕಪಾಲ ಮಸೂದೆ ಮಾತ್ರ ಭ್ರಷ್ಟರ ಬೆನ್ನುರಿಯಲ್ಲಿ ನೀರಿಳಿಸಿದ್ದು ಮಾತ್ರ ಅಷ್ಟೇ ಸತ್ಯ! ಆದರೆ ಅದನ್ನು ಜಾರಿಗೆ ತರದಿರಲು ಆಡಳಿತ ಪಕ್ಷದ ಸಿಂಗಲೀಕ ಕಪಿ ಚೇಷ್ಟೆಯ ಜೊತೆಗೆ ವಿರೋಧ ಪಕ್ಷಗಳ ಜಾಣ ಕಿವುಡು-ಕುರುಡು ನಟನೆಗಳು ಕಾರಣವಾದವು! ಮೊದಲಿಗೆ ಲೋಕಪಾಲ ಮಸೂದೆಯ ಕರಡು ಸಮಿತಿ ಹೋಳಾಯ್ತು, ಆಗಲಾದರೂ ವಿಪಕ್ಷಗಳು ಚಾಟಿ ಬೀಸದೆ ’ನರ್ತನ’ದಲ್ಲಿ ತೊಡಗಿದ್ದವು. ನಂತರ ಸರ್ವಪಕ್ಷ ಸಭೆಯನ್ನು ’ಪಿಳ್ಳೆನೆಪ’ದಿಂದ ಬಹಿಷ್ಕರಿಸಿದ್ದಾಯ್ತು!! ಏಕೆಂದರೆ ಸರಿಯಾದ ಲೋಕಪಾಲ ಜಾರಿಗೆ ಬಂದರೆ ಅವರಿಗೂ ತೊಂದರೆ ಅಲ್ಲವೇ? ಅದಕ್ಕಾಗಿಯೇ ಲೋಕಪಾಲದ ಹೋರಾಟವನ್ನು ಯಶಸ್ವಿಯಾಗಿ ವಿಪಕ್ಷಗಳ ಪರೋಕ್ಷ ಬೆಂಬಲದೊಂದಿಗೆ ಮೂಲೆಗುಂಪುಮಾಡಿದ್ದಾಯ್ತು. ಆದರೂ ಚಲಬಿಡದ ತ್ರಿವಿಕ್ರಮನಂತೆ ಭ್ರಷ್ಟಾಚಾರವನ್ನು ತುಳಿದು ಪಾತಾಳ ಕಾಣಿಸಬೇಕೆಂದು ಹಜಾರೆಯವರು ಹಠತೊಟ್ಟಿದ್ದಾರೆ. ಆದರೆ ಈ ಬಾರಿ ಅವರಿಗೆ ದೊರಕುತ್ತಿರುವ ಬೆಂಬಲ ಅಷ್ಟಕ್ಕಷ್ಟೇ ಎನ್ನಬಹುದು. ಅದಕ್ಕೆ ಪ್ರತಿಯಾಗಿ ಸರ್ಕಾರ ಈಗಿನಿಂದಲೇ ಅದನ್ನಣಿಯಲು ಬಲೆ ಹೆಣೆದು ಸಿದ್ದವಾಗಿರುವ ಮುನ್ಸೂಚನೆ ಎಂಬಂತೆ "ಬಾಬಾರಿಗೆ ಆದ ಗತಿ ಅಣ್ಣಾರವರಿಗೂ ಕಾದಿದೆ" ಎಂಬ ಅಪ್ರಬುದ್ಧ, ನಾಚಿಕೆಗೇಡಿನ ಮಾತು ಹೊರಬಿದ್ದಾಗಿದೆ.
    ಈ ಎಲ್ಲಾ ಬೆಳವಣಿಗೆಗಳಿಂದ "ಲೋಕಪಾಲ ಮಸೂದೆಯಿಂದ ಭ್ರಷ್ಟಾಚಾರ ನಿಯಂತ್ರಣ ಸಾಧ್ಯವಿಲ್ಲವೇ ಇಲ್ಲ" ಎನ್ನುವುದು ಮನವರಿಕೆಯಾಗಿದೆ. ಹಾಗಾಗಿ ಅಣ್ಣಾರವರು ಸೇರಿದಂತೆ ಎಲ್ಲಾ ಭ್ರಷ್ಟಾಚಾರ ವಿರೋಧಿಗಳು ಇಡೀ ಆಂದೋಲನಕ್ಕೆ ಹೊಸ ಸ್ವರೂಪ ಕೊಡುವ ಅಗತ್ಯ ಪ್ರಸ್ತುತದಲ್ಲಿ ಅತ್ಯವಶ್ಯಕ. ಯಾವುದೋ ಒಂದು ಕಾಯ್ದೆ ಗುಣಪಡಿಸಲಾಗದ ಅರ್ಬುದ ರೋಗದಂತಹ ಭ್ರಷ್ಟಾಚಾರವನ್ನು ತಡೆದುಬಿಡುತ್ತದೆ ಎನ್ನುವುದು ಹಾಸ್ಯಸ್ಪದವಾಗಿರುವಾಗ ಕಾಯ್ದೆಯ ಜಾರಿಗೆ ಹೋರಾಟವನ್ನು ಬಿಟ್ಟು ಬದಲೀ ವ್ಯವಸ್ಥೆಗೆ ಹೋರಾಡಬೇಕಾದ ಅಗತ್ಯತೆ ಎದ್ದು ಕಾಣುತ್ತಿದೆ. ಅದನ್ನೇ ಇಲ್ಲಿ ಪ್ರಸ್ತಾಪಿಸಲು ಹೊರಟಿದ್ದೇನೆ.
    ಪ್ರಚಲಿತದಲ್ಲಿ ಭ್ರಷ್ಟಾಚಾರ ಮೂಲ ಅಡಗಿರುವುದು ರಾಜಕಾರಣಿಗಳಲ್ಲೂ ಅಲ್ಲ, ಅಧಿಕಾರಿವರ್ಗದಲ್ಲೂ ಅಲ್ಲ, ಮತ್ಯಾರಲ್ಲೂ ಅಲ್ಲ. ಅದು ಬೆಚ್ಚಗೆ ಹರಿದಾಡುವುದು "ನೋಟು ಚಲಾವಣೆ" ಎಂಬ ಬಲಿಷ್ಠ ವ್ಯವಸ್ಥೆಯಡಿ! ಆ ರೂಪಾಯಿ ನೋಟೇ ಇಲ್ಲದಂತಾದರೆ ಭ್ರಷ್ಟಾಚಾರಕ್ಕೆ ಜಾಗವೆಲ್ಲಿ?!?!?!?!?! ಅಲ್ಲವೇ.
    ಅರೆರೆ!!! ಇದೇನಿದು ಹಣವೇ ಇಲ್ಲದೇ ಬದುಕು ಸಾಧ್ಯವೇ?? ಉಮಾಶಂಕರ ನಿಂಗೆಲ್ಲೋ ತಲೆಕೆಟ್ಟಿರಬೇಕು?!?! ಎಂದು ಯಾರಿಗಾದರೂ ಅನ್ನಿಸುವುದು ಸಹಜವೇ! ನಾನು ಇಲ್ಲಿ ಹಣಕಾಸು ವ್ಯವಹಾರವನ್ನು ನಿಲ್ಲಿಸಿ ಎಂದೇನು ಹೇಳುತ್ತಿಲ್ಲ!! ಬದಲಿಗೆ ನಾಣ್ಯ, ನೋಟುಗಳನ್ನು ಮುದ್ರಿಸುವುದನ್ನು ನಿಲ್ಲಿಸಿ e-Transaction ಅಥವ e-ವ್ಯವಹಾರಿಕತೆಯನ್ನು ಜಾರಿಗೆ ತಂದಾಗ ಭ್ರಷ್ಟಾಚಾರಕ್ಕೆ ಜಾಗವೇ ಇರುವುದಿಲ್ಲ ಅಲ್ಲವೇ? ಬಹುಶಃ Confuse  ಆಗಿರಬೇಕು ಅಲ್ಲವೇ?
    ಭ್ರಷ್ಟಾಚಾರದ ಮೂಲ ಉದ್ದೇಶವೆಂದರೆ ತೆರಿಗೆ ವಂಚಿಸಿ ಹಣ ಶೇಖರಿಸುವುದು. ಅದನ್ನು ಯಾವ ರೂಪದ್ಲ್ಲಿ ಶೇಖರಿಸಲು ಸಾಧ್ಯ? ನೋಟುಗಳ ಮೂಲಕವಷ್ಟೇ ಶೇಖರಿಸಲು ಸಾಧ್ಯ. ಆ ನೋಟುಗಳೇ ಇಲ್ಲದಿದ್ದರೆ??!!! ಏನನನ್ನು ಶೇಖರಿಸಲು ಸಾಧ್ಯ? ಎಲ್ಲಾ ದಿನನಿತ್ಯದ ವ್ಯವಹಾರಗಳಾದ ತರಕಾರಿ ಕೊಳ್ಳುವುದರಿಂದ ಹಿಡಿದು, ಸಿನಿಮಾ ಟಿಕೇಟು ಖರೀದಿ, ಪಾನೀಪೂರಿ ತಿನ್ನುವುದಕ್ಕೆ ಕೊಡುವ ಕಾಸು ಜಮಾವಣೆಯನ್ನು ಸೇರಿದಂತೆ ರಿಯಲ್ ಎಸ್ಟೇಟಿನಂತಹ ದೊಡ್ಡ ವ್ಯವಹಾರಗಳವರೆಗೆ ಬ್ಯಾಂಕ್ ಅಕೌಂಟಿನ ಮೂಲಕ ವ್ಯವಹರಿಸಲು ಅನುಕೂಲವಾಗುವಂತಹ ವ್ಯವಸ್ಥೆಯ ಜಾರಿಗಾಗಿ ಹೋರಾಡಿದರೆ ಮಾತ್ರ ಭ್ರಷ್ಟಾಚಾರವೆಂಬ ಕೊಳಕನ್ನು ತೊಳೆಯಲು ಸಾಧ್ಯವೇ ಹೊರತು ಯಾವುದೋ ಒಂದು ಕಾಯ್ದೆಯಿಂದಲ್ಲ.
    ನಿಮಗೆ ನಗು ಬರಬಹುದು, ಅಥವಾ ಇದು ಹೇಗೆ ಸಾಧ್ಯವೆಂದು ಆಶ್ಚರ್ಯವೂ ಆಗಬಹುದು. ಇಂದು ಭ್ರಷ್ಟಾಚಾರವೆನ್ನು ನಾವು ವಿದೇಶದಲ್ಲಿ ಅಡಗಿರುವ ಕಪ್ಪು ಹಣಕ್ಕಷ್ಟೇ ಸೀಮಿತಗೊಳಿಸಿ, ಪ್ರಸ್ತುತದಲ್ಲಿ ನಮ್ಮ ದೇಶದಲ್ಲಿ ನಡೆಯುವ ಪ್ರತಿಯೊಂದು ಕ್ಷಣಕ್ಕೂ ನಡೆಯುತ್ತಿರುವ ವ್ಯವಹಾರಗಳಿಂದ ಹುಟ್ಟುತ್ತಿರುವ ಕಪ್ಪುಹಣದ ಬಗ್ಗೆ ಯಾರೂ ಯೋಚಿಸುತ್ತಿಲ್ಲ. ನಿಮಗೆ ಆಶ್ಚರ್ಯಕರವಾದ ಉದಾಹರಣೆ ಕೊಡುತ್ತೇನೆ. ರಸ್ತೆಬದಿಯ ಪಾನೀಪೂರಿಯವನನ್ನು ತೆಗೆದುಕೊಳ್ಳಿ. ಮೈಸೂರಿನ ಕೆ.ಡಿ ರಸ್ತೆಯಲ್ಲೊಬ್ಬ ಪಾನೀಪುರಿಯನ್ನು ತುಂಬಾ ಚೆನ್ನಾಗಿ ಮಾಡುತ್ತಾನೆ ಒಂದು ಒಂದು ಪ್ಲೇಟಿಗೆ ಕೇವಲ ೧೦ ರೂ. ದಿನವೊಂದಕ್ಕೆ ಸುಮಾರು ಸಾವಿರ ಪ್ಲೇಟ್ ಮಾರುತ್ತಾನೆ. ಅಂದರೆ ಅವನ ಒಟ್ಟಾರೆ ವ್ಯವಹಾರ ದಿನವೊಂದಕ್ಕೆ ಸುಮಾರು ೧೦೦೦೦ ರೂ. ಅಂದರೆ ತಿಂಗಳಿಗೆ ಸುಮಾರು ೩ ಲಕ್ಷರೂಪಾಯಿಗಳು!!! ಅದಕ್ಕೆ ಅವನೇನು ಸರ್ಕಾರಕ್ಕೆ ತೆರಿಗೆ ಕಟ್ಟುವುದಿಲ್ಲ, ಪೋಲಿಸಿನವನಿಗೆ ಕೊಟ್ಟರೂ ೧೦೦ ಅಥವಾ ಇನ್ನೂರು ರೂ ಕೊಡಬಹುದು. ಇದನ್ನೆಲ್ಲಾ ಅವನು ಹೊಟ್ಟೇಪಾಡಿಗೆ ಮಾಡುತ್ತಿದ್ದರೂ ತೆರಿಗೆ ವಂಚಿಸಿದ ಹಣವಾದ್ದರಿಂದ ಅದು ಕಪ್ಪು ಹಣವೇ ಅಲ್ಲವೇ? ಅಲ್ಲಿಗೆ ಅವನೂ ಭ್ರಷ್ಟನೇ!!! ಹಗಲೂ ರಾತ್ರಿ ಪಾಳಿಯಲ್ಲಿ ಕಣ್ಣಿಗೆ ನಿದ್ದೆಯಿಲ್ಲದೇ ಕಂಡವರ ಮನೆಯ ಗೇಟು ಕಾಯುವ ಒಬ್ಬ ಸಾಮಾನ್ಯ ಸೆಕ್ಯುರಿಟಿ ಗಾರ್ಡ್ ತಿಂಗಳಿಗೆ ಗಳಿಸುವ ೫ - ೬೦೦೦ ರೂ ಪುಡಿಗಾಸಿನ ಸಂಬಳದಲ್ಲಿ TDS ಎಂದು ತೆರಿಗೆ ಮುರಿದುಕೊಂಡು ಅವನನ್ನು ಸಂಕಷ್ಟಕ್ಕೀಡುಮಾಡುವುದಲ್ಲದೆ, ಆ ತೆರಿಗೆ ಹಣವನ್ನು ವಾಪಸ್ಸು ಪಡೆಯಲು ತಿರುಗಿ ಅಲೆದು ಅದರಲ್ಲೂ ಸ್ವಲ್ಪ ಲಂಚಕೊಟ್ಟು ಹೈರಾಣಾಗುತ್ತಾನೆ!! ಆದರೆ ಇದ್ಯಾವುದೇ ಜಂಜಾಟವಿಲ್ಲದೆ "ಪೋಲೀಸ್ನೋರ್ಗು ಕೊಡ್ಬೇಕು ಸ್ವಾಮಿ" ಎನ್ನುತ್ತಾ ತನ್ನ ಗಿರಾಕಿಗಳ ಅನುಕಂಪ ಗಿಟ್ಟಿಸಿ ಗಂಟುಮಾಡಿಕೊಳ್ಳುವ ರಸ್ತೆ ಬದಿ ವ್ಯಾಪಾರಿ ಎಲ್ಲರೂ ನೋಡುತ್ತಿರುವಂತೆ ಭ್ರಷ್ಟನಾಗುತ್ತಾನೆ.  ಇಂತಹ ರಸ್ತೆಬದಿ ವ್ಯಾಪಾರಿಗಳು ಒಂದುಂದು ಊರಿನಲ್ಲೂ ಇದ್ದಾರೆ. ಇನ್ನು ನಗರ ಪ್ರದೇಶಗಳಲ್ಲಿ ಎಷ್ಟಿರಬೇಡ? ಅವರಿಂದ ದೇಶದ ಬೊಕ್ಕಸಕ್ಕಾಗುತ್ತಿರುವ ನಷ್ಟವೆಷ್ಟು?? ನಾನೇನು ಈ ಮಾತನ್ನು ಅವರ ಮೇಲಿನ ದ್ವೇಶದಿಂದಾಗಲಿ, ಹೊಟ್ಟೆಯುರಿಯಿಂದಾಗಲಿ ಹೇಳುತ್ತಿಲ್ಲ. ಭ್ರಷ್ಟತೆಯ ಆಕಾರಗಳಲ್ಲಿ ಇದು ಒಂದೆದು ಹೇಳುತ್ತಿದ್ದೇನೆ. ನಾನು ಈ ರೀತಿ ಯೋಚಿಸಲು ಕಾರಣ ಮತ್ತದೇ "ನೋಟು". ನಿಮಗೆ ತಿಳಿದಿರಲಿ ಒಂದು ಸಾವಿರದ ನೋಟನ್ನು ಮುದ್ರಿಸಲು ಮುನ್ನೂರು ರೂಪಾಯಿಗಳವರೆಗೆ ಖರ್ಚಾಗುತ್ತದೆ, ಅದೇ ರೀತಿ ನೂರರ ನೋಟಿಗೆ ಇನ್ನೂರು ರೂಪಾಯಿಗಳಿಗಿಂತಲೂ ಹೆಚ್ಚಾಗುತ್ತದೆ ಎಂದು ಕೇಳಿದ್ದೇನೆ (ಸರಿಯೋ ತಪ್ಪೋ ಬಲ್ಲವರು ನಿಖವಾಗಿ ಹೇಳಿ). ಆ ನೋಟನ್ನೇ ಮುದ್ರಿಸದಿದ್ದರೆ ಅದರ ಖರ್ಚನ್ನು ಬೇರೆ ಕಾರ್ಯಕ್ಕೆ ಉಪಯೋಗಿಸಬಹುದಲ್ಲವೇ?
    ಇಂದು ವಿಜ್ನಾನ-ತಂತ್ರಜ್ನಾನ ಬಹಳಷ್ಟು ಮುಂದುವರಿದಿರುವುದು ಎಲ್ಲರಿಗೂ ತಿಳಿದ ವಿಷಯವೇ. ಅದೇ ಪಾನಿಪೂರಿ ತಿಂದ ನಂತರ ಅಂಗಡಿಯವನಿಗೆ ಒಂದು ಎಸ್ಸೆಮ್ಮೆಸ್ಸು ಮೂಲಕ ಹಣ ತಲುಪಿಸುವಂತಾಗಬಾರದೇಕೆ? ಅದೇ ರೀತಿ ಆತನೂ ಸಹ ತನ್ನ ಬಳಿ ಕೆಲಸ ಮಾಡುವ ಹುಡಗನಿಗೆ ನೋಟು ಕೊಡುವ ಬದಲು ಅವನದೇ ಮೊಬೈಲ್ ನಿಂದ ಆ ಹುಡುಗನ ಅಕೌಂಟಿಗೆ ಹಣ ವರ್ಗಾಯಿಸುವಂತಾಗಬೇಕು. ಅಷ್ಟೇ ಅಲ್ಲ ತನ್ನ ಹೊಲದಲ್ಲಿ ಕೂಲಿ ಮಾಡುವ ಕೂಲಿಕಾರನಿಗೆ ರೈತ ತನ್ನ ಅಕೌಂಟಿನಿಂದಲೇ ಹಣವನ್ನು ನೇರವಾಗಿ ವರ್ಗಮಾಡುವಂತಾಗಬೇಕು. ’ಅವನು ರೈತ ಅವನಿಗೆ ಅಕೌಂಟು ಚಲಾವಣೆ ತಿಳಿಯಲು ಹೇಗೆ ಸಾಧ್ಯ್?’ ಎಂಬ ಪ್ರಶ್ನೆ ಇಲ್ಲ ಅಸಹಜವೇ ಸರಿ. ಏಕೆಂದರೆ ಓದು ಬರಹ ತಿಳಿಯದ, ಸಾರಿಗೆ ಸಂಪರ್ಕವಿಲ್ಲದ, ಹೆಸರೂ ಗೊತ್ತಿಲ್ಲದ ಹಳ್ಳಿಯೊಂದರಲ್ಲಿ ತನ್ನ ವೃದ್ಧಾಪ್ಯವೇತನಕ್ಕಾಗಿ ಬ್ಯಾಂಕಿನಲ್ಲಿ ಅಕೌಂಟು ತೆರೆದು ಪ್ರತಿ ತಿಂಗಳು ತಪ್ಪದೇ ಹಣ ಡ್ರಾ ಮಾಡುವುದನ್ನು ಕಲಿತಿರುವ ವೃದ್ದೆ/ವೃದ್ಧನಿಗೇ ಗೊತ್ತಾದ ಮೇಲೆ ರೈತನಿಗೆ ತಿಳಿಯುವುದಿಲ್ಲ ಎನ್ನಲು ಸಾಧ್ಯವೇ?
    ಇಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಹಣವಿಲ್ಲದೆ ಭೂ ನೊಂದಣಿಯನ್ನು ಬ್ಯಾಂಕ್ ಅಕೌಂಟ್ ಮೂಲಕವೇ ಹಣ ವರ್ಗಾಯಿಸಿ ನೊಂದಾಯಿಸಿಕೊಳ್ಳುವಂತಾಗಬೇಕು. ಆಗಲೇ ಗಗನದಲ್ಲಿರುವ ಭೂಮಿಯ ಬೆಲೆ ನೆಲಕ್ಕಿಳಿಯುವುದು ಹಾಗೂ ಕಪ್ಪ ಹಣ ರಿಯಲ್ ಎಸ್ಟೇಟ್ ನಲ್ಲಿ ಚಲಾವಣೆಯಾಗುವುದೂ ಸಹ ನಿಲ್ಲುವುದು. ಏಕೆಂದರೆ ಪ್ರಸ್ತುತ ಭೂ ನೊಂದಣೆಯಲ್ಲಿ ವ್ಯಾಪರವಾಗುವ ಮೊತ್ತವೇ ಬೇರೆ ನೊಂದಣಾ ಪತ್ರದಲ್ಲಿ ಕಾಣಿಸುವ ಮೊತ್ತವೇ ಬೇರೆ!! ಹಾಗಾಗಿ ಹೆಚ್ಚಿನ ತೆರಿಗೆ ಸರ್ಕಾರದ ಬೊಕ್ಕಸಕ್ಕೆ ತಲುಪದೆ ಕಪ್ಪು ಹಣವಾಗಿ ಪರಿವರ್ತನೆಗೊಳ್ಳುತ್ತದೆ. ಇದೆಲ್ಲಾ ಸರ್ಕಾರಕ್ಕೆ ತಿಳಿದಿಲ್ಲವೆಂದಲ್ಲ, ಎಷ್ಟೋ ವ್ಯವಹಾರಗಳು ಅಧಿಕಾರಿಗಳ ಕಣ್ಗಾವಲಿನಲ್ಲಿ ’ಬೆಚ್ಚಗೆ’ ನಡೆಯುತ್ತವೆ!!
     ಇಂತಹ ಅದೆಷ್ಟೋ ಅವ್ಯವಹಾರಗಳಿಗೆ ಕಡಿವಾಣ ಹಾಕಿ ಭ್ರಷ್ಟತೆಯನ್ನು ಬಡಿದೋಡಿಸಲು ’ನೋಟಿಲ್ಲದ’ ವ್ಯವಹಾರವೇ ಸೂಕ್ತ. ಅದಕ್ಕಾಗಿ ಕಾಯ್ದೆ ಕರಡು ಕಾನೂನು ಎಂದು ಹೋರಾಡುವುದು ಪ್ರಸ್ತುತಕ್ಕೆ ಬೇಕಿಲ್ಲ. ಹೊಸ ವ್ಯವಸ್ಥೆ ಜಾರಿಗೆ ಹೋರಾಟ ಸೂಕ್ತವೆನಿಸುತ್ತದೆ. ನೀವೇನಂತೀರಿ?

ಮಂಗಳವಾರ, ಜೂನ್ 7, 2011

ಯೋಗಾಸನಕ್ಕೆ ರಾಜಕೀಯಾಸನ ಗೊತ್ತಿಲ್ಲ....!!!

ಎಂತಹ ವಿಪರ್ಯಾಸವಲ್ಲವೇ?
ಮರುಗಟ್ಟಿದ ಮನಸ್ಸಿಗೆ ದಿವ್ಯಚೇತನ ನೀಡುವ ಯೋಗಾಸನ ರಾಜಕೀಯಾಸನದ ಮುಂದೆ ಕೈಕಾಲು ನುಣುಚಿಕೊಂಡು ಬಿಡಿಸಿಕೊಳ್ಳಲಾಗದೆ ಹೇಗೆ ಒದ್ದಾಡುತ್ತಿದೆ ನೋಡಿ. ತಾನು ಕಲಿತ ಯೋಗವಿದ್ಯೆಯನ್ನು ಇತರರಿಗೆ ಹಂಚುತ್ತಾ ಕೋಟ್ಯಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದ ಬಾಬಾ ರಾಮದೇವ್ ಅದೇ ಉಮ್ಮಸ್ಸಿನಲ್ಲಿ ಭ್ರಷ್ಟಾಚಾರದ ವಿರುದ್ಧವೇನೋ ಉಪವಾಸ ಕುಳಿತದ್ದೂ ಆಯಿತು. ಅದು ಯಾರ ವಿರುದ್ಧ?!! ಕಾಂಗ್ರೆಸ್ ಮುಂದಾಳತ್ವದ ಯು.ಪಿ.ಎ ವಿರುದ್ಧ. ಜನಸಾಗರದ ಬೆಂಬಲದ ಪೊರೆಯ ಮುಂದೆ ಅದರ ಹೊರಗಿನ ಸತ್ಯ ಮಸುಕಾಗಿ ಗಿತ್ತೋ ಏನೋ? ಬಾಬಾರವರು ರಾಜಕೀಯ ಚದುರಂಗದಾಟದ ನಡೆಗಳನ್ನು ಊಹಿಸುವುದರಲ್ಲಿ ಎಡವಿರುವುದಕ್ಕೆ ಇತ್ತೀಚಿನ ವಿದ್ಯಮಾನಗಳೇ ಸಾಕ್ಷಿ!!
    ಮೊದಲೇ ಸಿ.ಡಬ್ಲ್ಯು.ಜಿ., ೨ಜಿ., ೩ಜಿ ಇತ್ಯಾದಿ ಹಗರಣಗಳನಡುವೆ ಗಿಜಿಗುಡುತ್ತಾ ಗಬ್ಬೆದ್ದು ಹೋಗಿದ್ದ ಕೇಂದ್ರ ಸರ್ಕಾರದ ಹೆಕ್ಕತ್ತಿನ ಮೇಲೆ ಸತ್ಯಾಗ್ರಹದ ಸುತ್ತಿಗೆಯಿಂದ ಇಕ್ಕಿದ್ದು ಅಣ್ಣ ಹಜಾರೆಯವರು!! ಆರಂಭದಲ್ಲಿ ಇದೂ ಒಂದು ಮಾಮೂಲಿ ಪ್ರತಿಭಟನೆ ಎಂದು ಮೀಸೆ ಮರೆಯಲ್ಲಿ ನಗುತ್ತಾ ಉಡಾಫೆ ತೋರಿದ ದಿಲ್ಲಿ ದಿವಾನರಿಗೆ ಸಾಮಾಜಿಕ ತಾಣಗಳು ಇಟ್ಟ ಬರೆಯಿಂದ ಎಚ್ಚರವಾಯ್ತು!! ಮಿತಿ ಮೀರುತ್ತಿದ್ದ ಭ್ರಷ್ಟಾಚಾರದ ವಿರುದ್ಧ ಲೋಕಪಾಲ ಕಾಯ್ದೆಯ ಬೇಡಿಕೆಗೆ ಅಸ್ತು ಎಂದೇನೋ ಹೇಳಿತು. ಆದರೆ ಅದಕ್ಕೆ ಗೊತ್ತಿತ್ತು! ಜನಗಳು ಕೇಳುತ್ತಿರುವ ಕಾಯ್ದೆ ಜಾರಿಗೆ ತಂದರೆ ’ತಮ್ಮ ಅಂಡಿಗೆ ತಾವೇ ಬರೆಯಿಟ್ಟುಕೊಂಡಂತೆ’ಎನ್ನುವುದು!!
    ನಮ್ಮದೇಶವನ್ನು ಬಹುಕಾಲ ಆಳಿದ ಆಳುತ್ತಿರುವ ಕಾಂಗ್ರೆಸ್ ಬಹುತೇಕ ಬ್ರಿಟೀಷರ ನೀತಿಗಳನ್ನೇ ನೆಹರೂರವರ ಕಾಲದಿಂದಲೂ ಚಾಚೂ ತಪ್ಪದೆ ಅಳವಡಿಸಿಕೊಂಡು ನಮ್ಮನ್ನಾಳುತ್ತಿದೆ ಮತ್ತು ಹಾಳುಮಾಡುತ್ತಲೂ ಇದೆ. ಅಂದು ಪ್ರಧಾನ ಮಂತ್ರಿಯ ಕುರ್ಚಿಗಾಗಿ ದೇಶವನ್ನೇ ಒಡೆದದ್ದಾಯ್ತು! ನಂತರ ನೋಬೆಲ್ ಪ್ರಶಸ್ತಿಯ ದುರಾಸೆಗೊಳಗಾಗಿ ಕಾಶ್ಮೀರ ಬಲಿಕೊಟ್ಟಿದ್ದಾಯ್ತು!! ಅಕ್ಕಪಕ್ಕದ ನೆರೆಗಳನ್ನು ಅದ್ಧುಬಸ್ತಿನಲ್ಲಿಡುವಾಗ ಶ್ರೀಮಾನ್ ಲಾಲ ಬಹದ್ದೂರ್ ಶಾಸ್ತ್ರಿಯವರ ಪ್ರಾಣ ತೆಗಿದಿದ್ದೂ ಆಯ್ತು!!!. ತನ್ನ ಹೆಣ್ತನವನ್ನು ಬದಿಗೊತ್ತಿ ಅಧಿಕಾರಲಾಲಸೆಗಾಗೆ ಏನೆಲ್ಲಾ ಮಾಡಬಹುದು!! ಎಂದು ತನ್ನ ಮಕ್ಕಳಿಗೆ ಕಲಿಸಿದ್ದೂ ಆಯ್ತು!! ಹಗರಣಗಳನ್ನು ಹೆಗೆಲ್ಲಾ ಮುಚ್ಚಿಹಾಕಬಹುದು! ಅವುಗಳಿಗೆ ಕಾರಣರಾದವರನ್ನು ಹೇಗೆಲ್ಲಾ ಪಾರುಮಾಡಿ ಅವರವರ ದೇಶಕ್ಕೆ ಬೀಳ್ಕೊಡಬಹುದು!! ಎಂದು ಸಾಯುವ ಮುನ್ನವೇ ಹೇಳಿಕೊಟ್ಟಿದ್ದು ಇದೇ ಕಾಂಗ್ರೆಸ್ಸಿನ ಮಹಾನ್ ಪ್ರಭೃತಿಗಳು!!!!! ಜಾತಿಯ ಹೆಸರೇಳಿ ಹೇಗೆ ಒಂದು ಜ್ಯಾತ್ಯಾತೀತ ರಾಷ್ಟ್ರದಲ್ಲಿ ಪ್ರತಿ ಮನೆ ಮನಗಳನ್ನು ಮೀಸಲಾತಿಯ ಮೂಲಕ ಒಡೆದು ಹಾಳುಮಾಡಬಹುದೆಂದು ಅಂಧಕಾಲತ್ತಿಲ್ ನಿಂದಲೂ ಎಲ್ಲರಿಗೂ ತೋರಿಸಿಕೊಟ್ಟಿದ್ದು ಇದೇ ಕಾಂಗ್ರೆಸ್ ಪಕ್ಷ!!!!! ಇಂತಹ ಹಿನ್ನೆಲೆಯುಳ್ಳ ಪಕ್ಷದ ವಿರುದ್ಧ ಪ್ರತಿಭಟಿಸಿದರೆ ಯಾರಾದರೂ ಉಳಿಯುವುದುಂಟೇ?? ಇಲ್ಲ ಎನ್ನುವುದು ಬಾಬಾ ರಾಮದೇವ ಪ್ರಕರಣದಿಂದ ಸಾಭೀತಾಗಿದೆ!!
    ತನ್ನುಳಿವಿಗಾಗಿ ಯಾವ ವಾಮಮಾರ್ಗಕ್ಕಾದರೂ ಸಿದ್ಧವಾಗಿರುವ, ಯಾರ ಚಾರಿತ್ರ್ಯವಧೆಗಾದರೂ ಸರಿ, ಎಂತಹ ಅಸಹ್ಯಕರ ರೀತಿಯಲ್ಲಾದರೂ ಸರಿ ಹತ್ತಿಕ್ಕಿ ತೀರಲು ಭಾರತೀಯರನ್ನು ಹೇಗೆಲ್ಲಾ ಸುಲಭವಾಗಿ ದಾರಿ ತಪ್ಪಿಸಿ ಮೂರ್ಖರನ್ನಾಗಿಸಬಹುದೆಂದು ಇಡೀ ಜಗತ್ತಿಗೆ ಮತ್ತೊಮ್ಮೆ ತೋರಿಸಿಕೊಟ್ಟಿದ್ದು ಇದೇ ಕಾಂಗ್ರೆಸ್!! ಇದ್ಯಾವುದನ್ನೂ ಅವಲೋಕಿಸದೆ, ಅವಲೋಕಿಸಿದ್ದರೂ ನಿರ್ಲಕ್ಷಿಸಿದ್ದು ಬಾಬಾರವರು ಮಾಡಿದ ಮೊದಲ ತಪ್ಪು. ಅದಕ್ಕೆ ಹೇಳೋದು ’ಯೋಗಾಸನಕ್ಕೆ ರಾಜಕೀಯಾಸನ ಗೊತ್ತಿಲ್ಲ....!!!’ ಅಂತ
    ಅಣ್ಣಾರವರ ಉಪವಾಸದಿಂದ ಎಚ್ಚೆತ್ತುಕೊಂಡ ಸರ್ಕಾರ ಅವರಿಗೆ ಮಾತುನೀಡಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿತ್ತು!! ನಂತರ ಶುರುವಾಯ್ತು ನೋಡಿ ಕಪಿ(ಲ್)ಚೇಷ್ಠೆ!!! ಸಿ(ಮ)೦ಗನಾಟ!!!ಕಾಯ್ದೆಯಿಂದ ಏನೇನೂ ಪ್ರಯೋಜನವಿಲ್ಲ! ಭ್ರಷ್ಟಾಚಾರ ನಿಯಂತ್ರಣ ಸಾಧ್ಯವೇ ಇಲ್ಲ!! ಎಂದು ಹೇಳುವ ಮೂಲಕ ಇದುವರೆಗೆ ಜಾರಿಗೆ ಬಂದ ಹಲ್ಲಿಲ್ಲದ ಹತ್ತು ಕಾಯ್ದೆಯೊಳಗೆ ಹನ್ನೊಂದನೆಯದನ್ನು ತಂದು ’ಕೈ’ತೊಳೆದುಕೊಳ್ಳುವ ತನ್ನುದ್ದೇಶವನ್ನು ಜಗಜ್ಜಾಹೀರುಗೊಳಿಸಿತು!! ಹಾಗೆ ಮಾಡುವ ಸಲುವಾಗಿಯೇ ಲೋಕಪಾಲ ಸಮಿತಿಯಲ್ಲಿ ಒಡಕು ಮೂಡಿಸಲು ಪ್ರಯತ್ನಿಸಿದ್ದು! ಸಮಿತಿಯಸದಸ್ಯರೇ ಭ್ರಷ್ಟರು!! ಎನ್ನುವ ಹಣೆಪಟ್ಟಿ ಅಂಟಿಸಿದ್ದು!! ಇದುವರೆಗೆ ನಡೆದ ಲೋಕಪಾಲ ಸಭೆಗಳ ನಿರ್ಣಯಗಳನ್ನು ಜನತೆಗೆ ತಿಳಿಸದೆ ಮುಚ್ಚಿಟ್ಟಿರುವುದು! ಆದರೆ ಬಾಬಾರವರ ಘಟನೆಯಿಂದ ಎಚ್ಚೆತ್ತ ಹಜಾರೆಯವರು ಪಟ್ಟು ಬಿಗಿಹಿಡಿದಿರುವುದು ಸಾಮಾನ್ಯರಲ್ಲಿ ಸ್ವಲ್ಪ ಆಶಾಭಾವನೆಯನ್ನು ಚಿಗುರಿಸಿರುವುದು ಸುಳ್ಳಲ್ಲ. ’ಜೂನ್ ೩೦ ರೊಳಗೆ ಕರಡು ಸಿದ್ಧವಾಗಲೇಬೇಕು, ಕರಡು ಸಮಿತಿಯ ಸಭೆಗಳನ್ನು ದೂರದರ್ಶನದ ಮೂಲಕ ನೇರಪ್ರಸಾರ ಮಾಡಬೇಕು’ಎಂದು ಗುಡುಗುವ ಮೂಲಕ ತಾವು ರಾಮದೇವ್ ಬಾಬಾ ರಂತೆ ಮುಗ್ಗರಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಸರ್ಕಾರಕ್ಕೆ ರವಾನಿಸಿದ್ದಾರಲ್ಲದೆ ನಾಳೆ ನಡೆಯಬೇಕಿದ್ದ ಕರಡು ಸಮಿತಿಯ ಸಭೆಯನ್ನು ಬಹಿಷ್ಕರಿಸುವ ಮೂಲಕ ಸರ್ಕಾರಕ್ಕೆ ಮುಜುಗರವುಂಟು ಮಾಡಿದ್ದಾರೆ.
    ಆದರೆ ಈ ನಾಚಿಗೆಗೆಟ್ಟ ಸರ್ಕಾರ "ಮುಂದೊಮ್ಮೆ ಕಪ್ಪು ಹಣ ವಾಪಸ್ಸು ತನ್ನಿ ಎನ್ನುವವರು ದೇಶದ್ರೋಹಿಗಳು" ಎಂಬ ಕೆಟ್ಟ ಕಾನೂನನ್ನು ತರಲು ಹೇಸುವುದಿಲ್ಲವೇನೋ!!! ಎನ್ನಿಸುತ್ತಿದೆ.  ಎಲ್ಲಾ ಕಾಂಗ್ರೆಸ್ ಮಹಾತ್ಮೆ!!! ಅದಕ್ಕೆ ಸಾಕ್ಷಿ ಎಂಬಂತೆ ಕಾಂಗ್ರೆಸ್ ಮುಖಂಡ ದ್ವಿವೇದಿ ಯವರ ಪತ್ರಿಕಾಗೋಷ್ಠಿಯಲ್ಲಿ ನಡೆದ ಚಪ್ಪಲಿ ’ಶೋ’ ಕೂಡಾ ಕಾಂಗ್ರೆಸ್ಸ್ ನಿರ್ದೇಶಿತ ನಾಟಕವೇ!! ಎನ್ನುವುದು ಆ ದೃಶ್ಯಾವಳಿ ನೋಡಿದ ಯಾವ ಮುಠ್ಠಾಳನಿಗೂ ತಿಳಿದುಬಿಡಿತ್ತದೆ. ದ್ವಿವೇದಿ ಬಳಿ ಆತ ಶೂ ಹಿಡಿದು ನಿಂತಾಗ ಆತನ ಅಕ್ಕಪಕ್ಕದಲ್ಲಿ ಯಾರೂ ಇರಲಿಲ್ಲ!!! ಬೇರೆಯವರು ಬಂದು ಹಿಡಿದು ತಳ್ಳುವವರೆಗೂ ಆತ ಶೂ ತೋರಿಸಿತ್ತಾ ಸುಮ್ಮನೆ ನಿಂತಿದ್ದನೇ ಹೊರತು ಹೊಡೆಯುವ ಯತ್ನವನ್ನೂ ಮಾಡಲಿಲ್ಲ!!! ಅವರು ಹೇಳುವಂತೆ ಆತ ನಿಜವಾಗಿಯೂ ಆರ್.ಎಸ್.ಎಸ್.ನ ಕಾರ್ಯಕರ್ತನಾಗಿದ್ದಲ್ಲಿ ಆತನಿಗೆ ಅವರನ್ನು ಒಡೆಯುವ ಉದ್ದೇಶವಾಗಲಿ ಇದ್ದಲ್ಲಿ ಒಡೆದು ತಪ್ಪಿಸಿಕೊಳ್ಳಲು ಪ್ರಯ್ತಿಸುತ್ತಿದ್ದನೇ ಹೊರತು ಸುಖಾಸುಮ್ಮನೆ ಸಿಕ್ಕಿಹಾಕಿಕೊಳ್ಳುತ್ತಿರಲಿಲ್ಲ. ಇದೆಲ್ಲವನ್ನು ನೋಡಿದರೆ ಭ್ರಷ್ಟರನ್ನು ಆದಷ್ಟು ರಕ್ಷಿಸಲು ಹೇಗೆಲ್ಲಾ ಸಾಧ್ಯವೋ ಹಾಗೆಲ್ಲಾವೂ ಸರ್ಕಾರ ಪ್ರಯತ್ನಿಸುತ್ತಿರುವುದು ಸ್ಪಷ್ಟ.
    ಇಂತಹ ಸ್ಥಿಯಲ್ಲಿ ಬಾಬಾ ರಾಮದೇವ ರವರು ಇನ್ನಾದರೂ ಎಚ್ಚರಿಕೆಯ ಹೆಜ್ಜೆಯನ್ನಿಡಬೇಕಾಗಿದೆ. ಏಕೆಂದರೆ ಅವರು ಕೈ ಹಾಕಿರುವ ಚಳುವಳಿ ಒಳ್ಳೆಯ ಉದ್ದೇಶದ್ದು. ಬಾಬರವನ್ನು ಕೆಣಕಿ ಅವರಿಂದ ಪ್ರತಿಕ್ರಿಯೆಗಳನ್ನು ಹೊರತೆಗೆದು ಆಟ ಆಡಿಸುತ್ತಾ ಸಮಯ ವ್ಯರ್ಥಮಾಡುತ್ತಾ ಕುಳಿತಿದೆ. ಆದ್ದರಿಂದ ಬಾಬಾ ರವರು ಉಪವಾಸ ಸತ್ಯಾಗ್ರಹದ ಜೊತೆಗೆ ಮೌನವ್ರತವನ್ನೂ ಆಚರಿಸಿದರೆ ಸರ್ಕಾರಕ್ಕೆ ಬಿಸಿಮುಟ್ಟೀತು!! ಏಕೆಂದರೆ ರಾಮದೇವ್ ಬಾಬಾರಿಗೆ ಯೋಗ ಸಿದ್ದಿಸಿದಷ್ಟು ರಾಜಕೀಯದ ಪರಿಚಯವಿಲ್ಲ!! ಅದಕ್ಕೆ ಕಪಿ(ಲ್) ಸಿಂಗ್(ಲೀಕ)ಗಳು ಮೆಲೆರೆಗಿ ಗಾಯಗೊಳಿಸುತ್ತಿರುವುದು. ಇದು ಹೀಗೆ ಮುಂದುವರಿದಲ್ಲಿ ಚಳುವಳಿ ದಾರಿತಪ್ಪುವ ಸಾಧ್ಯತೆಯೇ ಹೆಚ್ಚಲ್ಲವೇ?

ಸೋಮವಾರ, ಜೂನ್ 6, 2011

ಬಾ! ಬಾ! ಬ್ಲಾಕ್ ಮನಿ............

ನಗುವುದೋ ಅಳುವುದೋ
ನೀವೇ ಹೇಳಿ....
ಎನ್ನುವ ಅಣ್ಣಾವ್ರ ಸಂಪತ್ತಿಗೆ ಸವಾಲ್ ಗೀತೆ ನಿನ್ನೆಯಿಂದ ಬೇಡ ಬೇಡವೆಂದರೂ ನಾಲಿಗೆಯ ತುದಿಯಲ್ಲಿ ಗುನುಗುವಂತಾಗುತ್ತಿದೆ. ಭಾನುವಾರ ನಸುಕಿನಲ್ಲಿ ನಡೆದ ಯು ಪಿ ಎ ಸರ್ಕಾರ ಮತ್ತು ಬಾಬಾ ರಾಮದೇವ್ ರವರ ನಡುವಿನ ಜಟಾಪಟಿ. ಬಾಬಾರ ನಿರಶನವನ್ನು ಪ್ರಹಸನವನ್ನಾಗಿ ಪರಿವರ್ತಿಸಿ ಯು.ಪಿ.ಎ ಯ ಕಪಿಗಳು ಸಿಂಗಲೀಕಗಳು ಅಲ್ಲಲ್ಲ ಕಪಿಲ್(ಸಿಬಲ್) ಮತ್ತು ಸಿಂಗ್(ದಿಗ್ವಿಜಯ್) ಗಳು ರಾತ್ರೋರಾತ್ರಿ ’ಹೊಸ ಹೀರೋ’ ಒಬ್ಬನನ್ನು ಪ್ರಪಂಚಕ್ಕೆ ನೀಡಿದ (ಕು)ಖ್ಯಾತಿಗೆ ಒಳಗಾಗಿದ್ದಾರೆ. ಇಬರಿಬ್ಬರ ಜಟಾಪಟಿಗೆ ಕಾರಣ ಬ್ಲಾಕ್ ಮನಿ ಅರ್ಥಾತ್ ಕಪ್ಪು ಹಣ. ವಿದೇಶಗಳಲ್ಲಿನ ಕಪ್ಪು ಹಣ ವನ್ನು ವಾಪಸ್ ತರಬೇಕೆಂದು ಬಾಬಾ ನಿರಶನಗೊಂಡರೆ, ಹಜಾರೆಯವರಿಂದ ಹೈರಾಣಾಗಿದ್ದ ಕೇಂದ್ರ ಸರ್ಕಾರ ಬಾಬಾರವರೇ ಕಪ್ಪು ಹಣದ ಸರದಾರನೆನ್ನುವಂತೆ ಬಿಂಬಿಸುತ್ತಿದೆ.
    ಅಸಲಿಗೆ ಇದೆಲ್ಲಾ ಶುರುವಾಗಿದ್ದು ಬಾಬಾ ರಾಮದೇವ್ ಕಪ್ಪು ಹಣವಾಪಸ್ ತರಬೇಕೆಂದು ಜೂನ್ ನಾಲ್ಕರಂದು ಉಪವಾಸ್ ನಿರಶನ ಆರಂಭಿಸುತ್ತೇನೆ ಎಂಬ ಘೋಷಣೆಯೊಂದಿಗೆ. ಅಣ್ಣಾ ಹಜಾರೆಯವರ ಉಪವಾಸದಿಂದ ಸೊರಗಿ ಸುಸ್ತಾಗಿದ್ದ ಕೇಂದ್ರ ಸರ್ಕಾರಕ್ಕೆ ರಾಮದೇವರ ನಿರ್ಧಾರದಿಂದ ವಿಧಿಯಿಲ್ಲದೆ ’ರಾಮನಾಮ’ ಇದೇ ಪ್ರಥಮ ಬಾರಿಗೆ ಜಪಿಸುವಂತಾಯ್ತು. ವಿಚಲಿತಗೊಂಡ ಸೋನಿಯಾ ರಾಮದೇವರ ಹಿಂದೆ ಕಪಿ(ಲ್) ಸೈನ್ಯವನ್ನು ಛೂ!! ಬಿಟ್ಟಿತು. ಐದು ದಿನ ಬಾಬಾರ ಯೋಗಾಸನದ ಮುಂದೆ ಮಂತ್ರಿಗಳ ’ದೀರ್ಘದಂಡಾಸನ’ವೆಲ್ಲಾ ದಂಡವಾಗಿ ಫಲವೇನೂ ಸಿಗಲಿಲ್ಲ. ’ಕುಳಿತು ಹಾಳಾಗಿ ಹೋಗಲಿ’ ಎಂದು ಸುಮ್ಮನಾಯ್ತು. ನಿರಶನವೂ ಪ್ರಾರಂಭವಾಯ್ತು. ಅದಕ್ಕೆ ಹರಿದು ಬರುತ್ತಿದ್ದ ಜನಸಾಗರ ನೋಡಿ ಕೇಂದ್ರಕ್ಕೆ ಮತ್ತಷ್ಟು ದಿಗಿಲಾಯ್ತು. ಸಂಧಾನದ ಗೊಂದಲಗಳು ಪ್ರಾರಂಭವಾಗಿ ಎಲ್ಲವೂ ಸಂಜೆಯ ವೇಳೆಗೆ ’ಸುಖಾಂತ್ಯ’ ಎನ್ನುವಷ್ಟರಲ್ಲಿ ಎಂಟ್ರಿಕೊಟ್ಟರು ನೋಡಿ ’ಸಾಧ್ವಿ ರಿತುಂಬರಾದೇವಿ’!!!! ದಿಗ್ವಿಜಯ್ ದಿಕ್ಕೆಂಟ್ಟಂತೆ ಮಾತನಾಡಲು ಶುರುಮಾಡಿದ್ದೇ ಆವಾಗ!!!!
    ’ರಾಮದೇವ್ ಮೋಸಗಾರ!! ಜನರ ದಿಕ್ಕು ತಪ್ಪಿಸುತ್ತಿದ್ದಾರೆ! ಅವರೇ ಕಪ್ಪುಹಣದ ಸರದಾರರು!! ಅವರಿಗೆ ನಿರಶನ ಕೂರುವ ನೈತಿಕತೆ ಇಲ್ಲ!! ...ಇತ್ಯಾದಿ..ಇತ್ಯಾದಿ.... ಆದರೆ ಕೇಂದ್ರ ಮತ್ತಷ್ಟು ತಲೆಕೆಡಿಸಿಕೊಂಡಿದ್ದು ’ಆರ್. ಎಸ್ ಎಸ್’ನ ಮುಖಂಡರು ವೇದಿಕೆ ಹಂಚಿಕೊಂಡಾಗ!!! ತಡೆದುಕೊಳ್ಳದ ಸರ್ಕಾರ ಮಧ್ಯರಾತ್ರಿ ಮಹಿಳೆಯರು, ಮಕ್ಕಳು ಒಳಗೊಂಡು ಸತ್ಯಾಗ್ರಹಿಗಳು ಸವಿನಿದ್ದೆಯಲ್ಲಿದ್ದಾಗ ಪೊಲೀಸರು ಲಾಠಿ ಚಾರ್ಜ್ ಮಾಡಿ, ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದರು. ಕಪ್ಪು ಹಣ ವಾಪಸ್ ತರಬೇಕು, ಕಳ್ಳ ದಾರಿಯಲ್ಲಿ ಹಣ ಮಾಡಿರುವ ಜನರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು, ಈ ಕುರಿತ ಪ್ರಕರಣಗಳ ವಿಚಾರಣೆಗೆ `ಫಾಸ್ಟ್ ಟ್ರ್ಯಾಕ್~ ಕೋರ್ಟ್‌ಗಳನ್ನು ಸ್ಥಾಪಿಸಬೇಕು ಎಂದು ಶನಿವಾರ ಬೆಳಗಿನ ಜಾವದಿಂದ ಆಮರಣ ಉಪವಾಸ ಕೈಗೊಂಡಿದ್ದ ಬಾಬಾ ಮತ್ತು ಅವರ ಶಿಷ್ಯರನ್ನು ರಾಮಲೀಲಾ ಮೈದಾನದಿಂದ ಖಾಲಿ ಮಾಡಿಸಲು ಪೊಲೀಸರು ಸರ್ಕಾರದ ನಿರ್ದೇಶನದಂತೆ ಈ ಕ್ರಮ ಕೈಗೊಂಡರು. ಭಾನುವಾರ ಬೆಳಗಿನ ಜಾವ ಸತ್ಯಾಗ್ರಹಿಗಳ ಪಾಲಿಗೆ ಕರಾಳ ರಾತ್ರಿಯಾಯಿತು. ಇದೆಲ್ಲವನ್ನೂ ಪ್ರಪಂಚದಾದ್ಯಂತ ಜನರು ನೋಡಿದ್ದಾರೆ ಮತ್ತು ನೋಡುತ್ತಿದ್ದಾರೆ. ಇಡೀ ಪ್ರಕರಣವನ್ನು ಒಟ್ಟಾರೆಯಾಗೆ ನೋಡಿದಾಗ ಬಾಬಾರಿಗಿಂತ ಸರ್ಕಾರದ ನಡೆಯ ಮೇಲೆ ಹೆಚ್ಚು ಸಂಶಯವಾಗುವುದು ಹತ್ತು ಹಲವು ಉತ್ತರಸಿಗದ ಪ್ರಶ್ನೆಗಳು ಕಾಡುವುದೂ ಸ್ಪಷ್ಟ..
    ಮೊದಲಿಗೆ ’ಬಾಬಾರವರಿಗೆ ಒಂದು ದಿನಕ್ಕೆ ಯೋಗ ಶಿಬಿರಕ್ಕೆ ಮಾತ್ರ ಅನುಮತಿಸಲಾಗಿತ್ತು’ ಎಂದು ಸರ್ಕಾರ ಹೇಳುವುದು ನಿಜವಾಗಿದ್ದಲ್ಲಿ ಬಾಬಾರವರ ಹಿಂದೆ ಐದು ದಿನಗಳಿಂದ ಅಲೆದದ್ದೇಕೆ? ಅವರೊಡನೆ ಸತ್ಯಾಗ್ರಹ ಕೈಬಿಡಲು ದಂಬಾಲು ಬಿದ್ದದ್ದೇಕೆ? ಹಾಗೆ ಯೋಗ ಶಿಬಿರಕ್ಕೆ ಮಾತ್ರ ಅನುಮತಿಸಿದ್ದಲ್ಲಿ ಅದರ ಪ್ರತಿಯನ್ನೇಕೆ ಮಾಧ್ಯಮಗಳ ಮೂಲಕ ಜನರಮುಂದೆ ಇಡಲಿಲ್ಲ? ಅಕಸ್ಮಾತ್ ಹಾಗೆ ಅನುಮತಿ ನೀಡಿದ್ದಲ್ಲಿ ಹಗಲುಹೊತ್ತೇಕೆ ರಾಮಲೀಲಾ ಮೈದಾನವನ್ನು ತೆರವುಗೊಳಿಸಲಿಲ್ಲ? ನಟ್ಟನಡುರಾತ್ರಿ ನಿದ್ರಿಸುತ್ತಿರುವವರ ಮೇಲೆ ಕೈಮಾಡಿದ್ದು ತಪ್ಪಲ್ಲವೇ?
    ಎರಡನೆಯದು ’ಬಾಬಾರವರ ಸಮಾರಂಬಕ್ಕೆ ಹಣ ಹೇಗೆ ಬಂತು? ಅದು ಕಪ್ಪು ಹಣವಲ್ಲವೇ?’ ಎನ್ನುವುದು ಸರ್ಕಾರದ ವಾದ. ಇದು ಅತಿ ಮುಖ್ಯವಾದ ಪ್ರಶ್ನೆ ಇದು ನಿಜವೆನಿಸಿದಲ್ಲಿ ಅದರ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ಸಾರ್ವಜನಿಕರ ಮುಂದೆ ದಾಖಲೆ ಸಮೇತ ಇಡುವುದು ಬಿಟ್ಟು ಮಾಧ್ಯಮದ ಮುಂದೆ ಒಣ ಹೇಳಿಕೆಗಳನ್ನು ನೀಡುವುದೇಕೆ? ಕೇಂದ್ರ ಸರ್ಕಾರದ ಬಳಿ ಸಧ್ಯ ದಾಖಲೆಗಳಿಲ್ಲ ಎನ್ನುವುದಾದರೆ ಸುಮ್ಮನೆ ಅದರ ಬಗ್ಗೆ ಮಾತನಾಡುವುದೇಕೆ? ಅಥವಾ ಕೇಂದ್ರದ ಗುಪ್ತಚರ ಇಲಾಖೆಯೇನು ಕಡ್ಲೇಪುರಿ ತಿನ್ನುತ್ತಿದೆಯೇ?
    ಈ ರೀತಿಯ ಕೇಂದ್ರದ (ದುರ್)ವರ್ತೆನೆಗೆ ವಿದೇಶಗಳಲ್ಲಿ ಅತಿ ಹೆಚ್ಚು ಕಪ್ಪು ಹಣ ಇಟ್ಟಿರುವವರ ಪಟ್ಟಿಯಲ್ಲಿ ಯು.ಪಿ.ಎ ಸರ್ಕಾರದವರದ್ದು ಸಿಂಹಪಾಲು!! ಅವರನ್ನು ರಕ್ಷಿಸುವ ಗುರುತರ ಹೊಣೆ ಅವರದ್ದೇ ಆಗಿದೆ. ವಿಪರ್ಯಾಸವೆಂದರೆ ಹಗರಣಗಳಲ್ಲಿ ಮುಳುಗೇಳುತ್ತಿರುವ ಕೇಂದ್ರ ಸರ್ಕಾರವನ್ನು ಯೋಗ ಕಲಿಸುವ ಗುರು, ಔಷಧಿ ಮಾರುವ ವ್ಯಾಪಾರಿಯೊಬ್ಬರು ಹೆದರಿಸುವಂತಾಗಿದೆ.
    ಹಾಗೆಂದ ಮಾತ್ರಕ್ಕೆ ಬಾಬಾರವರನ್ನು ಸಾಚ ವ್ಯಕ್ತಿ ಎಂದೇನು ಸಮರ್ಥಿಸಿಕೊಳ್ಳುತ್ತಿಲ್ಲ. ಅವರ ಮೇಲೂ ಸಾಕಷ್ಟು ಗುರುತರ ಆಪಾದನೆಗಳಿವೆ. ಅದರಲ್ಲೂ ದೃಶ್ಯಮಾಧ್ಯಮಗಳಲ್ಲಿ ಕ್ಷಣ ಕ್ಷಣಕ್ಕೂ ಚಿತ್ರ ವಿಚಿತ್ರ ಬಣ್ಣದ ಸುದ್ದಿಯಾಗುತ್ತಿದ್ದಾರೆ. ಅವುಗಳಲ್ಲಿ ಕೆಲ ಪ್ರಶ್ನೆಗಳು ಸಹಜವೆನಿಸುತ್ತವೆ. ಭ್ರಷ್ಟಾಚಾರ ವಿರೋಧಿಸುವುದು ಈಗೀಗ ಒಂದು ಫ್ಯಾಷನ್. ಭ್ರಷ್ಟಾಚಾರ ವಿರೋಧಿ ಹೋರಾಟಗಳನ್ನು ಬೆಂಬಲಿಸುವವರ ಪೈಕಿ ಸಾಕಷ್ಟು ಮಂದಿಗೆ ತಮ್ಮ ಕಳಂಕಗಳನ್ನು ತೊಳೆದುಕೊಳ್ಳುವ ಆತುರ. ಅಣ್ಣಾ ಹಜಾರೆ ಹೋರಾಟಕ್ಕೆ ವ್ಯಕ್ತವಾದ ಸಾರ್ವತ್ರಿಕ ಬೆಂಬಲವನ್ನು ಗಮನಿಸಿದ ಮೇಲೆ ಇಂಥದ್ದೇ ಬೆಂಬಲದ ನಿರೀಕ್ಷೆಯಲ್ಲಿ ರಾಮದೇವ ಉಪವಾಸಕ್ಕೆ ಕೂರುತ್ತಿದ್ದಾರೆ. ಅಲ್ಲದೆ ಸರ್ಕಾರದ ಹೇಳಿಕೆಗಳು ಸಧ್ಯದ ಪರಿಸ್ಥಿತಿಯಿಂದ ಬಚಾವಾಗಲು ನೀಡುತ್ತಿರುವ ದಾರಿ ತಪ್ಪಿಸುವ ಹೇಳಿಕೆಗಳೆಂಬುದು ಸ್ಪಷ್ಟ. ಅದೇನೇ ಆಗಲಿ ಅವರು ತಪ್ಪು ಮಾಡಿದ್ದೇ ಆದಲ್ಲಿ ಅವರಿಗೂ ಶಿಕ್ಷೆಯಾಗಲೇ ಬೇಕು ಅವರೇನು ದೇವಲೋಕದಿಂದ ಇಳಿದು ಬಂದವರೇನಲ್ಲ. ಈ ನೆಲದ ಕಾನೂನುಗೆ ಯಾರೂ ಅತೀತರಲ್ಲ. ಸಂಸ್ಕೃತಿಯನ್ನೇ ಬಂಡವಾಳವಾಗಿಸಿಕೊಂಡು ಜನರನ್ನು ದಾರಿತಪ್ಪಿಸುವ ಇತರ ಸ್ವಾಮಿಜಿಗಳೂ ಸಹ ಈ ಸಮಾಜದಲ್ಲಿದ್ದಾರೆ ಅವರುಗಳ ವಿರುದ್ಧವೂ ಸಹ ತನಿಕೆಯಾಗಬೇಕು. ಏಕೆಂದರೆ ವಿದೇಶದಲ್ಲಿ ಕಪ್ಪು ಹಣವನ್ನಿಡಲು ಮಠಮಾನ್ಯಗಳ ’ಕೊಡುಗೆ’ ಅಪಾರ. ಆದ್ದರಿಂದ ಲೋಕಪಾಲ ಕಾಯ್ದೆಯಡಿಯಲ್ಲಿ ಅವರನ್ನೂ ತರುವ ಪ್ರಾಮಾಣಿಕ ಪ್ರಯತ್ನವಾದಾಗಲೇ ಭ್ರಷ್ಟಾಚಾರವೆನ್ನುವುದು ಭಾರತದಿಂದ ಬುಡಸಮೇತ ತೊಲಗಲು ಸಾಧ್ಯ.

ಸೋಮವಾರ, ಮೇ 9, 2011

ಮೋಹಿನಿ ಭಸ್ಮಾಸುರ ಮತ್ತು ಲಾಡೆನ್

ನಮ್ಮ ಪುರಾಣದ ಆ ಮೋಹಿನಿ ಭಸ್ಮಾಸುರನಿಗೂ ಮೊನ್ನೆ ನಿಗುರಿದ ಒಸಾಮಾ ಬಿನ್ ಲಾಡೆನ್ ಗೂ ಎಷ್ಟು ಸಾಮ್ಯತೆ ಇದೆ ಅಲ್ಲವೇ? ಪರಮ ಮಾನವತಾ ದ್ವೇಷಿ ಒಸಾಮನ ಕಥೆ ಮೋಹಿನಿ ಭಸ್ಮಾಸುರನ ಕಥೆಗಳ ನಡುವೆ ಲವಲೇಶವೂ ವ್ಯತ್ಯಾಸವಿಲ್ಲ
ಅಂದು ಆ ಭಸ್ಮಾಸುರ ಶಿವನಿಂದ ತಾನು ಯಾರ ತಲೆಯನ್ನು ಮುಟ್ಟಿದರೆ ಅವರು ಭಸ್ಮವಾಗುವಂತಹ ವರಪಡೆದು ಅದನ್ನು ಅವನಮೇಲೆಯೇ ಪ್ರಯೋಗಿಸಲು ಮುಂದಾದಾಗ ವಿಷ್ಣುವು ಮೋಹಿನಿಯಾಗಿ ಬಂದು ನರ್ತಿಸಿ ಅವನನ್ನೇ ಭಸ್ಮ ಮಾಡಿದ. ಅದೇ ರೀತಿ ಈ ಒಸಾಮ ಕೂಡ ಅಮೇರಿಕದ ವರಪ್ರಸಾದ ಸೃಷ್ಠಿಯೇ!!!! ಒಂದು ವ್ಯತ್ಯಾಸವೆಂದರೆ ವರಪಡೆದು ಅದನ್ನು ಅವರ ಮೇಲೆಯೇ ಪ್ರಯೋಗಿಸಿದ್ದು!!! ಬೀಗುತ್ತಿದ್ದ ಅಮೇರಿಕಕ್ಕೆ ಅವರದೇ ಅಸ್ತ್ರಗಳಿಂದ, ಅವರದೇ ವಿಮಾನಗಳಿಂದ, ಅವರದೇ ನೆಲದಲ್ಲಿ, ಅವರ ಅಹಂಮಿಗೇ ಪೆಟ್ಟುಕೊಟ್ಟಗಲೇ ಅಮೇರಿಕಕ್ಕೆ ಭಯೋತ್ಪಾದನೆಯ ಭೀಕರತೆ ಅರ್ಥವಾಗಿದ್ದು, ಅದೇನೋ ಹೇಳುತ್ತಾರಲ್ಲ ’ಅಂಡು ಒದ್ದೆಯಾದಗಲೇ ಗೊತ್ತಾಗೋದು’ ಅನ್ನುವಹಾಗೆ!!
ಇಂದು ಅದೇ ಅಮೇರಿಕಾ ಕೈಯಲ್ಲಿ ಅದೇ ಒಸಾಮ ಹತನಾಗಿದ್ದಾನೆ!! ತಾನೆ ಸಾಕಿದ ಮುದ್ದು ಕಂದನನ್ನು ಅಮೇರಿಕ ಕೊಂದು ನಿಟ್ಟುಸಿರಿಸಿದೆ, ಸದ್ಯ ತನ್ನ ಇತಿಹಾಸವನ್ನು ತಾನೆ ಮರೆತಂತೆ ಇಂದು ವರ್ತಿಸುತ್ತಿದೆ.
ಅಮೇರಿಕವೆಂಬ ಜಗತ್ತಿನ ಶಸ್ತ್ರಾಸ್ತ್ರಗಳ ಕಾರ್ಖಾನೆ!! ಲಾಡೆನ್ ನ ಹುಟ್ಟು!!
ತೀರಾ ಇತ್ತೀಚಿನವರೆಗೆ ಅಂದರೆ ೨೦೦೦ ಇಸವಿಯವರೆಗೆ ಅಮೇರಿಕಾದ ಆರ್ಥಿಕ ಮೂಲ ಕೇವಲ ಶಸ್ತ್ರಾಸ್ತ್ರ ಎನ್ನುವುದರಲ್ಲಿ ಎರಡುಮಾತಿಲ್ಲ. ಅಸಲಿಗೆ ಫೋರ್ಡ್, ಜನರಲ್ ಮೋಟಾರ್ಸ್ ಇತ್ಯಾದಿ ಅಮೇರಿಕಾದ ಪ್ರಖ್ಯಾತ ವಾಹನ ತಯಾರಿಕಾ ಕಂಪನಿಗಳು ವಾಹನ ತಯಾರಿಸಿದ್ದಕ್ಕಿಂತ, ಪೆಂಟಗಾನ್ ನ ನಿರ್ದೇಶನದಂತೆ ಶಸ್ತ್ರಾಸ್ತ್ರಗಳನ್ನು ತಯಾಅರಿಸಿದ್ದೇ ಹೆಚ್ಚು!!! ಹಾಗೆ ತಯಾರಾದ ಶಸ್ತ್ರಾಸ್ತ್ರಗಳನ್ನು ತಾನೆ ಇಟ್ಟುಕೊಂಡರೆ ಏನು ಪ್ರಯೋಜನ ಹೇಳಿ? ಅದಕ್ಕೆಂದೇ ಅದು ಭಾರತೀಯ ಉಪಖಂಡದಲ್ಲಿ ಕೋಲಾಹಲವೆಬ್ಬಿಸಲು ಕಾಶ್ಮೀರ ಸಮಸ್ಯೆ ಸಮಸ್ಯೆಯಾಗಿಯೇ ಉಳಿಯುವಂತೆ ಮಾಡಲು ಇಸ್ಲಾಂನಲ್ಲಿ ಇಲ್ಲದ "ಜಿಹಾದ್" ಅನ್ನು ಪೋಷಿಸಿತು. ಅಲ್ಲದೆ ೧೯೮೦ರ ದಶಕದಲ್ಲಿ ಆಘ್ಪಾನಿಸ್ತಾನದಲ್ಲಿ ನೆಲೆಮಾಡಿದ್ದ ಸೋವಿಯಟ್ ಸೇನೆಯನ್ನು ಹಿಮ್ಮೆಟ್ಟಿಸಲು ಅಮೆರಿಕ ಹೂಡಿದ ತಂತ್ರಗಾರಿಕೆಯ ಪ್ರತಿಫಲ ಈ ಬಿನ್ ಲಾಡೆನ್ ಎಂಬ ದೈತ್ಯ. ವಿಶ್ವದ ಭೂಪಟದಲ್ಲಿ ಕಮ್ಯುನಿಸಂ ಇಲ್ಲದಂತೆ ಮಾಡುವ ಹುನ್ನಾರದಲ್ಲಿ ಅಮೆರಿಕ ಪ್ರಯೋಗಿಸಿದ ಅಸ್ತ್ರಗಳು ಹಲವಾರು. ಕೆಲವು ದೇಶಗಳಲ್ಲಿ ಆಂತರಿಕ ದಂಗೆ, ಇನ್ನು ಕೆಲವು ದೇಶಗಳ ಮೇಲೆ ನೇರ ಆಕ್ರಮಣ, ಕೆಲವು ದೇಶಗಳಿಗೆ ಆರ್ಥಿಕ ದಿಗ್ಭಂಧನ ಇವೆಲ್ಲವೂ ಅಸಾಧ್ಯ ಎನಿಸಿದರೆ ಬಂಡುಕೋರರ ಸೃಷ್ಟಿ.
    ಸೋವಿಯಟ್ ಸೇನೆಯನ್ನು ಎದುರಿಸಲು ಮತ್ತು ಕಮ್ಯುನಿಸಂ ವಿರುದ್ಧ ಜನಾಭಿಪ್ರಾಯ ಸೃಷ್ಟಿಸಲು ಅಮೆರಿಕದ ಸಾಮ್ರಾಜ್ಯಶಾಹಿ ಬಳಸಿದ್ದು ಎರಡು ಪ್ರಮುಖ ಅಸ್ತ್ರಗಳನ್ನು. ಮೊದಲನೆಯದು ಪೆಂಟಗನ್ನಲ್ಲಿ ತಯಾರಿಸಲಾಗುವ ಅತ್ಯಾಧುನಿಕ ಪಾಶವೀ ಶಸ್ತ್ರಾಸ್ತ್ರಗಳು. ಎರಡನೆಯದು ಅರಬ್ ರಾಷ್ಟ್ರಗಳಲ್ಲಿ ಪುಟಿದೇಳುತ್ತಿದ್ದ ಇಸ್ಲಾಮಿಕ್ ಜಿಹಾದ್ ಪರಿಕಲ್ಪನೆ ಮತ್ತು ಅದರ ಹಿಂದಿನ ಸಮರಶೀಲ ಧೋರಣೆ. ಈ ಎರಡೂ ಅಸ್ತ್ರಗಳ ಸಮ್ಮಿಲನದ ಮಾನಸ ಪುತ್ರನೇ ಒಸಾಮ ಬಿನ್ ಲಾಡೆನ್ ಎಂಬ ಪೆಡಂಭೂತ. ಸೌದಿ ಅರೇಬಿಯಾದಲ್ಲಿ ತನ್ನದೇ ಆದ ಗುಂಪು ರಚಿಸಿಕೊಂಡಿದ್ದ ಒಸಾಮಾನನ್ನು ಅಮೆರಿಕಕ್ಕೆ ಕರೆತಂದು, ಪಾಕಿಸ್ತಾನದ ನೆಲದಲ್ಲಿ ಆತನ ನಿಷ್ಠಾವಂತ ತಂಡಕ್ಕೆ ಶಸ್ತ್ರಾಸ್ತ್ರ ತರಬೇತಿ ನೀಡಿ, ಆಫ್ಘಾನಿಸ್ತಾನದ ಬೆಟ್ಟ ಕಣಿವೆಗಳಲ್ಲಿ ಸೋವಿಯಟ್ ಸೇನೆಯ ವಿರುದ್ಧ ಹೋರಾಡುವ ನೈಪುಣ್ಯತೆಯನ್ನು ಕಲಿಸಿ, ಒಂದು ಬಂಡುಕೋರ ಸೇನೆಯನ್ನೇ ಸೃಷ್ಟಿಸಿದ ಅಮೆರಿಕಾದ ಸಾಮ್ರಾಜ್ಯಶಾಹಿಗೆ ತಾನು ಸೃಷ್ಟಿಸಿದ್ದು ಒಂದು ಪೆಡಂಭೂತ ಎಂದು ಅರಿವಾಗುವಷ್ಟರಲ್ಲಿ ವಿಶ್ವ ವಾಣಿಜ್ಯ ಕೇಂದ್ರದ ಬೃಹತ್ ಕಟ್ಟಡ ಕುಸಿದು ಬಿದ್ದಿತ್ತು. ಎಚ್ಚೆತ್ತು ಒಸಾಮಾನನ್ನು ಬೇಟೆಯಾಡತೊಡಗಿದ ಅಮೆರಿಕಾಗೆ ಅದಕ್ಕೂ ಮುನ್ನ ಲಾಡೆನ್ ನಡೆಸಿದ ದುಷ್ಕೃತ್ಯ-ಕುಕೃತ್ಯಗಳಾಗಲೀ, ಬಾಂಬ್ ದಾಳಿಗಳಾಗಲೀ, ಭಯೋತ್ಪಾದಕ ಕೃತ್ಯಗಳಾಗಲೀ ಕಾಣಲೇ ಇಲ್ಲ. ಏಕೆಂದರೆ ದಾಳಿಗೊಳಗಾದದ್ದು ಅಮೆರಿಕದ ಪ್ರಜೆಗಳಲ್ಲ. ಬಳಸಲಾಗಿದ್ದು ಪೆಂಟಗನ್ನ ಶಸ್ತ್ರಾಸ್ತ್ರಗಳು. ಕಳೆದ ಹತ್ತು ವರ್ಷಗಳಿಂದ ತನ್ನ ಶತ್ರುವನ್ನು ವಿರತ ಶ್ರಮವಹಿಸಿ ಬೇಟೆಯಾಡಿದ ಅಮೆರಿಕಾ ಕೊನೆಗೂ ಲಾಡೆನ್ನನ್ನು ಅಂತ್ಯಗೊಳಿಸಿದೆ. ಅದೂ ತಾನು ತರಬೇತಿ ನೀಡಿದ ಪಾಕಿಸ್ತಾನದ ನೆಲದಲ್ಲೇ. ಬಹುಶಃ ಲಾಡೆನ್ಗೆ ಪಾಕಿಸ್ತಾನವೇ ಕರ್ಮಭೂಮಿಯಾಗಿತ್ತೇನೋ. ಸೃಷ್ಟಿಕರ್ತನಿಂದಲೇ ಹತನಾಗುವ ಭಾಗ್ಯ ಇದ್ದದ್ದು ನಮ್ಮ ಪುರಾಣಗಳಲ್ಲಿನ ರಾಕ್ಷಸರಿಗೆ ಮಾತ್ರ. ಈಗ ಲಾಡೆನ್ಗೂ ಅದು ಲಭಿಸಿದೆ.
ಅಮೇರಿಕ ಪಾಕಿ(ಪಿ)ಸ್ತಾನಗಳೆಂಬ ಭಾರತದ ಹಿತಶತ್ರುಗಳು
    ಹಾಗೆ ನೋಡಿದ್ದಲ್ಲಿ ತನ್ನ ಸ್ವಾರ್ಥ ಸಾಧನೆಗಾಗಿ ಎಂತಹ ನೀಚ, ವಾಮಮಾರ್ಗ ಹಿಡಿಯಲು ತಯಾರಿರುವ ವಿಶ್ವದ ದೊಡ್ಡಣ್ಣನೇ ಮನುಕುಲಕ್ಕೆ ನಿಜವಾದ ಕಂಟಕ. ಹಾಗೆಂದ ಮಾತ್ರಕ್ಕೆ ಪಾಕಿಸ್ತಾನದ ಪಾತ್ರ ಏನೂ ಇಲ್ಲವೆಂದರೆ ಇಲ್ಲದ ಪಾಪ ಸುತ್ತಿಕೊಂಡೀತು!!! ನಿಜವಾದ ಅರ್ಥದಲ್ಲಿ ಎರಡೂ ದೇಶಗಳು ಭಾರತದ ಹಿತಶತ್ರುಗಳೇ!! ಎರಡಕ್ಕೂ ಕಾಶ್ಮೀರ ಬೇಕೇ ಬೇಕು!! ತನ್ನ ರಾಜಕೀಯ ಸಂಕಷ್ಟ ನಿವಾರಿಸಲು ಪಾಕಿಸ್ತಾನಕ್ಕೆ, ಚೀನಾ, ರಷ್ಯಗಳನ್ನು ನಿಯಂತ್ರಿಸಲು ಆಯಕಟ್ಟಿನ ಜಾಗವಾದ್ದರಿಂದ ಅಮೇರಿಕಕ್ಕೆ!!!! ಆದ್ದರಿಂದ ಪಾಕೀಸ್ತಾನ ಚೀನಾದೊಡನೆ ಸೇರಿ ’ಡಬಲ್-ಗೇಮ್’ ಆಡುತ್ತಿದ್ದರೂ, ಭಾರತದಲ್ಲಿ ಹರಿದ ರಕ್ತದಕೋಡಿಗೆ ಪಾಪಿಸ್ತಾನವೇ ಕಾರಣವೆಂದೂ ತಿಳಿದ್ದಿದ್ದರೂ ಇದೇ ಅಮೇರಿಕ ’ಜಾಣಕುರುಡು’ ಪ್ರದರ್ಶಿಸಿತ್ತಾ ಬಂದಿತ್ತು. ತನ್ನ ಪರಮ ಶ(ಮಿ)ತ್ರುವಿನ ಕಾರ್ಯಸ್ಥಾನ ಪಾಕಿಸ್ತಾನವೆಂದೂ ತಿಳಿದ್ದಿದ್ದರೂ, ಒಸಾಮನ ಹತ್ಯೆಯದಿನ ಅದರ ವಿರುದ್ಧ ಗುಡುಗಿದ ಅಮೇರಿಕಾ ಈಗಾಗಲೆ ತಣ್ಣಗಾಗಿದ್ದಲ್ಲದೆ, ಅದರ ಶಸ್ತ್ರಾಸ್ತ್ರ ಪೂರೈಕೆ ಮತ್ತಿತರ ಸೇವೆಗಳು ’ಅಭಾದಿತ’ ಎನ್ನುತ್ತಿರುವುದನ್ನು ನೋಡಿದವರ್ಯಾರಿಗೂ ಅಮೇರಿಕದ ನಡೆ ಅರ್ಥವಾದೀತು!!!
    ಒಸಾಮಾ ಬಿನ್ ಲಾಡೆನ್‌ನನ್ನು ಅಮೆರಿಕ ಸೇನಾ ಪಡೆ ಪಾಕಿಸ್ತಾನದಲ್ಲಿಯೇ ಹತ್ಯೆಗೈಯುವ ಮೂಲಕ ಪಾಕ್ ಮುಖವಾಡ ಬಯಲಾದಂತಾಗಿದೆ. ಅಷ್ಟೇ ಅಲ್ಲ ಲಾಡೆನ್ ಪಾಕ್ ಮಿಲಿಟರಿ ಬೇಸ್‌ನಿಂದ ಒಂದೂವರೆ ಕಿಲೋ ಮೀಟರ್ ದೂರದಲ್ಲಿಯೇ ವಾಸವಾಗಿದ್ದರೂ ಕೂಡ ಆತನನ್ನು ಯಾಕೆ ಹತ್ಯೆಗೈದಿಲ್ಲ ಅಥವಾ ಮಾಹಿತಿ ನೀಡಿಲ್ಲ ಎಂಬ ಪ್ರಶ್ನೆಗಳು ಕೇಳಿಬರತೊಡಗಿದೆ. ಅಮೆರಿಕ ನೇತೃತ್ವದ ಪಡೆ ಕಳೆದ ಹತ್ತು ವರ್ಷಗಳಿಂದ ಲಾಡೆನ್ ಬೇಟೆಯಲ್ಲಿ ತೊಡಗಿತ್ತು. ಆದರೆ ಪಾಕಿಸ್ತಾನ ಮಾತ್ರ ಲಾಡೆನ್ ಇರುವಿಕೆ ಬಗ್ಗೆ ಯಾವುದೇ ಸುಳಿವು ನೀಡದೆ, ಆತ ದೇಶದಲ್ಲಿ ಠಿಕಾಣಿಯೇ ಹೂಡಿಲ್ಲ ಎಂದು ಸಮಜಾಯಿಷಿ ನೀಡುತ್ತಿತ್ತು. ಏತನ್ಮಧ್ಯೆ ಭಾನುವಾರ ರಾತ್ರಿ ಇಸ್ಲಾಮಾಬಾದ್‌ನಿಂದ ೬೦ ಕಿಲೋ ಮೀಟರ್ ದೂರದಲ್ಲಿರುವ ಅಬೋಟಾಬಾದ್‌ನ ಮನೆಯಲ್ಲಿ ವಾಸವಾಗಿದ್ದ ಲಾಡೆನ್‌ನನ್ನು ಅಮೆರಿಕ ಸೇನೆ ಹತ್ಯೆಗೈದಿರುವುದು ಪಾಕಿಸ್ತಾನಕ್ಕೆ ತೀವ್ರ ಮುಖಭಂಗವಾದಂತಾಗಿದೆ. ಅವೆಲ್ಲಕ್ಕಿಂತಲೂ ಪಾಕಿಸ್ತಾನದ ಸುಳ್ಳುಬುರುಕ ಹೇಳಿಕೆ, ಪಾಕ್ ಇಬ್ಬಗೆ ನೀತಿ ಜಗಜ್ಜಾಹೀರಾದಂತಾಗಿದೆ. ಇಷ್ಟೆಲ್ಲಾ ಆದರೂ ಲಾಡೆನ್ ಹತ್ಯೆಯ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಸಂಪೂರ್ಣ ನೆರವು ನೀಡಿದೆ ಎಂದು ಅಮೆರಿಕ ಹೇಳಿಕೆ ನೀಡಿದೆ. ವಿಪರ್ಯಾಸ ಎಂಬಂತೆ ಲಾಡೆನ್ ಹತ್ಯೆ ಕುರಿತಂತೆ ಪಾಕಿಸ್ತಾನದ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿಯಾಗಲಿ, ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ಸೇರಿದಂತೆ ಯಾರೊಬ್ಬರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ!!
ಲಾಡೆನ್ ನ ಹತ್ಯೆ ಭಯೋತ್ಪಾದನೆಯ ಅಂತ್ಯವಲ್ಲ!!
    ಈ ಮಾತು ಅಕ್ಷರಶಃ ಸತ್ಯ!! ಲಾಡೆನ್ ಸಾವು ಅಮೆರಿಕದಲ್ಲಿ ವಿಜೃಂಭಣೆಯಿಂದ ಸ್ವಾಗತಿಸಲ್ಪಟ್ಟಿದೆ. ಜನತೆ ಬೀದಿಗಿಳಿದು ಸಂಭ್ರಮಿಸುತ್ತಿದ್ದಾರೆ. ಅಧ್ಯಕ್ಷ ಒಬಾಮ ದಿಗ್ವಿಜಯದ ನಗೆ ಬೀರುತ್ತಿದ್ದಾರೆ. ಆ ಗುಂಗಿನಲ್ಲೇ ಮಂಕುಕವಿದ್ದಿದ್ದ ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿದ್ದಾರಲ್ಲದೆ, ತಮ್ಮ ಆಡಳಿತ ವೈಪಲ್ಯಗಳನ್ನು ತೇಪೆ ಹಾಕಿ ಮರೆಮಾಚುವಲ್ಲಿ ಯಶಸ್ವಿಯಾಗಿದ್ದಾರೆ!!! ಆದರೆ ಅಮೆರಿಕ ಅಂತ್ಯಗೊಳಿಸಿರುವುದು ಒಬ್ಬ ಲಾಡೆನ್ನನ್ನು ಮಾತ್ರ. ಕಳೆದ ಎರಡು ದಶಕಗಳಲ್ಲಿ ಸಾಮ್ರಾಜ್ಯಶಾಹಿಗಳ ಅಧಿಕಾರಲಾಲಸೆಯ ಪ್ರತಿಫಲವಾಗಿ ವಿಶ್ವದಾದ್ಯಂತ ಸಾವಿರ ಲಾಡೆನ್ಗಳು ಸೃಷ್ಟಿಯಾಗಿದ್ದಾರೆ. ಪೆಂಟಗನ್ನಲ್ಲಿ ತಯಾರಾಗುವ ಶಸ್ತ್ರಾಸ್ತ್ರಗಳನ್ನು ಖರ್ಚು ಮಾಡಲು ಅಗತ್ಯವಾದ ಬಳಕೆದಾರರನ್ನು ಸಾಮ್ರಾಜ್ಯಶಾಹಿ ಸೃಷ್ಟಿಸುತ್ತಲೇ ಇದೆ. ಲಷ್ಕರ್, ಹೂಜಿ, ಜೆಇಎಮ್ ಹೀಗೆ ಹತ್ತು ಹಲವು ಸಂಘಟನೆಗಳು ಬೆಳೆಯುತ್ತಲೇ ಇವೆ. ಈ ಸಂಘಟನೆಗಳ ಹಿಂದಿರುವ ಶಕ್ತಿ ಯಾವುದೇ ಧರ್ಮ ಅಥವಾ ಧರ್ಮಾಧಾರಿತ ನಂಬಿಕೆಗಳಲ್ಲ. ಬದಲಾಗಿ ಸಾಮ್ರಾಜ್ಯಶಾಹಿಗಳ ಬಂಡವಾಳ ಮತ್ತು ಶಸ್ತ್ರಾಸ್ತ್ರ ಉದ್ಯಮ. ಒಬ್ಬ ಲಾಡೆನ್ ಮೃತನಾದದ್ದಕ್ಕೆ ಸಂಭ್ರಮಿಸುತ್ತಿರುವ ಸಂದರ್ಭದಲ್ಲೇ ಸೇಡಿನ ಪ್ರತಿದಾಳಿಯ ಮುನ್ಸೂಚನೆಯನ್ನೂ ನೀಡುತ್ತಿರುವ ಸಾಮ್ರಾಜ್ಯಶಾಹಿಗಳಿಗೆ ತಾವು ನಿಮರ್ಿಸಿದ ಕರ್ಮಭೂಮಿಯಲ್ಲಿ ಪಳಗಿ, ನುರಿತಿರುವ ಸಾವಿರಾರು ಒಸಾಮಾಗಳು ಪುಟಿದೇಳುತ್ತಾರೆ ಎಂಬ ಸತ್ಯದ ಅರಿವು ಇರಲೇ ಬೇಕು.
    ಪಾಪಪ್ರಜ್ಞೆಯೇ ಇಲ್ಲದ ಸಾಮ್ರಾಜ್ಯಶಾಹಿಗಳ ಆಕ್ರಮಣ ಶೀಲತೆ ಮತ್ತು ಅಧಿಪತ್ಯ ರಾಜಕಾರಣದ ಪ್ರವೃತ್ತಿ ಅಂತ್ಯಗೊಳ್ಳುವವರೆಗೂ ಭಯೋತ್ಪಾದನೆ ಅಂತ್ಯಗೊಳ್ಳುವುದೂ ಇಲ್ಲ. ಪ್ರಸ್ತುತ ಸನ್ನಿವೇಶದಲ್ಲಿ ಅರಬ್ ರಾಷ್ಟ್ರಗಳಲ್ಲಿ ಸಂಭವಿಸುತ್ತಿರುವ ವಿದ್ಯಮಾನಗಳತ್ತ ಒಮ್ಮೆ ಗಮನಹರಿಸಿದಲ್ಲಿ ಈ ಸತ್ಯ ದರ್ಶನವಾಗುತ್ತದೆ. ತನ್ನ ಆಥರ್ಿಕತೆಯ ರಕ್ಷಣೆಗಾಗಿ ಪ್ರಜಾತಂತ್ರವನ್ನೇ ಹೊಸಕಿ ಹಾಕಿ ನಿರಂಕುಶ ಪ್ರಭುಗಳನ್ನು, ಸರ್ವಾಧಿಕಾರಿಗಳನ್ನು ಪೋಷಿಸುವ ಸಾಮ್ರಾಜ್ಯಶಾಹಿಗಳು ಈಗ ಅರಬ್ ರಾಷ್ಟ್ರಗಳ ಬೀದಿಬೀದಿಗಳಲ್ಲಿ ಕೇಳಿಬರುತ್ತಿರುವ ಪ್ರಜಾಸತ್ತೆಯ ದನಿಗಳನ್ನು ಅಡಗಿಸುವ ಮಾರ್ಗಗಳತ್ತ ನೋಡುತ್ತಿದ್ದಾರೆ. ಲಿಬಿಯಾದತ್ತ ಒಮ್ಮೆ ಕಣ್ಣು ಹಾಯಿಸಿದರೆ ಭಯೋತ್ಪಾದನೆಯ ಗೂಡಾರ್ಥವನ್ನು ಗ್ರಹಿಸಬಹುದು. ಇವುಗಳೆಲ್ಲಾ ಅಂತ್ಯವಾಗಬೇಕಾದರೆ ಲಾಡೆನ್ ನಂತವರ ಅಂತ್ಯವಷ್ಟೇ ಸಾಲದು. ಭಯೋತ್ಪಾದನೆ ಅಂತ್ಯಕ್ಕೆ ಇಂದು ತಾರ್ಕಿಕ ನೆಲೆಗಟ್ಟಿಗಿಂತ ಜಾಗತಿಕ ಸೈದ್ದಾಂತಿಕ ಅರಿವು ಅತ್ಯಗತ್ಯ.
    ಏಕೆಂದರೆ ಒಸಾಮನಿಂದ ಸ್ಫೂರ್ತಿ ಪಡೆದು ಹತ್ತಾರು ದೇಶಗಳಲ್ಲಿ ಯುವಕರು ಸ್ಥಳೀಯ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಭಯೋತ್ಪಾದನೆ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಅಲ್ ಖೈದಾ, ಲಷ್ಕರ್ ತೊಯ್ಬಾ, ತಾಲಿಬಾನ್ ಮತ್ತಿತರ ಕುಖ್ಯಾತ ಸಂಘಟನೆಗಳು ತಮ್ಮದೇ ಆದ ನೆಲೆಗಳನ್ನು ವಿವಿಧ ದೇಶಗಳಲ್ಲಿ ಸ್ಥಾಪಿಸಿಕೊಂಡಿವೆ. ಹಾಗೆಯೇ ನಾಯಕರನ್ನು ಬೆಳೆಸಿವೆ. ಆದ್ದರಿಂದಲೇ ಒಸಾಮ ಹತ್ಯೆ ಈ ಸಂಘಟನೆಗಳ ಮೇಲೆ ಕೆಟ್ಟ ಪರಿಣಾಮ ಬೀರುವುದಿಲ್ಲ ಭಯೋತ್ಪಾದನೆಯ ಅಂತ್ಯವೂ ಅಲ್ಲ ಎಂದು ಹೇಳುವುದು.
ಭಾರತದ ಮಾತಿಗೆ ಜಾಗತಿಕವಲಯಲ್ಲಿ ಆನೆ ಬಲ್!!
    ಏನೇ ಆದರೂ ಒಸಾಮನ ಹತ್ಯೆಯಿಂದಾಗಿ ಭಾರತದ ಮಾತಿಗೆ ಆನೆಬಲ ಬಂದಂತಾಗಿರುವುದೂ ಸತ್ಯ!! ಭಯೋತ್ಪಾದಕರಿಗೆ ಪಾಕಿಸ್ತಾನ ಸ್ವರ್ಗವಾಗಿದೆ ಎಂದು ಭಾರತ ಮೊದಲಿನಿಂದಲೂ ಹೇಳುತ್ತ ಬಂದಿದೆ. ಆದರೆ ಪಾಕಿಸ್ತಾನ ಅದನ್ನು ಅಲ್ಲಗಳೆಯುತ್ತಲೇ ಬಂದಿತ್ತು. ಒಸಾಮನನ್ನು ಇದೀಗ ಪಾಕಿಸ್ತಾನದಲ್ಲಿಯೇ ಅಮೆರಿಕ ಕೊಂದಿರುವುದು ಭಾರತದ ಮಾತಿಗೆ ಪುರಾವೆ ಒದಗಿಸಿದಂತಾಗಿದೆ. ಈ ಘಟನೆ ಅಂತರರಾಷ್ಟ್ರೀಯವಾಗಿ ಭಾರತದ ನಿಲುವಿಗೆ ಹೆಚ್ಚು ಬೆಂಬಲ ತಂದುಕೊಟ್ಟಿದೆ. ಪಾಕಿಸ್ತಾನದಲ್ಲಿ ಸದ್ಯ ಅರಾಜಕ ಪರಿಸ್ಥಿತಿ ಇರುವುದರಿಂದ ಮೂಲಭೂತವಾದಿಗಳ ಚಿತಾವಣೆ ಹೆಚ್ಚಾಗಿ ಏನು ಬೇಕಾದರೂ ಆಗಬಹುದು. ನಮ್ಮ ರಕ್ಷಣೆಯನ್ನು ಗಮನದಲ್ಲಿ ಇಟ್ಟುಕೊಂಡು ಪಾಕಿಸ್ತಾನವನ್ನು ಮಣಿಸಲು ಅಮೇರಿಕದ ಹಾದಿ ಅನುಸರಿಸುವುದಕ್ಕಿಂತ ಪ್ರಜಾತಂತ್ರದ ದಾರಿಗಳನ್ನೇ ನಾವು ಅನುಸರಿಸಬೇಕಿದೆ. ಹಿಂದಿನ ಅನುಭವಗಳ ಹಿನ್ನೆಲೆಯಲ್ಲಿ ಇದು ಕಷ್ಟ ಎನಿಸಬಹುದು. ಆದರೆ ಭಾರತಕ್ಕೆ ಬೇರೆ ದಾರಿಯಿಲ್ಲ. ಪಾಕಿಸ್ತಾನದ ಮೇಲೆ ಅಂತರರಾಷ್ಟ್ರೀಯ ಒತ್ತಡ ಹೆಚ್ಚುವಂತೆ ಮಾಡಬೇಕು. ಅಮೆರಿಕದ ಮೇಲೂ ಒತ್ತಡ ಹೇರಿ ಭಯೋತ್ಪಾದಕರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮಾಡಬೇಕು. ಅದುವರೆಗೆ ಯಾವುದೇ ರೀತಿಯ ಅಂತರಾಷ್ಟ್ರೀಯ ನೆರವು ಸಿಗದಂತೆ ಮಾಡುವುದು ಮೊದಲು ಆಗಬೇಕಾದ ಕೆಲಸ. ಪಾಕಿಸ್ತಾನ ನಮ್ಮ ನೆರೆಯ ರಾಷ್ಟ್ರ. ಅಲ್ಲಿ ಪರಿಸ್ಥಿತಿ ಸುಧಾರಿಸಿದರೆ ನಮಗೂ ನೆಮ್ಮದಿ. ಸದ್ಯದ ಪರಿಸ್ಥಿತಿ ಭಾರತ ಮಟ್ಟಿಗೆ ಅನುಕೂಲವೇ ಆದರೂ ನಮ್ಮ ವೋಟ್ ಬ್ಯಾಂಕ್ ರಾಜಕಾರಣ ನಮ್ಮನ್ನು ಎಲ್ಲಿಗೆ ತಂದು ನಿಲ್ಲಿಸುತ್ತದೋ ಕಾದು ನೋಡೋಣ

ಬುಧವಾರ, ಏಪ್ರಿಲ್ 27, 2011

ಇಹಲೋಕಕೆ ಮರಳಿ ಬಾ ಬಾ!!!

ಬಾಬಾ ಎನ್ನುವ ಹೆಸರನ್ನು ಇತ್ತೀಚಿನ ದಿನಗಳಲ್ಲಿ ಕೇಳಿದರೆ ಸಾಮಾನ್ಯವಾಗಿ ಬೇಸರ, ನಿರ್ಲಕ್ಷ್ಯ, ಅಸಡ್ಡೆ, ಆಶ್ಚರ್ಯ ಎಲ್ಲವೂ ಒಮ್ಮೆಲೆ ಮೂಡಿಬರುವುದು ಸಹಜ.
ಆದರೆ ’ಸತ್ಯ ಸಾಯಿ ಬಾಬಾ’ ಹೆಸರು ಕೇಳಿದರೆ ಭಕ್ತಿ ಭಾವಕ್ಕಿಂತ ಗೌರವ ಮೂಡುವುದೇ ಹೆಚ್ಚು.

ಹೌದು ಸತ್ಯ ಸಾಯಿ ಬಾಬಾ ವ್ಯಕ್ತಿತ್ವವೇ ಹಾಗೆ!! ಚಿಕ್ಕವಯಸ್ಸಿನಲ್ಲೇ ಆಧ್ಯಾತ್ಮದ ಕಡೆ ಹೊರಳಿದ ಬಾಬಾ ನಂತರ ಮನೆ ಮಾತಾದದ್ದು ತಮ್ಮ ವಿಚಿತ್ರ ಪವಾಡಗಳಿಂದಲೇ!! ಶೂನ್ಯದಲ್ಲಿ ವಾಚು - ಉಂಗುರ, ಚೈನು - ವಿಭೂತಿ ಸೃಷ್ಠಿಸಿ ಭಕ್ತರನ್ನು ಬೆರಗುಗೊಳಿಸುತ್ತಿದ್ದ ಬಾಬಾ ರವರಿಗೆ ಆಧುನಿಕ ಚಿಂತಕರು ’ಬೂದಿ ಬಾಬಾ’ ಎಂದು ಕರೆದಿದ್ದರಲ್ಲಿ ಅತಿಶಯೋಕ್ತಿಯೇನಿರಲಿಲ್ಲ.  ಇದೆಲ್ಲದರ ಹೊರತಾಗಿಯೂ ಅವರ ವಿರೋಧಿಗಳೂ ಸಹ ಅವರನ್ನು ಮೆಚ್ಚಿದ್ದು ಮತ್ತು ಮೆಚ್ಚುತ್ತಿದ್ದದ್ದು ಅವರ ಸಮಾಜ ಸೇವೆಗಳಿಗಾಗಿ.

ಹೌದು!! ಸಾಯಿ ಬಾಬ ಪವಾಡ ಪುರುಷನೋ, ಡಂಬಾಚಾರಿಯೋ, ಕೊಲೆಗಡುಕನೋ, ಸಲಿಂಗಿಯೋ ಮತ್ತೇನೋ ಅವರ ವಿವಾದಗಳೆಲ್ಲವನ್ನೂ ತಕ್ಕಡಿಯ ಒಂದು ಭಾಗಕ್ಕಿಟ್ಟರೆ ಮತ್ತೊಂದರಲ್ಲಿ ಅವರ ಸಮಾಜಸೇವೆಗಳನ್ನಿಟ್ಟು ತೂಗಿದರೆಅವರ ವಿವಾದಗಳೆಲ್ಲವೂ ಗೌಣವಾಗಿಬಿಡುತ್ತವೆ. ಅದೇ ಕಾರಣಗಳಿಂದ ಸತ್ಯ ಸಾಯಿ ಬಾಬರವರು ಇತರ ಸ್ವಾಮೀಜಿಗಳಿಗಿಂತ ಬೇರೆಯಾಗಿಯೇ ನಿಲ್ಲುತ್ತಾರೆ. ಇಂದಿನ ಅದೆಷ್ಟೋ ಮಠಾಧೀಶರು ದುಡ್ಡುಮಾಡುವ ದಂದೆಗಿಳಿದು, ಮೀಟರ್ ಬಡ್ಡಿಕೋರರು, ರಿಯಲ್ ಎಸ್ಟೇಟ್ ದಲ್ಲಾಳಿಗಳನ್ನು ನಾಚಿಸುವಂತ "ವ್ಯವಹಾರಸ್ಥ" ರಾಗಿದ್ದರೆ, ಮತ್ತೆ ಕೆಲವರು ರಾಜಕೀಯದಲ್ಲಿ ತಲೆ ತೂರಿಸಿ ’ಮರಿ ವಿದಾನಸೌಧ’ ದಂತಿದ್ದರೆ, ಜಾತಿಯ ಹೆಸರೇಳಿ ಜಾತಿಗೊಂದು ಮಠ ಕಟ್ಟಿ, ತಿಂದು ದುಂಡಗಾಗಿರುವುದಲ್ಲದೆ, ಧರ್ಮೋಪದೇಶದಿಂದ ಕೆಟ್ಟವರನ್ನು ಸರಿದಾರಿಗೆ ತರುವ ಬದಲು ಮೋಹಕ್ಕೆ ಬಲಿಯಾಗಿ ಅರಿಷಡ್ವರ್ಗಗಳನ್ನು ಮೆಟ್ಟಲಾರದೆ ಕಾಮದಾಹಿಗಳಾದರೆ, ಮತ್ತೆ ಕೆಲವರು ನಿಯತ್ತಿನಿಂದ ಪೀಠ ತ್ಯಜಿಸಿ ಸಂಸಾರಿಗಳೂ ಆಗಿದ್ದಾರೆ, ಇನ್ನು ಕೆಲವರು ಯೋಗಾಯೋಗದ ’ಯೋಗಿ’ಗಳಾಗಿದ್ದರೆ ಮತ್ತೆಕೆಲವರು ಶಾಂತಿ ಶಾಂತಿ ಎನ್ನುತ್ತಾ ಕಾಸು ಕಿತ್ತುಕೊಂಡು ಬದುಕುವುದನ್ನು ಕಲಿಸಿಕೊಡುತ್ತಿದ್ದರೆ. ಅದೆಲ್ಲೋ ನಮ್ಮ ಸಿದ್ಧಗಂಗೆಯ ಶಿವಕುಮಾರ ಸ್ವಾಮಿಗಳಂತಹವರು ಅನ್ನ ದಾಸೋಹ, ಅಕ್ಷರ ದಾಸೋಹ ಎನ್ನುತ್ತಾ ನಿಸ್ವಾರ್ಥದ ಸಮಾಜ ಸೇವೆಗೈಯುತ್ತಿದ್ದಾರೆ.  ಇವರೆಲ್ಲರಿಗಿಂತಲೂ  ಬಾಬ ಭಿನ್ನವಾಗಿ ನಿಲ್ಲುವುದು ತಮ್ಮ ವಿಶಿಷ್ಠ ಸಮಾಜ ಸೇವೆಗಳಿಂದ ಎನ್ನುವುದರಲ್ಲಿ ಅತಿಶಯೋಕ್ತಿಯೇನಲ್ಲ.

ಇಂದು ಒಬ್ಬ ವೈದ್ಯ ಅದರಲ್ಲೂ ಒಬ್ಬ ಸ್ಪೆಷಲಿಸ್ಟ ತನ್ನ ಸ್ಟೆತಾಸ್ಕೋಪನ್ನು ಪೇಶಂಟಿನ ಎದೆಯಮೇಲಿಟ್ಟು ಕೆಳಗಿಳಿಸುವುದಕ್ಕೆ ಇನ್ನೂರೋ ಐನೂರೋ ಶುಲ್ಕ ವಿಧಿಸುತ್ತಾರೆ. ಇನ್ನು ಯಾವುದಾದರು ಆಪರೇಶನ್ನು ಅಂದರೆ ಮುಗಿದೇ ಹೋಯ್ತು ಲಕ್ಷವಾದರೂ ಜೇಬಿಗೆ ಭಾರವಾಗುವುದು ಗ್ಯಾರಂಟಿ, ಅದರಲ್ಲೂ ಹೃದಕ್ಕೆ ಸಂಬಂಧಿಸಿದ ಕಾಯಿಲೆಗಳೆಂದರೆ  ಲಕ್ಷಗಳೆಲ್ಲಾ ಅಲಕ್ಷ್ಯ. ಅವೆಲ್ಲವೂ ಸಿರಿವಂತರ ಕಾಯಿಲೆಗಳೆಂದು ಬಡವರಿಗೆ ಬಂದರೆ ಸಾವೇ ಗತಿ ಎನ್ನುವಂತಹ ಸಂದರ್ಭದಲ್ಲಿ ಔಷದೋಪಚಾರದ ಸಹಿತ ಆಪರೇಷನ್ನು ಸೇರಿದಂತೆ ಎಲ್ಲವನ್ನೂ ಮುಗಿಸಿ ಆ ರೋಗಿ ಗುಣಮುಖರಾಗುವವರೆಗೂ ಎಲ್ಲವನ್ನೂ ಉಚಿತವಾಗಿ ಕೊಡುವುದು ಸಾಮಾನ್ಯದ ಮಾತಲ್ಲ!!! ಕೋಟ್ಯಾಂತರ ಖರ್ಚಾಗುವ ಇಂಜಿನಿಯರಿಂಗ್ ಹಾಗು ವೈದ್ಯಕೀಯ ಸೀಟುಗಳನ್ನು ಉಚಿತವಾಗಿ ಅಂಕಗಳ ಆಧಾರದ ಮೇಲೆ ಹಂಚಿ ಅವರ ವಿದ್ಯಾಭ್ಯಾಸದ ಸಂಪೂರ್ಣ ಖರ್ಚುವೆಚ್ಚ ಭರಿಸುವುದು ಸುಲುಭದ ಮಾತಲ್ಲ. ಹುಲ್ಲು ಕಡ್ಡಿಯೂ ಬೆಳೆಯದಂತಹ ಅನಂತಪುರವೆಂಬ ರಾಯಲ ಸೀಮೆಯ ಜಿಲ್ಲೆಗೆ ನೀರೊದಗಿಸಲು ಸಾಧ್ಯವಿಲ್ಲ ಎಂದು ಕೈಚೆಲ್ಲಿ ಕುಳಿತ ಸರ್ಕಾರಕ್ಕೆ ಸವಾಲೆಸೆದು ನೀರೊದಗಿಸಿದ್ದು ಇದೇ ಬಾಬಾ ರವರ ಇಚ್ಚಾಶಕ್ತಿಯ ಪವಾಡ. ಇಂದಿಗೂ ಸಹ ಪ್ರಪಂಚದಾದ್ಯಂತ ಇರುವ ಅವರ ಸಾವಿರಾರು ಶಿಕ್ಷಣ ಸಂಸ್ಥೆಗಳಲ್ಲಿ ಎಲ್ಲವೂ ಉಚಿತ. " ಓಹೋ !! ಅದರಲ್ಲೇನು ಬಾಬ ಪವಾಡವಿಲ್ಲ!! ಸೇವೆ ಸಲ್ಲಿಸುವ ಸಮಾನ ಮನಸ್ಕರಿಂದ ಎಲ್ಲವೂ ಉಚಿತವಾಗಿದೆಯೇ ಹೊರತು ಬಾಬಾ ಪವಾಡದಿಂದಲ್ಲ" ಎನ್ನುವ ಸಿನಿಕರಿಗೂ ಸಹ ಗೊತ್ತಿರುತ್ತದೆ ಅಂತಹ ಸಮಾನ ಮನಸ್ಕರನ್ನು ಒಗ್ಗೂಡಿಸುವ  ಶಕ್ತಿ ಇದ್ದದ್ದೂ ಬಾಬ ರವರಿಗೆ ಮಾತ್ರ.

ಅಂತಹ ಪವಾಡ ಪುರುಷನನ್ನು ಕಳೆದುಕೊಂಡ ಭಾರತದ ಸಮಾಜ ನಿಜಕ್ಕೂ ಬಡವಾಗಿದೆ. ಬಡವ - ಬಲ್ಲಿದ, ರಾಜಕಾರಣಿ - ಸಾಮಾನ್ಯ ಮಾನವ ಎಲ್ಲರನ್ನೂ ಸಮಚಿತ್ತದಿಂದ ಕಾಣುತ್ತ, ಉಳ್ಳವರಿಂದ ಸಂಗ್ರಹಿಸಿ ಸಮಾಜದ ಹಿತಕ್ಕಾಗಿ ದುಡಿದ ’ಸತ್ಯ ಸಾಯಿ ಬಾಬಾ’ರವರಂತಹವರು ಇಂದಿನ ಸ್ವಾರ್ಥ ಸಮಾಜಕ್ಕೆ ನಿಜಕ್ಕೂ ಅವಶ್ಯಕ.

ಅದಕ್ಕಾದರೂ ಮತ್ತೆ ಹುಟ್ಟಿ ಬಾ ಬಾ!!!

ಶನಿವಾರ, ಏಪ್ರಿಲ್ 16, 2011

ಸ್ವಾಮಿ ದೇವನೆ ಲೋಕಪಾಲನೆ..............

ಹೀಗೆ ಪ್ರಾರಂಭವಾಗುವ ಹಳೆಯ ಕನ್ನಡ ಚಿತ್ರಗೀತೆ ಇಂದು ಎಲ್ಲಾ ರಾಜಕಾರಣಿಗಳ ಅಧಿಕಾರಶಾಹಿಗಳ ಜಪದ ಗೀತೆಯಾಗಿದೆ.
ಹೌದು ಲೋಕಾಯುಕ್ತವೆಂಬ ಹಗ್ಗದ ಹಾವನ್ನು ತೋರಿಸುತ್ತ "ಭ್ರಷ್ಟಾಚಾರವನ್ನು ಹತ್ತಿಕ್ಕುತ್ತಿದ್ದೇವೆ" ಎನ್ನುತ್ತಿದ್ದ ಭ್ರಷ್ಟಶಾಹಿಗಳ ನಿದ್ದೆಗೆಡಿಸಿದ್ದು "ಅಣ್ಣ ಹಜಾರೆ" ಎಂಬ ಒಬ್ಬ ಸಾಮಾನ್ಯ ಮನುಷ್ಯ.
ಮಿತಿಮೀರುತ್ತಿರುವ ಭ್ರಷ್ಟಾಚಾರ ನಿಜಕ್ಕೂ ಅಭಿವೃದ್ಧಿಗೆ ದೊಡ್ಡ ತೊಡರುಗಾಲು. ಅದಕ್ಕೆ ಕಡಿವಾಣ ಹಾಕದಿದ್ದಲ್ಲಿ ಅಭಿವೃದ್ಧಿಯ ನಾಗಾಲೋಟದಲ್ಲಿರುವ ನಮ್ಮ ದೇಶ ಪಾಕಿಸ್ತಾನ, ಸೋಮಾಲಿಯಾ ಮತ್ತಿತರ ಅತೀ ಭ್ರಷ್ಟ ರಾಷ್ಟ್ರಗಳಿಗಿಂತ ಕಡೆಯಾದೀತು. ಇದು ಯಾರಿಗೂ ತಿಳಿಯದ್ದೇನಲ್ಲ. ಎಲ್ಲರಿಗೂ ಗೊತ್ತಿರುವ ವಿಚಾರವೇ ಆದರೂ ಸಮರ್ಥ ಮುಂದಾಳತ್ವದ ಕೊರತೆಯಿತ್ತು, ಅದನ್ನು ನೀಗಿಸಿದ್ದು ಹಿರಿಯ ಜೀವಿ "ಅಣ್ಣಾ ಹಜಾರೆ" ಇಅದರ ಹೋರಾಟ ಮುಗಿದು ಕೇಂದ್ರ ಸರ್ಕಾರವೂ ಲೋಕಪಾಲ ಕಾಯ್ದೆ ಜಾರಿಗೊಳಿಸಲು ಒಪ್ಪಿಗೆ ಸೂಚಿಸಿದೆ.
    ಇದು ಸ್ವಾಗತಾರ್ಹವೇ ಆದರೆ ನಿಜಕ್ಕೂ ಉತ್ತಮ ಲೋಕಪಾಲ ಕಾಯ್ದೆ ಜಾರಿಯಾಗುತ್ತದೆಯೇ? ಭ್ರಷ್ಟಚಾರ ತೊಲಗುತ್ತದೆಯೇ? ಎನ್ನುವ ಅನುಮಾನಗಳಿಗೆ ಉತ್ತರಸಿಗುವುದು ಅಷ್ಟು ಸುಲಭವಲ್ಲ. ಈ ಅನುಮಾನಗಳಿಗೆ ಪ್ರಮುಖ ಕಾರಣ ಈ ಹೋರಕ್ಕೆ ಮುಂಚಿನ ಲೋಕಪಾಲ ಕಾಯ್ದೆ ಜಾರಿಗೆ ಆಗಿರುವ ಪ್ರಯತ್ನಗಳು, ಅವುಗಳನ್ನು ಅಂಗೀಕರಿಸದಿರಲು ಆಡಳಿತ ಮತ್ತು ವಿಪಕ್ಷಗಳ ಒಗ್ಗಟ್ಟು, ಕಾರ್ಪೋರೇಟ್ ಲಾಬಿಗಳು ಅಷ್ಟೇ ಅಲ್ಲದೆ ಒಂದು ವಾರದಿಂದೀಚೆಗೆ ಜರುಗುತ್ತಿರುವ ಹೋರಾಟೋತ್ತರ ಕ್ಷಿಪ್ರ ಬೆಳವಣಿಗೆಗಳು ಅದರಲ್ಲೂ ಕಪಿಲ್ ಸಿಬಲ್ ರ ಕಾಲೆಳೆವ ಹೇಳಿಕೆಗಳು, ಕುಮಾರ ಸ್ವಾಮಿಯಂತವರ ಕುಟುಕು ಹೇಳಿಕೆಗಳು, ಎಲ್ಲಕ್ಕಿಂತ ಹೆಚ್ಚಾಗಿ ಕರಡು ಸಮಿತಿಯ ಸದಸ್ಯರ ನಿಜಾಯಿತಿಯ ಬಗ್ಗೆ ಹೊಗೆಯಾಡುತ್ತಿರುವ ವಿವಾದಗಳು ಉತ್ತಮ ಲೋಕಪಾಲ ಕಾಯ್ದೆ ಜಾರಿಯಾಗುತ್ತದೆ ಎಂಬ ನಂಬಿಕೆಯನ್ನು ಜನರಲ್ಲಿ ಮೂಡಿಸುವಲ್ಲಿ ಸಫಲವಾಗಿಲ್ಲ ಎನ್ನುವುದೂ ಸತ್ಯ.
ಇವೆಲ್ಲವನ್ನು ಒತ್ತಟ್ಟಿಗಿಟ್ಟು ಲೋಕಪಾಲ ಕಾಯ್ದೆಯ ಪೂರ್ವಾಪರಗಳತ್ತ ಒಂದು ನೋಟ ಹರಿಸೋಣ
ಪ್ರಥಮಬಾರಿಗೆ ಲೋಕಪಾಲ ಕಾಯ್ದೆಯನ್ನು ೧೯೬೮ ರಲ್ಲಿ ಮಂಡಿಸಲಾಯ್ತು, ಅದಾದ ನಂತರ ೧೯೭೧, ೭೭, ೮೫, ೮೯, ೯೬, ೯೮ ಮತ್ತು ೨೦೦೧ರಲ್ಲಿ ಒಟ್ಟು 8 ಬಾರಿ ಲೋಕಪಾಲ ಮಸೂದೆಯನ್ನು ಸಂಸತ್‌ನಲ್ಲಿ ಮಂಡಿಸಿದೆ. ಯಾವಸಾರಿಯೂ ಸಹ ಕಾಯ್ದೆಯ ಅಂಗೀಕಾರವಾಗಲೇ ಇಲ್ಲ. ಯಾರಿಗೆ ತಾನೆ ದೊಣ್ಣೆ ಕೊಟ್ಟು ಹೊಡೆಸಿಕೊಳ್ಳಕೆ ಇಷ್ಟ ಅಲ್ಲವೇ? ಆದರೆ ಇದರಿಂದ ಹಲ್ಲಿಲ್ಲದ ಹಾವು ಲೋಕಾಯುಕ್ತ ಹುದ್ದೆ ಸೃಷ್ಠಿಯಾಯ್ತು.

ಲೋಕಾಯುಕ್ತ ಸಂಸ್ಥೆ ಮತ್ತು ಅದರ ಅಧಿಕಾರವ್ಯಾಪ್ತಿ


ಅರ್ಹತೆ
ಲೋಕಾಯುಕ್ತ ಹುದ್ದೆಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಥವಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಕೆಲಸ ಮಾಡಿರಬೇಕು. ಅದೇ ರೀತಿ ಉಪ ಲೋಕಾಯುಕ್ತ ಹುದ್ದೆಗೆ ಏರುವ ವರು ಹೈಕೋರ್ಟ್ ನ್ಯಾಯಮೂರ್ತಿಯಾಗಿ ಕೆಲಸ ಮಾಡಿರಬೇಕು.
ಲೋಕಾಯುಕ್ತ, ಉಪ ಲೋಕಾಯುಕ್ತರ ನೇಮಕ
ಇವರನ್ನು ನೇಮಿಸುವುದು ರಾಜ್ಯಪಾಲರು. ಮುಖ್ಯಮಂತ್ರಿಗಳು, ಹೈಕೋರ್ಟ್ ಮುಖ್ಯ ನ್ಯಾಯ ಮೂರ್ತಿ, ವಿಧಾನಸಭೆ ಅಧ್ಯಕ್ಷ, ವಿಧಾನ ಪರಿಷತ್ ಸಭಾಪತಿ, ಎರಡೂ ಸದನಗಳ ಪ್ರತಿಪಕ್ಷ ನಾಯಕರ ಜತೆ ಸಮಾಲೋಚನೆ ನಡೆಸಿ ಲೋಕಾಯುಕ್ತ ಮತ್ತು ಉಪ ಲೋಕಾಯುಕ್ತರು ಯಾರು ಎಂಬುದನ್ನು ನಿರ್ಧರಿಸಬೇಕು.
ಈ ಸಂದರ್ಭದಲ್ಲಿ ಮೇಲಿನ ಅರ್ಹತೆಯನ್ನು ಕಡ್ಡಾಯವಾಗಿ ಪಾಲಿಸಬೇಕು. ಈ ಎಲ್ಲಾ ಪ್ರಕ್ರಿಯೆ ಮುಗಿದ ಬಳಿಕ ಲೋಕಾಯುಕ್ತ ಅಥವಾ ಉಪ ಲೋಕಾಯುಕ್ತರ ಹೆಸರನ್ನು ರಾಜ್ಯಪಾಲರಿಗೆ ಕಳುಹಿಸಬೇಕು. ರಾಜ್ಯಪಾಲರು ಈ ನೇಮಕವನ್ನು ಅಧಿಕೃತವಾಗಿ ಪ್ರಕಟಿಸುತ್ತಾರೆ.
ಅಧಿಕಾರ ವ್ಯಾಪ್ತಿ
ಮುಖ್ಯಮಂತ್ರಿ, ಸಚಿವ ಸಂಪುಟದ ಸದಸ್ಯರು, ರಾಜ್ಯ ಸರ್ಕಾರದ ಎಲ್ಲಾ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಪೋರೇಷನ್‌ಗಳ ಆಡಳಿತ ಮಂಡಳಿಗಳು, ಸಹಕಾರ ಸಂಘಗಳು, ಸರ್ಕಾರಿ ಸ್ವಾಮ್ಯದ ಎಲ್ಲಾ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಅಧಿಕಾರಿಗಳು, ರಾಜ್ಯ ಸರ್ಕಾರ ಶೇ. ೫೦ಕ್ಕಿಂತ ಹೆಚ್ಚು ಷೇರುಗಳನ್ನು ಹೊಂದಿರುವ ಕಂಪನಿಗಳು, ನೋಂದಣಿ ಮಾಡಿದ ಸೊಸೈಟಿಗಳು ಲೋಕಾಯುಕ್ತರ ವ್ಯಾಪ್ತಿಗೆ ಬರುತ್ತವೆ.
ಈ ಪೈಕಿ ಕೆ‌ಎ‌ಎಸ್‌ವರೆಗಿನ ಅಧಿಕಾರಿಗಳು ಉಪ ಲೋಕಾಯುಕ್ತ ವ್ಯಾಪ್ತಿಗೆ ಬಂದರೆ, ಅದಕ್ಕಿಂತ ಮೇಲಿನ ಅಧಿಕಾರಿಗಳು, ಜನಪ್ರತಿನಿಧಿಗಳು ಲೋಕಾಯುಕ್ತರ ಅಧಿಕಾರ ವ್ಯಾಪ್ತಿಗೆ ಬರುತ್ತಾರೆ.
ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆ ಉದಯ
ದೇಶದಲ್ಲೇ ಮುಂಚೂಣಿಯಲ್ಲಿರುವ ರಾಜ್ಯ ಲೋಕಾಯುಕ್ತ ಸಂಸ್ಥೆ ರಾಜ್ಯದಲ್ಲಿ ಆರಂಭವಾಗಿದ್ದು ಮಾತ್ರ ಸ್ವಲ್ಪ ತಡವಾಗಿ. ಮೊದಲ ಲೋಕಾಯುಕ್ತ ಸಂಸ್ಥೆ ೧೯೭೧ರಲ್ಲಿ ಮಹಾರಾಷ್ಟ್ರದಲ್ಲಿ ಆರಂಭವಾದರೆ, ಇದು ರಾಜ್ಯಕ್ಕೆ ಕಾಲಿಟ್ಟಿದ್ದು ೧೯೮೪ರಲ್ಲಿ. ಆಗ ಈ ಸಂಸ್ಥೆಗೆ ಅಷ್ಟೊಂದು ಮಹತ್ವ ಇರಲಿಲ್ಲ.೧೯೮೪ರಲ್ಲಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ ಆರಂಭವಾದ ಲೋಕಾಯುಕ್ತ ಸಂಸ್ಥೆಗೆ ಆರಂಭದಲ್ಲಿ ಪರಮಾಧಿಕಾರ ನೀಡಲಾಗಿತ್ತು.
ಆದರೆ, ನಂತರ ಅದನ್ನು ವಾಪಸ್ ಪಡೆಯಲಾಯಿತು. ಇದು ಕೂಡ ಹೆಗಡೆ ಕಾಲದಲ್ಲೆ. ಲೋಕಾ ಯುಕ್ತರ ಕೆಲಸ ಕೇವಲ ಭ್ರಷ್ಟಾಚಾರ ನಿಯಂತ್ರಣ ಮಾತ್ರವಲ್ಲ. ಭ್ರಷ್ಟಾಚಾರ ನಿಯಂತ್ರಣ ಅವರ ಒಟ್ಟಾರೆ ಕೆಲಸದ ಶೇ. ೧೦ರಷ್ಟು ಮಾತ್ರ. ಉಳಿದಂತೆ ಸರ್ಕಾರದ ಸೌಲಭ್ಯಗಳನ್ನು ಜನರಿಗೆ ಒದಗಿಸುವುದು, ಈ ವಿಚಾರದಲ್ಲಿ ಅನ್ಯಾಯ ಆಗಿದ್ದರೆ ಅದನ್ನು ಸರಿಪಡಿಸುವುದು ಕೂಡ ಲೋಕಾ ಯುಕ್ತ ಸಂಸ್ಥೆಯ ಪ್ರಮುಖ ಕೆಲಸ.
ಆದರೆ, ಭ್ರಷ್ಟಾಚಾರ ನಿಯಂತ್ರಣಕ್ಕೆ ಹೆಚ್ಚು ಜನ ಬೆಂಬಲ ಮತ್ತು ಪ್ರಚಾರ ಸಿಕ್ಕಿದ್ದರಿಂದ ಅದುವೇ ಪ್ರಧಾನ ಕೆಲಸ ಎಂಬಂತೆ ಬಿಂಬಿತವಾಯಿತು.
ಅನಾನುಕೂಲತೆಗಳು
ನಿಜವಾಗಿಯೂ ಲೋಕಾಯುಕ್ತ ಸಂಸ್ಥೆ ಒಂದು ಹಲ್ಲಿಲ್ಲದ ಹಾವು. ಅಧಿಕಾರಿಗಳ ವಿರುದ್ಧ ದಾಳಿ ನಡೆಸುವ, ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡುವ ಅಧಿಕಾರ ಮಾತ್ರ ಈ ಸಂಸ್ಥೆಗೆ ಇದೆ. ಮತ್ತೊಂದು ಪ್ರಮುಖ ಅಂಶವೆಂದರೆ ಉಪ ಲೋಕಾಯುಕ್ತರಿಗೆ ಇರುವ ಅಧಿಕಾರವೂ ಲೋಕಾಯುಕ್ತರಿಗೆ ಇಲ್ಲ. ಯಾವುದೇ ವಿಚಾರವಾಗಲಿ ಉಪ ಲೋಕಾಯುಕ್ತರು ತಮ್ಮ ವ್ಯಾಪ್ತಿಗೆ ಬರುವ ಪ್ರಕರಣಗಳ ಬಗ್ಗೆ ಸ್ವಯಂಪ್ರೇರಿತ ತನಿಖೆ ಕೈಗೊಳ್ಳಬಹುದು.
ಆದರೆ, ಲೋಕಾಯುಕ್ತರಿಗೆ ಆ ಅಧಿಕಾರ ಇಲ್ಲ. ಯಾರಾದರೂ ದೂರು ನೀಡಿದರೆ ಅಥವಾ ಸರ್ಕಾರ ವಹಿಸಿದರೆ ಮಾತ್ರ ತನಿಖೆ ನಡೆಸಬೇಕು. ಅದೇ ರೀತಿ ಸರ್ಕಾರದ ಅನುಮತಿ ಇಲ್ಲದೆ ಅಧಿಕಾರಿ ಗಳನ್ನು ವಿಚಾರಣೆಗೆ ಒಳಪಡಿಸುವ ಅಧಿಕಾರವೂ ಲೋಕಾಯುಕ್ತರಿಗೆ ಇಲ್ಲ.
ಲೋಕಾಯುಕ್ತ ಸಂಸ್ಥೆ
ಆಡಳಿತ ಶಾಖೆ. ರಿಜಿಸ್ಟ್ರಾರ್ (ನಿಬಂಧಕರು) ಈ ವಿಭಾಗದ ಮುಖ್ಯಸ್ಥರು. ದೂರು ಸ್ವೀಕರಿಸುವ ಮತ್ತು ಅಧಿಕಾರಿಗಳಿಗೆ ಇದನ್ನು ವಿತರಿಸುವ ಅಧಿಕಾರ ಹೊಂದಿದ್ದಾರೆ.
ಪೊಲೀಸ್ ಶಾಖೆ. ಎಡಿಜಿಪಿ ಇದರ ಮುಖ್ಯಸ್ಥರು. ಇವರ ಕೈಕೆಳಗೆ ಆಯಾ ಜಿಲ್ಲಾ ಮಟ್ಟದಲ್ಲಿ ಲೋಕಾಯುಕ್ತ ಪೊಲೀಸರು ಇರುತ್ತಾರೆ. ಭ್ರಷ್ಟಾಚಾರ ಕುರಿತ ತನಿಖೆ ಪೊಲೀಸರು ನಡೆಸುತ್ತಾರೆ.
ತಾಂತ್ರಿಕ ವಿಭಾಗ. ಮುಖ್ಯ ಎಂಜಿನಿಯರ್ ನೇತೃತ್ವದಲ್ಲಿ ಇದು ಕಾರ್ಯನಿರ್ವಹಿಸುತ್ತದೆ. ಲೋ ಕೋಪಯೋಗಿ, ನೀರಾವರಿ ಇಲಾಖೆ ಇತ್ಯಾದಿ ತಾಂತ್ರಿಕ ಇಲಾಖೆಗೆ ಸಂಬಂಧಿಸಿದ ತನಿಖೆ ನಡೆಸುತ್ತಾರೆ.
ಈ ಮೂರೂ ವಿಭಾಗಗಳಿಗೆ ಲೋಕಾಯುಕ್ತರು ಮತ್ತು ಉಪ ಲೋಕಾಯುಕ್ತರು ಮುಖ್ಯಸ್ಥರಾಗಿರು ತ್ತಾರೆ. ಆದರೆ, ಲೋಕಾಯುಕ್ತರು ಮತ್ತು ಉಪ ಲೋಕಾಯುಕ್ತರು ಪ್ರತ್ಯೇಕವಾಗಿ ಕೆಲಸ ಮಾಡು ತ್ತಾರೆ. ಯಾರಿಗೆ ಯಾರೂ ಅಧೀನರಲ್ಲ.
ಇಷ್ಟಕ್ಕೂ ಈ ಲೋಕಾಯುಕ್ತ ಅಥವಾ ಉಪ ಲೋಕಾಯುಕ್ತ ಎಂಬ ಸಂಸ್ಥೆ ಹುಟ್ಟಿಕೊಳ್ಳಲು ಮೂಲ ಓಂಬುಡ್ಸ್‌ಮನ್. ೧೯೬೦ರ ದಶಕದಲ್ಲಿ ದೇಶಕ್ಕೆ ಕಾಲಿಟ್ಟ ಓಂಬುಡ್ಸ್‌ಮನ್ ವ್ಯವಸ್ಥೆಯೇ ಮುಂದಿನ ದಿನಗಳಲ್ಲಿ ಲೋಕಾಯುಕ್ತ ಸಂಸ್ಥೆಯಾಗಿ ಪರಿವರ್ತನೆ ಹೊಂದಿತು.
ಲೋಕಾಯುಕ್ತ ಅಥವಾ ಉಪ ಲೋಕಾಯುಕ್ತ ನೇಮಕ ವಿಚಾರದಲ್ಲಿ ಬೇರೆ ಬೇರೆ ರಾಜ್ಯಗಳು ತಮ್ಮದೇ ಆದ ನಿಯಮಗಳನ್ನು ಹೊಂದಿದೆ. ಕೆಲವು ರಾಜ್ಯಗಳಲ್ಲಿ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಅಥವಾ ಹೈಕೋರ್ಟ್‌ನಲ್ಲಿ ೭ ವರ್ಷ ನ್ಯಾಯಮೂರ್ತಿಯಾಗಿದ್ದರೆ ಸಾಕು. ಅದೇ ರೀತಿ ಉಪ ಲೋಕಾಯುಕ್ತರಾಗುವವರು ಹೈಕೋರ್ಟ್ ನ್ಯಾಯಮೂರ್ತಿಯಾಗಿರಬೇಕು ಎಂಬ ನಿಯಮ ರಾಜ್ಯದಲ್ಲಿ ಜಾರಿಯಲ್ಲಿದೆ.
ಆದರೆ, ಇತರ ಕೆಲವು ರಾಜ್ಯಗಳಲ್ಲಿ ಸರ್ಕಾರದ ಕಾರ್ಯದರ್ಶಿ ಅಥವಾ ಏಳು ವರ್ಷ ಜಿಲ್ಲಾ ನ್ಯಾಯಾಧೀಶರು ಅಥವಾ ಕೇಂದ್ರ ಸರ್ಕಾರದ ಜಂಟಿ ಕಾರ್ಯದರ್ಶಿ ಹುದ್ದೆ ಏರಿದವರು ಈ ಹುದ್ದೆಗೆ ಅರ್ಹರು. ಇನ್ನು ದೂರಿನ ವಿಚಾರದಲ್ಲೂ ಸಾಕಷ್ಟು ಬದಲಾವಣೆಗಳಿವೆ. ಕೆಲವು ರಾಜ್ಯ ಗಳಲ್ಲಿ ದೂರುಗಳನ್ನು ಇಂತಿಷ್ಟು ಅವಧಿಯಲ್ಲಿ ನೀಡಬೇಕು ಎಂದು ಇದೆ. ಇನ್ನು ಕೆಲವು ಕಡೆ ಅಂತಹ ಯಾವುದೇ ಕಾಲಮಿತಿ ಇಲ್ಲ. ಮತ್ತೊಂದೆಡೆ ದೂರು ನೀಡಲು ನಿರ್ದಿಷ್ಟ ಶುಲ್ಕ ಪಾವತಿ ಸಬೇಕು ಎಂಬ ನಿಯಮ ಇದೆ.

ಲೋಕಪಾಲ ಕಾಯ್ದೆಯೋ ಜನ ಲೋಕಪಾಲ ಕಾಯ್ದೆಯೋ?
ಇಲ್ಲಿ ಕೇಳಿಬರುತ್ತಿರುವ ಲೋಕಪಾಲ, ಜನ ಲೋಕಪಾಲ ಎಂಬ ಪದಗಳಿಗೆ ಒಂದಿಷ್ಟು ಸ್ಪಷ್ಟನೆ: ಲೋಕಪಾಲ ಮಸೂದೆ ಎಂಬುದು ಸರಕಾರ ಸಿದ್ಧಪಡಿಸುತ್ತಿರುವ ಮಸೂದೆಯಾಗಿದ್ದು, ಜನ ಲೋಕಪಾಲ ಮಸೂದೆ ಎಂಬುದು ಅಣ್ಣಾ ಹಜಾರೆ ನೇತೃತ್ವದಲ್ಲಿ ಜನರಿಂದಲೇ ರೂಪುಗೊಳ್ಳುವ ಮಸೂದೆಯಾಗಿರುತ್ತದೆ
ಸರಕಾರದ ಪ್ರಸ್ತಾಪದಲ್ಲಿರುವುದು - ಲೋಕಪಾಲ ಕಾಯ್ದೆ
ಲೋಕಪಾಲರಿಗೆ ಭ್ರಷ್ಟರ ವಿರುದ್ಧ ತಾವಾಗಿಯೇ ಕ್ರಮ ಆರಂಭಿಸುವ ಅಧಿಕಾರವಿರುವುದಿಲ್ಲ ಅಥವಾ ಅವರು ಭ್ರಷ್ಟಾಚಾರದ ಕುರಿತು ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸುವಂತಿಲ್ಲ. ಲೋಕಸಭಾ ಸ್ಪೀಕರ್ ಅಥವಾ ರಾಜ್ಯಸಭಾ ಅಧ್ಯಕ್ಷರು ಅನುಮತಿ ಮೂಲಕ ಬಂದ ದೂರುಗಳನ್ನು ಮಾತ್ರವೇ ಅದು ತನಿಖೆ ನಡೆಸಬೇಕು. (ಇದು ಆಡಳಿತಾರೂಢ ಪಕ್ಷಕ್ಕೆ ತನ್ನನ್ನು ತಾನು ರಕ್ಷಿಸಿಕೊಳ್ಳುವ ಉಪಾಯ.)
ಲೋಕಪಾಲ ಎಂಬುದು ಸಲಹಾ ಸಂಸ್ಥೆಯಾಗಿರುತ್ತದೆ. ಅದು ಅದರ ತನಿಖಾ ವರದಿಯನ್ನು ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರವಿರುವ "ಜವಾಬ್ದಾರಿಯುತ ಮಂಡಳಿಗೆ" ಸಲ್ಲಿಸುತ್ತದೆ. (ಹಾಗಿದ್ದರೆ, ಲೋಕಪಾಲರು ಪ್ರಧಾನಮಂತ್ರಿ ವಿರುದ್ಧವೇ ವರದಿ ಸಲ್ಲಿಸಿದರೆ, ಅವರ ವಿರುದ್ಧ ಕ್ರಮ ಕೈಗೊಳ್ಳುವ ನಿರ್ಣಯ ತೆಗೆದುಕೊಳ್ಳುತ್ತದೆಯೇ?)
ಲೋಕಪಾಲರಿಗೆ ಪೊಲೀಸ್ ಅಧಿಕಾರಗಳಿಲ್ಲ. ಅದರ ಎಲ್ಲ ತನಿಖೆಗಳು 'ಪ್ರಾಥಮಿಕ ತನಿಖೆಗಳಿಗೆ' ಸಮ. (ಹಾಗಿದ್ದರೆ, ಅದರ ವರದಿ ಅಂಗೀಕೃತವಾದರೆ ಚಾರ್ಜ್ ಶೀಟ್ ಸಲ್ಲಿಸುವುದು ಯಾರು?)
ಮಸೂದೆ ಜಾರಿಗೆ ಬಂದ ಬಳಿಕ ಕೇಂದ್ರೀಯ ತನಿಖಾ ಮಂಡಳಿಯ ಪಾತ್ರ ಏನು ಎಂಬುದರ ಉಲ್ಲೇಖವಿಲ್ಲ. ರಾಜಕಾರಣಿಗಳ ವಿರುದ್ಧ ತನಿಖೆ ಕೈಗೊಳ್ಳುವ ಸಿಬಿಐ ಅಧಿಕಾರ ಹೋಗುತ್ತದೆಯೇ?
ಭ್ರಷ್ಟಾಚಾರಕ್ಕೆ ತೀರಾ ಸಣ್ಣ ಶಿಕ್ಷೆ - ಕನಿಷ್ಠ ೬ ತಿಂಗಳು, ಗರಿಷ್ಠ ೭ ವರ್ಷ.
ಅಕ್ರಮ ಸಂಪತ್ತು ಹೊರತೆಗೆಯುವ ಅಧಿಕಾರವಿಲ್ಲ. ಅಂದರೆ ಯಾವುದೇ ಭ್ರಷ್ಟ ವ್ಯಕ್ತಿಯು ಜೈಲಿನಿಂದ ಹೊರಬಂದ ಬಳಿಕ, ಅದೇ ಹಣ-ಸಂಪತ್ತನ್ನು ಬಳಸಿಕೊಳ್ಳಬಹುದಾಗಿದೆ.
ಈ ಅಂಶಗಳನ್ನು ನೋಡಿದ ಯಾರಿಗಾದರೂ ತಿಳಿಯುತ್ತದೆ ಇದೊಂದು ಕಣ್ಣೊರುವ ತಂತ್ರದ ಕಾಯ್ದೆ ಎಂದು
ಇನ್ನು ಜನ ಲೋಕಪಾಲ ಕಾಯ್ದೆ ಅಂದ್ರೆ ಅಣ್ಣಾ ಹಜಾರೆಯವರ ಪ್ರಸ್ತಾಪದ ಕಾಯ್ದೆಯಬಗ್ಗೆ ಗಮನ ಹರಿಸೋಣ
ಅಣ್ಣಾ ಹಜಾರೆಯವರ ಪ್ರಸ್ತಾಪದ - ಜನ ಲೋಕಪಾಲ ಕಾಯ್ದೆ
ಯಾವುದೇ ಕೇಸಿನಲ್ಲಿ ತಾವಾಗಿಯೇ ತನಿಖೆ ಆರಂಭಿಸುವ ಹಕ್ಕು ಲೋಕಪಾಲರಿಗೆ ಇರಬೇಕು ಮತ್ತು ನೇರವಾಗಿ ಸಾರ್ವಜನಿಕರಿಂದ ಅವರು ದೂರುಗಳನ್ನು ಸ್ವೀಕರಿಸಬಹುದು. ಯಾವುದೇ ಕೇಸಿನ ತನಿಖೆ ಆರಂಭಿಸಲು ಯಾರದೇ ಅನುಮತಿ ಅಥವಾ ಉಲ್ಲೇಖಗಳು ಬೇಕಾಗಿಲ್ಲ.
ಲೋಕಪಾಲ ಎಂಬುದು ಸಲಹಾ ಸಂಸ್ಥೆಯಲ್ಲ. ಕೇಸಿನ ವಿಚಾರಣೆ ಪೂರ್ಣಗೊಳಿಸಿದ ಬಳಿಕ ಶಿಕ್ಷೆ ವಿಧಿಸುವ ಹಕ್ಕು ಕೂಡ ಅದಕ್ಕೆ ಇರಬೇಕು. ಯಾವುದೇ ಸರಕಾರಿ ನೌಕರರ ವಿರುದ್ಧ ಶಿಸ್ತು ಕ್ರಮ ಆದೇಶಿಸುವ ಅಧಿಕಾರವನ್ನೂ ಅದು ಹೊಂದಿರಬೇಕು
ಲೋಕಪಾಲರಿಗೆ ಪೊಲೀಸ್ ಅಧಿಕಾರ ಬೇಕು. ಎಫ್ಐಆರ್ ದಾಖಲು ಮಾಡಲು, ಕ್ರಿಮಿನಲ್ ತನಿಖೆ ನಡೆಸಲು ಮತ್ತು ದಂಡನಾ ಕ್ರಮಗಳನ್ನು ಕೈಗೊಳ್ಳಲು ಅವರಿಗೆ ಅಧಿಕಾರ ಬೇಕು.
ಸಿಬಿಐಯ ಭ್ರಷ್ಟಾಚಾರ-ನಿಗ್ರಹ ಘಟಕವನ್ನು ಲೋಕಪಾಲ ಜೊತೆ ವಿಲೀನಗೊಳಿಸಬೇಕು. ಈ ಮೂಲಕ, ಭ್ರಷ್ಟಾಚಾರ ವಿರುದ್ಧ ಕ್ರಮ ಕೈಗೊಳ್ಳಲು ಏಕೈಕ ಸ್ವತಂತ್ರ ಸಂಸ್ಥೆ ಇರುವಂತಾಗುತ್ತದೆ.
ಶಿಕ್ಷೆ ಕಠಿಣವಾಗಬೇಕು. ಕನಿಷ್ಠ 5 ವರ್ಷಗಳು ಹಾಗೂ ಗರಿಷ್ಠ ಜೀವಾವಧಿ ಶಿಕ್ಷೆ.
ಭ್ರಷ್ಟಾಚಾರದಿಂದಾಗಿ ಸರಕಾರಕ್ಕೆ ಆಗುವ ನಷ್ಟವನ್ನು ಆಪಾದಿತರಿಂದಲೇ ವಸೂಲು ಮಾಡಬೇಕು.

ಹಜಾರೆಯವರ ಪ್ರಸ್ತಾವನೆಗಳೇನೋ ಜನ ಸ್ನೇಹಿ ಎನ್ನುವುದೇನೋ ಸರಿ. ಆದರೆ ಈ ಕಾಯ್ದೆ ಅಂಗೀಕಾರವಾಗಿ ಭ್ರಷ್ಟಾಚಾರ ತೊಲಗುವುದೋ ಅಥವಾ ಅಂಗೀಕಾರವಾಗದ ೯ನೇ ಕಾಯ್ದೆಯಾಗುವುದೋ ಕಾದು ನೋಡಬೇಕಿದೆ

ಮೇಲ್ನೋಟಕ್ಕೆ ಇದು ಸಾಧ್ಯವಾಗಬಹುದು, ಎಂದು ಅನ್ನಿಸುವುದು ಸಹಜವೇ, ಆದರೆ ಈ ಹಿಂದೆ ಶುರುವಾದ ಹೋರಾಟಗಳು ಅವುಗಳು ಕಂಡ ಅಂತ್ಯಗಳ ಬಗ್ಗೆ ಹಿನ್ನೋಟ ಹರಿಸಿದರೆ ಇದೂ ಸಹ ಅಂಗೀಕಾರವಾಗುವುದಿಲ್ಲ ಎನಿಸುತ್ತದೆ, ಆದರೂ ಸಹ ಅದು ದುರ್ಬಲವಾಗಿರುತ್ತದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಇದಕ್ಕೆ ಪುಷ್ಠಿ ನೀಡುವಂತೆ ಕಾಂಗ್ರೇಸ್ ಪಕ್ಷವು ಆಗಲೇ ಒಡೆದು ಆಳುವ ನೀತಿಯನ್ನು ಅನುಸರಿಸಲು ಸಚಿವರುಗಳಾದ ಕಪಿಲ್ ಸಿಬಲ್, ದಿಗ್ವಿಜಯ್ ಸಿಂಗ್ ಅವರುಗಳನ್ನು ಮಾಧ್ಯಮದ ಮುಂದೆ ಕೂರಿಸಿ ದಿನಕ್ಕೊಂದು ಹೇಳಿಕೆ ಕೊಡಿಸುತ್ತಿದ್ದರೆ, ಇತ್ತ ಕುಮಾರಸ್ವಾಮಿಯವರು ತಮ್ಮ ಸ್ಥಾನಕ್ಕೆ "ತಕ್ಕ" ಮಾತಗಳನ್ನಾಡುತ್ತಿದ್ದಾರೆ. ಇದಕ್ಕೆ ತಕ್ಕನಾಗಿ "ನ್ಯೂಸೆನ್ಸ್" ಚಾನೆಲ್ ಗಳು ವಿಚಿತ್ರವಾಗಿ ವರ್ತಿಸಿ ಜನರ ಮನಸ್ಸನ್ನು "ಪರಿವರ್ತಿಸಲು” ಅವಿರತ ಶ್ರಮಿಸುತ್ತಿವೆ.

ಏನೇ ಆಗಲಿ ಒಂದು ಒಳ್ಳೆಯ ಕಾಯ್ದೆ ರೂಪುಗೊಂಡು ಭ್ರಷ್ಟಾಚಾರ ತಹಂಬದಿಗೆ ಬರಲಿ ಎನ್ನುವುದು ನಮ್ಮೆಲ್ಲರ ಆಶಯವಲ್ಲವೇ?

ಭಾನುವಾರ, ಏಪ್ರಿಲ್ 10, 2011

ನಗಬೇಕು ನಗಬೇಕು

ಸೊಳ್ಳೆಗಳು ಬರ್ದೇ ಇರೋಕೆ.

.ಟೀಚರ್: ಸೊಳ್ಳೆಗಳು ಮನೆ ಒಳಗೆ ಬರ್ದೇ ಇರೋಕೆ ಏನ್ಮಾಡ್ಬೇಕು?

ಸರ್ದಾರ್: ಸಿಂಪಲ್!! ಮೇಡಂ, ಸೊಳ್ಳೆಗಳಿಗೆ ಮನೆ ಅಡ್ರೆಸ್ ಕೊಡ್ಬಾರ್ದು ಅಷ್ಟೇ!!!

ಸುಳ್ಳು ಹೇಳ್ಬೇಡ!!!

ಮೊಮ್ಮಗಳು:  ಅಜ್ಜಿ ನಾನು ಕಾಲೇಜ್ ಗೆ ಹೋಗಲ್ಲ

ಅಜ್ಜಿ : ಯಾಕೆ? ಏನಾಯ್ತಮ್ಮ

ಮೊಮ್ಮಗಳು: ರೋಡಲ್ಲಿ ಹೋಗೋವಾಗ ಹುಡುಗ್ರು ಚುಡಾಯ್ಸುತಾರೆ!!

ಅಜ್ಜಿ: ಸುಳ್ಳು ಹೇಳ್ಬೇಡ!! ನಾನೀಗ ತಾನೆ ಅದೇ ರೋಡಲ್ಲಿ ಬಂದೆ

ಜೋಕು ಸೆಕ್ಷನ್ ಫಸ್ಟ್ ಫ್ಲೋರಲ್ಲಿದೆ!!

ಹುಡುಗಿ : ಸರ್ ನಿಮ್ಮಲ್ಲಿ "Women - The Real Intelegent" ಅನ್ನೋ ಬುಕ್ ಇದ್ಯಾ??

ಲೈಬ್ರೆರಿಯನ್: ಸಾರಿ ಮೇಡಂ ಜೋಕು ಸೆಕ್ಷನ್ ಫಸ್ಟ್ ಫ್ಲೋರಲ್ಲಿದೆ!!

ರಸ್ತೆ ಮಧ್ಯ ಹೋದ್ರೆ.....

ರೋಡ್ನ ಬಲಗಡೆ ಹೋದ್ರೆ "Right side"

ರೋಡ್ನ ಎಡಗಡೆ ಹೋದ್ರೆ "Left Side"

ರೋಡ್ನ ಮಧ್ಯೆ ಹೋದ್ರೆ???....?????SUICIDE

ಏನು ಉಳೀತು??

ಮೇಷ್ಟ್ರು: ಲೋ!! ಗುಂಡಾ! ಎರಡರಲ್ಲಿ ಎರಡು ಹೋದ್ರೆ ಎಷ್ಟು ಉಳೀತೋ?

ಗುಂಡ: ವಸಿ ಅರ್ತಾ ಆಗೊಂಗ್ಯೋಳಿ ಸಾ!!

ಮೇಷ್ಟ್ರು: ನಿನ್ಹತ್ರ ಎರಡು ಇಡ್ಲಿ ಇದೆ ಅಂತ ಇಟ್ಕೊ, ಆ ಎರಡು ಇಡ್ಲೀನೂ ನೀನು ತಿನ್ಕೊಂಡ್ರೆ ಏನುಳೀತು?

ಗುಂಡ: ಚಟ್ನಿ ಉಳೀತು ಸಾ!!!

ನೀ ಸಾಯೋದು ಬಾಕಿ..

ಹುಡುಗಿ:  ನೀ ನನ್ನ ಎಷ್ಟು ಪ್ರೀತಿಸ್ತಿ?

ಹುಡುಗ: ಆ ಷಹಜಹನ್ ಮುಮ್ತಾಜಳನ್ನ ಪ್ರೀತಿಸಿದ್ದಕ್ಕಿಂತ ಹೆಚ್ಚಾಗಿ!!!

ಹುಡುಗಿ: ಹಾಗಿದ್ರೆ ನಂಗೆ ತಾಜ್ ಮಹಲ್ ಕಟ್ಟಿಸ್ತೀಯಾ?

ಹುಡುಗ: ಓಹೋ!! ಖಂಡಿತಾ ಅದ್ಕೆ ಲ್ಯಾಂಡು ಕೊಂಡ್ಕೊಂಡಿದೀನಿ ನೀ ಸಾಯೋದೊಂದೇ ಬಾಕಿ

ಬುಧವಾರ, ಮಾರ್ಚ್ 9, 2011

ಗುರಿಯ ದಾರಿ

ಎಂದೋ ಹಿಂದೊಮ್ಮೆ ಮೀಸೆ ಚಿಗುರುವ ಮುನ್ನ ಗೀಚಿದ್ದ ಕವನ, ಮೊನ್ನೆ ಮನೆ ಬದಲಾಯಿಸುವ ಮುನ್ನ ದೊರಕಿತು.

ಅದನ್ನೇ ಯಥಾವತ್ತಾಗಿ ಇಲ್ಲಿಡುತ್ತಿದ್ದೇನೆ

ನನ್ನ ಗುರಿಯ ದಾರಿಗೆ ನೀನೆ ಮೆಟ್ಟಿಲು

ನಿನ್ನ ದುಃಖ ಸುಖಗಳಿಗೆ ನನ್ನೆದೆಯೆ ನಿನಗೆ ತೊಟ್ಟಿಲು

ನಡೆವ ಮುಂದೆ ಮುಂದೆ ಸಾಗುತ

ಹೊಸ ಬಾಳೊಂದ ಜೊತೆಯಾಗಿ ಕಟ್ಟಲು

ಕನಸುಗಳ ಉಡುಗೆಯುಟ್ಟ ಮನಗಳಿರಲು

ನನಸುಗಳ ಏಣಿ ಅಣಿಯಾಗಿರಲು

ಎಷ್ಟು ಹೊತ್ತು ಆಕಾಶ ಮುಟ್ಟಲು?

ಆಯಾಸವಾದೊಡೆ ನಿನ ನಗುವಿನ ಪನ್ನೀರು

ಸಂತಸಕೆ ನೆನಹುಗಳ ಮೃಷ್ಠಾನ್ನದ ಬುತ್ತಿ

ಸಂಕಟಕೆ ಸಾಂತ್ವಾನ.

ನಡೆ ಮುಂದೆ ಸಾಗೋಣ ಎಲ್ಲವ ಮರೆತು

ಎಲ್ಲ ನೋವ ಮರೆತು, ಎಲ್ಲರೊಳು ಬೆರೆತು

ಸಾಗೋಣ ನಿರಂತರ

ಗುರಿಯ ತೀರ ಇನ್ನೇನು ಬರಿ ಮಾರು ದೂರ

ನಮ್ಮನ್ನು ಸೇರಲು ಆ ಗುರಿಗೂ ಕಾತರ

ಸೇರಲು ಗುರಿಯ ದಾರಿ ಎಲ್ಲ ಕಟ್ಟಳೆಗಳ ಮೀರಿ

ಭಾನುವಾರ, ಮಾರ್ಚ್ 6, 2011

ಅದ್ದೂರಿ ಸಾಹಿತ್ಯ ಸಮ್ಮೇಳನದಲ್ಲೊಂದು ಕಪ್ಪುಚುಕ್ಕೆ

ಅದ್ದೂರಿ ಸಾಹಿತ್ಯ ಸಮ್ಮೇಳನದಲ್ಲೊಂದು ಕಪ್ಪುಚುಕ್ಕೆ
ಮೊದಲಿಗೆ ಮರೆತುಹೋಗುತ್ತಿರುವ ವಿಚಾರವನ್ನು ಈಗ ಪ್ರಸ್ತಾಪಿಸುತ್ತಿರುವುದಕ್ಕೆ ಕ್ಷಮೆಯಿರಲಿ.
ಈ ಬಾರಿಯ ಸಾಹಿತ್ಯ ಸಮ್ಮೇಳನಕ್ಕೆ ಹೋಗಬೇಕೆಂದು ನಡೆಸಿದ ತಯಾರಿ ಕೊನೆ ಕ್ಷಣದಲ್ಲಿ ವೈಯಕ್ತಿಕ ಮತ್ತು ನೌಕರಿಯ ಕಾರಣಗಳಿಂದಾಗಿ ರದ್ದುಮಾಡಬೇಕಾಗಿ ಬಂದರೂ ಪತ್ರಿಕೆಗಳಲ್ಲಿ ’ನ್ಯೂಸೆನ್ಸ್’ ಛಾನಲ್ ಗಳಲ್ಲಿ ಬರುತ್ತಿದ್ದ ವರದಿಗಳನ್ನು ಓದಿ ನೋಡಿ ಕಣ್ತುಂಬಿಕೊಳ್ಳುತ್ತಿದ್ದೆ. ಒಂದು ಕಾಲದಲ್ಲಿ ಸಾಹಿತ್ಯವೆಂಬುವುದು ಕೆಲ ಶ್ರೀಮಂತರಿಗೆ, ರಾಜ ಮಹಾರಾಜರ ಆಸ್ಥಾನಕಷ್ಟೇ ಸೀಮಿತವಾಗಿತ್ತು. ಆಗ ರಚನೆಯಾಗುತ್ತಿದ್ದ ಸಾಹಿತ್ಯ ಪ್ರಕಾರಗಳೂ ಅಷ್ಟೆ ಜನಸಾಮಾನ್ಯರನ್ನು ತಲುಪುತ್ತಲೇ ಇರಲಿಲ್ಲ. ವಚನಕ್ರಾಂತಿಯ ಕಾಲದಲ್ಲಿ ಜನಸಾಮಾನ್ಯರಿಗೆ ಅರ್ಥವಾಗುವಂತಹ, ಸಾಮಾನ್ಯನೂ ಸಾಹಿತ್ಯರಚನೆಯಲ್ಲಿ ತೊಡಗಿಕೊಳ್ಳುವ ಅವಕಾಶ ಒದಗಿಬಂದರೂ ಅದು ಸಂಪೂರ್ಣವಾಗಿ ಶ್ರೀಸಾಮಾನ್ಯನ ಸ್ವತ್ತಾಗತೊಡಗಿದ್ದು ಆಧುನಿಕ ಕಾಲದ ಸಾಹಿತ್ಯ ಸಮ್ಮೇಳನಗಳು ಪ್ರಾರಂಭವಾದಮೇಲೆಯೇ. ಪ್ರಾರಂಭದಲ್ಲಿ ಸಾಹಿತ್ಯ ಕೃಷಿಗೆ ಒದಗಿ ಬಂದದ್ದೂ ಸಹ ಹಣವಂತರಿಗಷ್ಟೇ ಆದರೂ ಕ್ರಮೇಣ ಎಲ್ಲರಲ್ಲೂ ಆಸಕ್ತಿ ಮೂಡುತ್ತಾ ಬಂದ ’ಕನ್ನಡ ಸಾಹಿತ್ಯ ಸಮ್ಮೇಳನ’ ಇಂದು ಕರ್ನಾಟಕದ ನಿಜವಾದ ನಾಡಹಬ್ಬವೇ ಸರಿ. ಏಕೆಂದರೆ ಅಲ್ಲಿ ನಮ್ಮ ಘೋಷಿತ ನಾಡಹಬ್ಬವಾದ ಜಂಬೂಸವಾರಿಯಂತೆ ಏಕತಾನತೆ ಇರುವುದಿಲ್ಲ. ಸಮ್ಮೇಳನಾಧ್ಯಕ್ಷರ ಮೆರವಣಿಗೆ, ರಾಜಕಾರಣಿಗಳ ಭಾಷಣ ಮತ್ತಿತರ ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ಬಿಟ್ಟರೆ ಮಿಕ್ಕೆಲ್ಲವೂ ವೈವಿಧ್ಯಮಯವೇ.
    ಇಂತಹ ಕನ್ನಡಿಗರ ಆಶೋತ್ತರಗಳನ್ನು ಜಗತ್ತಿಗೆ ಸಾರುವಂತಹ ಕಸ್ತೂರಿಯ ಪರಿಮಳದಂತೆ ಕನ್ನಡದ ಕಂಪನ್ನು ಪಸರಿಸುವಂತಹ ಸಮ್ಮೇಳನದ ಕೊನೆಯಲ್ಲಿ ಕನ್ನಡದ ಬೆಳವಣಿಗೆಗೆ ಪೂರಕವಾಗುವಂತಹ ನಿರ್ಣಯಗಳನ್ನು ತೆಗೆದುಕೊಂಡು ನಮ್ಮನ್ನಾಳುವ ಸರ್ಕಾರದ ಮೂಲಕ ಅವುಗಳನ್ನು ಜಾರಿಗೆ ತರುವಂತೆ ಮಾಡುವುದು ಸಮ್ಮೇಳನದ ಕೊನೆಯ ಮತ್ತು ಅತಿ ಪ್ರಮುಖ ಘಟ್ಟ. ರಾಜಕೀಯ ಇಚ್ಚಾಶಕ್ತಿಯ ಕೊರತೆ ಮತ್ತು ರಾಜಕಾರಣಿಗಳ ಕಿವಿಹಿಂಡಿ ಕೆಲಸ ಮಾಡಿಸುವ ಸಾಹಿತಿಗಳ ಕೊರತೆಯಿಂದಾಗಿ ಪ್ರತೀಬಾರಿಯ ನಿರ್ಣಯಗಳು ಮುಂದಿನ ಸಮ್ಮೇಳನದಲ್ಲಷ್ಟೇ "ಓಹ್! ನಿರ್ಣ್ಯಗಳ್ಯಾವುವೂ ಜಾರಿಯಾಗಿಲ್ಲವಲ್ಲ" ಎಂದು ನಿಮಗೆ, ನಮಗೆ, ಸಾಹಿತಿಗಳಿಗೆ, ಕನ್ನಡ ’ಓರಾಟ’ಗಾರರಿಗೆ ಮಾಧ್ಯಮಗಳಿಗೆ ಎಲ್ಲರಿಗೂ ಜ್ಞಾಪಕಬರುವುದು.
    ಪ್ರತಿಸಾರಿಯಂತೆ ಈ ಬಾರಿ ಹೊಸ ನಿರ್ಣಯಗಳನ್ನು ಮಂಡಿಸುವುದರ ಬದಲು ಹಳೆಯ ನಿರ್ಣಯಗಳ ಜಾರಿಗೆ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಚಿಂತಕರ ಚಾವಡಿಯ ಅಭಿಪ್ರಾಯವಾಗಿತ್ತು. ಅದೇ ರೀತಿಯ ನಿರ್ಣಯಗಳನ್ನು ಮಂಡಿಸುವುದರ ಜೊತೆಗೆ ಧುತ್ತನೆ ೨ ಹೊಸ ನಿರ್ಣಯಗಳನ್ನು ಸೇರಿಸಲಾಯಿತು. ಅವುಗಳಲ್ಲಿ ಮೊದಲೆನೆಯದು ಸಾಹಿತಿ, ಸಂಶೋಧಕ ಡಾಃ ಚಿ. ಮೂ. ರವರಿಗೆ ಬೆಂಗಳೂರು ವಿ.ವಿ ಕೊಡಮಾಡಲು ನಿರ್ಧರಿಸಿದ್ದ ಗೌರವ ಡಾಕ್ಟರೇಟ್ ಅನ್ನು ನಮ್ಮ ’ಘನತೆವೆತ್ತ’ ರಾಜ್ಯಪಾಲರಾದ ಹಂಸರಾಜ್ ಭಾರಧ್ವಾಜ್ (ಇವರಿಗೆ ರಾಜಕೀಯ ಪಾಲಕರು ಎನ್ನಬಹುದೇನೋ) ನಿರಾಕರಿಸಿದ್ದನ್ನು ಖಂಡಿಸಿ ತೆಗೆದುಕೊಂಡ ನಿರ್ಣಯ
    ನಿಜಕ್ಕೂ ಆ ರೀತಿಯ ನಿರ್ಣಯ ಸಮ್ಮೇಳನದ ಗೌರವವನ್ನು ಇಮ್ಮಡಿಗೊಳಿಸಿದ್ದಲ್ಲದೆ ಸಾರಸ್ವತಲೋಕದ ಒಗ್ಗಟ್ಟನ್ನು ಪ್ರದರ್ಶಿಸಿತು. ಆ ದಿನಕ್ಕೆ ಅದರ ಅವಶ್ಯಕತೆ ನಿಜಕ್ಕೂ ಇತ್ತು. ಏಕೆಂದರೆ ಚಿ.ಮೂ ಅವರ ಚಿಂತನೆಗಳು ಏನಾದರೂ ಇರಬಹುದು ಅದು ಬೇರೆಯ ಜಿಜ್ಞಾಸೆ, ಅವರು ನಮ್ಮ ನಾಡು ಕಂಡ ಅಪರೂಪದ ಸಂಶೋಧಕ ಇದ್ಯಾವುದೂ ತಿಳಿಯದ ರಾಜ್ಯಪಾಲರು ಚಿಕ್ಕಮಗುವೊಂದು ತನ್ನ ಕೈಲಿ ಹಿಡಿದಿದ್ದ ಪೆಪ್ಪರ್ಮೆಂಟನ್ನು ’ನಾನು ಯಾರಿಗೂ ಕೊಡುವುದಿಲ್ಲ’ ಎಂದು ಹಠಹಿಡಿಯುವಂತೆ ಚಿ.ಮೂ. ರವರ ಸಾಧನೆಗಳ ಅರಿವಿಲ್ಲದೆ  ’ನಾ ಕೊಡೊಲ್ಲಾ’ ಅಂದಿದ್ದು ಖಂಡನೀಯ.
    ಆದರೆ ಮತ್ತೊಂದು ನಿರ್ಣಯವನ್ನೂ ಮಂಡಿಸಲಾಯಿತು ಅದೇ ’ಡಬ್ಬಿಂಗ್ ಕನ್ನಡ ಚಿತ್ರರಂಗಕ್ಕೆ ಬೇಡವೇ ಬೇಡ’ ಎಂಬ ಆತುರದ ತಿಳುವಳಿಕೆಯಿಲ್ಲದ ದೂರದೃಷ್ಠಿಯಿಲ್ಲದ ನಿರ್ಣಯ ಇಡೀ ಸಮ್ಮೇಳನದ ಕಪ್ಪುಚುಕ್ಕೆಯೇ ಸರಿ.
    ಎಲ್ಲರಿಗೂ ತಿಳಿದಿರುವಂತೆ ಕನ್ನಡ ಸಾರಸ್ವತಲೋಕವು ಈಗ್ಗೆ ನಾಲ್ಕೈದು ಸಮ್ಮೇಳನಗಳ ಹಿಂದಿನವರೆಗೂ ಚಿತ್ರರಂಗವನ್ನೂ, ಚಿತ್ರಸಾಹಿತಿಗಳನ್ನೂ ಅಸ್ಪೃಶ್ಯರಂತೆ ದೂರವೇ ಇಟ್ಟಿತ್ತು. ಎಪ್ಪತ್ತರ ದಶಕದಲ್ಲಿ ಶ್ರೀಯುತರುಗಳಾದ ಅನಕೃ, ಪಿ. ಲಂಕೇಶ್, ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಚದುರಂಗ ಮುಂತಾದವರು ಚಿತ್ರರಂಗಲ್ಲಿ ಸಕ್ರಿಯವಾಗಿ ತೊಡಗಿಕೊಂಡರೂ ಎರಡೂ ರಂಗಗಳ ಅಂತರವೇನೂ ಕಡಿಮೆಯಾಗಿರಲಿಲ್ಲ. ಹೆಸರಾಂತ ಸಾಹಿತಿಗಳ ಕಾವ್ಯಗಳನ್ನು ಕಾದಂಬರಿಗಳನ್ನು ಚಿತ್ರಗಳಲ್ಲಿ ಅಳವಡಿಸಿಕೊಳ್ಳಲು ಅವಕಾಶ ನೀಡಿದ್ದರೂ ಅದೇ ಸಾಹಿತಿಗಳು ಚಿತ್ರಸಾಹಿತಿಗಳೊಡನೆ ಬೆರೆಯಲು ಸಿದ್ದರಿರಲಿಲ್ಲ. ಅದೇ ರೀತಿ ಹೆಸರಾಂತ ಚಿತ್ರಸಾಹಿತಿಗಳಾದ ಶ್ರೀಯುತರಾದ ಕು. ರಾ. ಸೀ, ಜಿ.ವಿ.ಅಯ್ಯರ್, ಶಿವಶಂಕರ್, ಸಾಹಿತ್ಯಬ್ರಹ್ಮ ಚಿ. ಉದಯಶಂಕರ್ ಮುಂತಾದವರನ್ನು ಸಾಹಿತಿಗಳೆಂದು ಒಪ್ಪಲು ಸಾರಸ್ವತಲೋಕ ಸಿದ್ದವಿರಲಿಲ್ಲ ಅದಕ್ಕೆ ಚಿತ್ರಲೋಕವೂ ತಲೆಕೆಡಿಸಿಕೊಂಡಿರಲಿಲ್ಲ. ಇಂತಹ ವೈರುಧ್ಯದ ಎರಡು ರಂಗಗಳು ಕಾಲಾನುಕ್ರಮವಾಗಿ ಬೆರತದ್ದು ಸಂತೋಷದವಿಚಾರವೇ ಸರಿ. ಅದು ಕನ್ನಡದ ಬೆಳವಣಿಗೆಗೆ ಬೇಕಾಗಿತ್ತೂ ಕೂಡ. ಆದರೆ ’ಡಬ್ಬಿಂಗ್ ಚಿತ್ರಗಳಿಂದಾಗಿ ಕನ್ನಡ ನಾಡಿನ ಸಂಸ್ಕೃತಿಗೆ ಧಕ್ಕೆಯುಂಟಾಗುತ್ತದೆಂಬ’ ತಲೆಬುಡವಿಲ್ಲದ ಯೋಚನೆ ನಮ್ಮ ಘನಸಾಹಿತಿಗಳ ತಲೆಯೊಳಗೆ ಹೊಕ್ಕಿದ್ದಾದರೂ ಹೇಗೆ? ಎಂಬುದು ಶತಕೋಟಿ ಡಾಲರ್ ನ ಪ್ರಶ್ನೆಯೇಸರಿ
    ಪ್ರಸ್ತುತ ಡಬ್ಬಿಂಗ್ ವಿವಾದವು ಕನ್ನಡಕ್ಕೆ ಮಾರಕವೋ ಪೂರಕವೋ ಎಂದು ಚರ್ಚಿಸುವ ಮೊದಲು ಕನ್ನಡ ಚಿತ್ರರಂಗದಿಂದ ಸಂಸ್ಕೃತಿಗೆ ಕೊಡುಗೆ ಇದೆಯೋ ಇಲ್ಲವೋ ಎಂದು ನೋಡಬೇಕಾಗುತ್ತದೆ. ಯಾವ ಕೋನದಿಂದ ಅಳೆದೂ ಸುರಿದು ನೋಡಿದರೂ ಸಂಸ್ಕೃತಿಯನ್ನು ಪ್ರತಿನಿಧಿಸುವ ಮಾತಿರಲಿ ಅವುಗಳ ಗಂಧಗಾಳಿಯೂ ತಿಳಿಯದಂತಹ ಚಿತ್ರಗಳು ಬರುವುದು ಹೆಚ್ಚು. ಚಿತ್ರರಂಗದ ಪ್ರಕಾರ ’ಮಚ್ಚು-ಲಾಂಗು’, ’ಹೆಣ್ಣಿನ ಹೊಕ್ಕಳು ಮೇಲೆ ಹಣ್ಣಿನಿಂದ ಹೊಡೆಯುವುದು’, ನಾಯಕಿ ನೀರೊಳಗೆ ಬಿದ್ದನಂತರ ಮೇಲೆದ್ದು ಎಲ್ಲೆಲ್ಲಿಂದಲೋ ಮೀನು ತೆಗೆಯುವುದು, ಡಬ್ಬಲ್ ತ್ರಿಬ್ಬಲ್ ಮೀನಿಂಗ್ ಉಳ್ಳ ಸಂಭಾಷಣೆಗಳು ಇತ್ಯಾದಿ. ಇತ್ಯಾದಿ....ಗಳೆಲ್ಲಾ ನಮ್ಮ ಸಂಸ್ಕೃತಿಯ ಪ್ರತೀಕವೇ!!!!! ಹಾಗೆಂದು ಒಳ್ಳೆಯ ಚಿತ್ರಗಳು ಇಲ್ಲವೆಂದಲ್ಲ, ವರ್ಷದಲ್ಲಿ ಬಿಡುಗಡೆಯಾಗುವ ೧೦೦ - ೧೫೦ ಚಿತ್ರಗಳಲ್ಲಿ ೩ ಅಥವಾ ನಾಲ್ಕು ಅಷ್ಟೆ!!!! ಅವುಗಳಲ್ಲಿ ಸಣ್ಣ ಸಣ್ಣ ಬ್ಯಾನರ್ರಿನ ಚಿತ್ರಗಳು ಜನರನ್ನು ತಲುಪುವುದೇ ಇಲ್ಲ (ಉದಾಃ ಒಲವೇ ಮಂದಾರ).
    ನಿಜಕ್ಕೂ ಒಂದು ಕಾಲವಿತ್ತು ನಮ್ಮ ಚಿತ್ರರಂಗ ಸಣ್ಣದಾಗಿತ್ತು, ವರ್ಷಕ್ಕೆ ಎರಡೋ ನಾಲ್ಕೋ ಚಿತ್ರಗಳು ಅದೂ ಮದ್ರಾಸಿನಲ್ಲಿ ತಯಾರಾಗುತ್ತಿದ್ದವು. ಅವುಗಳ ಗುಣಮಟ್ಟದ ಬಗ್ಗೆ ಎರಡು ಮಾತಿರಲಿಲ್ಲ. ಅಂದಿನ ಚಿತ್ರಗಳ ಬಹುತೇಕ ಸನ್ನಿವೇಶಗಳು, ಹಾಡುಗಳು, ಸಂಭಾಷಣೆಗಳು ಸಂಗೀತ ಎಲ್ಲವೂ ಆ ಚಿತ್ರದ ಕಥೆಗೆ ಪೂರಕವಾಗಿ ಮನೆ ಮಂದಿ ಆನಂದಿಸುವಂತಹ ಚಿತ್ರಗಳಾಗುತ್ತಿದ್ದವು. ಅಂದು ಡಬ್ ಮಾಡುತ್ತಿದ್ದಲ್ಲಿ ನಮ್ಮಲ್ಲಿನ ತಂತ್ರಜ್ಞರಿಗೆ ಕೆಲಸವಿಲ್ಲದಎ ಅತಂತ್ರರಾಗುತ್ತಿದ್ದರು, ಅದು ಅಂದು ಎಲ್ಲರೂ ಒಪ್ಪುವಮಾತಾಗಿತ್ತು. ಇಂದಿನ ಚಿತ್ರಗಳ ಗುಣಮಟ್ಟದ ಬಗ್ಗೆ ಮಾತನಾಡದಿರುವುದೇ ಲೇಸು!! ಇಂತಹ ಸಂಧರ್ಭದಲ್ಲಿ ಬೇರೇ ಭಾಷೆಯಲ್ಲಿ ತಯಾರಾಗುವ ಚಿತ್ರಗಳನ್ನು ಕನ್ನಡದಲ್ಲಿ ಡಬ್ ಮಾಡಿದರೆ ಆಗುವ ಅನಾಹುತವೇನು? ಇಂದು ಇಲ್ಲಿ ಕೆಲಸಮಾಡುವ ನಮ್ಮ ಕನ್ನಡ ತಂತ್ರಜ್ಞರನ್ನು ಕಡೆಗಣಿಸಿ ಪ್ರತೀ ಚಿತ್ರಕ್ಕೂ ಲೈಟ್ ಬಾಯ್ ಗಳಿಂದ ಹಿಡಿದು ’ಆಕ್ಷನ್ -ಕಟ್’ ಹೇಳುವ ನಿರ್ದೇಶಕನವರೆಗೆ ಪರಭಾಷೆಯವರಿಗೇ ಮಣೆ ಹಾಕುವುದಿಲ್ಲವೇ? ಕನ್ನಡವೇ ಗೊತ್ತಿಲ್ಲದ ಸಂಭಾಷಣೆಕಾರರಿಂದ ಸಂಭಾಷಣೆ ಬರೆಸಿ ಚಿತ್ರ ನಿರ್ಮಿಸುವ ಕನ್ನಡಿಗ ನಿರ್ಮಾಪಕರಿಲ್ಲವೇ? ಕನ್ನಡದಲ್ಲಿ ನಾಯಕಿ ನಟಿಯರಿಲ್ಲವೆಂದು (ನಿಜ ಅರ್ಥದಲ್ಲಿ ಸರಿಯಾದ ಬಿಚ್ಚಮ್ಮ ನಟಿಯರಿಲ್ಲವೆಂದು) ಮೂಗು ಮೂತಿ ನೆಟ್ಟಗಿರದ ಅದೆಷ್ಟು ಪರಭಾಷಾ ನಟೀಮಣಿಯರಿಗೆ ಕೇಳಿದಷ್ಟು ಕಾಸು ಕೊಟ್ಟು ಮನೆ ಮಠ ಕಳೆದುಕೊಂಡು ’ಕೃತಾರ್ಥರಾದ’ ಅದೆಷ್ಟು ನಿರ್ಮಾಪಕ ನಿರ್ದೇಶಕರಿಲ್ಲ? ಪ್ರತಿಭೆಗಳನ್ನು ಸರಿಯಾಗಿ ಬಳಸಿಕೊಳ್ಳದೆ, ಅವಕಾಶ ನೀಡದೆ ಸತಾಯಿಸಿ, ಅವರು ಪಕ್ಕದ ಚಿತ್ರರಂಗದಲ್ಲಿ ಮಿಂಚತೊಡಗಿದಾಗ ’ಇವರು ನಮ್ಮವರು, ನಾನೇ ಅವರಿಗೆ ಅವಕಾಶ ಕೊಟ್ಟು ಮೇಲೆ ತಂದೆ’ ಎಂಬಿತ್ಯಾದಿ ಹೇಳಿಕೆಗಳನ್ನು ತೋರಿಕೆಗೆ ಕೊಟ್ಟು, ನಂತರ ಮನದಲ್ಲೇ ಮಂಡಿಗೆ ತಿನ್ನುವ ಭೂಪರೂ ನಮ್ಮ ಚಿತ್ರರಂಗದಲ್ಲಿದ್ದಾರೆ.
    ಅದು ಹೋಗಲಿ ಬಿಡಿ. ದುಡ್ಡು ಮಾಡಬೇಕೆಂಬ ಏಕಮಾತ್ರ ಹಂಬಲದಿಂದ ಪರಭಾಷೆಯ ಚಿತ್ರಗಳನ್ನು ’ರೀಮೇಕ್’ ಮಾಡುವುವುದರಿಂದ ನಮ್ಮ ಸಂಸ್ಕೃತಿ ಅದು ಹೇಗೆ ಉದ್ಧಾರವಾಗುತ್ತದೋ? ಆ ದೇವರೇ ಬಲ್ಲ. ಮೂಲ ಚಿತ್ರದಲ್ಲಿದ್ದ ಅದೆಷ್ಟೋ ಅಸಂಬದ್ಧ ದೃಷ್ಯಗಳು, ಅಭಾಸಭರಿತ ಸಂಭಾಷಣೆಗಳು ಅದೇ ರೀತಿ ತರ್ಜುಮೆಗೊಂಡಿರುತ್ತವೆ. ಜೊತೆಗೆ ರೀಮೇಕ್ ಮಾಡುವವರು ಆ ಚಿತ್ರ ಯಾವಕಾರಣಗಳಿಂದಾಗಿ ಗೆದ್ದಿದೆ ಎಂಬ ವಿಶ್ಲೇಷಣೆ ಮಾಡುವುದೇ ಇಲ್ಲ. ಅದಕ್ಕಿಂತಲೂ ಮುಂಚೆಯೇ ಆ ಚಿತ್ರವನ್ನು ಅದೇ ಭಾಷೆಯಲ್ಲಿಯೇ ನಮ್ಮ ಕನ್ನಡ ಪ್ರೇಕ್ಷಕ ನೋಡಿರುತ್ತಾನೆ. ಅದರದೇ ರೀಮೇಕ್ ಬಂದಾಗ ಸಹಜವಾಗಿ ಥಿಯೇಟರೆಡೆಗೆ ಯಾಕಾದರೂ ಹೋಗುತ್ತಾನೆ? ಕನ್ನಡಚಿತ್ರಗಳನ್ನು ನೋಡಲು ಥಿಯೇಟರಿಗೆ ಜನ ಬರುತ್ತಿಲ್ಲ, ಪ್ರದರ್ಶನಶುಲ್ಕ ಹೆಚ್ಚಾಯ್ತು, ಪೈರಸಿ ಸಿ.ಡಿ. ಹಾವಳಿ ಎಂಬಿತ್ಯಾದಿ ಅಸಂಬದ್ಧ ಹೇಳಿಕೆಗಳು ಬೇರೆ. ಅಸಲಿಗೆ ಇಂದು ಮಾರುಕಟ್ಟೆಯಲ್ಲಿ ಸಿಗುವ ಪೈರಸಿ ಸಿ.ಡಿ ಗಳಲ್ಲಿ ಮೂರೋ ನಾಲ್ಕೋ ಹೊಸ ಕನ್ನಡ ಚಿತ್ರಗಳ ಸಿ.ಡಿ ದೊರಕಿಯಾವು, ಅದೂ ವರ್ಷ- ಎರಡು ವರ್ಷದ ಹಿಂದೆ ಬಿಡುಗಡೆಯಾದ ಸಿನಿಮಾಗಳವು. ಅದೇ ನಿನ್ನೆಯೋ ಮೊನ್ನೆಯೋ ಬಿಡುಗಡೆಯಾದ ಹಿಂದಿ ತಮಿಳು ತೆಲುಗು ಚಿತ್ರಗಳ ಸಿ.ಡಿ ಯಾವುದು ಬೇಕು ಎಷ್ಟು ಬೇಕು ಸಿಗುತ್ತವೆ. ನಮ್ಮ ಸಿನಿಮಾ ಮಂದಿ ಅಗ್ಗದ ಪ್ರಚಾರಕ್ಕೊಸ್ಕರ ಮಧ್ಯೆ ಮಧ್ಯೆ ಬೀದಿ ಬದಿಯ ಸಿ.ಡಿ ಗಾಡಿಗಳ ಮೇಲೆ ದಾಳಿ ಮಾಡಿದಾಗಲೂ ಸಹ ಪರಭಾಷೆಯ ಸಿ.ಡಿಗಳಷ್ಟೇ ದೊರಕಿದ್ದು!!! ಏಕೆಂದರೆ ಜನಗಳಿಗೂ ಗೊತ್ತು ನಮ್ಮ ಸಿನಿಮಾಗಳ ಗುಣಮಟ್ಟ ಏನೂಂತ!! ಅಂದ ಮಾತ್ರಕ್ಕೆ ಪರಭಾಷೆಯ ಚಿತ್ರಗಳು ಸಕ್ಕತ್ತಾಗಿವೆ ಎಂದಲ್ಲ. ಅವರ ಚಿತ್ರಗಳಿಗೆ ಕೊಡುವ ಪ್ರಚಾರದ ವೈಖರಿ, ಅದಕ್ಕೆ ಬಳಸುವ ಪ್ರೋಮೋ ಗಳು ಆ ಚಿತ್ರದ ಬಗ್ಗೆ ಕುತೂಹಲ ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಅಲ್ಲದೆ ಅವರ ಚಿತ್ರಗಳಲ್ಲಿ ಅವರು ಬಳಸುವ ತಂತ್ರಜ್ಞಾನ ಆ ಸಿನಿಮಾಗಳನ್ನು ನೋಡಲು ಭಾಷೆ ತಿಳಿಯದವರಿಗೂ ಪ್ರೇರೇಪಿಸುತ್ತದೆ. ಹೊಸ ಹೊಸ ತಂತ್ರಜ್ಞಾನಗಳಾದ ಡಿ.ಟಿ.ಎಸ್, ಡಿಜಿಟಲ್ ಎಫೆಕ್ಟ್, ಗ್ರಾಫಿಕ್ಸ್ ಮುಂತಾದವುಗಳನ್ನು ಪರಿಣಾಮಕಾರಿಯಾಗಿ ಮತ್ತು ಚಿತ್ರಕ್ಕೆ ಪೂರಕವಾಗಿ ಬಳಸಿರುತ್ತಾರೆ. ವಿಚಿತ್ರವೆಂದರೆ ’ಐ.ಟಿ ಸಿಟಿ’ ಬಿರುದಾಂಕಿತ ಬೆಂಗಳೂರಿನ ತಂತ್ರಜ್ಞರೇ ಅವೆಲ್ಲವನ್ನೂ ಚನ್ನೈ ಅಥವಾ ಹೈದರಾಬಾದ್ ನಲ್ಲಿ ಮಾಡಿರುತ್ತಾರೆ. ಇಂತಹ ಮುಂದುವರಿದ ಯುಗದಲ್ಲಿ ನಮ್ಮ ಕನ್ನಡ ಚಿತ್ರಗಳ ಗ್ರಾಫಿಕ್ಸ್ ಇನ್ನೂ ಹಾವು ಹಾಡಿಸುವುದಕ್ಕೋ, ಕಲ್ಲು ಬಸವನ ಕತ್ತು ಕುಣಿಸಲಿಕ್ಕೋ ಆನೆಗೆ ಕನ್ನಡಕ ಹಾಕಿಸುವದಕ್ಕಷ್ಟೇ ಸಿಮಿತವಾಗಿರುವುದು ದುರಂತವಲ್ಲದೆ ಮತ್ತೇನೂ ಅಲ್ಲ. ( ಈ ಮಾತು ಉಪೇಂದ್ರರ ’ ಸೂಪರ್’ಚಿತ್ರಕ್ಕೆ ಅನ್ವಯಿಸುದಿಲ್ಲ) ಜೊತೆಗೆ ಕನ್ನಡಿಗ ಪ್ರೇಕ್ಷಕನ ಕೆಟ್ಟ ಗ್ರಹಚಾರವಲ್ಲದೆ ಮತ್ತೇನು ಅಲ್ಲ. ಇವರ ಕೈ ಯಲ್ಲಿ ಅಂತಹ ಚಿತ್ರಗಳನ್ನು ತೆಗೆಯಲು ಆಗದಿದ್ದಲ್ಲಿ "ಡಬ್ಬಿಂಗ್" ಮಾಡುವುದರಲ್ಲಿ ತಪ್ಪೇನು? ಅದರಿಂದಾಗಿ ಸ್ಪರ್ಧಾತ್ಮಕತೆ ಹೆಚ್ಚುವುದಲ್ಲದೆ ಕನ್ನಡಿಗರೆ ಒಳ್ಳೆಯ ಚಿತ್ರಗಳು ಹೆಚ್ಚಾಗುತ್ತವೆ.
     ಇನ್ನು ಕಥೆಗಳ ವಿಚಾರಕ್ಕೆ ಬಂದರೆ ’ಕನ್ನಡ್ದಲ್ಲಿ ಒಳ್ಳೆ ಕಥೆ ಕಾದಂಬ್ರಿ ಎಲ್ಲವ್ರೀ?’ ಎನ್ನುತ್ತಾ ಇಡೀ ಕನ್ನಡ ಸಾಹಿತ್ಯಕುಲಕ್ಕೇ ಅವಮಾನ ಮಾಡುತ್ತಾರೆ. ಇಂತಹ ಚಿತ್ರರಂಗದ ಪರವಾಗಿ ತೆಗೆದುಕೊಂಡ ಆ ನಿರ್ಣಯ ಕನ್ನಡದ ಬೆಳವಣಿಗೆಗೆ ಹೇಗೆ ಪೂರಕ? ಎಂದು ಬಲ್ಲವರೇ ಹೇಳಬೇಕು. ಸದ್ಯದಲ್ಲೇ ’ವಿಶ್ವ ಕನ್ನಡ ಸಮ್ಮೇಳನ’ ಆರಂಭವಾಗಲಿದೆ ಅಲ್ಲಿಯಾದರೂ ಇಂತಹ ಅಭಾಸಭರಿತ ನಿರ್ಣಯಗಳಾಗದಿರಲಿ.
    ಹಾಗು ’ವಿಶ್ವ ಕನ್ನಡ ಸಮ್ಮೇಳನ’  ಅಭೂತಪೂರ್ವ ಯಶಸ್ಸು ಕಾಣಲಿ ಎಂದು ಹಾರೈಸುತ್ತೇನೆ.
                    "ಸಿರಿಗನ್ನಡಂ ಗೆಲ್ಗೆ"

ಮಂಗಳವಾರ, ಫೆಬ್ರವರಿ 22, 2011

ಇಸ್ಮಾಯಿಲ್ ಪ್ಲೀಜ್ ಃ)

ವ್ಯಾಯಾಮ

ಡಾಕ್ಟರ್ : ದಿನಾ ವ್ಯಾಯಾಮ ಮಾಡಬೇಕು.
ಸರ್ದಾರ್ : ನಾನು ದಿನಾ ಫುಟ್‍ಬಾಲ್, ಟೆನ್ನಿಸ್, ಕ್ರಿಕೆಟ್ ಆಡ್ತಿನಿ ಸರ್.
ಡಾಕ್ಟರ್ : ಗುಡ್, ಎಲ್ಲಿ ಆಡ್ತೀರ??
ಸರ್ದಾರ್ : "ಮೊಬೈಲ್" ನಲ್ಲಿ ಸಾರ್...!!!!

ಕಿಸ್

ಒಂದು ಹುಡುಗ ಹಾಗು ಒಂದು ಹುಡುಗಿ ಪಾರ್ಕಿನಲ್ಲಿ ಮಾತಾಡ್ತಾ ಇದ್ರು. ಹುಡುಗಿ ಆಸೆಯಿಂದ ಐಸ್‍ಕ್ರೀಮ್ ಬೇಕೂಂತ ಕೇಳಿದಳು. ಹುಡುಗ ಐಸ್‍ಕ್ರೀಮ್ ತಂದುಕೊಟ್ಟ.
ಹುಡುಗಿ: ತುಂಬಾ ಥ್ಯಾಂಕ್ಸ್ ಕಣೋ...
ಹುಡುಗ: ಬರೀ ಥ್ಯಾಂಕ್ಸಾ?
ಹುಡುಗಿ: ಕಿಸ್ಸ್ ಬೇಕಾ?
ಹುಡುಗ: ಓಹೋಹೋ....ಏನ್ ದೊಡ್ಡ ಐಶ್ವರ್ಯ ರೈ ಇವ್ಳು ಐಸ್ ಕ್ರೀಮ್ ಕೊಡ್ಸಿ ಕಿಸ್ಸ್ ಪಡೆಯೋಕೆ. ಮೊದ್ಲು ಐಸ್ ಕ್ರೀಮ್ ಕಾಸು ಕೊಡೆ...ಕಿಸ್ಸು ಪಸ್ಸು ಎಲ್ಲಾ ಆಮೇಲೆ!

ಸುಳ್ಳು ಲೆಕ್ಕ

ಗುಂಡ: ನಮ್ಮ P.W.D ಆಫೀಸ್ ಕ್ಲರ್ಕ್ ಸುಳ್ಳು ಲೆಕ್ಕ ಬರೆದು ಸಿಕ್ಕಾಕ್ಕೊಂಡು ಬಿಟ್ಟ..
ಗುಂಡನ ಗೆಳೆಯ: ಅದು ಹೇಗೆ...?
ಗುಂಡ: ಆ ಕ್ಲರ್ಕ್ ರೋಡ್ ರೋಲರ್ ಪಂಚರ್ ಆಗಿದೆ ಅಂತ ಬರೆದಿದ್ದ....!!!!

ಕೆಲಸ

ಇಬ್ಬರು ಭಿಕ್ಷುಕರು ಮತ್ತು ಇಬ್ಬರು ಸಾಫ್ಟವೇರ್ ಇಂಜಿನಿಯರ್ ಒಮ್ಮೆ ಭೇಟಿಯಾದರು.
ಅವರಿಬ್ಬರು ಒಂದೇ ಪ್ರಶ್ನೆಯನ್ನು ಪರಸ್ಪರರಿಗೆ ಕೇಳಿದರು.....
ಅದೇನು??
.
.
.
.
ನೀವು ಯಾವ ಪ್ಲಾಟ್‍ಫಾರ್ಮ್ ನಲ್ಲಿ ಕೆಲಸ ಮಾಡುವುದು!!!

ಸ್ವಾತಂತ್ರ್ಯ

ಬ್ರಿಟೀಷರು 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯವನ್ನು ಕೊಟ್ಟು ಹೋಗಿದ್ದೇಕೆ?
?????
????
???
??
?
ಅವರಿಗೆ ಗೊತ್ತಿತ್ತು....1948ರಲ್ಲಿ ರಜನೀಕಾಂತ್ ಹುಟ್ಟುತ್ತಾರೆ ಅಂತ!!!

ಲವ್ ಸ್ಟೋರಿ

ನಾಯಕ ನಾಯಕಿಯನ್ನು ಪ್ರೀತಿಸುತ್ತಾನೆ. ಆದರೆ ನಾಯಕಿ ಖಳನಾಯಕನನ್ನು ಪ್ರೀತಿಸುತ್ತಾಳೆ. ಆದರೆ ನಾಯಕನ ತಮ್ಮ ನಾಯಕಿಯ ಚಿಕ್ಕಮ್ಮನನ್ನು ಪ್ರೀತಿಸುತ್ತಾಳೆ, ಆದರೆ ಚಿಕ್ಕಮ್ಮ ನಾಯಕನ ಚಿಕ್ಕಪ್ಪನನ್ನು ಪ್ರೀತಿಸುತ್ತಾಳೆ. ಕಟ್ಟಕಡೆಗೆ ಇಬ್ಬರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅವರು ಯಾರು?
ನಿರ್ಮಾಪಕ ಹಾಗೂ ಪ್ರೇಕ್ಷಕ!

ನೀರು

ವಿಸ್ಕಿ+ ನೀರು = ಹ್ರದಯಕ್ಕೆ ಹಾನಿ
ರಮ್+ನೀರು= ಲಿವರ್ ಗೆ ಹಾನಿ
ಬ್ರಾ೦ದಿ+ನೀರು = ಕಿಡ್ನಿಗೆ ಹಾನಿ
.................
ನನಗನಿಸುತ್ತೆ....
ಈ ನೀರು ಇದ್ಯಲ್ಲ ತು೦ಬಾ ಡೇ೦ಜರು, ಯಾವುದರ ಜೊತೆ ಸೆರಿದ್ರೂ ಆರೋಗ್ಯನ ಹಾಳು ಮಾಡುತ್ತೆ.....

ಫುಲ್ ಕುಡಿಬೇಕಿತ್ತು !

ಅವನು : ಇನ್ನು ಕುಡಿಬೇಕಿತ್ತು ಮಗ ಯಾವಥರ ಅಂದ್ರೆ ಮುಂದೆ ಇರೋ 3 ಮರಗಳು 6 ಮರ ಥರ ಕಾಣಬೇಕಿತ್ತು
ಇವನು : ಲೋ ಮಗ ಅಲ್ಲಿರೋದು 1 ಮರ ಕಣೋ 3 ಅಲ್ಲಾ !
ಇನ್ನೊಬ್ಬ : ಥೋ ನನ್ಮಕ್ಳ ಅದು ಮರ ಅಲ್ಲಾ ನಮ್ಮ ದೇವೇಗೌಡರ ಪೋಸ್ಟರ್ !!

ಅಂಗನವಾಡಿ

ರಾಮು: ಎಷ್ಟು ಜನ ಮಕ್ಕಳು..?
ಗುಂಡ: 25 ಜನ ಮಕ್ಕಳು...
ರಾಮು: ಫ್ಯಾಮಿಲಿ ಪ್ಲಾನಿಂಗ್ ನವರು ಬರಲಿಲ್ವ..?
ಗುಂಡ: ಬಂದಿದ್ರು...ಅಂಗನವಾಡಿ ಅಂತ ವಾಪಾಸ್ ಹೋದರು....!!!!

ಕನಸು

ಮಗ :- ಅಮ್ಮಾ ನಿನ್ನೆ ನನಗೊ೦ದು ಕನಸು ಬಿದ್ದಿತ್ತು.
ಅಮ್ಮ :- ಏನದು ?
ಮಗ :- ಕನಸಲ್ಲಿ ನನ್ನ ಒ೦ದು ಕಾಲು ಆಕಾಶದಲ್ಲಿತ್ತು , ಇನ್ನೊ೦ದು ಭೂಮಿ ಮೇಲಿತ್ತು.
ಅಮ್ಮ :- ಈ ತರ ಕನಸು ಕಾಣ್ಬೇಡ ಮಗನೆ , ಇರೋ ಒ೦ದು ಚಡ್ಡೀನೂ ಹರಿದೋಗುತ್ತೆ.

ಸೋಮವಾರ, ಫೆಬ್ರವರಿ 21, 2011

ಕತ್ತಲೆಯ ಅಲೆಮಾರಿ

ಕಣ್ಣಿಂದ ಮಿಂಚು ಹರಿಸಿ
ಕುಡಿನೋಟದಿ ಕೊಂದವಳೆ
ಖಾಲಿಯಿಲ್ಲದ ಮನವ
ನಿತ್ಯ ಕಾಡುವ ನಯನಾಂಗಿ!!

ನನ್ನ ಮನವೇನೋ ಬೆತ್ತಲೆ
ಆದರೆ ಬೆಳಕು ಕಾಣದಷ್ಟು ಕತ್ತಲೆ
ದಾರಿ ದೀವಿಗೆಗೂ ಉಸಿರಿಲ್ಲ
ಬದುಕು ಸಾಕೆಂಬ ಹಂಬಲ
ಮೂಡಲೂ ಸ್ಥಳವಿಲ್ಲ
ಇನ್ನು ಈಸಬೇಕೆಂಬ ಆಸೆಯಾದರೂ
ಕುಡಿಯೋಡೆವುದೆಲ್ಲಿಂದ?

ಬರಡು ತಿಟ್ಟನುತ್ತಿ, ಮೊಳಕೆ ಕಾಳ
ಬಿತ್ತಿದರೂ ಜೀವಜಲವಿಲ್ಲದೆ
ಬದುಕ ಸೆಲೆಯುಂಟೆ?
ಹಂಬಲವಿಲ್ಲದ ಮನ,
ಛಲವಿಲ್ಲದಾ ಪ್ರೀತಿ
ಬಲ್ಲಿದಗೆ ದಕ್ಕುವುದುಂಟೆ?

ಎಲ್ಲೆಯೊಳಗೆ ಬದುಕಲು
ನೂರಾರು ದಾರಿ
ಎಲ್ಲೆ ಮೀರಿದ ಬದುಕು ನಿಸ್ಸತ್ವ!!
ಕಲ್ಲ ಕೆತ್ತಿ, ಸುಡು ಬಿಸಲಲ್ಲಿ ನೆತ್ತಿಯ
ಅಡವಿಟ್ಟು ಬಿಸುಲುಣಿಸದೆ ಸಾಕೇನು
ಇಚ್ಚೆಯಿದ್ದೊಡೆ ಕೊಚ್ಚೆಯದಾಟಿ ಬಾ!!
ಸ್ವಚ್ಚವಾಗಿ ಬದುಕೋಣ

ನಂಬಿಕೆಯೇ ನೆರಳು
ಅನುಮಾನವೇ ಉರುಳು
ನಿನಗಾಗಿ ಕಾದಿರುವೆ ಹಗಲಿರುಳು
ತಿಮಿರವನೋಡಿಸಿ
ಶುದ್ಧ ಬೆಳಕಲ್ಲಿ ಬಾಳೋಣ ಬಾ!!
    ಇತಿ ನಿನ್ನ ದಾರಿಕಾಯುವ
        ಕತ್ತಲೆಯ ಅಲೆಮಾರಿ

ಶುಕ್ರವಾರ, ಫೆಬ್ರವರಿ 18, 2011

ಪ್ರೇಮದ ಕಾಣಿಕೆ

ಬಟ್ಟ ಬಯಲಿನ ಬರಡು ಬದುಕಲಿ
ದಿಟ್ಟ ನಡೆಯಿಟ್ಟು ಎನ್ನೆದೆಯ
ಮೆಟ್ಟಿಲೇರಿದ ಎನ್ನ ಪಟ್ಟದರಸಿ
ಬಳಲಿ ಬೆಂಡಾದಾಗ ನಿನ್ನುಸಿರ
ಗಾಳಿಯ ಬೀಸಿ ತಂಪನೆರೆವ
ಮುಂಗಾರು ಮಾರುತ

ಎನ್ನ ಅಕಾಲಿಕ ಅಸಹನೆಯ
ತೊಳೆದೋಡಿಸುವ ಸಹನಾ ನದಿ
ತಳಮಳಗಳ ತಣಿಸುವ ತಪೋನಿಧಿ
ಕಷ್ಟ ಕಾರ್ಪಣ್ಯಗಳ ಆಪೋಶನ ಮಾಡುವ
ಶಾಂತ ಕರುಣಾ ಸಾಗರ

ಪಟಪಟನೆ ಬಡಿದಾಡುವ ಹೃದಯ ಮಿಡಿತದಿ
ಮಿಳಿತಗೊಂಡ ನಿನ್ನುಸಿರ ಹೆಸರ
ಕಡೆಗಣಿಸಿದಲ್ಲೇ ಎನ್ನ ಕಡೆಗಾಲ
ಮರೆತಾಗ ಅಡಗಲಿ ನನ್ನುಸಿರು

ಇಗೋ ನನ್ನ ಪ್ರೇಮದ ಕಾಣಿಕೆ
ಧಿಕ್ಕರಿಸದೆ, ಕೆಕ್ಕೆರಿಸಿದೆ
ಒಪ್ಪಿಸಿಕೋ ನನ್ನುಸಿರೊಡತಿ

ಬುಧವಾರ, ಫೆಬ್ರವರಿ 2, 2011

ಮಾತುಗಾರ ಮಲ್ಲಣ್ಣ ನೀತಿಗಾತಿ ನಿಂಗವ್ವ

ಚಿಕ್ಕಂದಿನಲ್ಲಿ ಎಂದೋ ಒಮ್ಮೊಮ್ಮೆ ನಿದ್ದೆ ಬಾರದಿದ್ದಾಗ ನನ್ನ ಅಮ್ಮ ತನಗೆ ಗೊತ್ತಿರುವ ನೀತಿ, ಪುರಾಣ, ಹಾಸ್ಯ ಕಥೆಗಳನ್ನು ಹೇಳಿ ಮಲಗಿಸುತ್ತಿದ್ದರು. ಹಾಗೆ ಕೇಳಿದ ಒಂದು ಜಾನಪದ ಕಥೆ ನಿಮಗಾಗಿ ಜಾನಪದ ಭಾಷೆಯಲ್ಲೇ ಬರೆಯಲು ಯತ್ನಿಸಿದ್ದೇನೆ. ನಿಮಗೂ ಹಿಡಿಸಬಹುದು ಎಂದುಕೊಂಡಿದ್ದೇನೆ.
    ಒಂದಾನೊಂದು ಊರಿನಲ್ಲಿ ಮಲ್ಲಣ್ಣ ಅಂತ ಒಬ್ಬ ಇದ್ದ. ಅವ್ನು ಸಿಕ್ಕಾಪಟ್ಟೆ ಮಾತಾಡ್ತಿದ್ದ, ಯಾವ ಪ್ರಶ್ನೆ ಕೇಳುದ್ರೂ ಉತ್ತರ ಅಂವುಂತವು ಸಿಕ್ತಿತ್ತು. ಅದುಕ್ಕೆ ಅವ್ನ ಜನಗೊಳೆಲ್ಲಾ ತುಂಬ ಪ್ರೀತಿಯಿಂದ ’ಮಾತಿಗಾರ ಮಲ್ಲಣ್ಣ’ ಅಂತ ಕರೀತಿದ್ರು. ಅವ್ನಪ್ಪ ಯಾವತ್ತೋ ಅಂವ ಚಿಕ್ಕೋನಿದ್ದಾಗ ತೀರೋಗ್ಬುಟ್ಟ. ಅವ್ನ ಅವ್ವನೇ ಅವ್ನ ಸಾಕಿ ದೊಡ್ಡೋನು ಮಾಡಿದ್ಲು. ಹಿಂಗಿದ್ದ ಮಲ್ಲಣ್ಣಂಗೆ ಮದ್ವೆ ವಯ್ಸು ಬಂತು. ಅವ್ನ ಅವ್ವ ಪಕ್ಕದಳ್ಳಿಲಿದ್ದ ನೀತಿಗಾತಿ ನೀಲವ್ವನ ಮಗಳು ನಿಂಗವ್ವನನ್ನ ತಂದು ಮದ್ವೆ ಮಾಡಿದ್ಲು. ಅವ್ಳೇನು ಕಮ್ಮಿ ಕುಳಾ ಅಲ್ಲ ಒಬ್ಳೇ ಮಗಳು, ದೊಡ್ಡ ಆಸ್ತಿ ಅಪ್ಪ ಇಲ್ಲ, ಬಾಳ ಒಳ್ಳೆಯೋಳು. ಅವ್ಳಪ್ಪ ನಾಕ್ ಜನಕ್ಕೆ ನೀತಿ ಹೇಳ್ತಿದ್ದ ಅದುಕ್ಕೆ ಇವ್ಳನ್ನ ಊರ್ನೋರೆಲ್ಲಾ "ನೀತಿಗಾತಿ ನಿಂಗವ್ವ" ಅಂತಿದ್ರು. ಹೆಸ್ರುಗೆ ತಕ್ಕಂಗೆ ಅವ್ಳೂ ನೀತಿ ಬೋದ್ನೆ ಮಾಡೋಳೆಯಾ.
    ನಿಂಗಣ್ಣುಂಗೆ ವತ್ತಾರಿಂದ ಸಂದ್ಗಂಟ ಗದ್ದೇತವೇ ಗೆಯ್ಯುದಾಗದು, ಮದ್ದಿನ್ಕೆ ನಿಂಗಿ ಇಟ್ಟ ಗದ್ದೆತಕೆ ತರೋಳು, ಸಂದೆ ಹಟ್ಟಿಗೋಗಿ ದನ್ಗೊಳ್ಗೆ ನೀರು ನಿಡಿ ನೋಡೋದ್ರಲ್ಲೇ ಟೇಮಾಗೋಗದು. ಹಂಗಾಗಿ ಮನೇಲಿ ಅವ್ವನ ಯೋಗಕ್ಸೇಮ ಸರಿಯಾಗಿ ವಿಚಾರ್ಸಕಾಗಿರ್ನಿಲ್ಲ.
    ಆದ್ರೆ ನಿಂಗವ್ವ ಬಾಳಾ ಚತ್ರಿ ಮನೇಲಿದ್ದ ಅತ್ತೆಗೆ ವತ್ತುಗ್ಸರ್ಯಾಗಿ ಇಟ್ಟೂ ಇಲ್ಲಾ!ಬಟ್ಟೂ ಇಲ್ಲಾ!! ಮನೆ ಕೆಲ್ಸಾನೆಲ್ಲಾ ಆ ಹಣ್ಣು ಮುದ್ಕಿ ಕೈಲೇ ಮಾಡ್ಸೋಳು!
ತಾನು ಮಾತ್ರ ಕಾಲ್ಮೇಲ್ ಕಾಲ್ ಹಾಕ್ಕಂಡು ’ಜೂರತ್ತು’ ತೋರ್ಸೋಳು. ಇದ್ನೆಲ್ಲಾ ಮಗುನತ್ರನೋ ಬ್ಯಾರೆಯವ್ರತಾವೋ ಹೇಳ್ಕಂಡ್ರೆ ಮನೆ ಮರ್ಯಾದಿ ಹೊಯ್ತುದಲ್ಲಾ ಅಂತ ಅವ್ಡು ಕಚ್ಕಂಡಿದ್ಲು ಮಲ್ಲಣ್ಣರವ್ವ. ಇಂಗಿದ್ದ ಮಲ್ಲಣ್ಣುಂಗೆ ಒಬ್ಬ ಮಗ ಹುಟ್ದ. ಗಂಡ ಇದ್ದಾಗ ಚಿಣುಮಿಣ್ಕಿಯಂಗೆ ತೆಪ್ಪಗಿದ್ದು ಅತ್ತೇನ ಚೆನ್ನಾಗಿ ಬವ್ಣಿಸ್ತಿದ್ದೋಳು, ಮಲ್ಲಣ್ಣ ಅತ್ಲಾಗೋಗದೇ ತಡ ತನ್ನ ವರಾತ ಸುರು ಹಚ್ಕೋತಿದ್ಲು. ಬಯ್ಯದೇನ್ಕೇಳಿ, ಅತ್ತೆ ಸ್ವಾಟೆಗೆ ತಿವಿಯದೇನ್ಕೇಳಿ, ಅವ್ಳುಗೆ ಒದಿಯಾದೇನ್ಕೇಳಿ ಒಂದಲ್ಲ ಎರ್ಡಲ್ಲಾ ಇವ್ಳಕಾಟ. ದಿನಾ ತರೇವಾರಿ ಸಿಕ್ಸೆ ಕೊಡೋಳು ಅತ್ತೆಗೆ. ಇಂಗೇ ಒಂದಿನ ಕೆಲ್ಸಾ ಮಾಡಿ ಸುಸ್ತಾಗಿ ಸೊಸೆ ಕೈಲಿ ಬೈಗ್ಳ, ಒದೆ ತಿನ್ಕಂಡು ಸುಸ್ತಾಗಿ ಮಲ್ಗಿದ್ದ ಮಲ್ಲಣ್ಣರವ್ವುಂಗೆ ತನ್ನ ಮೊಮ್ಮಗ ಅಳೋದು ಕೇಳುಸ್ನಿಲ್ಲ!! ಆದ್ರೆ ಅಲ್ಲೇ ಎಲ್ಲೋ ಅಡ್ಗೆ ಕ್ವಾಣೆವಳೀದ್ದ ನಿಂಗವುಂಗೆ ಅದ್ರ ಸದ್ದು ಕೇಳ್ಸಿ ಈಚ್ಗೆ ಬಂದೋಳೆ
"ಏನೇ ರಂಡೇ!! ನನ್ಮಗ ಅರ್ಚಾದೆ ಕೇಳ್ದೋಳಂಗ್ಬಿದ್ದಿದ್ದೀಯಲ್ಲಾ!! ನಿಂಗ್ಬರ್ಬಾರ್ದ್ಬರ! ನಿಮಗ್ಳು ಸವ್ತಿ ಮಗಾ ಆಗಿದ್ರೆ ಇಂಗೇ ಬುಟ್ಬುಡ್ತಿದ್ದೋ? ಎದ್ಮಗಾ ನೋಡ್ಕಮ್ಮೀ" ಅಂತ ಕೂಗಾಡಿದ್ಲು.
"ಅಯ್ಯೋ!! ತಾಯಿ! ದಿನಾ ನೋಡ್ಕತಿರ್ನಿಲ್ವೆ, ಇವತ್ಯಾಕೋ ಆಯ್ತಿಲ್ಲಾ ವಸಿ ನೀನೇ ನೋಡ್ಕವ" ಅಂತ ಗ್ವಾಗರ್ದ್ಲು ಮುದ್ಕಿ.
"ಎಷ್ಟೇ ಮುದ್ಕಿ ಸೊಕ್ಕು ನಿಂಗೆ, ನಂಗೇ ಹಿಂದಿರಿಕಂಡು ಜವಾಬೇಳಂಗಾದ, ನನ್ಸವ್ತಿ ಮುಂಡೇ, ತಡೀ ನಿಂಗ್ಮಾಡ್ತೀನಿ" ಅಂದೋಳೇ ಅಡ್ಗೆ ಮನೆಯಿಂದ ಈರುಳ್ಳಿ, ಬೊಳ್ಳುಳ್ಳಿ, ಮೆಣ್ಸಿನ್ಕಾಯಿ, ಒನ್ಕೆ ತಂದೋಳೇ
"ಲೇ! ನನ್ಸವ್ತಿ ಅತ್ತೆ ಅನ್ನುಸ್ಕೊಂಡೋಳೆ! ಏಳ್ಲೇ ಮ್ಯಾಕೆ! ಮೆಣ್ಸಿನ್ಕಾಯಿ ಗೆಜ್ಜೆ ಮಾಡಿ ಕಾಲುಕಟ್ಕಂಡು, ಬೆಳ್ಳುಳ್ಳಿ ವಾಲೆ ಮಾಡಿ ಕಿವಿಗಾಕ್ಕಂಡು, ಈರುಳ್ಳಿ ಸರಾ ಮಾಡಿ ಕತ್ಗಾಕಂಡು, ಒನ್ಕೆ ತಾಳ ಹಾಕ್ಕಂಡು ಕುಣೀ ಬಾಮ್ಮಿ!! ಆಗ್ಲೆ ಅಳ್ತಿರೋ ನನ್ಮಗ ಅಳು ನಿಲ್ಸಾದು" ಅಂತಾ ಆ ಮುದ್ಕಿ ಸೊಂಟುದ್ಮೇಲೆ ಜಾಡಿಸಿ ಒದ್ಲು.
’ಇನ್ನೂ ಅಂಗೇ ಇದ್ರೆ ಈ ನನ್ಸೊಸೆ ತಾಟ್ಗಿತ್ತಿ ಬುಟ್ಟಾಳೆ!! ಎಂಗಾರ ಮಾಡಿ ಮಗ ಮಲ್ಲಣ್ಣುಂಗೆ ಇವ್ಳು ಕೊಡೋ ಕಾಟವ ತಿಳ್ಸುಬುಡ್ಬೇಕು! ಇನ್ನ ನನ್ಕೈಯಾಗೆ ತಡೆಯಕಾಗಾಕಿಲ್ಲ’ ಎನ್ನುತ್ತಾ ಮುದುಕಿ ಮೆಣ್ಸಿನ್ಕಾಯಿ ಗೆಜ್ಜೆ ಮಾಡಿ ಕಾಲುಕಟ್ಕಂಡು, ಬೆಳ್ಳುಳ್ಳಿ ವಾಲೆ ಮಾಡಿ ಕಿವಿಗಾಕ್ಕಂಡು, ಈರುಳ್ಳಿ ಸರಾ ಮಾಡಿ ಕತ್ಗಾಕಂಡು, ಒನ್ಕೆ ತಾಳ ಹಾಕ್ಕಂಡು ಕುಣೀಯಾಕೆ ಸುರುಮಾಡುದ್ಲು. ಇವ್ಳದ್ರುಷ್ಟಾನೋ, ನಿಂಗಿ ದುರಾದ್ರುಷ್ಟಾನೋ ಅವತ್ತು ಮಲ್ಲಣ್ಣ ವತ್ನಂತೆ ಮದ್ದೀನುಕ್ಮುಂಚೆ ಮನೆಗ ಬಂದ.
    ಇನ್ನೇನು ಬಾಗ್ಲು ಬಡೀಬೇಕು ಮನೆಯೊಳಗಿಂದ ಅವ್ವನ ಕೀರಾಟ ಕ್ಯೋಳಿ ಯಾಕೋ ಅನ್ಮಾನ ಬಂದು, ಮನೆಮ್ಯಾಕ್ಕತ್ತಿ ಮಾಡಿ ಕಿಂಡಿಯಿಂದ ಇಣ್ಕಿ ನೋಡ್ತಾನೆ, ನಿಂಗಿ ತನ್ನವ್ವುನ್ನ ಮೆಣ್ಸಿನ್ಕಾಯಿ ಗೆಜ್ಜೆ ಮಾಡಿ ಕಾಲುಕಟ್ಕಂಡು, ಬೆಳ್ಳುಳ್ಳಿ ವಾಲೆ ಮಾಡಿ ಕಿವಿಗಾಕ್ಕಂಡು, ಈರುಳ್ಳಿ ಸರಾ ಮಾಡಿ ಕತ್ಗಾಕಂಡು, ಒನ್ಕೆ ತಾಳ ಹಾಕ್ಕಂಡು ಕುಣಿಸ್ತಾವ್ಳೆ!! ಎಲ್ಲಿಲ್ಲುದ ಕ್ವಾಪ ಬಂದು ಇವತ್ತು ನಿಂಗಿ ಕತೆ ಮುಗಿಸ್ಬುಡುವ ಅನ್ಕಂಡು ಮನೆ ಮ್ಯಾಲಿಂದ ಕ್ಯಳಕ್ಕೆ ನೆಗ್ದು, ಚಕ್ಡಿ ಸಿಗಾಕಿದ್ದ ಮಚ್ಚ ಕೈಗ್ತಗಂಡ. ತಕ್ಸಣ ಅವ್ನ ಮನ್ಸು ’ದುಡುಕ್ಬ್ಯಾಡ’ ಅಂತ ಎಚ್ಚರ್ಸ್ತು.
" ಮೇಯ್! ನಿಂಗಿ! ನಾನಿಲ್ದಾಗ ನಮ್ಮವ್ವುನ್ನ ಎಂಗ್ನೋಡ್ಕತಿದ್ದೀ ಅನ್ನೋದು ಗೊತ್ತಾಯ್ತು, ’ಮುಯ್ಯಿಗ್ಮುಯ್ಯಿ’ ಅನ್ವಂಗೆ ನಿಮ್ಮವ್ವುನ್ನ ತಲೆ ಬೋಳ್ಸಿ ಏಳೂರಲ್ಲಿ ಮೆರ್ವಣ್ಗೆ ಮಾಡ್ಸಿ ನಿನ್ಕೈಲೇ ಏಳ್ಮನೆ ಬೂದೀನ ನಿಮ್ಮವ್ವುಂಗೆ ಎರ್ಚಿಸಿ, ನಿಮ್ಮವ್ವುಂಗೆ ನಿನ್ಕೈಲಿ ಪೊರ್ಕೆ ಸೇವೆಮಾಡ್ಸಿ, ನಿಂಗೆ ನಿಮ್ಮವ್ವುನ್ಕೈಲಿ ಹುಣ್ಸೆ ಚಬ್ಬೆ ಏಟ ಉರ್ನೋರ್ಮುಂದೆ ಒಡಿಸ್ನಿಲ್ಲಾಂದ್ರೆ ನನ್ನೆಸ್ರ ’ಮಲ್ಲಣ್ಣ’ ಅಂತಾ ಕರೀಬ್ಯಾಡ ಕಣಮ್ಮಿ" ಅಂತ ಸಪ್ತಾ ಮಾಡಿ ಮನ್ಸಿಗೆ ಸಮಾಧಾನ ಮಾಡ್ಕಂಡು
"ಮೇಯ್! ನಿಂಗಿ ಬಾಗ್ಲು ತೆಗ್ಯಮ್ಮೀ!!" ಅಂತ ಬಾಗ್ಲು ಬಡ್ದ. ನಿಂಗಿ ಎದೆ ಧ್ವಸ್ಗುಟ್ಟೋಯ್ತು!!
"ಎಂದೂ ಇಲ್ದ ನನ್ಗಂಡ ಇವತ್ಯಾಕೆ ಇಷ್ಟು ಜಲ್ದಿ ಬಂದ!!" ಅನ್ಕಳೋಷ್ಟ್ರಲ್ಲಿ ತಿರ್ಗ ಮಲ್ಲಣ್ಣ ಬಾಗ್ಲು ಬಡ್ದ
"ಎಷ್ಟೋತ್ತಮ್ಮೀ !! ಬಾಗ್ಲು ತಗ್ಯಾಕೆ!" ಎಂದ
"ನೀವ ಬತ್ತೀರಿ ಆಂತಾ ಗೊತ್ತಿರ್ನಿಲ್ಲಾ!! ಈಗ ನೀರುಗ್ಕುಂತೀವ್ನಿ, ತಡೀರಿ ವಸಿ ಬಂದೆ" ಅಂದ್ಲು.
"ಅವ್ವ! ಎಲ್ಲ್ಗೋದ್ಲಮ್ಮಿ? ಅವ್ಳುಗೇ ತಗ್ಯಾಕ್ಯೋಳು" ಅಂದ. ನಿಂಗೀಗೆ ಏನ್ಮಾಡ್ಬೇಕು ಅಂತಾ ತಿಳೀನಿಲ್ಲಾ.
"ಇಲ್ಕಣೀ! ಅತ್ಯವ್ವುಂಗೆ ಮೈ ಉಸಾರಿಲ್ಲಾ!! ಮಲ್ಗವಳೆ" ಅಂತ ಬುಡಾಂಗು ಬುಟ್ಳು.
’ಎಂತಾ ಸುಳ್ಳೇಳಿಯೇ ರಂಡೇ, ತಡ್ಕೊ ನಿಂಗೆ ಸರ್ಯಾಗ್ಮಾಡ್ತೀನಿ’ ಅನ್ಕಂಡು ಜಗ್ಲಿ ಮ್ಯಾಲೆ ಕುಂತ್ಕಂಡ. ಅಷ್ಟ್ರಲ್ಲಿ ಅತ್ತೆ ತಾವ್ಕೆ ಬಂದ ನಿಂಗವ್ವ
"ಮೇಯ್! ಬೋಸುಡಿ! ಸರ್ಯಾಗ್ಕೇಳುಸ್ಕೊ! ನಿನ್ಮಗುಂತವೇನಾರ ಬಾಯ್ಬುಟ್ಟೋ ನಿನ್ಮಗ ಯಾವಾಗ್ಲೂ ಹಟ್ಟಿ ವಳ್ಗೇ ಇರಲ್ಲ ಅವ್ನು ಅತ್ಲಾಗೋದಾಂದ್ರೆ ನಿನ್ಪ್ರಾಣ ಸಿವ್ನು ಪಾದ ಸೇರ್ಕಂಡಗೆಯ ಲೆಕ್ಕ" ಅಂತ ತನ್ನತ್ತೆನ ಹೆದ್ರುಸುದ್ಲು. ’ಆಯ್ಕ ತಿನ್ನೊ ಕೋಳಿ ಕಾಲ್ಮುರುದ್ರು ಅನ್ವಂಗೆ ನಾನ್ಯಾಕೆ ನನ್ಮಗುಂತಾವೇಳಿ ಪ್ರಾಣ ಕಳ್ಕಬೇಕು ಅನ್ಕಂಡು ತೆಪ್ಗಾದ್ಲು ಆ ಪಾಪದ ಮುದ್ಕಿ.
    ಸಾನ ಮಾಡೋಳಂಗೆ ತಲ್ಗೆ ಬಟ್ಟೆ ಸುತ್ಕಂಡು ಬಂದು ಬಾಗ್ಲು ತೆಗೆದ್ಲು ನಿಂಗವ್ವ. ಒಳಕ್ಕೆ ಬಾಳಾ ಗಾಬ್ರಿಯಾದೊನಂಗೆ ಒಳಕ್ಬಂದ ಮಲ್ಲಣ್ಣ
"ಮ್ಯೇಯ್!! ನಿಂಗಿ" ಅಂದ ಅದ್ಕೇಳುದ್ದೇ ತಡ ’ಅಯ್ಯೋ ಇವ್ನ ಮನೆಕಾಯ್ವಾಗ ಆಚೆಕಡೆ ನಿಂತ್ಕಂಡು ಏನಾರ ಕ್ಯೊಳಿಸ್ಕಂಡ್ನೊ ಎಂಗೆ’ ಅಂತ  ಎದೆವಳ್ಗೆ ಅವ್ಲಕ್ಕಿ ಕುಟ್ದಂಗಾಯ್ತು.
"ಏನ್ಕಣೀ?" ಅಂದ್ಲು.
"ವಸಿ ಧೈರ್ಯ ತಂದ್ಕಮಿ” ಅನ್ನದ ಕ್ಯೊಳಿ ವಸಿ ಸಮಾಧಾನ ಆದ್ರು ಇನ್ನೇನೋ ಇರ್ಬೇಕು ಅಂತ ಗಾಬ್ರಿಯಾಯ್ತು.
"ಈಗ್ತಾನೆ, ನಿಮ್ಮೂರ ಮಾದಣ ಸಿಕ್ಕಿದ್ದ......ನಿಮ್ಮವ್ವುಂಗೆ......" ಅಂತೀಳಿ ಸುಮ್ಕೆ ಅವ್ಳ ಮಖನೋಡ್ತಾ ನಿಂತ್ಗಂಡ.
"ಏನಂದ ಮಾದಣ್ಣ, ಅದೇನೇಳ್ಕಣಿ..........." ಅಂದ್ಲು.
"....ಏನಿಲ್ಲ... ನಿಮ್ಮವ್ವುಂಗೆ ಏಳೂರ್ಗಾಳಿ ಮೆಟ್ಕಂಡಿದ್ದಂತೆ... ಅದ್ಕೆ ಗದ್ತವಿಂದ ಓಡಬಂದೆ.. ವಸಿ ಪಂಚೆ ತತ್ತಾ, ನಾನೋಗಿ ನೋಡ್ಕಂಡ್ಬತ್ತೀನಿ." ಅಂತ ಅವ್ಸುರ್ದಲ್ಲಿ ಓಡೋದ.
    ಇತ್ಲಾಗೆ ಅತ್ತೇ ಮನ್ಗೆ ಬಂದ ಅಳಿನ ನೋಡಿ ಅತ್ತೆಗೆ ಸಂತೋಸ ಆದ್ರೂ, ಏನೂ ಯೋಳ್ದೆ ನನ್ನಳೀಮಯ್ಯ ಯಾಕ್ಬಂದ ಅನ್ಕಂಡು.
"ಏನಳಿಯಂದ್ರೆ ಚೆಂದಾಕಿದ್ದೀರಾ?" ಅನ್ವಷ್ಟ್ರಲ್ಲೇ..
" ಅಯ್ಯೋ ಬುಡಿ ಅತ್ತೆ, ನಂಗೇನಾದದು ಉಣ್ಕತಿನ್ಕಂದು ಗುಂಡ್ಕಲ್ಲಂಗಿವ್ನಿ, ಆಗಿರಾದೆಲ್ಲಾ ನಿಂಮಗುಳ್ಗೆಯಾ..."
"ಏನಾಯ್ತು ಅಳೀಯಂದ್ರೆ... ಎಂಗ್ವಳೆ.." ಅಂತಾ ಬಡ್ಕಳಾಕೆ ಸುರು ಮಾಡ್ಬುಟ್ಳು.
"ಬಡ್ಕಳವಂತದೇನಾಗಿಲ್ಲ.. ಬಾಣ್ತಿ ಅಲ್ವೇ.. ವಸಿ ಸನ್ನಿ ಹಿಡ್ದೊಳಂಗಾಡ್ತಾವ್ಳೆ ಅಷ್ಟೇಯಾ..." ಅಂದ
" ಅಂಗಾರೆ ಏನ್ಮಾಡ್ಬೇಕು ಈಗ ..?" ಅಂತ ಕ್ಯೊಳುದ್ಲು ಅತ್ತೆ.
" ಹಿಡ್ಕಂಡಿರಾದು ಸಾಮಾನೆ ಸನ್ನಿ ಅಲ್ವಂತೆ, ಅದ್ಕೆ ದಾರೀಲಿ ಬತ್ತ ಜೋಯಿಸ್ರು ತಕೆ ಹೋಗ್ಬಂದೆ, ಇವ್ಳ್ಗಿಡಿದೀರಾದು ಅವ್ವನ ಸನ್ನಿಯಂತೆ, ಅದೋಗ್ಬೇಕು ಅಂದ್ರೆ, ಅವ್ಳ ಹೆತ್ತವ್ವ ಅಂದ್ರೆ ನೀವು, ವಸಿ ಸ್ರಮ ಪಡ್ಬೇಕು ಅಷ್ಟೆಯಾ" ಅಂದ
" ಇರೋಳೊಬ್ಮಗ್ಳು ಅವ್ಳು ಸುಕುಕ್ಕೆ ಏನ್ಮಾಡಾಕೂ ನಾ ತಯಾರು" ಅಂತ ದೈರ್ಯ ಯೋಳುದ್ಲು, ದೈರ್ಯ ತಗಂಡ ಮಲ್ಲಣ್ಣ
" ಏನಿಲ್ಲಾ!! ಅದ್ನಿಮ್ಕೈಲಾಗಲ್ಲ ಬುಡಿ.." ಅಂದ
" ಕಚ್ಚೆ ಕಟ್ಕಂಡು ಮೆರ್ಯದಾಗ್ಲಿ, ಕತ್ತೆ ಉಚ್ಚೇನಾದ್ರೂ ಕುಡ್ದು ನನ್ಮಗ್ಳು ಗುಣಾ ಮಾಡೇನು, ನೀವು ಯೋಚ್ನೆ ಮಾಡ್ಬೇಡಿ ಯೋಳಿ" ಅಂತ ಗ್ವಾಗರುದ್ಲು.
" .. ಓ!! ಇರ್ಲಿ ಬುಡಿ ಅತ್ಲಾಗೆ ಅತ್ಯವ್ವ, ಕಷ್ಟವೋ ಸುಖ್ವೋ ಕಟ್ಗಂಡ್ಮೇಲೇ ಅನ್ಸರುಸ್ಕಬೇಕು, ಹೆಂಗೋ ನನ್ಕರ್ಮ ನಾ ಅನ್ಬವ್ಸೇನು, ನಿಮ್ಗ್ಯಾಕ್ಯೋಳಿ ಆ ತೊಂದ್ರೆ...." ಅಂತ ವಸಿ ಎಳ್ದಾಡ್ದ. ಅತ್ತೆ ಪಿತ್ತ ವಸಿ ನೆತ್ತಿಗೇರ್ತು.
"ನೋಡಿ ಅಳೀದೇವ್ರೇ, ನೀವೀಗ್ಯೋಳ್ನಿಲಾಂದ್ರೆ ನಾ ಸುಮ್ಕಿರಲ್ಲಾ ಅಷ್ಟೇಯಾ !! " ಅಂದ್ಲು.. ಇನ್ನುವೆ ಸತಾಯ್ಸಾದು ಬ್ಯಾಡಾ ಅನ್ಕಂಡ ಮಲ್ಲಣ್ಣ
"ನಿಮ್ಮಗ್ಳುಗೆ ಹಿಡ್ದಿರಾದು ಅಂತಿಂತಾ ಸಾಮಾನೆ ಸನ್ನಿಯಲ್ಲ, ಏಳೂರ ಸ್ಮಸಾನ ಸಾಡೇ ಸನ್ನಿಯಂತೆ..... ಅದ್ಬುಡ್ಬೇಕಂದ್ರೆ ಅವ್ಳೆತ್ತವ್ವ ಅಂದ್ರೆ ನೀವು ಜಡೆಯಿಲ್ದಂಗೆ ತಲೆಯ ನುಣ್ಗೆ ಬೋಳ್ಸಕಂಡು, ಮೈತುಂಬ ಬರೀ ಬೇವುನ್ಸೊಪ್ಪ ಸುತ್ಗಂಡು, ಮೂರ್ಮುಂಡೇರ್ಮನೆ ಬೂದೀನ ತಕ್ಕಂಡು, ತಮ್ಟೆ ಸದ್ನೊಂದ್ಗೆ ಜೋಡ್ಗತ್ತೆ ಸಾರೋಟ್ಮೇಲೆ ನಿಂತ್ಗಂಡು, ಊರೂರ್ಮೇಲೆ ಕುಣ್ಕಂಡು, ನಿಮ್ಮಗ್ಳ ಊರೆಬ್ಬಾಗ್ಲಲ್ಲಿ ನಿಲ್ಲಿಸ್ಕಂಡು, ಬೂದಿ ಎರ್ಚಿ, ಮುಸ್ಸಂದುಗ್ಮುಂಚೆ ಬೇವುನ್ಬಡ್ಕೆಲಿ ಬಡುದ್ರೆ ಇನ್ನೇಳೇಳ್ ಜನ್ಮುಕ್ಕೂ ಆ ಸನ್ನಿ ಬರಲ್ವಂತೆ ಅತ್ತ್ಯವ್ವ.... ಅಂಗಂತ ನಮ್ಮೂರ ತಂಬ್ಡಪ್ಪ ಯೋಳ್ದ. ಏನೇ ಆದ್ರೂ ನೀವು ನನ್ನತ್ತೆ ಅಂದ್ರೆ ನಮ್ಮವ್ವುನ ಸಮಾನ, ನೀವು ಬ್ಯಾರೆ ಅಲ್ಲ ನಮ್ಮವ್ವ ಬ್ಯಾರೆ ಅಲ್ಲ, ನಿಮ್ಮಗ್ಳುಗೆ ಹಿಡ್ಕಂಡಿರೂ ಸನ್ನಿ ಅವ್ಳ ಜೀವ ತಗುದ್ರೂ ಪರ್ವಾಗಿಲ್ಲಾ, ಅವ್ಳುಕೊಟ್ಟಿರೋ ಮಗಿನ್ಮಕ ನೋಡ್ಕಂಡು ಮರೀಬೋದು, ಆದ್ರೆ ನಂಗೆಣ್ಕೊಟ್ಟು ಕಣ್ಕೊಟ್ದೇವ್ರ್ಗೆ ಸಮಾ ಆಗೀರೋ ನಿಮ್ಮುನ್ನ ಅವ್ಮಾನ ಮಾಡಾದು ಯಾವ ನ್ಯಾಯ ಬುಡಿ ಅತ್ಯವ್ವ, ನನ್ಕರ್ಮ ನಾ ಅನ್ಬವ್ಸೇನು" ಅಂತ ಒಂದೇ ಉಸುರ್ಗೆ ವದ್ರಿ ಸುಮ್ಕಾದ.
"ಇಷ್ಟೇಯೇ ಅಳಿಯಂದ್ರೆ ಮಾಡ್ಬೇಕಾಗಿರಾದು, ನೀವೇನು ತಲೆ ಕೆಡಿಸ್ಕಬೇಡಿ, ನಿಮ್ಗೆ ನಮ್ಯಾಲೆ ಎಷ್ಟು ಪ್ರೀತಿ ಅದೇ ಅನ್ನಾದು ನಮ್ಗೇನು ಇಡೀ ಹತ್ತಳ್ಳೀಗೇ ಗೊತ್ತು, ನೀವೋಗಿ ಅದೇನು ತಯಾರಿ ಬೇಕೋ ತಾಡೂಡ್ಮಾಕಳಿ, ಮುಸ್ಸಂದುಗ್ಮುಂದೆ ನಿಮ್ಮೂರೆಬ್ಬಾಗ್ಲುತಾಕೆ ಬತ್ತೀನಿ, ನನ್ಮಗ್ಳು ಕರ್ಕಂಡು ನೀವು ಬನ್ನಿ, ಅದ್ಯಾವ ಸನ್ನಿ ಇದ್ದಾದು ನಾನು ನೋಡೇ ಬುಡ್ತೀನಿ" ಅಂತ ಧೈರ್ಯ ಯೋಳಿ ಅಳಿಯಿನ್ನ ಕಳ್ಗುದ್ಲು.
    ಎದ್ನೋ ಬಿದ್ನೋ ಅನ್ಕಂಡು ಮಲ್ಲಣ್ಣ ಅವ್ನ ಮನೆಗೋಡ್ಬಂದ ಒಂದೇ ಉಸ್ರುಗೆ
"... ಮ್ಯೇಯ್ ನಿಂಗಿ!!... " ಅಂತಾ ಬಾಗ್ಲು ಬಡ್ದ, ’ನಮ್ಮವ್ವುನ್ಗೇನಾಯ್ತೋ ಅಂತ’ ಇಟ್ನು ಉಣ್ದೆಯ ತಲೇ ಮ್ಯಾಲೆ ಕೈಯೊತ್ಗಂಡು ಕುಂತಿದ್ದ ನಿಂಗೀಗೆ ಗಂಡನ ಸದ್ಕೇಳುದ್ದೇ ತಡ ಒಂಟೋಗಿದ್ ಜೀವ ಬಂದಂಗಾಯ್ತು.
" ಏನ್ಕಣಿ, ಅವ್ವೆಂಗವ್ಳೆ?" ಅಂತ ಅತ್ಕಂಡು ಕ್ಯೋಳುದ್ಲು.
"ಏನ್ಯೋಳ್ಲಮ್ಮಿ ನಿಮ್ಮವ್ವುನ್ಕತೆಯಾ? ಆ ಸಿವ್ನೆ ಕಾಪಾಡ್ಬೇಕು" ಅಂತ ಅಳ್ತಾ ಕೂತ್ಕಂಡ, ಗಂಡ ಅಳಾದ್ನೋಡಿ ನಿಂಗೀಗೆ ಅಳ ತಡೀಯಾಕ್ಕಾಗ್ನಿಲ್ಲ.
" ನೀವಳಾದ್ನಿಲ್ಸಿ, ಅದೇನಾಯ್ತು ಅಂತೇಳ್ದೆವೋದ್ರೆ, ಒಡೋಗಿ ಇತ್ಲು ಬಾವಿಗೆ ನೆಗ್ದುಬುಟ್ಟೇನು? ಅದೇನಾಯ್ತೇಳ್ಕಣೀ?" ಅಂತ ಜೋರಾಗಳಾಕ್ಸುರುಮಾಡುದ್ಲು.
"ಎಂಗ್ಯೋಳ್ಲಮ್ಮೀ? ಬೂದಿ ಗಾಳಿಮೆಟ್ಗಂಡು, ಬೋಳ್ತಲೆಮಾಡ್ಕಂಡು, ಮೈತುಂಬ ಬರೀ ಬೇವುನ್ಸೊಪ್ಪ ಸುತ್ಗಂಡು, ತಮ್ಟೆ ಸದ್ನೊಂದ್ಗೆ ಜೋಡ್ಗತ್ತೆ ಸಾರೋಟ್ಮೇಲೆ ನಿಂತ್ಗಂಡು, ಊರೂರ್ಮೇಲೆ ಕುಣ್ಕಂಡು ಇತ್ಲಾಗೆ ಬತ್ತಾವ್ಳೆ ಕಣಾಮ್ಮಿ, ಇದ್ನೆಲ್ಲಾ ನೋಡಾಕೆ ಆ ದೇವ್ರು ನನ್ನಿನ್ನೂ ಬದುಕ್ಸವ್ನಲ್ಲಪ್ಪ, ಸಿವ್ನೆ, ಅಷ್ಟೊಳ್ಳೆ ಅತ್ತೆಗೆ ಇಂತಾ ಗಾಳಿ ಮೆಟ್ಗಬಾರ್ದಿತ್ತು " ಅಂತ ಅವ್ಳಿಂತ ಹೆಚ್ಗೆ ಗೋಳಾಡ್ದ.
" ಅಯ್ಯೋ ಸಿವ್ನೆ ನಮ್ಮವ್ವುಂಗೆ ಬರ್ಬಾದವೆಲ್ಲಾ ಬಂದವಲ್ಲಪ್ಪ ಸಿವ್ನೆ, ಈಗೇನ್ಮಾಡಾದೋ ನಮ್ಮಪ್ಪ" ಅಂತಾ ಎದೆ ಬಾಯಿ ಬಡ್ಕಂಡು ಒದ್ದಾಡಾಕ್ಸುರುಮಾಡುದ್ಲು.
" ಸಮಾದಾನ ಮಾಡ್ಕಮೀ, ಸಮಾದಾನ ಮಾಡ್ಕೋ, ನಿಮ್ಮವ್ವುಂಗೆ ಗಂಡ್ಮಕ್ಳಿಲ್ದಿದ್ರೆನಂತೆ, ನಾನಿಲ್ವ ಎಲ್ಲಾನು ಸರಿ ಮಾಡ್ತೀನಿ, ನೀ ಅಳ್ಬ್ಯಾಡ" ಅಂತ ತಲೆ ಸವ್ರುದ.
"ಎಂಗ್ಸಮಾದಾನಿಸ್ಕಳಾದೇಳ್ಕಣಿ, ಏನಾರ ಮಾಡಿ ನಮ್ಮವ್ವುನ್ನ ಸರಿ ಮಾಡ್ಕಣಿ" ಅಂತ ಗ್ವಾಗರದ್ಲು.
" ಅಂಗೆ ದಾರೀಲ್ಬತ್ತಾ, ಜೋಯಿಸ್ರು, ತಂಬ್ಡಪ್ಪ ಇಬ್ರುನ್ನೂ ನೋಡ್ಕಂಡು, ಏನ್ಮಾಡುದ್ರೆ ಸರಿವೋದಾದು ಅಂತ ಕೇಳ್ಕಬಂದೀವ್ನಿ ಕಣಮ್ಮೀ" ಅಂದ
" ಅದೇನೇಳ್ಕಣಿ, ನಮ್ಮವ್ವುಂಗೆ ನಾ ಏನ್ಮಾಡಾಕು ತಯಾರು " ಅಂದ್ಲು
" ಇನ್ನೇನಿಲ್ಲಾ, ನಿನ್ನಣೇತುಂಬಾ ಕುಂಕುಮವ ಬಳ್ಕಂಡು, ಮೊಣ್ಕಾಲ್ಕಂಟ ಎಂಟ್ಗಜ್ದ ಕೆಂಪ್ಸೀರೆ ಉಟ್ಗಂಡು, ತಲೆ ಕೂದ್ಲ ಗಾಳಿಗ್ಬುಟ್ಟು, ಮೂರ್ಮನೆಯಿಂದ ಮೋಟಂಚಿ ಬರ್ಲ ತಕ್ಕಂಡು, ಮುಸ್ಸಂದುಗ್ಮುಂಚೆ, ಮುಂಬಾಗ್ಲಲಿ, ನಿಮ್ಮವ್ವುನ ಮಖ ತಲೆ ಕೆರುದ್ರೆ, ಮುಂದ್ಲು ಜಲ್ಮುಕ್ಕೂ ತಿರ್ಗಿ ಬರ್ದಂಗೋದದಂತೆ. ಇದೆಲ್ಲಾ ನಿನ್ಕೈಲಾಗಲ್ಲ ಬುಡಮ್ಮೀ, ಅದೂ ಅಲ್ದೆಯಾ, ಎತ್ತವ್ವುಂಗೆ ಮಗ್ಳು ಬರ್ಲಲಿ ಒಡುದ್ರೆ, ಜಗ ಏನಂದಾದು, ಇದೆಲ್ಲಾ ಆಗು ಮಾತಲ್ಲ ತಗೀ. ಬಂದ್ಕರ್ಮ ಎಂಗೋ ನೀಸ್ಕಳವ" ಅಂತ ಗೋಳಾಡ್ದ.
"ಇಷ್ಟೇಯೇ, ನಮ್ಮವ್ವ ಗುಣಾಆಗಾಕೆ ನಾ ಏನಾರಾ ಮಾಡೇನು!! ನೀವೇನು ಬಾದೆ ಪಟ್ಗಬ್ಯಾಡ್ಕಣಿ, ನಮ್ಮವ್ವೆಲ್ಲವ್ಳೇಳ್ಕಣಿ" ಅಂದ್ಲು ನಿಂಗಿ.
"ಮ್ಯೇಯ್!! ಇನ್ನೊಸಿ ಯೋಚ್ನೆಮಾಡಮಿ, ಮೆಟ್ಗಂಡಿರೋ ಗಾಳಿ ಒದಾದೋ ಬುಟ್ಟಾದೋ ಯಾರ್ಗೊತ್ತು, ಆದ್ರೆ ನೀ ಇಂಗೆಲ್ಲಾ ಮಾಡಾದು ನಂಗ್ಸರಿ ಕಾಣಾಕಿಲ್ಕಣಮಿ" ಅಂದ. ನಿಂಗಿಗೆ ಎಲ್ಲಿಲ್ದ ಕ್ಯಾಣ ಬಂದ್ಬುಡ್ತು
" ಅಲ್ಕಣೀ, ನಿಮ್ಮವ್ವುಂಗೇನಾರ ಇಂಗೆ ಆಗಿದ್ರೆ ನೀವೇನಾರ ಬುಟ್ಬುಡೋರಾ? ನಾನಂತು ಅಂಗ್ಮಾಡಿ ನಮ್ಮವ್ವುಂಗ್ಮೆಟ್ಗಂಡಿರೋ ಗಾಳಿ ಬುಡ್ಸೋಳೇಯಾ, ಈಗ ನಮ್ಮಎಲ್ಲವ್ಳೆ? ಅಷ್ಟ್ಯೋಳ್ಕಣಿ" ಅಂತ ತಾಕೀತ್ಮಾಡುದ್ಲು.
"ಏಳೂರ್ಕುಣ್ಕಂಡು, ಮುಸ್ಸಂದ್ಗೆಮುಂದಾಗಿ, ಊರ್ಬಾಗ್ಲುಗೆ ಬಂದ್ರೂ ಬರ್ಬೋದು" ಅಂದ.
ಮುಸ್ಸಂದೆ ಆಯ್ತಾ ಬಂತು ಅತ್ಲಿಂದ ಮಲ್ಲಣ್ನತ್ತೆ ಜಡೆಯಿಲ್ದಂಗೆ ತಲೆಯ ನುಣ್ಗೆ ಬೋಳ್ಸಕಂಡು, ಮೈತುಂಬ ಬರೀ ಬೇವುನ್ಸೊಪ್ಪ ಸುತ್ಗಂಡು, ಮೂರ್ಮುಂಡೇರ್ಮನೆ ಬೂದೀನ ತಕ್ಕಂಡು, ತಮ್ಟೆ ಸದ್ನೊಂದ್ಗೆ ಜೋಡ್ಗತ್ತೆ ಸಾರೋಟ್ಮೇಲೆ ನಿಂತ್ಗಂಡು, ಊರೂರ್ಮೇಲೆ ಕುಣ್ಕಂಡು, ನಿಮ್ಮಗ್ಳ ಊರೆಬ್ಬಾಗ್ಲಲ್ಲಿ ನಿಲ್ಲಿಸ್ಕಂಡು, ಬೂದಿ ಎರ್ಚಿ,  ಬೇವುನ್ಬಡ್ಕೆ ಕೈಲಿಡ್ಕಂಡು ಬಂದ್ರೆ, ಊರೊಳ್ಗಿಂದ ಹೆಡ್ತಿ ನಿಂಗಿ ಹಣೆ ನಿನ್ನಣೇತುಂಬಾ ಕುಂಕುಮವ ಬಳ್ಕಂಡು, ಮೊಣ್ಕಾಲ್ಕಂಟ ಎಂಟ್ಗಜ್ದ ಕೆಂಪ್ಸೀರೆ ಉಟ್ಗಂಡು, ತಲೆ ಕೂದ್ಲ ಗಾಳಿಗ್ಬುಟ್ಟು, ಮೂರ್ಮನೆಯಿಂದ ಮೋಟಂಚಿ ಬರ್ಲ ತಕ್ಕಂಡು
"ಬಾರೆ ಸೀಮ್ಗಿಲ್ದ ಗಾಳಿ ನಿನ್ನ ನುಂಗಿ ನೀರ್ಕುಡೀತೀನಿ" ಅಂತ ಊರ್ನೋರ್ಮುಂದೆ ಕೇಕೆ ಹಾಕುದ್ದ ನೋಡ್ದ ಅತ್ತೆಗೆ ’ಓ ಹ್ಹೋ! ಇವ್ಳುಗಿಡ್ದಿರೋ ಸನ್ನಿ ಸಾಮಾನೆದಲ್ಲ ನನ್ನ ಮುತ್ನಂತ ಅಳಿಯ ಇವ್ಳ ತಡ್ಕಂಡಿರಾದೇ ಹೆಚ್ಚು’ ಅನ್ಕಂಡು
" ನಿಂಗಿಡ್ದಿರಾದು, ಸನ್ನಿಯಾದ್ರೆನು, ಕುನ್ನಿಯಾದ್ರೇನು, ಬೇವುನ್ಬಡ್ಕೇಲಿ ಬಡ್ದು, ಬೇಲಿದಾಟಿಸ್ನಿಲ್ಲಾಂದ್ರೆ ನಾನು ನೀತಗಾರ್ನ ಮನೆಯೋಳೇ ಅಲ್ಲಾ" ಅಂತ ಅಬ್ರುಸ್ಕಂಡು ಬರಾದ್ನೋಡಿ ನಿಂಗಿಗೆ ’ಒಹ್ಹೋ! ಇಂಗೆ ಬುಟ್ರೆ ಗಾಳಿ ನಮ್ಮವ್ವುನ್ನ ಗಟಾರ್ಕೆ ತಳ್ಳಿ, ಗಂಡಾಂತ್ರ ತರಾದು ದಿಟ್ವೆಯಾ’ ಅನ್ಕಂಡು ಮೊಟಂಚಿ ಬರ್ಲಿಂದ ಮಖ, ತಲೆ ಕೆರ್ಯಾಕೆ ಸುರುಮಾಡಿದ್ಲು. ಇವ್ಳಾವಾಗ ಮಕ ಕೆರ್ಯಾಕೆ ಬಂದ್ಲೋ ಮೂರ್ಮುಂಡೇರ್ಮನೆ ಬೂದಿಯ ಇವ್ಳಮ್ಯಾಕೆರ್ಚಿ, ಬೇವಿನ್ಸೊಪ್ಪಿಂದ ಒಡಿಯಾಕ್ಸುರುಮಾಡುದ್ಲು. ಇವ್ರಿಬ್ರ ಜಗ್ಳ ನೋಡಿ ಊರೋರ್ಗೆಲ್ಲಾ ಒಳ್ಳೆ ತಮಾಸೆ ಸಿಕ್ತು. ಇಬ್ರು ಬಡ್ದಾಡಿ ಸುಸ್ತಾಗಿ ಕೆಳಕ್ಬಿದ್ಮೇಲೆ ಮಲ್ಲಣ್ಣ ಇಬ್ರುನುವೆ ಮನೆಗೊತ್ಗಬಂದಾಕ್ದ. ವಸಿ ವತ್ತೋದ್ಮೇಲೆ ಇಬ್ರುಗುವೆ ಎಚ್ರಾಯ್ತು.
" ನಿಂಗೀ ಎಂಗಿದ್ದೀಯಮ್ಮಿ ?" ಅಂತಾ ಅವ್ವ ಕ್ಯೋಳುದ್ಲು. ನಿಂಗೀಗೆ ಅನ್ಮಾನ ಬತ್ತು, ’ಎಲಾ! ಇವ್ಳ ಗಾಳಿ ಮೆಟ್ಗಂಡಿದ್ದು ಇವುಳ್ಗೆ ನನ್ನೆ ಚೆನ್ನಾಗಿದ್ದೀಯಾ ಅಂತಾವ್ಳಲ್ಲ ಅನ್ಕಳ್ವಷ್ಟ್ರಲಿ
" ನಿನ್ನೋಡುದ್ರೆ ಸನ್ನಿ ಬುಟ್ಟಂಗದೆ, ಆ ಸಿವ ದೊಡ್ಡೋನು, ನನ್ಮೊಮ್ಮಗೀಗೆ ಅವ್ವುನ್ನ ಉಳುಸ್ಬುಟ್ಟ" ಅಂತ ಬೋಳ್ತಲೇಲಿ ಛಾವ್ಣಿ ನೋಡ್ಕಂಡು ಕೈ ಮುಗ್ದಾಗ ನಿಂಗೀ ಅನ್ಮಾನ ಇನ್ನೂ ಜಾಸ್ತಿಯಾಗಿ ಗಂಡ ಮಲ್ಲಣ್ಣನ್ಕಡೆಗೆ ನೋಡುದ್ಲು. ಮೀಸೆ ಮರೇಲಿ ಅವ್ನು ನಗಾದಾ ನೋಡಿ ’ಇದೆಲ್ಲಾ ಇವುನ್ದೇ ಕಿತಾಪತಿ’ ಅಂತ ಗೊತ್ತಾಗೋಯ್ತು.
" ಇರ್ಲಿ ಇದ್ಕೆ ತಕ್ಕಂಗೆ ಇವತ್ರಾತ್ರಿ ಆ ಮುಂಡೆ ನಮ್ಮತ್ತೆ ಕತೆ ಮುಗಿಸ್ನಿಲ್ಲಾ.!!! ನನ್ನೆಸ್ರು ಬೇರೆ ಕಟ್ಟು ಅಂತಾ ಅನ್ಕಂಡು ಸಾನ ಮಡಿ ಮಾಡ್ಕಂಡು ಇಟ್ಟು ಉಂಡ್ಬುಟ್ಟು ಎಲ್ಲಾ ಮನಿಕಂಡ್ರು. ಆ ಮುದ್ಕಿರಿಬ್ರು ಕಷ್ಟ ಸುಖ ಮಾತಾಡ್ಕಂಡು ಪಕ್ಪದಲಿ ಮನಿಗಿದ್ರು. ಒಂದೊತ್ತಲಿ ನಿಂಗಿ ಎದ್ಬಂದೋಳೇ, ಅಲ್ಲೇ ಹಸಿನ್ಕತ್ಗೆ ಕಟ್ಟಿದ್ದ ಕರೀ ದಾರ ತಕ್ಕಂಡು ಕೈಎಣ್ಣೆ ದೀಪದ್ಬೆಳ್ಕಲಿ ತನ್ನತ್ತೆ ಕಾಲ್ಗೆ ಕಟ್ಟುದ್ಲು. ಅಲ್ಲೇ ಪಕ್ದಲಿ ಒಂದು ದೊಡ್ಡ ಗೋಣಿಚೀಲಾನೂ ಮಡ್ಚಿ ಮಡ್ಗುದ್ಲು.
"ಅತ್ಯವ್ವ ನಿನ್ಮಗ ಇವತ್ಮಾಡಿರೋ ಅವ್ಮಾನುಕ್ಕೆ ನಾಳೆ ವತ್ತಾರಿಕೆ ನಿನ್ನ ಮೂಡ್ಲು ತೊರೆಲಿ ತೇಳುಸ್ತೀನಿ" ಅನ್ಕಂಡು ಹೋಗಿ ಮನೀಕಂಡ್ಲು. ಮಲ್ಲಣ್ಣುಂಗೆ ಇವ್ಳು ಸರೊತ್ತಲಿ ನಿಂಗಿ ಆಚ್ಗೂ ಇಚ್ಗೂ ಕಳ್ಬೆಕ್ಕೊಡ್ಡಾದಂಗೊಡ್ಡಾಡದ ನೋಡಿ ಅನ್ಮಾನ ಬಂದು ನೋಡ್ತಾನೆ, ಅವ್ರವ್ವುನ ಕಾಲಲಿ ಕರೀ ದಾರ!! ’ಯಾವ್ದುಕು ಇರ್ಲಿ’ ಅನ್ಕಂಡು ಆ ದಾರವ ತಗ್ದು ನಿಂಗಿಯ ಅವ್ವುನ ಕಾಲ್ಗೆ ಕಟ್ಬುಟ್ಟು ಸದ್ಮಾಡ್ದೆ ಹೋಗಿ ಮನಿಕಂಡ.
    ವತ್ತಾರೆ ಕೋಳಿ ಕೂಗಾಕ್ಮುಂಚೆನೆಯಾ ನಿಂಗಿ ಎದ್ದೋಳೆಯಾ ದೀಪ ಗೀಪ ಹಸ್ಸುದ್ರೆ ಎಲ್ಲಿ ಎಲ್ರಿಗೂ ಎಚ್ರಾದಾದೋ ಅನ್ಕಂಡು ಕತ್ಲೇಲೆ ಅವ್ವ ಅತ್ತೇದೀರು ಮನ್ಗಿರಾತಕೆ ತಡ್ಕಾಡ್ಕಂಡು ಹೋಗಿ, ಕರೀದಾರ ಕಟ್ಟಿರೋ ಕಾಲ ಗುರ್ತು ಮಾಡ್ಕಂಡು ಪಕ್ದಲಿದ್ದ ಗೋಣೀಚೀಲ್ದೋಳಕೆ ಮೆತ್ಗೆ ತುಂಬ್ಕಂಡ್ಲು. ಮೂಟೆ ಕಟ್ಟಿ ಸದ್ಮಾಡ್ದಂಗೆ ಹೊತ್ಗಂಡೋಗಿ ಮೂಡ್ಲು ತಿಟ್ನ ತೊರೆವಳಾಕ್ಕೆ ಎಸ್ದುಬುಟ್ಳು. ಹೊತ್ತುಟ್ಟಾಕ್ಮುಂಚೆ ಹಟಿಗ್ಬಂದು ಸೇರ್ಕಂಡ್ಲು.
    ಚೆಂದಾಗಿ ಬೆಳ್ಕಾದ್ಮೇಲೆ ನೋಡ್ತಾಳೆ ಅವ್ರತ್ತೆ ಮೊಮ್ಮಗೀನ್ಜೊತೆ ಆಟಾಡ್ತಾವ್ಳೆ!!! ಅದ್ನೋಡಿ ನಿಂಗಿ ಎದೆ ಧೊಸ್ಸುಕ್ಕಂತು!!!

ಸೋಮವಾರ, ಜನವರಿ 10, 2011

ಫ್ರೆಶ್ -ಜೋಕುಗಳು (ಕದ್ದಿದ್ದು)

ಕಂಬಿ ಎಣಿಸೋದು

ಕಂಬಿ - 1
ಕಂಬಿ - 2
ಕಂಬಿ - 3
ಕಂಬಿ - 4
ಕಂಬಿ - 5
ಕಂಬಿ - 6
ಕಂಬಿ - 7
ಕಂಬಿ - 8
ನೋಡಿದ್ರ ನಿಮ್ಮನ್ನ ಹೇಗೆ ಕಂಬಿ ಎಣಿಸೋ ಹಾಗೆ ಮಾಡಿದೆ !!!

ಮಗನ ಕಂಡಿಶನ್ನು!!

ಅಪ್ಪ : ಡಾಕ್ಟ್ರೆ ಈಗ ನನ್ ಮಗನ ಕಂಡಿಶನು ಹೇಗಿದೆ?

......

ಡಾಕ್ಟ್ರು: ಪರವಾಗಿಲ್ಲ , ನರ್ಸು ಬಂದ್ರೆ ಆಗಾಗ ಕಣ್ ಬಿಟ್ಟು ನೋಡ್ತಾನೆ..........!?!

ಹೃದಯ ಮತ್ತು ಕಿಡ್ನಿ

ರೋಗಿ : 'ಐ ಲವ್ ಯೂ' ನೀನು ನನ್ನ 'ಹೃದಯ' ಕದ್ದಿರುವೆ

ನರ್ಸ್ : ಕ್ಷಮಿಸಿ ನನಗಿಂತ ಮೊದಲೆ ಡಾಕ್ಟರ್ ನಿಮ್ಮ 'ಕಿಡ್ನಿ' ಕದ್ದಿದ್ದಾರೆ.... !!!

ಕಾರಿಗೂ ಮತ್ತು ಲಾರಿಗೂ ಆಕ್ಸಿಡೆಂಟ್

ಕಾರಿಗೂ ಮತ್ತು ಲಾರಿಗೂ ಆಕ್ಸಿಡೆಂಟ್

ಸರ್ದಾರ್ ಕಾರಿಗೂ ಮತ್ತು ಲಾರಿಗೂ ಆಕ್ಸಿಡೆಂಟ್ ಆಯಿತು

ಲಾರಿ ಡ್ರೈವರ್ : ನಾನು ಹೆಡ್‍ಲೈಟ್ ಹಾಕಿ ತೋರಿಸಲಿಲ್ವ ಸೈಡ್ ಕೊಡು ಅಂತ. ?

ಸರ್ದಾರ್ : (ಸಿಟ್ಟಿನಿಂದ) ನಾನು ವೈಫರ್ ಹಾಕಿ ಹೇಳಲಿಲ್ವ ಆಗಲ್ಲ ಅಂತ !!!

ಮೊದಲ ಬಾರಿಗೆ ಕಳ್ಳತನ !!

ಸಂತಾ ಮೊತ್ತಮೊದಲ ಬಾರಿಗೆ ಕಳ್ಳತನ ಮಾಡಲು ಹೋದ

ಕನ್ನ ಹಾಕಿ ಒಳ ನುಗ್ಗಿದ್ದೇ ಮನೆಯೊಡೆಯನಿಗೆ ಎಚ್ಚರವಾಯಿತು. 'ಯಾರು ?' ಎಂದು ಕೇಳಿದ ಮನೆಯೊಡೆಯ ಗದರಿಸುವಿಕೆಯ ಧ್ವನಿಯಲ್ಲಿ

'ಮಿಯಾಂವ್' ಎಂದ ಸಂತಾ

'ಯಾರು ?' ಎಂದು ಇನ್ನೂ ಗಟ್ಟಿಯಾಗಿ ಕೇಳಿದ ಯಜಮಾನ.

'ಮಿಯಾಂವ್ ಮಿಯಾಂವ್' ಎಂದ ಸಂತಾ. !

'ಯಾರು..... ಹೇಳಿ ? ' ಎಂದ ಯಜಮಾನ ಇನ್ನೂ ಗಟ್ಟಿಸ್ವರದಲ್ಲಿ

'ಬೆಕ್ಕು.... ಬೆಕ್ಕು' ಎಂದ ಸಂತಾ ಮೆಲುದನಿಯಲ್ಲಿ !!

ಬ್ಲ್ಯಾಕ್ ಮೇಲ್ ಕರೆಗಳು

ಪುಂಡ : ನನ್ ಫೋನಿಗೆ ಬ್ಲ್ಯಾಕ್ ಮೇಲ್ ಕರೆಗಳು ಬರ್ತಾ ಇವೆ ಸರ್ ?

ಪೋಲೀಸ್ : ಏನಂತ ? 

ಪುಂಡ : ರೀಚಾರ್ಜ್ ಮಾಡಿಸಿಲ್ಲ ಅಂದ್ರೆ ಕನೆಕ್ಷನ್ ಕಟ್ ಮಾಡ್ತೀವಿ ಅಂತಾ..!!

ಲಿಫ್ಟ್

ಒಂದು ಸ್ಕೂಟರ್ ನಲ್ಲಿ ಮೂವರು ಸರ್ದಾರ್‍ಗಳು ಹೋಗ್ತಾಯಿದ್ರು. ಟ್ರಾಫಿಕ್ ಪೋಲೀಸ್ ಕೈ ಅಡ್ಡ ಹಿಡಿದು ನಿಲ್ಲಿಸುವಂತೆ ಸೂಚಿಸಿದ

ಸರ್ದಾರ್ : ಸಾರಿ ಈಗಾಗಲೇ ಮೂವರಿದ್ದೇವೆ ನೋ ಮೋರ್ ಲಿಫ್ಟ್!!

ಐ ಲವ್ ಯು ಟೂ...

ಸಂತಾ: ನಾನು ಒಂದು ಹುಡುಗಿಯನ್ನು ಲವ್ ಮಾಡ್ತಾ ಇದ್ದೇನೆ.

ನಾನು ಅವಳಿಗೆ I LOVE U ಅಂತ ಹೇಳಿದ್ರೆ, 

ಅವಳು ಹೇಳಿದಳು ...I LOVE U 2 ಅಂತ.

ಆದ್ರೆ ಇನ್ನೊಬ್ಬ ಯಾರು ಅಂತ ಗೊತ್ತಾಗ್ಲಿಲ್ಲ.....!!!!

ನಾರದನ ಕಿತಾಪತಿ !

ನಾರದ ಹೇಳಿದ : ನಿಮ್ಮ ಪ್ರೇಯಸಿ ನಿಮಗೆ ರೋಮ್ಯಾಂಟಿಕ್ ಮೆಸೇಜ್ ಕಳಿಸಿದ್ರೆ ಖುಷಿಪಡಿ. 

ಆದರೆ,

.

.

ಒಮ್ಮೆ ಯೋಚಿಸಿ ಆ ಮೆಸೇಜ್‍ನ್ನು ನಿಮ್ಮ ಪ್ರೇಯಸಿಗೆ ಯಾರು ಕಳಿಸಿದ್ದು ಎಂದು ???

ನನ್ನ ಕೆಲಸ ಮುಗಿಯಿತು.... ನಾರಾಯಣ...... ನಾರಾಯಣ !!!

ಭಾನುವಾರ, ಜನವರಿ 9, 2011

"ಬಾಲ್ಯ" ಅಂದು - ಇಂದು

ನಮ್ಮ ಬಾಲ್ಯ ನಿಜಕ್ಕೂ ಎಷ್ಟು ಚೆನ್ನಾಗಿತ್ತು. ಆಟವಾಡಲು ಒಂದಷ್ಟು ದಂಡಿ ಸ್ನೇಹಿತರು, ಮೈ ಮನಗಳಿಗೆ ಮುದನೀಡುವ ಹತ್ತು ಹಲವು ಬಗೆಬಗೆಯ ಆಟಗಳು, ಬೇಜಾರಾದಾಗ ಜಗಳವಾಡಲು ಚಡ್ಡಿದೋಸ್ತಿಗಳು, ಗೋಳು ಹೊಯ್ದುಕೊಳ್ಳಲು ಎದುರುಮನೆಯ ಮುದುಕಜ್ಜಿ, ಮಿತಿಮೀರಿದಾಗ ಬಾಸುಂಡೆ ತರಿಸುತ್ತಿದ್ದ ಅಪ್ಪನ ಚಬ್ಬೆ ಏಟುಗಳು, ತಪ್ಪು ಮಾಡಿ ಸಿಕ್ಕಿಬೀಳುವ ಮುನ್ನ ಬಚ್ಚಿಟ್ಟುಕೊಳ್ಳಲು ಅಮ್ಮನ ಸೆರಗು, ಎಂದೆಂದಿಗೂ ನಮಗೆ ಬೇಕಾದ್ದನ್ನು ಕೊಡುವ ಜಾದೂ ಪೆಟ್ಟಿಗೆಯಂತಹ ಅಜ್ಜಿಯ ’ಬಾಳೇಪಟ್ಟು’, ಬೆನ್ನುಬಾಗಿ ತಲೆ ನೆಲ ನೋಡುತ್ತಿದ್ದರೂ ಆಕಾಶಕ್ಕೆ ಮುಖಮಾಡಿದ್ದ ಅಜ್ಜನ ಬಿಳಿ ’ಗಿರಿಜಾಮೀಸೆ’, ಪಕ್ಕದ ತೋಟದ ಬೇಲಿಗೆ ನುಗ್ಗಿ ಕದ್ದು ತಿನ್ನುತ್ತಿದ್ದ ಸೀಬೆಕಾಯಿ, ಮಾವಿನಕಾಯಿ, ತೋಟದ ಯಜಮಾನ ಅಟ್ಟಿಸಿಕೊಂಡು ಬಂದಾಗ ಸಿಗದೆ ಆತನನ್ನೇ ಅಣಕಿಸಿ ಪೇರಿಕಿತ್ತದ್ದು, ಆಟವಾಡಿ ಸುಸ್ತಾಗಿ ಉಂಡರೂ ನಿದ್ದೆ ಬಾರದಿದ್ದಾಗ ಅಮ್ಮನ ಇಂಪಾದ ಲಾಲಿ ಹಾಡು, ಅಜ್ಜಿಯ ಕುತೂಹಲ ಕಥೆಗಳು
     ವಾವ್ಹ್!!! ವಾರೆವ್ಹಾ!!!! ಎಂತಾ ದಿವೀನಾದ ದಿನಗಳು. ಒಂದೇ ಎರಡೇ ಹಳೆಯ ಬಾಲ್ಯದ ನೆನಪುಗಳು ಕೊಡುವಷ್ಟು ಮುದವನ್ನು ನಂತರದ ಯಾವದಿನಗಳನ್ನು ಜ್ನಾಪಿಸಿಕೊಂಡರೂ ಸಿಗುವುದಿಲ್ಲ.
    ಆದರೆ ಇಂದಿನ ಪೀಳಿಗೆಯ ಮಕ್ಕಳು ಇದನ್ನೆಲ್ಲಾ ಪಡೆಯಲು ಸಾಧ್ಯವೇ ಇಲ್ಲ ಎನ್ನುವುದು ಅರಗಿಸಿಕೊಳ್ಳಲಾಗದ ಕಟು ಸತ್ಯ. ’ಸ್ವಿಚ್’ ಆನ್ ಮಾಡಿದಾಗ ಪ್ರಾರಂಭವಾಗಿವ ’ಮೆಷೀನಿನಂತೆ’ ಬೆಳಿಗ್ಗೆ ಎದ್ದು ಶಾಲೆಗೆಹೋಗಿ ಮೇಡಮ್ಮು ಹೇಳಿಕೊಟ್ಟ ’ವೇದವಾಕ್ಯ’ಗಳೇ ಸತ್ಯ ಎಂದು ತಿಳಿದು ಸಂಜೆ ಮನೆಗೆ ಬಂದು ಉಂಡು ಮಲಗುವುದರಲ್ಲೇ ಕಳೆದು ಹೋಗಿರುತ್ತದೆ. ಇನ್ನು ಆಟಗಳೋ ಚೆನ್ನಾಗಿ ಆಡಲು ಬರುವ ಕೆಲ ಮಕ್ಕಳಿಂದ ಫುಟ್ಬಾಲೋ ಕ್ರಿಕೆಟ್ಟೋ ಯಾವುದೋ ಒಂದನ್ನು ಮೇಷ್ಟ್ರು ಆಡಿಸುತ್ತಾರೆ ಉಳಿದವರು ತಾವೇ ಆಡಿದಷ್ಟು ಸಂತೋಷದಿಂದ ಚಪ್ಪಾಳೆ ತಟ್ಟಿ ಕೇಕೆ ಹಾಕಿ, ಹುಡುಗೀರಮುಂದೆ ಎರಡು ಸ್ಟೆಪ್ ಹಾಕಿ ಮನೆ ಸೇರಿಕೊಂಡರೆ ಮುಗೀತು. ಇನ್ನುಳಿದ ಸಮಯವೆಲ್ಲಾ ಟಿ. ವಿ. ಅಥವಾ ಕಂಪ್ಯೂಟರ್ ಗೇಮ್ಸ್ ನಲ್ಲಿ ಮುಗಿದು ಹೋಗಿರುತ್ತದೆ. ಈಗ ಸ್ಕೂಲಿಗೆ ಹೋಗುವ ಯಾವುದೇ ಮಗುವನ್ನು ಕೇಳಿ ನೋಡಿ ’ಮರಕೋತಿ ಆಟ’ ಗೊತ್ತೆ ಎಂದು ’ಸರ್ ಮರ ಗೊತ್ತು ಕೋತಿ ಗೊತ್ತು ಅವೆರಡೂ ಆಡ್ಕೊಂಡ್ರೆ ನಿಮ್ಗೇನು?’ ಅಂದೀತು.
    ಇದನ್ನೆಲ್ಲಾ ನೋಡಿದಾಗ ಇಂದಿನ ಮಕ್ಕಳು ಏನೆಲ್ಲವನ್ನು ಕಳೆದುಕೊಡಿದ್ದಾರೆ ಅನ್ನಿಸದಿರುವುದಿಲ್ಲ. ಇದರಲ್ಲಿ ಮಕ್ಕಳ ತಪ್ಪೇನೂ ಇಲ್ಲ ಬಿಡಿ. ಶಿಶುವಿಹಾರದ ಮಗು ’ಅ ಆ ಇ ಈ’ ಬಿಟ್ಟು ’ಎ ಬಿ ಸಿ ಡಿ’ ಎಂದರೇ ನಮಗೇ ಬಹಳ ಸಂತೋಷ. ’ನಾಯಿಮರಿ ನಾಯಿಮರಿ ತಿಂಡಿ ಬೇಕೆ?’ ಎನ್ನುವುದಕ್ಕಿಂತ ’ಬಾ ಬಾ ಬ್ಲ್ಯಾಕ್ ಶಿಪ್’ ಎನ್ನುವ ಕರ್ಕಶವೇ ನಮಗೆ ಅಪ್ಯಾಯಮಾನವಾಗಿಬಿಟ್ಟಿದೆ.  ಟಿ.ವಿ ಯ ರಿಯಾಲಿಟಿ ಶೋ ನಲ್ಲಿ ಯಾವುದೋ ಮಗು ಡ್ಯಾನ್ಸ್ ಮಾಡುತ್ತಿದ್ದರೆ ’ಏಯ್!! ನೀನೂ ಡ್ಯಾನ್ಸ್ ಮಾಡಿ ಪ್ರೈಝ್ ತರ್ಬೇಕು’ ಎಂದು ಒತ್ತಾಯಮಾಡುವ ಅಪ್ಪ ಅಮ್ಮಂದಿರೇ ಜಾಸ್ತಿ ಇರುವಾಗ ಹೆಣ್ಣು ಮಕ್ಕಳಿಗೆ ರಂಗೋಲಿ ಹೇಳಿಕೊಡುವ ಅಮ್ಮ, ತಪ್ಪು ತಿದ್ದಿ ಬುದ್ದಿ ಹೇಳುವ ಅಪ್ಪಂದಿರನ್ನು ಹುಡುಕುವುದು ದುರ್ಲಭವೇ ಸರಿ. ಕುಂಟೋಬಿಲ್ಲೆ, ಗಿಲ್ಲಿ ದಾಂಡು ಆಡುವ ಮಕ್ಕಳಿಗೇನು ಕಿರೀಟ ಸಿಕ್ಕುವುದಿಲ್ಲ ನಿಜ, ಆದರೆ ಕಂಪ್ಯೂಟರ್ ಮುಂದೆ ಕುಳಿತು ಕುರುಕಲು ತಿಂಡಿ ತಿನ್ನುವ ಮಕ್ಕಳಿಗಿಂತ ಖಂಡಿತಾ ಚುರುಕಾಗಿರುತ್ತಾರೆ.
    ಇಂದು ನಾವು ಎಲ್ಲದಕ್ಕೂ ’ಕೋಚ್ ಗಳನ್ನೇ ’ ಅವಲಂಬಿಸಿದ್ದೇವೆ, ಹುಟ್ಟಿದ ಮಗುವಿಗೆ ಹೇಗೆ ಹಾಲುಣಿಸಬೇಕು ಎನ್ನುವುದರಿಂದ ಹಿಡಿದು, ಅವುಗಳ ಲಾಲನೆ ಪಾಲನೆ, ಓದು, ಆಟ ಪಾಠ ಎಲ್ಲದ್ದಕ್ಕೂ ನಾವು ’ಉತ್ತಮ ಕೋಚ್’ ಹುಡುಕುವುದರಲ್ಲಿ ನಿಸ್ಸೀಮರಾಗಿದ್ದೇವೆ. ಯಾವುದೇ ಕೋಚಿಂಗ್ ಇಲ್ಲದೆ ಕಲಿತು ಒಂದು ಉತ್ತಮ ಹುದ್ದೆಯಲ್ಲಿದ್ದು ಎಲ್ಲವನ್ನೂ ಸ್ವತಃ ಸಾಧಿಸಿದ ಅಪ್ಪ ಅಮ್ಮಂದಿರಗೂ ತಮ್ಮ ಅನುಭವವನ್ನೇ ತಮ್ಮ ಸ್ವಂತ ಮಕ್ಕಳಿಗೆ ಧಾರೆಯೆರೆಯಲು ಸಾಧ್ಯವಾಗದಂತಹ ಧಾವಂತದ ಬದುಕಿನಲ್ಲಿ ಇಂದಿನ ಚಿಣ್ಣರ ಬಾಲ್ಯ ಮರುಟಿ ಹೋಗುತ್ತಿರುವುದು ಸತ್ಯ.
     ಅದಕ್ಕಾಗಿಯೇ ಬಾಲ್ಯವಲ್ಲದ ಭ್ರಮಾಲೋಕವನ್ನೇ ಬಾಲ್ಯ ಎಂದುಕೊಂಡಿರುವ ಇಂದಿನ ಮಕ್ಕಳಿಗೆ ಬಾಲ್ಯದ ಬಾಲ್ಯವನ್ನು ಬಾಲ್ಯವನ್ನಾಗಿಯೇ ಅರ್ಥವತ್ತಾಗಿ ಅನುಭವಿಸುವಂತೆ ಮಾಡುವ ಗುರುತರ ಜವಬ್ದಾರಿ ಎಲ್ಲಾ ತಂದೆ ತಾಯಿಂದರ ಮೇಲಿದೆಯಲ್ಲವೆ?