ಗುರುವಾರ, ಆಗಸ್ಟ್ 25, 2011

ದೇಶಪ್ರೇಮವಿಲ್ಲದ ’ಜಾತ್ಯಾ’ತೀತ ರಾಷ್ಟ್ರದಲ್ಲಿ ಮಾತ್ರ ಇಂತಹ ಘಟನಾವಳಿಗಳು ಸಾಧ್ಯ!!

ಸ್ವಾತಂತ್ರ್ಯ ದಿನದಂದು ಟಿ. ವಿಯಲ್ಲಿ ಬರುತ್ತಿದ್ದ ಹಲವಾರು ಭಾಷಣಗಳಲ್ಲಿ ’ಭಾರತ ಒಂದು ಜಾತ್ಯಾತೀತ ರಾಷ್ಟ್ರ’ ಎಂದು ಅನೇಕಬಾರಿ ಇಣುಕಿದ್ದರಿಂದ ಪಕ್ಕದಲ್ಲೇ ಕುಳಿತಿದ್ದ ೧೧ ವರ್ಷದ ನನ್ನ ಅಣ್ಣನ ಮಗ ’ಚಿಕ್ಕಪ್ಪ ಜಾತ್ಯಾತೀತ ರಾಷ್ಟ್ರ ಎಂದರೇನು?’ ಎಂದ. ’ಯಾವುದೇ ಜಾತಿ ಭೇಧವಿಲ್ಲದೆ, ಎಲ್ಲಾ ಧರ್ಮದವರು ಸಮಾನವಾಗಿ ಬದುಕುವ ರಾಷ್ಟ್ರಕ್ಕೆ ಜಾತ್ಯಾತೀತ ರಾಷ್ಟ್ರ ಎನ್ನುತ್ತಾರೆ’ ಎನ್ನುವ ೨೦ - ೨೫ ವರ್ಷಗಳ ಕೆಳಗೆ ಸ್ಕೂಲಿನಲ್ಲಿ ಕಲಿತದ್ದನ್ನು ಅವನಿಗೆ ವಿವರಿಸಿದೆ.
’ಅಂದ್ರೆ, ನಾವು ಯಾರನ್ನೂ ನೀವು ಯಾವ ಜಾತಿ ಅಂತ ಕೇಳಬಾರದು ಅಲ್ವೇ?’ ಎಂಬ ಅವನ ಮರು ಪ್ರಶ್ನೆಗೆ ’ಹೌದಪ್ಪ’ ಎಂದು ತಲೆಯಾಡಿಸಿದೆ.
’ಹಾಗಾದ್ರೆ ನಮ್ಮ ಸ್ಕೂಲು ಅರ್ಜಿಯಲ್ಲಿ ’ನಿಮ್ಮ ಜಾತಿ ಯಾವುದು ನಮೂದಿಸಿ’ ಅಂತ ಯಾಕಿರುತ್ತೆ?’ ಎಂಬ ಅವನ ಮತ್ತೊಂದು ಮರುಪ್ರಶ್ನೆಗೆ ನಾನು ಅಕ್ಷರಶಃ ನಿರುತ್ತರನಾಗಿದ್ದೆ!
ಏಕೆ ಈ ಘಟನೆಯನ್ನು ಇಲ್ಲಿ ಪ್ರಸ್ತಾಪಿಸಿದ್ದೇನೆಂದರೆ ನಾವು ನಮ್ಮ ಮಕ್ಕಳಲ್ಲಿ ’ನಮ್ಮ ದೇಶ’ ’ನಮ್ಮ ಭಾಷೆ’ ಎಂದು ಕಲಿಸುವುದಕ್ಕಿಂತಾ ಮೊದಲೇ ’ನಮ್ಮ ಜಾತಿ’ ಎಂಬ ವಿಷಬೀಜವನ್ನು ನಮಗರಿವಿಲ್ಲದಂತೆಯೇ ನೆಟ್ಟು ಬೆಳೆಸಿ, ಅದು ಹೆಮ್ಮರವಾಗುವಂತೆ ನೋಡುಕೊಳ್ಳುವಲ್ಲಿ ಯಶಸ್ವಿಯೂ ಆಗಿರುತ್ತೇವೆ!! ಎಷ್ಟರ ಮಟ್ಟಿಗೆ ಎಂದರೆ ಇಮಾಮ್ ಬುಖಾರಿ ಯಂತಹ ಕರ್ಮಠರು ’ಅಣ್ಣಾ ಮುಸ್ಲೀಮರನ್ನು ಹೋರಾಟಕ್ಕೆ ಏಕೆ ಆಹ್ವಾನಿಸಿಲ್ಲ’ ಎಂದು ಕೇಳಿದಾಗ ಒಂದು ಸದುದ್ದೇಶಕ್ಕಾಗಿ ಹೋರಾಡುತ್ತಿರುವ ಅಣ್ಣಾ ಹಜಾರೆಯವರನ್ನು ಅನುಮಾನದಿಂದ ನೋಡುತ್ತೇವೆಯೇ ಹೊರತು ’ಯಾಕಪ್ಪ ಇಮಾಮ್ ಸಾಬ್ರೇ, ನೀವೇನು ಭಾರತೀಯರಲ್ಲವೇ?, ನಿಮಗೇನು ಭ್ರಷ್ಟಾಚಾರದ ಬಿಸಿ ತಟ್ಟಿಲ್ಲವೇ? ಅಣ್ಣಾ ಹಜಾರೆ ಕರೆ ಕೊಟ್ಟಿದ್ದು, ಹೋರಾಡುತ್ತಿರುವುದು ಬರೀ ಹಿಂದೂಗಳಿಗೋಸ್ಕರವಷ್ಟೇ ಅಲ್ಲ, ಮುಸ್ಲೀಮರು, ಕ್ರಿಸ್ತರು, ಬೌದ್ಧರು ಇತರರೂ ಸಹಬಾಳ್ವೆ ನಡೆಸುವ ’ಜಾತ್ಯಾ’ತೀತವಾದ ಭಾರತಕ್ಕೆ’ ಎಂದು ತಪರಾಕಿ ಕೊಡುವ ಕೊಡುವ ಧೈರ್ಯ ಯಾವೊಬ್ಬ ಭಾರತೀಯ ನಾಯಕನಿಗೂ ಇರಲಿಲ್ಲ! ಬದಲಾಗಿ ಹೋರಾಟವನ್ನು ಹತ್ತಿಕ್ಕಲು ಇದನ್ನೇ ಗುರಾಣಿಯಂತೆ ಬಳಸಲು ಆಡಳಿತ ಸರ್ಕಾರ ತಯಾರಿ ನಡೆಸುತ್ತಿದ್ದರೆ, ಸರ್ಕಾರ ತಪ್ಪು ಹೆಜ್ಜೆ ಇಟ್ಟಾಗ ಕಿವಿ ಹಿಂಡಿ ಸರಿದಾರಿಗೆ ತರಬೇಕಾದ ವಿಪಕ್ಷಗಳು ’ಜನಲೋಕಪಾಲ ಕಾಯ್ದೆ ಬಂದರೆ ನಮ್ಮ ಬುಡವೂ ನೀರಾದೀತು?’ ಎಂಬ ಭಯದಿಂದ ಜಾಣಕಿವುಡು - ಕುರುಡು ಪ್ರದರ್ಶಿಸುತ್ತವೆ.
    ಈಗ್ಗೆ ಎರಡು ಮೂರು ವರ್ಷಗಳ ಕೆಳಗೆ ಆಸ್ಟ್ರೀಲಿಯಾದಲ್ಲಿ ಭಯೋತ್ಪಾದಕರ ದಾಳಿಯಾದಾಗ ಅಲ್ಲಿನ ಭಯೋತ್ಪಾದನಾ ಸಂಘಟನೆಯೊಂದು ಇದೇ ರೀತಿ ಹೇಳಿಕೆ ನೀಡಿದಾಗ ಆಗಿನ ಪ್ರಧಾನಿ ’ಜಾನ್ ಹೋವಾರ್ಡ’ ಕೊಟ್ಟ ಉತ್ತರ ’ಮೊದಲು ನೀವು ಆಸ್ಟ್ರೇಲಿಯನ್ನರು, ನಂತರ ನಿಮ್ಮ ಧರ್ಮ, ಹಾಗಿದ್ದಲ್ಲಿ ನಿಮಗಿಲ್ಲಿ ಜಾಗ, ಇಲ್ಲವೇ ಪರಿಸ್ಥಿತಿ ಎದುರಿಸಿ!’ ಎಂಬ ದಿಟ್ಟ ಉತ್ತರ ಕೊಟ್ಟಿದ್ದರು. ಹಾಗೆ ಉತ್ತರಿಸಲು ನಮ್ಮ ನಾಯಕರಿಗೇಕೆ ಸಾಧ್ಯವಿಲ್ಲ?
    ಅದು ಒತ್ತಟ್ಟಿಗಿರಲಿ ಒಂದು ಉತ್ತಮ ಸಾಮಾಜಿಕ ಉದ್ದೇಶದಿಂದ ಕೂಡಿದ ಒಂದು ಚಳುವಳಿಯನ್ನು ಹೇಗೆಲ್ಲಾ ಹತ್ತಿಕ್ಕಬಹುದೆಂದು ಯು. ಪಿ. ಎ ಸರ್ಕಾರವನ್ನು ನೋಡಿ ಇಡೀ ಪ್ರಪಂಚವೇ ಕಲಿಯಬೇಕು!! ಮಾತುಕತೆಗೆ ಆಹ್ವಾನಿಸುವ ನೆಪದಲ್ಲಿ ಕಾಲಹರಣ ಮಾಡುತ್ತಾ ಸಂಸದೀಯ ಸಮಿತಿ ಮುಂದೆ ನಿಮ್ಮ ಕರಡನ್ನು ಇಡಬೇಕು, ಇದು ಸಂಸತ್ ವ್ಯವಸ್ಥೆ, ಅದನ್ನು ಮುರಿಯಲಾಗದು, ಹಾಗದಲ್ಲಿ ಅದು ಪ್ರಜಾಪ್ರಭುತ್ವಕ್ಕೆ ಮಾಡುವ ಅತೀ ದೊಡ್ಡ ಅವಮಾನ!! ಇತ್ಯಾದಿ, ಇತ್ಯಾದಿ ಬೊಗಳೆ ಬಿಡುವ ಕೇಂದ್ರ ಸರ್ಕಾರ, ತನಗೆ ಬೇಕಾದ ಅದೆಷ್ಟೋ ಮಸೂದೆಗಳನ್ನು ಸಂಸದೀಯ ಸಮಿತಿ ಮುಂದಿಡದೆ ಸಂಸತ್ತಿನಲ್ಲಿ ಅನುಮೋದನೆ ಪಡೆದಿರುವುದನ್ನು ಮರೆತೇ ಬಿಡುತ್ತದೆ. ಜೊತೆಗೆ ಅರುಣಾ ರಾಯ್, ಅರುಂಧತಿ ರಾಯ್ ಅಂತಹವರನ್ನು ಮಾಧ್ಯಮಗಳ ಮೂಲಕ ಛೂ ಬಿಟ್ಟು, ಬೆಣ್ಣೆಯಲ್ಲಿ ಕೂದಲು ತೆಗೆವಂತಹ ನಾಜೂಕಾದ ಹೇಳಿಕೆಗಳನ್ನು ಕೊಡಿಸಿ ಚಳುವಳಿಯನ್ನೇ ದಾರಿತಪ್ಪಿಸುವ ತನ್ನ ಚಾಳಿಯನ್ನು ಮುಂದುವರೆಸುತ್ತದೆ. ಇದಕ್ಕೆಲ್ಲಾ ಕಳಶಪ್ರಾಯವೆಂಬಂತೆ ಪ್ರಣವ್ ಮುಖರ್ಜಿ ಎನ್ನುವ ದೂರ್ವಾಸ ಮುನಿಯನ್ನು ಸರ್ಕಾರದ ಪರವಾಗಿ ಅಣ್ಣಾತಂಡದೊಡನೆ ಮಾತುಕತೆಗೆ ಕಳುಹಿಸಿ ’ಏನಾದರೂ ಮಾಡಿಕೊಳ್ಳಿ, ಅಣ್ಣಾ ಸತ್ತರೆ ನಮಗೇನೂ ನಷ್ಟವಿಲ್ಲ’ ಎಂಬಂತಹ ಬೇಜಾವಬ್ದಾರಿ ಸಂದೇಶವನ್ನು ಕಳುಹಿಸುತ್ತದೆ.
    ಅಸಲಿಗೆ ಜನಲೋಕಪಾಲ ಕಾಯ್ದೆಯಿಂದ ಜನರಿಗೆ ಕೆಟ್ಟದ್ದಾಗುತ್ತದೋ ಒಳ್ಳೆಯದಾಗುತ್ತದೋ ಅದರ ಜಿಜ್ನಾಸೆ ಬೇರೆ. ಆದರೆ ಸರ್ಕಾರವೂ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ಅದರ ಬಗ್ಗೆ ನಿರಾಸಕ್ತಿ ತೋರುವ ಮೂಲಕ ಪ್ರತೀ ಹಂತದ ಭ್ರಷ್ಟಾಚಾರದಿಂದ ಬೇಸತ್ತ ಜನಗಳಲ್ಲಿ ಜನಲೋಕಪಾಲ ಮಸೂದೆಯಿಂದ ಮಾತ್ರ ಭ್ರಷ್ಟಾಚಾರದ ಬುಡಮೇಲು ಸಾಧ್ಯ! ಎನ್ನುವ ಆಶಾಕಿರಣ ಮೂಡಿಸಲು ಕಾರಣವಾಗಿವೆ. ಅದಲ್ಲದೆ ಸರ್ಕಾರ ಮತ್ತು ಕೆಲ ’ಬುದ್ಧಿ ಜೀವಿಗಳು’ ಹೇಳುವಂತೆ ’ಅಣ್ಣಾ ತಂಡ ಬ್ಲಾಕ್-ಮೇಲ್ ತಂತ್ರ ಅನುಸರಿಸುತ್ತಿದೆ’ ಎನ್ನುವ ಮಾತು ಸ್ವಲ್ಪ ಸತ್ಯಕ್ಕೆ ಹತ್ತಿರವೆನಿಸಿದರೆ ರಾಜಕೀಯ ಪಕ್ಷಗಳ ಹಠಮಾರಿತನದ ಧೋರಣೆಯಿಂದ ’ಮಾಡಿದರೆ ತಪ್ಪೇನು?’ ಆಗಲಾದರೂ ಒಳಿತಾದೀತು ಎನ್ನುವ ಭಾವನೆ ಸಾಮಾನ್ಯನದ್ದು.
    ಬಹುಶಃ ವ್ಯತಿರಿಕ್ತಗಳಿಗೆ ನಮ್ಮ ದೇಶದ ಇತಿಹಾಸವೂ ಕಾರಣ! ಇದುವರೆಗೆ ನಮ್ಮದೇಶದಲ್ಲಿ ನಡೆದ ಹೋರಾಟಗಳೆಲ್ಲವೂ ಬಡವರಿಂದ, ಶೋಷಿತವರ್ಗದವರಿಂದ ಪ್ರಾರಂಭವಾದರೂ ಅವುಗಳ ಫಲ ಉಂಡವರು ಉಳ್ಳವರೇ! ಸ್ವಾತಂತ್ರ್ಯ ಸಂಗ್ರಾಮವನ್ನೇ ತೆಗೆದುಕೊಳ್ಳಿ ಅದು ಪ್ರಾರಂಭವಾಗಿದ್ದು ಮಾತ್ರ ಬ್ರಿಟೀಷರ ದಬ್ಬಾಳಿಕೆಯ ತಾಪ ತಾಳಲಾರದ ಬಡವರ್ಗದವರಿಂದಾದರೂ ಅದು ಬಲಿತು ಪಕ್ವವಾಗುವ ವೇಳೆಗೆ ಮುಂದಾಳತ್ವ ವಹಿಸಿದ್ದು ಸುಖದ ಸುಪ್ಪತ್ತಿಗೆಯ ಸಿರಿವಂತರಾದ ಗಾಂಧಿ, ನೆಹರು, ಸರ್ದಾರ್ ಪಟೇಲ್ ಮುಂತಾದವರು. ಅಂದಮಾತ್ರಕ್ಕೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅವರ ಪಾತ್ರವೇನೂ ಇಲ್ಲ ಎನ್ನುವುದು ಮುಠ್ಠಾಳತನವಾದೀತು! ಆದರೆ ಅವರಿಗೆಲ್ಲಾ ಸ್ವಾತಂತ್ರ್ಯದ ’ಫಲ’ದ ಬಗ್ಗೆ ಸ್ಪಷ್ಟ ಪರಿಕಲ್ಪನೆಯಿದ್ದೀತು! ಇದೆಲ್ಲವೂ ಅವರು ಅಧಿಕಾರಕ್ಕೆ ಬಂದಕೂಡಲೆ ಸ್ಪಷ್ಟವೂ ಆಗಿ ಹೋಗಿತ್ತು! ಕೇವಲ ಒಬ್ಬ ಲಾಲ ಬಹದ್ದೂರ್ ಶಾಸ್ತ್ರಿಯವರನ್ನು ಬಿಟ್ಟರೆ ಉಳಿದವರೆಲ್ಲಾ ಅಧಿಕಾರದಿಂದ ಏನೆಲ್ಲಾ ಗಳಿಸಬಹುದೆಂದು ತೋರಿಸಿಕೊಡುವುದರ ಮೂಲಕ ಸಾಮಾನ್ಯರೂ ಸಹ ದೇಶವನ್ನು ಮರೆತು ಅಧಿಕಾರಕ್ಕೆ ಆಸೆಪಡುವಂತಾಗಿದ್ದರಿಂದಲೇ ಇಂದು ಭ್ರಷ್ಟಾಚಾರವೆಂಬುದು ಒಂದು ಗುಣವಾಗದ ಅರ್ಬುದ ರೋಗಕ್ಕಿಂತ ಹೆಚ್ಚಾಗಿ ಬೆಳೆದು ನಿಂತಿದೆ.
    ಇದಕ್ಕೆ ವ್ಯತಿರಿಕ್ತ ಎಂಬಂತೆ ನಮ್ಮ ಪಕ್ಕದ ಚೀನಾ, ರಷ್ಯಾ, ಜರ್ಮನಿ ಮತ್ತಿತರ ದೇಶಗಳಲ್ಲಿ ಕ್ರಾಂತಿ ನಡೆದದ್ದು ಬಡವರಿಂದಲೇ. ಆದರೆ ಅಧಿಕಾರ ಅನುಭವಿಸಿ ದೇಶವನ್ನು ಒಳ್ಳೆಯ ದಾರಿಯಲ್ಲಿ ಮುನ್ನಡೆಸಿದವರು ಯಾರೂ ಸಹ ಸಿರಿವಂತರಾಗಿರಲಿಲ್ಲ, ಅದು ಹಿಟ್ಲರ್ ಆಗಿರಬಹುದು, ಲೆನಿನ್ ಆಗಿರಬಹುದು ಅಥವಾ ಮಾವೋತ್ಸೆ ತುಂಗ್ ಆಗಿರಬಹುದು ಎಲ್ಲರೂ ಹಸಿವನ್ನು ಕಂಡವರೇ. ಜನಸಾಮಾನ್ಯನ ಕಷ್ಟಗಳನ್ನು ಅನುಭವಿಸಿದವರೇ ಆದ್ದರಿಂದ ಅವರಿಗೆ ಚೆನ್ನಾಗಿ ಗೊತ್ತಿತ್ತು. ದೇಶ ಮುಂದುವರಿಯಬೇಕೆಂದರೆ ದೇಶಪ್ರೇಮ ಎಲ್ಲರಲ್ಲೂ ಮೂಡಬೇಕು ಆಗಷ್ಟೇ ಏಕತೆ ಮೂಡಲು ಸಾಧ್ಯ ಎನ್ನುವುದು. ಅವರ ವೈಚಾರಿಕತೆ ಅವರ ಕಾರ್ಯವೈಖರಿಯ ವಿಚಾರಗಳು ಬೇರೆಯೇ ಆದರೂ ಅವರ ಗುರಿ ದೇಶವನ್ನು ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿರಿಸುವುದೇ ಆಗಿತ್ತು ಅದರಲ್ಲಿ ಅವರು ಯಶಸ್ವಿಯೂ ಆದರು. ಆದರೆ ಅಂದೇ ನಮ್ಮ ನಾಯಕರುಗಳು ಅಧಿಕಾರದಾಸೆಗಾಗಿ ದೇಶವನ್ನು ಮೂರು ಭಾಗ ಮಾಡಿದ್ದಾಯಿತು, ’ಜಾತ್ಯಾತೀತ’ ರಾಷ್ಟ್ರವಾದರೂ ಪ್ರತಿಯೊಂದು ಧರ್ಮಕ್ಕೂ ಪ್ರತ್ಯೇಕ ಕಾನೂನುಗಳಾದವು. ಎಲ್ಲದರಲ್ಲೂ ಅಧಿಕಾರಗಳಿಸುವುದೇ ಮುಖ್ಯ ಚಿಂತನೆಗಳಾದವು. ’ವೋಟ್-ಬ್ಯಾಂಕ್’ ಎಂಬ ಹೊಸ ಪರಿಕಲ್ಪನೆ ನಮ್ಮ ಭಾರತದ ನಾಯಕರುಗಳಿಂದ ವಿಶ್ವಕ್ಕೇ ಪರಿಚಯವಾಯ್ತು!. ಅದು ಇಂದಿಗೂ ಮುಂದುವರೆದು ಸರ್ಕಾರದ ಎಲ್ಲಾ ಸವಲತ್ತುಗಳು ಕೇವಲ ಶ್ರೀಮಂತರಿಗೇ ಮಾತ್ರ ಮೀಸಲಾಗಿವೆ. ಅವರು ಕಟ್ಟುವ ತೆರಿಗೆಗೆ ಭಾರತದ ಬೆನ್ನೆಲುಬು ಮಧ್ಯಮವರ್ಗದವರಿಂದ ವ್ಯಾಪಾರದ ಹೆಸರಿನಲ್ಲಿ ಮತ್ತಷ್ಟು ಕಿತ್ತು ತಿಂದು ದುಂಡಗಾಗಿದ್ದಾರೆ. ಆದರೆ ನಿಜ ಅರ್ಥದಲ್ಲಿ ದೇಶ ಮುನ್ನಡೆಯುತ್ತಿರುವುದು ಅದೇ ಮಧ್ಯಮ ವರ್ಗದವರ ಬೆವರಿಳಿಸಿ ಸಂಪಾದಿಸಿದ ’ತೆರಿಗೆಯಿಂದ’.   ಸ್ವಲ್ಪವಾದರೂ ದೇಶ ಪ್ರೇಮವನ್ನು ಅವರ ಮುಂದಿನ ಪೀಳಿಗೆಗಳಲ್ಲಿ ಬೆಳೆಸಲು ಪ್ರಯತ್ನಿಸಿದ್ದರೆ ಭ್ರಷ್ಟಾಚಾರವಿಲ್ಲದ ಒಂದು ಆದರ್ಶ ’ಜಾತ್ಯಾತೀತ’ ರಾಷ್ಟ್ರವಾಗಿರುತ್ತಿತ್ತು ನಮ್ಮ ಭಾರತ!

ಕಾಮೆಂಟ್‌ಗಳಿಲ್ಲ: